ಪದ್ಯ ೩೦: ಯಾರು ಯುದ್ಧಕ್ಕೆ ಹೋಗಲು ಮುಂದೆಬಂದರು?

ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ (ಶಲ್ಯ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಈ ಯುದ್ಧ ನನ್ನದು. ದಲಪತಿಯನ್ನು ನಾನು ಇದಿರಿಸುತ್ತೇನೆ ಎಂದು ಭೀಮನು ಹೇಳಿದನು. ನನ್ನನ್ನು ಮಾವನ ಮೇಲೆ ಯುದ್ಧಕ್ಕೆ ಕಳುಹಿಸಿ ನೋಡು ಎಂದು ಅರ್ಜುನನು ಹೇಳಿದನು. ನಾನು ಪ್ರೀತಿಯಿಂದ ಕೇಳಿಕೊಳ್ಳುತ್ತೇನೆ, ಮಾವನಲ್ಲಿ ನನಗೆ ಸಲುಗೆಯಿದೆ ಎಂದು ನಕುಲನು ಹೇಳಿದನು. ನನ್ನ ಪ್ರೀತಿಯ ಬೇಡಿಕೆ ನನ್ನನ್ನು ಯುದ್ಧಕ್ಕೆ ಕಳಿಸಿದರೆ ನೀವು ನನ್ನನ್ನು ಬದುಕಿಸಿದವರು ಎಂದು ಸಹದೇವನು ಹೇಳಿದನು.

ಅರ್ಥ:
ಕಲಹ: ಜಗಳ; ದಳಪತಿ: ಸೇನಾಧಿಪತಿ; ಕಳುಹು: ತೆರಳು; ಮಾವ: ಹೆಂಡತಿಯ ತಂದೆ; ಸಲುಗೆ: ಸದರ, ಅತಿ ಪರಿಚಯ; ಒಲವು: ಪ್ರೀತಿ; ಎರಗು: ಬಾಗು, ನಮಸ್ಕರಿಸು; ಹರಿ: ಕೃಷ್ಣ; ಅರ್ತಿ: ಪ್ರೀತಿ ;

ಪದವಿಂಗಡಣೆ:
ಕಲಹವ್+ಎನ್ನದು+ ದಳಪತಿಗೆ+ ತಾ
ನಿಲುವೆನ್+ಎಂದನು +ಭೀಮನ್+ಎನ್ನನು
ಕಳುಹಿ +ನೋಡೆಂದನು +ಧನಂಜಯನ್+ಎಮ್ಮ +ಮಾವನಲಿ
ಸಲುಗೆ+ಎನಗ್+ಎಂದನು +ನಕುಲನ್
ಎನ್ನೊಲವಿನ್+ಅರ್ತಿಯಿದೆನ್ನ+ ಕಳುಹಿದಡ್
ಉಳುಹಿದವರ್+ಎಂದೆರಗಿದನು+ ಸಹದೇವನಾ +ಹರಿಗೆ

ಅಚ್ಚರಿ:
(೧) ಎಂದು, ಎಂದನು ಪದದ ಬಳಕೆ

ಪದ್ಯ ೧೧: ರಥಿಕರು ನಿದ್ರೆಯಲ್ಲಿ ಏನನ್ನು ಕನವರಿಸುತ್ತಿದ್ದರು?

ಕಲಹವೆನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ (ದ್ರೋಣ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳ ರಥಿಕರು ಮಲಗಿ ಕನಸಿನಲ್ಲಿ ಯುದ್ಧಮಾಡುತ್ತಾ, ಬೇಗ, ಬೇಗ ಭಲೇ ಸಾರಥಿ ಜಾಗು ಎನ್ನುತ್ತಿದ್ದರು. ಓಡದಿರಿ, ವಿಅರಿಯು ಮಾಂಸವನ್ನು ತಿನ್ನು ರಕ್ತವನ್ನು ಸುರಿದುಕೋ ಎನ್ನುತ್ತಾ ಜೋರಾಗಿ ಕನವರಿಸುತ್ತಿದ್ದರು.

ಅರ್ಥ:
ಕಲಹ: ಯುದ್ಧ; ಕನಸು: ಸ್ವಪ್ನ; ಕಂಡು: ನೋಡು; ಅವ್ವಳಿಸು: ಆರ್ಭಟಿಸು; ಹಳು:ಹಗುರವಾದುದು; ಪೂತು: ಭಲೆ; ಸಾರಥಿ: ಸೂತ; ಜಾಗು: ಎಚ್ಚರ; ತಡಮಾಡು; ಮಹಾರಥ: ಪರಾಕ್ರಮಿ; ತೊಲಗು: ದೂರ ಸರಿ; ಅಹಿ: ವೈರಿ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಮೇಲಿನಿಂದ ಬೀಳು; ಕಳವಳ: ಗೊಂದಲ; ವೀರ: ಶೂರ; ಒಡ್ಡು: ರಾಶಿ, ಸಮೂಹ; ರಭಸ: ವೇಗ;

ಪದವಿಂಗಡಣೆ:
ಕಲಹವೆನು +ಕನಸಿನಲಿ +ಕಂಡ್
ಅವ್ವಳಿಸಿ +ಹಳುಹಳು +ಪೂತು +ಸಾರಥಿ
ಭಲರೆ+ ಸಾರಥಿ+ ಜಾಗುರೆನುತಿರ್ದುದು +ಮಹಾರಥರು
ತೊಲಗದಿರಿ+ ತಿನ್ನಡಗನ್+ಅಹಿತನ
ತಿಳಿ+ರಕುತವನು +ಸುರಿಯೆನುತ +ಕಳ
ವಳಿಸುತಿರ್ದರು +ವೀರರ್+ಎರಡ್+ಒಡ್ಡಿನಲಿ +ರಭಸದಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಹವೆನು ಕನಸಿನಲಿ ಕಂಡವ್ವಳಿಸಿ
(೨) ತ ಕಾರದ ತ್ರಿವಳಿ ಪದ – ತೊಲಗದಿರಿ ತಿನ್ನಡಗನಹಿತನ ತಿಳಿರಕುತವನು

ಪದ್ಯ ೧೦: ಮಾವುತರು ಎಲ್ಲಿ ನಿದ್ರಿಸಿದರು?

ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು (ದ್ರೋಣ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪ್ರೀತಿಯ ಪತ್ನಿಯೊಡನೆ ಮನ್ಮಥ ಕಲಹದಲ್ಲಿ ಬೆಂಡಾಗಿರುವ ಪತಿಯು ಕಳಶ ಕುಚಗಳ ಮಧ್ಯದಲ್ಲಿ ತಲೆಯಿಟ್ಟು ಮಲಗುವಂತೆ, ಯುದ್ಧ ಶ್ರಮದಿಂದ ಬೆಂಡಾದ ಮಾವುತರು ಆನೆಗಳ ಕುಂಭ ಸ್ಥಳಗಳ ಮೇಲೆ ಮಲಗೆ ಕಣ್ಣು ಮುಚ್ಚಿ ನಿದ್ರಿಸಿದರು.

ಅರ್ಥ:
ಒಲಿದ: ಪ್ರೀತಿಯ; ಕಾಂತೆ: ಪ್ರಿಯತಮೆ; ಕೂಡು: ಜೊತೆ; ಮನುಮಥ: ಮನ್ಮಥ, ಕಾಮದೇವ; ಕಲಹ: ಜಗಳ; ಬೆಂಡು: ತಿರುಳಿಲ್ಲದುದು; ಕಾಂತ: ಪ್ರಿಯತಮ; ಕಳಶ: ಕೊಡ; ಕುಚ: ಮೊಲೆ, ಸ್ತನ; ಮಧ್ಯ: ನಡುವೆ; ಮಲಗು: ನಿದ್ರಿಸು; ರಜನಿ: ರಾತ್ರಿ; ಸಮರ: ಯುದ್ಧ; ಶ್ರಮ: ದಣಿವು; ವೆಗ್ಗಳ: ಶ್ರೇಷ್ಠ; ಗಜ: ಆನೆ; ಗಜರೋಹಕ: ಮಾವುತ; ಕುಂಭ: ಕೊಡ, ಕಲಶ; ಸ್ಥಳ: ಜಾಗ; ಒರಗು: ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ನಿದ್ರೆ: ಶಯನ; ಈಕ್ಷಣ: ಕಣ್ಣು, ನೋಟ; ಮುದ್ರಿತ: ಗುರುತು;

ಪದವಿಂಗಡಣೆ:
ಒಲಿದ +ಕಾಂತೆಯ +ಕೂಡೆ +ಮನುಮಥ
ಕಲಹದಲಿ +ಬೆಂಡಾದ +ಕಾಂತನು
ಕಳಶ+ಕುಚ +ಮಧ್ಯದಲಿ+ ಮಲಗುವವೋಲು +ರಜನಿಯಲಿ
ಒಲಿದ +ಸಮರ+ಶ್ರಮದಲ್+ಅತಿ+ವೆ
ಗ್ಗಳ+ ಗಜರೋಹಕರು+ ಕುಂಭ
ಸ್ಥಳದ +ಮೇಲೊರಗಿದರು +ನಿದ್ರಾ +ಮುದ್ರಿತ+ಈಕ್ಷಣರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಲಿದ ಕಾಂತೆಯ ಕೂಡೆ ಮನುಮಥ ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು

ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೨೯: ಭೀಮನು ಯಾವ ಉಡುಗೊರೆಯನ್ನು ಪಡೆಯಲು ಮುಂದಾದನು?

ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ವಿಶೋಕನೊಂದಿಗೆ ನುಡಿಯುತ್ತಾ, ಎಲೈ ವಿಶೋಕ, ಎಳೆಯ ಬಾಳೆಯ ಸುಳಿಯು ಸೀಗೆಯ ಮೆಳೆಯೊಡನೆ ಸರಸವಾಡಲು ಹೋದಂತೆ, ಈ ಕುಮಾರರು ನನ್ನೊಡನೆ ಯುದ್ಧಕ್ಕೆ ಬಂದರು. ಯುದ್ಧಕ್ಕೆ ಬಂದ ಇವರ ತಲೆಗಳು ನನಗೆ ಬಳುವಳಿಯಾಗಿ ಬಂದಿವೆ, ಈ ಮುಡಿಪನ್ನು ಇನ್ನು ಅರ್ಧಗಳಿಗೆಯಲ್ಲಿ ನಾನು ತೆಗೆದುಕೊಳ್ಳುತ್ತೇನೆ ಎಂದು ನಗುತ್ತಾ ಹೇಳಿದನು.

ಅರ್ಥ:
ಎಳೆ: ಚಿಕ್ಕ; ಬಾಳೆ: ಕದಳಿ; ಸುಳಿ: ಆವರಿಸು, ಮುತ್ತು; ಸೀಗೆ: ಒಂದು ಜಾತಿಯ ಮೆಳೆ ಮತ್ತು ಅದರ ಕಾಯಿ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು; ಸರಸ: ಚೆಲ್ಲಾಟ, ವಿನೋದ; ಕುಮಾರ: ಪುತ್ರ; ಬಲು: ಶಕ್ತಿ; ನೋಡು: ವೀಕ್ಷಿಸು; ತೊಡಗು: ಅಡ್ಡಿ, ಅಡಚಣೆ; ರಣ: ಯುದ್ಧ; ಕಲಹ: ಯುದ್ಧ; ತೋರು: ಗೋಚರ; ಇವದಿರು: ಇಷ್ಟುಜನ; ತಲೆ: ಶಿರ; ವಾರುಕ: ಉಡುಗೊರೆ, ಪಾರಿತೋಷಕ; ಗಳಿಗೆ: ಸಮಯ; ಕೊಂಬೆ: ಕೊಲು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಳೆಯ +ಬಾಳೆಯ +ಸುಳಿಗೆ +ಸೀಗೆಯ
ಮೆಳೆಯೊಡನೆ +ಸರಸವೆ +ಕುಮಾರರ
ಬಲುಹ +ನೋಡು +ವಿಶೋಕ +ತೊಡಗಿದರ್+ಎಮ್ಮೊಡನೆ +ರಣವ
ಕಲಹದಲಿ +ಮೈದೋರಿದ್+ಇವದಿರ
ತಲೆಗಳಿವು +ವಾರಕದವ್+ಇವನ್+ಅರೆ
ಗಳಿಗೆಯಲಿ +ತಾ +ಕೊಂಬೆನ್+ಎಂದನು +ನಗುತ +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವೆ

ಪದ್ಯ ೧೬: ಕರ್ಣನು ಅಶ್ವತ್ಥಾಮನಿಗೆ ಹೇಗೆ ಉತ್ತರಿಸಿದನು?

ಎಲವೊ ಗರುಡಿಯ ಕಟ್ಟಿ ಶ್ರಮವನು
ಕಲಿಸಿ ಬದುಕುವ ಬಳಿಕ ಶಿಷ್ಯರ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡಫಡ ಪಾರ್ಥಮೈದೋರೆನುತ ಮಾರಾಂತ (ವಿರಾಟ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗರುಡಿಯನ್ನು ಕಟ್ಟಿ ವಿದ್ಯೆಯನ್ನು ಹೇಳಿಕೊಟ್ಟು ಬಳಿಕ ಶಿಷ್ಯರ ಬಲದಿಂದ ಜೀವನ ಸಾಗಿಸುವ ದೈನ್ಯ ವೃತ್ತಿಯ ನಿಮ್ಮೊಡನೆ ಜಗಳವೇಕೆ? ನನ್ನ ಪರಾಕ್ರಮವನ್ನು ಈಗ ಕಾಣಬಹುದು ಎಂದು ಕರ್ನನು ಅಶ್ವತ್ಥಾಮನಿಗೆ ಹೇಳಿ ಎಲವೋ ಅರ್ಜುನ ಬಾ ಎಂದು ಹೇಳುತ್ತಾ ಆತನ ಎದುರಾಗಿ ಹೋದನು.

ಅರ್ಥ:
ಗರುಡಿ: ವ್ಯಾಯಾಮ ಶಾಲೆ; ಕಟ್ಟು: ನಿರ್ಮಿಸು; ಶ್ರಮ: ಶಸ್ತ್ರಾಭ್ಯಾಸ; ಕಲಿಸು: ಹೇಳಿಕೊಡು; ಬದುಕು: ಜೀವಿಸು; ಬಳಿಕ: ನಂತರ; ಶಿಷ್ಯ: ವಿದ್ಯಾರ್ಥಿ; ಬಲ: ಶಕ್ತಿ; ಕೃಪಣ: ದೈನ್ಯ; ವೃತ್ತಿ: ಕೆಲಸ; ಕೂಡ: ಜೊತೆ; ಕಲಹ: ಜಗಳ; ಕಾಣು: ತೋರು; ಅಲಘು: ಭಾರವಾದ; ಭುಜಬಲ: ಪರಾಕ್ರಮ; ಭಾನುಸುತ: ರವಿಯ ಮಗ (ಕರ್ಣ); ಕಡು: ಬಹಳ; ಮುಳಿ: ಸಿಟ್ಟು, ಕೋಪ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮೈದೋರು: ಕಾಣಿಸಿಕೊ; ಮಾರಾಂತ: ಎದುರಾಗು, ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಎಲವೊ +ಗರುಡಿಯ +ಕಟ್ಟಿ +ಶ್ರಮವನು
ಕಲಿಸಿ +ಬದುಕುವ +ಬಳಿಕ +ಶಿಷ್ಯರ
ಬಲದಿ +ಬದುಕುವ +ಕೃಪಣ +ವೃತ್ತಿಯ +ನಿಮ್ಮ +ಕೂಡ್+ಎಮಗೆ
ಕಲಹವೇತಕೆ+ ಕಾಣಬಹುದೆಂದ್
ಅಲಘು +ಭುಜಬಲ +ಭಾನುಸುತ+ ಕಡು
ಮುಳಿದು+ ಫಡಫಡ +ಪಾರ್ಥ+ಮೈದೋರ್+ಎನುತ +ಮಾರಾಂತ

ಅಚ್ಚರಿ:
(೧) ಕರ್ಣನ ಗುಣಗಾನ – ಅಲಘು ಭುಜಬಲ ಭಾನುಸುತ

ಪದ್ಯ ೧೧೦: ದ್ರೌಪದಿಯು ಸುದೇಷ್ಣೆಗೆ ಯಾವ ಅಭಯವನ್ನು ನೀಡಿದಳು?

ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದ್ರೌಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು (ವಿರಾಟ ಪರ್ವ, ೩ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹೆದರ ಬೇಡಿರಿ, ಹದಿಮೂರು ದಿನಗಳು ಕಳೆದ ಬಳಿಕ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ. ದುಷ್ಟರು ನಾಶವಾದರು, ಇನ್ನು ಭಯ ಪಡಬೇಕಾದುದಿಲ್ಲ ನಾವು ಕಲಹ ಮಾಡುವವರಲ್ಲ ಎಂದು ಹೇಳಿ ತನ್ನ ಮನೆಗೆ ಹೋದಳು, ಕ್ಷಣ ಕ್ಷಣಕ್ಕೂ ಕೀಚಕನ ವೃತ್ತಾಂತವು ಎಲ್ಲೆಡೆ ಹರಡಿತು.

ಅರ್ಥ:
ಅಳುಕು: ಹೆದರು; ದಿವಸ: ದಿನ; ಕಳೆದ: ತೀರಿದ; ಬಳಿಕ: ನಂತರ; ಲೇಸು: ಒಳಿತು; ಅಳಿ: ತೀರು, ನಾಶ; ದುಷ್ಟ: ದುರುಳ; ಭಯ: ಅಂಜಿಕೆ; ಬೇಡ:ಕೂಡದು; ಕಲಹ: ಜಗಳ; ನಿಳಯ: ಮನೆ; ಸಾರು: ಸಮೀಪಿಸು; ಗಳಿಗೆ: ಸಮಯ, ಕ್ಷಣ; ವೃತ್ತಾಂತ: ವಿಷಯ; ಪಸರಿಸು: ಹರಡು;

ಪದವಿಂಗಡಣೆ:
ಅಳುಕದಿರಿ +ಹದಿಮೂರು +ದಿವಸವ
ಕಳೆದ+ ಬಳಿಕ್+ಎಮಗೆಲ್ಲ+ ಲೇಸಹುದ್
ಅಳಿದು +ಹೋದರು +ದುಷ್ಟರಾದವರ್+ಇನ್ನು +ಭಯ +ಬೇಡ
ಕಲಹದವರ್+ಆವಲ್ಲೆನುತ +ನಿಜ
ನಿಳಯವನು +ಸಾರಿದಳು +ದ್ರೌಪದಿ
ಗಳಿಗೆ+ ಗಳಿಗೆಗೆ+ ಕೀಚಕನ +ವೃತ್ತಾಂತ +ಪಸರಿಸಿತು

ಅಚ್ಚರಿ:
(೧) ವಿಷಯ್ ಬೇಗೆ ಹಬ್ಬಿತು ಎಂದು ಹೇಳಲು – ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು

ಪದ್ಯ ೩೫: ಮಂತ್ರಿಗಳ ಸಾಮರ್ಥ್ಯವೇನು?

ಕಲಹವಿಲ್ಲದೆ ನೂಲಿನೆಳೆಯಲಿ
ತಲೆಯನರಿವ ವಿರೋಧಿ ರಾಯರ
ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ
ಒಲಿದರೊಳಲಂಚದಲಿ ಛಿದ್ರಿಸಿ
ಕೊಲುವ ಮುನಿದೊಡೆ ಮಂತ್ರಶಕ್ತಿಯೊ
ಳಳುಕಿಸುವ ಮಂತ್ರಿಗಳು ಮೆರೆದರು ವಾಮಭಾಗದಲಿ (ಉದ್ಯೋಗ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜಗಳವಾಡದೆಯೇ ದಾರದೆಳೆಯಲ್ಲಿ ತಲೆಯನ್ನು ಕತ್ತರಿಸುವ, ಶತ್ರು ರಾಜರನ್ನು ನಾಶಮಾಡುವ, ಎಲ್ಲಾ ರಾಜರನ್ನು ಶಾಂತತೆಯಲ್ಲಿ ನಿಲಿಸುವ, ಚಾಣಾಕ್ಷತನದಿಂದ ಒಳಲಂಚವನ್ನು ನೀಡಿ ಶತ್ರುರಾಜರನ್ನು ಛಿದ್ರಿಸಿ ಕೊಲುವ, ಕೋಪಗೊಂಡರೆ ಮಂತಶಕ್ತಿಯ ಸಾಮರ್ಥ್ಯದಿಂದ ಭಯಪಡಿಸಿ ಕೊಲುವ ಮಂತ್ರಿಗಳು ಆಸ್ಥಾನದ ಎಡಭಾಗದಲ್ಲಿ ಮೆರೆದರು.

ಅರ್ಥ:
ಕಲಹ: ಜಗಳ; ನೂಲು: ದಾರ, ಎಳೆ, ಸೂತ್ರ; ಎಳೆ:ಚಿಕ್ಕ; ತಲೆ: ಶಿರ; ಅರಿ:ಕತ್ತರಿಸು, ತಿಳಿ; ವಿರೋಧ: ವೈರತ್ವ, ಹಗೆತನ; ರಾಯ: ರಾಜ; ಅಳುಕಿಸು: ಅಳಿಸು, ಇಲ್ಲವಾಗಿಸು; ಸಾಮ: ಶಾಂತಗೊಳಿಸುವಿಕೆ; ನಿಲಿಸು: ತಡೆ; ನಿಖಿಳ: ಎಲ್ಲಾ; ಭೂಭುಜ: ರಾಜ; ಒಲಿ:ಒಪ್ಪು, ಸಮ್ಮತಿಸು; ಲಂಚ: ಕಾರ್ಯಸಾಧನೆಗಾಗಿ ಅಕ್ರಮವಾಗಿ ಪಡೆಯುವ ಯಾ ಕೊಡುವ ಹಣ; ಛಿದ್ರ: ಬಿರುಕು; ಕೊಲು: ಕೊಲ್ಲು, ಸಾಯಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಮಂತ್ರ: ಇಷ್ಟ ದೇವತೆಯನ್ನು ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ಶಕ್ತಿ: ಬಲ; ಮಂತ್ರಿ: ಸಚಿವ; ಮೆರೆ: ಶೋಭಿಸು; ವಾಮ: ಎಡ;

ಪದವಿಂಗಡಣೆ:
ಕಲಹವಿಲ್ಲದೆ +ನೂಲಿನ್+ಎಳೆಯಲಿ
ತಲೆಯನ್+ಅರಿವ +ವಿರೋಧಿ +ರಾಯರನ್
ಅಳುಕಿಸುವ +ಸಾಮದಲಿ +ನಿಲಿಸುವ +ನಿಖಿಳ+ ಭೂಭುಜರ
ಒಲಿದರ್+ಒಳ+ಲಂಚದಲಿ+ ಛಿದ್ರಿಸಿ
ಕೊಲುವ +ಮುನಿದೊಡೆ +ಮಂತ್ರ+ಶಕ್ತಿಯೊಳ್
ಅಳುಕಿಸುವ +ಮಂತ್ರಿಗಳು+ ಮೆರೆದರು +ವಾಮಭಾಗದಲಿ

ಅಚ್ಚರಿ:
(೧) ಮಂತ್ರಿಯರ ಸಾಮರ್ಥ್ಯವನ್ನು ತೋರುವ ಪದ್ಯ
(೨) ಅಳುಕಿಸು – ೩, ೬ ಸಾಲಿನ ಮೊದಲ ಪದ
(೩) ರಾಯ, ಭೂಭುಜ – ಸಮನಾರ್ಥಕ ಪದ

ಪದ್ಯ ೯: ಕೃಷ್ಣನು ಪಾಂಡವರನ್ನು ಯಾವ ಕಾರ್ಯಕ್ಕೆ ನೇಮಿಸಿದನು?

ಕಳುಹುತೈತಂದಖಿಳ ಪಾಂಡವ
ಬಲಕೆ ನೇಮವ ಕೊಟ್ಟು ಧರ್ಮಜ
ಫಲುಗುಣರ ನಿಲಿಸಿದನು ಸಹದೇವನನು ನಕುಲನನು
ಕಳುಹಿಸಿದನು ನೀ ಮರಳೆನಲು ಬೆಂ
ಬಳಿಯಲನಿಲಜನೈದಿ ಹಗೆಯಲಿ
ಕಲಹವನು ಮಸೆಯೆಂದು ನಂಗಬುಗೆಗೊಂಡು ಮರಳಿದನು (ಉದ್ಯೋಗ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಕೃಷ್ಣನು ಪಾಂಡವರ ಸೈನ್ಯಕ್ಕೆ ನೇಮವನ್ನು ನೀಡಿ, ಧರ್ಮಜ ಮತ್ತು ಅರ್ಜುನನ್ನು ಸೈನ್ಯದ ಜೊತೆ ನಿಲಿಸಿದನು. ನಕುಲ ಸಹದೇವರನ್ನು ಕಳುಹಿಸಿದನು. ಬೆಂಗಾವಲಿಗೆ ಭೀಮನನ್ನು ನಿಲಿಸಿ ವೈರತ್ವದಲಿ ಕಲಹವನ್ನು ಮೊನಚುಗೊಳಿಸೆಂದು ನಂಬಿ ಮರಳಿದನು.

ಅರ್ಥ:
ಕಳುಹುತ: ಬೀಳ್ಕೊಡು; ಅಖಿಳ: ಎಲ್ಲಾ; ಬಲ: ಸೈನ್ಯ; ನೇಮ:ವ್ರತ; ಬೆಂಬಳಿ: ಬೆನ್ನ ಹಿಂದೆ ರಕ್ಷಣೆ; ಅನಿಲ: ವಾಯು; ಐದು: ಹೋಗಿಸೇರು; ಹಗೆ: ವೈರತ್ವ; ಕಲಹ: ಜಗಳ; ಮಸೆ:ಹರಿತವಾದುದು, ಚೂಪಾದುದು;

ಪದವಿಂಗಡಣೆ:
ಕಳುಹುತ್+ಐತಂದ್+ಅಖಿಳ+ ಪಾಂಡವ
ಬಲಕೆ +ನೇಮವ +ಕೊಟ್ಟು +ಧರ್ಮಜ
ಫಲುಗುಣರ +ನಿಲಿಸಿದನು +ಸಹದೇವನನು+ ನಕುಲನನು
ಕಳುಹಿಸಿದನು +ನೀ +ಮರಳ್+ಎನಲು+ ಬೆಂ
ಬಳಿಯಲ್+ಅನಿಲಜನ್+ಐದಿ+ ಹಗೆಯಲಿ
ಕಲಹವನು +ಮಸೆಯೆಂದು +ನಂಗಬುಗೆಗೊಂಡು +ಮರಳಿದನು

ಅಚ್ಚರಿ:
(೧) ಪಾಂಡವರ ಹೆಸರುಗಳ ಬಳಕೆ – ಧರ್ಮಜ, ಫಲುಗುಣ, ನಕುಲ, ಸಹದೇವ, ಅನಿಲಜ
(೨) ಹಗೆಯಲಿ ಕಲಹವನು ಮಸೆ – ವೈರತ್ವವನ್ನು ಮೊನಚುಗೊಳಿಸು ಎಂದು ತಿಳಿಸುವ ಸಾಲು

ಪದ್ಯ ೧೧೯: ಯಾರ ಮೇಲೆ ಆಸಕ್ತಿಯು ಹೆಚ್ಚುತ್ತದೆ?

ದ್ಯೂತದೊಳು ಮದ್ಯದೊಳು ಘನ ಕಂ
ಡೂತಿಯೊಳು ನಿದ್ರೆಯೊಳು ಕಲಹ ವಿ
ಘಾತಿಯೊಳು ಮೈಥುನದೊಳಾಹಾರದೊಳು ಬಳಿಸಂದ
ಕೈತವದೊಳುದ್ಯೋಗದೊಳು ದು
ರ್ನೀತಿಯೊಳು ಪರಸತಿಯರೊಳು ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೧೯ ಪದ್ಯ)

ತಾತ್ಪರ್ಯ:
ಜೂಜಾಟದಲ್ಲಿ, ಮಾದಕ ಪಾನದಲ್ಲಿ, ಹೆಚ್ಚು ಕೆರೆಯುವಿಕೆ, ನಿದ್ರೆಯಲ್ಲಿ, ಜಗಳ, ಹೊಡೆದಾಟ, ಸಂಭೋಗ, ಆಹಾರ, ಮೋಸ, ಉದ್ಯೋಗ, ದುರ್ನೀತಿ, ಪರಸತಿಯರು ಇವರುಗಳಲ್ಲಿ ಆಸಕ್ತಿಯು ಬೆದಕಿದ ಹಾಗೆಲ್ಲಾ ಹೆಚ್ಚಾಗುತ್ತಲೇ ಹೋಗುತ್ತದೆ.

ಅರ್ಥ:
ದ್ಯೂತ: ಪಗಡೆಯಾಟ, ಜೂಜು; ಮದ್ಯ: ಮಾದಕ ಪಾನೀಯ; ಘನ: ಹೆಚ್ಚು; ಕಂಡೂತಿ: ತುರಿಕೆ, ನವೆ; ನಿದ್ರೆ: ಶಯನ, ಮಲಗು; ಕಲಹ: ಜಗಳ; ವಿಘಾತ: ನಾಶ, ಧ್ವಂಸ; ಮೈಧುನ: ಸ್ತ್ರೀಪುರುಷರ ಕೂಟ, ಸಂಭೋಗ; ಆಹಾರ: ಊಟ; ಬಳಿ: ಹತ್ತಿರ; ಸಂದ: ಕಳೆದ, ಹಿಂದಿನ; ಕೈತವ: ಮೋಸ, ಕಪಟ; ಉದ್ಯೋಗ: ಕೆಲಸ, ಕಾರ್ಯ; ದುರ್ನೀತಿ: ಕೆಟ್ಟ ನಡತೆ; ಪರ: ಬೇರೆಯವರ; ಸತಿ: ಹೆಂಡತಿ; ಸಂಪ್ರೀತಿ: ಒಲವು; ಬಲಿ: ಹೆಚ್ಚಾಗು; ಬೆದಕ: ಅಪೇಕ್ಷೆಯನ್ನು ಅಧಿಕ ಮಾಡಿಕೊಳ್ಳುವುದು, ಹುಡುಕು; ರಾಯ: ಒಡೆಯ, ರಾಜ; ಕೇಳು: ಆಲಿಸು;

ಪದವಿಂಗಡಣೆ:
ದ್ಯೂತದೊಳು +ಮದ್ಯದೊಳು +ಘನ ಕಂ
ಡೂತಿಯೊಳು +ನಿದ್ರೆಯೊಳು +ಕಲಹ +ವಿ
ಘಾತಿಯೊಳು +ಮೈಥುನದೊಳ್+ಆಹಾರದೊಳು +ಬಳಿಸಂದ
ಕೈತವದೊಳ್+ಉದ್ಯೋಗದೊಳು +ದು
ರ್ನೀತಿಯೊಳು +ಪರಸತಿಯರೊಳು +ಸಂ
ಪ್ರೀತಿ +ಬಲಿವುದು +ಬೆದಕ+ ಬೆದಕಲು+ ರಾಯ +ಕೇಳೆಂದ

ಅಚ್ಚರಿ:
(೧) ದ್ಯೂತ, ಮದ್ಯ, ಕಂಡೂತಿ, ನಿದ್ರೆ, ಕಲಹ, ವಿಘಾತಿ, ಮೈಥುನ, ಆಹಾರ, ಕೈತವ, ಉದ್ಯೋಗ, ದುರ್ನೀತಿ, ಪರಸತಿ – ಇವರುಗಳ ಮೇಲೆ ಆಸಕ್ತಿ ಹೆಚ್ಚುತ್ತದೆ
(೨) ‘ಬ’ ಕಾರದ ತ್ರಿವಳಿ ಪದ – ಬಲಿವುದು ಬೆದಕ ಬೆದಕಲು