ಪದ್ಯ ೬೪: ಕೌರವರು ಯಾರ ಬಿಡಾರಕ್ಕೆ ಬಂದರು?

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಆ ಮೂವರೂ ದಕ್ಷಿಣ ದಿಕ್ಕಿನೆಡೆಗೆ ಹೊರಟರು. ಪಾಂಡವರ ಪಾಳೆಯದ ಕಡೆಗೆ ನಡೆದರು. ಕತ್ತಲು ದಟ್ಟಯಿಸಿದಂತೆ ಇವರ ಘನರೋಷಾಂಧಕಾರವೂ ದಟ್ಟಯಿಸಿತು. ಪಾಂಡವಸೇನಾ ಸಮುದ್ರವನ್ನು ಇವರು ಮನಸ್ಸಿನಲ್ಲೇ ಕುಡಿದರು. ಆದರೆ ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಇವರಿಗೆ ಸಿಲುಕುವರೇ!

ಅರ್ಥ:
ಬಂದು: ಆಗಮಿಸು; ದೆಸೆ: ದಿಕ್ಕು; ಪಾಳೆಯ: ಬೀಡು; ಸುತ್ತಲು: ಬಳಸಿಕೊಂಡು; ಸವಡಿ: ಜೊತೆ, ಜೋಡಿ; ಕತ್ತಲೆ: ಅಂಧಕಾರ; ಘನ: ದೊಡ್ಡ, ಗಾಢ; ರೋಷ: ಕೋಪ; ಅಂಧಕಾರ: ಕತ್ತಲೆ; ಮನ: ಮನಸ್ಸು; ಕುದಿ: ಮರಳು, ಸಂಕಟಪಡು; ಕುಡಿ: ಪಾನಮಾಡು; ಅಹಿ: ವೈರಿ; ಆರ್ಣವ: ಯುದ್ಧ; ಗೋಚರ: ಕಾಣುವುದು, ಮಾಡಬಹುದಾದ; ಕರುಣೆ: ದಯೆ;

ಪದವಿಂಗಡಣೆ:
ಇವರು +ಬಂದರು +ದಕ್ಷಿಣದ +ದೆಸೆಗ್
ಅವರ+ ಪಾಳೆಯಕಾಗಿ +ಸುತ್ತಲು
ಸವಡಿ+ಕತ್ತಲೆಯಾಯ್ತು +ಘನ+ರೋಷಾಂಧಕಾರದಲಿ
ಇವರು +ಮನದಲಿ+ ಕುಡಿದರ್+ಅಹಿತ
ಅರ್ಣವವರ್+ಇವರಿಗೆ +ಗೋಚರವೆ +ಪಾಂ
ಡವರು +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ

ಪದ್ಯ ೩: ಬಲರಾಮನೇಕೆ ಕರಗಿದನು?

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ (ಗದಾ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಶಲ್ಯ, ಕರ್ಣ, ಸೈಂಧವ, ನೂರು ಮಂದಿ ತಮ್ಮಂದಿರು ಮಕ್ಕಳು ಗೆಳೆಯರು, ಜ್ಞಾತಿಗಳು, ಬಾಂಧವರು ಎಲ್ಲರನ್ನೂ ಹರಕೆಯ ಕುರಿಗಳಂತೆ ಬಲಿಕೊಟ್ಟೆ. ಜಯದ ನಿಧಿ ಕಾಣಲಿಲ್ಲವೇ? ಶಿವ ಶಿವಾ ಎಂದು ಬಲರಾಮ ಕರುಣೆಯಿಂದ ಕರಗಿ ಹೋದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಸೋದರ: ತಮ್ಮ; ಶತ: ನೂರು; ಪುತ್ರ: ಸುತ; ಮಿತ್ರ: ಸ್ನೇಹಿತ; ಜ್ಞಾತಿ: ದಾಯಾದಿ; ಬಾಂಧವ: ಬಂಧುಜನ; ಹರಸುಕುರಿ: ಹರಕೆಯ ಕುರಿ; ಗೋಚರಿಸು: ಗೊತ್ತುಪಡಿಸು; ರಣ: ಯುದ್ಧ; ವಿಜಯ: ಗೆಲುವು; ನಿಧಿ: ಸಿರಿ; ಹರ: ಶಿವ; ಕರಗು: ಕನಿಕರ ಪಡು; ಕರುಣ: ದಯೆ;

ಪದವಿಂಗಡಣೆ:
ಗುರುವೊ +ಗಂಗಾಸುತನೊ +ಮಾದ್ರೇ
ಶ್ವರನೊ +ಕರ್ಣನೊ +ಸೈಂಧವನೊ +ಸೋ
ದರರ +ಶತಕವೊ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರೊ
ಹರಸಿ +ಕುರಿಗಳನ್+ಇಕ್ಕಿದಡೆ+ ಗೋ
ಚರಿಸದೇ +ರಣ+ವಿಜಯನಿಧಿ +ಹರ
ಹರ +ಎನುತ +ಕರಗಿದನು +ಕಡು +ಕರುಣದಲಿ +ಬಲರಾಮ

ಅಚ್ಚರಿ:
(೧) ರೂಪಕದ ಪ್ರಯೋಗ – ಹರಸಿ ಕುರಿಗಳನಿಕ್ಕಿದಡೆ ಗೋಚರಿಸದೇ ರಣವಿಜಯನಿಧಿ

ಪದ್ಯ ೬೦: ಅಶ್ವತ್ಥಾಮ ಏನು ಯೋಚಿಸಿ ಹಿಂದಿರುಗಿದನು?

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ, ಕೃತವರ್ಮರು, ದೈವ ಸಂಕಲ್ಪದಂತೆಯೇ ನಡೆದೀತು. ಅನ್ಯಥಾ ನಡೆಯಲಾರದು. ಕೌರವನ ಜಯಲಕ್ಷ್ಮಿಯ ವಿಲಾಸವು ವೇಶ್ಯೆಯ ವಿಭ್ರಮವನ್ನು ಸ್ವೀಕರಿಸಿತು. ಪುಞ ಪ್ರವರನಾದ ಗದುಗಿನ ವೀರನಾರಾಯಣನ ಕರುಣೆಯಿರುವುದರಿಂದ ಪಾಂಡವರಿಗೆ ಯಾವ ಕೊರತೆಯುಂಟಾದೀತು? ಎಂದುಕೊಂಡು ದೂರಕ್ಕೆ ಹೋದರು.

ಅರ್ಥ:
ತಿರುಗು: ಮರಳು; ಹಿಂದಿರುಗು; ದೈವ: ಭಗವಂತ; ವ್ಯವಸಿತ: ಸಂಕಲ್ಪ; ಫಲಿಸು: ಹೊರಹೊಮ್ಮು; ಸಿರಿ: ಐಶ್ವರ್ಯ; ಪಣ್ಯ: ಮಾರಾಟ, ವ್ಯಾಪಾರ; ವಿಭ್ರಮ: ಅಲೆದಾಟ, ಸುತ್ತಾಟ; ವರಿಸು: ಕೈಹಿಡಿ; ಅರುಹು: ಹೇಳು; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಪ್ರವರ: ಶ್ರೇಷ್ಠ, ಮೊದಲಿಗ; ಕರುಣ: ದಯೆ;

ಪದವಿಂಗಡಣೆ:
ಇವರು +ತಿರುಗಿದರ್+ಇನ್ನು +ದೈವ
ವ್ಯವಸಿತವೆ +ಫಲಿಸುವುದಲಾ+ ಕೌ
ರವನ+ ಸಿರಿ+ ಪಣ್ಯಾಂಗನಾ+ವಿಭ್ರಮವ +ವರಿಸಿತಲಾ
ಅವರಿಗ್+ಇದನ್+ಆರ್+ಅರುಹಿದರೊ +ಪಾಂ
ಡವರಿಗ್+ಆವುದು +ಕೊರತೆ +ಪುಣ್ಯ
ಪ್ರವರ +ಗದುಗಿನ +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
(೨) ಪಾಂಡವರ ಶ್ರೇಷ್ಠತೆ – ಪಾಂಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ

ಪದ್ಯ ೫೬: ಕೌರವರು ಹೇಗೆ ಶಕ್ತಿಹೀನರಾದರು?

ಸಾರಿದನು ಶರಮಂಚವನು ಭಾ
ಗೀರಥೀನಂದನನು ಕರ್ಣನು
ಬೇರುಹರಿದಾ ದ್ರುಮದವೊಲು ಗತಶೌರ್ಯನಿನ್ನೇನು
ಭಾರಿಯಾಳೈ ದ್ರೋಣನಾತನು
ತೀರಿದನು ಹಾ ಪಾಂಡುಸುತರಿ
ನ್ನಾರ ಮುರಿಯರು ವೀರನಾರಾಯಣನ ಕರುಣದಲಿ (ದ್ರೋಣ ಪರ್ವ, ೧೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ಭೀಷ್ಮನು ಸರಳ ಮಂಚದಲ್ಲಿ ಮಲಗಿದನು. ಕರ್ಣನು ತಾಯಿಬೇರು ಕಿತ್ತು ಹೋದ ಮರದಂತೆ ಶೌರ್ಯಹೀನನಾದನು. ದ್ರೋಣನು ಮಹಾವೀರ ಆತನೂ ಹೋದ ಹಾಗೆ, ವೀರನಾರಾಯಣನ ಕರುಣೆಯಿಂದ ಪಾಂಡವರು ಇನ್ನಾರನ್ನು ಮುರಿಯದೆ ಉಳಿಸುತ್ತಾರೆ ಎಂದು ಸಂಜಯನು ತಿಳಿಸಿದನು.

ಅರ್ಥ:
ಸಾರು: ಬಳಿ ಸೇರು, ಪ್ರಕಟಿಸು; ಶರ: ಬಾಣ; ಮಂಚ: ಪಲ್ಲಂಗ; ಭಾಗೀರಥಿ: ಗಂಗೆ; ನಂದನ: ಮಗ; ಬೇರು: ಬುಡ; ಹರಿ: ಸೀಳು; ದ್ರುಮ: ಮರ, ವೃಕ್ಷ; ಮದ: ಅಹಂಕಾರ; ಗತ: ಕಳೆದ; ಶೌರ್ಯ: ಸಾಹಸ, ಪರಾಕ್ರಮ; ಭಾರಿ: ಅತಿಶಯವಾದ, ಅಧಿಕವಾದ; ಸುತ: ಮಕ್ಕಳು; ಮುರಿ: ಸೀಳು; ಕರುಣ: ದಯೆ;

ಪದವಿಂಗಡಣೆ:
ಸಾರಿದನು +ಶರ+ಮಂಚವನು +ಭಾ
ಗೀರಥೀ+ನಂದನನು +ಕರ್ಣನು
ಬೇರುಹರಿದಾ +ದ್ರುಮದವೊಲು +ಗತಶೌರ್ಯನ್+ಇನ್ನೇನು
ಭಾರಿಯಾಳೈ +ದ್ರೋಣನ್+ಆತನು
ತೀರಿದನು +ಹಾ +ಪಾಂಡುಸುತರ್
ಇನ್ನಾರ +ಮುರಿಯರು +ವೀರ+ನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕರ್ಣನು ಬೇರುಹರಿದಾ ದ್ರುಮದವೊಲು ಗತಶೌರ್ಯನ್

ಪದ್ಯ ೪೭: ಕವಚವು ದ್ರೋಣನ ಬಳಿ ಹೇಗೆ ಬಂದಿತು?

ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶನಿ
ನಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ (ದ್ರೋಣ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇದು ಶಿವನ ಕವಚ, ವೃತ್ರನೊಡನೆ ಯುದ್ಧಮಾದುವಾಗ ಶಿವನು ದೇವೇಂದ್ರನಿಗೆ ಕೊಟ್ಟನು, ಇಂದ್ರನು ಇದನ್ನು ಆಂಗಿರನಿಗೆ ನೀಡಿದನು, ಅವನು ಇದನ್ನು ಬೃಹಸ್ಪತಿಗೆ ಕೊಟ್ಟನು. ಅದು ಬೃಹಸ್ಪತಿಯಿಂದ ಭರದ್ವಾಜನಿಗೆ ಬಂದಿತು, ಭರದ್ವಾಜನು ಇದನ್ನು ನನಗೆ ನೀಡಿದನು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಹಾದೇವ: ಶಿವ, ಶಂಕರ; ಕದನ: ಯುದ್ಧ; ಸುರೇಂದ್ರ: ಇಂದ್ರ; ಇತ್ತು: ನೀಡು; ಬಳಿಕ: ನಂತರ; ಕರುಣ: ದಯೆ;

ಪದವಿಂಗಡಣೆ:
ಇದು +ಮಹಾದೇವರದು +ವೃತ್ರನ
ಕದನದಲಿ +ಕೈ +ಸಾರ್ದುದ್+ಈಶನಿ
ನಿದು +ಸುರೇಂದ್ರಂಗ್+ಆ+ ಸುರೇಶ್ವರನ್+ಆಗಿರಂಗಿತ್ತ
ಇದು +ಬೃಹಸ್ಪತಿಗ್+ಆಂಗಿರನನಿನಾ
ದುದು +ಭರದ್ವಾಜಂಗೆ +ಬಳಿಕಾ
ದುದು +ಭರದ್ವಾಜಾಖ್ಯನಿತ್ತನು +ತನಗೆ +ಕರುಣದಲಿ

ಅಚ್ಚರಿ:
(೧) ಕವಚವು ಬಂದ ಪರಿ – ಮಹಾದೇವ, ಸುರೇಂದ್ರ, ಆಂಗಿರ, ಬೃಹಸ್ಪತಿ, ಭಾರದ್ವಾಜ, ದ್ರೋಣ

ಪದ್ಯ ೧೦: ಅರ್ಜುನನು ಕಂಡ ಕನಸಿನ ಮರ್ಮವೇನು?

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ (ದ್ರೋಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಮಾತನಾಡುತ್ತಾ ತನ್ನ ಕನಸನ್ನು ಕೃಷ್ಣನಿಗೆ ವಿವರಿಸಿದನು. ಇದರ ಫಲವೇನೆಂದು ಕೃಷ್ಣನಲ್ಲಿ ಕೇಳಲು, ಶ್ರೀಕೃಷ್ಣನು ನಸುನಕ್ಕು, ನಿನಗೆ ಶಿವನ ಕರುಣೆ ದೊರಕಿತು. ಈ ದಿವಸ ಪಾಶುಪತಾಸ್ತ್ರವು ನಿನ್ನದು, ಇಂದು ಸೈಂಧವನ ವಧೆಯಾಗುತ್ತದೆ ಎಂದನು.

ಅರ್ಥ:
ಕನಸು: ಸ್ವಪ್ನ; ಹದ: ಸರಿಯಾದ ಸ್ಥಿತಿ; ಕಂಡು: ನೋಡು; ದನುಜ: ರಾಕ್ಷರ; ಹರ: ನಾಶ; ದನುಜಹರ: ಕೃಷ್ಣ; ಬೆಸ: ಕೆಲಸ, ಕಾರ್ಯ; ಫಲ: ಪ್ರಯೋಜನ; ನಸುನಗು: ಮಂದಸ್ಮಿತ; ನುಡಿ: ಮಾತು; ದಾನವ: ರಾಕ್ಷಸ; ಧ್ವಂಸಿ: ನಾಶ; ಶೂಲಿ: ಈಶ್ವರ; ಕರುಣ: ದಯೆ; ಅಸ್ತ್ರ: ಶಸ್ತ್ರ; ಅರಿ: ವೈರಿ; ವಧ: ಸಾಯಿಸು; ವ್ಯಾಪಾರ: ವ್ಯವಹಾರ;

ಪದವಿಂಗಡಣೆ:
ಕನಸನ್+ಈ+ ಹದನಾಗಿ +ಕಂಡೆನು
ದನುಜಹರ +ಬೆಸಸ್+ಇದರ +ಫಲವನು
ನನಗೆನಲು +ನಸುನಗುತ +ನುಡಿದನು +ದಾನವಧ್ವಂಸಿ
ನಿನಗೆ +ಶೂಲಿಯ +ಕರುಣವಾಯ್ತ್
ಇಂದಿನಲಿ +ಪಾಶುಪತಾಸ್ತ್ರ +ನಿನ್ನದು
ದಿನದೊಳ್+ಅರಿ +ಸೈಂಧವ +ವಧ+ವ್ಯಾಪಾರವಹುದೆಂದ

ಅಚ್ಚರಿ:
(೧) ದನುಜಹರ, ದಾನವಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ನ ಕಾರದ ತ್ರಿವಳಿ ಪದ – ನನಗೆನಲು ನಸುನಗುತ ನುಡಿದನು

ಪದ್ಯ ೧೯: ಧರ್ಮಜನು ಹೇಗೆ ತನ್ನ ದುಃಖವನ್ನು ತೋಡಿಕೊಂಡನು?

ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ (ದ್ರೋಣ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೆ ಭೀಮ, ನಕುಲ, ಸಾತ್ಯಕಿ, ಸುಭದ್ರೆಯನ್ನು ಸುಮ್ಮನಿರಿಸಿರಿ. ನನ್ನ ಮಗನ ಸಾವೇ ನಾನು ಸಾಯುವುದಕ್ಕೆ ಸಾಕು. ಇದರ ಮೇಲೆ ಇವಳ ನಿಂದೆಯೇಕೆ? ಶ್ರೀಕೃಷ್ಣನ ಕರುಣೆಯ ಇಲ್ಲವಾದರೆ ಯಾರು ಏನು ಮಾಡಲು ಸಾಧ್ಯ, ಶಿವ ಶಿವಾ, ಈ ಭೂಮಿಯ ಮೇಲೆ ನನ್ನಂಥ ಪಾಪಿಗಳು ಯಾರಿದ್ದಾರೆ ಎಂದು ಯುಧಿಷ್ಠಿರನು ಶೋಕಿಸಿದನು.

ಅರ್ಥ:
ವೃಕೋದರ: ಭೀಮ; ನಿಲಿಸು: ತಡೆ; ತಂಗಿ: ಸಹೋದರಿ; ಕೊಲೆ: ಮರಣ; ಮಗ: ಪುತ್ರ; ಅಳಿ: ಸಾವು; ನುಡಿ: ಮಾತು; ನಳಿನನಾಭ: ವಿಷ್ಣು, ಕೃಷ್ಣ; ಕರುಣ: ದಯೆ; ಏಗು: ಸಾಗಿಸು, ನಿಭಾಯಿಸು; ಕಳಿ: ನಿವಾರಿಸು; ನೆಲ: ಭೂಮಿ; ಪಾಪಿ: ದುಷ್ಟ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಎಲೆ +ವೃಕೋದರ +ನಕುಳ +ಸಾತ್ಯಕಿ
ನಿಲಿಸಿರೈ+ ತಂಗಿಯನು +ತನ್ನಯ
ಕೊಲೆಗೆ+ ಮಗನ್+ಅಳಿವೊಂದು +ಸಾಲದೆ +ತನ್ನ +ನುಡಿಯೇಕೆ
ನಳಿನನಾಭನ +ಕರುಣದೊರತೆಯು
ಕಳಿದರ್+ಆರ್+ಏಗುವರು +ಶಿವ +ಶಿವ
ನೆಲನೊಳ್+ಎನ್ನವೊಲ್+ಆರು +ಪಾಪಿಗಳೆಂದು +ಬಿಸುಸುಯ್ದ

ಅಚ್ಚರಿ:
(೧) ಭಗವಂತನ ಕೃಪೆಯ ಮುಖ್ಯ ಎಂದು ಹೇಳುವ ಪರಿ – ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು

ಪದ್ಯ ೩೮: ಯುಯುತ್ಸುವು ಧರ್ಮಜನ ಬಳಿ ಏನು ಬೇಡಿದನು?

ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆನಭಯವನಿತ್ತು ಸಲಹೆಂದ (ಭೀಷ್ಮ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯುಯುತ್ಸುವು ರಥದಿಂದ ಕೆಳಗಿಳಿದು ಧರ್ಮಜನ ಬಳಿಬರುವುದು ಎರಡು ಸೈನ್ಯಗಳಿಗೂ ಆಶ್ಚರ್ಯವನ್ನುಂಟುಮಾಡಿತು. ಯುಯುತ್ಸುವು ಧರ್ಮಜನಿಗೆ ಕೈಮುಗಿದು ಅವನ ಪಾದಗಳಿಗೆ ನಮಸ್ಕರಿಸಿದನು, ಧರ್ಮಜನು ನೀನಾರೆಂದು ಕೇಳಲು, ನಾನು ಕೌರವನ ತಮ್ಮ ಯುಯುತ್ಸುವೆಂದು ತನ್ನನ್ನು ಪರಿಚಯಿಸಿಕೊಂಡು ನಿಮ್ಮ ಬಳಿ ಶರಣಾಗತನಾಗಲು ಬಂದಿದ್ದೇನೆ, ಅಭಯವನ್ನು ನೀಡಿ ನನ್ನನ್ನು ಸಲಹಿ ಎಂದು ಬೇಡಿದನು.

ಅರ್ಥ:
ಬಲ: ಸೈನ್ಯ; ಬೆರಗು: ಆಶ್ಚರ್ಯ; ನೋಡು: ವೀಕ್ಷಿಸು; ಮಹೀಶ: ರಾಜ; ಅಂಘ್ರಿ: ಪಾದ; ಕರ: ಹಸ್ತ; ಮುಗಿದು: ನಮಸ್ಕರಿಸು; ಎರಗು: ಬೀಳು, ಬಾಗು; ಹಿಡಿ: ಗ್ರಹಿಸು; ಎತ್ತು: ಮೇಲೆತ್ತು; ಕರುಣ: ದಯೆ; ಧರಣಿಪತಿ: ರಾಜ; ಅರಸ: ರಾಜ; ಅನುಜ: ತಮ್ಮ; ಶರಣು: ಆಶ್ರಯ, ವಂದನೆ; ಐತಂದು: ಬಂದು ಸೇರು; ಅಭಯ: ನಿರ್ಭಯತೆ, ರಕ್ಷಣೆ; ಸಲಹು: ಕಾಪಾಡು;

ಪದವಿಂಗಡಣೆ:
ಎರಡು +ಬಲ +ಬೆರಗಾಗಿ+ ನೋಡು
ತ್ತಿರೆ+ ಯುಯುತ್ಸು +ಮಹೀಶನ್+ಅಂಘ್ರಿಗೆ
ಕರವ +ಮುಗಿದ್+ಎರಗಿದರೆ +ಹಿಡಿದ್+ಎತ್ತಿದನು +ಕರುಣದಲಿ
ಧರಣಿಪತಿ+ ನೀನಾರೆನಲು +ಕೇಳ್
ಅರಸ +ಕೌರವನ್+ಅನುಜ+ ನಿಮ್ಮನು
ಶರಣುವೊಗಲ್+ಐತಂದೆನ್+ಅಭಯವನಿತ್ತು+ ಸಲಹೆಂದ

ಅಚ್ಚರಿ:
(೧) ಮಹೀಶ, ಧರಣಿಪತಿ, ಅರಸ – ಸಮನಾರ್ಥಕ ಪದ