ಪದ್ಯ ೩೦: ಶಲ್ಯನು ಧರ್ಮಜನ ಮೇಲೆ ಬಿಟ್ಟ ಬಾಣಗಳು ಏನಾದವು?

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು (ಶಲ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಮೇಲೆ ನೂರು ಬಾಣಗಳನನ್ನು ಬಿಡಲು, ಶಲ್ಯನು ಅವನ್ನು ಕತ್ತರಿಸಿ ಅರಸನ ಮೇಲೆ ಬಾಣಗಳನ್ನು ಬಿಟ್ಟನು. ಸಿಡಿಲಿಗೆ ಕುಲಪರ್ವತವು ಅಳುಕುವುದೇ ಧರ್ಮಜನ ಪರಾಕ್ರಮಕ್ಕೆ ಎತ್ತಿದ ಉಪ್ಪಾರತಿಗಳಂತೆ ಶಲ್ಯನ ಬಾಣಗಳು ನಿಷ್ಫಲವಾದವು.

ಅರ್ಥ:
ಹಳಚು: ತಾಗು, ಬಡಿ; ದಳಪತಿ: ಸೇನಾಧಿಪತಿ; ಅವನಿಪ: ರಾಜ; ತಿಲಕ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಶರ: ಬಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಕೈ: ಹಸ್ತ; ಒಡ್ಡು: ನೀಡು; ಬೇಗಡೆ: ಹೊಳಪಿನ ತಗಡು; ಅಳುಕು: ಹೆದರು; ಅರಿ: ತಿಳಿ; ಸಿಡಿಲು: ಅಶನಿ; ಹೊಯ್ಲು: ಹೊಡೆ; ಕುಲಕುಧರ: ಕುಲಪರ್ವತ; ಸುತ: ಮಗ; ಅಗ್ಗಳಿಕೆ: ಶ್ರೇಷ್ಠ; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಂಬು: ಬಾಣ;

ಪದವಿಂಗಡಣೆ:
ಹಳಚಿದನು +ದಳಪತಿಯನ್+ಅವನಿಪ
ತಿಲಕನ್+ಎಚ್ಚನು +ನೂರು +ಶರದಲಿ
ಕಳಚಿ +ಕಯ್ಯೊಡನ್+ಎಚ್ಚು +ಬೇಗಡೆಗಳೆದನ್+ಅವನಿಪನ
ಅಳುಕಲ್+ಅರಿವುದೆ +ಸಿಡಿಲ +ಹೊಯ್ಲಲಿ
ಕುಲಕುಧರವೀ +ಧರ್ಮಸುತನ್
ಅಗ್ಗಳಿಕೆಗ್+ಉಪ್ಪಾರತಿಗಳಾದುವು +ಶಲ್ಯನ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ -ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ
(೨) ಅವನಿಪತಿಲಕ, ಧರ್ಮಸುತ – ಯುಧಿಷ್ಠಿರನನ್ನು ಕರೆದ ಪರಿ

ಪದ್ಯ ೩೨: ಭೀಷ್ಮರಿಗೆ ಯಾವ ಆರತಿಯನ್ನು ಬೆಳಗಿದರು?

ಆರತಿಯನೆತ್ತಿದರು ತಂದು
ಪ್ಪಾರತಿಯ ಸೂಸಿದರು ನೃಪ ಪರಿ
ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ
ಕೌರವೇಂದ್ರನ ಮೋಹರದ ಗುರು
ಭಾರ ಭೀಷ್ಮಂಗಾಯ್ತು ಸಮರದ
ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ (ಭೀಷ್ಮ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಷ್ಮನಿಗೆ ಕೌರವ ಸೈನ್ಯದ ವೀರ ಪಟ್ಟಾಭಿಷೇಕವಾಯಿತು. ಅವನಿಗೆ ಆರತಿ ಉಪ್ಪಾರತಿಗಳನ್ನು ಬೆಳಗಿದರು. ರಾಜಪರಿವಾರವೆಲ್ಲವೂ ಅವನನ್ನು ಕಂಡು ಕಾಣಿಕೆಯನ್ನು ನೀಡಿದರು. ದ್ರೋಣಾದಿಗಳು ಸಂತಸ ವ್ಯಕ್ತಪಡಿಸಿದರು.

ಅರ್ಥ:
ಆರತಿ: ನೀರಾಂಜನ; ಎತ್ತು: ಬೆಳಗು; ಉಪ್ಪರಾತಿ: ಉಪ್ಪಿನಾರತಿ; ಸೂಸು: ಚೆಲ್ಲು; ನೃಪ: ರಾಜ; ಪರಿವಾರ: ಪರಿಜನ; ಕಂಡು: ನೋಡು; ಕಾಣಿಕೆ: ಉಡುಗೊರೆ; ನೀಡು: ಕೊಡು; ಮೋಹರ: ಯುದ್ಧ; ಗುರುಭಾರ: ದೊಡ್ಡಹೊರೆ; ಸಮರ: ಯುದ್ಧ; ವೀರ: ಪರಾಕ್ರಮ; ಪಟ್ಟ: ಅಧಿಕಾರ ಸೂಚಕ; ಆಚಾರ್ಯ: ಗುರು; ನಲಿ: ಸಂತಸ;

ಪದವಿಂಗಡಣೆ:
ಆರತಿಯನ್+ಎತ್ತಿದರು +ತಂದ್
ಉಪ್ಪಾರತಿಯ +ಸೂಸಿದರು +ನೃಪ +ಪರಿ
ವಾರವೆಲ್ಲವು+ ಬಂದು+ ಕಂಡುದು +ಕಾಣಿಕೆಯ +ನೀಡಿ
ಕೌರವೇಂದ್ರನ +ಮೋಹರದ+ ಗುರು
ಭಾರ +ಭೀಷ್ಮಂಗಾಯ್ತು +ಸಮರದ
ವೀರಪಟ್ಟವನಾಂತನ್+ಆಚಾರ್ಯಾದಿಗಳು+ ನಲಿಯೆ

ಅಚ್ಚರಿ:
(೧) ಆರತಿ, ಉಪ್ಪಾರತಿ -ಆರತಿಯ ಬಗೆಗಳು
(೨) ಮೋಹರ, ಸಮರ – ಸಮನಾರ್ಥಕ ಪದಗಳು

ಪದ್ಯ ೨೭: ವಿರಾಟನು ಉತ್ತರನನ್ನು ಹೇಗೆ ಸ್ವಾಗತಿಸಿದನು?

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ (ವಿರಾಟ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿರಾಟನು ಮಗನನ್ನು ಸ್ವಾಗತಿಸುತ್ತಾ, ಮನಗೇ, ನೀನು ವಸುಕುಲದ ರಾಜರಲ್ಲಿ ಚಿಂತಾಮಣಿಯಂತೆ ಅನರ್ಘ್ಯರತ್ನ, ನೀನು ಕೌರವ ಸೈನ್ಯಕ್ಕೆ ಧೂಮಕೇತು, ಮಗೂ ಬಾ ಎಂದು ಕರೆದು, ಆಲಿಂಗಿಸಿ ಕುಳ್ಳಿರಿಸಿದನು. ಸ್ತ್ರೀಯರು ಇವನ ದೃಷ್ಟಿನಿವಾರಣೆಗಾಗಿ ಉಪ್ಪಿನಾರತಿ ಎತ್ತಿದರು, ಉತ್ತಮ ವಸ್ತ್ರಗಳ ನಿವಾಳಿ , ರತ್ನಗಳ ಕಾಣಿಕೆ, ಬಣ್ಣದ ದೀಪಗಳನ್ನು ತಂದು ಸ್ವಾಗತಿಸಿದರು.

ಅರ್ಥ:
ಮಗ: ಪುತ್ರ; ವಸು: ಐಶ್ವರ್ಯ, ಸಂಪತ್ತು; ಕುಲ: ವಂಶ; ನೃಪ: ರಾಜ; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ರಾಯ: ರಾಜ; ಮೋಹರ: ಯುದ್ಧ; ಧೂಮಕೇತು: ಅಮಂಗಳಕರವಾದುದು, ಉಲ್ಕೆ; ಕಂದ: ಮಗು; ಬಾ: ಆಗಮಿಸು; ಅಪ್ಪು: ಆಲಿಂಗನ; ಕುಳ್ಳಿರಿಸು: ಆಸೀನನಾಗು; ಕಾಮಿನಿ: ಹೆಣ್ಣು; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಭಿರಾಮ: ಸುಂದರವಾದ; ವಸ್ತ್ರ: ಬಟ್ಟೆ; ನಿವಾಳಿ: ದೃಷ್ಟಿದೋಷ ಪರಿಹಾರಕ್ಕಾಗಿ ಇಳಿ ತೆಗೆಯುವುದು; ರತ್ನ: ಬೆಲೆಬಾಳುವ ಮಣಿ; ಸ್ತೋಮ: ಗುಂಪು; ಬಣ್ಣ: ವರ್ಣ; ಸೊಡರು: ದೀಪ; ಸುಳಿ: ಆವರಿಸು, ಮುತ್ತು; ಹರುಷ: ಸಂತಸ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಬಾ +ಮಗನೆ +ವಸುಕುಲದ +ನೃಪ +ಚಿಂ
ತಾಮಣಿಯೆ +ಕುರುರಾಯ +ಮೋಹರ
ಧೂಮಕೇತುವೆ +ಕಂದ +ಬಾಯೆಂದಪ್ಪಿ+ ಕುಳ್ಳಿರಿಸೆ
ಕಾಮಿನಿಯರ್+ಉಪ್ಪಾರತಿಗಳ್+ಅಭಿ
ರಾಮ+ವಸ್ತ್ರ +ನಿವಾಳಿ +ರತ್ನ
ಸ್ತೋಮ +ಬಣ್ಣದ +ಸೊಡರು +ಸುಳಿದವು+ ಹರುಷದೊಗ್ಗಿನಲಿ

ಅಚ್ಚರಿ:
(೧) ಮಗನನ್ನು ಹೊಗಳಿದ ಪರಿ – ವಸುಕುಲದ ನೃಪ ಚಿಂತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ

ಪದ್ಯ ೧೪: ಅರ್ಜುನನನ್ನು ಜನರು ಹೇಗೆ ಕಳಿಸಿಕೊಟ್ಟರು?

ನಿಳಯವನು ಹೊರವಂಟು ಬೀದಿಗ
ಳೊಳಗೆ ಬರೆಬರೆ ಮುಂದೆ ಮೋಹಿದ
ತಳಿಗೆದಂಬುಲ ವೀರಸೇಸೆಯ ಮಂಗಳಾರತಿಯ
ಫಲ ಸಮೂಹದ ಕಾಣಿಕೆಯ ಕೋ
ಮಲೆಯರುಪ್ಪಾರತಿಯ ಮನೆಮನೆ
ಗಳಲಿ ಮನ್ನಿಸಿಕೊಳುತ ಪಾಳೆಯದಿಂದ ಹೊರವಂಟ (ಕರ್ಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರಮನೆಯನ್ನು ಬಿಟ್ಟು ಬೀದಿಗಳಲ್ಲಿ ಅರ್ಜುನನ ರಥವು ಬರುತ್ತಿರಲು, ತಾಂಬೂಲದ ತಟ್ಟೆಗಳು, ಮಂತ್ರಾಕ್ಷತೆ, ಮಂಗಳಾರತಿಗಳನ್ನು ಹಿಡಿದ ಜನರು ಅರ್ಜುನನನ್ನು ಸತ್ಕರಿಸಿದರು. ಫಲ ಸಮರ್ಪಣೆ ಮಾಡಿದರು, ಮನೆಮನೆಗಳಲ್ಲೂ ಸ್ತ್ರೀಯರು ಉಪ್ಪಾರತಿಗಳನ್ನೆತ್ತಿದರು.

ಅರ್ಥ:
ನಿಳಯ: ಮನೆ; ಹೊರವಂಟು: ಹೊರನಡೆದು; ಬೀದಿ: ರಸ್ತೆ; ಬರೆ: ಆಗಮಿಸು; ಮುಂದೆ: ಎದುರು; ಮೋಹಿದ: ಆಕರ್ಷಿತವಾದ; ತಳಿಗೆ: ತಟ್ಟೆ; ತಂಬುಲ: ವೀಳೆ, ತಾಂಬೂಲ; ವೀರಸೇಸೆ: ಮಂತ್ರಾಕ್ಷತೆ; ಮಂಗಳಾರತಿ: ನೀರಾಜನ; ಫಲ: ಹಣ್ಣು; ಸಮೂಹ: ಜೊತೆ, ಒಟ್ಟು; ಕಾಣಿಕೆ: ಉಡುಗೊರೆ; ಮನೆ: ಆಲಯ; ಮನ್ನಿಸಿ: ಅಂಗೀಕರಿಸು; ಪಾಳೆ: ಸೀಮೆ; ಕೋಮಲೆ: ಸ್ತ್ರೀ;

ಪದವಿಂಗಡಣೆ:
ನಿಳಯವನು +ಹೊರವಂಟು +ಬೀದಿಗಳ್
ಒಳಗೆ +ಬರೆಬರೆ +ಮುಂದೆ +ಮೋಹಿದ
ತಳಿಗೆದಂಬುಲ +ವೀರಸೇಸೆಯ +ಮಂಗಳಾರತಿಯ
ಫಲ+ ಸಮೂಹದ +ಕಾಣಿಕೆಯ +ಕೋ
ಮಲೆಯರ್+ಉಪ್ಪಾರತಿಯ +ಮನೆಮನೆ
ಗಳಲಿ +ಮನ್ನಿಸಿ+ಕೊಳುತ +ಪಾಳೆಯದಿಂದ +ಹೊರವಂಟ

ಅಚ್ಚರಿ:
(೧) ವೀರಸೇಸೆ, ಮಂಗಳಾರತಿ, ತಳೆಗೆದಂಬುಲ, ಉಪ್ಪಾರತಿ – ವೀರರಿಗೆ ನೀಡುವ ಬೀಳ್ಕೊಡುಗೆ

ಪದ್ಯ ೩೩: ಕೌರವನು ಹೊರಟ ರೀತಿ ಹೇಗಿತ್ತು?

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ (ವಿರಾಟ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಅಲಂಕಾರಮಾಡಿದ ರಥದ ಮಧ್ಯದಲ್ಲಿ ಆಸೀನನಾದನು. ಅವನಿಗೆ ಆರತಿ, ಉಪ್ಪಾರತಿಗಳನ್ನು ಬೆಳಗಿದರು. ಘಟ್ಟರು ಅವನ ಬಿರುದುಗಳನ್ನು ಘೋಷಿಸುತ್ತಿರಲು, ನಗಾರಿ, ಕಹಳೆಗಳ ಸದು ಜಯಕಾರಗಳ ನಡುವೆ ಕೌರವನು ಹೊರಟನು.

ಅರ್ಥ:
ಆರತಿ:ನೀರಾಜನ; ಎತ್ತು: ಬೆಳಗು; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನೀವಾಳಿಸುವುದು; ಸೂಸು:ಎರಚು, ಚಲ್ಲು; ಘನ: ಶ್ರೇಷ್ಠ; ರಥ: ಬಂಡಿ; ತೋರಣ: ಬಾಗಿಲಿನ ಅಲಂಕಾರ; ಮಧ್ಯ: ನಡುಭಾಗ; ರಾಯ: ರಾಜ; ಕುಳ್ಳಿರು: ಆಸೀನನಾದ; ಸಾರು: ಹರಡು, ಹಬ್ಬು; ಭಟ್ಟ: ಸೇವಕ, ಸೈನಿಕ; ನಾಗಾರಿ: ಒಂದು ಬಗೆಯ ಚರ್ಮ ವಾದ್ಯ; ಬಿರುದು: ; ಆವಳಿ: ಸಾಲು; ಜಯರವ: ಜಯಘೋಷ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳೈಸು: ಧ್ವನಿ ಮಾಡು; ಓರಣ: ಕ್ರಮ, ಸಾಲು;

ಪದವಿಂಗಡಣೆ:
ಆರತಿಗಳ್+ಎತ್ತಿದವು +ತಳಿದ್
ಉಪ್ಪಾರತಿಯ +ಸೂಸಿದರು +ಘನರಥದ್
ಓರಣದ +ಮಧ್ಯದಲಿ +ಕೌರವರಾಯ ಕುಳ್ಳಿರಲು
ಸಾರಿದರು+ ಭಟ್ಟರು +ಮಹಾನಾ
ಗಾರಿಗಳು +ಬಿರುದಾವಳಿಯ +ಕೈ
ವಾರಿಸುವ +ಜಯರವದೊಡನೆ +ನಿಸ್ಸಾಳ +ಸೂಳೈಸೆ

ಅಚ್ಚರಿ:
(೧) ಆರತಿ, ಉಪ್ಪಾರತಿ – ಪ್ರಾಸ ಪದಗಳು

ಪದ್ಯ ೪೯: ಇಂದ್ರಪ್ರಸ್ಥದಲ್ಲಿ ಅರ್ಜುನನ ಆಗಮನ ಹೇಗಿತ್ತು?

ಮಸಗಿದವು ನಿಸ್ಸಾಳತತಿ ಗ
ರ್ಜಿಸಿದವರ್ಜುನ ಬಂದನಿದೆ ಯೆಂ
ದೊಸಗೆ ಮಾತಿನೊಳೂರ ಸುಳಿದರು ದೂತರಲ್ಲಲ್ಲಿ
ಶಶಿಮುಖಿಯರುಪ್ಪಾರತಿಯ ಮಿಗಿ
ಲೆಸೆವ ರತುನಾವಳಿಯ ಕಾಂತಾ
ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ (ಆದಿ ಪರ್ವ, ೧೯ ಸಂಧಿ, ೪೯ ಪದ್ಯ)


ತಾತ್ಪರ್ಯ:

ಅರ್ಜುನನು ಇದೋ ಬಂದನೆಂದು ಕಹಳೆಗಳು, ನಿಸ್ಸಾಳಗಳು ಮೊಳಗಿದವು. ದೂತರು ಈ ಸುದ್ದಿಯನ್ನು ಅಲ್ಲಲ್ಲಿ ತಿಳಿಸುತ್ತಾ ಊರಲ್ಲೆಲ್ಲಾ ಸುಳಿದಾಡಿದರು. ರತ್ನ ಭೂಷಣಗಳಿಂದ ಅಲಂಕೃತರಾದ ಹೆಣ್ಣುಮಕ್ಕಳು ಸೇರಿದರು, ಅರ್ಜುನನಿಗೆ ಉಪ್ಪರತಿಯನ್ನು ಎತ್ತಿ ದೃಷ್ಟಿನಿವಾಳಿಸಿದರು, ನಂತರ ಅರ್ಜುನನು ಅರಮನೆಯನ್ನು ಪ್ರವೇಶಿಸಿದನು.

ಅರ್ಥ:
ಮಸಗು: ಹರಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಅತಿ: ಹೆಚ್ಚು; ಗರ್ಜಿಸು: ಜೋರಾಗಿ ಕೂಗು; ಒಸಗೆ: ಶುಭ, ಮಂಗಳ; ಮಾತು: ನುಡಿ; ಊರು: ಪುರ; ಸುಳಿ:ಸುತ್ತು; ದೂತ: ಸೇವಕ; ಶಶಿ: ಚಂದ್ರ; ಮುಖ: ಆನನ; ಶಶಿಮುಖಿ: ಸುಂದರಿ; ಉಪ್ಪಾರತಿ:ದೃಷ್ಟಿ ತೆಗೆಯುವುದು, ಉಪ್ಪಿನ ಆರತಿ; ರತುನ: ರತ್ನ, ಆಭರಣ; ಆವಳಿ: ಸಾಲು; ಕಾಂತ: ಸುಂದರಿ, ಹೆಣ್ಣು; ವಿಸರ: ಗುಂಪು; ನೂಕು:ತಳ್ಳು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಮಸಗಿದವು+ ನಿಸ್ಸಾಳತ್+ಅತಿ +ಗ
ರ್ಜಿಸಿದವ್+ಅರ್ಜುನ +ಬಂದನ್+ಇದೆ+ ಯೆಂದ್
ಒಸಗೆ +ಮಾತಿನೊಳ್+ಊರ +ಸುಳಿದರು+ ದೂತರಲ್ಲಲ್ಲಿ
ಶಶಿಮುಖಿಯರ್+ಉಪ್ಪಾರತಿಯ+ ಮಿಗಿಲ್
ಎಸೆವ +ರತುನಾವಳಿಯ+ ಕಾಂತಾ
ವಿಸರ +ನೂಕಿತು+ ಪಾರ್ಥ +ಹೊಕ್ಕನು +ರಾಜಮಂದಿರವ

ಅಚ್ಚರಿ:
(೧) ಬರೆಮಾಡಿಕೊಳ್ಳಲು ಆರತಿಯೆತ್ತುವ ಸಂಪ್ರದಾಯದ ಬಗ್ಗೆ ವಿವರ – ಶಶಿಮುಖಿಯರುಪ್ಪಾರತಿಯ ಮಿಗಿಲೆಸೆವ

ಪದ್ಯ ೨೭: ದ್ರೌಪದಿಗೆ ಯಾರು ಯಾವ ಆರತಿಯನ್ನೆತ್ತಿದರು?

ಆರತಿಗಳೆತ್ತಿದರು ಬಳಿಕು
ಪ್ಪಾರತಿಯ ಹಾಯ್ಕಿದರು ಮುತ್ತಿನ
ಸಾರಸೇಸೆಯ ಸೂಸಿ ಹರಸಿ ಸುವಾಸಿನೀನಿಕರ
ಚಾರು ಮುಕುರವ ನೋಡಿ ನಿಂದಳು
ಭಾರಣೆಯ ಗರುವಾಯಿಯಲಿ ಜಂ
ಬೀರ ಫಲವನು ಕೊಂಡಳಂಗನೆ ವಿಪ್ರಮಂತ್ರದಲಿ (ಆದಿ ಪರ್ವ, ೧೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಇಂತಹ ಚೆಲುವಾದ ದ್ರೌಪದಿಗೆ ಸುವಾಸಿನಿಯರು ಆರತಿಯನ್ನು ಎತ್ತಿದರು, ನಂತರ ಯಾರ ಕೆಟ್ಟ ದೃಷ್ಟಿಯು ತಾಗದಂತೆ ಉಪ್ಪಿನಾರತಿಯನ್ನು ಎತ್ತಿದರು. ಆಕೆಗೆ ಮುತ್ತಿನ ಸಾಸೆಯನ್ನಿಟ್ಟ ಮೇಲೆ ದ್ರೌಪದಿಯು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿ, ಬ್ರಾಹ್ಮಣರು ಮಂತ್ರಿಸಿಕೊಟ್ಟ ನಿಂಬೆಹಣ್ನನ್ನು ತೆಗೆದು ಬೆಡಗಿನ ಠೀವಿಯಲ್ಲಿ ನಿಂತಳು.

ಅರ್ಥ:
ಆರತಿ: ದೀಪಗಳಿಂದ ಎತ್ತುವ ನೀರಾಜನ; ಬಳಿಕ: ನಂತರ; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನಿವಾಳಿಸಿ ದೃಷ್ಟಿಯನ್ನು ತೆಗೆಯುವುದು; ಹಾಯ್ಕು: ಧರಿಸು, ಇರಿಸು, ಸ್ಥಾಪಿಸು; ಮುತ್ತು: ಬೆಲೆಲಾಳುವ ಆಭರಣ; ಸೇಸೆ: ಮಂಗಳಾಕ್ಷತೆ; ಸೂಸು: ಎರಚು, ಚಿಮ್ಮು; ಹರಸು: ಆಶೀರ್ವದಿಸು; ಸುವಾಸಿನಿ: ಹೆಣ್ಣು; ನಿಕರ: ಗುಂಪು; ಚಾರು: ಚೆಲುವೆ, ಅಂದ; ಮುಕುರ: ಕನ್ನಡಿ; ನೋಡಿ: ವೀಕ್ಷಿಸಿ; ಭಾರಣೆ: ಠೀವಿ, ಆಡಂಬರ; ಗರುವಾಯಿ: ದೊಡ್ಡತನ, ಸೊಗಸು, ಠೀವಿ; ಜಂಬೀರ: ನಿಂಬೆ; ಫಲ: ಹಣ್ಣು; ಅಂಗನೆ: ಹೆಣ್ಣು, ಸ್ತ್ರೀ; ವಿಪ್ರ: ಬ್ರಾಹ್ಮಣ; ಮಂತ್ರ: ಪವಿತ್ರ ದೇವತಾ ಸ್ತುತಿ;

ಪದವಿಂಗಡಣೆ:
ಆರತಿಗಳ್+ಎತ್ತಿದರು +ಬಳಿಕ
ಉಪ್ಪಾರತಿಯ+ ಹಾಯ್ಕಿದರು +ಮುತ್ತಿನ
ಸಾರಸೇಸೆಯ +ಸೂಸಿ +ಹರಸಿ+ ಸುವಾಸಿನೀ+ನಿಕರ
ಚಾರು +ಮುಕುರವ +ನೋಡಿ +ನಿಂದಳು
ಭಾರಣೆಯ +ಗರುವಾಯಿಯಲಿ+ ಜಂ
ಬೀರ +ಫಲವನು +ಕೊಂಡಳ್+ಅಂಗನೆ +ವಿಪ್ರ+ಮಂತ್ರದಲಿ

ಅಚ್ಚರಿ:
(೧) ಆರತಿ, ಉಪ್ಪಾರತಿ, ಸೂಸಿ, ಹರಸಿ; – ಪ್ರಾಸ ಪದಗಳು
(೨) “ಸ” ಕಾರದ ಜೋಡಿ ಪದ – ಸಾರಸೇಸೆಯ ಸೂಸಿ
(೩) ಭಾರಣೆ, ಗರುವಾಯಿ – ಸಮಾನಾರ್ಥಕ ಪದ