ಪದ್ಯ ೨೨: ಅಶ್ವತ್ಥಾಮನು ಯಾವುದನ್ನು ಪೂರ್ಣಾಹುತಿಗೆ ಅರ್ಪಿಸಿದನು?

ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ (ಗದಾ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಯಜ್ಞಕ್ಕೆ ತನ್ನ ನರಗಳನ್ನೇ ದರ್ಭೆಯನ್ನಾಗಿಸಿದ, ಮಿದುಳೇ ಚರು, ಕಪಾಲವೇ ಪಾತ್ರೆ, ಬೆರಳಿನ ಎಲಬುಗಳು ಸಮಿತ್ತು, ಮಜ್ಜೆಯ ಪೃಷದಾಜ್ಯ, ರಕ್ತದ ತುಪ್ಪಗಳಿಂದ ಆಹುತಿಗಳನ್ನು ಕೊಟ್ಟು, ಪೂರ್ಣಾಹಿತಿಗೆ ತನ್ನ ದೇಹವನ್ನೇ ಒಪ್ಪಿಸಿದನು.

ಅರ್ಥ:
ಸೆರೆ: ನರ, ಬಂಧನ; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮೆದುಳು, ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಕಪಾಲ: ತಲೆಬುರುಡೆ; ಪಾತ್ರೆ: ಬಟ್ಟಲು; ಎಲುಬು: ಮೂಳೆ; ಬೆರಳು: ಅಂಗುಲಿ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ವಿಶಾಲ: ದೊಡ್ಡದು, ಹಿರಿದು; ಆಜ್ಯ: ತುಪ್ಪ; ಅರುಣಜಲ: ರಕ್ತ; ಜಲ: ನೀರು; ಅರುಣ: ಕೆಂಪು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ವಿಸ್ತರ: ವಿಶಾಲ; ವಿರಚಿಸು: ನಿರ್ಮಿಸು; ನಿಗಮ: ವೇದ, ಶ್ರುತಿ; ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣೆ: ಹೇಳು; ಪೂರ್ಣಾಹುತಿ: ಯಜ್ಞಾದಿಗಳಲ್ಲಿ ದರ್ವಿ ಯಾ ಸವುಟನ್ನು ಪೂರ್ತಿಯಾಗಿ ತುಂಬಿಕೊಂಡು ಕೊಡುವ ಆಹುತಿ; ಒಡಲು: ದೇಹ; ಒಪ್ಪಿಸು: ಸಮರ್ಪಿಸು; ಮಜ್ಜೆ: ಅಸ್ಥಿಸಾರ, ಮೂಳೆಯ ಒಳಗಿನ ಸಾರವತ್ತಾದ ಭಾಗ;

ಪದವಿಂಗಡಣೆ:
ಸೆರೆ+ನರಂಗಳ+ ದರ್ಭೆ+ ಮಿದುಳಿನ
ಚರು +ಕಪಾಲದ +ಪಾತ್ರೆ+ಎಲುವಿನ
ಬೆರಳ +ಸಮಿಧೆ +ವಿಶಾಳದನುಮಜ್ಜೆಗಳ +ಪೃಷದಾಜ್ಯ
ಅರುಣಜಲದ್+ಆಜ್ಯ +ಆಹುತಿಯ +ವಿ
ಸ್ತರವ +ವಿರಚಿಸಿ +ನಿಗಮ+ಮಂತ್ರ
ಉಚ್ಚರಣೆಯಲಿ+ ಪೂರ್ಣಾಹುತಿಗ +ತನ್ನೊಡಲನ್+ಒಪ್ಪಿಸಿದ

ಅಚ್ಚರಿ:
(೧) ದೇಹವನ್ನೇ ಯಜ್ಞಕ್ಕೆ ಅನುವುಮಾಡಿದ ಪರಿ – ನಿಗಮಮಂತ್ರೋಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ

ಪದ್ಯ ೨೦: ಯುದ್ಧವನ್ನು ಯಜ್ಞಕ್ಕೆ ಹೇಗೆ ಹೋಲಿಸಬಹುದು?

ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮೆರದಿರಕಟೆಂದ (ಗದಾ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ನರಗಳೇ ದರ್ಭೆಗಳು, ಮಿದುಳುಗಳೇ ಚರು, ಎಲುಬುಗಳೇ ಸಮಿತ್ತುಗಳು, ಧನುಷ್ಟಂಕಾರ ಚತುರಂಗ ಬಲದ ಸದ್ದುಗಳೇ ಸಾಮ ವೇದದ ಘೋಷ, ರಕ್ತವೇ ತುಪ್ಪ, ಶತ್ರುಗಳ ತಲೆ ಬುರುಡೆಗಳೇ ಸ್ರಕ್ ಸ್ರುವಗಳು, ವೈರಿಗಳೇ ಪಶುಗಳು, ಇಂತಹ ಯುದ್ಧಯಜ್ಞದ ದೀಕ್ಷೆಯನ್ನು ಅಯ್ಯೋ ಮರೆತಿರಲ್ಲಾ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಸೆರೆ: ಒಂದು ಕೈಯ ಬೊಗಸೆ; ನರ: ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಎಲುಬು: ಮೂಳೆ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಬಿಲುದಿರುರವ: ಧನುಷ್ಟಂಕಾರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ರಭಸ: ವೇಗ; ವೇದಿ: ಪಂಡಿತ, ವಿದ್ವಾಂಸ; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಸ್ರುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಶಿರ: ತಲೆ; ಕಪಾಲ: ಕೆನ್ನೆ, ತಲೆಬುರುಡೆ; ವೈರಿ: ಶತ್ರು; ಪಶು: ಪ್ರಾಣಿ; ಬಂಧುರ: ಬಾಗಿರುವುದು; ಸಂಗರ: ಯುದ್ಧ, ಕಾಳಗ; ದೀಕ್ಷೆ: ವ್ರತ, ನಿಯಮ; ಮರೆ: ನೆನಪಿನಿಂದ ದೂರ ಮಾಡು; ಅಕಟ: ಅಯ್ಯೋ;

ಪದವಿಂಗಡಣೆ:
ಸೆರೆ+ನರದ+ ದರ್ಭೆಗಳ +ಮಿದುಳಿನ
ಚರುವಿನ್+ಎಲುವಿನ +ಸಮಿಧೆಗಳ+ ಬಿಲು
ದಿರು+ರವದ +ಚತುರಂಗ+ರಭಸದ +ಸಾಮ+ವೇದಿಗಳ
ಅರುಣಜಲದ+ಆಜ್ಯದ+ ಸ್ರುವಾದಿಯ
ಶಿರ+ಕಪಾಲದ+ ವೈರಿ+ಪಶುಬಂ
ಧುರದ +ಸಂಗರ+ಯಜ್ಞ +ದೀಕ್ಷೆಯ +ಮೆರದಿರ್+ಅಕಟೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ

ಪದ್ಯ ೬೪: ರಣರಂಗವು ಹೇಗೆ ತೋರಿತು?

ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ (ದ್ರೋಣ ಪರ್ವ, ೧೫ ಸಂಧಿ, ೬೪ ಪದ್ಯ)

ತಾತ್ಪರ್ಯ:
ತಿಮಿಂಗಿಲವು ಸಮುದ್ರದಲ್ಲಿ ರಭಸದಿಂದ ಚಲಿಸಿ ಮೀನುಗಳನ್ನು ನುಂಗುತ್ತದೆ. ಕೌರವ ಪಕ್ಷದ ದೈತ್ಯರು ಹುಲು ಮೀನುಗಳಿದ್ದಂತೆ. ಅವರನ್ನು ಘಟೋತ್ಕಚನು ಸಮೂಲವಾಗಿ ಧಟ್ಟಿಸಿದನು. ಕತ್ತರಿಸಿದ ಕೊರಳು, ಜೋಲುವ ಕರುಳು, ಕಡಿದು ಬಿದ್ದ ಕಪಾಲಗಳು ಇವುಗಳಿಂದ ರಕ್ತ ಸುರಿದು ರಣರಂಗವು ರೌದ್ರರಸವನ್ನು ತೋರಿತು.

ಅರ್ಥ:
ಉರು: ವಿಶೇಷವಾದ; ಅಬುಧಿ: ಸಾಗರ; ಡಾವರಿಸು: ಸುತ್ತು, ತಿರುಗಾಡು; ಹುಲು: ಕ್ಷುದ್ರ, ಅಲ್ಪ; ಮೀನು: ಮತ್ಸ್ಯ; ಅರಸ: ರಾಜ; ಹೇಳು: ತಿಳಿಸ್; ಮೊಗೆ: ಮಣ್ಣಿನ ಗಡಿಗೆ; ದೈತ್ಯ: ರಾಕ್ಷಸ; ಜಲನಿಧಿ: ಸಾಗರ; ಅರಿ: ಸೀಳು; ಕೊರಳು: ಕಂಠ; ಬಸಿ: ಒಸರು, ಸ್ರವಿಸು; ಬಂಬಲು: ರಾಶಿ; ಕರುಳು: ಪಚನಾಂಗ; ಜರಿ: ತಿರಸ್ಕರಿಸು; ಕಪಾಲ: ಕೆನ್ನೆ; ನೆತ್ತರ: ರಕ್ತ; ರಣ: ಯುದ್ಧರಂಗ; ಅವನಿ: ಭೂಮಿ; ಕರೆವು: ಬರೆಮಾಡು; ರೌದ್ರ: ಭಯಂಕರ; ರಸ: ಸಾರ;

ಪದವಿಂಗಡಣೆ:
ಉರು +ತಿಮಿಂಗಿಳನ್+ಅಬುಧಿಯಲಿ+ ಡಾ
ವರಿಸುವುದು +ಹುಲು+ಮೀನಿನಂತಿರಲ್
ಅರಸ +ಹೇಳುವುದೇನು +ಮೊಗೆದನು +ದೈತ್ಯ +ಜಲನಿಧಿಯ
ಅರಿದ+ ಕೊರಳಿನ+ ಬಸಿವ +ಬಂಬಲು
ಕರುಳ +ಜರಿವ +ಕಪಾಲದೊಗುನ್
ಎತ್ತರ +ರಣ+ಅವನಿ +ಕರೆವುತಿರ್ದುದು +ರೌದ್ರಮಯ+ರಸವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರು ತಿಮಿಂಗಿಳನಬುಧಿಯಲಿ ಡಾವರಿಸುವುದು ಹುಲುಮೀನಿನಂತಿರ
(೨) ಅಬುಧಿ, ಜಲನಿಧಿ – ಸಮಾನಾರ್ಥಕ ಪದ

ಪದ್ಯ ೪೧: ಸೈಂಧವನ ತಲೆ ನೆಲಕ್ಕೆ ಬಿದ್ದರೆ ಏನಾಗುತ್ತದೆ?

ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ (ದ್ರೋಣ ಪರ್ವ, ೧೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ಸೈಂಧವನ ತಲೆಯನ್ನು ಬಾಣದಿಂದ ತೆಗೆದ ಮೇಲೆ, ಹಿಗ್ಗುತ್ತಾ, ಬೀಳು ಬೀಳು, ಅಭಿಮನ್ಯುವಿನ ವಧೆ ನಿನ್ನನ್ನು ಬಾಳಲು ಬಿಟ್ಟೀತೇ ಎಂದು ಹರ್ಷದಿಂದ ಕೂಗಲು, ಕೃಷ್ಣನು, ಅಯ್ಯೋ ಮೂಢನೇ, ಈ ಸೈಂಧವನ ತಲೆಯನ್ನು ನೆಲಕ್ಕೆ ಬೀಳಿಸಿದವನ ತಲೆ ಸಾವಿರ ಹೋಳಾಗುತ್ತದೆ, ಪಾಪಿ, ಬೇಗ ಬಾಣವನ್ನು ಹೂಡು ಎಂದು ಹೇಳಿದನು.

ಅರ್ಥ:
ಬೀಳು: ಕುಸಿ; ವಧೆ: ಸಾವು; ಬಾಳು: ಜೀವಿಸು; ಉಬ್ಬು: ಹಿಗ್ಗು; ಆಳತನ: ಶೌರ್ಯ, ಪರಾಕ್ರಮ; ಬೊಬ್ಬಿಡು: ಅಬ್ಬರಿಸು; ಖಾತಿ: ಕೋಪ; ಖೂಳ: ದುಷ್ಟ; ಕೇಳು: ಆಲಿಸು; ಇಳೆ: ಭೂಮಿ; ತಲೆ: ಶಿರ; ಹೋಳು: ತುಂಡು; ತೊಡು: ಧರಿಸು; ಬೇಗ: ತ್ವರಿತ; ಅಂಬು: ಬಾಣ; ಕಳುಹು: ಕಳಿಸು;

ಪದವಿಂಗಡಣೆ:
ಬೀಳು+ ಬೀಳ್+ಅಭಿಮನ್ಯುವಿನ +ವಧೆ
ಬಾಳಲ್+ಈವುದೆ +ನಿನ್ನನ್+ಎನುತ್
ಉಬ್ಬ್+ಆಳತನದಲಿ +ಪಾರ್ಥ +ಬೊಬ್ಬಿಡೆ +ಕೃಷ್ಣ +ಖಾತಿಯಲಿ
ಖೂಳ +ಕೇಳ್+ಇಳೆಗ್+ಅವನ +ತಲೆಯನು
ಬೀಳಿಕಿದನ +ಕಪಾಲ +ಸಾವಿರ
ಹೋಳಹುದು +ತೊಡು +ಪಾಪಿ +ಬೇಗದಲ್+ಅಂಬ +ಕಳುಹೆಂದ

ಅಚ್ಚರಿ:
(೧) ಕೃಷ್ಣನು ಅರ್ಜುನನಿಗೆ ಬಯ್ಯುವ ಪರಿ – ತೊಡು ಪಾಪಿ ಬೇಗದಲಂಬ ಕಳುಹೆಂದ
(೨) ಸೈಂಧವನಿಗಿದ್ದ ವರ – ಖೂಳ ಕೇಳಿಳೆಗವನ ತಲೆಯನು ಬೀಳಿಕಿದನ ಕಪಾಲ ಸಾವಿರ ಹೋಳಹುದು

ಪದ್ಯ ೧೮: ರಣರಂಗವು ಏಕೆ ಭಯಾನಕವಾಗಿತ್ತು?

ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು (ಭೀಷ್ಮ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕಡಿದು ಚಿಮ್ಮಿದ ಬೆರಳುಗಳು, ಹಿಮ್ಮಡಿ ಕತ್ತರಿಸಿ ಹರಿದ ರಕ್ತ ನಾಳಗಳು, ತಲೆಗಳಿಗೆ ಹೊಡೆತ ಬಿದ್ದಾಗ ಕತ್ತರಿಸಿದ ಕಪಾಲ, ಹರಿದ ಹೊಟ್ಟೆ, ಮುರಿದ ತೊಡೆ ಹಿಂದಕ್ಕೆ ನೆಟ್ಟ ಕಣ್ಣುಗಳಿಂದ ರಣರಂಗವು ಭಯಾನಕವಾಗಿ ತೋರಿತು.

ಅರ್ಥ:
ಕಡಿ: ಕತ್ತರಿಸು; ಚಿಮ್ಮು: ಹೊರಹೊಮ್ಮು; ಬೆರಳು: ಅಂಗುಲಿ; ಹಿಮ್ಮಡಿ: ಕಾಲಿನ ಹಿಂಭಾಗ; ಘಾಯ: ಪೆಟ್ಟು; ನಾಳ: ದೇಹದೊಳಗಿರುವ ರಕ್ತನಾಳ; ಹರಿ: ಸೀಳು; ಮಡಿ: ಸತ್ತ; ಗೋಣು:ಕಂಠ, ಕುತ್ತಿಗೆ; ಬೆಸುಗೆ: ಪ್ರೀತಿ; ಬಿರಿ: ಸೀಳು; ಕಪಾಲ: ಕೆನ್ನೆ; ಓಡು: ತಲೆಬುರುಡೆ; ಉಡಿ: ಸೊಂಟ; ತೊಡೆ: ಊರು; ಹರಿ: ಸೀಳು, ಕಡಿ, ಕತ್ತರಿಸು; ಹೊಟ್ಟೆ; ಉದರ; ಹೊಡೆ: ಏಟುಕೊಡು, ಪೆಟ್ಟುಹಾಕು; ಮರಳು:ಹಿಂದಕ್ಕೆ ಬರು, ಹಿಂತಿರುಗು; ಆಲಿ: ಕಣ್ಣು; ತೋಳು: ಬಾಹು; ಕಡಿಕು: ತುಂಡು; ರಣ: ರಣರಂಗ; ಮಹಿ: ಭೂಮಿ; ಭಯಾನಕ: ಭಯಂಕರ, ಘೋರ; ರಸ: ದ್ರವ, ಲಾಲಾ; ಗುರಿ: ಉದ್ದೇಶ;

ಪದವಿಂಗಡಣೆ:
ಕಡಿದು +ಚಿಮ್ಮಿದ +ಬೆರಳುಗಳ +ಹಿ
ಮ್ಮಡಿಯ +ಘಾಯದ +ನಾಳ +ಹರಿದರೆ
ಮಡಿದ+ ಗೋಣಿನ+ ಬೆಸುಗೆ +ಬಿರಿದ +ಕಪಾಲದ್+ಓಡುಗಳ
ಉಡಿದ +ತೊಡೆಗಳ +ಹರಿದ +ಹೊಟ್ಟೆಯ
ಹೊಡೆ +ಮರಳಿದ್+ಆಲಿಗಳ +ತೋಳಿನ
ಕಡಿಕುಗಳ +ರಣಮಹಿ +ಭಯಾನಕ +ರಸಕೆ+ ಗುರಿಯಾಯ್ತು

ಅಚ್ಚರಿ:
(೧) ಕಡಿ, ಹಿಮ್ಮಡಿ, ಮಡಿ, ಉಡಿ – ಪ್ರಾಸ ಪದಗಳು
(೨) ಹ ಕಾರದ ತ್ರಿವಳಿ ಪದ – ಹರಿದ ಹೊಟ್ಟೆಯ ಹೊಡೆ

ಪದ್ಯ ೩೨: ಭೂತಗಣವು ಹೇಗೆ ಹರ್ಷಿಸಿತು?

ಕರುಳನಣಲೊಳಗಡಸಿ ನಲಿದುದು
ಮರುಳ ಬಳಗ ಕಪಾಲ ಪಾತ್ರೆಯ
ನರೆನೆಗಹಿ ಕೊಂಕಿನಲಿ ಕುಡಿದರು ಮುಕ್ತಕೇಶಿಯರು
ಮೊರೆವೆಣನನೊಡೆ ಮೆಲುತ ಹಾಡಿತು
ದುರುಳ ದಾನವನಿಕರ ಪಾಂಡವ
ಕುರುನೃಪರ ಹರಸಿದುದು ಕೈಪರೆಗುಟ್ಟಿ ಭೂತಗಣ (ಭೀಷ್ಮ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೂತಗಳ ಹಿಂಡು ಕರುಳುಗಳನ್ನು ಬಾಯಲ್ಲಿಟ್ಟು ಸಂತೋಷಪಟ್ಟಿತು. ಬಿರುಗೂದಲ ಭೂತಗಳು ಕಪಾಲ ಪಾತ್ರೆಯನ್ನೆತ್ತಿ ಕುಡಿದವು. ದುಷ್ಟರಾಕ್ಷಸರು ಇನ್ನೂ ನರಳುತ್ತಿರುವ ಹೆಣಗಳನ್ನು ತಿನ್ನುತ್ತಾ ಹಾಡಿದರು. ಭೂತಗಳೆಲ್ಲವೂ ಕೌರವ ಪಾಂಡವರಿಬ್ಬರನ್ನೂ ಚಪ್ಪಾಳೆ ತಟ್ಟಿ ಹರಸಿದವು.

ಅರ್ಥ:
ಕರುಳು: ಪಚನಾಂಗ; ಅಡಸು: ಬಿಗಿಯಾಗಿ ಒತ್ತು, ತುರುಕು; ನಲಿ: ಸಂತೋಷಪಡು; ಮರುಳ: ದಡ್ಡ; ಬಳಗ: ಗುಂಪು; ಕಪಾಲ: ತಲೆಬುರುಡೆ; ಪಾತ್ರೆ: ಬಟ್ಟಲು, ಕೊಳಗ; ನೆಗಹು: ಮೇಲಕ್ಕೆ ಎತ್ತು; ಕೊಂಕು: ಡೊಂಕು, ವಕ್ರತೆ; ಕುಡಿ: ಪಾನ ಮಾಡು; ಮುಕ್ತಕೇಶಿನಿ: ಕೂದಲು ಬಿಟ್ಟ ಭೂತ; ಮೊರೆ: ಗರ್ಜಿಸು; ಮೆಲು: ತಿನ್ನು; ಹಾಡು: ಗಾಯನ ಮಾಡು; ದುರುಳ: ದುಷ್ಟ; ದಾನವ: ರಾಕ್ಷಸ; ನಿಕರ: ಗುಂಪು; ನೃಪ: ರಾಜ; ಹರಸು: ಆಶೀರ್ವಾದ ಮಾಡು; ಭೂತ: ದೆವ್ವ; ಗಣ: ಗುಂಪು; ಕೈಪರೆ:ಚಪ್ಪಾಳೆ;

ಪದವಿಂಗಡಣೆ:
ಕರುಳನ್+ಅಣಲೊಳಗ್+ಅಡಸಿ+ ನಲಿದುದು
ಮರುಳ +ಬಳಗ +ಕಪಾಲ +ಪಾತ್ರೆಯನ್
ಅರೆನೆಗಹಿ+ ಕೊಂಕಿನಲಿ +ಕುಡಿದರು+ ಮುಕ್ತಕೇಶಿಯರು
ಮೊರೆವೆಣನನೊಡೆ +ಮೆಲುತ +ಹಾಡಿತು
ದುರುಳ +ದಾನವ+ನಿಕರ+ ಪಾಂಡವ
ಕುರು+ನೃಪರ +ಹರಸಿದುದು +ಕೈಪರೆಗುಟ್ಟಿ+ ಭೂತಗಣ

ಅಚ್ಚರಿ:
(೧) ಸಂತೋಷವನ್ನು ಚಿತ್ರಿಸುವ ಪರಿ – ಹರಸಿದುದು ಕೈಪರೆಗುಟ್ಟಿ ಭೂತಗಣ

ಪದ್ಯ ೮೪: ಮದದಾನೆಗಳೇಕೆ ಕೋಪಗೊಂಡವು?

ವ್ರಣದ ಬಂಧದ ಜಗಿಯ ದಾಡೆಗೆ
ಕುಣಿದು ಕವಿವ ವಿಹಂಗತತಿಗಳಿ
ನಣಲೊಳಡಸಿದ ತಲೆಗೆ ಕೈಗುತ್ತುವ ನಿಶಾಟರಲಿ
ಹೆಣನ ಬೀಸುವ ಕೈಗಳಲಿ ಸಂ
ದಣಿಸುವಸುರರಿನುರು ಕಪಾಲವ
ಕೆಣಕುವಳಿಯಿಂ ಚಂಡಿಯಾದುವು ಸೊಕ್ಕಿದಾನೆಗಳು (ಭೀಷ್ಮ ಪರ್ವ, ೪ ಸಂಧಿ, ೮೪ ಪದ್ಯ)

ತಾತ್ಪರ್ಯ:
ಗಾಯದಿಂದಾದ ಮಾಂಸಾದಿಗಳಿಂದ ಕೂಡಿದ ದಂತಕ್ಕೆ ರಣಹದ್ದುಗಳೇ ಮೊದಲಾದ ಪಕ್ಷಿಗಳೆರಗುತ್ತಿದ್ದವು. ಮಿದುಳಿಂದ ಗಿಜಿಬಿಜಿಯಾದ ತಲೆಗೆ ರಾಷಸಗನ ಕೈಯಿಡುತ್ತಿದ್ದವು. ಹೆಣಗಲ ಮುಂಡಗಳು ಬೀಸುವ ಕೈಗಳಿಗೆ ರಾಕ್ಷಸರು ಮುತ್ತುತ್ತಿದ್ದರು. ಮದಧಾರೆಗೆ ದುಂಬಿಗಳು ಮುಸುಕುವುವು. ಇದರಿಂದ ಮದದಾನೆಗಳು ಕೋಪಗೊಳ್ಳುತ್ತಿದ್ದವು.

ಅರ್ಥ:
ವ್ರಣ: ಹುಣ್ಣು, ಗಾಯ; ಬಂಧ: ಕಟ್ಟು, ಬಂಧನ; ಜಗಿ:ಅಗಿ, ಚುಚ್ಚು; ದಾಡೆ: ದವಡೆ, ಹಲ್ಲು; ಕುಣಿ: ನರ್ತಿಸು; ಕವಿ: ಆವರಿಸು; ವಿಹಂಗ: ಹಕ್ಕಿ; ತತಿ: ಸಮೂಹ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಕುತ್ತು: ತೊಂದರೆ, ಆಪತ್ತು; ನಿಶಾಟ: ರಾಕ್ಷಸ; ಹೆಣ: ಜೀವವಿಲ್ಲದ ಶರೀರ; ಬೀಸು: ತೂರು; ಕೈ: ಹಸ್ತ; ಸಂದಣಿ: ಗುಂಪು; ಅಸುರ: ರಾಕ್ಷಸ; ಉರು: ಹೆಚ್ಚಾದ, ಅತಿದೊಡ್ಡ; ಕಪಾಲ:ತಲೆಬುರುಡೆ; ಕೆಣಕು: ರೇಗಿಸು; ಚಂಡಿ: ಉಗ್ರವಾದುದು; ಸೊಕ್ಕು: ಮದ; ಆನೆ: ಗಜ;

ಪದವಿಂಗಡಣೆ:
ವ್ರಣದ+ ಬಂಧದ +ಜಗಿಯ +ದಾಡೆಗೆ
ಕುಣಿದು +ಕವಿವ +ವಿಹಂಗ+ತತಿಗಳಿನ್
ಅಣಲೊಳ್+ಅಡಸಿದ +ತಲೆಗೆ +ಕೈಗುತ್ತುವ +ನಿಶಾಟರಲಿ
ಹೆಣನ +ಬೀಸುವ +ಕೈಗಳಲಿ +ಸಂ
ದಣಿಸುವ್+ಅಸುರರಿನ್+ಉರು +ಕಪಾಲವ
ಕೆಣಕುವಳಿಯಿಂ +ಚಂಡಿಯಾದುವು +ಸೊಕ್ಕಿದಾನೆಗಳು

ಅಚ್ಚರಿ:
(೧) ಮಾಂಸವನ್ನು ಹೇಗೆ ಭಕ್ಷಿಸಿದವರು – ವಿಹಂಗ, ನಿಶಾಟ, ಅಸುರ

ಪದ್ಯ ೧೦: ಭೂತದ ಆಕಾರವು ಹೇಗಿತ್ತು?

ಮೂರು ಮೊಗ ಬಾಯಾರು ಕಣ್ಣೀ
ರಾರು ಕೃತ್ಯೆಯ ಬೆನ್ನಲೊಪ್ಪುವ
ಮೂರು ಕಾಲುಗಳೇಳುಕೈ ಕಣ್ಣೊಂದು ನೆತ್ತಿಯಲಿ
ತೋರಕರದ ಕಪಾಲವೊಂದುರೆ
ಮೀರಿ ಮೆರೆವ ತ್ರಿಶೂಲ ಬಟ್ಟಲ
ಭೂರಿ ಭೀಕರ ಭೂತ ನುಡಿದುದು ಕೃತ್ಯವೇನೆಂದು (ಅರಣ್ಯ ಪರ್ವ, ೨೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಆ ಕೃತ್ಯೆಗೆ ಮೂರು ಮುಖಗಳು, ಆರು ಬಾಯಿಗಳು, ಹನ್ನೆರಡು ಕಣ್ಣುಗಳು, ಬೆನ್ನಲ್ಲಿ ಮೂರು ಕಾಲುಗಳು, ಏಳು ಕೈಗಳು, ನೆತ್ತಿಯಲ್ಲಿ ಒಂದು ಕಣ್ಣು, ದೊಡ್ಡ ಕೈಯಲ್ಲಿ ಹಿಡಿದ ಮನುಷ್ಯರ ತಲೆ ಚಿಪ್ಪು, ಭಯಂಕರ ತ್ರಿಶೂಲ, ಭಯಂಕರವಾಗಿದ್ದ ಆ ಕೃತ್ಯೆಯು ಕನಕನನ್ನು ನನಗೇನು ಕೆಲಸವೆಂದು ಕೇಳಿತು.

ಅರ್ಥ:
ಮೊಗ: ಮುಖ; ಬಾಯಿ: ಮುಖದ ಅವಯವ; ಕಣ್ಣು: ನಯನ; ಕೃತ್ಯ: ಕೆಲಸ; ಬೆನ್ನು: ಹಿಂಭಾಗ; ಒಪ್ಪು: ಸಮ್ಮತಿ; ಕಾಲು: ಪಾದ; ಕೈ: ಹಸ್ತ; ನೆತ್ತಿ: ಶಿರ; ತೋರು: ಕಾಣಿಸು; ಕರ: ಹಸ್ತ; ಕಪಾಲ: ತಲೆಬುರುಡೆ; ಮೀರು: ದಾಟು; ತ್ರಿಶೂಲ: ಮೂರುಮೊನೆಯ ಆಯುಧ; ಬಟ್ಟಲ: ಚಿಪ್ಪು, ಚಿಕ್ಕ ಪಾತ್ರೆ; ಭೂರಿ: ಹೆಚ್ಚು, ಅಧಿಕ; ಭೀಕರ: ಭಯವನ್ನುಂಟು ಮಾಡುವ; ನುಡಿ: ಮಾತಾಡು; ಈರಾರು: ಹನ್ನೆರಡು;

ಪದವಿಂಗಡಣೆ:
ಮೂರು +ಮೊಗ +ಬಾಯಾರು +ಕಣ್
ಈರಾರು+ ಕೃತ್ಯೆಯ +ಬೆನ್ನಲೊಪ್ಪುವ
ಮೂರು +ಕಾಲುಗಳ್+ಏಳುಕೈ +ಕಣ್ಣೊಂದು +ನೆತ್ತಿಯಲಿ
ತೋರ+ಕರದ+ ಕಪಾಲವೊಂದ್+ಉರೆ
ಮೀರಿ +ಮೆರೆವ +ತ್ರಿಶೂಲ +ಬಟ್ಟಲ
ಭೂರಿ +ಭೀಕರ +ಭೂತ +ನುಡಿದುದು +ಕೃತ್ಯವೇನೆಂದು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೂರಿ ಭೀಕರ ಭೂತ

ಪದ್ಯ ೧೬: ಧರ್ಮಜನೇಕೆ ಮಾತಾಡಲು ತಡವಡಿಸಿದನು?

ಅರಸಿಯಾರೋಗಿಸಿದ ಹದನನು
ಬರವಿನಲಿ ನೃಪ ತಿಳಿಯಲಂತಃ
ಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
ಉರಿಹೊಡೆದ ಕೆಂದಾವರೆಯ ವೊಲ್
ಕರುಕುವರಿಯಲು ಮುಖ ಕಪಾಲದಿ
ಕರವನಿಟ್ಟು ಮಹೀಶ ತೊನಹುತ ನುಡಿದನಿಂತೆಂದು (ಅರಣ್ಯ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಗಮನವನ್ನು ನೋಡಿ ಧರ್ಮಜನು ಅವಳ ಊಟವಾಗಿದೆಯೆಂದು ತಿಳಿದನು. ಅವನ ಮನಸ್ಸು ಕಳವಳಗೊಂಡು ಕಣ್ಣೀರಿನ ಧಾರೆ ಹರಿಯಿತು. ಉರಿಹೊಡೆದ ಕೆಂದಾವರೆಯಂತೆ ಅವನ ಮುಖ ಕಪ್ಪಾಯಿತು. ಅವನು ಕೈಯನ್ನು ಕೆನ್ನೆಯಮೇಲಿಟ್ಟು ತೊದಲುತ್ತಾ ದ್ರೌಪದಿಗೆ ಹೀಗೆ ನುಡಿದನು.

ಅರ್ಥ:
ಅರಸಿ: ರಾಣಿ; ಆರೋಗಿಸು: ಸೇವಿಸು; ಹದ: ಸ್ಥಿತಿ; ಬರುವು: ಆಗಮನ; ನೃಪ: ರಾಜ; ತಿಳಿ: ಅರ್ಥೈಸು; ಅಂತಃಕರಣ: ಮನಸ್ಸು; ಕಳವಳ: ಗೊಂದಲ; ಸುರಿದು: ಹರಿಸು; ನಯನ: ಕಣ್ಣು; ಜಲಧಾರೆ: ವರ್ಷ, ಮಳೆ; ಉರಿ: ಹೊಗೆ; ಕೆಂದಾವರೆ: ಕೆಂಪಾವದ ಕಮಲ; ಮುಖ: ಆನನ; ಕಪಾಲ: ಕೆನ್ನೆ; ಕರುಕು: ಕಪ್ಪು; ಕರ: ಹಸ್ತ; ಮಹೀಶ: ರಾಜ; ತೊನಹುತ: ತೊದಲುತ್ತ; ನುಡಿ: ಮಾತಾಡು;

ಪದವಿಂಗಡಣೆ:
ಅರಸಿ+ಆರೋಗಿಸಿದ +ಹದನನು
ಬರವಿನಲಿ +ನೃಪ +ತಿಳಿಯಲ್+ಅಂತಃ
ಕರಣ+ ಕಳವಳಗೊಳಲು +ಸುರಿದುದು +ನಯನ +ಜಲಧಾರೆ
ಉರಿಹೊಡೆದ+ ಕೆಂದಾವರೆಯ +ವೊಲ್
ಕರುಕುವರಿಯಲು+ ಮುಖ +ಕಪಾಲದಿ
ಕರವನಿಟ್ಟು +ಮಹೀಶ +ತೊನಹುತ +ನುಡಿದನ್+ಇಂತೆಂದು

ಅಚ್ಚರಿ:
(೧) ಮನಸ್ಸು ನೊಂದಿತು ಎಂದು ಹೇಳಲು – ಅಂತಃಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
(೨) ಉಪಮಾನದ ಪ್ರಯೋಗ – ಉರಿಹೊಡೆದ ಕೆಂದಾವರೆಯ ವೊಲ್ಕರುಕುವರಿಯಲು ಮುಖ

ಪದ್ಯ ೭೨: ಶಿವನು ತತ್ಪುರ್ಷಮುಖದಿಂದ ಹೇಗೆ ಹೊಳೆದನು?

ಪರಶು ಡಮರುಗ ಖಡ್ಗ ಖೇಟಕ
ಶರ ಧನುಃ ಶೂಲದ ಕಪಾಲದ
ಕರದ ರಕ್ತಾಂಬರದ ಪಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಲಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ (ಅರಣ್ಯ ಪರ್ವ, ೭ ಸಂಧಿ, ೭೨ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಡಮರುಗ, ಕತ್ತಿಗುರಾಣಿ, ಬಿಲ್ಲುಬಾಣ, ಶೂಲ, ಕಪಾಲ ಹಸ್ತ, ಕೆಂಪುಬಟ್ಟೆ, ಸರ್ಪಭೂಷಣ, ಜಿಂಕೆ, ಅಭಯ ಹಸ್ತಗಳಿಂದ ಮಿಂಚಿನೆರಕವೋ ಎಂಬಂತೆ, ಅಘೋರ ರೂಪದ ಇನ್ನೊಂದು ರೀತಿಯೋ ಎಂಬಂತೆ ತತ್ಪುರುಷಮುಖದಿಂದ ಶಿವನು ರಾರಾಜಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಡಮರುಗ: ಸಂಗೀತದ ವಾದ್ಯ; ಖಡ್ಗ: ಕತ್ತಿ, ಕರವಾಳ; ಖೇಟಕ: ಗುರಾಣಿ; ಶರ: ಬಾಣ; ಧನು: ಬಿಲ್ಲು; ಶೂಲ: ತ್ರಿಶೂಲ; ಕಪಾಲ: ತಲೆಬುರುಡೆ; ಕರ: ಹಸ್ತ; ರಕ್ತ: ನೆತ್ತರು; ಅಂಬರ: ಬಟ್ಟೆ; ಫಣಿ: ಹಾವು; ಭೋಗ: ಹಾವಿನ ಹೆಡೆ; ಭೂಷಣ: ಅಲಂಕಾರ; ಸ್ಫುರ: ಚೆನ್ನಾಗಿರುವ; ಅಘೋರ: ಶಿವನ ಪಂಚಮುಖಗಳಲ್ಲಿ ಒಂದು; ಅಭೇದ: ಬಿರುಕಾಗದ, ಛಿದ್ರವಾಗದ; ಅಭಯ: ನಿರ್ಭೀತ; ಕರ: ಹಸ್ತ; ಮೃಗ: ಜಿಂಕೆ; ಮುಖ: ಆನನ; ಮೆರೆ: ಹೊಳೆ, ಪ್ರಕಾಶಿಸು; ಎರಕ: ಅನುರಾಗ, ಸುರಿ; ಮಿಂಚು: ಹೊಳಪು, ಕಾಂತಿ;

ಪದವಿಂಗಡಣೆ:
ಪರಶು +ಡಮರುಗ +ಖಡ್ಗ +ಖೇಟಕ
ಶರ +ಧನುಃ +ಶೂಲದ +ಕಪಾಲದ
ಕರದ +ರಕ್ತಾಂಬರದ +ಫಣಿಪನ+ ಭೋಗ +ಭೂಷಣದ
ಸ್ಫುರದ್+ಅಘೋರದ್+ಅಭೇದದ್+ಅಭಯದ
ಕರದ +ಪರಶು +ಮೃಗಂಗಳಲಿ +ತ
ತ್ಪುರುಷ +ಮುಖದಲಿ +ಮೆರೆದನ್+ಎರಕದ +ಮಿಂಚಿನಂದದಲಿ

ಅಚ್ಚರಿ:
(೧) ಅಘೋರ, ಅಭೇದ, ಅಭಯ – ಪದಗಳ ಬಳಕೆ