ಪದ್ಯ ೨೮: ಶಲ್ಯನು ಪಾಂಡವ ಸೇನೆಗೆ ಯಾರನ್ನು ಕರೆತರಲು ಹೇಳಿದನು?

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿ, ನಿಮ್ಮ ದೊರೆಯೆಲ್ಲಿ? ಅವನು ಯುದ್ಧಕ್ಕೆ ಬರಲಿ, ನೀವು ಯುದ್ಧ ಮಾಡಬಹುದು, ನಾನು ಅದನ್ನು ಸ್ವೀಕರಿಸುವುದಿಲ್ಲ. ಕೌರವನೊಡನೆ ಯುದ್ಧಮಾಡುವುದು ಧರ್ಮಜನಿಗೆ ಸಲ್ಲದು, ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಕ್ಕೆ ಬರಲಿ ಎಂದು ಘೋಷಿಸಿದನು.

ಅರ್ಥ:
ತಡೆ: ನಿಲ್ಲಿಸು; ನಿಂದು: ನಿಲ್ಲು; ಪರಬಲ: ವೈರಿಸೈನ್ಯ; ಒಡೆಯ: ನಾಯಕ; ಆವೆಡೆ: ಯಾವ ಕಡೆ; ಸೇನೆ: ಸೈನ್ಯ; ಕದನ: ಯುದ್ಧ; ಕೊಂಬು: ಸ್ವೀಕರಿಸು; ಕೈದು: ಆಯುಧ; ಸೆಳೆ: ಆಕರ್ಷಿಸು; ಉಳಿದ: ಮಿಕ್ಕ; ಪೊಡವಿ: ಭೂಮಿ; ಸಲ್ಲದು: ಸರಿಯಾದುದಲ್ಲ; ಗಡ: ಅಲ್ಲವೆ; ಶರಾಸನ: ಬಿಲ್ಲು; ಆಸನ: ಕೂರುವ ಸ್ಥಳ; ಶರ: ಬಾಣ; ವಿಡಿದು: ಹಿಡಿದು, ಗ್ರಹಿಸು; ಉರುಬು: ಅತಿಶಯವಾದ ವೇಗ;

ಪದವಿಂಗಡಣೆ:
ತಡೆದು +ನಿಂದನು +ಪರಬಲವ +ನಿಮ್ಮ್
ಒಡೆಯನ್+ಆವೆಡೆ+ ಸೇನೆ +ಕದನವ
ಕೊಡಲಿ +ಕೊಂಬವನಲ್ಲ+ ಕೈದುವ +ಸೆಳೆಯೆನ್+ಉಳಿದರಿಗೆ
ಪೊಡವಿಗ್+ಒಡೆಯನು +ಕೌರವೇಶ್ವರ
ನೊಡನೆ +ಸಲ್ಲದು +ಗಡ +ಶರಾಸನ+
ವಿಡಿಯ +ಹೇಳಾ +ಧರ್ಮಜನನೆಂದ್+ಉರುಬಿದನು +ಶಲ್ಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ
(೨) ಕ ಕಾರದ ಸಾಲು ಪದ – ಕದನವ ಕೊಡಲಿ ಕೊಂಬವನಲ್ಲ ಕೈದುವ

ಪದ್ಯ ೫೩: ಅರ್ಜುನನು ಹೇಗೆ ಮುನ್ನುಗ್ಗಿದನು?

ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯರ್ನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ (ಶಲ್ಯ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅರ್ಜುನನು ಶಲ್ಯನ ಬಾಣಗಳನ್ನು ಖಂಡಿಸಿ, ಮುನ್ನುಗ್ಗಿದನು. ಅಶ್ವತ್ಥಾಮನ ಸಾರಥಿಯನ್ನು ಕೊಂದನು. ಸಂಶಪ್ತಕರನ್ನು ಸೋಲಿಸಿ ಕೃಪನನ್ನು ಅಡ್ಡಗಟ್ಟಿ ದುರ್ಯೋಧನನು ಒರಲುವಂತೆ ಮಾಡಿದನು. ಆಗ ಕುರುವೀರರೆಲ್ಲರೂ ರಭಸದಿಂದ ಮುಂದುವರೆದು ಅರ್ಜುನನನ್ನು ಮುತ್ತಿದರು.

ಅರ್ಥ:
ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ಉರುಬು: ಅತಿಶಯವಾದ ವೇಗ; ಸುತ: ಮಗ; ಸೂತ: ರಥವನ್ನು ನಡೆಸುವವನು, ಸಾರ; ಇರಿ: ಚುಚ್ಚು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸೋಲು: ಪರಾಭವ; ಅಡಹಾಯ್ಸು: ಮಧ್ಯ ಪ್ರವೇಶಿಸು; ತರುಬು: ತಡೆ, ನಿಲ್ಲಿಸು; ಒರಲು: ಅರಚು, ಕೂಗಿಕೊಳ್ಳು; ಸುಭಟ: ಪರಾಕ್ರಮಿ, ಶೂರ; ಎರವಳಿ: ತೊರೆ; ನಿಪ್ಪಸರ: ಅತಿಶಯ, ಹೆಚ್ಚಳ; ಮುಸುಕು: ಆವರಿಸು;

ಪದವಿಂಗಡಣೆ:
ಮುರಿ+ಎಸುತ +ಮಾದ್ರೇಶ್ವರನ+ ಹೊಕ್ಕ್
ಉರುಬಿದನು +ಗುರುಸುತನ+ ಸೂತನನ್
ಇರಿದು +ಸಮಸಪ್ತಕರ+ ಸೋಲಿಸಿ +ಕೃಪನನ್+ಅಡಹಾಯ್ಸಿ
ತರುಬಿದನು +ಕುರುಪತಿಯನ್+ಅರ್ಜುನನ್
ಒರಲಿಸಿದನ್+ಈ+ ಸೈನ್ಯ +ಸುಭಟರನ್
ಎರವಣಿಗೆ +ನಿಪ್ಪಸರದಲಿ +ಮುಸುಕಿತು +ಧನಂಜಯನ

ಅಚ್ಚರಿ:
(೧) ಗುರುಸುತನ ಸೂತನನಿರಿದು – ಸುತ, ಸೂತ – ಪದಗಳ ಬಳಕೆ –

ಪದ್ಯ ೫೬: ಕೌರವನಿಗೆ ಘಟೋತ್ಕಚನ ಧೀರ ಉತ್ತರವೇನು?

ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯ ಬೇಡಾ ಸಿಂಹ ಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ (ದ್ರೋಣ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೆಟ್ಟ ಮಾತುಗಳೆಂಬ ಬಾನಗಳಿಂದ ಬೈಯುವುದು ನಿನಗೆ ಗೊತ್ತಿದೆ. ಆದ್ದರಿಂದ ದೇಹವನ್ನು ಗಾಯಗೊಳಿಸುವೆಯೋ? ನಿನಗೆ ಕೈಯಲ್ಲಿ ಆಯುಧವಿದೆಯೇ? ಯುದ್ಧ ಮಾಡಲು ನಿನಗೆ ಎಷ್ಟು ಸಂಬಳ ಅಪ್ಪನನ್ನು ಕರೆಯಬೇಕಂತೆ! ಹಾಗೆಂದ ಬಾಯನ್ನು ಸೀಳಿಬಿಡುವೆ, ಸಿಂಹದ ಕೂದಲುಗಳನ್ನು ಹಿಡಿದು ಉಯ್ಯಾಲೆಯಾಡಲು ಬರುವ ಈ ಆನೆಯನ್ನು ನೋಡು ಎಂದು ಘಟೋತ್ಕಚನು ಬಾಣಗಳ ಮಳೆಗೆರೆದನು.

ಅರ್ಥ:
ಬಯ್ಯು: ಜರಿ; ಅರಿ: ತಿಳಿ; ದುರುಕ್ತಿ: ಕೆಟ್ಟ ನುಡಿ; ಶರ: ಬಾಣ; ಮೆಯ್ಯ: ಒಡಲು, ದೇಹ; ಎಸುವೆ: ತೋರು; ಮೇಣ್: ಅಥವ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಸಂಬಳ: ವೇತನ; ಸಮರ: ಯುದ್ಧ; ಅಯ್ಯ: ತಂದೆ; ಕರೆ: ಬರೆಮಾಡು; ಕೊಯ್ಯು: ಸೀಳು; ಸಿಂಹ: ಕೇಸರಿ; ಕೇಸರ: ಕೂದಲು; ಉಯ್ಯಾಲೆ: ತೂಗಾಡುವ ಆಟ; ಗಜ: ಆನೆ; ನೋಡು: ವೀಕ್ಷಿಸು; ಉರುಬು: ಮೇಲೆ ಬೀಳು; ನೃಪ: ರಾಜ;

ಪದವಿಂಗಡಣೆ:
ಬಯ್ಯಲ್+ಅರಿವೆ +ದುರುಕ್ತಿ +ಶರದಲಿ
ಮೆಯ್ಯನ್+ಎಸುವೆಯೊ +ಮೇಣು +ಮಾರ್ಗಣೆ
ಕಯ್ಯಲುಂಟೇ +ನಿನಗೆ +ಸಂಬಳವೇನು +ಸಮರದಲಿ
ಅಯ್ಯನನು +ಕರೆಯೆಂಬ +ಬಾಯನು
ಕೊಯ್ಯ +ಬೇಡಾ +ಸಿಂಹ +ಕೇಸರದ್
ಉಯ್ಯಲಾಡುವ+ ಗಜವ+ ನೋಡೆಂದ್+ಉರುಬಿದನು +ನೃಪನ

ಅಚ್ಚರಿ:
(೧) ಘಟೋತ್ಕಚನು ತನ್ನ ಸಾಮರ್ಥ್ಯದ ಬಗ್ಗೆ ಹೇಳುವ ಪರಿ – ಸಿಂಹ ಕೇಸರ ದುಯ್ಯಲಾಡುವ ಗಜವ ನೋಡೆಂದುರುಬಿದನು

ಪದ್ಯ ೨೨: ಶ್ರೀಕೃಷ್ಣನು ಹೇಗೆ ರಥವನ್ನು ನಡೆಸಿದನು?

ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮ್ಮುಖಕೆ ಬಿಡದೌಕಿದನು ಮುರವೈರಿ (ಭೀಷ್ಮ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಷ್ಮನು ಎತ್ತ ತಿರುಗಿದನೋ, ಸರಿದನೋ, ಜಾರಿದನೋ, ಹಿಮ್ಮೆಟ್ಟಿದನೋ, ಮುಂದೆ ಬಂದನೋ ತಡೆಯಲೆತ್ನಿಸಿದನೋ ಅತ್ತಲತ್ತಲೇ ಶ್ರೀಕೃಷ್ಣನು ಅರ್ಜುನನ ರಥದ ಕುದುರೆಗಳನ್ನು ನಡೆಸಿ ಭೀಷ್ಮನ ಸಮ್ಮುಖಕ್ಕೆ ರಥವನ್ನೊಯ್ಯಲಾರಂಭಿಸಿದನು.

ಅರ್ಥ:
ಸರಿ: ಹೋಗು, ಗಮಿಸು, ಓಡಿಹೋಗು; ಜಾರು: ನುಣುಚಿಕೊಳ್ಳು; ತಿರುಗು: ಅಲೆದಾಡು; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಔಕು: ಒತ್ತು; ಉರುಬು:ಮೇಲೆ ಬೀಳು; ರಥ: ಬಂಡಿ; ಹಯ: ಕುದುರೆ; ಬೀದಿ: ದಾರಿ; ನೂಕು: ತಳ್ಳು; ಮುತ್ತಯ್ಯ: ತಾತ; ಸಮ್ಮುಖ: ಎದುರು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಎತ್ತಲ್+ಒಲೆದನದ್+ಎತ್ತ +ಸರಿದನದ್
ಎತ್ತ +ಜಾರಿದನ್+ಎತ್ತ +ತಿರುಗಿದನ್
ಎತ್ತ +ಹಿಂಗಿದನ್+ಎತ್ತಲ್+ಔಕಿದನ್+ಎತ್ತಲ್+ಉರುಬಿದನು
ಅತ್ತಲತ್ತಲು +ರಥ+ಹಯವ +ಬಿಡದ್
ಒತ್ತಿ +ಬೀದಿಗೆ +ನೂಕಿ +ಪಾರ್ಥನ
ಮುತ್ತಯನ +ಸಂಮ್ಮುಖಕೆ+ ಬಿಡದ್+ಔಕಿದನು +ಮುರವೈರಿ

ಅಚ್ಚರಿ:
(೧) ಭೀಷ್ಮನನ್ನು ಪಾರ್ಥನ ಮುತ್ತಯ ಎಂದು ಕರೆದಿರುವುದು