ಪದ್ಯ ೪೧: ಕರ್ಣನು ಮತ್ತೆ ಯುದ್ಧಕ್ಕೆ ಹೇಗೆ ಬಂದನು?

ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ (ದ್ರೋಣ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅತಿರಥ ಭಯಂಕರನಾದ ಕರ್ಣನು ಹೊಸ ರಥವನ್ನು ಜೋಡಿಸಿದನು. ಹೊಸ ಸಾರಥಿಯನ್ನು ಕರೆಸಿಕೊಂಡನು. ರಥವನ್ನೇರಿ ಹೆದೆಯನ್ನು ಧ್ವನಿಮಾಡಿ, ಭೂಮಿ ಕುಸಿಯುವ ವೇಗದಿಂದ ಸುಭಟ ಸಮುದ್ರವನ್ನು ಕಡೆಯಬಲ್ಲ ಕರ್ಣನು ಭೀಮನ ರಥವನ್ನು ಹುಡುಕುತ್ತಾ ಬಂದು ಅವನೊಡನೆ ಯುದ್ಧವನ್ನಾರಂಭಿಸಿದನು.

ಅರ್ಥ:
ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಹೊಸ: ನವೀನ; ಸಾರಥಿ: ಸೂತ; ಕರಸು: ಬರೆಮಾಡು; ಆಹವ: ಯುದ್ಧ; ಅತಿರಥ: ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ಏರು: ಹೆಚ್ಚಾಗು; ಬಲು: ಬಹಳ; ಬಿಲ್ಲು: ಚಾಪ, ಧನುಸ್ಸು; ಒದರು: ಗುಂಪು, ತೊಡಕು; ಪೃಥು: ಭೂಮಿ; ನೆಗ್ಗು: ಕುಗ್ಗು, ಕುಸಿ; ಸುಭಟ: ಪರಾಕ್ರಮಿ; ಸಾಗರ: ಸಮುದ್ರ; ಮಥನ: ಕಡೆಯುವುದು, ಮಂಥನ; ಅರಸು: ಹುಡುಕು; ಬಂದು: ಆಗಮಿಸು; ಪುನರಪಿ: ಪುನಃ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ರಥವ +ಮೇಳೈಸಿದನು +ಹೊಸ +ಸಾ
ರಥಿಯ +ಕರಸಿದನ್+ಆಹವದೊಳ್+ಅತಿ
ರಥ+ಭಯಂಕರನ್+ಏರಿದನು +ಬಲುಬಿಲ್ಲನ್+ಒದರಿಸುತ
ಪೃಥುವಿ +ನೆಗ್ಗಲು +ಸುಭಟ +ಸಾಗರ
ಮಥನ+ ಕರ್ಣನು +ಭೀಮಸೇನನ
ರಥವನ್+ಅರಸುತ +ಬಂದು +ಪುನರಪಿ +ಕಾಳೆಗವ +ಹಿಡಿದ

ಅಚ್ಚರಿ:
(೧) ರಥ, ಅತಿರಥ – ಪ್ರಾಸ ಪದ
(೨) ಕರ್ಣನ ಶಕ್ತಿ – ಸುಭಟ ಸಾಗರ ಮಥನ ಕರ್ಣನು