ಪದ್ಯ ೧೪: ಸಂಜಯನು ಯಾರ ನಡಿಗೆಯನ್ನು ನೋಡಿದನು – ೭?

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಆಯುಧಗಳ ರಾಶಿಯಲ್ಲಿ ಗಾಲಿಯನ್ನು ಹಾಕಿ ಅದರ ಮೇಲೆ ಕಾಲಿಡುತ್ತಾ, ಎರಡು ಹೆಜ್ಜೆ ದೂರದಲ್ಲಿ ಕೆಸರಿರಲು ಅಲ್ಲಿ ಛತ್ರ ಚಾಮರಗಳನ್ನು ಹಾಕಿ ಕಾಲಿಡುತ್ತಾ, ರಕ್ತದ ಮಡುಗಳನ್ನು ಎಡಕ್ಕೆ ಬಲಕ್ಕೆ ಬಿಟ್ಟು ಮೆಲ್ಲನೆ ನಡೆಯುತ್ತಾ, ಹೆಜ್ಜೆ ಹೆಜ್ಜೆಗೂ ದೈವ ವಿಧಿಯನ್ನು ಬಯ್ಯುತ್ತಾ ನಿಟ್ಟುಸಿರು ಬಿಡುವವನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಕೈದು: ಆಯುಧ; ತನಿ: ಹೆಚ್ಚಾಗು, ಅತಿಶಯವಾಗು; ಕೆಡೆ: ಬೀಳು, ಕುಸಿ; ಗಾಲಿ: ಚಕ್ರ; ಹಾಯ್ಕು: ಹೊಡೆ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹಜ್ಜೆ: ಪಾದ; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಛತ್ರ: ಕೊಡೆ; ಚಮರಿ: ಚಾಮರ; ಅಡಸು: ಬಿಗಿಯಾಗಿ ಒತ್ತು; ರಕುತ: ನೆತ್ತರು; ಮಡು: ಕೊಳ, ಸರೋವರ; ಎಡಬಲ: ಅಕ್ಕಪಕ್ಕ; ಮೆಲ್ಲನೆ: ನಿಧಾನ; ದೈವ: ಭಗವಂತ; ಬಯ್ದು: ಜರೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್: ನಿಟ್ಟುಸಿರು;

ಪದವಿಂಗಡಣೆ:
ಕಡಿದ +ಕೈದುಗಳ್+ಒಟ್ಟಿಲಲಿ +ತನಿ
ಕೆಡೆದ +ಗಾಲಿಯ +ಹಾಯ್ಕಿ +ಮೆಲ್ಲಡಿ
ಯಿಡುತ +ಹಜ್ಜೆಯ +ನೆಣದ +ಕೆಸರಿಗೆ+ ಛತ್ರ+ಚಮರಿಗಳ
ಅಡಸಿ +ಹಜ್ಜೆಯನಿಡುತ +ರಕುತದ
ಮಡುವನ್+ಎಡಬಲಕಿಕ್ಕಿ +ಮೆಲ್ಲನೆ
ನಡೆದು +ದೈವವ +ಬಯ್ದು +ಬಯ್ದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಎಡಬಲ, ಅಡಿಗಡಿ, ಅಡಿಯಿಡು – ಪದಗಳ ಬಳಕೆ

ಪದ್ಯ ೪೨: ದುರ್ಯೋಧನನು ರಣರಂಗದಲ್ಲಿ ಯಾರನ್ನು ಎದುರಿಸಿದನು?

ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ (ಗದಾ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಡಬಲದ ಸೈನ್ಯಗಳು ಮುರಿದುಬೀಳಲು, ನಿನ್ನ ಮಗನಾದ ದುರ್ಯೋಧನನು ಸೈರಿಸಿಕೊಂಡು ಓಡುತ್ತಿದ್ದ ಕುದುರೆಗಳನ್ನು ನಿಲ್ಲಿಸಿ, ಕಾಲಾಳುಗಳಿಗೆ ಧೈರ್ಯವನ್ನು ತುಂಬಿದನು. ಬಹುವಿಧದ ರಣ ವಾದ್ಯಗಳು ಮೊಳಗಲು, ಕೌರವನು ಅರ್ಜುನನ್ನೆದುರಿಸದುದು ಮಾರಿಯ ಸೆರಗನ್ನು ಹಿಡಿದಂತಾಯಿತು.

ಅರ್ಥ:
ಮುರಿ: ಸೀಳು; ಎಡಬಲ: ಅಕ್ಕಪಕ್ಕ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ತರುಬು: ತಡೆ, ನಿಲ್ಲಿಸು; ನಿನ್ನಾತ: ನಿನ್ನ ಮಗ; ಸೈರಿಸು: ತಾಳು, ಸಹಿಸು; ಹರಿ: ಸೀಳು; ದಳ: ಸೈನ್ಯ; ಕೂಡು: ಜೋಡಿಸು; ಕಲಿ: ಶೂರ; ಕಾಲಾಳು: ಸೈನಿಕ; ಒರಲು: ಕೂಗು; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ಬಿರುದನಿ: ಒರಟಾದ ಶಬ್ದ; ಉಬ್ಬೆದ್ದು: ಹೆಚ್ಚಾಗು; ಮಾರಿ: ಕ್ಷುದ್ರ ದೇವತೆ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ; ಹಿಡಿ: ಗ್ರಹಿಸು; ಕೆಣಕು: ರೇಗಿಸು;

ಪದವಿಂಗಡಣೆ:
ಮುರಿದುದ್+ಎಡಬಲವಂಕ+ ಪಾರ್ಥನ
ತರುಬಿದನು +ನಿನ್ನಾತ +ಸೈರಿಸಿ
ಹರಿ+ದಳವ +ಕೂಡಿದನು +ಕಲಿ+ಮಾಡಿದನು +ಕಾಲಾಳ
ಒರಲಿದವು +ಬಹುವಿಧದ +ವಾದ್ಯದ
ಬಿರುದನಿಗಳ್+ಉಬ್ಬೆದ್ದು +ಮಾರಿಯ
ಸೆರಗ +ಹಿಡಿದನು +ಕೌರವೇಶ್ವರನ್+ಅರ್ಜುನನ +ಕೆಣಕಿ

ಅಚ್ಚರಿ:
(೧) ರೂಪಕದ ಪ್ರಯೋಗ -ಮಾರಿಯ ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ

ಪದ್ಯ ೩: ಸೈನಿಕರು ಹೇಗೆ ಘಟೋತ್ಕಚನನ್ನು ಆವರಿಸಿದರು?

ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ (ದ್ರೋಣ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಎಡಬಲ ಹಿಂದೆ ಮುಂದೆ ಉಳಿದ ದಿಕ್ಕುಗಲಲ್ಲಿ ನುಗ್ಗಿ ಮಂದರಪರ್ವತವನ್ನು ಸಮುದ್ರದ ತೆರೆಗಳು ಅಪ್ಪಳಿಸುವಮ್ತೆ ಸೈನಿಕರು ನುಗ್ಗಿದರು. ಅವರನ್ನು ದೂರಕ್ಕೆ ದಬ್ಬಿದರೆ, ಕಟ್ಟಿರುವೆಗಳು ಹಾವನ್ನು ಮುತ್ತಿಕೊಂಡಂತೆ ಬಿದ್ದ ಹೆಣಗಲನ್ನು ತುಳಿದು ಘಟೋತ್ಕಚನ ಮೇಲೆ ಹಾಯ್ದರು.

ಅರ್ಥ:
ಎಡಬಲ: ಅಕ್ಕಪಕ್ಕ; ಹಿಂದೆ: ಹಿಂಭಾಗ; ಇದಿರು: ಎದುರು; ದಿಕ್ಕು: ದಿಶ; ಔಕು: ಒತ್ತು; ಬಲು: ಬಹಳ; ಕಡಲ: ಸಾಗರ; ಗಿರಿ: ಬೆಟ್ಟ; ಅಬುಧಿ: ಸಾಗರ; ತೆರೆ: ಅಲೆ, ತರಂಗ; ಒದೆ: ತುಳಿ, ಮೆಟ್ಟು; ಕೊಡಹು: ಬೆನ್ನುಬಿಡು; ಭುಜ: ಬಾಹು; ಅಳಿಸು: ನಾಶ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಬೀಳು: ಬಾಗು; ಹೆಣ: ಜೀವವಿಲ್ಲದ ಶರೀರ; ಇರುಹೆ: ಇರುವೆ;

ಪದವಿಂಗಡಣೆ:
ಎಡಬಲದಿ +ಹಿಂದ್+ಇದಿರಿನಲಿ +ಕೆಲ
ಕಡೆಯ +ದಿಕ್ಕಿನೊಳ್+ಔಕಿದರು +ಬಲು
ಕಡಲ+ ಕಡೆಹದ +ಹಿರಿಯನ್+ಅಬುಧಿಯ +ತೆರೆಗಳ್+ಒದೆವಂತೆ
ಕೊಡಹಿದರೆ+ ಕಟ್ಟಿರುಹೆಗಳು +ಬೆಂ
ಬಿಡದೆ +ಭುಜಗನನ್+ಅಳಿಸುವವೋಲ್
ಅಡಸಿ +ತಲೆಯೊತ್ತಿದರು +ಬೀಳುವ +ಹೆಣನ್+ಒಡಮೆಟ್ಟಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ; ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್

ಪದ್ಯ ೧೩: ಜಲಸಂಧನನ್ನು ಯಾರು ಕೊಂದರು?

ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಲನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ (ದ್ರೋಣ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಎಡಬಲಗಳಲ್ಲಿ ಬಂದ ಮದಗಜಗಳನ್ನು ಕಡಿದು ಹರಡಿದನು. ಚೂರಿಹಿಡಿದು ಬಂದ ರಾಜರಿಗೆ ದೇವ ಪದವಿಯನ್ನಿತ್ತನು. ಯಾವ ಮಿತಿಯೂ ಇಲ್ಲದೆ ವೀರರನ್ನು ಸಂಹರಿಸಿ, ಕಡಿಖಂಡ ಮಾಡಿದನು. ಜಲಸಂಧನೆಂಬ ರಾಜನನ್ನು ಕೊಂದನು.

ಅರ್ಥ:
ಎಡಬಲ: ಅಕ್ಕಪಕ್ಕ; ತೂಳು: ಬೆನ್ನಟ್ಟು, ಹಿಂಬಾಲಿಸು; ಮದ: ಅಮಲು; ಇಭ: ಆನೆ; ಕಡಿ: ಸೀಳು; ಹರಹು: ವಿಸ್ತಾರ, ವೈಶಾಲ್ಯ; ಔಕು: ನೂಕು; ಚೂರಿಸು: ಕತ್ತರಿಸು; ಗಡಣ: ಗುಂಪು; ಭೂಪ: ರಾಜ; ಅಮರ: ದೇವತೆ; ಪದವಿ: ಅಂತಸ್ತು, ಸ್ಥಾನ; ಕಡಿ: ಸೀಳು; ಬಿಸುಟು: ಹೊರಹಾಕು; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಡುಗಲಿ: ಪರಾಕ್ರಮಿ; ವೈರಿ: ಶತ್ರು; ಸೇನೆ: ಸೈನ್ಯ; ಅಡಗು: ಅವಿತುಕೊಳ್ಳು; ಅರಿ: ಸೀಳು; ಕೆಡಹು: ಬೀಳಿಸು; ಭೂಪತಿ: ರಾಜ;

ಪದವಿಂಗಡಣೆ:
ಎಡಬಲಕೆ +ತೂಳುವ +ಮದ+ಇಭವ
ಕಡಿದು +ಹರಹಿದನ್+ಔಕಿ +ಚೂರಿಸಿ
ಗಡಣಿಸುವ +ಭೂಪರಿಗೆ +ಮಾಡಿದನ್+ಅಮರ+ಪದವಿಯನು
ಕಡಿದು +ಬಿಸುಟನು +ಕೇಣವಿಲ್ಲದೆ
ಕಡುಗಲಿಗಲನು+ ವೈರಿ+ಸೇನೆಯ
ನಡಗುದ್+ಅರಿದನು +ಕೆಡಹಿದನು +ಜಲಸಂಧ+ಭೂಪತಿಯ

ಅಚ್ಚರಿ:
(೧) ಸಾಯಿಸಿದ ಎಂದು ಹೇಳಲು – ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು

ಪದ್ಯ ೩೦:ಸುಪ್ರತೀಕವನ್ನು ಹೇಗೆ ಎದುರಿಸಲು ಪಾಂಡವರು ಪ್ರಯತ್ನಿಸಿದರು?

ಹಿಂದೆ ಹಿಡಿವರು ಮುರಿದರೆಡದಲಿ
ಸಂದಣಿಸುವರು ತಿರುಗಿದರೆ ಬಲ
ದಿಂದ ಕೈ ಮಾಡುವರು ಕವಿದರೆ ಸಿಡಿವರೆಡಬಲಕೆ
ಮುಂದೆ ಕಟ್ಟುವರಟ್ಟಿದರೆ ಮುರಿ
ವಿಂದ ಬಾರುವರಾ ಮಹಾರಥ
ವೃಂದ ಕಾದಿತು ಮದಕರಿಯ ಬೇಸರದೆ ಬಳಿಸಲಿಸಿ (ದ್ರೋಣ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪಾಂಡವ ಮಹಾರಥರು ಬೇಸರವಿಲ್ಲದೆ ಅದರೊಡನೆ ಕಾದಿದರು. ಅದರ ಹಿಂದೆ ಹಿಡಿದಾಗ ಅದು ತಿರುಗಿದರೆ ಎಡದಲ್ಲಿ ಬಂದು ನಿಲ್ಲುತ್ತಿದ್ದರು. ಮೇಲೆ ಬಂದರೆ ಬಲಕ್ಕೂ ಎಡಕ್ಕೂ ಸರಿದು ಹೋಗುತ್ತಿದ್ದರು. ಅದನ್ನು ಕಟ್ಟಲು ಮುಂದೆ ಬಂದಾಗ ಅದು ಅಟ್ಟಿಕೋಂಡು ಬಂದರೆ ಅಡ್ಡತಿರುಗಿ ಜಾರಿಕೊಳ್ಳುತ್ತಿದ್ದರು.

ಅರ್ಥ:
ಹಿಂದೆ: ಪುರಾತನ; ಹಿಡಿ: ಹಿಡಿಕೆ, ಕಾವು; ಮುರಿ: ಸೀಳು; ಎಡ: ವಾಮಭಾಗ; ಸಂದಣಿ: ಗುಂಪು, ಸಮೂಹ; ತಿರುಗು: ಸುತ್ತು; ಬಲ: ದಕ್ಷಿಣ ಪಾರ್ಶ್ವ; ಕವಿ: ಆವರಿಸು; ಸಿಡಿ:ಚಿಮ್ಮು; ಎಡಬಲ: ಅಕ್ಕ ಪಕ್ಕ, ಎಲ್ಲಾ ಕಡೆ; ಮುಂದೆ: ಎದುರು; ಕಟ್ಟು: ಬಂಧಿಸು; ಅಟ್ಟು: ಬೆನ್ನುಹತ್ತಿ ಹೋಗು; ಬಾರು: ತೊಗಲು, ಚರ್ಮ; ಮಹಾರಥ: ಪರಾಕ್ರಮ; ವೃಂದ: ಗುಂಪು; ಕಾದು: ಹೋರಾಟ, ಯುದ್ಧ; ಮದ: ಮತ್ತು; ಕರಿ: ಆನೆ; ಬೇಸರ: ಬೇಜಾರು; ಬಳಿ: ಹತ್ತಿರ; ಸಲಿಸು: ದೊರಕಿಸಿ ಕೊಡು, ಪೂರೈಸು;

ಪದವಿಂಗಡಣೆ:
ಹಿಂದೆ +ಹಿಡಿವರು +ಮುರಿದರ್+ಎಡದಲಿ
ಸಂದಣಿಸುವರು+ ತಿರುಗಿದರೆ +ಬಲ
ದಿಂದ +ಕೈ +ಮಾಡುವರು +ಕವಿದರೆ +ಸಿಡಿವರ್+ಎಡಬಲಕೆ
ಮುಂದೆ +ಕಟ್ಟುವರ್+ಅಟ್ಟಿದರೆ +ಮುರಿ
ವಿಂದ +ಬಾರುವರಾ +ಮಹಾರಥ
ವೃಂದ +ಕಾದಿತು +ಮದಕರಿಯ +ಬೇಸರದೆ +ಬಳಿಸಲಿಸಿ

ಅಚ್ಚರಿ:
(೧) ಎಡ, ಬಲ, ಎಡಬಲ – ಪದಗಳ ಬಳಕೆ
(೨) ಮುರಿದರೆ, ತಿರುಗಿದರೆ, ಕವಿದರೆ, ಅಟ್ಟಿದರೆ – ಪದಗಳ ಬಳಕೆ

ಪದ್ಯ ೭೨: ದುರ್ಯೋಧನನು ಯಾವ ಆಜ್ಞೆಯನ್ನು ಮಾಡಿದನು?

ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ (ದ್ರೋಣ ಪರ್ವ, ೨ ಸಂಧಿ, ೭೨ ಪದ್ಯ)

ತಾತ್ಪರ್ಯ:
ಕೌರವಸೈನ್ಯ ಪುಡಿಪುಡಿಯಾಯಿತು, ಶತ್ರುಗಳು ಒಟ್ಟಾಗಿ ಸೇರಿ ಬರುತ್ತಿದ್ದಾರೆ. ಈಗ ದ್ರೋಣನೊಬ್ಬನನ್ನೇ ಯುದ್ಧಕ್ಕೆ ಬಿಟ್ಟು, ನಾವು ನೋಡುತ್ತಾ ನಿಲ್ಲುವುದು ಉಚಿತವಲ್ಲ ಎಂದು ಚಿಂತಿಸಿ ಎಡಬಲಕ್ಕೆ ನೋಡಿ, ಕೈಲಾಗದವರನ್ನು ದೂರಕ್ಕೆ ಕಳಿಸು ಎಂದಾಜ್ಞೆ ಮಾಡಿದನು. ತಾನು ಮುಂದೆ ಬಂದು ಅತಿರಥರನ್ನು ಬಾಣಗಳಿಂದ ಸಂಹರಿಸಿದನು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ನುಗ್ಗು: ಚೂರು, ನುಚ್ಚು; ವಿರೋಧಿ: ಶತ್ರು; ಇಟ್ಟಣ: ರಾಶಿ, ಗುಂಪು; ನೋಡು: ವೀಕ್ಷಿಸು; ಉಚಿತ: ಸರಿಯಾದ; ಎಡಬಲ: ಅಕ್ಕಪಕ್ಕ; ಆಹವ: ಯುದ್ಧ; ಅಹಿತ: ವೈರಿ; ಬಲ: ಸೈನ್ಯ; ಜಗಜಟ್ಟಿ: ಪರಾಕ್ರಮಿ; ನೃಪತಿ: ರಾಜ; ರಥ: ಬಂಡಿ; ಹೊಟ್ಟುಗ: ವ್ಯರ್ಥವಾಗಿ ಮಾತನಾಡುವವ; ತೆಗೆ: ಹೊರತರು; ಹೋಗ: ತೆರಳು; ಎಚ್ಚು: ಬಾಣ ಪ್ರಯೋಗ ಮಾದು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಥಟ್ಟು +ನುಗ್ಗಾಯಿತು +ವಿರೋಧಿಗಳ್
ಇಟ್ಟಣಿಸುತಿದೆ +ದ್ರೋಣನೊಬ್ಬನ
ಬಿಟ್ಟು +ನೋಡುವುದ್+ಉಚಿತವಲ್ಲೆನುತ್+ಎಡಬಲನ +ನೋಡಿ
ಬಿಟ್ಟನ್+ಆಹವಕ್+ಅಹಿತಬಲ+ ಜಗ
ಜಟ್ಟಿ +ಕೌರವ+ ನೃಪತಿ +ರಥವನು
ಹೊಟ್ಟುಗರ +ತೆಗೆ +ಹೋಗ +ಹೇಳೆಂದ್+ಎಚ್ಚನ್+ಅತಿರಥರ

ಅಚ್ಚರಿ:
(೧) ವಿರೋಧಿ, ಅಹಿತ – ಸಾಮ್ಯಾರ್ಥ ಪದ

ಪದ್ಯ ೫೯: ಭೀಮನು ಮಲ್ಲರನ್ನು ಎಲ್ಲಿಗೆ ಕಳುಹಿಸಿದನು?

ಕಂಡು ಪವನಜ ಗಹಗಹಿಸಿ ಮಿಗೆ ಮುಂ
ಕೊಂಡು ತುಳಿದನು ಎಡಬಲದೊಳುರೆ
ಹಿಂಡು ಜಟ್ಟಿಗರಸುವನಜಿಗಿಜಿಯಾಗೆ ಸಭೆಯೊಳಗೆ
ದೊಂಡೆಗರುಳೊಡಸೂಸೆ ಸಭೆಯಲಿ
ದಿಂಡುಗೆಡೆದರು ಬಂದ ಮಲ್ಲರು
ಕಂಡರೈ ಭಾನುಜನ ಪಟ್ಟಣಕಂದು ಐನೂರು (ವಿರಾಟ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಜೀಮೂತ ಮೊದಲಾದ ಮಲ್ಲರು ಸತ್ತುದನ್ನು ಕಂಡು ಭೀಮನು ಜೋರಾಗಿ ನಕ್ಕನು, ಅವರನ್ನು ನೆಲಕ್ಕೆ ಕೆಡವಿ ತುಳಿದು ಬಿಟ್ಟನು, ಅವರ ಪ್ರಾಣವು ಹಾರಿತು. ಅವರ ದೇಹಗಳು ಅಜಿಗಿಜಿಯಾದವು . ಕರುಳುಗಳು ಹೊರಬಿದ್ದವು. ಐನೂರು ಮಲ್ಲರೂ ಯಮಪುರವನ್ನು ಸೇರಿದರು.

ಅರ್ಥ:
ಕಂಡು: ನೋಡು; ಪವನಜ: ವಾಯುಪುತ್ರ (ಭೀಮ); ಗಹಗಹಿಸು: ಗಟ್ಟಿಯಾಗಿ ನಗು; ಮಿಗೆ: ಅಧಿಕ; ಮುಂಕೊಂಡು: ಮುನ್ನಡೆ; ತುಳಿ: ಮೆಟ್ಟು; ಎಡಬಲ: ಅಕ್ಕಪಕ್ಕ; ಉರೆ: ಅತಿಶಯವಾಗಿ; ಹಿಂಡು: ಗುಂಪು, ಸಮೂಹ; ಜಟ್ಟಿ: ಮಲ್ಲ; ಅಸು:ಪ್ರಾಣ; ಅಜಿಗಿಜಿ: ಅಸ್ತವ್ಯಸ್ತ, ಜಜ್ಜು; ಸಭೆ: ದರ್ಬಾರು; ದೊಂಡೆ: ಗೊಂಚಲು; ಕರುಳು: ಪಚನಾಂಗ; ಸೂಸು:ಎರಚುವಿಕೆ, ಚಲ್ಲುವಿಕೆ; ದಿಂಡುಗೆಡೆ: ಅಡ್ಡಬೀಳು; ಬಂದ: ಆಗಮಿಸು; ಮಲ್ಲ: ಜಟ್ಟಿ; ಕಂಡು: ನೋಡು; ಭಾನುಜ: ಯಮ; ಪಟ್ಟಣ: ಊರು;

ಪದವಿಂಗಡಣೆ:
ಕಂಡು +ಪವನಜ +ಗಹಗಹಿಸಿ+ ಮಿಗೆ +ಮುಂ
ಕೊಂಡು +ತುಳಿದನು +ಎಡಬಲದೊಳ್+ಉರೆ
ಹಿಂಡು +ಜಟ್ಟಿಗರ್+ಅಸುವನ್+ಅಜಿಗಿಜಿಯಾಗೆ +ಸಭೆಯೊಳಗೆ
ದೊಂಡೆ+ಕರುಳೊಡಸೂಸೆ +ಸಭೆಯಲಿ
ದಿಂಡುಗೆಡೆದರು +ಬಂದ +ಮಲ್ಲರು
ಕಂಡರೈ +ಭಾನುಜನ +ಪಟ್ಟಣಕಂದು +ಐನೂರು

ಅಚ್ಚರಿ:
(೧) ಯಮನನ್ನು ಭಾನುಜ ಎಂದು ಕರೆದಿರುವುದು
(೨) ಎಡಬಲ, ಗಹಗಹಿ, ಅಜಿಗಿಜಿ – ಪದಗಳ ಬಳಕೆ

ಪದ್ಯ ೨೫: ಬೇಟೆ ನಾಯಿಗಳು ಸಿಂಹದ ಮೇಲೆ ಹೇಗೆ ಹೋರಾಡಿದವು?

ಕಳಚಿ ಹಾಸವನಬ್ಬರಿಸಿ ಕು
ಪ್ಪಳಿಸಿ ಕಂಠೀರವನ ಮೋರೆಗೆ
ನಿಲುಕಿ ಕವಿದವು ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ
ಬಳಸಿದವು ಮೇಲ್ವಾಯ್ದುನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳ ಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಹಗ್ಗವನ್ನು ಕೈಬಿಡಲು, ಜೋರಾಗಿ ಬೊಗಳುತ್ತಾ ಬೇಟೆನಾಯಿಗಳು ಸಿಂಹಗಳ ಮುಖವನ್ನು ಆಕ್ರಮಿಸಿದವು. ಕೆಳಬಿದ್ದು ಮತ್ತೆ ಮೇಲಕ್ಕೆ ಹಾಯ್ದು, ಹೆಣಗಿ ಹಿಡಿದವು. ಮೃಗಗಳನ್ನು ಸೆಳೆದು ನಡುವನ್ನು ಹಿಡಿದು ಎಡಬಲಕ್ಕೆ ಎಳೆದಾಡಿದವು. ಮೇಲೆ ನೆಗೆದು ಮೃಗಗಳನ್ನು ಸೀಳಿದವು ಕುಕ್ಕಿದವು.

ಅರ್ಥ:
ಕಳಚು: ಬೇರ್ಪಡಿಸು; ಹಾಸ: ಹಗ್ಗ, ಪಾಶ; ಅಬ್ಬರಿಸು: ಗರ್ಜಿಸು; ಕುಪ್ಪಳಿಸು: ನೆಗೆ; ಕಂಠೀರವ: ಸಿಂಹ; ಮೋರೆ: ಮುಖ; ನಿಲುಕು: ಹತ್ತಿರ ಹೋಗು, ಚಾಚುವಿಕೆ; ಕವಿ: ಆವರಿಸು; ಬಿದ್ದು: ಬೀಳು; ಉಡಿ: ಸೊಂಟ; ಹಾಯ್ದು: ಹೊಡೆ; ಹಣುಗು: ಹೋರಾಡು; ತುಡುಕು: ಹೋರಾಡು, ಸೆಣಸು; ಸೆಳೆ: ಜಗ್ಗು, ಎಳೆ; ಉಕ್ಕುಳಿಸು: ತಪ್ಪಿಸಿಕೋ, ಕೈಮೀರು; ಎಡಬಲ: ಎರಡೂ ಕಡೆ; ಬಳಸು: ಆವರಿಸು; ಮೇಲ್ವಾಯ್ದು: ಮೇಲೆ ಬೀಳು; ನಿಂದು: ನಿಲ್ಲು; ಉಚ್ಚಳಿಸು: ಮೇಲೆ ಹಾರು;

ಪದವಿಂಗಡಣೆ:
ಕಳಚಿ +ಹಾಸವನ್+ಅಬ್ಬರಿಸಿ+ ಕು
ಪ್ಪಳಿಸಿ +ಕಂಠೀರವನ+ ಮೋರೆಗೆ
ನಿಲುಕಿ +ಕವಿದವು +ಬಿದ್ದು +ಹಾಯ್ದವು +ಹಣುಗಿ +ತುಡುಕಿದವು
ಸೆಳೆದವ್+ಉಡಿದ್+ಉಕ್ಕುಳಿಸಿ +ಎಡಬಲ
ಬಳಸಿದವು +ಮೇಲ್ವಾಯ್ದು+ನಿಂದ್
ಉಚ್ಚಳಿಸಿದವು +ಕುಸುಬಿದವು +ಕುನ್ನಿಗಳ್+ಅಖಿಳ +ಮೃಗಕುಲವ

ಅಚ್ಚರಿ:
(೧) ಹೋರಾಟದ ಚಿತ್ರಣ – ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ ಬಳಸಿದವು ಮೇಲ್ವಾಯ್ದುನಿಂದುಚ್ಚಳಿಸಿದವು ಕುಸುಬಿದವು

ಪದ್ಯ ೨೩: ಅರ್ಜುನನ ಮನಸ್ಸೇಕೆ ಇಬ್ಭಾಗವಾಯಿತು?

ಅರಸ ಚಿತ್ತೈಸಿತ್ತಲರ್ಜುನ
ನರೆಮುಗಿದ ಕಣ್ಣರಳ್ದವಂತಃ
ಕರಣ ಪಂಚೇದ್ರಿಯಕೆ ಬಿಟ್ಟುದು ತಗಹು ಕಳಕಳವ
ಮುರಿದು ಮುರಿದೆಡಬಲದ ತನ್ನವ
ರಿರವನೀಕ್ಷಿಸಿ ಕೋಪಶಿಖಿಯು
ಬ್ಬರದಲಿಬ್ಬಗಿಯಾದುದಂತರ್ಭಾವವಡಿಗಡಿಗೆ (ಕರ್ಣ ಪರ್ವ, ೨೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಅರ್ಜುನನ ಅರ್ಧ ಮುಚ್ಚಿದ ಕಣ್ಣುಗಳು ತೆಗೆಯಲಾರಂಭಿಸಿದವು. ಪಂಚೇದ್ರಿಯಗಳ ಮತ್ತು ಮನಸ್ಸಿನ ಕಳವಳದ ಅಪ್ಪುಗೆ ಬಿಟ್ತಿತು. ಎಡ ಬಲಗಳಿಗೆ ಹೊರಳಿನೋಡಿ ಪರಿವಾರದವರು ಇರುವ ಸ್ಥಿತಿಯನ್ನು ನೋಡಿ, ಕೋಪಜ್ವಾಲೆಯು ಹೆಚ್ಚಾಗಿ ಅವನ ಮನಸ್ಸು ಇಬ್ಭಾಗವಾಯಿತು.

ಅರ್ಥ:
ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಅರೆ: ಅರ್ಧ; ಮುಗಿದ: ಮುಚ್ಚಿದ; ಕಣ್ಣು: ನಯನ; ಅರಳು: ಅಗಲವಾಗು; ಅಂತಃಕರಣ: ಚಿತ್ತವೃತ್ತಿ, ಮನಸ್ಸು; ಪಂಚೇಂದ್ರಿಯ: ಕಣ್ಣು, ಕಿವಿ, ಮೂಗು, ನಾಲಗೆ, ಬಾಯಿ ಎಂಬ ಐದು ಇಂದ್ರಿಯಗಳು; ಬಿಟ್ಟು: ವಿರಾಮ, ತೊರೆ; ತಗಹು: ಅಡ್ಡಿ, ತಡೆ; ಕಳಕಳ: ವ್ಯಥೆ, ಉದ್ವಿಗ್ನತೆ; ಮುರಿ: ಸೀಳು; ಎಡಬಲ: ಎರಡು ಬದಿ; ಇರವ: ಇರುವ ಸ್ಥಿತಿ; ಈಕ್ಷಿಸು: ನೋಡು; ಕೋಪ: ಕ್ರೋಧ; ಶಿಖಿ: ಅಗ್ನಿ; ಉಬ್ಬರ: ಹೆಚ್ಚಳ; ಇಬ್ಬಗಿ: ಎರಡು ತುಂಡು; ಅಂತರ್ಭಾವ: ಮನಸ್ಸಿನ ಭಾವನೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ;

ಪದವಿಂಗಡಣೆ:
ಅರಸ +ಚಿತ್ತೈಸ್+ಇತ್ತಲ್+ಅರ್ಜುನನ್
ಅರೆಮುಗಿದ +ಕಣ್ಣ್+ಅರಳ್ದವ್+ಅಂತಃ
ಕರಣ+ ಪಂಚೇದ್ರಿಯಕೆ +ಬಿಟ್ಟುದು +ತಗಹು +ಕಳಕಳವ
ಮುರಿದು+ ಮುರಿದ್+ಎಡಬಲದ +ತನ್ನವರ್
ಇರವನ್+ಈಕ್ಷಿಸಿ +ಕೋಪ+ಶಿಖಿ
ಉಬ್ಬರದಲ್+ಇಬ್ಬಗಿಯಾದುದ್+ಅಂತರ್ಭಾವವ್+ಅಡಿಗಡಿಗೆ

ಅಚ್ಚರಿ:
(೧) ಕಳಕಳವು ಕಡಿಮೆಯಾಯಿತು ಎಂದು ಹೇಳಲು – ಅಂತಃಕರಣ ಪಂಚೇದ್ರಿಯಕೆ ಬಿಟ್ಟುದು ತಗಹು ಕಳಕಳವ

ಪದ್ಯ ೯೮: ಚಮರಧಾರಕನ ಗುಣಗಳೇನು?

ಎಡಬಲವನಾರೈವುತೊಡೆಯನ
ಬಿಡದೆ ನೋಡುತೆ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿ ಕಾರ್ಯಕೆ
ಯೆಡೆಯಿನಿಸುತಾವಾಗ ಸೇವೆಯ
ಬಿಡದೆ ಮಾಳ್ಪನೆ ಚಮರಧಾರಕನರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೮ ಪದ್ಯ)

ತಾತ್ಪರ್ಯ:
ರಾಜನಿಗೆ ಚಾಮರಬೀಸುವವರ ಗುಣಗಳ ವಿವರಣೆ ಈ ಪದ್ಯದಲ್ಲಿ ಕಾಣಬಹುದು. ಎಡಬಲಗಳನ್ನು ಅವಲೋಕಿಸಿ, ರಾಜನ ಮೇಲೆ ಗಮನವಿಟ್ಟು ಗಮನಿಸುತ್ತ, ಮುತ್ತುವ ನೊಣಗಳನ್ನೋಡಿಸುತ್ತಾ ಓರೆ ನೋಟದಿಂದ ಅಕ್ಕ ಪಕ್ಕಕ್ಕೆ ಬರುವವರನ್ನು ದೂರ ನೂಕುತ್ತಾ, ಯಾವಗಲೂ ಸ್ವಾಮಿಕಾರ್ಯನಿರತನಾಗಿ ಸೇವೆಯನ್ನು ಮಾಡುವವನೇ ಚಾಮರಧಾರಕ ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಎಡ: ವಾಮ; ಬಲ: ದಕ್ಷಿಣ ಪಾರ್ಶ್ವ; ಆರೈವುತ: ಪೋಷಣೆ, ಶುಶ್ರೂಷೆ; ಒಡೆಯ: ರಾಜ; ಬಿಡದೆ: ಯಾವಾಗಲು; ನೋಡು: ವೀಕ್ಷಿಸು; ಮಕ್ಷಿಕ: ನೊಣ; ಗಡಣ: ಕೂಡಿಸುವಿಕೆ, ಸೇರಿಸುವಿಕೆ, ಗುಂಪು; ಕೆದರಿಸ್: ಚದುರಿಸು, ಓಡಿಸು; ಕಿಗ್ಗಣ್ಣು: ಕೆಳಮೊಗವಾಗಿರುವ ಕಣ್ಣು; ಕೆಲಬಲ: ಅಕ್ಕಪಕ್ಕ; ಜಡಿದು: ಹೊಡೆತ; ನೂಕು: ತಳ್ಳು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಎಡೆ: ಅವಕಾಶ, ಸಂದರ್ಭ; ಸೇವೆ: ಊಳಿಗ, ಚಾಕರಿ; ಮಾಳ್ಪ: ಮಾಡುವವ; ಚಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ, ಚಾಮರ; ಧಾರಕ: ಹಿಡಿದಿರುವ; ಅರಸ: ರಾಜ;

ಪದವಿಂಗಡಣೆ:
ಎಡ+ಬಲವನ್+ಆರೈವುತ್+ಒಡೆಯನ
ಬಿಡದೆ +ನೋಡುತೆ +ಮಕ್ಷಿಕಂಗಳ
ಗಡಣವನು+ ಕೆದರಿಸುತ +ಕಿಗ್ಗಣ್ಣಿಕ್ಕಿ +ಕೆಲಬಲನ
ಜಡಿದು +ನೂಕುವ +ಸ್ವಾಮಿ +ಕಾರ್ಯಕೆ
ಯೆಡೆಯಿನಿಸುತ್+ಆವಾಗ +ಸೇವೆಯ
ಬಿಡದೆ +ಮಾಳ್ಪನೆ +ಚಮರಧಾರಕನ್+ಅರಸ +ಕೇಳೆಂದ

ಅಚ್ಚರಿ:
(೧) ಎಡಬಲ, ಕೆಲಬಲ – ಜೋಡಿ ಪದಗಳ ಬಳಕೆ
(೨) ಮಕ್ಷಿಕ – ನೊಣ, ಮಕ್ಷಿಕಂಗಳ – ನೊಣಗಳು, ಮಕ್ಷಿಕಂಗಳ ಗಡಣ – ನೊಣಗಳ ಗುಂಪು
(೩) ಸ್ವಾಮಿ, ಒಡೆಯ – ಸಮನಾರ್ಥಕ ಪದ