ಪದ್ಯ ೨೧: ದ್ರೋಣನ ಪ್ರಚಂಡತನವು ಹೇಗಿತ್ತು?

ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಲುಹಿದನು ರಿಪುಚಾತುರಂಗದಲಿ (ದ್ರೋಣ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯು ದ್ರೋಣನನ್ನು ಮತ್ತೆ ಮುತ್ತಿತು. ಮಂಜಿನಲ್ಲಿ ಮರೆಯಾದ ಸೂರ್ಯನಂತೆ ದ್ರೋನನು ಕಾಣಿಸಲೇ ಇಲ್ಲ. ನಿಮಿಷಾರ್ಧದಲ್ಲಿ ಹತ್ತು ಕೋಟಿ ಸೈನ್ಯವನ್ನು ಕೊಂದು ದ್ರೋನನು ಪ್ರಚಂಡತನವನ್ನು ತೋರಿಸಿದನು.

ಅರ್ಥ:
ಕವಿ: ಆವರಿಸು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ಒತ್ತು: ಒತ್ತಡ; ರಿಪು: ವೈರಿ; ಸೇನೆ: ಸೈನ್ಯ; ಮಂಜು: ಇಬ್ಬನಿ, ಹಿಮ; ಮುತ್ತಿಗೆ: ಆವರಿಸುವಿಕೆ; ರವಿ: ಭಾನು; ಕಾಣು: ತೋರು; ಕಳಶ: ಕುಂಭ; ಸಂಭವ: ಹುಟ್ಟು; ಮತ್ತೆ: ಪುನಃ; ನಿಮಿಷ: ಕ್ಷಣ; ಕಾಲ: ಸಮಯ; ತುತ್ತು: ನಾಶಮಾಡು; ಜೋಡಿಸು: ಕೂಡಿಸು; ಹತ್ತು: ದಶ; ಕೋಟಿ: ಅಸಂಖ್ಯಾತ; ಇಳುಹು: ಇಳಿಸು, ಕತ್ತರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ಮತ್ತೆ +ಕವಿದುದು +ಹೆಣನ +ತುಳಿದ್
ಒತ್ತೊತ್ತೆಯಲಿ +ರಿಪುಸೇನೆ +ಮಂಜಿನ
ಮುತ್ತಿಗೆಯ +ರವಿಯಂತೆ +ಕಾಣೆನು+ ಕಳಶಸಂಭವನ
ಮತ್ತೆ +ನಿಮಿಷಾರ್ಧದಲಿ +ಕಾಲನ
ತುತ್ತು +ಜೋಡಿಸಿತ್+ಏನನೆಂಬೆನು
ಹತ್ತು +ಕೋಟಿಯನ್+ ಇಳುಹಿದನು +ರಿಪು+ಚಾತುರಂಗದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳಿದೊತ್ತೊತ್ತೆಯಲಿ ರಿಪುಸೇನೆ ಮಂಜಿನ ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ

ಪದ್ಯ ೬೯: ಕೌರವ ಸೈನ್ಯವು ಹೇಗೆ ಆಕ್ರಮಣ ಮಾಡಿತು?

ಎನಲು ಕವಿದುದು ಸೇನೆ ಕಂಗನೆ
ಕನಲಿ ಕರ್ಣ ದ್ರೋಣರಿಗೆ ನೀ
ನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ
ತನತನಗೆ ಕಾಲಾಳು ಮೇಲಾ
ಳನುಪಮಿತರೌಕಿದರು ಚಾಪ
ಧ್ವನಿಯೊಳಗೆ ನೆರೆ ಮುಳುಗೆಬಹುವಿಧವಾದ್ಯ ನಿರ್ಘೋಷ (ದ್ರೋಣ ಪರ್ವ, ೧೫ ಸಂಧಿ, ೬೯ ಪದ್ಯ)

ತಾತ್ಪರ್ಯ:
ಆಗ ಕೌರವ ಸೈನ್ಯವು ಅಧಿಕವಾಗಿ ಸಿಟ್ಟುಗೊಂಡಿತು. ಘಟೋತ್ಕಚನ ಮೇಲೆ ಮುತ್ತಿಗೆ ಹಾಕಿ, ಕರ್ಣ ದೋಣರಿಎ ನೀನು ಸರಿಯೇ? ನೀನೆಷ್ಟರವನು? ನೀನು ಬಾಯಿಬಡುಕ ಎನ್ನುತ್ತಾ ಕಾಲಾಳುಗಳು, ಚತುರಂಗ ಸೈನ್ಯದವರೂ, ಬಹುವಿಧ ರಣವಾದ್ಯಗಳು ಮೊಳಗುತ್ತಿರಲು, ಸೈನಿಕರು ಒತ್ತಿ ಘಟೋತ್ಕಚನ ಮೇಲೆ ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು; ಸೇನೆ: ಸೈನ್ಯ; ಕಂಗನೆ: ಅಧಿಕವಾಗಿ; ಕನಲು: ಕೆರಳು, ಸಿಟ್ಟಿಗೇಳು; ಫಡ: ತಿರಸ್ಕಾರದ ಮಾತು; ಬಾಯಿಬಡಿಕ: ಸುಮ್ಮನೆ ಮಾತನಾಡುವ; ಸುತ: ಪುತ್ರ; ಕಾಲಾಳು: ಸೈನಿಕರು; ಅನುಪಮಿತ: ಉಪಮಾತೀತ; ಔಕು: ನೂಕು; ಚಾಪ: ಬಿಲ್ಲು; ಧ್ವನಿ: ರವ; ನೆರೆ: ಗುಂಪು; ಮುಳುಗು: ತೋಯು; ಬಹು: ಬಹಳ; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ನಿರ್ಘೋಷ: ಅಬ್ಬರ, ದೊಡ್ಡ ಘೋಷಣೆ;

ಪದವಿಂಗಡಣೆ:
ಎನಲು +ಕವಿದುದು +ಸೇನೆ +ಕಂಗನೆ
ಕನಲಿ +ಕರ್ಣ +ದ್ರೋಣರಿಗೆ +ನೀನ್
ಎನಿತರವ+ ಫಡ +ಬಾಯಿಬಡಿಕನು +ಭೀಮಸುತನೆನುತ
ತನತನಗೆ +ಕಾಲಾಳು +ಮೇಲಾಳ್
ಅನುಪಮಿತರ್+ ಔಕಿದರು +ಚಾಪ
ಧ್ವನಿಯೊಳಗೆ +ನೆರೆ +ಮುಳುಗೆ+ಬಹುವಿಧ+ವಾದ್ಯ +ನಿರ್ಘೋಷ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಂಗನೆ ಕನಲಿ ಕರ್ಣ
(೨) ಘಟೋತ್ಕಚನನ್ನು ಬಯ್ಯುವ ಪರಿ – ನೀನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ

ಪದ್ಯ ೪೭: ಘಟೋತ್ಕಚನ ಸೈನ್ಯವು ಹೇಗಿತ್ತು?

ಕಾಳರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು (ದ್ರೋಣ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಳರಾತ್ರಿಯ ಸೈನ್ಯವೋ, ಕಾಲರುದ್ರನ ಸೈನ್ಯವೋ ಎಂಬಂತೆ ಘಟೋತ್ಕಚನ ಸೈನಿಕರ ಹೆಚ್ಚಳವನ್ನು ಯಾವ ಕವಿತಾನೆ ವರ್ಣಿಸಲು ಸಾಧ್ಯ? ಸೈನಿಕರೆಲ್ಲರನ್ನೂ ಮನ್ನಿಸಿ ಕರ್ಪೂರ ವೀಳೆಯವನ್ನು ಕೊಟ್ಟು, ರಥದ ಚಕ್ರಗಳು ಘೀಳಿಡುತ್ತಿರಲು, ರಥವನ್ನು ಹತ್ತಿದನು.

ಅರ್ಥ:
ಕಾಳರಾತ್ರಿ: ಭಯಂಕರವಾದ ಇರುಳು, ದಟ್ಟವಾದ ರಾತ್ರಿ; ಕಟಕ: ಸೈನ್ಯ; ಮೇಣ್: ಅಥವ; ಕಾಲರುದ್ರ: ಶಿವನ ಒಂದು ರೂಪ; ಪಡೆ: ಗುಂಪು; ದಾನವ: ರಾಕ್ಷಸ; ಆಳಿ: ಗುಂಪು; ಅಗ್ಗಳಿಕೆ: ಶ್ರೇಷ್ಠತೆ; ಬಣ್ಣಿಸು: ವರ್ಣಿಸು; ಕವಿ: ಕಬ್ಬಿಗ; ಆಳ: ಸೈನಿಕ; ಬೋಳೈಸು: ಸಂತೈಸು, ಸಮಾಧಾನ ಮಾಡು; ವೀಳೆ: ತಾಂಬೂಲ; ಹಾಯ್ಕು: ಇಡು, ಇರಿಸು; ಲೋಹ: ಕಬ್ಬಿಣ, ಉಕ್ಕು; ಗಾಲಿ: ಚಕ್ರ; ಘೀಳಿಡು: ಕಿರಿಚು, ಅರಚು; ರಥ: ಬಂಡಿ; ಏರು: ಮೇಲೆ ಹತ್ತು; ಅನಿಲ: ವಾಯು; ಸುತ: ಮಗ; ಸೂನು: ಮಗ;

ಪದವಿಂಗಡಣೆ:
ಕಾಳರಾತ್ರಿಯ+ ಕಟಕವೋ +ಮೇಣ್
ಕಾಲರುದ್ರನ +ಪಡೆಯೊ +ದಾನವನ್
ಆಳಿನ್+ಅಗ್ಗಳಿಕೆಗಳ +ಬಣ್ಣಿಸಬಲ್ಲ +ಕವಿಯಾರು
ಆಳ +ಬೋಳೈಸಿದನು +ಕಪ್ಪುರ
ವೀಳೆಯವ +ಹಾಯ್ಕಿದನು +ಲೋಹದ
ಗಾಲಿ +ಘೀಳಿಡೆ +ರಥವನ್+ಏರಿದನ್+ಅನಿಲಸುತ+ಸೂನು

ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಸೈನ್ಯವನ್ನು ಹೋಲಿಸುವ ಪರಿ – ಕಾಳರಾತ್ರಿಯ ಕಟಕವೋ ಮೇಣ್ ಕಾಲರುದ್ರನ ಪಡೆಯೊ

ಪದ್ಯ ೪೬: ಯುದ್ಧದ ತೀವ್ರತೆ ಹೇಗಿತ್ತು?

ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರು
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು (ಭೀಷ್ಮ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಬವರಿಯಿಂದ ಸರಿಸು, ಎದುರಾಳಿಯ ಹೊಡೆತವನ್ನು ಕಪಿಮುಷ್ಟಿಯ ಯೋಧರು ತಪ್ಪಿಸಿಕೊಳ್ಳುವರು. ಎದುರಾಳಿಯನ್ನು ತಿವಿಯುವರು, ಅವನು ಕೈಮಾಡಿದರೆ ತಾವೂ ಕೈಮಾದುವರು, ಮೇಲೆ ಬಿದ್ದರೆ ಹಿಂದಕ್ಕೊತ್ತುವರು, ಔಕಿದರೆ ತಗ್ಗುವರು, ಅವನೂ ತಗ್ಗಿದರೆ ತಾವು ಸರಿದು ತಪ್ಪಿಸಿಕೊಳ್ಳುವರು. ಹೀಗೆ ಯುದ್ಧ ಘನಘೋರವಾಗಿ ನಡೆಯಿತು.

ಅರ್ಥ:
ಬವರಿ:ತಿರುಗುವುದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ: ವೈರಿ,ಎದುರಾಳಿ; ಘಾಯ: ಪೆಟ್ಟು; ವಂಚಿಸು: ಮೋಸ; ಭಟ: ಸೈನಿಕರು; ಕೊರೆ: ಇರಿ, ಚುಚ್ಚು; ಎತ್ತು: ಮೇಲೆ ತರು; ಕೈಮಾಡು: ಹೊಡೆ; ತಿವಿ: ಚುಚ್ಚು; ಕೋಡಕೈ: ಆಯುಧ; ಕವಿ: ಆವರಿಸು; ಔಕು: ತಳ್ಳು; ತಗ್ಗು: ಬಗ್ಗು, ಕುಸಿ; ಒಡನೊಡನೆ: ಒಮ್ಮೆಲೆ; ಜಾರು: ಬೀಳು; ಜುಣುಗು: ನುಣುಚಿಕೊಳ್ಳು; ಐದು: ಬಂದುಸೇರು; ತಿವಿ: ಚುಚ್ಚು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಬವರಿಯಲಿ +ಪೈಸರಿಸಿ +ಪರಘಾ
ಯವನು +ವಂಚಿಸಿ +ಭಟರ +ಕೊರೆದ್
ಎತ್ತುವರು +ಕೈಮಾಡಿದರೆ+ ತಿವಿವರು+ ಕೋಡಕೈಯವರು
ಕವಿಯಲ್+ಔಕುವರ್+ಔಕಿದರೆ+ ತ
ಗ್ಗುವರು +ತಗ್ಗಿದರೊಡನೊಡನೆ+ ಜಾ
ರುವರು+ ಜುಣುಗುವರ್+ಐದೆ +ತಿವಿದಾಡಿದರು +ಸಬಳಿಗರು

ಅಚ್ಚರಿ:
(೧) ಔಕು, ತಿವಿ, ಕೊರೆ, ಕವಿ, ತಗ್ಗು, ಜಾರು, ಜುಣುಗು – ಹೋರಾಟವನ್ನು ವಿವರಿಸುವ ಪದಗಳು