ಪದ್ಯ ೨೪: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೧?

ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿ ದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕೌರವ, ಹಿಂದೆ ಬಾಲಯ್ದಲ್ಲಿ ನನಗೆ ವಿಷವನ್ನಿಟ್ಟೆ, ಹಾವಿನಿಂದ ಕಟ್ಟಿಹಾಕಿದೆ. ಮಡುವಿನಲ್ಲಿ ಮುಳುಗಿಸಿದೆ. ಬಳಿಕ ಅರಗಿನ ಮನೆಗೆ ಬೆಂಕಿ ಹಚ್ಚಿದೆ ಪುಣ್ಯದಿಂದ ನಾವು ಬದುಕಿಕೊಂಡೆವು. ನೀರಿನಲ್ಲಿ ಮುಳುಗಿದರೆ ಈಗ ಬಿಟ್ಟೇನೇ ಎಂದು ಭೀಮನು ಕೌರವನನ್ನು ಪ್ರಚೋದಿಸಿದನು.

ಅರ್ಥ:
ವಿಷ: ಗರಳ; ಹಾವು: ಉರಗ; ಬಂಧಿಸು: ಕಟ್ಟು, ಸೆರೆ; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಉಬ್ಬಸ: ಸಂಕಟ, ಮೇಲುಸಿರು; ಬಳಿಕ: ನಂತರ; ಹಿಂದೆ: ಗತಿಸಿದ ಕಾಲ; ಮನ: ಮನಸ್ಸು; ಮುನಿಸು: ಕೋಪ; ಬಾಲ್ಯ: ಚಿಕ್ಕವ; ವಸತಿ: ವಾಸಮಾಡುವಿಕೆ; ಅಗ್ನಿ: ಬೆಂಕಿ; ಪಸರಿಸು: ಹರಡು; ಪುಣ್ಯ: ಸದಾಚಾರ; ಜೀವಿಸು: ಬದುಕು; ಅಡಗು: ಅವಿತುಕೊಳ್ಳು; ಬಿಡು: ತೊರೆ;

ಪದವಿಂಗಡಣೆ:
ವಿಷವನಿಕ್ಕಿದೆ +ಹಾವಿನಲಿ +ಬಂ
ಧಿಸಿದೆ +ಮಡುವಿನೊಳಿಕ್ಕಿ +ಬಳಿಕ್
ಉಬ್ಬಸವ +ಮಾಡಿದೆ +ಹಿಂದೆ +ಮನ+ಮುನಿಸಾಗಿ +ಬಾಲ್ಯದಲಿ
ವಸತಿಯಲಿ +ಬಳಿಕ್+ಅಗ್ನಿ+ ದೇವರ
ಪಸರಿಸಿದೆ +ಪುಣ್ಯದಲಿ +ನಾವ್ +ಜೀ
ವಿಸಿದೆವ್+ಅಡಗಿದಡ್+ಇನ್ನು +ಬಿಡುವೆನೆ+ಎಂದನಾ +ಭೀಮ

ಅಚ್ಚರಿ:
(೧) ಮನೆಗೆ ಬೆಂಕಿ ಹಚ್ಚಿದೆ ಎಂದು ಹೇಳುವ ಪರಿ – ವಸತಿಯಲಿ ಬಳಿಕಗ್ನಿ ದೇವರಪಸರಿಸಿದೆ

ಪದ್ಯ ೯: ಅರ್ಜುನನು ಕೃಷ್ಣನಲ್ಲಿ ಏನೆಂದು ಪ್ರಾರ್ಥಿಸಿದನು?

ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ದಿಕ್ಕು ದಿಕ್ಕಿನಲ್ಲೂ ಕತ್ತಲೆ ಕವಿದಿದೆ, ಪರಿತಾಪವು ದೇಹವನ್ನು ಆವರಿಸಿದೆ, ಮನಸ್ಸು ಮರುಗಿದೆ, ಧೈರ್ಯವು ಕಳವಳಿಸುತ್ತಿದೆ, ಚೂಪಾದ ಬಾಣವು ಮೈಯಲ್ಲಿ ಮುರಿದಂತಾಗಿ ಉಸಿರಾಟವು ಕಷ್ಟಕರವಾಗುತ್ತಿದೆ, ಕೃಷ್ಣಾ ನನ್ನನ್ನು ಆಯಾಸಗೊಳಿಸಬೇಡ, ನಿನಗೆ ತಿಳಿದಿದ್ದರೆ ಹೇಳು ಎಂದು ಅರ್ಜುನನು ದೈನ್ಯದಿಂದ ಪ್ರಾರ್ಥಿಸಿದನು.

ಅರ್ಥ:
ದೆಸೆ: ದಿಕ್ಕು; ನೋಡು: ವೀಕ್ಷಿಸು; ಕತ್ತಲೆ: ಅಂಧಕಾರ; ಮಸಗು: ಹರಡು; ಕೆರಳು; ತಿಕ್ಕು; ಪರಿತಾಪ: ದುಃಖ; ತನು: ದೇಹ; ಮುಸುಕು: ಹೊದಿಕೆ; ಮನ: ಮನಸ್ಸು; ಮರುಗು: ತಳಮಳ; ಕಳವಳ: ಗೊಂದಲ; ಧೈರ್ಯ: ಕೆಚ್ಚು, ದಿಟ್ಟತನ; ಮಸೆ: ಚೂಪು, ಹರಿತವಾದ; ಸರಳು: ಬಾಣ; ಒಡಲು: ದೇಹ; ಮುರಿ: ಸೀಳು; ಉಸುರು: ಪ್ರಾಣ, ಶ್ವಾಸ; ಉಬ್ಬಸ: ಮೇಲುಸಿರು, ಕಷ್ಟ; ಬಲ್ಲಡೆ: ತಿಳಿದ; ಬೆಸ: ಕೆಲಸ; ಮುರಹರ: ಕೃಷ್ಣ; ಬಳಲಿಸು: ಆಯಾಸ; ಹೇಳು: ತಿಳಿಸು;

ಪದವಿಂಗಡಣೆ:
ದೆಸೆದೆಸೆಯ +ನೋಡಿದರೆ +ಕತ್ತಲೆ
ಮಸಗುವುದು +ಪರಿತಾಪ +ತನುವನು
ಮುಸುಕುವುದು +ಮನ +ಮರುಗುವುದು +ಕಳವಳಿಸುವುದು +ಧೈರ್ಯ
ಮಸೆದ +ಸರಳ್+ಒಡಲೊಳಗೆ+ ಮುರಿದವೊಲ್
ಉಸುರಿಗ್+ಉಬ್ಬಸವಾಯ್ತು +ಬಲ್ಲಡೆ
ಬೆಸಸು +ಮುರಹರ +ಹಿರಿದು +ಬಳಲಿಸಬೇಡ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ -ಮಸೆದ ಸರಳೊಡಲೊಳಗೆ ಮುರಿದವೊಲುಸುರಿಗುಬ್ಬಸವಾಯ್ತು
(೨) ಮ ಕಾರದ ತ್ರಿವಳಿ ಪದ – ಮುಸುಕುವುದು ಮನ ಮರುಗುವುದು

ಪದ್ಯ ೨೯: ಧರ್ಮಜನು ಏಕೆ ಅತ್ತನು?

ಮುಸುಕನರೆದೆರೆದವರ ವರ ಮುಖ
ದುಸುರುಗಳನೀಕ್ಷಿಸಿದನಕಟಾ
ಶಿಶುಗಳಿಗೆ ಕಡುಹಾನಿಯಾಯಿತೆ ಶಿವಮಹಾದೇವ
ನಿಶಿತ ಶಸ್ತ್ರದ ಗಾಯವಿಲ್ಲು
ಬ್ಬಸದ ಸಾವಿನ್ನಾವುದೋ ನಾ
ನಸುಗಳೆಯದೇಕುಳಿದೆನೆಂದಳಲಿದನು ಯಮಸೂನು (ಅರಣ್ಯ ಪರ್ವ, ೨೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ತನ್ನ ತಮ್ಮಂದಿರು ಭೂಮಿಯ ಮೇಲೆ ಪ್ರಾಣ ವಿಲ್ಲದ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿ, ಮುಖದ ಮೇಲಿನ ಮುಸುಕನ್ನು ಸ್ವಲ್ಪ ಎತ್ತಿ ಉಸಿರಾಟವು ನಿಂತಿರುವುದನ್ನು ಪರೀಕ್ಷಿಸಿ, ಅಯ್ಯೋ ಕೂಸುಗಳಿಗೆ ಪ್ರಾಣಹಾನಿಯಾಯಿತೆ, ಶಿವ ಶಿವಾ, ಇವರ ಮೈಮೇಲೆ ಆಯುಧಗಳ ಗಾಯವಿಲ್ಲ. ಹೇಗೆ ಸತ್ತರೋ ಏನೋ, ನಾನು ಪ್ರಾಣವನ್ನು ಕಳೆದುಕೊಳ್ಳದೆ ಏಕೆ ಬದುಕಿದೆನೋ ಎಂದು ದುಃಖಿಸಿದನು.

ಅರ್ಥ:
ಮುಸುಕು: ಹೊದಿಕೆ; ಅರೆದೆರೆ: ಸ್ವಲ್ಪ ಸಡಲಿಸು; ವರ: ಶ್ರೇಷ್ಠ; ಮುಖ: ಆನನ; ಉಸುರು: ಪ್ರಾಣವಾಯು; ಈಕ್ಷಿಸು: ನೋಡು; ಅಕಟ: ಅಯ್ಯೋ; ಶಿಶು: ಮಕ್ಕಳು; ಕಡು: ತುಂಬ; ಹಾನಿ: ತೊಂದರೆ, ನಷ್ಟ; ಶಿವ: ಶಂಕರ; ನಿಶಿತ:ಹರಿತವಾದುದು; ಶಸ್ತ್ರ: ಆಯುಧ; ಗಾಯ: ಪೆಟ್ಟು; ಉಬ್ಬಸ: ಸಂಕಟ, ಮೇಲುಸಿರು; ಸಾವು: ಮರಣ; ಅಸು: ಪ್ರಾಣ; ಕಳೆ: ನಾಶ; ಉಳಿ: ಹೊರತಾಗು, ಬದುಕಿರು; ಸೂನು: ಮಗ;

ಪದವಿಂಗಡಣೆ:
ಮುಸುಕನ್+ಅರೆ+ತೆರೆದ್+ಅವರ+ ವರ+ ಮುಖದ್
ಉಸುರುಗಳನ್+ಈಕ್ಷಿಸಿದನ್+ಅಕಟಾ
ಶಿಶುಗಳಿಗೆ+ ಕಡುಹಾನಿಯಾಯಿತೆ +ಶಿವ+ಮಹಾದೇವ
ನಿಶಿತ +ಶಸ್ತ್ರದ +ಗಾಯವಿಲ್ಲ್
ಉಬ್ಬಸದ +ಸಾವಿನ್ನ್+ಆವುದೋ +ನಾನ್
ಅಸು+ಕಳೆಯದ್+ಏಕ್+ಉಳಿದೆನ್+ಎಂದ್+ಅಳಲಿದನು +ಯಮಸೂನು

ಅಚ್ಚರಿ:
(೧) ಧರ್ಮಜನು ತಮ್ಮಂದಿರ ದೇಹವನ್ನು ಪರೀಕ್ಷಿಸಿದ ಪರಿ – ಮುಸುಕನರೆದೆರೆದವರ ವರ ಮುಖ
ದುಸುರುಗಳನೀಕ್ಷಿಸಿದನಕಟಾ

ಪದ್ಯ ೨೫: ಮೃತ್ಯುವು ಮಾರ್ಕಂಡೆಯ ಮುನಿಯನ್ನು ಹೇಗೆ ಬಿಟ್ಟಿತು?

ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆಂಡೇಳ್ವೆನೊಮ್ಮೆ ಸು
ದೂರ ಮುಳುಗುವೆನಡ್ಡಬೀಳ್ವೆನು ತೆರೆಯ ಹೊಯ್ಲಿನಲಿ
ಯಾರಿಗುಬ್ಬಸವೆನ್ನ ಮರಣವ
ನಾರು ಕಂಡರು ಹೇಸಿ ತನ್ನನು
ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ (ಅರಣ್ಯ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ನನ್ನ ದೇಹದ ನವದ್ವಾರಗಳಲ್ಲೂ ನೀರು ತುಂಬಿತು, ಒಮ್ಮೆ ಬೆಂಡಿನಂತೆ ನೀರ ಮೇಲೆ ಬರುತ್ತಿದ್ದೆ, ಇನ್ನೊಮ್ಮೆ ಆಳವಾಗಿ ಮುಳುಗುತ್ತಿದ್ದೆ, ಮಗದೊಮ್ಮೆ ತೆರೆಯಮೇಲೆ ಅಡ್ಡವಾಗಿ ತೇಲುತ್ತಿದ್ದೆ, ನನ್ನ ಸಂಕಟವನ್ನು ಕಂಡು ಯಾರು ಸಂಕಟ ಪಡುವವರಿದ್ದರು? ನಾನು ಸತ್ತರೆ ನೋಡುವವರಾರು? ಆದರೆ ಮೃತ್ಯುವು ನನ್ನನ್ನು ಅಸಹ್ಯ ಪಟ್ಟು ದೂರಕ್ಕೆಸೆದಳು, ಹೀಗೆ ಹಲವು ಕಾಲ ನಾನು ಬಳಲಿದೆ.

ಅರ್ಥ:
ನೀರು: ಜಲ; ಹೊಕ್ಕು: ಸೇರು; ನೂಕು: ತಳ್ಳು; ವಿವಿಧ: ಹಲವಾರು; ದ್ವಾರ: ಬಾಗಿಲು; ಬೆಂಡು: ಜೋಳ್ಳು, ಪೋಲು; ಏಳು: ಮೇಲೆ ಬಾ; ದೂರ: ಅಂತರ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ತೆರೆ: ಅಲೆ; ಹೊಯ್ಲು: ಏಟು, ಹೊಡೆತ; ಉಬ್ಬಸ: ಮೇಲುಸಿರು; ಮರಣ: ಸಾವು; ಕಂಡು: ನೋಡು; ಹೇಸು:ಅಸಹ್ಯ; ಬಿಸುಟು: ಹೊರಹಾಕು; ಬಳಲು: ಆಯಾಸ; ಹಲಕಾಲ: ಬಹಳ ಸಮಯ;

ಪದವಿಂಗಡಣೆ:
ನೀರು+ ಹೊಕ್ಕುದು+ ನೂಕಿ +ವಿವಿಧ
ದ್ವಾರದಲಿ +ಬೆಂಡೇಳ್ವೆನ್+ಒಮ್ಮೆ +ಸು
ದೂರ +ಮುಳುಗುವೆನ್+ಅಡ್ಡಬೀಳ್ವೆನು +ತೆರೆಯ +ಹೊಯ್ಲಿನಲಿ
ಯಾರಿಗ್+ಉಬ್ಬಸವೆನ್ನ +ಮರಣವನ್
ಆರು +ಕಂಡರು +ಹೇಸಿ +ತನ್ನನು
ದೂರ +ಬಿಸುಟಳು +ಮೃತ್ಯು +ಬಳಲಿದೆ +ನಿಂತು +ಹಲಕಾಲ

ಅಚ್ಚರಿ:
(೧) ಮೃತ್ಯುವು ಬಿಡುವ ಬಗ್ಗೆ: ಹೇಸಿ ತನ್ನನು ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ

ಪದ್ಯ ೧೦೧: ಯೋಧನ ಲಕ್ಷಣಗಳೇನು?

ಹೆಬ್ಬಲವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ಗಜಹಯ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರ ಮಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋದನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಯೋಧನ ಲಕ್ಷಣವನ್ನು ವಿದುರ ಇಲ್ಲಿ ತಿಳಿಸಿದ್ದಾರೆ. ಮಹಾ ಸೈನ್ಯವನ್ನು ಹೊಡೆದು, ತನ್ನ ಆನೆಯ ಬಲದಿಂದ ಇಬ್ಬಾಗ ಮಾಡುತ್ತಾ, ವಿರೋಧಿಗಳ ಆನೆ ಕುದುರೆಗಳ ಗುಂಪನ್ನು ಕಡಿದು, ಆನೆಗಳ ಗುಂಪಿನ ಮೇಲೆ ಬಾಣಗಳ ಮಳೆಗರೆಯುತ್ತಾ ಯುದ್ಧದಲ್ಲಿ ಶತ್ರುಗಳಿಗೆ ಕಷ್ಟಗಳನ್ನು ಉಂಟುಮಾಡುವವನೆ ಯೋಧನೆಂದು ಕರೆಸಿಕೊಳ್ಳುತ್ತಾನೆ ಎಂದು ವಿದುರ ತಿಳಿಸಿದ.

ಅರ್ಥ:
ಹೆಬ್ಬಲ: ದೊಡ್ಡ ಸೈನ್ಯ; ಒಡೆದು: ಸೀಳು, ಬಿರಿ, ಚೂರು ಮಾಡು; ಭೂಮಿ: ಧರಿತ್ರಿ; ಇಬ್ಬಗೆ: ಇರಡು ಭಾಗ; ಗಜ: ಆನೆ; ಹಯ: ಕುದುರೆ; ಒಬ್ಬುಳಿ: ಗುಂಪು, ಸಮೂಹ; ಹರೆ: ಚೆದುರು, ಹರಿ; ಕಡಿ: ಸೀಳು; ಕಾದಿ: ಹೋರಾಡು; ಆನೆ: ಕರಿ; ಬೊಬ್ಬಿರಿ: ಕೂಗು, ಅರಚು, ಉದ್ಘೋಷಿಸು; ಶರ: ಬಾಣ; ಮಳೆ: ವರ್ಷ; ಸುರಿ: ಬೀಳು; ಉಬ್ಬರ:ಅತಿಶಯ, ಹೆಚ್ಚಳ; ಬವರ:ಕಾಳಗ, ಯುದ್ಧ; ಅಹಿತರು: ಶತ್ರುಗಳು; ಉಬ್ಬಸ: ಕಷ್ಟ, ಸಂಕಟ; ಎಸಗು: ಉಂಟುಮಾಡು; ಜೋದ: ಯೋಧ;ರಾಯ: ರಾಜ;

ಪದವಿಂಗಡಣೆ:
ಹೆಬ್ಬಲವನ್+ಒಡೆದುಳಿಸಿ+ ಭೂಮಿಯನ್
ಇಬ್ಬಗೆಯ +ಮಾಡಿಸುತ +ಗಜ+ಹಯದ್
ಒಬ್ಬುಳಿಯ +ಹರೆಗಡಿದು+ ಕಾದಿಸುತ+ಆನೆಗಳ +ಮೇಲೆ
ಬೊಬ್ಬಿರಿದು +ಶರ +ಮಳೆಯ +ಸುರಿಸುರಿದ್
ಉಬ್ಬರದ +ಬವರದೊಳಗ್+ಅಹಿತರಿಗ್
ಉಬ್ಬಸವನ್+ಎಸಗುವನೆ +ಜೋದನು +ರಾಯ +ಕೇಳೆಂದ

ಅಚ್ಚರಿ:
(೧) ಗಜ, ಆನೆ – ಸಮನಾರ್ಥಕ ಪದ
(೨) ಉಬ್ಬರ, ಉಬ್ಬಸ – ಪದಗಳ ಬಳಕೆ