ಪದ್ಯ ೩೦: ಕೌರವ ಸೈನಿಕರು ಯಾರ ಮೇಲೆ ಮುತ್ತಿಗೆ ಹಾಕಿದರು?

ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ (ದ್ರೋಣ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಿಸ್ಸಾಳಗಳನ್ನು ಮೇಲಿಂದ ಮೇಲೆ ಹೊಡೆಯುತ್ತಾ, ಮತ್ತೆ ಮತ್ತೆ ಬೊಬ್ಬಿಡುತ್ತಾ, ಕೇಕೆ ಹೊಡೆಯುತ್ತಾ, ಮಸೆದ ಕತ್ತಿಗಲನ್ನು ಹಿಡಿದು ಮತ್ಸರದಿಂದ ಕುದಿಯುತ್ತಾ ಕೌರವ ಸೈನಿಕರು ಗುಂಪು ಗುಂಪಾಗಿ ಇದೇ ಹೊತ್ತು ಎಂದು ನುಗ್ಗಲು, ಶ್ರೀಕೃಷ್ಣನು ಅರ್ಜುನನ ಬಳಿಗೆ ರಥವನೊಯ್ದನು.

ಅರ್ಥ:
ಒದರು: ಕೊಡಹು, ಜಾಡಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನಿರಂತರ: ಯಾವಾಗಲು; ಸೂಳು: ಆರ್ಭಟ, ಬೊಬ್ಬೆ; ಹೊದರು: ಗುಂಪು, ಸಮೂಹ; ಹೊಸ: ನವೇನ; ಮಸೆ: ಹರಿತವಾದುದು; ಅಡಾಯ್ದು: ಅಡ್ಡ ಬಂದು; ಸಾಲ: ಸುತ್ತು, ಪ್ರಾಕಾರ; ಸಂದಣಿ: ಗುಂಪು; ಸದರ: ಸಲಿಗೆ, ಸಸಾರ; ಹೊತ್ತು: ಹೊರು; ಗೆಲವು: ಜಯ; ಕುದುಕುಳಿ: ವ್ಯಾಕುಲ ಮನಸ್ಸಿನವನು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಾಣು: ತೋರು; ಗದಗದಿಸು: ನಡುಗು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಒದರಿ +ಮೇಲಿಕ್ಕಿದರು +ನಿಸ್ಸಾ
ಳದ +ನಿರಂತರ+ ಸೂಳುವೊಯ್ಲಿನ
ಹೊದರುಗಳ +ಹೊಸ +ಮಸೆ+ಅಡಾಯ್ದದ +ಸಾಲ +ಸಂದಣಿಯ
ಸದರವ್+ಈ+ ಹೊತ್+ಎನುತ +ಗೆಲವಿನ
ಕುದುಕುಳಿಗಳ್+ಉರವಣಿಸೆ +ಕಾಣುತ
ಗದಗದಿಸಿ +ಮುರವೈರಿ +ಚಾಚಿದನ್+ಅರ್ಜುನಗೆ +ರಥವ

ಅಚ್ಚರಿ:
(೧) ಕುದುಕುಳಿ, ಗದಗದಿಸಿ – ಪದಗಳ ಬಳಕೆ