ಪದ್ಯ ೫೦: ಅರ್ಜುನನು ಬೃಹನ್ನಳೆಯಾಗಲು ಕಾರಣವೇನು?

ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಲ್ಜೋಡಾಯ್ತು ನಿರ್ವಿ
ಘ್ನದಲಿ ದಾಂಟಿದೆವವಧಿಯನು ನ
ಮ್ಮೆದಟತನವನು ಭೀತಿಯಿಲ್ಲದೆ ನೋಡು ನೀನೆಂದ (ವಿರಾಟ ಪರ್ವ, ೭ ಸಂಧಿ, ೫೦ ಪದ್ಯ)

ತಾತ್ಪರ್ಯ:
ಉತ್ತರಕುಮಾರ, ಧರ್ಮಜನ ಸತ್ಯದ ಹೆಚ್ಚಳಕ್ಕಾಗಿ, ಊರ್ವಶಿಯು ಕೊಟ್ಟ ಶಾಪದಿಂದ ಈ ನಪುಂಸಕತನವು ಒಂದು ವರ್ಷಕಾಲ ಬಂದಿತು, ಅಜ್ಞಾತವಾಸಕ್ಕೆ ಈ ಬೃಹನ್ನಳೆ ವೇಷವನ್ನು ಜೋಡಿಸಿಕೊಂಡು ಕಳೆದೆನು. ಇನ್ನು ನೀನು ನನ್ನ ಪರಾಕ್ರಮವನ್ನು ಭಯಗೊಳ್ಳದೆ ನೋಡು ಎಂದು ಅರ್ಜುನನು ಹೇಳಿದನು.

ಅರ್ಥ:
ಅಭ್ಯುದಯ: ಅಭಿವೃದ್ಧಿ; ಓಸುಗ: ಓಸ್ಕರ; ಶಾಪ: ನಿಷ್ಠುರದ ನುಡಿ; ಹೊತ್ತು: ಧರಿಸು; ನೂಕು: ತಳ್ಳು; ವತ್ಸರ: ವರ್ಷ; ಜೋಡು: ಜೊತೆ; ನಿರ್ವಿಘ್ನ: ಅಡಚಣೆಗಳಿಲ್ಲದೆ; ಅವಧಿ: ಕಾಲ; ಎದಟತನ: ಪರಾಕ್ರಮ; ಭೀತಿ: ಭಯ; ನೋಡು: ವೀಕ್ಷಿಸು;

ಪದವಿಂಗಡಣೆ:
ಇದು +ಕಣಾ +ಧರ್ಮಜನ +ಸತ್ಯ
ಅಭ್ಯುದಯಕ್+ಓಸುಗ +ಊರ್ವಶಿಯ+ ಶಾ
ಪದಲಿ +ಬಂದುದು +ಹೊತ್ತು +ನೂಕಿದೆನ್+ಒಂದು +ವತ್ಸರವ
ಇದಕೆ +ನಲ್ಜೋಡಾಯ್ತು+ ನಿರ್ವಿ
ಘ್ನದಲಿ +ದಾಂಟಿದೆವ್+ಅವಧಿಯನು +ನಮ್ಮ್
ಎದಟತನವನು+ ಭೀತಿಯಿಲ್ಲದೆ +ನೋಡು +ನೀನೆಂದ

ಅಚ್ಚರಿ:
(೧) ಅರ್ಜುನನ ಪರಾಕ್ರಮ – ನಮ್ಮೆದಟತನವನು ಭೀತಿಯಿಲ್ಲದೆ ನೋಡು

ಪದ್ಯ ೭: ದ್ರೌಪದಿಯ ಸೌಂದರ್ಯ ಹೇಗಿತ್ತು?

ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯ ವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳದ ಪಸರಕೆ
ಕವಿದ ತುಂಬಿಯ ಸಾರಸಂಗೀ
ತವನು ಕೇಳುತ ಕಂಡನವ ಪಾಂಚಾಲನಂದನೆಯ (ವಿರಾಟ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ನಕ್ಷತ್ರಗಳ ನಡುವೆ ರೋಹಿಣಿಯಂತೆಯೂ, ಅಪ್ಸರೆಯರಲ್ಲಿ ಊರ್ವಶಿಯಂತೆಯೂ, ನದಿಗಳ ನಡುವೆ ಗಂಗಾ ನದಿಯಂತೆಯೂ, ದ್ರೌಪದಿಯು ಅವರ ನಡುವೆ ಕಂಡಳು. ಅವಳ ದೇಹದ ಸುಗಂಧಕ್ಕೆ ದುಂಬಿಗಳು ಮುತ್ತಿ ಹಾಡುತ್ತಿದ್ದವು.

ಅರ್ಥ:
ಮಧ್ಯ: ನಡುವೆ; ಅಮಲ: ನಿರ್ಮಲ; ತಾರ: ನಕ್ಷತ್ರ; ನಿವಹ: ಗುಂಪು; ಸುರಯುವತಿ: ಅಪ್ಸರೆ; ನದಿ: ಹೊಳೆ, ತೊರೆ; ಜಾಹ್ನವಿ: ಗಂಗೆ; ಅವಯವ: ದೇಹ; ಪರಿಮಳ: ಸುಗಂಧ; ಪಸರ: ಹರಡು; ಕವಿದು: ಆವರಿಸು; ತುಂಬಿ: ದುಂಬಿ, ಜೇನುನೋಣ; ಸಾರ: ತಿರುಳು, ಮಳೆ, ಗುಣ; ಸಂಗೀತ: ಮಧುರವಾದ ಗಾಯನ; ಕೇಳು: ಆಲಿಸು; ಕಂಡು: ನೋಡು; ನಂದನೆ: ಮಗಳು;

ಪದವಿಂಗಡಣೆ:
ಅವರ +ಮಧ್ಯದಲ್+ಅಮಲ +ತಾರಾ
ನಿವಹದಲಿ +ರೋಹಿಣಿಯವೋಲ್ +ಸುರ
ಯುವತಿಯರಲ್+ಊರ್ವಶಿಯ +ವೋಲ್ +ನದಿಗಳೊಳು+ ಜಾಹ್ನವಿಯ
ಅವಯವದ +ಪರಿಮಳದ +ಪಸರಕೆ
ಕವಿದ +ತುಂಬಿಯ +ಸಾರ+ಸಂಗೀ
ತವನು+ ಕೇಳುತ +ಕಂಡನವ +ಪಾಂಚಾಲ+ನಂದನೆಯ

ಅಚ್ಚರಿ:
(೧) ಉಪಮಾನಗಳ ಬಳಕೆ: ಅಮಲ ತಾರಾ ನಿವಹದಲಿ ರೋಹಿಣಿಯವೋಲ್ ಸುರಯುವತಿಯರಲೂರ್ವಶಿಯ ವೋಲ್ ನದಿಗಳೊಳು ಜಾಹ್ನವಿಯ
(೨) ಅವಯವದ ಪರಿಮಳದ ಪಸರಕೆ ಕವಿದ ತುಂಬಿಯ ಸಾರಸಂಗೀತವನು

ಪದ್ಯ ೧೪: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಏಳೆನುತ ತೆಗೆದಪ್ಪಿದನು ಕರು
ಣಾಳು ಕೇಳೈ ಭೂಪ ಸುರಪತಿ
ಯಾಲಯದೊಳೂರ್ವಶಿಯ ಶಾಪವು ಬಂದೊಡೇನಾಯ್ತು
ಲೀಲೆಯಿಂದೀ ಭೀಮ ದೈತ್ಯರ
ಭಾಲಲಿಪಿಯನು ತೊಡೆದ ನಿನ್ನಯ
ಬಾಳು ಬರಹವು ಮುಂದೆಯೆಂದನು ನಗುತ ಮುರವೈರಿ (ಅರಣ್ಯ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರುಣಾಳವಾದ ಶ್ರೀಕೃಷ್ನನು ಧರ್ಮನಂದನನ್ನು ಏಳು ಎಂದು ಹೇಳಿ ಅವನನ್ನು ಆಲಂಗಿಸಿಕೊಂಡು ನಗುತ್ತಾ, ಅರ್ಜುನನಿಗೆ ಊರ್ವಶಿಯ ಶಾಪ ಬಂದರೇನಂತೆ? ಭೀಮನು ರಾಕ್ಷಸರನ್ನು ಸಂಹರಿಸಿದನಷ್ಟೇ, ಮುಂದೆ ನಿನ್ನ ಜೀವನಯನ್ನು ನೋಡು ಎಂದನು.

ಅರ್ಥ:
ಏಳು: ಮೇಲೆ ಬಾ; ಅಪ್ಪು: ಆಲಿಂಗಿಸು; ಕರುಣಾಳು: ದಯೆಯುಳ್ಳವನು; ಭೂಪ: ರಾಜ; ಸುರಪತಿ: ಇಂದ್ರ; ಆಲಯ: ಮನೆ; ಶಾಪ: ನಿಷ್ಠುರದ ನುಡಿ; ಲೀಲೆ: ಆಟ, ಕ್ರೀಡೆ; ದೈತ್ಯ: ರಾಕ್ಷಸ; ಭಾಳಲಿಪಿ: ಹಣೆಬರಹ; ತೊಡೆ: ಅಳಿಸು, ಒರಸು; ಬಾಳು: ಜೀವನ; ಬರಹ: ಲಿಖಿತ; ನಗು: ಸಂತಸ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಏಳೆನುತ +ತೆಗೆದಪ್ಪಿದನು +ಕರು
ಣಾಳು +ಕೇಳೈ +ಭೂಪ +ಸುರಪತಿ
ಆಲಯದೊಳ್+ಊರ್ವಶಿಯ +ಶಾಪವು +ಬಂದೊಡೇನಾಯ್ತು
ಲೀಲೆಯಿಂದೀ+ ಭೀಮ +ದೈತ್ಯರ
ಭಾಳಲಿಪಿಯನು +ತೊಡೆದ +ನಿನ್ನಯ
ಬಾಳು +ಬರಹವು +ಮುಂದೆ+ಎಂದನು +ನಗುತ +ಮುರವೈರಿ

ಅಚ್ಚರಿ:
(೧) ಭಾಳಲಿಪಿ, ಬಾಳುಬರಹ – ಹಣೆಬರಹ, ಜೀವನ ಬರಹ – ಪದಗಳ ಬಳಕೆ

ಪದ್ಯ ೬೪: ನಹುಷನಲ್ಲಿ ಯಾರು ದಾಸಿಯರಾದರು?

ಅರಸ ಕೇಳೈ ರಂಭೆಯೂರ್ವಶಿ
ವರತಿಲೋತ್ತಮೆ ಗೌರಿ ಮೇನಕೆ
ಸುರಭಿಗಂಧಿನಿ ಮಂಜುಘೋಷೆ ಸುಕೇಶಿ ಮೊದಲಾದ
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆಂದನಾ ನಹುಷ (ಅರಣ್ಯ ಪರ್ವ, ೧೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಧರ್ಮಜ ಕೇಳು, ಊರ್ವಶಿ, ರಂಭೆ, ತಿಲೋತ್ತಮೆ, ಗೌರಿ, ಮೇನಕೆ, ಸುರಭಿಗಂಧಿನಿ, ಮಂಜಘೋಷೆ, ಸುಕೇಶಿ ಮೊದಲಾದ ಅಪ್ಸರೆಯರು ನನ್ನ ಅರಮನೆಯ ದಾಸಿಯರಾದರು, ಅವರ ಸಂಖ್ಯೆ ಮೂರು ಲಕ್ಷದ ಮೂವತ್ತಾರು ಸಾವಿರದಲ್ಲಿತ್ತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಸುರಸತಿ: ಅಪ್ಸರೆ; ಅರಮನೆ: ರಾಜರ ಆಲಯ; ತೋತ್ತು: ದಾಸಿ; ಹೊರಗೆ: ಆಚೆ, ಮೇಲೆ;

ಪದವಿಂಗಡಣೆ:
ಅರಸ +ಕೇಳೈ +ರಂಭೆ+ಊರ್ವಶಿ
ವರ+ತಿಲೋತ್ತಮೆ +ಗೌರಿ +ಮೇನಕೆ
ಸುರಭಿಗಂಧಿನಿ +ಮಂಜುಘೋಷೆ +ಸುಕೇಶಿ +ಮೊದಲಾದ
ಸುರಸತಿಯರ್+ಎನ್+ಅರಮನೆಯ+ ತೊ
ತ್ತಿರುಗಳಾದರು+ ಮೂರು +ಲಕ್ಷದ
ಹೊರಗೆ +ಮೂವತ್ತಾರು +ಸಾವಿರವೆಂದನಾ+ ನಹುಷ

ಅಚ್ಚರಿ:
(೧) ಅಪ್ಸರೆಯರ ಹೆಸರು: ರಂಭೆ, ಊರ್ವಶಿ, ತಿಲೋತ್ತಮೆ, ಗೌರಿ, ಮೇನಕೆ, ಸುರಭಿಗಂಧಿನಿ, ಮಂಜುಘೋಷೆ, ಸುಕೇಶಿ

ಪದ್ಯ ೫೨: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣಾ
ಹಳುವದಲಿ ಹನ್ನೆರಡುವರುಷದ
ಕಳಹಿನಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ (ಅರಣ್ಯ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಸಂತೈಸುತ್ತಾ ಇಂದ್ರನು, ಎಲೈ ಅರ್ಜುನ ಊರ್ವಶಿಯ ಶಾಪಕ್ಕೆ ನೀನೇಕೆ ಹೆದರುವೆ, ವೃಥಾ ಮನೋವ್ಯಥೆ ಪಡುವೆ? ಅವಳಿಗೆ ಬಂದ ಕೋಪದಿಂದ ನಿನಗೆ ಉಪಕಾರವೇ ಆಗಿದೆ, ಹನ್ನೆರಡು ವರುಷ ವನವಾಸ ಮುಗಿದ ಮೇಲೆ, ಒಂದು ವರುಷ ಅಜ್ಞಾತವಾಸ ಮಾಡುವುದಕ್ಕೆ ಈ ನಪುಂಸಕತನವೇ ನಿನಗೆ ಸಾಧನವಾಗುತ್ತದೆ ಎಂದು ಬುದ್ಧಿಮಾತನ್ನು ಹೇಳಿ ಸಂತೈಸಿದನು.

ಅರ್ಥ:
ಕಿರೀಟಿ: ಅರ್ಜುನ; ವೃಥ: ಸುಮ್ಮನೆ; ವ್ಯಥೆ: ನೋವು, ಯಾತನೆ; ಮನ: ಮನಸ್ಸು, ಚಿತ್ತ; ತಳಿತ: ಚಿಗುರಿದ; ಶಾಪ: ನಿಷ್ಠುರದ ನುಡಿ; ಅಳುಕು: ಹೆದರು; ಕ್ರೋಧ: ಕೋಪ; ಉಪಕಾರ: ಸಹಾಯ; ಹಳುವ: ಕಾಡು; ವರುಷ: ಸಂವತ್ಸರ; ಕಳೆ: ಪಾರುಮಾಡು, ಹೋಗಲಾಡಿಸು; ಅಜ್ಞಾತ: ತಿಳಿಯದ; ಸಾಧನ: ಉಪಕರಣ; ಶಿಖಂಡಿ: ನಪುಂಸಕ;

ಪದವಿಂಗಡಣೆ:
ಎಲೆ +ಕಿರೀಟಿ +ವೃಥಾ +ಮನೋವ್ಯಥೆ
ತಳಿತುದೇಕ್+ ಊರ್ವಶಿಯ +ಶಾಪದಲ್
ಅಳುಕಿದೈ +ತತ್+ಕ್ರೋಧ +ನಿನಗ್+ಉಪಕಾರವಾಯ್ತು +ಕಣಾ
ಹಳುವದಲಿ +ಹನ್ನೆರಡು+ವರುಷದ
ಕಳಹಿನ್+ಅಜ್ಞಾತದಲಿ +ವರುಷವ
ಕಳೆವೊಡ್+ಇದು +ಸಾಧನವೆಯಾಯ್ತು +ಶಿಖಂಡಿತನವೆಂದ

ಅಚ್ಚರಿ:
(೧) ಶಾಪವನ್ನು ಉಪಯೋಗಿಸಿಕೊಳ್ಳುವ ಉಪಾಯ – ಅಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ

ಪದ್ಯ ೯೧: ಯಾವ ಅಪ್ಸರೆಯರು ಇಂದ್ರನ ಆಸ್ಥಾನಕ್ಕೆ ಬಂದರು?

ವರತಿಲೋತ್ತಮೆ ರಂಭೆ ಮಧುರ
ಸ್ವರೆ ಘೃತಾಚಿ ಸುಕೇಶಿ ಗೌರೀ
ಶ್ವರಿ ವರೂಥಿನಿ ಪೂರ್ವ ಚಿತ್ತಿ ಸುಲೇಖೆ ಚಿತ್ರರಥಿ
ಸುರಭಿಗಂಧಿನಿ ಚಾರುಮುಖಿ ಸೌಂ
ದರಿಯನಿಧಿಯೂರ್ವಶಿ ಸುಲೋಚನೆ
ಸುರಸೆಯೆನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ (ಅರಣ್ಯ ಪರ್ವ, ೮ ಸಂಧಿ, ೯೧ ಪದ್ಯ)

ತಾತ್ಪರ್ಯ:
ತಿಲೋತ್ತಮೆ, ರಂಭೆ, ಮಧುರಸ್ವರೆ, ಘೃತಾಚಿ, ಸುಕೇಶಿ, ಗೌರಿ, ಈಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿಗಂಧಿನಿ, ಚಾರುಮುಖಿ, ಸೌಂದರ್ಯನಿಧಿಯಾದ ಊರ್ವಶಿ, ಸುಲೋಚನೆ, ಸುರಸೆಯೇ ಮೊದಲಾದ ಅಸಂಖ್ಯಾತ ಅಪ್ಸರೆಯರು ಇಂದ್ರನ ಆಸ್ಥಾನಕ್ಕೆ ಬಂದರು.

ಅರ್ಥ:
ವರ: ಶ್ರೇಷ್ಠ; ಸೌಂದರ್ಯ: ಚೆಲುವು; ನಿಧಿ: ನಿಕ್ಷೇಪ, ಕಡಲು; ಅಂಗನೆ: ಹೆಣ್ಣು; ಐದು: ಬಂದು ಸೇರು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ವರ+ತಿಲೋತ್ತಮೆ +ರಂಭೆ +ಮಧುರ
ಸ್ವರೆ +ಘೃತಾಚಿ +ಸುಕೇಶಿ +ಗೌರೀ
ಶ್ವರಿ +ವರೂಥಿನಿ+ ಪೂರ್ವ +ಚಿತ್ತಿ +ಸುಲೇಖೆ +ಚಿತ್ರರಥಿ
ಸುರಭಿಗಂಧಿನಿ +ಚಾರುಮುಖಿ +ಸೌಂ
ದರಿಯ+ನಿಧಿ+ಊರ್ವಶಿ+ ಸುಲೋಚನೆ
ಸುರಸೆಯೆನಿಪಂಗನೆಯರ್+ಐದಿತು +ಕೋಟಿ +ಸಂಖ್ಯೆಯಲಿ

ಅಚ್ಚರಿ:
(೧) ಅಪ್ಸರೆಯರ ಹೆಸರು: ತಿಲೋತ್ತಮೆ, ರಂಭೆ, ಮಧುರಸ್ವರೆ, ಘೃತಾಚಿ, ಸುಕೇಶಿ, ಗೌರಿ, ಈಶ್ವರಿ, ವರೂಥಿನಿ, ಪೂರ್ವಚಿತ್ತಿ, ಸುಲೇಖೆ, ಚಿತ್ರರಥಿ, ಸುರಭಿಗಂಧಿನಿ, ಚಾರುಮುಖಿ, ಊರ್ವಶಿ, ಸುಲೋಚನೆ, ಸುರಸೆಯೆ

ಪದ್ಯ ೧೦೨: ಅರ್ಜುನನು ಯಾವುದರಲ್ಲಿ ಓಲಾಡಿದನು?

ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾ ಸ್ತುತಿರವದ ತುಂಬುರ ನಾರದಾದಿಗಳ
ವರರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಶಿವನು ಅರ್ಜುನನನ್ನು ಅನುಗ್ರಹಿಸಿದ ಶುಭ ಸಂದರ್ಭದಲ್ಲಿ ದೇವರ್ಷಿಗಳು ವೇದ ಘೋಷ ಮಾಡಿದರು. ಗರುಡ ಗಂಧರ್ವರು ಮಹಾಸ್ತೋತ್ರಗಳಿಂದ ಶಿವನನ್ನು ಸ್ತುತಿಸಿದರು. ತುಂಬುರನಾರದರು ದಿವ್ಯ ಗೀತೆಯನ್ನು ಹಾಡಿದರು. ಊರ್ವಶಿಯೇ ಮೊದಲಾದ ಅಪ್ಸರೆಯರು ನರ್ತಿಸಿದರು. ಶಿವನ ಕರುಣಾ ಸಮುದ್ರದಲ್ಲಿ ಅರ್ಜುನನು ಸುಖದಿಂದ ವಿಹರಿಸಿದನು.

ಅರ್ಥ:
ಸುರ: ದೇವತೆ; ಮುನಿ: ಋಷಿ; ಈಶ: ಒಡೆಯ, ಪ್ರಭು; ವೇದ: ಜ್ಞಾನ; ಮಂತ್ರ: ಛಂದೋಬದ್ಧವಾದ ದೇವತಾ ಸ್ತುತಿ; ಸ್ತುತಿ: ಸ್ತೋತ್ರ, ಹೊಗಳಿಕೆ; ರವ: ಶಬ್ದ; ಆದಿ: ಮುಂತಾದ; ವರ: ಶ್ರೇಷ್ಠ; ರಸ: ಸಾರ; ಅನ್ವಿತ: ಒಡಗೂಡಿದ; ಗೀತ: ಹಾಡು; ಊರ್ವಶಿ: ಅಪ್ಸರೆಯ ಹೆಸರು; ನೃತ್ಯ: ನಾಟ್ಯ; ದಿವ್ಯ: ಶ್ರೇಷ್ಠ; ವಾದ್ಯ: ಸಂಗೀತದ ಸಾಧನ; ಹರ: ಶಿವ; ಕರುಣೆ: ದಯೆ; ಅಂಬುಧಿ: ಸಾಗರ; ಓಲಾಡು: ಸುಖದಿಂದ ಆಡು; ಕಲಿ: ಶೂರ;

ಪದವಿಂಗಡಣೆ:
ಸುರ+ಮುನೀಶರ+ ವೇದ +ಮಂತ್ರ
ಉಚ್ಚರಣ +ನಾದದ +ಗರುಡ +ಗಂಧ
ರ್ವರ +ಮಹಾ +ಸ್ತುತಿ+ರವದ +ತುಂಬುರ +ನಾರದಾದಿಗಳ
ವರ+ರಸಾನ್ವಿತ+ ಗೀತದ್+ ಊರ್ವಶಿ
ಯರ+ ಸುನೃತ್ಯದ +ದಿವ್ಯ+ವಾದ್ಯದ
ಹರನ+ ಕರುಣಾಂಬುಧಿಯಲ್+ಓಲಾಡಿದನು +ಕಲಿಪಾರ್ಥ

ಅಚ್ಚರಿ:
(೧) ಶಿವನ ಕರುಣೆಯನ್ನು ವಿವರಿಸುವ ಪರಿ – ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ

ಪದ್ಯ ೬೪: ಐರಾವತದ ಮೇಲೆ ಸುರಸತಿಯರು ಹೇಗೆ ಕೂತಿದ್ದರು?

ಸುರಪನಾನೆಯ ಮೇಲೆಯೂರ್ವಶಿ
ಯರಮನೆಯ ವೋಲಗದ ಸತಿಯರು
ಹಿರಿದು ಶೃಂಗಾರವನು ಮಾಡಿದರೇನ ಹೇಳುವೆನು
ಕೊರಳ ಹಾರದ ಕರ್ಣಪೂರದ
ಕರಚರಣದಾಭರಣ ಮೆರೆಯಲು
ಸುರಸತಿಯರನುವಾದರವನೀಪಾಲ ಕೇಳೆಂದ (ಆದಿ ಪರ್ವ, ೨೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಐರಾವತದ ಮೇಲೆ ಊರ್ವಶಿಯ ಓಲಗದ ಸ್ತ್ರೀಯರೆಲ್ಲರೂ ಕುಳಿತರು, ಅವರು ಕೈಕಾಲುಗಳಲ್ಲಿ ಆಭರಣವನ್ನು ಹಾಕಿಕೊಂಡು, ಕೊರಳಿನಲ್ಲಿ ಹಾರಗಳನ್ನು ಧರಿಸಿ, ಕಿವಿಯೋಲೆಗಳನ್ನು ಇಟ್ಟುಕೊಂಡು ಹಿರಿದಾದ ಶೃಂಗಾರವನ್ನು ಮಾದಿಕೊಂಡು ಕುಳಿತಿದ್ದರು.

ಅರ್ಥ:
ಸುರಪ: ಇಂದ್ರ; ಆನೆ: ಕರಿ, ಗಜ; ಮೇಲೆ: ಅಗ್ರಭಾಗ; ಅರಮನೆ: ರಾಜರ ವಾಸಸ್ಥಾನ; ವೋಲಗ: ದರ್ಬಾರು; ಸತಿ: ಸ್ತ್ರೀ; ಹಿರಿದು: ಶ್ರೇಷ್ಠ; ಶೃಂಗಾರ: ಸೌಂದರ್ಯ; ಕೊರಳ: ಕತ್ತು; ಹಾರ: ಮಾಲೆ; ಕರ್ಣ: ಕಿವಿ; ಆಭರಣ: ಒಡವೆ; ಮೆರೆ: ಹೊಳೆ, ಪ್ರಕಾಶಿಸು; ಅನುವಾದರು: ಸಿದ್ಧರಾದರು; ಅವನೀಪಾಲ: ರಾಜ; ಕರ: ಕೈ; ಚರಣ: ಪಾದ

ಪದವಿಂಗಡಣೆ:
ಸುರಪನ್+ಆನೆಯ +ಮೇಲೆ+ಊರ್ವಶಿ
ಅರಮನೆಯ +ವೋಲಗದ +ಸತಿಯರು
ಹಿರಿದು+ ಶೃಂಗಾರವನು +ಮಾಡಿದರೇನ +ಹೇಳುವೆನು
ಕೊರಳ+ ಹಾರದ +ಕರ್ಣಪೂರದ
ಕರಚರಣದ್+ಆಭರಣ +ಮೆರೆಯಲು
ಸುರಸತಿಯರ್+ಅನುವಾದರ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಹಾರದ ಪೂರದ – ಪ್ರಾಸ ಪದ
(೨) ಸುರಪ, ಸುರಸತಿ – ೧, ೬ ಸಾಲಿನ ಮೊದಲ ಪದ (ಸುರ)