ಪದ್ಯ ೩೨: ದ್ರೋಣನ ಪರಾಕ್ರಮವು ಎಂತಹುದು?

ಆವುದಂತರ ವನ ಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ (ಭೀಷ್ಮ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸಂಜಯನು ರಾಜನಿಗೆ ವಿವರಿಸುತ್ತಾ, ಕಾಣಾನೆಯ ಮರಿಯೆತ್ತ, ದೇವೇಂದ್ರನ ಐರಾವತವೆಲ್ಲಿ? ದ್ರೋಣನ ಪ್ರತಾಪದ ಮುಂದೆ ದ್ರುಪದನೆಷ್ಟರವನು. ದ್ರುಪದನು ಕಾಣಿಸಲೇ ಇಲ್ಲ. ವಿರಾಟ ಸೃಂಜಯರು ಎಲ್ಲಿಗೆ ಓಡಿದರೆಂದು ನನಗೆ ತಿಳಿಯದೆಂದು ಹೇಳಿದನು.

ಅರ್ಥ:
ಅಂತರ: ವ್ಯತ್ಯಾಸ; ವನ: ಕಾದು; ಕಳಭ: ಆನೆಮರಿ; ಐರಾವತ: ಇಂದ್ರನ ಆನೆ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಡಾವರ: ಭಯಂಕರವಾದ; ಐಸರವ: ಎಷ್ಟರವನ; ಕಾಣು: ತೋರು; ಸರಿ: ಹೋಗು, ಗಮಿಸು; ತೀವು: ಸೇರು, ಕೂಡು; ನೃಪ: ರಾಜ; ಅರಿ: ತಿಳಿ;

ಪದವಿಂಗಡಣೆ:
ಆವುದ್+ಅಂತರ +ವನ +ಕಳಭಕ್
ಐರಾವತಕೆ +ಮಝ +ಭಾಪು +ದ್ರೋಣನ
ಡಾವರಕೆ +ಪಾಂಚಾಲನ್+ಐಸರವನು+ ಮಹಾದೇವ
ನಾವು +ದ್ರುಪದನ +ಕಾಣೆವಾವ್+ಎಡೆಗ್
ಆ+ ವಿರಾಟನು+ ಸರಿದನ್+ಎತ್ತಲು
ತೀವಿದರು +ಸೃಂಜಯರು +ನೃಪ +ನಾವರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆವುದಂತರ ವನ ಕಳಭಕೈರಾವತಕೆ ಮಝ ಭಾಪು

ಪದ್ಯ ೧೬: ಬೇಡನು ಭೀಮನಿಗೆ ಏನೆಂದು ಹೇಳಿದನು?

ಇದೆ ಮಹಾಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭಕ್ರೋಢ ಶಿಖಿಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದರೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿದೆ ಜೀಯ ಚಿತ್ತೈಸು (ಅರಣ್ಯ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅತಿ ದೂರದಲ್ಲಿ ಒಂದು ಮಹಾರಣ್ಯವಿದೆ. ಅಲ್ಲಿ ತೋಳ, ಹುಲಿ, ಸಿಂಹ, ಜಿಂಕೆ, ಆನೆಯ ಮರಿಗಳು, ಕಪಿ, ನವಿಲು, ಕಾಡುಕೋಣ, ಸಾರಂಗಗಳು ಮದಿಸಿ ಮನುಷ್ಯರು ಹೋದರೂ ಬೆದರುವುದಿಲ್ಲ ಹೊಲಗಳ ಮೇಲೆ ಬಿದ್ದು ಸಾಕಿದ ಜಿಂಕೆ, ಆಡು ಮೊದಲಾದವುಗಳಂತೆ ಹಾಳುಮಾದುತ್ತಿವೆ, ಜೀಯಾ ಇದನ್ನು ಮನಸ್ಸಿಗೆ ತಂದುಕೋ ಎಂದು ಅವನು ಭೀಮನಿಗೆ ಹೇಳಿದನು.

ಅರ್ಥ:
ಮಹಾ: ದೊಡ್ಡ; ಕಾಂತಾರ: ಅಡವಿ, ಅರಣ್ಯ; ಅತಿ: ಬಹಳ; ದೂರ: ಅಂತರ; ವೃಕ: ತೋಳ; ಶಾರ್ದೂಲ: ಹುಲಿ; ಕೇಸರಿ: ಸಿಂಹ; ಕದಲಿ: ಜಿಂಕೆ; ಕಳಭ: ಆನೆಮರಿ; ಲೂಲಾಯ: ಕೋಣ; ಸಾರಂಗ: ಜಿಂಕೆ; ಕ್ರೋಡ: ಹಂದಿ; ಮದ: ಸೊಕ್ಕು; ರಹಿ: ದಾರಿ, ಮಾರ್ಗ; ಮಾನಿಸ: ಮನುಷ್ಯ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೆಡೆ: ಗರ್ವಿಸು, ಅಹಂಕರಿಸು; ಹೊಲ: ಸ್ಥಳ, ಪ್ರದೇಶ; ಹೊದರು: ತೊಡಕು, ತೊಂದರೆ ; ಇಕ್ಕು: ಇರಿಸು, ಇಡು; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ, ಸೆಳೆ; ಹಿಂಡು: ಗುಂಪು, ಸಮೂಹ; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇದೆ+ ಮಹಾಕಾಂತಾರವ್+ಅತಿ +ದೂ
ರದಲಿ +ವೃಕ +ಶಾರ್ದೂಲ +ಕೇಸರಿ
ಕದಲಿ+ ಕಳಭ+ಕ್ರೋಢ+ ಶಿಖಿ+ಲೂಲಾಯ +ಸಾರಂಗ
ಮದದ +ರಹಿಯಲಿ +ಮಾನಿಸರು +ಸೋಂ
ಕಿದರೆ +ಸೆಡೆಯವು +ಹೊಲನ +ಹೊದರ್
ಇಕ್ಕಿದವು +ದೀಹದ+ ಹಿಂಡಿನಂತಿದೆ+ ಜೀಯ +ಚಿತ್ತೈಸು

ಅಚ್ಚರಿ:
(೧) ಪ್ರಾಣಿಗಳನ್ನು ಹೆಸರಿಸುವ ಪರಿ – ವೃಕ, ಶಾರ್ದೂಲ, ಕೇಸರಿ, ಕದಲಿ, ಕಳಭ, ಕ್ರೋಢ ಶಿಖಿ, ಲೂಲಾಯ, ಸಾರಂಗ