ಪದ್ಯ ೩೨: ಶಲ್ಯನ ಬಾಣಗಳು ಧರ್ಮಜನನ್ನು ಹೇಗೆ ತಾಕಿದವು?

ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ (ಶಲ್ಯ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಲ್ಯನು ಮೊದಲು ಬಿಟ್ಟಬಾಣದ ತುದಿಯನ್ನು ಹಿಂದಿನ ಬಾಣಗಳು ಒದೆದು ಮುಂದಾದವು. ಮುಂದಾದ ಬಾಣಗಳನ್ನು ಹಿಂದಿನ ಬಾಣಗಳು ಚುಚ್ಚಿದವು. ಹಿಂದೆ ಬಿಟ್ಟ ಬಾಣಗಳನ್ನು ಅದರ ಹಿಂದಿನ ಬಾಣಗಳು ಮುಂಚಿದವು. ಹೀಗೆ ಶಲ್ಯನ ಬಾಣಗಳು ಧರ್ಮಜನನ್ನು ತಾಕಿದವು.

ಅರ್ಥ:
ಮುಂದಣ: ಮುಂಚೆ; ಮೊನೆ: ತುದಿ, ಕೊನೆ, ಹರಿತವಾದ; ಒದೆ: ನೂಕು; ಹಿಂದಣ: ಹಿಂದೆ; ಅಂಬು: ಬಾಣ; ಹಿಳುಕು: ಬಾಣದ ಗರಿ; ಹೊಕ್ಕು: ಸೇರು; ಮುಂಚೆ: ಮುಂದೆ; ಹಿಂದಣ: ಹಿಂಭಾಗ; ಮಿಗೆ: ಮತ್ತು, ಅಧಿಕವಾಗಿ; ಎಂಜಲಿಸು: ಮುಟ್ಟು; ಬಳಿ: ಹತ್ತಿಅ; ಸಂದು: ಸಹವಾಸ; ಉಳಿದ: ಮಿಕ್ಕ; ಕವಿ: ಆವರಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅವನಿಪ: ರಾಜ;

ಪದವಿಂಗಡಣೆ:
ಮುಂದಣ್+ಅಂಬಿನ +ಮೊನೆಯನ್+ಒದೆದವು
ಹಿಂದಣ್+ಅಂಬುಗಳ್+ಅವರ+ ಮೊನೆಗಳ
ಹಿಂದಣ್+ಅಂಬಿನ +ಹಿಳುಕು +ಹೊಕ್ಕವು +ಮುಂಚಿದ್+ಅಂಬುಗಳ
ಹಿಂದಣವು +ಹಿಂದಿಕ್ಕಿದವು +ಮಿಗೆ
ಹಿಂದಣ್+ಅಂಬುಗಳ್+ಎಂಜಲಿಸಿ +ಬಳಿ
ಸಂದ+ಉಳಿದ+ಅಂಬುಗಳ್+ಎನಲು +ಕವಿದೆಚ್ಚನ್+ಅವನಿಪನ

ಅಚ್ಚರಿ:
(೧) ಮುಂದಣ, ಹಿಂದಣ – ವಿರುದ್ಧ ಪದಗಳ ಬಳಕೆ
(೨) ಹಿಂದಣ – ೨-೫ ಸಾಲಿನ ಮೊದಲ ಪದ