ಪದ್ಯ ೫೬: ಬಾಲ್ಯದಲ್ಲಿ ಕೃಷ್ಣನ ಸಾಧನೆಗಳಾವುವು?

ಸೇದಿದನು ಪೂತನಿಯಸುವ ನವ
ಳಾದರಿಸಿ ಮೊಲೆವಾಲನೊಡಿಸೆ
ಪಾದತಳ ಸೋಂಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನನ್ನು ಹಾಲು ಕುಡಿಸಲು ಬಂದ ಪೂತನಿಯ ಎದೆಹಾಲನ್ನು ಕುಡಿಯುವ ನೆವದಲ್ಲಿ ಅವಳ ಪ್ರಾಣವಾಯುಗಳನ್ನೇ ಎಳೆದುಬಿಟ್ಟನು. ಇವನ ಪಾದಗಳು ಸೋಕಿದ ಮಾತ್ರಕ್ಕೆ ತೊಟ್ಟಿಲ ಬಂಡಿ ಶಕಟಾಸುರ ಮುರಿದು ಬಿದ್ದಿತು. ಎಲ್ಲಿಯೂ ಹೋಗದಂತೆ ತುಂಟಾಟ ಮಾದದಿರಲೆಂದು ಯಶೋದೆಯು ಇವನನ್ನು ಒರಳು ಕಲ್ಲಿಗೆ ಕಟ್ಟಿದ್ದಳು, ಬಾಲಕ ಕೃಷ್ಣನು ಈ ಒರಳುಕಲ್ಲನ್ನು ಎಳೆದುಕೊಂಡು ಎರಡು ಮರಗಳ ನಡುವೆ ಹೋಗಲು ಯಮಳಾರ್ಜುನ ವೃಕ್ಷವು ಮುರಿದವು. ಕರುಗಳನ್ನು ಕಾಯುವ ಇವನಿಂದಲೇ ಕಂಸ ಪರಿವಾರವು ನಾಶವಾಯಿತು ಎಂದು ಕೃಷ್ಣನ ಹಿರಿಮೆಯನ್ನು ಭೀಷ್ಮರು ತಿಳಿಸಿದರು.

ಅರ್ಥ:
ಸೇದು: ಸೇಂದು, ಮುದುಡು; ಅಸು: ಪ್ರಾಣ; ಆದರ: ಪ್ರೀತಿ, ಆಸಕ್ತಿ; ಮೊಲೆ: ಸ್ತನ; ವಾಲನೂಡಿಸೆ: ಹಾಲು ಕುಡಿಸು; ಪಾದತಳ: ಚರಣ; ಸೋಂಕು: ಮುಟ್ಟುವಿಕೆ, ಸ್ಪರ್ಶ; ತೊಟ್ಟಿಲು: ಮಕ್ಕಳನ್ನು ತೂಗಿ ಮಲಗಿಸುವ ಸಾಧನ; ಬಂಡಿ: ರಥ; ನುಗ್ಗು: ಒಳಗೆ ಪ್ರವೇಶಿಸು; ಕಟ್ಟು: ಬಂಧಿಸು; ಒರಳು: ಒರಳುಕಲ್ಲು; ಎಳೆ: ತನ್ನ ಕಡೆಗೆ ಸೆಳೆದುಕೊ, ಆಕರ್ಷಿಸು; ಅರೆ:ಅರ್ಧಭಾಗ; ಬೀದಿ: ರಸ್ತೆ; ಮರ: ತರು; ಮುರಿ: ಸೀಳು; ಕರು: ಚಿಕ್ಕ ದನ; ಕಾದು: ಕಾಯುವ; ಕೈ: ಕರ, ಹಸ್ತ; ಮಡಿ: ಸಾವು; ಪರಿವಾರ: ವಂಶ;

ಪದವಿಂಗಡಣೆ:
ಸೇದಿದನು +ಪೂತನಿ+ಅಸುವ +ನವ
ಳಾದರಿಸಿ+ ಮೊಲೆವಾಲನ್+ಊಡಿಸೆ
ಪಾದತಳ+ ಸೋಂಕಿನಲಿ+ ತೊಟ್ಟಿಲ +ಬಂಡಿ +ನುಗ್ಗಾಯ್ತು
ಸೇದಿ +ಕಟ್ಟಿದ್+ಒರಳನ್+ಎಳೆದರೆ
ಬೀದಿಯಲಿ +ಮರಮುರಿದುದ್+ಈ+ ಕರು
ಕಾದವನ +ಕೈಯಿಂದ +ಮಡಿದುದು +ಕಂಸ +ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)

ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ

ಪದ್ಯ ೫೫: ದ್ವಾಪರದಲ್ಲಿ ಕಾಲನೇಮಿ ಯಾವ ರೂಪದಲ್ಲಿ ಕಾಣಿಸಿಕೊಂಡಿದ್ದನು?

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ (ಸಭಾ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಮಹಾದೈತ್ಯನಾದ ಕಾಲನೇಮಿಯು ದ್ವಾಪರ ಯುಗದಲ್ಲಿ ಯಾದವರ ಸೀಮೆಯಲ್ಲಿ ಕಂಸನೆಂಬ ಹೆಸರಿನಿಂದ ಹುಟ್ಟಿದನು. ಅವನ ದುಷ್ಟ ಪರಿವಾರದಲ್ಲಿ ಧೇನುಕ, ಕೇಶಿ, ವತ್ಸ, ತೃಣಾವರ್ತ ಮೊದಲಾದ ಹಲವರಿದ್ದರು. ಈ ಮೂಢನಾದ ಶಿಶುಪಾಲನು ಅವರಿಗೆ ಯಾವವಿಧದಲ್ಲೂ ಸಮಾನನಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಮಹ: ಹಿರಿಯ, ದೊಡ್ಡ; ಅಸುರ: ದಾನವ; ಸನಾಮ: ಹೆಸರಿನಿಂದ ಪ್ರಸಿದ್ಧವಾದ; ಕಾಲ: ಸಮಯ; ಭೂಮಿ: ಧರಣಿ; ಜನಿಸು: ಹುಟ್ಟು; ಅಭಿಧಾನ: ಹೆಸರು; ಮರುಳು: ಮೂಢ; ಹವಣು: ಅಳತೆ, ಪ್ರಮಾಣ; ತದೀಯ: ಅದಕ್ಕೆ ಸಂಬಂಧಪಟ್ಟ; ಸ್ತೋಮ: ಗುಂಪು; ಹಲರು: ಬಹಳ, ಮುಂತಾದ; ಇಹರು: ಇರುವರು; ದುಷ್ಪರಿವಾರ: ಕೆಟ್ಟ ಪರಿಜನ;

ಪದವಿಂಗಡಣೆ:
ಆ +ಮಹಾಸುರ+ ಕಾಲನೇಮಿ +ಸ
ನಾಮನ್+ಈ+ ಕಾಲದಲಿ +ಯಾದವ
ಭೂಮಿಯಲಿ +ಜನಿಸಿದನಲೇ+ ಕಂಸಾಭಿಧಾನದಲಿ
ಈ+ ಮರುಳು +ಹವಣೇ +ತದೀಯ
ಸ್ತೋಮ +ಧೇನುಕ +ಕೇಶಿ +ವತ್ಸ +ತೃ
ಣಾಮಯರು +ಹಲರಿಹರು+ ದುಷ್ಪರಿವಾರ+ ಕಂಸನಲಿ

ಅಚ್ಚರಿ:
(೧) ಕಂಸನ ಪರಿವಾರದವರು – ಕಂಸ, ಧೇನುಕ, ಕೇಶಿ, ವತ್ಸ, ತೃಣಾವರ್ತ
(೨) ಸನಾಮ, ಅಭಿಧಾನ – ಸಾಮ್ಯಾರ್ಥ ಪದಗಳು

ಪದ್ಯ ೧೬: ಪಾಂಡವರಿಗೆ ವೈರಿಗಳಾರು?

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆಂದ (ಸಭಾ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೇ, ನಿಮ್ಮವರಾದ ಕೌರವರನ್ನೇ ಮೊದಲು ತೆಗೆದುಕೊಳ್ಳೋಣ, ದುರ್ಯೋಧನನ ಜೊತೆಗೂಡಿದ ಕರ್ಣ, ಶಕುನಿ, ಜಯದ್ರಥಾದಿಗಳು ನಿಮ್ಮ ಏಳಿಗೆಯನ್ನು ಸಹಿಸುವರೇ? ಅವರು ಹೊಟ್ಟೆಯಲ್ಲೇ ಕುದಿಯುತ್ತಾರೆ. ಅದಲ್ಲದೆ ಕಂಸನ ಪರಿವಾರ ನಿಮ್ಮ ವಿರೋಧಿಗಳು, ಜರಾಸಂಧನ ವಿಷಯವನ್ನು ಏನೆಂದು ವರ್ಣಿಸಲಿ ಎಂದು ಕೃಷ್ಣನು ಹೇಳಿದನು.

ಅರ್ಥ:
ಮೊದಲು: ಮುಂಚೆ; ಅಭ್ಯುದಯ: ಏಳಿಗೆ; ಸೇರುವರೆ: ಸಹಿಸುವರೆ; ಅಗ್ಗ: ಶ್ರೇಷ್ಠ; ಆದಿ: ಮೊದಲಾದ; ಕುತುಕುಳಿ:ವ್ಯಾಕುಲ, ಚಿತ್ತಸ್ವಾಸ್ಥ್ಯವಿಲ್ಲದ; ಮದಮುಖ: ಅಹಂಕಾರದಿಂದ ಕೂಡಿದ; ಪರಿವಾರ: ಸಂಸಾರ, ಪರಿಜನ; ಹೊರೆ:ಹತ್ತಿರ, ವಂಚನೆ; ಬಣ್ಣಿಸು: ವಿವರಿಸು, ಹೇಳು;

ಪದವಿಂಗಡಣೆ:
ಮೊದಲಲೇ +ನಿಮ್ಮವರು +ನಿಮ್ಮ್
ಅಭ್ಯುದಯವನು +ಸೇರುವರೆ +ಕೌರವರ್
ಅದರೊಳ್+ಅಗ್ಗದ +ಕರ್ಣ+ಶಕುನಿ+ ಜಯದ್ರಥಾದಿಗಳು
ಕುದುಕುಳಿಗಳ್+ಈಚೆಯಲಿ +ಕಂಸನ
ಮದಮುಖನ +ಪರಿವಾರವಿದೆ+ ದೂ
ರದಲಿ +ಮಗಧನ +ಹೊರೆಯಲದನೇ +ಬಣ್ಣಿಸುವೆನೆಂದ

ಅಚ್ಚರಿ:
(೧) ನಿಮ್ಮ – ಪದದ ಬಳಕೆ – ೨ ಬಾರಿ, ೧ ಸಾಲು – ನಿಮ್ಮವರು ನಿಮ್ಮ
(೨) ಕೌರವ, ಕರ್ಣ, ಶಕುನಿ, ಕಂಸ, ಜಯದ್ರಥ, ಜರಾಸಂಧ – ಹೆಸರುಗಳನ್ನು ಬಳಸಿರುವುದು
(೩) ಕುದುಕುಳಿ – ಹೊಟ್ಟೆಕಿಚ್ಚನ್ನು ವರ್ಣಿಸುವ ಪದ

ಪದ್ಯ ೭: ದೂತನು ತಂದ ಯುಧಿಷ್ಠಿರನ ಸಂದೇಶಕ್ಕೆ ಕೃಷ್ಣನು ಏನು ಯೋಚಸಿದನು?

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ (ಸಭಾ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ದೂತನು ಯುಧಿಷ್ಠಿರನ ವಿಚಾರವನ್ನು ಶ್ರೀಕೃಷ್ಣನಿಗೆ ತಿಳಿಸಿದ ನಂತರ, ಶ್ರೀ ಕೃಷ್ಣನು ಪಾಂಡವರ ಅಭಿಪ್ರಾಯವನ್ನು ತಿಳಿದು, ತನ್ನ ರಾಜಕಾರ್ಯವನ್ನು ಅಕ್ರೂರನೇ ಮೊದಲಾದ ಸಚಿವರಗೆ ತಿಳಿಸಿದನು. ಶಿಶುಪಾಲ ಜರಾಸಂಧರ ಸಂಹಾರ ಮಾಡಲು ಹದವಾದ ಕಾಲ ಬಂದಿದೆ. ಅಲ್ಲದೆ ಭಾವನ ಮನೆಯಲ್ಲಿ ಉತ್ಸವ, ಅವರ ಈ ಸಂತೋಷದಲ್ಲಿ ಪಾಲ್ಗೊಂಡು ನಮ್ಮ ಕಾರ್ಯಸಿದ್ಧಿಯನ್ನು ಮಾಡಿಕೊಳ್ಳಬೇಕು” ಎಂದು ಯೋಚಿಸಿದನು.

ಅರ್ಥ:
ತಿಳಿದು: ಅರಿತು; ಕಾರ್ಯ: ಕೆಲಸ; ನೆಲೆ: ಗುಟ್ಟು, ರಹಸ್ಯ; ಸಚಿವ: ಮಂತ್ರಿ; ತಿಳುಹು: ತಿಳಿಸು; ಮಾವ: ತಾಯಿಯ ತಮ್ಮ ಅಥವ ಅಣ್ಣ; ಕೊಲು: ಸದೆ, ಸಾಯಿಸು; ಹದ: ರೀತಿ; ಭಾವ: ತಂಗಿಯ ಗಂಡ; ನಿಳಯ: ಆಲಯ, ಮನೆ; ಉತ್ಸಹ: ಸಂತೋಷ, ಹಬ್ಬ; ಸೌಮನಸ್ಸು: ಒಳ್ಳೆಯ ಮನಸ್ಸುಳ್ಳವ; ಬಳಸು: ಉಪಯೋಗ ಮಾಡು; ಹೊತ್ತಿದು: ಒದಗು; ಮನೋರಥ: ಆಸೆ, ಅಭಿಲಾಷೆ; ಸಿದ್ಧಿ:ಸಾಧನೆ;

ಪದವಿಂಗಡಣೆ:
ತಿಳಿದನ್+ಅಲ್ಲಿಯ +ರಾಜ+ಕಾರ್ಯದ
ನೆಲೆಯನ್+ಅಕ್ರೂರಾದಿ+ ಸಚಿವರ
ತಿಳುಹಿದನು +ಶಿಶುಪಾಲ +ಕಂಸನ +ಮಾವನಂತಿವರ
ಕೊಲುವಡಿದು +ಹದ +ನಮ್ಮ +ಭಾವನ
ನಿಳಯದ್+ಉತ್ಸಹ+ ಸೌಮನಸ್ಯವ
ಬಳಸುವರೆ+ ಹೊತ್ತಿದು+ ಮನೋರಥ +ಸಿದ್ಧಿ +ನಮಗೆಂದ

ಅಚ್ಚರಿ:
(೧) ಮಾವ, ಭಾವ – ಸಂಬಂಧ ಪದಗಳ ಬಳಕೆ
(೨) ತಿಳಿದ, ತಿಳುಹಿ – ಸಾಮ್ಯ ಪದಗಳು, ೧,೩ ಸಾಲು