ಪದ್ಯ ೮: ಕೃಪನು ಏಕೆ ಕೆಟ್ಟ ಹೆಸರು ಬರುವುದೆಂದು ಹೇಳಿದನು?

ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡುಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ (ಗದಾ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ಕೃಪನು ಮಾತನಾಡುತ್ತಾ, ಕೃತವರ್ಮ, ಶತ್ರುಗಳನ್ನು ಕಗ್ಗೊಲೆ ಮಾಡಲು ರಾಜನ್ ಆದೇಶದಂತೆ ನಾವು ಬಂದಿದ್ದೇವೆ. ಪಾಂಡವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರಿಗೆ ಶ್ರೀಕೃಷ್ಣನ ರಕ್ಷಣೆ ಬಲವಾಗಿದೆ. ಆದುದರಿಮ್ದ ಈ ಕೆಲಸ ಮುಗಿದ ಮೇಲೆ ನಮಗೆ ಕೆಟ್ಟಹೆಸರು ಬರುತ್ತದೆ ಎಂದು ಹೇಳಿದನು.

ಅರ್ಥ:
ಲೇಸು: ಒಳಿತು; ಬಳಿಕ: ನಂತರ; ಆಸುರ: ಭಯಂಕರ; ಕಗ್ಗೊಲೆ: ಸಾಯಿಸು; ಆದೇಶ: ಅಪ್ಪಣೆ; ರಾಜ: ನೃಪ; ಬಂದು: ಆಗಮಿಸು; ಪಾಳೆಯ: ಬಿಡಾರ; ಘಾಸಿ: ಪೆಟ್ಟು; ಸುತ: ಮಕ್ಕಳು; ಕಾಹು; ರಕ್ಷಣೆ; ಘನ: ಶ್ರೇಷ್ಠ; ಕಾಳ: ಕಪ್ಪು, ಕತ್ತಲೆ; ತಪ್ಪಿದ: ಜಾರಿದ; ಅಪಕೀರ್ತಿ: ಕೆಟ್ಟ ಹೆಸರು;

ಪದವಿಂಗಡಣೆ:
ಲೇಸಲೈ +ಕೃತವರ್ಮ +ಬಳಿಕೇನ್
ಆಸುರದ +ಕಗ್ಗೊಲೆಗೆ +ರಾಜ
ಆದೇಶದಲಿ +ನಾವ್ +ಬಂದೆವ್+ಈ+ ಪಾಂಡವರ +ಪಾಳೆಯಕೆ
ಘಾಸಿಯಾಗರು +ಪಾಂಡುಸುತರಿಗೆ
ವಾಸುದೇವನ +ಕಾಹು +ಘನ +ಕಾ
ಳಾಸ +ತಪ್ಪಿದ +ಬಳಿಕ +ನಮಗ್+ಅಪಕೀರ್ತಿ +ಬಹುದೆಂದ

ಅಚ್ಚರಿ:
(೧) ಪಾಂಡವರು, ಪಾಂಡುಸುತರು – ಸಾಮ್ಯಾರ್ಥ ಪದ
(೨) ಪಾಂಡವರನ್ನು ಕೊಲ್ಲಲೇಕೆ ಸಾಧ್ಯವಿಲ್ಲ – ಘಾಸಿಯಾಗರು ಪಾಂಡುಸುತರಿಗೆ ವಾಸುದೇವನ ಕಾಹು

ಪದ್ಯ ೭: ಅಶ್ವತ್ಥಾಮನ ವಾದವು ಹೇಗಿತ್ತು?

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳನಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಗೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ (ಗದಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಎಚ್ಚರಗೊಂಡ ಕೃಪನು, ಏನು ಅಶ್ವತ್ಥಾಮ, ನಿನ್ನ ಕೆಲಸವನ್ನು ಹೇಗೆ ಮಾಡುವೆ ಎಂದು ಕೇಳಲು, ಅಶ್ವತ್ಥಾಮನು ಕಾಗೆಗಳ ಗೂಡುಗಳನ್ನು ಮುರಿದು ಗೂಬೆಯು ಕಾಗೆಗಳನ್ನು ಕೊಲ್ಲುತ್ತಿದೆ, ಈ ನಿದರ್ಶನದಿಂದ ನಾನು ಪಾಂಡವಸೇನೆಯನ್ನು ಕೊಂದರೆ ತಪ್ಪೆನು ಎಂದು ಕೇಳಿದನು.

ಅರ್ಥ:
ಸುತ: ಮಗ; ಕಾರ್ಯ: ಕೆಲಸ; ಅನುಸಂಧಾನ: ಪರಿಶೀಲನೆ, ಏರ್ಪಾಡು; ವಾಯ: ಮೋಸ, ಕಪಟ; ಸಂಗ: ಜೊತೆ; ನಿಶಾಟ: ರಾತ್ರಿಯ ಆಟ; ನಿಶ: ರಾತ್ರಿ; ಇರಿ: ಚುಚ್ಚು; ಗೂಡು: ಮನೆ; ಅಬ್ಬರಿಸು: ಆರ್ಭಟಿಸು; ನಿದರುಶನ: ತೋರು; ಸೇನೆ: ಸೈನ್ಯ; ಕಗ್ಗೊಲೆ: ಸಾಯಿಸು; ಹೊಲ್ಲೆಹ: ದೋಷ;

ಪದವಿಂಗಡಣೆ:
ಏನು +ಗುರುಸುತ+ ಕಾರ್ಯದ್+ಅನುಸಂ
ಧಾನವೇನ್+ಎನೆ +ವಾಯಸಂಗಳನ್
ಆ+ ನಿಶಾಟನನ್+ಇರಿವುತದೆ +ಗೂಡುಗಳನ್+ಅಬ್ಬರಿಸಿ
ಈ +ನಿದರುಶನದಿಂದ +ಪಾಂಡವ
ಸೇನೆಯನು +ಕಗ್ಗೊಲೆಗೊಳಗೆ ಕೊಲಲ್
ಏನು +ಹೊಲ್ಲೆಹ +ಮಾವ +ಎಂದನು +ಗುರುಸುತನು +ಕೃಪಗೆ

ಅಚ್ಚರಿ:
(೧) ಗೂಬೆ ಎಂದು ಹೇಳಲು ನಿಶಾಟನ ಪದದ ಬಳಕೆ
(೨) ಕೃಪನನ್ನು ಮಾವ ಎಂದು ಅಶ್ವತ್ಥಾಮನು ಸಂಭೋದಿಸಿದುದು

ಪದ್ಯ ೫೫: ಮನ್ಮಥನು ಯಾರ ಕೊಲೆಗೆ ಅಣಿಯಾದನು?

ಹಾಸಿದೆಳೆದಳಿರೊಣಗಿದುದು ಹೊಗೆ
ಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು
ಆ ಶಶಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನಾ ಕೀಚಕನ ಕಗ್ಗೊಲೆಗೆ (ವಿರಾಟ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಹಾಸಿದ್ದ ಎಳೆಯ ಚಿಗುರು ಕೀಚಕನ ಮೈಯ ಬಿಸಿಗೆ ಒಣಗಿ ಹೋಯಿತು, ಅವನು ಉಸಿರು ಬಿಟ್ಟಾಗ ಹೊಗೆ ಹೊರಹೊಮ್ಮಿತು, ಸುಳಿ ಬಾಳೆಯೆಲೆಯಿಂದ ಬೀಸಿದರೆ ಅವನ ಮೈ ಝಳಕ್ಕೆ ಅದು ಬಾಡಿ ಹೋಯಿತು, ಚಂದ್ರ, ಕೋಗಿಲೆ, ದುಂಬಿ, ಕನ್ನೈದಿಲೆ, ಮಲ್ಲಿಗೆಗಳನ್ನು ಕೈಬೀಸಿ ಕರೆದು ಮನ್ಮಥನು ಕೀಚಕನ ಕಗ್ಗೊಲೆಗೆ ಅಣಿಯಾದನು.

ಅರ್ಥ:
ಹಾಸು: ಹರಡು; ಎಲೆ: ಪರ್ಣ; ಒಣಗು: ಬಾಡು; ಹೊಗೆ: ಧೂಮ; ಸೂಸು: ಹೊರಹೊಮ್ಮು; ಸುಯಿಲು: ನಿಟ್ಟುಸಿರು; ಮೆಲ್ಲನೆ: ನಿಧಾನ; ಬೀಸು: ಹರಹು; ಸುಳಿ: ಆವರಿಸು, ಮುತ್ತು; ಬಾಳೆ: ಕದಳಿ; ಝಳ: ಕಾಂತಿ; ಶಶಿ: ಚಂದ್ರ; ಕೋಗಿಲೆ: ಪಿಕ; ತುಂಬಿ: ದುಂಬಿ, ಜೇನು ನೋಣ; ಸರೋಜ: ಕಮಲ; ಕೈವೀಸು: ಕೈಬೀಸಿ ಕರೆ; ಕುಸುಮ: ಹೂವು; ಅಸ್ತ್ರ: ಶಸ್ತ್ರ, ಆಯುಧ; ಕಗ್ಗೊಲೆ: ಭೀಕರವಾದ ವಧೆ;

ಪದವಿಂಗಡಣೆ:
ಹಾಸಿದ್+ಎಳೆದಳಿರ್+ಒಣಗಿದುದು +ಹೊಗೆ
ಸೂಸಿದುದು +ಸುಯಿಲಿನಲಿ +ಮೆಲ್ಲನೆ
ಬೀಸುತಿರೆ+ ಸುಳಿ+ಬಾಳೆಯೆಲೆ +ಬಾಡಿದುದು +ಝಳಹೊಯ್ದು
ಆ +ಶಶಿಯ+ ಕೋಗಿಲೆಯ+ ತುಂಬಿಯನ್
ಆ+ ಸರೋಜವ+ ಮಲ್ಲಿಗೆಯ +ಕೈ
ವೀಸಿದನು +ಕುಸುಮಾಸ್ತ್ರನ್+ಆ+ ಕೀಚಕನ +ಕಗ್ಗೊಲೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾಸಿದೆಳೆದಳಿರೊಣಗಿದುದು ಹೊಗೆಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು

ಪದ್ಯ ೩೨: ಊರ್ವಶಿಯು ವಿನಯದಿ ಹೇಗೆ ಉತ್ತರಿಸಿದಳು?

ತಾಯನೇಮದಲೈವರಿಗೆ ಕಮ
ಲಾಯತಾಕ್ಷಿಅಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ (ಅರಣ್ಯ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನ, ತಾಯಿಯ ಮಾತು ಕೇಳಿ ನೀವೈವರು ದ್ರೌಪದಿಯನ್ನು ಕೂಡಿದಿರಲ್ಲವೇ? ಇಂದ್ರನಾದರೋ ನಿಮ್ಮ ತಂದೆ, ತಂದೆಯ ಮಾತನ್ನು ಮೀರಲು ಬರುತ್ತದೆಯೇ? ಇಂದ್ರನು ಕಳಿಸಿದುದರಿಂದ ನಾನು ಬಂದೆ, ಮನ್ಮಥನು ತನ್ನ ಬಾಣಗಳಿಂದ ನನ್ನನ್ನು ಕಗ್ಗೊಲೆ ಮಾಡುತ್ತಿದ್ದಾನೆ, ಅದನ್ನು ತಪ್ಪಿಸುವ ಉಪಾಯವು ನಿನಗೆ ತಿಳಿದಿದೆ ಎಂದು ಊರ್ವಶಿಯು ವಿನಯದಿಂದ ಹೇಳಿದಳು.

ಅರ್ಥ:
ತಾಯ: ಮಾತೆ; ನೇಮ: ನಿಯಮ; ಕಮಲಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಕೂಟ: ಜೊತೆ; ಸುರರಾಯ: ದೇವತೆಗಳ ರಾಜ (ಇಂದ್ರ); ಅಯ್ಯ: ತಂದೆ; ವಿಲಂಘ್ಯ: ಮೀರು; ಪಿತೃ: ತಂದೆ; ವಚನ: ನುಡಿ, ಮಾತು; ರಾಯ: ರಾಜ; ಅಟ್ಟು: ಕಳಿಸು; ಬಂದೆ: ಆಗಮಿಸಿದೆ; ಕುಸುಮಾಯುಧ: ಮನ್ಮಥ; ಕಗ್ಗೊಲೆ: ಸಾಯಿಸು, ಸಾವು; ಕೆದರು: ಹರಡು; ಉಪಾಯ: ಯುಕ್ತಿ; ವನಿತೆ: ಹೆಣ್ಣು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ತಾಯ+ನೇಮದಲ್+ಐವರಿಗೆ+ ಕಮ
ಲಾಯತಾಕ್ಷಿಯ +ಕೂಟವೇ +ಸುರ
ರಾಯ +ನಿಮ್+ಅಯ್ಯನು+ ವಿಲಂಘ್ಯವೆ +ನಿನಗೆ +ಪಿತೃವಚನ
ರಾಯನ್+ಅಟ್ಟಲು+ ಬಂದೆ+ನೀ+ ಕುಸು
ಮಾಯುಧನ +ಕಗ್ಗೊಲೆಯ +ಕೆದರುವ್
ಉಪಾಯವನು +ನೀ +ಬಲ್ಲೆ+ಎಂದಳು +ವನಿತೆ +ವಿನಯದಲಿ

ಅಚ್ಚರಿ:
(೧) ಅರ್ಜುನನಿಗೆ ತಿರುಗುತ್ತರವ ನೀಡುವ ಪರಿ – ವಿಲಂಘ್ಯವೆ ನಿನಗೆ ಪಿತೃವಚನ
(೨) ಅರ್ಜುನನ ಮನಸ್ಸನ್ನು ತಿರುಗಿಸುವ ಪರಿ – ಕುಸುಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆ