ಪದ್ಯ ೪೪: ಅರ್ಜುನನು ದ್ರೋಣರಿಗೆ ಏನುತ್ತರವನ್ನು ನೀಡಿದನು?

ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಆಚಾರ್ಯರೇ, ನಾನು ಮಾತನಾಡಿದರೆ ನಿಮ್ಮ ವಿರೋಧವಾಗಿ ಆಡಿದಂತಾಗುತ್ತದೆ. ವಿಷದ ಕಮಲಕ್ಕೆ ಗರುಡನೇ ದುಂಬಿಯಾದರೆ ಏನಾಗುತ್ತದೆ. ನನ್ನ ಬಾಣಗಳಿಗೆ ದಾರಿಯನ್ನು ಕೊಡಿ, ನೀವಾಡಿದ ಮಾತಿಗೆ ಹೆದರುತ್ತೇನೆ, ಸೈಂಧವನನ್ನು ತೋರಿಸಿರಿ, ಕೊಲ್ಲುತ್ತೇನೆ, ಹೀಗೆಂದು ಅರ್ಜುನನು ನಗುತ್ತಾ ದ್ರೋಣರಿಗೆ ಉತ್ತರಿಸಿದನು.

ಅರ್ಥ:
ಇದಿರು: ಎದುರು; ಉತ್ತರ: ಜವಾಬು; ಗರಳ: ವಿಷ; ಅಂಜುಜ: ಕಮಲ; ಪರಿಮಳ: ಸುವಾಸನೆ; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ದುಂಬಿ: ಭ್ರಮರ; ಸೇರು: ಜೊತೆಗೂಡು; ಸಾಕು: ನಿಲ್ಲಿಸು; ಅಂಬು: ಬಾಣ; ಕುಡಿ: ಪಾನಮಾಡು; ನುಡಿ: ಮಾತು; ಅಂಜು: ಹೆದರು; ತೋರಿಸು: ಕಾಣಿಸು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಂಬಡ್+ಇದಿರ್+ಉತ್ತರವಲೇ +ಗರಳ
ಅಂಬುಜದ +ಪರಿಮಳಕೆ +ಗರುಡನು
ತುಂಬಿಯಾದರೆ +ಸೇರುವುದಲೇ +ಸಾಕ್+ಅದಂತಿರಲಿ
ಅಂಬುಗಳಿಗ್+ಅಡೆದೆರಹ+ ಕುಡಿ +ನೀ
ವೆಂಬ +ನುಡಿಗ್+ಅಂಜುವೆನು +ಸೈಂಧವ
ನೆಂಬ್+ಅವನ +ತೋರಿಸಿರ್+ಎಂದನು +ನಗುತ +ಕಲಿ+ಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರಳಾಂಬುಜದ ಪರಿಮಳಕೆ ಗರುಡನು ತುಂಬಿಯಾದರೆ ಸೇರುವುದಲೇ

ಪದ್ಯ ೧೩: ಕೌರವಸೇನೆ ಏಕೆ ನಗುತ್ತಿತ್ತು?

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ (ವಿರಾಟ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಉತ್ತರನು ರಥದಿಂದ ಧುಮುಕಿ ಕೆದರುಗೂದಲನ್ನು ಬಿಟ್ಟುಕೊಂಡು, ಸತ್ತೆನೋ ಕೆಟ್ಟೆನೋ ಎಂದು ಓಡುತ್ತಿರುವುದನ್ನು ಅರ್ಜುನನು ನೋಡಿದನು. ಎಲಾ ಈ ಪಾಪಿಯು ಓಡುತ್ತಿದ್ದಾನೆ, ಹಿಡಿಯಬೇಕು ಎಂದುಕೊಂಡು ರಥದ ಗತಿಯನ್ನು ತಡೆದು ಹಿಂದಕ್ಕೆ ರಥವನ್ನು ಬಿಡಲು ಭೂಮಿ ಕುಗ್ಗಿ ಆದಿಶೇಷನು ಬೆದರಿದನು. ಉತ್ತಾರನ ಓಟವನ್ನು ನೋಡಿ ಕೌರವರ ಸೇನೆಯು ನಗೆಗಡಲಿನಲ್ಲಿ ಮುಳುಗಿತು.

ಅರ್ಥ:
ನೋಡು: ವೀಕ್ಷಿಸು; ಕಲಿ: ಶೂರ; ಪಾರ್ಥ: ಅರ್ಜುನ; ಕೇಡಾಡಿ: ಕೇಡು ಮಾಡುವ ಸ್ವಭಾವದವ; ಕೆದರು: ಹರಡಿದ; ಕೇಶ: ಕೂದಲು; ಕೆಟ್ಟೋಡು: ಧಾವಿಸು, ಕೆಟ್ಟೆನೋ ಎಂದು ತಿಳಿದು ಓಡು; ಪಾಪಿ: ದುಷ್ಟ; ಹಾಯಿ: ಮೇಲೆಬೀಳು; ಹಿಡಿ: ಬಂಧಿಸು; ಕೂಡೆ: ಒಮ್ಮೆಲೆ; ಸೂಟಿ: ವೇಗ; ಅಟ್ಟು: ಬೆನ್ನುಹತ್ತಿ ಹೋಗು; ಇಳೆ: ಭೂಮಿ; ಅಲ್ಲಾಡು: ನಡುಗು; ಅಹಿಪತಿ: ಆದಿಶೇಶ; ಹೆದರು: ಬೆದರಿಕೆ; ನೋಡು: ವೀಕ್ಷಿಸು; ಸೇನೆ: ಸೈನ್ಯ; ಕೆಡೆ: ಬೀಳು, ಕುಸಿ; ನಗೆ: ಹರ್ಷ; ಕಡಲು: ಸಾಗರ;

ಪದವಿಂಗಡಣೆ:
ನೋಡಿದನು +ಕಲಿ+ಪಾರ್ಥನ್+ಈ+ ಕೇ
ಡಾಡಿ +ಕೆದರಿದ +ಕೇಶದಲಿ +ಕೆಟ್ಟ್
ಓಡುತಿರಲ್+ಎಲೆ+ ಪಾಪಿ +ಹಾಯ್ದನು +ಹಿಡಿಯಬೇಕೆನುತ
ಕೂಡೆ +ಸೂಟಿಯೊಳ್+ಅಟ್ಟಲ್+ಇಳೆ
ಅಲ್ಲಾಡಲ್+ಅಹಿಪತಿ +ಹೆದರಲ್+ಇತ್ತಲು
ನೋಡಿ +ಕೌರವಸೇನೆ +ಕೆಡೆದುದು +ನಗೆಯ +ಕಡಲೊಳಗೆ

ಅಚ್ಚರಿ:
(೧) ಜೋರಾಗಿ ನಕ್ಕರು ಎಂದು ಹೇಳಲು – ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ
(೨) ವೇಗವನ್ನು ವಿವರಿಸುವ ಪರಿ – ಸೂಟಿಯೊಳಟ್ಟಲಿಳೆಯಲ್ಲಾಡಲಹಿಪತಿ ಹೆದರಲು
(೩) ಉತ್ತರನ ಸ್ಥಿತಿ (ಕೆ ಕಾರದ ಸಾಲು ಪದ) – ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲೆ

ಪದ್ಯ ೩೯: ಅರ್ಜುನ ಮತ್ತು ಸಹದೇವರ ಪ್ರತಿಜ್ಞೆ ಯಾವುದು?

ಬರೆಸಿರೈ ಭಾಷೆಯನು ದೇವಾ
ಸುರರ ಸಾಕ್ಷಿಯೊಳಾಯ್ತು ಕರ್ಣನ
ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ
ಸುರನರೋರಗರರಿದಿರೆಂದ
ಬ್ಬರಿಸಿದನು ಕಲಿಪಾರ್ಥ ಶಕುನಿಯ
ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ (ಸಭಾ ಪರ್ವ, ೧೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನ ಪ್ರತಿಜ್ಞೆಯ ನಂತರ ಅರ್ಜುನನು, ಎಲೇ ದೇವತೆಗಳೇ ರಾಕ್ಷಸರೇ ನನ್ನ ಪ್ರತಿಜ್ಞೆಗೆ ನೀವೆ ಸಾಕ್ಷಿ, ಕರ್ಣನ ಕೊರಳಿಗೆ ನನ್ನ ಬಾಣದ ಉಂಗುರವುಡಿಕೆಯನ್ನು ತೊಡಿಸುತ್ತೇನೆ, ಇದನ್ನು ದೇವತೆಗಳು, ಮಾನವರು, ರಾಕ್ಷಸರು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಗರ್ಜಿಸಿದನು, ಶಕುನಿಯ ತಲೆಗೆ ನಾನು ಸಂಚಕಾರ ಕೊಟ್ಟಿದ್ದೇನೆ ಎಂದು ಸಹದೇವನು ಪ್ರತಿಜ್ಞೆ ಮಾಡಿದನು.

ಅರ್ಥ:
ಬರೆ: ಲೇಖಿಸು, ಅಕ್ಷರದಲ್ಲಿರಿಸು; ಭಾಷೆ: ನುಡಿ, ಪ್ರಮಾಣ; ದೇವ: ಸುರ, ದೇವತೆ; ಅಸುರ: ರಾಕ್ಷಸ; ಸಾಕ್ಷಿ: ಪುರಾವೆ, ರುಜುವಾತು; ಕೊರಳು: ಕಂಠ; ಬಾಣ: ಅಂಬು; ಉಂಗುರ: ಬೆರಳಿಗೆ ಹಾಕುವ ಆಭರನ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಇದಿರು: ಎದುರ್; ಅಬ್ಬರಿಸು: ಗರ್ಜಿಸು; ಕಲಿ: ಶೂರ; ಶಿರ: ತಲೆ; ಸಂಚಕಾರ: ಮುಂಗಡ, ಕೇಡು;

ಪದವಿಂಗಡಣೆ:
ಬರೆಸಿರೈ +ಭಾಷೆಯನು +ದೇವ
ಅಸುರರ+ ಸಾಕ್ಷಿಯೊಳ್+ಆಯ್ತು +ಕರ್ಣನ
ಕೊರಳಿಗ್+ಎನ್ನಯ +ಬಾಣಕ್ + ಉಂಗುರವ್+ಉಡಿಕೆ+ಇಂದಿನಲಿ
ಸುರ+ನರ+ಉರಗರ್+ಇದಿರೆಂದ್
ಅಬ್ಬರಿಸಿದನು +ಕಲಿಪಾರ್ಥ +ಶಕುನಿಯ
ಶಿರಕೆ+ ಕೊಟ್ಟೆನು +ಸಂಚಕಾರವನೆಂದ+ ಸಹದೇವ

ಅಚ್ಚರಿ:
(೧) ದೇವ, ಸುರ – ಸಮನಾರ್ಥಕ ಪದ
(೨) ಕರ್ಣನನ್ನು ಕೊಲ್ಲುತ್ತೇನೆಂದು ಹೇಳುವ ಪರಿ – ಕರ್ಣನ ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ