ಪದ್ಯ ೩: ಧರ್ಮಜ ಕೃಷ್ಣರ ಸಂವಾದ ಹೇಗಿತ್ತು?

ಫಲಿಸಿತರಸಾ ನಿನ್ನ ಭಾಗ್ಯದ
ಬೆಳೆಸು ನಿನ್ನೊಡವುಟ್ಟಿದನ ನುಡಿ
ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ
ಕಳಿದುದೊಂದಪಮೃತ್ಯುವೆನೆ ನೃಪ
ತಿಲಕ ನುಡಿದನು ನಿನ್ನ ಭಾಷೆಯ
ಬಲಿದೆ ನಿನ್ನಯ ಬಿರುವ ಸಲಿಸಿದೆ ನಮಗಿದೇನೆಂದ (ದ್ರೋಣ ಪರ್ವ, ೧೫ ಸಂಧಿ, ೩ ಪದ್ಯ)

ತಾತ್ಪರ್ಯ:
ರಾಜಾ ನಿನ್ನ ಭಾಗ್ಯದ ಬೆಳೆ ಫಲಿಸಿತು. ನಿನ್ನ ತಮ್ಮನ ಪ್ರತಿಜ್ಞೆಗೆ ಕಳಶವಿಟ್ಟಿತು. ಇದು ಉಳಿದವರಿಗೆ ಬಹು ಕಷ್ಟಕರ, ಒಂದು ಅಪಮೃತ್ಯು ತಪ್ಪಿತು ಎಂದು ಕೃಷ್ಣನು ಹೇಳಲು, ಧರ್ಮಜನು ಉತ್ತರಿಸುತ್ತಾ, ನಿನ್ನ ಪ್ರತಿಜ್ಞೆಯನ್ನು ನೀನು ನಡೆಸಿಕೊಂಡೆ, ಮಾತನ್ನು ಉಳಿಸಿಕೊಂಡೆ, ನಿನ್ನ ಕೃಪೆಯಿರಲು ನಮಗಿದೇನು ಎಂದು ಕೃಷ್ಣನ ಮೇಲಿನ ಭಕ್ತಿಭಾವವನ್ನು ತೋರಿದನು.

ಅರ್ಥ:
ಫಲಿಸು: ಪ್ರಯೋಜನ; ಭಾಗ್ಯ: ಅದೃಷ್ಟ; ಬೆಳೆಸು: ಅಧಿಕವಾಗು; ಒಡವುಟ್ಟು: ಜೊತೆಯಲ್ಲಿ ಜನಿಸಿದ; ನುಡಿ: ಮಾತು; ಕಳಶ: ಶಿಖರ, ಹಿರಿಯ; ಕಂಡು: ನೋಡು; ಕದನ: ಯುದ್ಧ; ಭಾರಾಂಕ: ಮಹಾಯುದ್ಧ; ಅಪಮೃತ್ಯು: ಅಕಾಲ ಮರಣ; ನೃಪ: ರಾಜ; ತಿಲಕ: ಶ್ರೇಷ್ಠ; ನುಡಿ: ಮಾತು; ಭಾಷೆ: ನುಡಿ; ಬಲಿ: ಗಟ್ಟಿ; ಬಿರು: ಬಿರುಸಾದುದು; ಸಲಿಸು: ಪೂರೈಸು; ಒಪ್ಪಿಸು;

ಪದವಿಂಗಡಣೆ:
ಫಲಿಸಿತ್+ಅರಸಾ +ನಿನ್ನ +ಭಾಗ್ಯದ
ಬೆಳೆಸು +ನಿನ್ನೊಡವುಟ್ಟಿದನ +ನುಡಿ
ಕಳಸ+ಕಂಡುದು +ಕದನವಿದು +ಭಾರಾಂಕವ್+ಉಳಿದರಿಗೆ
ಕಳಿದುದೊಂದ್+ಅಪಮೃತ್ಯುವ್+ಎನೆ +ನೃಪ
ತಿಲಕ +ನುಡಿದನು +ನಿನ್ನ +ಭಾಷೆಯ
ಬಲಿದೆ +ನಿನ್ನಯ +ಬಿರುವ +ಸಲಿಸಿದೆ +ನಮಗಿದೇನೆಂದ

ಅಚ್ಚರಿ:
(೧) ಅರ್ಜುನನನ್ನು ಹೊಗಳುವ ಪರಿ – ನಿನ್ನೊಡವುಟ್ಟಿದನ ನುಡಿ ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ

ಪದ್ಯ ೭: ಊರ್ವಶಿಯ ಸುತ್ತಲೂ ಯಾರಿದ್ದರು?

ಹೆಗಲ ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಸದ ತಾಳ ವೃಂತಕದ
ಮುಗುದೆಯರು ಮನಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ (ಅರಣ್ಯ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ತಾಂಬೂಲದ ಚೀಲವನ್ನು ಹೆಗಲಿಗೆ ಹಾಕಿಕೊಂಡವರು, ಕನ್ನಡಿ ಕಲಶವನ್ನು ಹಿಡಿದವರು, ಚಾಮರವನ್ನು ಹಾಕುವವರು, ಬಂಗಾರದ ಲೇಪವುಳ್ಲ ಪಾದರಕ್ಷೆಯನ್ನು ತೊಟ್ಟವರು, ನೀಳವಾದ ಚೂಚುಕವುಳ್ಳ ಕಲಶಕುಚೆಯರು, ಊರ್ವಶಿಯ ಸುತ್ತಲೂ ಬರುತ್ತಿದ್ದರು. ಮನ್ಮಥನ ಸೈನ್ಯವೇ ಬಂತೋ ಎಂಬಂತೆ ಕಾಣುತ್ತಿತ್ತು, ಅವರೆಲ್ಲರೂ ಊರ್ವಶಿಯ ಪಲ್ಲಕ್ಕಿಯ ಸುತ್ತಲೂ ದೇಹಕಾಂತಿಯ ತೆರೆಗಳನ್ನು ಹರಿಸುತ್ತಿದ್ದರು.

ಅರ್ಥ:
ಹೆಗಲು: ಭುಜ; ಹಡಪ: ಅಡಕೆ ಎಲೆಯ ಚೀಲ; ಹಿಡಿ: ಗ್ರಹಿಸು; ಮುಕುರ: ಕನ್ನಡಿ; ಆಳಿ: ಸಾಲು; ಚಿಮ್ಮು: ಹೊರಬರುವ; ಸೀಗುರಿ: ಚಾಮರ; ಹಾವುಗೆ: ಪಾದುಕೆ; ಹೇಮ: ಚಿನ್ನ; ನಿಬಂಧ: ನಿಮಿತ್ತ; ಕಳಸ: ಕುಂಭ; ತಾಳವೃಂತ: ಬೀಸಣಿಕೆ; ಮುಗುದೆ: ಸುಂದರ ಯುವತಿ; ಮನಮಥ: ಕಾಮ; ಮೊನೆ: ಚೂಪು; ಆಳು: ಸೇವಕ; ಮುಸುಕು: ಆವರಿಸು; ಮಾನಿನಿ: ಹೆಣ್ಣು; ದಂಡಿಗೆ: ಬೆತ್ತ, ಬಡಿಗೆ; ದಂಡಿ: ಹೆಚ್ಚಳ; ಮೈಕಾಂತಿ: ತನುವಿನ ಕಾಂತಿ, ಪ್ರಕಾಶ; ದೂವಾಳಿ: ವೇಗವಾಗಿ ಓಡುವುದು; ಲಹರಿ: ಅಲೆ, ರಭಸ;

ಪದವಿಂಗಡಣೆ:
ಹೆಗಲ +ಹಡಪದ +ಹಿಡಿದ +ಮುಕುರಾ
ಳಿಗಳ +ಚಿಮ್ಮುವ +ಸೀಗುರಿಯ +ಹಾ
ವುಗೆಯ +ಹೇಮ+ನಿಬಂಧ+ ಕಳಸದ +ತಾಳ +ವೃಂತಕದ
ಮುಗುದೆಯರು +ಮನಮಥನ+ ಮೊನೆ
ಆಳುಗಳು +ಮುಸುಕಿತು +ಮಾನಿನಿಯ +ದಂ
ಡಿಗೆಯ +ಮೈಕಾಂತಿಗಳ +ದೂವಾಳಿಗಳ +ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಗಲ ಹಡಪದ ಹಿಡಿದ
(೨) ಮ ಕಾರದ ಸಾಲು ಪದ – ಮುಗುದೆಯರು ಮನಮಥನ ಮೊನೆಯಾಳುಗಳು ಮುಸುಕಿತು ಮಾನಿನಿಯ

ಪದ್ಯ ೪೦: ಸಹದೇವನು ಜರಾಸಂಧನಿಗೆ ಏನು ಹೇಳಿದ?

ನಿಲಿಸಿದನು ಕಳವಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಯ್ತಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ (ಸಭಾ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಷ್ಮರು ಯಾದವರ ಸೈನ್ಯದಲ್ಲಾದ ಕಳವಳವನ್ನು ನಿಲ್ಲಿಸಲು ಅವರ ಸೈನ್ಯವು ಹಿಂದಕ್ಕೆ ಹೋಯಿತು. ಆಸ್ಥಾನದಲ್ಲಿ ಮೌನವು ಆವರಿಸಿತು. ಆಗ ಸಹದೇವನು ಎದ್ದುನಿಂತು ಶಿಶುಪಾಲನಿಗೆ, ಎಲವೋ ಸುನೀತ, ಕೃಷ್ಣನ ಮೇಲಿನ ವಿರೋಧದಿಂದ ವೃಥಾ ಆರೋಪ ಮಾದಿ ಜಾರಿ ಬೀಳುತ್ತಿರುವೆ, ಶ್ರೀಕೃಷ್ಣನು ಮಾನ್ಯರಲ್ಲಿ ತಿಲಕಪ್ರಾಯನಾದವನು, ಈತನ ಪೂಜೆಯು ಈ ಮಹಾಯಜ್ಞಕ್ಕೆ ಕಳಶಪ್ರಾಯವಿದ್ದಂತೆ ಎಂದನು.

ಅರ್ಥ:
ನಿಲಿಸು: ತಡೆ; ಕಳವಳ: ಗೊಂದಲ; ಬಲ: ಸೈನ್ಯ; ತೆಗೆ: ಈಚೆಗೆ ತರು, ಹೊರತರು; ಮತ್ತೆ; ಪುನಃ; ಮೌನ: ನಿಶ್ಯಬ್ದ, ಸದ್ದಿಲ್ಲದೆ ಇರುವುದು, ನೀರವತೆ; ಜಲಧಿ; ಸಾಗರ; ಆಸ್ಥಾನ: ದರ್ಬಾರು, ಓಲಗ; ಇದಿರು: ಎದುರು; ನಿಂದು: ನಿಲ್ಲು; ವೃಥಾ: ಸುಮ್ಮನೆ; ವಿರೋಧ: ವೈರ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಮುರಾರಿ: ಕೃಷ್ಣ; ಮಾನ್ಯ: ಗೌರವ, ಮನ್ನಣೆ; ತಿಲಕ: ಶ್ರೇಷ್ಠ; ಪೂಜೆ: ಆರಾಧನೆ; ಯಾಗ: ಯಜ್ಞ; ಕಳಸ: ಶ್ರೇಷ್ಠ, ಗಣ್ಯವ್ಯಕ್ತಿ, ಹಿರಿಯ;

ಪದವಿಂಗಡಣೆ:
ನಿಲಿಸಿದನು +ಕಳವಳವನ್+ಈ+ ಯದು
ಬಲವ +ತೆಗೆದನು+ ಮತ್ತೆ+ ಮೌನದ
ಜಲಧಿಯಾಯ್ತ್+ ಆಸ್ಥಾನದ್+ಇದಿರಲಿ+ ನಿಂದು +ಸಹದೇವ
ಎಲೆ +ಸುನೀತ +ವೃಥಾ +ವಿರೋಧ
ಸ್ಖಲಿತನಾದೆ +ಮುರಾರಿ +ಮಾನ್ಯರ
ತಿಲಕನ್+ಈತನ +ಪೂಜೆ +ಯಾಗಕೆ +ಕಳಸವಾಯ್ತೆಂದ

ಅಚ್ಚರಿ:
(೧) ಮೌನದ ಗಾಢತೆಯನ್ನು ವಿವರಿಸುವ ಪದ – ಮೌನದಜಲಧಿಯಾಯ್ತಾಸ್ಥಾನದಿದಿರಲಿ
(೨) ಕೃಷ್ಣನ ಗುಣಗಾನ – ಮುರಾರಿ ಮಾನ್ಯರ ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ