ಪದ್ಯ ೨೩: ಕರ್ಣನು ಅರ್ಜುನನನ್ನು ಹೇಗೆ ಹಂಗಿಸಿದನು?

ವೀರನಲ್ಲಾ ಬನದ ರಾಜಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದೆಲಾ ದಿಟವೇಕಚಕ್ರದೊಳು
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ ತೆಗೆದೆಚ್ಚನಾ ಕರ್ಣ (ವಿರಾಟ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೋ ಅರ್ಜುನ ನೀಣು ವೀರನಲ್ಲವೇ? ಕಾಡಿನ ರಾಜಕುಮಾರನಲ್ಲವೇ? ಕೌರವನ ಬಡಿ ಹೋರಿಯಲ್ಲವೇ? ಏಕ ಚಕ್ರದಲ್ಲಿ ಓಡಾಡಿ ತಿಂದು ಉಂಡವನಲ್ಲವೇ? ಅದಿರಲಿ ನಾಟ್ಯದಲ್ಲಿ ಧರಿಸಿದ್ದ ಸ್ತ್ರೀ ವೇಷವನ್ನು ತೆಗೆದು ನಿನಗೆ ಗಂಡುಡಿಗೆ ಕೊಟ್ಟವರಾರು? ನಿನಗೇಕೆ ಈ ಶೌರ್ಯ ಎನ್ನುತ್ತಾ ಕರ್ಣನು ಮತ್ತೆ ಬಾಣಗಳನ್ನು ಬಿಟ್ಟನು.

ಅರ್ಥ:
ವೀರ: ಶೂರ; ಬನ: ಕಾಡು; ಹೋರಿ: ಗೂಳಿ: ಬಡಿ: ಹೊಡೆ, ತಾಡಿಸು; ತಿರಿ: ಸುತ್ತಾಡು, ತಿರುಗಾಡು; ದಿಟ: ನಿಜ; ನಾರಿ: ಹೆಣ್ಣು; ನಾಟಕ: ಪ್ರದರ್ಶನ ಕಲೆ; ಚೋಹ: ಚೋದ್ಯ, ಅಚ್ಚರಿ; ತೆಗೆ: ಹೊರತರು; ಶೌರ್ಯ: ಪರಾಕ್ರಮ; ಸಿರಿ: ಐಶ್ವರ್ಯ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ವೀರನಲ್ಲಾ+ಬನದ +ರಾಜಕು
ಮಾರನಲ್ಲಾ +ಕೌರವನ +ಬಡಿ
ಹೋರಿಯಲ್ಲಾ+ ತಿರಿದೆಲಾ +ದಿಟವ್+ಏಕಚಕ್ರದೊಳು
ನಾರಿಯರ+ ನಾಟಕದ +ಚೋಹವನ್
ಆರು +ತೆಗೆದರು +ಪಾರ್ಥ +ನಿನಗೀ
ಶೌರಿಯದ +ಸಿರಿಯೇಕೆನುತ +ತೆಗೆ+ಎಚ್ಚನಾ +ಕರ್ಣ

ಅಚ್ಚರಿ:
(೧) ಅರ್ಜುನನನ್ನು ಕೆಣಕುವ ಪರಿ – ನಾರಿಯರ ನಾಟಕದ ಚೋಹವನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ

ಪದ್ಯ ೨೩: ಭೀಮನಿಗೆ ಯಾರು ಎದುರಾದರು?

ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಿಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುತ್ತಾ, ರಾಜ ಕೇಳು, ಹಿಂದೆ ಏಕಚಕ್ರಪುರದಲ್ಲಿ ಭೀಮನು ಬಕಾಸುರನನ್ನು ಕೊಲ್ಲಲಿಲ್ಲವೇ? ಬಕನ ಅಣ್ಣನೇ ಕಿಮ್ಮೀರ, ಹಿಡಿಂಬಕನಿಗೆ ಸಂಬಂಧಿಕ. ಪರಿವಾರದೊಡನೆ ಧರ್ಮಜನು ಬರುವುದನ್ನು ಕಂಡು, ತನ್ನ ತಮ್ಮನ ವಧೆಯ ನೋವನ್ನು ತೀರಿಸಿಕೊಳ್ಳಲು ಕಿಮ್ಮೀರನು ಎದುರಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒರಸು: ನಾಶಮಾದು; ಹಿರಿಯ: ದೊಡ್ಡವ; ಬಾಂಧವ: ಸಂಬಂಧಿಕ; ಧರಣಿಪಾಲ: ರಾಜ; ಧರಣಿ: ಭೂಮಿ; ಸಪರಿವಾರ: ಪರಿಜನ; ಬರವ: ಆಗಮನ; ಕಂಡು: ನೋಡು; ತಮ್ಮ: ಅನುಜ; ಹರಿಬ: ಕಷ್ಟ, ತೊಂದರೆ; ಮರಳು: ಹಿಂದಿರುಗು; ಇದಿರು: ಎದುರು; ಅಮರ: ದೇವತೆ; ಅಮರಾರಿ: ದೇವತೆಗಳ ವೈರಿ, ರಾಕ್ಷಸ;

ಪದವಿಂಗಡಣೆ:
ಅರಸ +ಕೇಳ್+ಅಂದ್+ಏಕ ಚಕ್ರದೊಳ್
ಒರಸಿದನಲ್+ಆ+ ಭೀಮನ್+ಆತಗೆ
ಹಿರಿಯನ್+ಈ+ ಕಿಮ್ಮೀರ+ ಬಾಂಧವನಾ+ ಹಿಡಿಂಬಕಗೆ
ಧರಣಿಪಾಲನ +ಸಪರಿವಾರದ
ಬರವ +ಕಂಡನು +ತನ್ನ +ತಮ್ಮನ
ಹರಿಬವನು +ಮರಳಿಚುವೆನ್+ಎನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳಲು – ಒರಸಿದ ಪದದ ಬಳಕೆ
(೨) ಅರಸ, ಧರಣಿಪಾಲ – ಸಮನಾರ್ಥಕ ಪದ

ಪದ್ಯ ೧: ಶಾಲಿಹೋತ್ರರ ಆಶ್ರಮದಿಂದ ಬಂದ ಪಾಂಡವರಿಗೆ ವ್ಯಾಸರು ಏನು ಹೇಳಿದರು?

ಕೇಳು ಜನಮೇಜಯ ಮಹೀಪತಿ
ಶಾಲಿಹೋತ್ರಾಶ್ರಮವನನಿಬರು
ಬೀಳುಕೊಂಡರು ಮತ್ತೆ ಕಂಡರು ಬಾದರಾಯಣನ
ಹೇಳಿದನು ನಿಮಗೇಕಚಕ್ರ ವಿ
ಶಾಲ ಪುರದೊಳಗಾರು ತಿಂಗಳು
ಕಾಲ ಸವೆಯಲಿ ಬಳಿಕ ಬಳಸುವಿರುತ್ತರೋತ್ತರವ (ಆದಿ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಶಾಲಿಹೋತ್ರರ ಆಶ್ರಮದಿಂದ ಹಲವಾರು ವಿದ್ಯೆಗಳನ್ನು ಕಲಿತ ಬಳಿಕ ಅಲ್ಲಿಂದ ಬೀಳ್ಕೊಂಡು ವ್ಯಾಸರನ್ನು ಕಂಡರು. ತ್ರಿಕಾಲಜ್ಞಾನಿಗಳಾದ ವ್ಯಾಸರು, ನೀವು ಏಕಚಕ್ರವೆಂಬ ವಿಶಾಲ ನಗರದಲ್ಲಿ ಆರು ತಿಂಗಳು ಕಾಲ ಕಳೆಯಿರಿ, ನಂತರ ನಿಮಗೆ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದುತ್ತೀರಿ ಎಂದು ವ್ಯಾಸರು ಹೇಳಿದರು.

ಅರ್ಥ:
ಮಹಿ: ಭೂಮಿ; ಮಹೀಪತಿ: ರಾಜ; ಆಶ್ರಮ: ವಸತಿ, ಋಷಿಗಳ ವಾಸಸ್ಥಾನ; ಬೀಳುಕೊಂಡು: ಬಿಟ್ಟುಬಾ, ಹೊರನಡೆ; ಕಂಡರು: ನೋಡಿದರು; ಬಾದರಾಯಣ: ವ್ಯಾಸ; ವಿಶಾಲ: ದೊಡ್ಡ; ಪುರ: ಊರು; ಉತ್ತರೋತ್ತರ: ಹೇರಳ, ಹೆಚ್ಚು;
ಅನಿಬರು: ಅಷ್ಟುಜನ

ಪದವಿಂಗಡನೆ:
ಕೇಳು +ಜನಮೇಜಯ +ಮಹೀಪತಿ
ಶಾಲಿಹೋತ್ರ+ಆಶ್ರಮವನ್+ಅನಿಬರು
ಬೀಳುಕೊಂಡರು+ ಮತ್ತೆ +ಕಂಡರು +ಬಾದರಾಯಣನ
ಹೇಳಿದನು+ ನಿಮಗ್+ಏಕಚಕ್ರ +ವಿ
ಶಾಲ+ ಪುರದೊಳಗ್+ಆರು +ತಿಂಗಳು
ಕಾಲ +ಸವೆಯಲಿ+ ಬಳಿಕ+ ಬಳಸುವಿರ್+ಉತ್ತರೋತ್ತರವ

ಅಚ್ಚರಿ:
(೧) ಕೇಳು, ಬೀಳು, ಹೇಳು(ಹೇಳಿ)- ಪ್ರಾಸ ಪದ, ೧,೩,೪ ಸಾಲಿನ ಮೊದಲ ಪದ
(೨) ಕೊಂಡರು, ಕಂಡರು – ಪದ ರಚನೆ, ೩ ಸಾಲು
(೩) ಬೀಳು, ಬಳಿಕ, ಬಳಸು – ಬ, ಳ ಕಾರವನ್ನು ಹೊಂದಿರುವ ಪದಗಳು