ಪದ್ಯ ೧೩: ರಣರಂಗವು ಯಾವುದರಿಂದ ಸಮೃದ್ಧವಾಗಿತ್ತು?

ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೋಂಡೆ ನರಗಳ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು (ಭೀಷ್ಮ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ನೊರೆ ರಕ್ತ ಹರಿಯಿತು, ಕರುಳುಗಳ ಜೊಂಡು ಎಲ್ಲೆಡೆ ಬಿದ್ದವು. ತುಂಡಾದ ಮಾಂಸಖಂಡಗಳು, ಹರಿದ ಚರ್ಮ, ಮುರಿದ ಮೂಳೆಗಳು, ನರಗಳ ಜೋಂಡು, ಮಿದುಳಿನ ತೊರೆಳಿಗಳು, ಕತ್ತರಿಸಿದ ಕುತ್ತಿಗೆಗಳಿಂದ ಯಮನು ಸಮೃದ್ಧವಾದ ಸುಗ್ಗಿ ಮಾಡುತ್ತಿರುವನೋ ಎಂಬಂತಿತ್ತು.

ಅರ್ಥ:
ಮಂಡಿಸು: ಕುಳಿತುಕೊಳ್ಳು; ನೊರೆ: ಬುರುಗು, ಫೇನ; ರಕುತ: ನೆತ್ತರು; ಕರುಳು: ಪಚನಾಂಗ; ಜೊಂಡು: ನೀರಿನಲ್ಲಿ ಬೆಳೆಯುವ ಒಂದು ಬಗೆಯ ಹುಲ್ಲು; ಮಸಗು: ಕೆರಳು; ತಿಕ್ಕು; ಕಡಿ: ತುಂಡು, ಹೋಳು; ಖಂಡ: ತುಂಡು, ಚೂರು; ದಿಂಡು: ಶರೀರ, ದೇಹ; ತಳಿತ: ಚಿಗುರಿದ; ತೊಗಲು: ಚರ್ಮ, ತ್ವಕ್ಕು; ಕೊಯ್ಲು: ಕೊಯ್ಯುವಿಕೆ ಕಟಾವು; ಮುರಿ: ಸೀಳು; ಮೂಳೆ: ಎಲುಬು; ನರ: ಶಕ್ತಿ, ಸಾಮರ್ಥ್ಯ; ಜುರಿತ: ರಕ್ತಸ್ರಾವ; ಮಿದುಳು: ಮಸ್ತಿಷ್ಕ; ಕೊರಳು: ಕಂಠ; ತುಂಡು: ಚೂರು, ಭಾಗ, ಖಂಡ; ಕಾಲಾಂತಕ: ಯಮ; ಹೆಬ್ಬೆಳಸು: ಹೆಚ್ಚಾಗಿಸು, ವೃದ್ಧಿಸು; ಹುಲುಸು: ಹೆಚ್ಚಳ, ಸಮೃದ್ಧಿ;

ಪದವಿಂಗಡಣೆ:
ಮಂಡಿಸಿತು +ನೊರೆ+ರಕುತ +ಕರುಳಿನ
ಜೊಂಡು +ಮಸಗಿತು +ಕಡಿದ +ಖಂಡದ
ದಿಂಡು +ತಳಿತುದು +ತೊಗಲ +ಕೊಯ್ಲಿನ+ ಮುರಿದ+ ಮೂಳೆಗಳ
ಜೊಂಡೆ +ನರಗಳ +ಜುರಿತ+ ಮಿದುಳಿನ
ಹೊಂಡೆಯದ +ತೊರಳಿಗಳ+ ಕೊರಳಿನ
ತುಂಡುಗಳ+ ಕಾಲಾಂತಕನ+ ಹೆಬ್ಬೆಳಸು+ ಹುಲುಸಾಯ್ತು

ಅಚ್ಚರಿ:
(೧) ಜೊಂಡು, ದಿಂಡು, ತುಂಡು; ಕರುಳಿನ, ಮಿದುಳಿನ, ಕೊರಳಿನ – ಪ್ರಾಸ ಪದಗಳು
(೨) ರೂಪಕದ ಪ್ರಯೋಗ – ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು

ಪದ್ಯ ೩೧: ಶತ್ರುಗಳನ್ನು ಹೇಗೆ ಧರೆಗುರುಳಿಸಿದರು?

ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೋಯಿದರು ಬೈದು ತಾಗಿತು ಹರಿಗೆಯತಿಬಲರು (ಭೀಷ್ಮ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಲುಗಳು ಕಡಿವಡೆದು, ಕರುಳಿನ ಮಾಲೆಯಲ್ಲಿ ಸಿಕ್ಕಿಕೊಂಡವು. ಹೊಡೆತದಿಂದ ತೊಡೆ, ನಡುಗಳು ಬಾಳೆಯ ಮರದಮ್ತೆ ಕೆಳಬಿದ್ದವು. ಕೈಗಳನ್ನು ಕತ್ತರಿಸಿ, ರುಂಡಗಳನ್ನು ಹಾರಿಸಿ ಕೆಡವಿದರು. ದೇಹಗಳನ್ನು ಸೀಳಾಗಿ ಕತ್ತರಿಸಿದರು. ಬೈದು ಶತ್ರುಗಳನ್ನು ಹೊಡೆದರು.

ಅರ್ಥ:
ಕಾಲು: ಪಾದ; ಖಂಡಿಸು: ತುಂಡರಿಸು; ಬೀಳು: ಜಾರು; ಕರುಳು: ಪಚನಾಂಗ; ಮಾಲೆ: ಹಾರ; ತೊಡಕು: ಸಿಕ್ಕು, ಗೋಜು; ಹಣಿ: ಬಾಗು, ಮಣಿ; ಬಾಳೆ: ಕದಳೀಫಲ; ಉಡಿ: ಸೊಂಟ; ತೊಡೆ; ಊರು; ಮುರಿ: ಸೀಳು; ಕಟಿ: ಸೊಂಟ, ನಿತಂಬ; ಕೆದರು: ಹರಡು; ತೋಳು: ಬಾಹು; ಕೊರೆ: ತುಂಡು; ನೆಲ: ಭೂಮಿ; ತಲೆ: ಶಿರ; ಬೀಳು: ಜಾರು; ತನು: ದೇಹ; ಸೀಳು: ಚೂರು, ತುಂಡು; ಬೈದು: ಜರೆದು; ತಾಗು: ಮುಟ್ಟು; ಹರಿಗೆ: ಗುರಾಣಿ; ಅತಿಬಲರು: ಪರಾಕ್ರಮಿಗಳು;

ಪದವಿಂಗಡಣೆ:
ಕಾಲು+ ಖಂಡಿಸಿ +ಬೀಳೆ +ಕರುಳಿನ
ಮಾಲೆಯೊಳು +ತೊಡಕಿದುವು +ಹಣಿದದ
ಬಾಳೆಯಂದದೊಳ್+ಉಡಿಯೆ +ತೊಡೆ +ನಡು +ಮುರಿಯೆ+ ಕಟಿ +ಕೆದರೆ
ತೋಳ +ಕೊರೆದರು+ ನೆಲಕೆ +ತಲೆಯನು
ಬೀಳಿಕಿದರ್+ಎರಡಾಗಿ +ತನುವನು
ಸೀಳು+ಹೋಯಿದರು +ಬೈದು +ತಾಗಿತು+ ಹರಿಗೆ+ಅತಿಬಲರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲು ಖಂಡಿಸಿ ಬೀಳೆ ಕರುಳಿನಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳು