ಪದ್ಯ ೨೦: ಧರ್ಮಜನು ಭೀಮನಿಗೆ ಯಾವ ಕಿವಿಮಾತನ್ನು ಹೇಳಿದನು?

ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳ್+ಆಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ (ಗದಾ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ತುಂಬ ಬೇಸರಗೊಂಡು, ಶತ್ರುವನ್ನು ಅಪಮಾನಗೊಳಿಸಲು ನಾವೇನು ಪರರಾಜರೇ? ನಾವು ಪಾಂಡುವಿನ ಮಕ್ಕಳು. ಕೌರವರು ಧೃತರಾಷ್ಟ್ರನ ಮಕ್ಕಳು ನಮ್ಮ ಸಂಬಂಧಿಕರು, ಏನೋ ಭೂಮಿಯ ದಾಯಭಾಗದಲ್ಲಿ ಯುದ್ಧವಾಯಿತು. ಅಷ್ಟೇ ಹೊರತು ನಾವು ನಿಜವಾಗಿಯೂ ಬೇರೆಯವರೇ? ಭೀಮ ಭಂಗಿಸದೆ ನಡೆ ಎಂದು ಧರ್ಮಜನು ನುಡಿದನು.

ಅರ್ಥ:
ಅಳಲು: ದುಃಖಿಸು; ಅತಿ: ಬಹಳ; ಭಂಗ: ಮುರಿ; ಮಂಡಳೀಕ: ಸಾಮಂತರಾಜ; ಪರ: ವಿರೋಧಿ; ಮಕ್ಕಳು: ಪುತ್ರರು; ತನು: ದೇಹ; ಸಂಭವ: ಹುಟ್ಟು; ನೆಲ: ಭೂಮಿ; ಹುದು: ಕೂಡುವಿಕೆ, ಸೇರುವಿಕೆ; ದಾಯ:ಪಗಡೆಯ ಗರ, ಅವಕಾಶ; ಭಾಗ: ಅಂಶ, ಪಾಲು; ಕಲವಳ: ಗೊಂದಲ; ಉಳಿದ: ಮಿಕ್ಕ; ತೊಳಗು: ಕಾಂತಿ, ಪ್ರಕಾಶ; ಭಿನ್ನ: ಚೂರು, ತುಂಡು; ಬಿಡು: ತೊರೆ; ಸಾರು: ಪ್ರಕಟಿಸು, ಘೋಷಿಸು;

ಪದವಿಂಗಡಣೆ:
ಅಳಲಿದ್+ಅತಿ+ಭಂಗಿಸಲು +ಪರಮಂ
ಡಳಿಕರೇ +ನಾವ್ +ಪಾಂಡುವಿನ +ಮ
ಕ್ಕಳುಗಳಾ +ಧೃತರಾಷ್ಟ್ರ+ ತನುಸಂಭವರು+ ಕೌರವರು
ನೆಲನ +ಹುದುವಿನ +ದಾಯಭಾಗದ
ಕಳವಳದೊಳಾಯ್ತಲ್ಲದ್+ಉಳಿದಂ
ತೊಳಗು +ಭಿನ್ನವೆ+ ಭೀಮ +ಬಿಡು +ಭಂಗಿಸದೆ +ಸಾರೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಭಿನ್ನವೆ ಭೀಮ ಬಿಡು ಭಂಗಿಸದೆ
(೨) ಕೌರವರಾರು? ಧೃತರಾಷ್ಟ್ರ ತನುಸಂಭವರು ಕೌರವರು

ಪದ್ಯ ೩೮: ಕೌರವನನ್ನು ಅಮರಗಣ ಹೇಗೆ ಹೊಗಳಿತು?

ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ (ಗದಾ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಮಹಾಕೋಲಾಹಲವಾಯಿತು. ಪಿಶಾಚರು, ರಾಕ್ಷಸರು, ವಿದ್ಯಾಧರರು, ಉರಗರು, ಯಕ್ಷಕಿನ್ನನರು, ವೀರನೆಂದರೆ ನೀನೇ, ನಲ ನಹುಷದ ವಂಶದಲ್ಲಿ ಹುಟ್ಟಿ ವಿಜಯಿಯಾದೆ. ಕೌರವ, ನೀನು ಕರಾಳ ಬಾಹುಬಲವನ್ನುಳ್ಳವನು ಎಂದು ಕೂಗಿದರು.

ಅರ್ಥ:
ಕಳವಳ: ಗೊಂದಲ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ: ಹೊಡೆ, ಸೀಳು; ಪಿಶಾಚ: ದೆವ್ವ; ರಾಕ್ಷಸ: ಅಸುರ; ಜಾಲ: ಬಲೆ, ಸಮೂಹ; ಉರಗ: ಹಾವು; ಆಳು: ಪರಾಕ್ರಮಿ, ಶೂರ; ಭೂಪಾಲಕ: ರಾಜ; ಕುಲ: ವಂಶ; ಭಂಗ: ಸೋಲು, ಮುರಿ; ಅಭಂಗ: ಜಯಶಾಲಿ; ಕರಾಳ: ದುಷ್ಟ; ಭುಜಬಲ: ಪರಾಕ್ರಮಿ; ಕೊಂಡಾಡು: ಹೊಗಳು; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಮೇಲೆ +ಕಳವಳವಾಯ್ತು +ದಿಕ್ಕಿನ
ಮೂಲೆ +ಬಿರಿಯೆ +ಪಿಶಾಚ+ರಾಕ್ಷಸ
ಜಾಲ +ವಿದ್ಯಾಧರ +ಮಹ+ಉರಗ +ಯಕ್ಷ+ ಕಿನ್ನರರು
ಆಳು +ನೀನಹೆ +ನಳ+ ನಹುಷ +ಭೂ
ಪಾಲ+ಕುಲದಲ್+ಅಭಂಗನಾದೆ +ಕ
ರಾಳ+ಭುಜಬಲ +ನೀನೆನುತ +ಕೊಂಡಾಡಿತ್+ಅಮರಗಣಾ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಭೂಪಾಲಕುಲದಲಭಂಗನಾದೆ ಕರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ

ಪದ್ಯ ೪೯: ಶಬರಪತಿಯು ಭೀಮನಲ್ಲಿ ಏನೆಂದು ಕೇಳಿದನು?

ತಂದ ಮಾಂಸದ ಕಂಬಿಗಳು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆ ಶಬರಪತಿ ನುಡಿಸಿದನು ಪವನಜನ (ಗದಾ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಾಂಸದ ಕಂಬಿಗಲನ್ನಿಳಿಸಿ ಬೇಟೆಗಾರರು ಭೀಮನ ಮನೆಗೆ ಹೋಗಿ ಜನರು ಕಳವಳಿಸುತ್ತಿದ್ದುದನ್ನು ಕಂಡರು. ಭೀಮನಲ್ಲಿ ಸಲಿಗೆಯಿಂದಿದ್ದ ಶಬರಪತಿಯು ಒಡೆಯ, ನೀವು ಇಂದಿನ ಯುದ್ಧದಲ್ಲಿ ಜಯಶಾಲಿಗಳಾಗಿದ್ದೀರಿ, ಇಂತಹ ಸಂತೋಷದ ಸಮಯದಲ್ಲಿ ಈ ಕಳವಳದ ಜಾಡ್ಯವೇಕೆ ಎಂದು ಕೇಳಿದನು.

ಅರ್ಥ:
ಮಾಂಸ: ಅಡಗು; ಕಂಬಿ: ಲೋಹದ ತಂತಿ; ಪುಳಿಂದ: ಬೇಡ; ಒಪ್ಪಿಸು: ನೀಡು; ಮಂದಿರ: ಮನೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಕಂಡು: ನೋಡು; ಜನ: ಮನುಷ್ಯರ ಗುಂಪು; ಕಳವಳ: ಗೊಂದಲ; ಸಂಗ್ರಾಮ: ಯುದ್ಧ; ಜಯ: ಗೆಲುವು; ಜಾಡ್ಯ: ನಿರುತ್ಸಾಹ; ಬಿನ್ನಹ: ಕೋರಿಕೆ; ಸಲುಗೆ: ಸದರ, ಅತಿ ಪರಿಚಯ; ಶಬರಪತಿ: ಬೇಟೆಗಾರರ ಒಡೆಯ; ನುಡಿಸು: ಮಾತಾದು; ಪವನಜ: ಭೀಮ;

ಪದವಿಂಗಡಣೆ:
ತಂದ +ಮಾಂಸದ +ಕಂಬಿಗಳು +ಪು
ಳಿಂದರ್+ಒಪ್ಪಿಸಿ +ಭೀಮಸೇನನ
ಮಂದಿರವ +ಸಾರಿದರು +ಕಂಡರು +ಜನದ +ಕಳವಳವ
ಇಂದಿನ್+ಈ+ ಸಂಗ್ರಾಮ+ಜಯದಲಿ
ಬಂದ +ಜಾಡ್ಯವಿದೇನು +ಬಿನ್ನಹ
ವೆಂದು +ಸಲುಗೆ +ಶಬರಪತಿ+ ನುಡಿಸಿದನು +ಪವನಜನ

ಅಚ್ಚರಿ:
(೧) ಸಂತೋಷವಾಗಿಲ್ಲ ಎಂದು ಹೇಳುವ ಪರಿ – ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು

ಪದ್ಯ ೧: ದುರ್ಯೋಧನನ ಸ್ಥಿತಿ ಹೇಗಿತ್ತು?

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ (ಶಲ್ಯ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಿನ್ನ ಮಗನ ಸ್ಥಿತಿಯನ್ನು ಕೇಳು, ಮನಸ್ಸಿನಲ್ಲಿ ಕಳವಲ, ಹೊರಗೆ ನಗೆ, ಒಳಗೆ ನಡುಕ, ಹೊರಗೆ ದರ್ಪ. ಒಳಗೆ ಬೇಗೆ ಹೊರಗೆ ಮಹಾಗರ್ವ, ಸೋಲಿನ ಅಳುಕು ಒಳಗೆ ಮಹಾಪರಾಕ್ರಮದ ದರ್ಪ ಹೊರಗೆ ಎಂದು ಸಂಜಯನು ಹೇಳಿದನು.

ಅರ್ಥ:
ಒಳಗೆ: ಅಂತರ್ಯ; ಢಗೆ: ಕಾವು, ದಗೆ; ನಗೆ: ಸಂತಸ; ಹೊರಗೆ: ಆಚೆ; ಕಳವಳ: ಗೊಂದಲ; ನವಾಯಿ: ಠೀವಿ; ಡಿಳ್ಳ: ಅಂಜಿಕೆ; ಸಘಾಡ: ವೇಗ, ರಭಸ; ಮದ: ಅಹಂಕಾರ; ಬೇಗೆ: ಬೆಂಕಿ, ಕಿಚ್ಚು; ಪರಾಭವ: ಸೋಲು; ಕಂದು:ಕಳಾಹೀನ; ಕಡುಹು: ಸಾಹಸ, ಹುರುಪು; ಕಲಿ: ಶೂರ; ಹಳಹಳಿ: ರಭಸ, ತೀವ್ರತೆ; ಮಹೀಶ: ರಾಜ; ಹದ: ಸ್ಥಿತಿ; ನಂದನ: ಮಗ;

ಪದವಿಂಗಡಣೆ:
ಒಳಗೆ +ಢಗೆ +ನಗೆ +ಹೊರಗೆ+ ಕಳವಳವ್
ಒಳಗೆ +ಹೊರಗೆ +ನವಾಯಿ +ಡಿಳ್ಳಸವ್
ಒಳಗೆ +ಹೊರಗೆ +ಸಘಾಡ+ಮದ +ಬಲುಬೇಗೆ+ಒಳಗೊಳಗೆ
ಬಲುಹು +ಹೊರಗೆ +ಪರಾಭವದ+ ಕಂದ್
ಒಳಗೆ +ಕಡುಹಿನ +ಕಲಿತನದ +ಹಳ
ಹಳಿಕೆ +ಹೊರಗೆ +ಮಹೀಶ +ಹದನಿದು +ನಿನ್ನ +ನಂದನನ

ಅಚ್ಚರಿ:
(೧) ಒಳಗೆ ಹೊರಗೆ ಪದಗಳ ಬಳಕೆ
(೨) ಒಳಗೆ – ೧-೩, ೫ ಸಾಲಿನ ಮೊದಲ ಪದ

ಪದ್ಯ ೧೦: ದುರ್ಯೋಧನನ ಸ್ಥಿತಿ ಹೇಗಿತ್ತು?

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಲದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ (ಶಲ್ಯ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪನ್ನೀರನ್ನು ದೊರೆಯ ಕಣ್ಣುಗಳಿಗೆ ಚುಮುಕಿಸಿ, ಹಿಡಿದೆತ್ತಿ ಕೂಡಿಸಿದರೆ, ದುರ್ಯೋಧನನು ಏನಪ್ಪಾ ಕರ್ಣ ಎಂದು ಕಣ್ಣುತೆರೆದು, ಥಟ್ಟನೆ ನೀಂತು ಕರ್ಣ, ರಾತ್ರಿಯಾಯಿತು ಸೈನ್ಯವನ್ನು ಪಾಳೆಯಕ್ಕೆ ಕಳುಹಿಸು ಎನ್ನಲು, ಶೋಕವು ಮತ್ತೆ ಹೆಚ್ಚಾಗಿ ಕಣ್ಣುಮುಚ್ಚಿ ಮೂರ್ಛಿತನಾದನು.

ಅರ್ಥ:
ತಳಿ: ಚಿಮುಕಿಸು, ಸಿಂಪಡಿಸು; ಪನ್ನೀರು: ತಂಪಾದ ನೀರು; ಅಕ್ಷಿ: ಕಣ್ಣು; ಚಳೆ: ಸಿಂಪಡಿಸುವುದು, ಚಿಮುಕಿಸುವುದು; ಹಿಡಿದು: ಗ್ರಹಿಸು; ಎತ್ತು: ಮೇಲೆ ತರು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಮಲಗು: ನಿದ್ರಿಸು; ಕಂದೆರೆ: ಕಣ್ಣನ್ನು ಬಿಡು; ಘಳಿಲು: ಒಮ್ಮೆಲೆ; ಎದ್ದು: ಮೇಲೇಳು, ಎಚ್ಚರಗೊಳ್ಳು; ತೆಗೆ: ಹೊರತರು; ದಳ: ಸೈನ್ಯ; ಇರುಳು: ರಾತ್ರಿ; ಶೋಕ: ದುಃಖ; ಕಳವಳ: ಗೊಂದಲ; ಅರೆ: ಅರ್ಧ; ಮುಚ್ಚು: ಮರೆಮಾಡು, ಹೊದಿಸು; ಕಣ್ಣು: ನಯನ; ಮೈಮರೆ: ಎಚ್ಚರತಪ್ಪು;

ಪದವಿಂಗಡಣೆ:
ತಳಿತಳಿದು +ಪನ್ನೀರನ್+ಅಕ್ಷಿಗೆ
ಚಳೆಯವನು +ಹಿಡಿದೆತ್ತಿ +ಗುರುಸುತ
ಮಲಗಿಸಿದಡ್+ಏನಯ್ಯ +ಕರ್ಣ +ಎನುತ್ತ +ಕಂದೆರೆದು
ಘಳಿಲನೆದ್ದನು +ಕರ್ಣ +ತೆಗೆಸೈ
ದಳವನ್+ಇರುಳಾಯ್ತೆಂದು +ಶೋಕದ
ಕಳವಳದಲ್+ಅರೆ+ಮುಚ್ಚುಗಣ್ಣಲಿ +ಮತ್ತೆ +ಮೈಮರೆದ

ಅಚ್ಚರಿ:
(೧) ಅಕ್ಷಿ, ಕಣ್ಣು – ಸಮಾನಾರ್ಥಕ ಪದ
(೨) ಕಂದೆರೆದು, ಮುಚ್ಚುಗಣ್ಣು – ಕಣ್ಣಿನ ಸ್ಥಿತಿಯನ್ನು ತೋರುವ ಪದಗಳು
(೩) ತಳಿತಳಿ, ಕಳವಳ – ಪದಗಳ ಬಳಕೆ

ಪದ್ಯ ೯: ಧರ್ಮಜನ ಮನಸ್ಥಿತಿ ಹೇಗಿತ್ತು?

ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧರಿಯದ
ತಳಿತ ಭೀತಿಗೆ ಕಾಲ್ವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹಶ್ರಮವನ್ನಾರಿಸಿಕೊಳ್ಳಲು ತಾಂಬೂಲವನ್ನು ಜರೆಯುತ್ತಾ ಅದರ ರಸದಲ್ಲಿ ಸ್ವಲ್ಪ ಸಮಾಧಾನವಾದರೂ ಮೇಲೆದ್ದು ಬರುವ ಆಯಾಸದಿಂದ ನೊಂದ, ನಟನೆಯ ನಗೆಯನ್ನು ಬೀರುವ, ಕಳವಳಗೊಂಡು ಕಣ್ಣುಗಳನ್ನು ತೆರೆದು ಮುಚ್ಚುವ, ಛಲ ಹಿಂಗಿ ಧೈರ್ಯವುಡುಗಿ ಭೀತಿ ತುಂಬಿ ಹರಿಯುತ್ತಿದ್ದ ಚಂಚಲ ಮನಸ್ಸಿನ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಹೊಳೆ: ಪ್ರಕಾಶ; ತಂಬುಲ: ಎಲೆ ಅಡಿಕೆ; ರಸ: ಸಾರ; ಮುಳುಗು: ಮೀಯು, ಕಾಣದಾಗು; ಮೂಡು: ತುಂಬು, ಹುಟ್ಟು; ಢಗೆ: ಕಾವು, ಧಗೆ; ತೊಡಹು: ಸೇರಿಕೆ; ಮೆಲುನಗೆ: ಮಂದಸ್ಮಿತ; ಕಳವಳ: ಗೊಂದಲ; ಮುಕ್ಕುಳಿಸು: ಹೊರಹಾಕು; ಆಲಿ: ಕಣ್ಣು; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಛಲ: ನೆಪ, ವ್ಯಾಜ; ವಿಡಾಯಿ: ಶಕ್ತಿ, ಆಡಂಬರ; ಧೈರ್ಯ: ಎದೆಗಾರಿಕೆ, ಕೆಚ್ಚು; ತಳಿತ: ಚಿಗುರು; ಭೀತಿ: ಭಯ; ಕಾಲ: ಸಮ್ಯ; ಅಳಿ: ನಾಶ; ಮನ: ಮನಸ್ಸು; ಭೂಪಾಲ: ರಾಜ; ಕಂಡು: ನೋಡು;

ಪದವಿಂಗಡಣೆ:
ಹೊಳೆಹೊಳೆದು +ತಂಬುಲದ +ರಸದಲಿ
ಮುಳುಗಿ +ಮೂಡುವ +ಢಗೆಯ+ ತೊಡೆಹದ
ಮೆಲುನಗೆಯ +ಕಳವಳವನ್+ಅರೆ+ ಮುಕ್ಕುಳಿಸಿದ್+ಆಲಿಗಳ
ಹಿಳಿದ +ಛಲದ +ವಿಡಾಯಿ +ಧರಿಯದ
ತಳಿತ +ಭೀತಿಗೆ +ಕಾಲವೊಳೆಯಾದ್
ಅಳಿಮನದ +ಭೂಪಾಲನ್+ಇರವನು +ಕಂಡನಾ +ಪಾರ್ಥ

ಅಚ್ಚರಿ:
(೧) ವೈರುಧ್ಯ ಭಾವನೆಗಳನ್ನು ವಿವರಿಸುವ ಪದ್ಯ – ಹೊಳೆಹೊಳೆದು ತಂಬುಲದ ರಸದಲಿ ಮುಳುಗಿ ಮೂಡುವ ಢಗೆಯ ತೊಡೆಹದ ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ

ಪದ್ಯ ೧೨: ಕೀಚಕನೇಕೆ ಗಲಿಬಿಲಿಗೊಂಡನು?

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣುರಿ
ಗಾರಿಯಿವಳಾರೆನುತ ಗಜಬಜಿಸಿದನು ನಿಮಿಷದಲಿ (ವಿರಾಟ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೀಚಕನ ಹೃದಯವು ದ್ರೌಪದಿಯ ರೂಪಕ್ಕೆ ಸೂರೆಹೋಯಿತು; ಕಣ್ಣುಗಳು ಅವಳತ್ತ ನೆಟ್ಟು ಮೋಹಗೊಂಡವು, ಮನಸ್ಸಿನ ಧೈರ್ಯವು ಎತ್ತಲೋ ಹೋಗಿ ಬಿಟ್ಟಿತು, ಕಳವಳವು ಮನಸ್ಸಿನಲ್ಲಿ ಬೀಡುಬಿಟ್ಟಿತು, ಕಾಮನ ಬಾಣದ ಪ್ರವೇಶದಿಂದ ಹೃದಯದಲ್ಲಿ ಬಿರುಕುಬಿಟ್ಟಿತು, ತನ್ನ ರೂಪಿನಿಂದ ನನ್ನ ಕಣ್ಣುಗಳನ್ನು ಉರಿಸುವ ಇವಳಾರು ಯಾರು ಎಂದು ಚಡಪಡಿಸಿದನು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ಚಿತ್ತ: ಮನಸ್ಸು; ಕಂಗಳು: ನೋಟ; ಮಾರುವೋಗು: ಮೋಹಗೊಳ್ಳು; ಖಳ: ದುಷ್ಟ; ಧೈರ್ಯ: ಪರಾಕ್ರಮ; ತೂರು: ಹೊರಹಾಕು; ಪೋದು: ಹೋಗು; ಕರಣ: ಜ್ಞಾನೇಂದ್ರಿಯ; ಕಳವಳ: ಗೊಂದಲ; ಬೀಡು: ನೆಲೆ; ಮೀರು: ಉಲ್ಲಂಘಿಸು; ಅಂಗಜ: ಕಾಮ; ಶರ: ಬಾಣ; ಹೃದಯ: ಎದೆ; ಕಣ್ಣು: ನಯನ; ಉರಿ: ನೋಯಿಸು; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕಾಲದ ಪ್ರಮಾಣ; ತೋರು: ಕಾಣು;

ಪದವಿಂಗಡಣೆ:
ಸೂರೆವೋಯಿತು +ಚಿತ್ತ +ಕಂಗಳು
ಮಾರುವೋದವು+ ಖಳನ +ಧೈರ್ಯವು
ತೂರಿ +ಪೋದುದು +ಕರಣದಲಿ +ಕಳವಳದ +ಬೀಡಾಯ್ತು
ಮೀರಿ+ಪೊಗುವ್+ಅಂಗಜನ+ ಶರದಲಿ
ದೋರುವೋಯಿತು +ಹೃದಯ +ಕಣ್ಣುರಿಗ್
ಆರಿಯಿವಳ್+ಆರೆನುತ+ ಗಜಬಜಿಸಿದನು+ ನಿಮಿಷದಲಿ

ಅಚ್ಚರಿ:
(೧) ಕೀಚನಕ ಮನಸ್ಥಿತಿಯನ್ನು ವರ್ಣಿಸುವ ಪರಿ – ಸೂರೆವೋಯಿತು ಚಿತ್ತ; ಕಂಗಳು ಮಾರುವೋದವು; ಖಳನ ಧೈರ್ಯವು ತೂರಿ ಪೋದುದು; ಕರಣದಲಿ ಕಳವಳದ ಬೀಡಾಯ್ತು

ಪದ್ಯ ೨೨: ದ್ರೌಪದಿಯು ಯಾರನ್ನು ಭಜಿಸಿದಳು?

ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇ ಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿಯುಪ
ದೇಶ ಮಮ್ತ್ರದ ಬಲದಿ ಭಾವಿಸಿ ನೆನೆದಳಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪರಿವಾರದ ಬ್ರಾಹ್ಮಣರ ಕಳವಳ, ಧರ್ಮಜನ ಸಂಕಟ, ಭೀಮನ ಆಕ್ರೋಶ, ಅರ್ಜುನನ ಸೋಗು, ನಕುಲ ಸಹದೇವರ ಮನಸ್ಸಿನ ಕಿರುಕುಳ ಇವೆಲ್ಲವನ್ನೂ ಕಮಲಮುಖಿಯಾದ ದ್ರೌಪದಿಯು ಬೇಸರದಿಂದ ನೋಡಿ, ಧೌಮ್ಯರು ಉಪದೇಶಿಸಿದ ಮಂತ್ರವನ್ನು ಶ್ರೀಕೃಷ್ಣನ ಸ್ಮರಣೆ ಮಾಡುತ್ತಾ ಜಪಿಸಿದಳು.

ಅರ್ಥ:
ಭೂಸುರ: ಬ್ರಾಹ್ಮಣ; ಕಳವಳ: ಗೊಂದಲ; ನೃಪ: ರಾಜ; ಕ್ಲೇಶ: ದುಃಖ, ಸಂಕಟ; ಪವಮಾನ: ವಾಯು; ಸುತ: ಮಗ; ಆಕ್ರೋಶ: ಕೋಪ; ನರ:ಅರ್ಜುನ; ಉಪಟಳ: ಕಿರುಕುಳ; ಆಟ: ಸೋಗು; ಸರೋಜಾನನೆ: ಕಮಲದಂತ ಮುಖವುಳ್ಳ; ನಿರೀಕ್ಷೆ: ನೋಡುವುದು; ಆಸುರ: ಬೇಸರ; ದುಃಖ: ದುಗುಡ; ಮುನಿ: ಋಷಿ; ಉಪದೇಶ: ಬೋಧಿಸುವುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಲ: ಶಕ್ತಿ; ಭಾವಿಸು: ಧ್ಯಾನಿಸು; ನೆನೆ: ಜ್ಞಾಪಿಸಿಕೊ; ಅಚ್ಯುತ: ನ್ಯೂನ್ಯತೆಯಿಲ್ಲದವ, ಕೃಷ್ಣ;

ಪದವಿಂಗಡಣೆ:
ಭೂಸುರರ +ಕಳವಳವ +ನೃಪನಾ
ಕ್ಲೇಶವನು +ಪವಮಾನ+ಸುತನ
ಆಕ್ರೋಶವನು +ನರನ+ಆಟವನು +ಮಾದ್ರೇಯರ್+ ಉಪಟಳವ
ಆ +ಸರೋಜಾನನೆ +ನಿರೀಕ್ಷಿಸುತ
ಆಸುರದ +ದುಃಖದಲಿ+ ಮುನಿ+ಉಪ
ದೇಶ +ಮಂತ್ರದ+ ಬಲದಿ +ಭಾವಿಸಿ +ನೆನೆದಳ್+ಅಚ್ಯುತನ

ಅಚ್ಚರಿ:
(೧) ಕಳವಳ, ಕ್ಲೇಶ, ಆಟ, ಆಕ್ರೋಶ, ಉಪಟಳಾ, ಆಸುರ – ಕಳವಳವನ್ನು ವಿವರಿಸುವ ಪದಗಳು

ಪದ್ಯ ೫: ಸ್ವರ್ಗದಲ್ಲಿ ಈಗ ಯಾವ ಸ್ಥಿತಿಯಿದೆ?

ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯಕಟಕ ಭಂಗದ ಸಂಭವ ಸ್ಥಾನ
ಅಳುಕಿನಂಗಡಿ ಹಳುವಿನಾಡುಂ
ಬೊಲ ನಿರೋಧದ ಶಾಲೆ ದುಗುಡದ
ಕಳನೆನಿಸಿತೀ ನಗರಿಯೀಗಳು ಪಾರ್ಥ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫ ಪದ್ಯ)

ತಾತ್ಪರ್ಯ:
ಈಗಲಾದರೋ ಈ ನಗರವು ಕಳವಳದ ನೆಲೆಯಾಗಿದೆ, ಭಯವು ಹುಟ್ಟುವ ಜಾಗವಾಗಿದೆ, ವಿಷಾದದ ಪೇಟೆಯಾಗಿದೆ, ಕೋಪದ ಮನೆಯಾಗಿದೆ, ಕೇಡಿನ ಪಾಳೆಯವಾಗಿದೆ, ಸೋಲಿನ ಜನ್ಮಸ್ಥಾನವಾಗಿದೆ, ಅಳುಕು ಬೇರು ಬಿಟ್ಟಿದೆ, ಸ್ಥಾನನಾಶವು ಇಲ್ಲಿ ವಿಹಾರ ಮಾಡುತ್ತಿದೆ, ನಿರೋಧವನ್ನು ಇಲ್ಲಿಯೇ ಕಲಿಯಬೇಕು ಎಂಬ ಹಾಗಾಗಿದೆ, ದುಃಖವು ಆಡುವ ಕ್ಷೇತ್ರವಾಗಿದೆ ಎಂದು ಹೇಳಿದನು.

ಅರ್ಥ:
ಕಳವಳ: ತಳಮಳ, ಗೊಂದಲ; ನೆಲೆ: ಸ್ಥಾನ; ಭಯ: ಅಂಜಿಕೆ; ಜನ್ಮಸ್ಥಳ: ಹುಟ್ಟುದಿ ಜಾಗ; ವಿಷಾದ: ನಿರುತ್ಸಾಹ; ಪೇಟೆ: ಆಗರ, ಪಟ್ಟಣ; ನಿಳಯ: ಮನೆ; ಖೋಡಿ: ದುರುಳತನ, ನೀಚತನ; ಅಕಟಕ: ಅಯ್ಯೋ; ಭಂಗ: ಮೋಸ; ಸಂಭವ: ಹುಟ್ಟು, ಉತ್ಪತ್ತಿ; ಸ್ಥಾನ: ಜಾಗ; ಅಳುಕು: ಹೆದರು; ಅಂಗಡಿ: ಮಾರಾಟ ಮಾಡುವ ಸ್ಥಳ; ಹಳುವು: ಕಾಡು; ಆಡುಂಬೋಲ: ವಿಹರಿಸುವ ಸ್ಥಳ, ಸುತ್ತಾಡುವ ಜಾಗ; ನಿರೋಧ: ಪ್ರತಿಬಂಧ; ಶಾಲೆ: ಆಲಯ; ದುಗುಡ: ದುಃಖ; ಕಳ: ರಣರಂಗ; ನಗರ: ಊರು; ಕೇಳು: ಆಲಿಸು;

ಪದವಿಂಗಡಣೆ:
ಕಳವಳದ +ನೆಲೆ +ಭಯದ +ಜನ್ಮ
ಸ್ಥಳ +ವಿಷಾದದ +ಪೇಟೆ +ಖಾತಿಯ
ನಿಳಯ+ ಖೋಡಿ+ಅಕಟಕ +ಭಂಗದ +ಸಂಭವ +ಸ್ಥಾನ
ಅಳುಕಿನ್+ಅಂಗಡಿ+ ಹಳುವಿನ್+ಆಡುಂ
ಬೊಲ +ನಿರೋಧದ +ಶಾಲೆ +ದುಗುಡದ
ಕಳನ್+ಎನಿಸಿತೀ +ನಗರಿ+ಈಗಳು+ ಪಾರ್ಥ +ಕೇಳೆಂದ

ಅಚ್ಚರಿ:
(೧) ಕಳವಳ, ಅಕಟಕ, ವಿಷಾದ, ಖೋಡಿ, ಆಡುಂಬೋಲ – ಗೊಂದಲವನ್ನು ತೋರಿಸುವ ಪದಗಳು

ಪದ್ಯ ೧೫: ವ್ಯಾಸರು ಯಾವ ಮಂತ್ರ ಬೀಜವನ್ನು ಯುಧಿಷ್ಠಿರನಿಗೆ ಬೋಧಿಸಿದರು?

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರುಣದಲಿ ಕವಿಗೊಂಡ ಕಳವಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ಬೀಜ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ (ಅರಣ್ಯ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ವ್ಯಾಸರು ದ್ರೌಪದಿಯನ್ನು ಕರೆಸಿ ಆಕೆಯ ಮನಸ್ಸನ್ನು ಕವಿದಿದ್ದ ಗೊಂದಲವನ್ನು ಹೋಗಲಾಡಿಸಿದರು. ಅವಳ ಕಣ್ಣಿರಿನ ಚಿಲುಮೆಯನ್ನು ಶಾಂತಗೊಳಿಸಿದರು. ಯುಧಿಷ್ಠಿರನನ್ನು ಏಕಾಂತದಲ್ಲಿ ಅವನ ಪರ್ಣಕುಟೀರಕ್ಕೆ ಕರೆದೊಯ್ದು ಶಿವನಮಂತ್ರದ ಬೀಜಾಕ್ಷರವನ್ನು, ಮುದ್ರೆ, ಅಂಗನ್ಯಾಸ, ಕರನ್ಯಾಸಗಳ ಸಹಿತವಾಗಿ ಬೋಧಿಸಿದರು.

ಅರ್ಥ:
ಕರೆ: ಬರೆಮಾಡು; ಆತ್ಮಜೆ: ಮಗಳು; ಕಂಬನಿ: ಕಣ್ಣಿರು; ಒರತೆ:ಚಿಲುಮೆ; ಆರಲು: ಶಾಂತಗೊಳಿಸುವುದು, ಶಮಿಸು; ನುಡಿ: ಮಾತಾಡು; ಕರುಣ: ದಯೆ; ಕವಿ: ಆವರಿಸು; ಕಳವಳ: ಗೊಂದಲ; ವಿಭಾಡಿಸು: ಹೋಗಲಾಡಿಸು; ಧರಣಿಪತಿ: ರಾಜ; ಏಕಾಂತ: ಒಂಟಿಯಾದ; ಭವನ: ಆಲಯ; ಈಶ್ವರ: ಶಿವ; ಬೀಜ: ಕಾರಣ, ಹೇತು; ಮಂತ್ರಾಕ್ಷರ: ಇಷ್ಟ ದೇವತೆಯನ್ನು ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ಅಂಗ: ಅವಯವ; ಮುದ್ರೆ: ಚಿಹ್ನೆ; ಸಹಿತ: ಜೊತೆ;

ಪದವಿಂಗಡಣೆ:
ಕರೆಸಿ +ದ್ರುಪದ್+ಆತ್ಮಜೆಯ +ಕಂಬನಿ
ಒರತೆ+ಆರಲು+ ನುಡಿದನ್+ಆಕೆಯ
ಕರುಣದಲಿ+ ಕವಿಗೊಂಡ +ಕಳವಳವನು +ವಿಭಾಡಿಸಿದ
ಧರಣಿಪತಿಗ್+ಏಕಾಂತ +ಭವನದೊಳ್
ಒರೆದನ್+ಈಶ್ವರ +ಬೀಜ +ಮಂತ್ರಾ
ಕ್ಷರವನ್+ಅಂಗೋಪಾಂಗ +ಮುದ್ರಾ+ಶಕ್ತಿಗಳು +ಸಹಿತ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣದಲಿ ಕವಿಗೊಂಡ ಕಳವಳವನು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು