ಪದ್ಯ ೯: ಕಾಂಭೋಜ ಮತ್ತು ದ್ರುಪದ ರಾಜನ ಸತಿಯರ ಸ್ಥಿತಿ ಹೇಗಿತ್ತು?

ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ (ಗದಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ದೇವಾ ನೋಡು, ಕಾಂಭೋಜನ ಅರಸಿಯರು ಈ ದುಃಖವನ್ನು ಭರಿಸಲು ಯಾವ ವ್ರತವನ್ನು ಮಾಡಿದ್ದಾರೋ ಏನೋ? ಅಲ್ಲಿರುವವನಾರು, ದ್ರುಪದನೇ, ಅವನ ಸತಿಯರು ಮೂರ್ಛಿತರಾಗಿ ಅವನ ದೇಹದ ಮೇಲೆ ಹೊರಳಿ ಬಿದ್ದರು.

ಅರ್ಥ:
ದೇವ: ಭಗವಂತ; ನೋಡು: ವೀಕ್ಷಿಸು; ಶೋಕ: ದುಃಖ; ವಹ್ನಿ: ಬೆಂಕಿ; ಡಾವರ: ದಗೆ, ತಾಪ; ಅರಸಿ: ರಾಣಿ; ನೋಂಪಿ: ವ್ರತ; ಮಾವ: ತಂಗಿಯ ಗಂಡ; ಸತಿ: ಹೆಣ್ಣು; ಜೀವ: ಪ್ರಾಣ; ಜಾರು: ಬೀಳು; ರಮಣ: ಪ್ರೀತಿಪಾತ್ರನಾದ; ತನಿ: ಚೆನ್ನಾಗಿ ಬೆಳೆದುದು; ಹೊರಳು: ತಿರುವು, ಬಾಗು;

ಪದವಿಂಗಡಣೆ:
ದೇವ +ನೋಡ್+ಆ+ ಶೋಕವಹ್ನಿಯ
ಡಾವರವ +ಕಾಂಭೋಜನ್+ಅರಸಿಯರ್
ಆವ +ನೋಂಪಿಯ +ನೋಂತರೋ +ಶಿವಶಿವ+ ಮಹಾದೇವ
ಆವನ್+ಆತನು +ನಿಮ್ಮವರುಗಳ
ಮಾವನೇ +ಪಾಂಚಾಲ +ಸತಿಯರು
ಜೀವದಲಿ +ಜಾರಿದರು +ರಮಣರ +ಮೇಲೆ +ತನಿಹೊರಳಿ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ಹೇಳುವ ಪರಿ – ಶೋಕವಹ್ನಿಯ ಡಾವರವ

ಪದ್ಯ ೧೬: ಕಾಂಭೋಜಭೂಪನ ಅಂತ್ಯವನ್ನು ಯಾರು ಮಾಡಿದರು?

ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ (ದ್ರೋಣ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕಾಂಭೋಜನ ಬಾಣಗಳು ಮುಗಿಯಲು, ಅವನು ಕಾತರಿಸಿ ಶಕ್ತಿಯನ್ನು ಅರ್ಜುನನ ಮೇಲೆ ಪ್ರಯೋಗಿಸಿದನು. ಅರ್ಜುನನು ಅವನ ಕಿರೀಟ ಭೂಷಿತವಾದ ತಲೆಯನ್ನು ಕತ್ತರಿಸಿದನು. ಆಗ ಶ್ರುತಾಯುವು ಯುದ್ಧಕ್ಕೆ ಬಂದನು, ಘನ ಸಂಗ್ರಾಮವಾಯಿತು. ಶ್ರುತಾಯುವನ್ನು ಕಾಂಭೋಜನೊಡನೆ ಸಂಹರಿಸಿದನು.

ಅರ್ಥ:
ಸರಳು: ಬಾಣ; ಸವೆ: ಕೊರಗು; ಶಕ್ತಿ: ಬಲ; ಕಾತರ: ಕಳವಳ; ಕವಿ: ಮುಚ್ಚು; ಕತ್ತರಿಸು: ತುಂಡು ಮಾದು; ಭೂಪ: ರಾಜ; ಮುಕುಟ: ಕಿರೀಟ; ಮಸ್ತಕ: ಶಿರ; ಕೊರಳು: ಗಂಟಲು; ತೊಲಗು: ಹೊರಹಾಕು; ಮುಂದೆ: ಎದುರು; ನೂಕು: ತಳ್ಳು; ವರ: ಶ್ರೇಷ್ಠ; ಘನ: ಶ್ರೇಷ್ಠ; ಸಂಗರ: ಯುದ್ಧ; ತೆಗೆ: ಹೊರತರು; ಕಳುಹು: ತೆರಳು;

ಪದವಿಂಗಡಣೆ:
ಸರಳು +ಸವೆಯಲು +ಶಕ್ತಿಯಲಿ +ಕಾ
ತರಿಸಿ +ಕವಿದಿಡೆ +ಶಕ್ತಿಯನು +ಕ
ತ್ತರಿಸಿದನು +ಕಾಂಭೋಜಭೂಪನ+ ಮುಕುಟ+ಮಸ್ತಕವ
ಕೊರಳ +ತೊಲಗಿಸಿ +ಮುಂದೆ +ನೂಕುವ
ವರ+ಶ್ರುತಾಯುವಿನೊಡನೆ +ಘನ+ಸಂ
ಗರಕೆ +ತೆಗೆದನು +ಕಳುಹಿದನು +ಕಾಂಭೋಜನೊಡನವರ

ಅಚ್ಚರಿ:
(೧) ಜೋಡಿ ಪದಗಳು – ಸರಳು ಸವೆಯಲು, ಕಾತರಿಸಿ ಕವಿದಿಡೆ, ಕತ್ತರಿಸಿದನು ಕಾಂಭೋಜಭೂಪನ

ಪದ್ಯ ೧೯: ಕಾಂಭೋಜರಾಜರನ್ನು ದ್ರೋಣರು ಎಲ್ಲಿ ನಿಲ್ಲಿಸಿದರು?

ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ (ದ್ರೋಣ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಕರವ್ಯೂಹದ ಹಿಮ್ದೆ ಐದು ಯೋಜನ ವಿಸ್ತಾರದಲ್ಲಿ ಚಕ್ರವ್ಯೂಹವನ್ನು ಬಲವಾಗಿ ರಚಿಸಿ ಅಲ್ಲಿ ಕಾಂಬೋಜ ರಾಜ, ವಿಂದ, ಅನುವಿಂದ, ದಾಕ್ಷಿಣಾತ್ಯ ರಾಜರು, ಸಮಸಪ್ತಕರ ಸೈನ್ಯದ ಕೆಲಭಾಗವನ್ನು ನಿಲ್ಲಿಸಿದನು. ಹತ್ತು ಸಹಸ್ರ ರಾಜರು ಅದರಲ್ಲಿದ್ದರು.

ಅರ್ಥ:
ಹಿಂದೆ: ಹಿಂಭಾಗ; ಯೋಜನ: ಅಳತೆಯ ಪ್ರಮಾಣ; ಅಳವಿ: ಶಕ್ತಿ; ನಲವು: ಸಂತೋಷ; ಬಲಿ: ಗಟ್ಟಿ; ನಿಲಿಸು: ತಡೆ; ಭೂಪತಿ: ರಾಜ; ವೃಂದ: ಗುಂಪು; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವರು; ಬಲ: ಶಕ್ತಿ; ಸಂದಣಿಸು: ಗುಂಪುಗೂಡಿಸು; ಸಾವಿರ: ಸಹಸ್ರ; ನೃಪ: ರಾಜ; ಗಡಣ: ಕೂಡಿಸುವಿಕೆ;

ಪದವಿಂಗಡಣೆ:
ಹಿಂದೆ +ಯೋಜನವ್+ಐದರ್+ಅಳವಿಯೊಳ್
ಅಂದು +ಚಕ್ರವ್ಯೂಹವನು +ನಲ
ವಿಂದ +ಬಲಿದನು +ನಿಲಿಸಿದನು +ಕಾಂಭೋಜ+ಭೂಪತಿಯ
ವಿಂದನನ್+ಅನುವಿಂದನನು +ದಕ್ಷಿಣ
ವೃಂದ +ಸಮಸಪ್ತಕರ +ಬಲವನು
ಸಂದಣಿಸಿದರು +ಹತ್ತು +ಸಾವಿರ +ನೃಪರ+ ಗಡಣದಲಿ

ಅಚ್ಚರಿ:
(೧) ನಲವಿಂದ, ವಿಂದ, ಅನುವಿಂದ, ವೃಂದ – ಪದಗಳ ಬಳಕೆ

ಪದ್ಯ ೬೭: ಅಭಿಮನ್ಯುವು ಹೇಗೆ ಕೌರವ ಸೈನ್ಯವನ್ನು ಕೊಂದನು?

ತರಿದನಾನೆಯ ಥಟ್ಟುಗಳ ಮು
ಕ್ಕುರುಕಿದನು ಕಾಂಭೋಜ ತೇಜಿಯ
ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ
ಮುರಿದನೊಗ್ಗಿನ ಪಾಯ್ದಳವನ
ಳ್ಳಿರಿವ ಹೆಣ ಕುಣಿದಾಡೆ ಭಟ ಬೇ
ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ (ದ್ರೋಣ ಪರ್ವ, ೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಆನೆಯ ಸೈನ್ಯಗಲನ್ನು ತರಿದು, ಕಾಂಭೋಜದ ಕುದುರೆಗಳನ್ನು ಸೀಳಿ, ಆಯುಧಗಳ ಬಂದಿಗಳನ್ನು ಮುರಿದು, ಕಾಲಾಳುಗಳನ್ನು ಕತ್ತರಿಸಲು, ರಣರಂಗದಲ್ಲಿ ಮುಂಡಗಳು ಕುಣಿದವು, ಅಭಿಮನ್ಯುವು ಬೇಸರವಿಲ್ಲದೆ ಕೌರವ ಸೈನ್ಯವನ್ನು ಕೊಂದನು.

ಅರ್ಥ:
ತರಿ: ಕಡಿ, ಕತ್ತರಿಸು; ಆನೆ: ಗಜ; ಥಟ್ಟು: ಗುಂಪು; ಮುಕ್ಕುರು: ಮುತ್ತು, ಆವರಿಸು; ತೇಜಿ: ಕುದುರೆ; ಉರುಬು: ಅತಿಶಯವಾದ ವೇಗ; ಹೊಯ್ದು: ಹೊಡೆ; ಸೂನಿಗೆ: ಒಂದು ಬಗೆಯ ಆಯುಧ; ತೇರು: ಬಂಡಿ, ರಥ; ತಿಂತಿಣಿ: ಗುಂಪು; ಮುರಿ: ಸೀಳು; ಒಗ್ಗು: ಗುಂಪು; ಪಾಯ್ದಳ: ಕಾಲಾಳು; ಅಳ್ಳಿರಿ: ನಡುಗಿಸು, ಚುಚ್ಚು; ಹೆಣ: ಸತ್ತ ಶರೀರ; ಕುಣಿ: ನರ್ತಿಸು; ಭಟ: ಯುದ್ಧದಲ್ಲಿ ಕಾದುವವನು, ಸೈನಿಕ; ಬೇಸರ: ಆಯಾಸ, ಬೇಜಾರು; ಕೊಲ್ಲು: ಸಾಯಿಸು; ವೈರಿ: ಶತ್ರು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತರಿದನ್+ಆನೆಯ +ಥಟ್ಟುಗಳ+ ಮು
ಕ್ಕುರುಕಿದನು +ಕಾಂಭೋಜ +ತೇಜಿಯನ್
ಉರುಬಿ +ಹೊಯ್ದನು +ಸೂನಿಗೆಯ +ತೇರುಗಳ +ತಿಂತಿಣಿಯ
ಮುರಿದನ್+ಒಗ್ಗಿನ +ಪಾಯ್ದಳವನ್
ಅಳ್ಳಿರಿವ +ಹೆಣ +ಕುಣಿದಾಡೆ +ಭಟ +ಬೇ
ಸರದೆ +ಕೊಂದನು +ವೈರಿಸೇನೆಯನ್+ಅರಸ +ಕೇಳೆಂದ

ಅಚ್ಚರಿ:
(೧) ತರಿ, ಉರುಬಿ ಹೊಯ್ದು, ಮುರಿ, ಅಳ್ಳಿರಿ, ಕೊಂದು – ಪದಗಳ ಬಳಕೆ

ಪದ್ಯ ೨: ಕರ್ಣನ ಬಲಭಾಗದಲ್ಲಿ ಯಾರು ನಿಂತಿದ್ದರು?

ರಾಯಥಟ್ಟಿನ ಬಲದ ಬಾಹೆಯ
ನಾಯಕರು ಸಂಶಪ್ತಕರು ವಿವಿ
ಧಾಯುಧದ ಕಾಂಭೋಜ ಬರ್ಬರ ಚೀನ ಭೋಟಕರು
ಸಾಯಕದ ಕಿವಿವರೆಯ ತೆಗಹಿನ
ಘಾಯ ತವಕಿಗರೆಡಬಲದ ಕುರು
ರಾಯನನುಜರು ರಂಜಿಸಿತು ದುಶ್ಯಾಸನಾದಿಗಳು (ಕರ್ಣ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಕರ್ಣನ ಬಲಭಾಗದಲ್ಲಿ ಸಂಶಪ್ತಕರು, ಕಾಂಭೋಜ, ಬರ್ಬರ, ಚೀನ, ಭೋಟಕರು, ಕಿವಿವರೆಗೆ ಬಾಣವನ್ನೆಳೆದು ಯುದ್ಧದ ತವಕದಿಂದ ನಿಂತ ಕೌರವನ ತಮ್ಮಂದಿರು ನಿಂತಿದ್ದರು.

ಅರ್ಥ:
ರಾಯ: ರಾಜ; ಥಟ್ಟು: ಪಕ್ಕ, ಕಡೆ; ಬಲ: ದಕ್ಷಿಣ ಪಾರ್ಶ್ವ; ಬಾಹೆ: ಪಕ್ಕ, ಪಾರ್ಶ್ವ; ನಾಯಕ: ಒಡೆಯ; ಸಾಯಕ: ಬಾಣ; ಕಿವಿ: ಕರ್ಣ; ವರೆಯ: ತನಕ; ತೆಗಹು: ಎಳೆಯುವಿಕೆ; ಘಾಯ: ನೋವು; ತವಕ: ಬಯಕೆ, ಆತುರ, ಅವಸರ; ಎಡಬಲ: ಎರಡೂ ಬದಿ; ಅನುಜ: ತಮ್ಮ; ರಂಜಿಸು: ಹೊಳೆ, ಪ್ರಕಾಶಿಸು; ಆದಿ: ಮುಂತಾದ; ವಿವಿಧ: ಹಲವಾರು; ಆಯುಧ: ಶಸ್ತ್ರ;

ಪದವಿಂಗಡಣೆ:
ರಾಯಥಟ್ಟಿನ +ಬಲದ +ಬಾಹೆಯ
ನಾಯಕರು +ಸಂಶಪ್ತಕರು+ ವಿವಿಧ
ಆಯುಧದ +ಕಾಂಭೋಜ +ಬರ್ಬರ +ಚೀನ +ಭೋಟಕರು
ಸಾಯಕದ+ ಕಿವಿವರೆಯ +ತೆಗಹಿನ
ಘಾಯ +ತವಕಿಗರ್+ಎಡಬಲದ +ಕುರು
ರಾಯನ್+ಅನುಜರು +ರಂಜಿಸಿತು +ದುಶ್ಯಾಸನಾದಿಗಳು

ಅಚ್ಚರಿ:
(೧) ಕೌರವರ ಜೊತೆ ಸೇರಿದ ಸೈನ್ಯದ ವಿವರ – ಸಂಶಪ್ತಕರು, ಕಾಂಭೋಜ, ಬರ್ಬರ, ಚೀನ, ಭೋಟಕರು
(೨) ಯುದ್ಧಸನ್ನದ್ಧರಾಗಿರುವ ಸ್ಥಿತಿ: ಸಾಯಕದ ಕಿವಿವರೆಯ ತೆಗಹಿನ ಘಾಯ

ಪದ್ಯ ೨೭: ಬಂದ ಅತಿಥಿಗಳಲ್ಲಿ ಯಾಗಕ್ಕೆ ಯಾರು ಯೋಗ್ಯರೆಂದು ಶಿಶುಪಾಲ ಹಂಗಿಸಿದನು?

ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜ ನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾಗಿಗಳು
ಬಂದರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಮಹಾ ರಾಜಸೂಯ ಯಜ್ಞಕ್ಕೆ ವಿಂದ, ಅನುವಿಂದ, ಕಾಂಭೋಜ ಮುಂತಾದ ರಾಜರು ಆಗಮಿಸಿರುವುರು, ಗಾಂಧಾರ, ಶಕುನಿ, ಬೃಹದ್ರಥಾದಿಗಳು ಸಹ ಇಲ್ಲಿಗೆ ಬಂದಿದ್ದಾರೆ. ಇದು ಧರ್ಮಸಾಧನವಾದ ಯಾಗವೆಂದು ತಿಳಿದಿದ್ದಾರೆ, ಅದರೆ ಈ ಯಾಗಕ್ಕೆ ನಂದಗೋಪನ ಮಗನಲ್ಲದೆ ಇನ್ನಾರು ಅರ್ಹರಲ್ಲವೆಂದು ತಿಳಿಯುತ್ತದೆ ಎಂದು ಶಿಶುಪಾಲ ಹಂಗಿಸಿದನು.

ಅರ್ಥ:
ಮಹಿ: ಭೂಮಿ; ಮಹೀಶ್ವರ: ರಾಜ; ಬಂದು: ಆಗಮಿಸು; ನೃಪ: ರಾಜ; ಐತಂದು: ಆಗಮಿಸು;
ಧರ್ಮ: ಧಾರಣ ಮಾಡಿದುದು; ಸಾಧನ: ಗುರಿಮುಟ್ಟುವ ಪ್ರಯತ್ನ; ಬಯಸು: ಇಷ್ಟಪಡು; ಯಾಗ: ಯಜ್ಞ, ಕ್ರತು; ಮಕ್ಕಳು: ತನುಜ; ಯೋಗ್ಯ: ಅರ್ಹತೆ;

ಪದವಿಂಗಡಣೆ:
ವಿಂದನ+ಅನುವಿಂದಾ +ಮಹೀಶರು
ಬಂದಿರೈ +ಕಾಂಭೋಜ +ನೃಪನೈ
ತಂದೆಲಾ +ಗಾಂಧಾರ +ಶಕುನಿ+ ಬೃಹದ್ರಥಾಗಿಗಳು
ಬಂದರಿಲ್ಲಿಗೆ+ ಧರ್ಮಸಾಧನ
ವೆಂದು +ಬಯಸಿದಿರ್+ಇವರ +ಯಾಗಕೆ
ನಂದಗೋಪನ +ಮಕ್ಕಳಲ್ಲದೆ +ಯೋಗ್ಯರಿಲ್ಲೆಂದ

ಅಚ್ಚರಿ:
(೧) ರಾಜ ಮತ್ತು ರಾಜ್ಯರ ಹೆಸರು – ವಿಂದ, ಅನುವಿಂದ, ಕಾಂಭೋಜ, ಗಾಂಧಾರ, ಶಕುನಿ, ಬೃಹದ್ರಥ
(೨)ಮಹೀಶ, ನೃಪ – ಸಮನಾರ್ಥಕ ಪದ

ಪದ್ಯ ೩೨: ಆಸ್ಥಾನದ ಎಡಭಾಗದಲ್ಲಿ ಯಾರು ಆಸೀನರಾಗಿದ್ದರು?

ಮದವದತಿಬಲ ಶಕುನಿ ಸೈಂಧವ
ನದಟ ನೃಪ ಕಾಂಭೋಜ ರಥ ಸಂ
ಪದನು ಭೂರಿಶ್ರವ ಸುಲೋಚನ ವೀರ ವೃಷಸೇನ
ಕದನಕಾಲಾನಳರು ವರ ಹೇ
ಮದ ಮಕುಟ ರಚನೆಗಳಲೆಡವಂ
ಕದಲಿ ಕುಳ್ಳಿರ್ದರು ಮಹಾಯಾಸ್ಥಾನ ರಚನೆಯಲಿ (ಉದ್ಯೋಗ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಸ್ಥಾನದ ಎಡಭಾಗದಲ್ಲಿ ಗರ್ವದ ಬಲದಿಂದ ಕೂಡಿದ ಶಕುನಿ, ಸೈಂಧವ,ಪರಾಕ್ರಮಿಯಾದ ಕಾಂಭೋಜ ರಾಷ್ಟ್ರದ ರಾಜ, ರಥ ಓಡಿಸುವಲ್ಲಿ ನಿಪುಣನಾದ ಭೂರಿಶ್ರವ, ಸುಲೋಚನ, ವೀರನಾದ ವೃಷಸೇನ, ಯುದ್ಧದಲ್ಲಿ ಪ್ರಳಯಕಾಲದ ಬೆಂಕಿಯನ್ನು ತೋರುವ ಶ್ರೇಷ್ಠರಾದ ಯೋಧರು ಚಿನ್ನದ ಕಿರೀಟದಿಂದ ಅಲಂಕೃತರಾಗಿ ಒಡ್ಡೋಲಗದಲ್ಲಿ ಆಸೀನರಾಗಿದ್ದರು.

ಅರ್ಥ:
ಮದ:ಗರ್ವ, ಸೊಕ್ಕು; ಅತಿಬಲ: ಹೆಚ್ಚಿನ ಶಕ್ತಿ, ಸಾಮರ್ಥ್ಯ; ಅದಟ: ಪರಾಕ್ರಮಿ; ನೃಪ: ರಾಜ; ರಥ: ಬಂಡಿ; ಸಂಪದ: ಹೆಚ್ಚುಗಾರಿಕೆ; ವೀರ: ಶೂರ; ಕದನ: ಯುದ್ಧ; ಕಾಲಾನಲ: ಪ್ರಳಯಕಾಲದ ಬೆಂಕಿ; ಅನಲ: ಬೆಂಕಿ; ವರ: ಶ್ರೇಷ್ಠ; ಹೇಮ: ಚಿನ್ನ; ಮಕುಟ: ಕಿರೀಟ; ರಚನೆ: ನಿರ್ಮಾಣ, ಸೃಷ್ಟಿ; ಎಡ: ಪಾರ್ಶ್ವ; ವಂಕ: ಭಾಗ; ಕುಳ್ಳಿರ್ದರು: ಆಸೀನರಾಗು; ಮಹಾ: ಶ್ರೇಷ್ಠ; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಮದವದ್+ಅತಿಬಲ+ ಶಕುನಿ +ಸೈಂಧವನ್
ಅದಟ +ನೃಪ +ಕಾಂಭೋಜ +ರಥ+ ಸಂ
ಪದನು+ ಭೂರಿಶ್ರವ+ ಸುಲೋಚನ+ ವೀರ +ವೃಷಸೇನ
ಕದನಕಾಲ+ಅನಳರು +ವರ+ ಹೇ
ಮದ+ ಮಕುಟ+ ರಚನೆಗಳಲ್+ಎಡವಂ
ಕದಲಿ+ ಕುಳ್ಳಿರ್ದರು +ಮಹಾಯಾಸ್ಥಾನ +ರಚನೆಯಲಿ

ಅಚ್ಚರಿ:
(೧) ಗುಣವಿಶೇಷಣಗಳ ಪ್ರಯೋಗ – ಅದಟ ನೃಪ, ರಥ ಸಂಪದ, ವೀರ, ಮದವದತಿಬಲ
(೨) ಮದ – ಪದದ ಬಳಕೆ – ೧, ೫ ಸಾಲಿನ ಮೊದಲ ಪದ, ಮದವದತಿಬಲ, ಹೇಮದ
(೩) ಶಕುನಿ, ಸೈಂಧವ, ಕಾಂಭೋಜ, ಭೂರಿಶ್ರವ, ಸುಲೋಚನ, ವೃಷಸೇನ – ರಾಜರ ಹೆಸರು

ಪದ್ಯ ೨೭: ಅರ್ಜುನನ ಮುಂದೆ ಯಾವ ದೇಶಗಳನ್ನು ಗೆದ್ದನು?

ದಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊಂಡು ಇಟ್ಟುದು
ಪಾಳೆಯವು ಚಿತ್ರಾಯುಧನ ವರ ಸಿಂಹನಗರಿಯಲಿ
ಮೇಲೆ ವಂಗರ ಮುರಿದು ವರನೇ
ಪಾಳಕರ್ಪರ ಹೂಣ ಯವನ ವಿ
ಶಾಲಕಾಂಭೋಜಾದಿಗಳನಪ್ಪಳಿಸಿದನು ತಿರುಗಿ (ಸಭಾ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ದಾಳಿಯನ್ನು ಮುಂದುವರಿಸುತ್ತಾ, ರೋಚಮಾನನ ಮೇಲೆ ದಾಳಿ ಮಾಡಿ ಅವನಿಂದ ಕಪ್ಪವಕೊಂಡನು. ಸಿಂಹನಗರದ ಚಿತ್ರಾಯುಧನನ್ನು ಗೆದ್ದು, ವಂಗರನ್ನು ಸದೆಬಡಿದು, ನೇಪಾಲ, ಕರ್ಪರ, ಹೂಣ, ಯವನ, ಕಾಂಭೋಜ ಮೊದಲಾದ ದೇಶಗಳನ್ನು ಜಯಿಸಿದನು.

ಅರ್ಥ:
ದಾಳಿ: ಆಕ್ರಮಣ; ಕಪ್ಪ: ಕಾಣಿಕೆ; ಪಾಳೆ:ಸೀಮೆ; ವರ: ಶ್ರೇಷ್ಠ; ನಗರ: ಪಟ್ಟಣ; ಮುರಿ: ಸೀಳು; ವಿಶಾಲ: ವಿಸ್ತಾರ; ಅಪ್ಪಳಿಸು: ಧ್ವಂಸ ಮಾಡು; ತಿರುಗು: ಸುತ್ತಾಡು;

ಪದವಿಂಗಡಣೆ:
ದಾಳಿಯಿಟ್ಟನು +ರೋಚಮಾನನ
ಮೇಲೆ +ಕಪ್ಪವಕೊಂಡು + ಇಟ್ಟುದು
ಪಾಳೆಯವು+ ಚಿತ್ರಾಯುಧನ+ ವರ +ಸಿಂಹ+ನಗರಿಯಲಿ
ಮೇಲೆ +ವಂಗರ +ಮುರಿದು +ವರನೇ
ಪಾಳ+ಕರ್ಪರ +ಹೂಣ +ಯವನ +ವಿ
ಶಾಲ+ಕಾಂಭೋಜಾದಿಗಳನ್+ಅಪ್ಪಳಿಸಿದನು +ತಿರುಗಿ

ಅಚ್ಚರಿ:
(೧) ೫ ಸಾಲಿನ ಪದಗಳು “ಮ” ಮತ್ತು “ವ” ಕಾರ ಪರ್ಯಾಯವಾಗಿ ಬಂದಿರುವುದು
(೨) ದೇಶಗಳ ಹೆಸರು – ನೇಪಾಳ, ಕರ್ಪರ, ಹೂಣ, ಯವನ, ಕಾಂಭೋಜ

ಪದ್ಯ ೫೪: ಧೃಷ್ಟದ್ಯುಮ್ನನು ಮತ್ತೆ ಯಾವ ರಾಜರ ಪರಿಚಯ ಮಾಡಿದನು?

ಇತ್ತಲೀಕ್ಷಿಸು ಪೌಂಡ್ರಕನ ಭಗ
ದತ್ತನನು ಕಾಂಭೋಜನನು ಹರ
ದತ್ತನನು ವರ ಹಂಸಡಿಬಿಕರ ಮಾದ್ರಭೂಪತಿಯ
ಇತ್ತಲು ಜರಾಸಂಧ ಮಣಿಮಾ
ನಿತ್ತ ಸಹದೇವನು ಬೃಹದ್ರಥ
ನಿತ್ತಲೀತನು ದಂಡಧಾರಕ ನೃಪನು ನೋಡೆಂದ (ಆದಿ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಇಲ್ಲಿ ನೋಡು ಪೌಂಡ್ರಕ, ಭಗದತ್ತ, ಕಾಂಭೋಜ ರಾಜ್ (ಸುದಕ್ಷಿಣ) ಹರದತ್ತ, ಹಸಡಿಬಿಕರು, ಮಾದ್ರ ದೇಶದ ರಾಜ ಶಲ್ಯ, ಜರಾಸಂಧ, ಮಣಿಮಾನ್, ಸಹದೇವ, ಬೃಹದ್ರಥ, ದಂಡಧಾರಕ ರಾಜರೆಲ್ಲರ ಪರಿಚಯ ಮಾಡಿದನು.

ಅರ್ಥ:
ಇತ್ತ: ಇಲ್ಲಿ; ಈಕ್ಷಿಸು: ನೋಡು; ವರ: ಶ್ರೇಷ್ಠ; ಭೂಪತಿ: ರಾಜ; ನೃಪ: ರಾಜ;

ಪದವಿಂಗಡಣೆ:
ಇತ್ತಲ್+ಈಕ್ಷಿಸು +ಪೌಂಡ್ರಕನ+ ಭಗ
ದತ್ತನನು +ಕಾಂಭೋಜನನು +ಹರ
ದತ್ತನನು +ವರ +ಹಂಸಡಿಬಿಕರ+ ಮಾದ್ರ+ಭೂಪತಿಯ
ಇತ್ತಲು +ಜರಾಸಂಧ +ಮಣಿಮಾನ್
ಇತ್ತ +ಸಹದೇವನು +ಬೃಹದ್ರಥನ್
ಇತ್ತಲ್+ಈತನು +ದಂಡಧಾರಕ+ ನೃಪನು +ನೋಡೆಂದ

ಅಚ್ಚರಿ:
(೧) ಇತ್ತ – ಪದ್ಯದ ೪ ಸಾಲಿನ ಮೊದಲ ಪದ
(೨) ದತ್ತ – ೨, ೩ ಸಾಲಿನ ಮೊದಲ ಪದ
(೩) ಭೂಪತಿ, ನೃಪ – ರಾಜ ಪದದ ಸಮಾನಾರ್ಥಕ ಪದಗಳ ಬಳಕೆ
(೪) ನೋಡು, ಈಕ್ಷಿಸು – ಸಮಾನಾರ್ಥಕ ಪದ
(೫) ಹರ, ವರ, ಜರ ಪದಗಳ ಬಳಕೆ – ಹರದತ್ತ, ವರ ಹಂಸಡಿಬಿಕರ, ಜರಾಸಂಧ