ಪದ್ಯ ೩೬: ಭಾನುಮತಿಗೆ ಯಾವ ಸಂದೇಶವನ್ನು ನೀಡಲು ದುರ್ಯೋಧನನು ಹೇಳಿದನು?

ತೆಗಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ (ಗದಾ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಮ್ಮ ಪಾಳೆಯವನ್ನು ತೆರವು ಮಾಡಿಸಿ ಹಸ್ತಿನಾಪುರಕ್ಕೆ ಕಳುಹಿಸು. ದುಶ್ಯಾಸನ ಕರ್ಣರ ರಾಣೀವಾಸವನ್ನು ಊರಿಗೆ ಕಳಿಸು. ಪಾಂಡವರ ವಿಜಯ ವಾರ್ತೆಯನ್ನು ಹಬಿಸಬೇಡ. ಭಾನುಮತಿಯು ನಂಬುವಂತೆ ಮಾತಾಡಿ ಸಮಾಧಾನ ಪಡಿಸು ಎಂದು ದುರ್ಯೋಧನನು ಹೇಳಿದನು.

ಅರ್ಥ:
ತೆಗಸು: ಹೊರತರು; ಪಾಳೆಯ: ಬೀಡು, ಶಿಬಿರ; ಗಜ: ಆನೆ; ನಗರ: ಊರು; ಐದು: ಹೋಗಿಸೇರು; ರಾಣಿ: ಅರಸಿ; ದಂಡಿಗೆ: ಮೇನಾ, ಪಲ್ಲಕ್ಕಿ; ಕಳುಹಿಸು: ತೆರಳು; ಸೂತಸುತ: ಕರ್ಣ; ಸೂತ: ಸಾರಥಿ; ಸುತ: ಮಗ; ಆದಿ: ಮೊದಲಾದ; ಹಗೆ: ವೈರಿ, ಶತ್ರು; ವಿಜಯ: ಗೆಲುವು; ಹರಹು: ವಿಸ್ತಾರ, ವೈಶಾಲ್ಯ; ನಂಬು: ವಿಶ್ವಾಸವಿಡು; ನುಡಿ: ಮಾತು; ಬಗೆ: ಎಣಿಸು; ಸಂತೈಸು: ಸಾಂತ್ವನಗೊಳಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ತೆಗಸು +ಪಾಳೆಯವೆಲ್ಲವನು +ಗಜ
ನಗರಿಗ್+ಐದಿಸು +ರಾಣಿಯರ +ದಂ
ಡಿಗೆಯ +ಕಳುಹಿಸು +ಸೂತಸುತ +ದುಶ್ಯಾಸನಾದಿಗಳ
ಹಗೆಯ +ವಿಜಯವ +ಹರಹದಿರು +ನಂ
ಬುಗೆಯ +ನುಡಿಯಲಿ +ಭಾನುಮತಿಯರ
ಬಗೆಯ +ಸಂತೈಸೆಂದು+ ಬೋಳೈಸಿದನು +ಸಂಜಯನ

ಅಚ್ಚರಿ:
(೧) ಹಗೆ, ನಂಬುಗೆ, ಬಗೆ, ದಂಡಿಗೆ – ಪ್ರಾಸ ಪದಗಳು
(೨) ಸಂತೈಸು, ಬೋಳೈಸು – ಸಮಾನಾರ್ಥಕ ಪದ