ಪದ್ಯ ೯: ಭೀಮನು ದುರ್ಯೋಧನನ್ನು ಹೇಗೆ ಹಂಗಿಸಿದನು?

ಎತ್ತಿ ಕಳೆದೈ ಬನಕೆ ನಾವ್ ನಿ
ಮ್ಮೆತ್ತುಗಳಲೈ ಬೆರಳಲೇಡಿಸಿ
ದೆತ್ತುಗಳ ಕೂಡೇಕೆ ಸರಿನುಡಿ ಸಾರ್ವಭೌಮರಿಗೆ
ಇತ್ತಲೇತಕೆ ಬಿಜಯಮಾಡಿದಿ
ರೊತ್ತದೇ ಕಲುನೆಲನು ಪವಡಿಸಿ
ಮತ್ತೆ ತೊಡೆಗಳ ತಿವಿಯ ಬೇಕೇ ಎಂದನಾ ಭೀಮ (ಗದಾ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲೈ ಸುಯೋಧನ, ನಮ್ಮನ್ನು ಕಾಡಿಗೆ ಓಡಿಸಿದೆಯಲ್ಲವೇ? ನಾವು ನಿಮ್ಮ ಎತ್ತುಗಳಲ್ಲವೇ? ಬೆರಳಿನಲ್ಲಿ ಅಣಗಿಸಿದ ಎತ್ತುಗಳ ಜೊತೆಗೆ ಸಾರ್ವಭೌಮರಾದ ನಿಮಗೆಂತಹ ಮಾತುಕತೆ? ಒಡೆಯ ಇಲ್ಲಿಗೆ ಏಕೆ ಬಂದಿರುವಿರಿ? ಮಲಗಿದಾಗ ಕಲ್ಲು ನೆಲವು ಒತ್ತುವುದಿಲ್ಲವೇ? ಮತ್ತೆ ನಿಮ್ಮ ತೊಡೆಗಳನ್ನು ಚುಚ್ಚಬೇಕೆ ಎಂದು ಹಂಗಿಸಿದನು.

ಅರ್ಥ:
ಎತ್ತು: ಮೇಲೆ ಬರುವಂತೆ ಮಾಡು; ಕಳೆದೈ: ಓಡಿಸು, ದೂರತಳ್ಳು; ಬನ: ಕಾಡು; ಎತ್ತು: ಹೋರಿ; ಬೆರಳು: ಅಂಗುಲಿ; ಏಡಿಸು: ಅಣಕಿಸು, ನಿಂದಿಸು; ಕೂಡ: ಜೊತೆ; ಸರಿನುಡಿ: ಸರಿಯಾದ ಮಾತು; ಸಾರ್ವಭೌಮ: ರಾಜ; ಬಿಜಯ: ಬರುವಿಕೆ, ಆಗಮನ; ಒತ್ತು: ಚುಚ್ಚು; ಕಲು: ಕಲ್ಲು; ನೆಲ: ಭೂಮಿ; ಪವಡಿಸು: ಮಲಗು; ತೊಡೆ: ಊರು; ತಿವಿ: ಚುಚ್ಚು;

ಪದವಿಂಗಡಣೆ:
ಎತ್ತಿ +ಕಳೆದೈ +ಬನಕೆ +ನಾವ್ +ನಿ
ಮ್ಮೆತ್ತುಗಳಲೈ +ಬೆರಳಲ್+ಏಡಿಸಿದ್
ಎತ್ತುಗಳ +ಕೂಡೇಕೆ +ಸರಿನುಡಿ +ಸಾರ್ವಭೌಮರಿಗೆ
ಇತ್ತಲೇತಕೆ +ಬಿಜಯ+ಮಾಡಿದಿರ್
ಒತ್ತದೇ +ಕಲುನೆಲನು +ಪವಡಿಸಿ
ಮತ್ತೆ+ ತೊಡೆಗಳ +ತಿವಿಯ +ಬೇಕೇ +ಎಂದನಾ +ಭೀಮ

ಅಚ್ಚರಿ:
(೧) ಹಂಗಿಸುವ ಪರಿ – ಒತ್ತದೇ ಕಲುನೆಲನು ಪವಡಿಸಿ ಮತ್ತೆ ತೊಡೆಗಳ ತಿವಿಯ ಬೇಕೇ
(೨) ಎತ್ತು – ಪದದ ಬಳಕೆ, ೨,೩ ಸಾಲಿನ ಮೊದಲ ಪದ

ಪದ್ಯ ೮: ಯಾವ ಪ್ರಾಣಿಗಳ ಮೇಲೆ ಧನವನ್ನು ಹೇರಿಸಿದರು?

ಹೇರಿದವು ಬಹು ಧನವನೊಂಟೆಗ
ಳಾರು ಸಾವಿರ ಮಿಕ್ಕ ವಸ್ತುವ
ಹೇರಿದವುಯೆತ್ತುಗಳ ಹೂಡಿದ ಭಂಡಿ ಸಾವಿರವು
ಆರು ಲಕ್ಷ ತುರಂಗ ಉಷ್ಟ್ರಗ
ಳಾರು ಕೋಟಿಗಳಾನೆ ಗಣನೆಯ
ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳು (ಸಭಾ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲ್ಲರಿಂದ ಬಂದ ಐಶ್ವರ್ಯವನ್ನು ಆರು ಸಾವಿರ ಒಂಟೆಗಳು, ಒಂದು ಸಾವಿರ ಎತ್ತಿನ ಬಂಡಿಗಳ ಮೇಲೆ ಧನವನ್ನು ಹೇರಿಸಿದನು. ಆರು ಲಕ್ಷ ಕುದುರೆಗಳು, ಒಂಟೆಗಳು, ಆರು ಕೋಟಿ ಆನೆಗಳು ವಶವಾದವು. ಮೃಗ, ಪಕ್ಷಿ, ಕೋಣ, ಕುರಿಗಳ ಹಿಂಡುಗಳಿಗೆ ಲೆಕ್ಕವಿರಲಿಲ್ಲ.

ಅರ್ಥ:
ಹೇರು: ಪೇರಿಸು, ಹೊರಿಸು; ಬಹು: ಬಹಳ; ಧನ: ಐಶ್ವರ್ಯ; ಸಾವಿರ: ಸಹಸ್ರ; ವಸ್ತು: ಸಾಮಗ್ರಿ; ಎತ್ತು: ಹೋರಿ; ಹೂಡು: ನೊಗಹೇರು; ಭಂಡಿ: ರಥ; ತುರಂಗ: ಕುದುರೆ; ಒಂಟೆ: ಉಷ್ಟ್ರ; ಆನೆ: ಕರಿ; ಗಣನೆ: ಎಣಿಕೆ; ಮೀರು: ದಾಟು; ಮೃಗ: ಪ್ರಾಣಿ; ಪಕ್ಷಿ: ಖಗ; ಕೋಣ: ಹೋರಿ; ಹಿಂಡು: ಗುಂಪು;

ಪದವಿಂಗಡಣೆ:
ಹೇರಿದವು +ಬಹು +ಧನವನ್+ಒಂಟೆಗಳ್
ಆರು +ಸಾವಿರ +ಮಿಕ್ಕ +ವಸ್ತುವ
ಹೇರಿದವು+ಯೆತ್ತುಗಳ+ ಹೂಡಿದ +ಭಂಡಿ +ಸಾವಿರವು
ಆರು +ಲಕ್ಷ +ತುರಂಗ +ಉಷ್ಟ್ರಗಳ್
ಆರು +ಕೋಟಿಗಳ್+ಆನೆ +ಗಣನೆಯ
ಮೀರಿದವು +ಮೃಗ +ಪಕ್ಷಿ +ಕೋಣನ +ಕುರಿಯ+ ಹಿಂಡುಗಳು

ಅಚ್ಚರಿ:
(೧) ಪ್ರಾಣಿಗಳ ಹೆಸರುಗಳು – ಒಂಟೆ, ಎತ್ತು, ತುರಂಗ, ಉಷ್ಟ್ರ, ಆನೆ, ಮೃಗ, ಪಕ್ಷಿ, ಕೋಣ, ಕುರಿ
(೨) ಹೇರಿದವು – ೧, ೩ ಸಾಲಿನ ಮೊದಲ ಪದ; ಆರು – ೨, ೪ ಸಾಲಿನ ಮೊದಲ ಪದ
(೩) ಹೇರಿದವು, ಮೀರಿದವು – ಪ್ರಾಸ ಪದ, ೧,೩, ೬ ಸಾಲಿನ ಮೊದಲ ಪದ