ಪದ್ಯ ೩೫: ದುರ್ಯೋಧನು ಕೃಪಾದಿಗಳಿಗೆ ಏನೆಂದು ಹೇಳಿದನು?

ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ (ಗದಾ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನು, ನೀವು ಹೇಳುವ ಮಾತು ಸರಿಯಲ್ಲ. ಭೀಷ್ಮಾದಿಗಳ ಪರಾಕ್ರಮ ಯೌವನಕಾಲದಲ್ಲಿಯೇ ನಮಗೆ ದೊರೆಯದ ಜಯವಧುವು ಅವರೆಲ್ಲ ಕಳೆದುಹೋದ ಮುಪ್ಪಿನಲ್ಲಿ ನಮಗೆ ಒಲಿಯುವಳೆಂಬುದು ಸುಳ್ಳು. ನಾವೀಗ ಏಕಾಕಿಯಾಗಿದ್ದೇವೆ. ನಾನು ಮಾಡಿದ ತಪ್ಪನ್ನು ನೀರಿನಲ್ಲಿ ಈ ದಿವಸ ಇದ್ದು ನಾಳೆ ಸರಿಪಡಿಸುತ್ತೇನೆ. ಈ ದಿವಸ ನೀವು ದೂರಕ್ಕೆ ಹೋಗಿ ಅಲ್ಲಿಯೇ ಇರಬೇಕು ಎಂದು ಕೃಪನೇ ಮೊದಲಾದವರಿಗೆ ಹೇಳಿದನು.

ಅರ್ಥ:
ಒಪ್ಪು: ಒಪ್ಪಿಗೆ, ಸಮ್ಮತಿ; ಆದಿ: ಮುಂತಾದ; ದರ್ಪ: ಹೆಮ್ಮೆ, ಗರ್ವ; ಜಾರು: ಬೀಳು; ಜಯಾಂಗನೆ: ವಿಜಯಲಕ್ಷ್ಮಿ; ಮುಪ್ಪು: ಮುದಿತನ, ವೃದ್ಧಾಪ್ಯ; ಒಲಿವು: ದೊರೆಯುವುದು; ಏಕಾಕಿ: ಏಕಾಂಗಿ; ಸಲಿಲ: ನೀರು; ವಾಸ: ಜೀವನ; ಒಪ್ಪು: ಒಪ್ಪಿಗೆ, ಸಮ್ಮತಿ; ತೊಲಗು: ಹೊರಡು; ಅವನಿಪ: ರಾಜ;

ಪದವಿಂಗಡಣೆ:
ಒಪ್ಪದಿದು+ ಭೀಷ್ಮಾದಿಯವ್ವನ
ದರ್ಪದಲಿ+ ಜಾರಿದ +ಜಯಾಂಗನೆ
ಮುಪ್ಪಿನಲಿ +ನಮಗ್+ಒಲಿವುದ್+ಅರಿದ್+ಏಕಾಕಿ+ಆದೆವಲೆ
ತಪ್ಪಿದುದನ್+ಈ+ ಸಲಿಲವಾಸದೊಳ್
ಒಪ್ಪವಿಡುವೆನು +ನಾಳೆ +ನೀವ್ +ತೊಲ
ಗಿಪ್ಪುದ್+ಇಂದಿನೊಳ್+ಎಂದನ್+ಅವನಿಪನ್+ಆ+ ಕೃಪಾದಿಗಳ

ಅಚ್ಚರಿ:
(೧) ಸೋಲು ಖಚಿತ ಎಂದು ಹೇಳುವ ಪರಿ – ಜಾರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ