ಪದ್ಯ ೩೪: ಹಾವು ಭೀಮನನ್ನು ಹೇಗೆ ಬಿಗಿಯಿತು?

ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನುಬ್ಬಿ ಬೊಬ್ಬಿಡುತ
ಪುಟದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ (ಅರಣ್ಯ ಪರ್ವ, ೧೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮನು ಸುಧಾರಿಸಿಕೊಂಡು ಉಪಾಯದಿಂದ ಗದಾಪ್ರಹಾರ ಮಾಡಿ ಹಾವಿನ ಬಿಗಿತವನ್ನು ತಪ್ಪಿಸಿಕೊಂಡು ಗರ್ಜಿಸಿದನು. ಆದರೆ ಹೆಬ್ಬಾವು ನೆಗೆದ ಚಂಡಿನಂತೆ ಭೀಮನನ್ನು ತನ್ನ ಹಿಡಿತದಲ್ಲಿ ಸಿಕ್ಕಿಸಿಕೊಂಡು ಬಿಗಿಯಿತು. ಗಿಡಗನ ಹಿಡಿತದಲ್ಲಿ ಸಿಕ್ಕ ಗಿಣಿಯಂತೆ ಭೀಮನು ಆಯಾಸಗೊಂಡು ಗಿರಿಗುಟ್ಟಿದನು.

ಅರ್ಥ:
ಭಟ: ಬಲಶಾಲಿ; ಮರಳಿ: ಪುನಃ; ಸಂತೈಸು: ಸಮಾಧಾನಿಸು; ಅಟಮಟಿಸು: ಮೋಸ ಮಾಡು; ಗದೆ: ಮುದ್ಗರ; ಹೊಯ್ದು: ಹೊಡೆ; ಬಿಗುಹು: ಬಿಗಿ, ಗಟ್ತಿ; ಕಟಕ: ಕೈಬಳೆ; ಬಿಚ್ಚು: ಸಡಲಿಸು; ಹೆಚ್ಚು: ಅಧಿಕ; ಉಬ್ಬು: ಹಿಗ್ಗು; ಬೊಬ್ಬಿಡು: ಜೋರಾಗಿ ಕೂಗು; ಪುಟ: ನೆಗೆತ; ಕಂದುಕ:ಚೆಂಡು; ಫಣಿ: ಹಾವು; ಲಟಕಟಿಸು: ಚಕಿತನಾಗು; ಔಕು: ಒತ್ತು, ನೂಕು; ಗಿಡಗ: ಹದ್ದಿನ ಜಾತಿಯ ಹಕ್ಕಿ; ಗಿಳಿ: ಶುಕ; ಗಿರಿಗಿರಿಗುಟ್ಟು: ಗರಗರ ತಿರುಗು;

ಪದವಿಂಗಡಣೆ:
ಭಟ +ಮರಳಿ +ಸಂತೈಸಿಕೊಂಡ್+ಅಟ
ಮಟಿಸಿ+ ಗದೆಯಲಿ +ಹೊಯ್ದು +ಬಿಗುಹಿನ
ಕಟಕವನು +ಬಿಚ್ಚಿದನು +ಹೆಚ್ಚಿದನ್+ಉಬ್ಬಿ +ಬೊಬ್ಬಿಡುತ
ಪುಟದ +ಕಂತುಕದಂತೆ +ಫಣಿ +ಲಟ
ಕಟಿಸಲ್+ಔಕಿತು +ಮತ್ತೆ +ಗಿಡಗನ
ಪುಟದ +ಗಿಳಿಯಂದದಲಿ+ ಗಿರಿಗಿರಿಗುಟ್ಟಿದನು +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ

ಪದ್ಯ ೨೫: ಅರ್ಜುನನ ಪರಾಕ್ರಮದ ಬಗ್ಗೆ ಶಿವನು ಪಾರ್ವತಿಗೆ ಏನು ಹೇಳಿದ?

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲ್ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ (ಅರಣ್ಯ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಆಯುಧಗಳು ಹಾರಿಹೋದವೆಂದು ಅವನೇನಾದರೂ ಹೆದರಿಕೊಂಡನೇ? ವೀರರಸದ ಮೇಲಿನ ನೊರೆಯಾದರೂ ಆರಿತೇ? ಅವನ ಬಾಹು ಸತ್ವಕ್ಕೆ ಏನಾದರೂ ಕುಂದು ಬಂದೀತೇ? ಕೆಳಕ್ಕೆ ಹಾಕಿದ ಚಂಡಿನಂತೆ ಅವನ ತೋಳುಗಳು ನೆಗೆಯುತ್ತಿವೆ, ಅವನು ಸೆಡ್ಡು ಹೊಡೆಯುವುದನ್ನು ನೋಡು ಎಂದು ಶಿವನು ಪಾರ್ವತಿಗೆ ಹೇಳಿದನು.

ಅರ್ಥ:
ಹಾರು: ಲಂಘಿಸು; ಆಯುಧ: ಶಸ್ತ್ರ; ಭೀತಿ: ಭಯ; ಮಾರುಹೋಗು: ವಶವಾಗು, ಅಧೀನವಾಗು; ವೀರ: ಶೂರ; ಅರಸ: ರಾಜ; ನೊರೆ: ಬುರುಗು; ಆರು: ಬತ್ತುಹೋಗು; ನಿಜ: ತನ್ನ, ದಿಟ; ಬಾಹು: ಭುಜ; ಸತ್ವ: ಸಾರ; ಖಯಖೋಡಿ: ಅಳುಕು, ಅಂಜಿಕೆ; ಮೀರು: ಉಲ್ಲಂಘಿಸು; ಹತ: ಕೊಂದ, ಸಂಹರಿಸಿದ; ಕಂತುಕ: ಚೆಂಡು; ಪುಟ: ನೆಗೆತ; ಏರು: ಹೆಚ್ಚಾಗು; ವಿಕ್ರಮ: ಗತಿ, ಗಮನ; ಚಡಾಳಿಸು: ವೃದ್ಧಿಹೊಂದು, ಅಧಿಕವಾಗು; ಬೀರು: ಒಗೆ, ಎಸೆ, ತೋರು; ಭುಜ: ಬಾಹು; ಭಾರಿ:ಭಾರವಾದುದು, ತೂಕವಾದುದು; ಅಂಕ: ತೊಡೆ, ಯುದ್ಧ; ದೇವಿ: ಭಗವತಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಾರಿತ್+ಆಯುಧವೆಂದು +ಭೀತಿಗೆ
ಮಾರುವೋದನೆ+ ವೀರರಸ+ ನೊರೆ
ಯಾರಿತೇ +ನಿಜ+ ಬಾಹುಸತ್ವದೊಳುಂಟೆ +ಖಯಖೋಡಿ
ಮೀರಿ +ಹತ+ ಕಂತುಕದವೊಲ್+ಪುಟವ್
ಏರುತಿದೆ +ವಿಕ್ರಮ +ಚಡಾಳಿಸಿ
ಬೀರುತಿದೆ +ಭುಜ +ಭಾರಿಯಂಕವ+ ದೇವಿ +ನೋಡೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀರುತಿದೆ ಭುಜ ಭಾರಿಯಂಕವ
(೨) ಅರ್ಜುನನ ಪರಾಕ್ರಮದ ವರ್ಣನೆ – ಹಾರಿತಾಯುಧವೆಂದು ಭೀತಿಗೆ ಮಾರುವೋದನೆ ವೀರರಸ ನೊರೆ ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ