ಪದ್ಯ ೬೬: ಧರ್ಮರಾಯನು ಏನನ್ನು ಪಣಕ್ಕೆ ಇಟ್ಟನು?

ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವಧನವನು ಸಕಲ ಸೈನಿಕರ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ (ಸಭಾ ಪರ್ವ, ೧೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನೇನು ಹೇಳಲಿ, ಸೋಲನ್ನು ಬಿತ್ತಿ ಧರ್ಮರಾಯನು ಸೋಲನ್ನೇ ಬೆಳಸಿದನು. ತನ್ನ ಹಣ ಸೈನ್ಯಗಳನ್ನೆಲ್ಲಾ ಕೌರವನಿಗೆ ತೆತ್ತನು. ಮತ್ತೆ ಏನು ಪಣವನ್ನೊಡ್ಡುವೆ ಎಂದು ಶಕುನಿಯು ಕೇಳಲು ಅರವತ್ತು ಸಾವಿರ ಆನೆಮರಿಗಳನ್ನು, ಎಂಬತ್ತು ಸಾವಿರ ಕುದುರೆ ಮರಿಗಳನ್ನು ಒಡ್ಡಿದನು.

ಅರ್ಥ:
ಮತ್ತೆ: ಪುನಃ; ಹೇಳು: ತಿಳಿಸು; ಸೋಲು: ಪರಾಭವ; ಬಿತ್ತಿ: ಉಂಟುಮಾಡು; ಬೆಳೆ: ಬೆಳೆಯುವಿಕೆ, ಅಭಿವೃದ್ಧಿ; ಭೂಪ: ರಾಜ; ತೆತ್ತ: ನೀಡಿದ; ಸರ್ವಸ್ವ: ಎಲ್ಲಾ; ಧನ: ಐಶ್ವರ್ಯ; ಸಕಲ: ಎಲ್ಲಾ; ಸೈನಿಕ: ಸೈನ್ಯ, ಪಡೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಬಳಿಕ: ನಂತರ; ಸಾವಿರ: ಸಹಸ್ರ; ಕರಿ: ಆನೆ; ಕಳಭ: ಆನೆಮರಿ; ತುರಗ: ಕುದುರೆ; ಶಿಶು: ಮರಿ; ಒಡ್ಡು: ನೀಡು; ಭೂಪ: ರಾಜ;

ಪದವಿಂಗಡಣೆ:
ಮತ್ತೆ +ಹೇಳುವುದೇನ +ಸೋಲವ
ಬಿತ್ತಿ +ಬೆಳೆದನು+ ಭೂಪನ್+ಅವರಿಗೆ
ತೆತ್ತನೈ +ಸರ್ವಸ್ವ+ಧನವನು +ಸಕಲ +ಸೈನಿಕರ
ಮತ್ತೆ +ಪಣವೇನ್+ಎನಲು +ಬಳಿಕ್+ಅರು
ವತ್ತು +ಸಾವಿರ +ಕರಿಕಳಭವ್+ಎಂ
ಬತ್ತು +ಸಾವಿರ +ತುರಗ +ಶಿಶುಗಳನ್+ಒಡ್ಡಿದನು +ಭೂಪ

ಅಚ್ಚರಿ:
(೧) ಆಗಿನ ಕಾಲದಲ್ಲಿ ಪ್ರಾಣಿಗಳನ್ನು ಪೋಷಿಸುವ ಬಗೆ – ಅರುವತ್ತು ಸಾವಿರ ಕರಿಕಳಭ, ಎಂಬತ್ತು ಸಾವಿರ ತುರಗ ಶಿಶು
(೨) ಬ ಕಾರದ ತ್ರಿವಳಿ ಪದ – ಬಿತ್ತಿ ಬೆಳೆದನು ಭೂಪನ
(೩) ಸೋಲನ್ನು ಅನುಭವಿಸಿದನು ಎನ್ನುವ ಪರಿ – ಸೋಲವ ಬಿತ್ತಿ ಬೆಳೆದನು

ಪದ್ಯ ೮೦: ಜರಾಸಂಧನು ಕೃಷ್ಣನನ್ನು ಹೇಗೆ ಬೆದರಿಸಿದನು?

ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ (ಸಭಾ ಪರ್ವ, ೨ ಸಂಧಿ, ೮೦ ಪದ್ಯ)

ತಾತ್ಪರ್ಯ:
ಕೋಪದಿಂದಾವೃತನಾದ ಜರಾಸಂಧನು, ಎಲವೋ ದನಕಾಯುವವನೇ, ಇದೇನು ನಿನ್ನ ಮಾವ ಕಂಸನ ಮನೆಯೆಂದುಕೊಂಡೆಯಾ? ಪುಂಡ್ರ ದೇಶದ ರಾಜ ಪೌಂಡ್ರಕನ (ಇವನು ಕೃಷ್ಣನ ಹಾಗೆ ವೇಷವನ್ನು ಧರಿಸುತ್ತಿದ್ದನು) ಕದನದ ಜಾಗವೆಂದುಕೊಂಡೆಯ? ಹಂಸನ ಯುದ್ಧ, ಡಿಬಿಕನ ಹೋರಾಟವೋ? ಹುಲಿಯ ಗುಹೆಗೆ ಮೊಲವು ಅಭ್ಯಾಗತವಾಗಿ ಬರುವುದೆಂದರೇನು? ಆನೆ ಮರಿಯು ಸಿಂಹಕ್ಕೆ ಸರಿಯೇ? ನಿನ್ನ ಯೋಗ್ಯತೆಯನ್ನರಿಯದೆ ನನ್ನರಮನೆಯನ್ನು ಹೊಕ್ಕು, ಕೆಣಕಿ ನೀನು ಕೆಟ್ಟೆ ಎಂದು ಜರಾಸಂಧನು ನುಡಿದನು.

ಅರ್ಥ:
ಗೋವಳ: ದನಕಾಯುವವ, ಗೋಪಾಲ, ಕೃಷ್ನ; ನಿಳಯ: ಮನೆ; ಪೌಂಡ್ರಕ:ರೂಪಾಭಿಮಾನಿ ದೈತ್ಯ; ಕದನ: ಯುದ್ಧ; ಕಳ: ರಣರಂಗ; ಹಂಸ:ಕಾಮ, ಮನ್ಮಥ, ಒಂದು ಬಗೆಯ ಪಕ್ಷಿ; ಹೋರಟೆ: ಯುದ್ಧ, ಕಾಳಗ; ಮೇಣ್: ಅಥವ; ಅಡುಪಾಯ: ಮಲ್ಲಯುದ್ಧದ ಒಂದು ಪಟ್ಟು; ಡಿಬಿಕ: ; ಹುಲಿ: ವ್ಯಾಘ್ರ; ಮೊಲ: ಶಶ; ಅಭ್ಯಾಗತ:ಅನಿರೀಕ್ಷಿತವಾಗಿ ಬಂದ ಅತಿಥಿ; ಕರಿ: ಆನೆ; ಕಳಭ: ಮರಿ; ಸಿಂಹ: ಕೇಸರಿ; ಸರಿ: ಸಮ; ಅಳ: ಯೋಗ್ಯತೆ; ಅರಿ: ತಿಳಿ; ಹೊಕ್ಕು: ಸೇರು; ಕೆಟ್ಟೆ: ತಪ್ಪು ಮಾದಿದೆ; ಹೋಗು: ನಡೆ;

ಪದವಿಂಗಡಣೆ:
ಎಲವೊ +ಗೋವಳ +ನಿನ್ನ +ಕಂಸನ
ನಿಳಯವೋ +ಪೌಂಡ್ರಕನ ಕದನದ+
ಕಳನೊ +ಹಂಸನ +ಹೋರಟೆಯೊ +ಮೇಣ್ +ಡಿಬಿಕನ್+ಅಡುಪಾಯೊ
ಹುಲಿಗೆ +ಮೊಲನ್+ಅಭ್ಯಾಗತನೆ +ಕರಿ
ಕಳಭ +ಸಿಂಹಕೆ +ಸರಿಯೆ +ನೀ +ನಿನ್
ಅಳವನರಿಯದೆ +ಹೊಕ್ಕು +ಕೆಣಕಿದೆ +ಕೆಟ್ಟೆ +ಹೋಗೆಂದ

ಅಚ್ಚರಿ:
(೧) ಕೃಷ್ಣನನ್ನು ಹೀಯಾಳಿಸುವ ಬಗೆ – ಎಲವೋ ಗೋವಳ
(೨) ಕದನ, ಕಳ, ಹೋರಟೆ – ಯುದ್ಧದ ಸಮನಾರ್ಥಕ ಪದಗಳು
(೩) ಹುಲಿಗೆ ಮೊಲ, ಸಿಂಹಕೆ ಮರಿಯಾನೆ – ಹೋಲಿಸುವ ರೀತಿ
(೩) “ಕೆ” ಅಕ್ಷರದ ಜೋಡಿ ಪ್ರಯೋಗ – ಕೆಣಕಿದೆ ಕೆಟ್ಟೆ

ಪದ್ಯ ೫೧: ಅಗ್ನಿಯ ಆಹುತಿಗೆ ಯಾವ ಪ್ರಾಣಿಗಳು ಬಲಿಯಾದವು?

ಧರಣಿಪತಿ ಕೇಳ್ ಶರಭ ಮೃಗಪತಿ
ಕರಿಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾದನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳರವಲೆಗಳಲಿ (ಆದಿ ಪರ್ವ, ೨೦ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಗ್ನಿಯ ಆಹುತಿಗೆ ಕಾಡಿನೊಳಗಿದ್ದ ಶರಭ, ಸಿಂಹ, ಆನೆ, ಆನೆಯಮರಿ, ಹುಲಿ, ಹಂದಿ, ಕರಡಿ, ಕಾಡುಕೋಣ, ಮುಳ್ಳುಹಂದಿ, ಕತ್ತೆಕಿರುಬ, ಖಡ್ಗಮೃಗ, ನರಿ, ಜಿಂಕೆ, ಮೊಲ, ಸಾರಂಗ, ಕಪಿ, ಜಿಂಕೆ ಮೊದಲಾದ ಪ್ರಾಣಿಗಳು ಆಹುತಿಯಾದವು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಶರಭ:ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಮೃಗ: ಪ್ರಾಣಿ; ಮೃಗಪತಿ: ಸಿಂಹ; ಕರಿ: ಆನೆ; ಕರಿಕ: ಕರಿ ಬಣ್ಣದವನು; ಕರಿಕಳಭ: ಆನೆಮರಿ; ಶಾರ್ದೂಲ:ಹುಲಿ, ವ್ಯಾಘ್ರ; ಸೂಕರ:ಹಂದಿ, ವರಾಹ; ಕಾಸರ:ಕಾಡುಕೋಣ; ಶಲ: ಮುಳ್ಳುಹಂದಿಯ ಮೈಮೇಲಿರುವ ಮುಳ್ಳು; ಗೋಮಾಯು: ನರಿ; ಖಡ್ಗ: ಘೇಂಡಾಮೃಗ; ಎರಳೆ:ಜಿಂಕೆ; ಮೊಲ: ಶಶ; ಸಾರಂಗ: ಜಿಂಕೆ; ವಾನರ: ಕೋತಿ; ನುರು: ; ಕುರಂಗ: ಜಿಂಕೆ; ಪ್ರಮುಖ: ಮುಖ್ಯವಾದ; ಮೃಗಕುಲ: ಪ್ರಾಣಿಗಳ ವಂಶ; ದಳ್ಳುರಿ: ಬೆಂಕಿ; ಬೆಳ್ಳಾರ: ಒಂದು ಬಗೆಯ ಬಲೆ;

ಪದವಿಂಗಡಣೆ:
ಧರಣಿಪತಿ +ಕೇಳ್ +ಶರಭ +ಮೃಗಪತಿ
ಕರಿಕಳಭ+ ಶಾರ್ದೂಲ +ಸೂಕರ
ಕರಡಿ +ಕಾಸರ+ಶಲ+ ಮೃಗಾದನ+ ಖಡ್ಗ +ಗೋಮಾಯು
ಎರಳೆ +ಮೊಲ +ಸಾರಂಗ +ವಾನರ
ನುರು +ಕುರಂಗ +ಪ್ರಮುಖ +ಮೃಗಕುಲ
ವುರುಬಿ+ ಬಿದ್ದುದು +ದಳ್ಳುರಿಯ +ಬೆಳ್ಳರ+ವಲೆಗಳಲಿ

ಅಚ್ಚರಿ:
(೧) ೧೭ ಬಗೆಯ ಪ್ರಾಣಿಗಳ ಹೆಸರನ್ನು ವಿವರಿಸಿದ್ದು