ಪದ್ಯ ೪೫: ಧೃತರಾಷ್ಟ್ರನು ಯಾರನ್ನು ಸಂತೈಸಿಸಲು ಧರ್ಮಜನಿಗೆ ಹೇಳಿದನು?

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ (ಗದಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಧರ್ಮಜನನ್ನು ಉದ್ದೇಶಿಸುತ್ತಾ, ಧರ್ಮಜ ನೀನಾಡಿದ ಮಾತು ಒಳಿತಾಗಿದೆ, ಇದು ನಮಗೆ ಸಾಕು, ನಿಮ್ಮ ತಾಯಿಯ ಉದ್ರೇಕವನ್ನು ನಿವಾರಿಸು. ಶೋಕವೊಂದು ಕಡೆ, ಕೋಪವೊಂಡುಕಡೆ, ಅವುಗಳ ಉಪಟಲವನ್ನು ಆಕೆ ತಡೆದುಕೊಳ್ಳಲಾರಳು ಎಂದು ಹೇಳಿ ವ್ಯಾಸ ವಿದುರರಿಗೆ ಇವರನ್ನು ಕರೆದುಕೊಂಡು ಹೋಗಿ ಆಕೆಯನ್ನು ತೋರಿಸಿರಿ ಎಂದನು.

ಅರ್ಥ:
ಸಾಕು: ನಿಲ್ಲು; ಅಬಲೆ: ಹೆಣ್ಣು; ಉದ್ರೇಕ: ಉದ್ವೇಗ, ತಳಮಳ; ಹಿರಿಯ: ದೊಡ್ಡ; ತಾಯಿ: ಅಮ್ಮ; ಪರಿಹರಿಸು: ಶಮನಗೊಳಿಸು; ಶೋಕ: ದುಃಖ; ಕ್ರೋಧ: ಕೋಪ; ಉಪಟಳ: ಕಿರುಕುಳ; ಸೈರಿಸು: ಸಮಾಧಾನ ಪಡಿಸು; ಅರಿ: ತಿಳಿ; ಆಕೆವಾಳ: ವೀರ, ಪರಾಕ್ರಮಿ; ಕಾಣಿಸು: ನೋದು;

ಪದವಿಂಗಡಣೆ:
ಸಾಕ್+ಇದಂತಿರಲ್+ಅಬಲೆಯರೊಳ್
ಉದ್ರೇಕಿ +ನಿಮ್ಮಯ +ಹಿರಿಯ +ತಾಯ್
ಉದ್ರೇಕವನು +ಪರಿಹರಿಸು +ಶೋಕ+ಕ್ರೋಧದ್+ಉಪಟಳಕೆ
ಆಕೆ +ಸೈರಿಸಲ್+ಅರಿಯಳ್+ಅರಿವಿನೊಳ್
ಆಕೆವಾಳರು+ ತಿಳಿಹಿ +ತಮ್ಮನನ್
ಆಕೆಯನು +ಕಾಣಿಸುವುದೆಂದನು +ವ್ಯಾಸ +ವಿದುರರಿಗೆ

ಅಚ್ಚರಿ:
(೧) ಆಕೆ, ಆಕೆವಾಳ, ಆಕೆಯನು – ಆಕೆ ಪದದ ಬಳಕೆ
(೨) ಗಾಂಧಾರಿಯ ಸ್ಥಿತಿ – ನಿಮ್ಮಯ ಹಿರಿಯ ತಾಯುದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳ್

ಪದ್ಯ ೫೪: ಧೃತರಾಷ್ಟ್ರನು ಯಾರ ಬಗ್ಗೆ ಚಿಂತಿಸಿದ?

ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ (ಭೀಷ್ಮ ಪರ್ವ, ೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಮಕ್ಕಳ ಚಿಂತೆ ಕವಿದಿತು. ಶೋಕ ಹೆಚ್ಚಿತು, ನನ್ನ ಮಕ್ಕಳು ಯುದ್ಧದಲ್ಲಿ ಏನಾದರೋ ಏನೋ> ನಾನು ಹೋಗಿ ನೋಡುವಂತಿಲ್ಲ, ಕಣ್ಣಿಲ್ಲದವರ ಬಾಳುವೆಯನ್ನು ಸುಡಲಿ ಎಂದು ಅವನು ತನ್ನೊಳಗೆ ತಾನೆ ಚಿಂತಿಸಿದ.

ಅರ್ಥ:
ಧರಿತ್ರೀಪಾಲ: ರಾಜ; ಮಕ್ಕಳು: ಸುತ, ಕುಮಾರ; ನೆನಹು: ನೆನಪು; ಅಧಿಕ: ಹೆಚ್ಚು; ಶೋಕ: ದುಃಖ; ಉದ್ರೇಕ: ಉದ್ವೇಗ; ಪಲ್ಲವಿಸು: ಚಿಗುರು; ಕಾಳೆಗ: ಯುದ್ಧ; ಭೂಪಾಲ: ರಾಜ; ತಿಲಕ: ಶ್ರೇಷ್ಠ; ದೃಗು: ಣ್ಣು, ನೇತ್ರ; ವಿಹೀನ: ಇಲ್ಲದ; ಬಾಳಿಕೆ: ಜೀವನ; ಸುಡು: ದಹಿಸು; ಹಿರಿದು: ಬಹಳವಾಗಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಧೃತರಾಷ್ಟ್ರಂಗೆ +ಮಕ್ಕಳ
ಮೇಲೆ +ನೆನಹಾಯ್ತ್+ಅಧಿಕ+ಶೋಕ+ಉದ್ರೇಕ +ಪಲ್ಲವಿಸೆ
ಕಾಳೆಗದೊಳ್+ಏನಾದರೋ+ ಭೂ
ಪಾಲ+ತಿಲಕರು+ ದೃಗು+ವಿಹೀನರ
ಬಾಳಿಕೆಯ +ಸುಡಲೆನುತ+ ತನ್ನೊಳು +ಹಿರಿದು +ಚಿಂತಿಸಿದ

ಅಚ್ಚರಿ:
(೧) ದೃಷ್ಟಿಹೀನತೆಯನ್ನು ಕರುಬುವ ಪರಿ – ದೃಗುವಿಹೀನರ ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ

ಪದ್ಯ ೩೭: ಯುಧಿಷ್ಠಿರನು ಪ್ರೀತಿಯಿಂದ ಅರ್ಜುನನಿಗೆ ಏನು ಹೇಳಿದ?

ಕಾಕ ಬಳಸಲು ಬೇಡ ಓಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕುತಗಂಡೊಡೆ ನಿನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನರ್ಜುನನ (ವಿರಾಟ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನ ಉದ್ವೇಗದ ಮಾತನ್ನು ಕೇಳಿ, ಸಲ್ಲದ ಮಾತುಗಳು ಬೇಡ ಅರ್ಜುನ, ಉದ್ರೇಕಗೊಳ್ಳಬೇಡ, ನಿನ್ನಾಣೆಯಾಗಿಯೂ ರಕ್ತದ ಬಿಂದುವು ನೆಲಕ್ಕೆ ಬೀಳಲಿಲ್ಲ. ದ್ರೌಪದಿಯ ಸೆರಗಿಗೆ ಅಭಿಷೇಕವಾಯಿತು. ಅತಿಯಾಗಿ ವ್ಯಾಕುಲಗೊಳ್ಳಬೇಡ, ಎಂದು ಹೇಳಿ ಪ್ರೀತಿಯಿಂದ ಅರ್ಜುನನ ಗಲ್ಲವನ್ನು ಹಿಡಿದನು.

ಅರ್ಥ:
ಕಾಕ:ಕ್ಷುಲ್ಲಕ; ಬಳಸು: ಉಪಯೋಗಿಸು; ಬೇಡ: ಸಲ್ಲದು; ಸಾಕು: ನಿಲ್ಲಿಸು; ಮಾಣು: ನಿಲ್ಲಿಸು; ಉದ್ರೇಕ: ಉದ್ವೇಗ; ನೆಲ: ಭೂಮಿ; ರಕುತ: ನೆತ್ತರು; ಆಣೆ: ಪ್ರಮಾಣ; ಕಮಲಲೋಚನೆ: ಕಮಲದಂತ ಕಣ್ಣುಳ್ಳವಳು; ಸೆರಗು: ಸೀರೆಯ ಅಂಚು; ಸೇಕ: ಚಿಮುಕಿಸುವಿಕೆ; ವ್ಯಾಕುಲತೆ: ಚಿಂತೆ, ಕಳವಳ; ಗಲ್ಲ: ಕದಪು, ಕೆನ್ನೆ; ಹಿಡಿ: ಗ್ರಹಿಸು;

ಪದವಿಂಗಡಣೆ:
ಕಾಕ +ಬಳಸಲು +ಬೇಡ +ಓಹೋ
ಸಾಕು +ಸಾಕೈ +ತಮ್ಮ +ಮಾಣ್
ಉದ್ರೇಕವನು +ನೆಲ +ರಕುತಗಂಡೊಡೆ +ನಿನ್ನ+ ಮೇಲಾಣೆ
ಈ +ಕಮಲಲೋಚನೆಯ +ಸೆರಗಿಗೆ
ಸೇಕವಾಯಿತು +ರಕುತವ್+ಅತಿ +ಸ
ವ್ಯಾಕುಲತೆ +ಬೇಡೆಂದು +ಗಲ್ಲವ +ಹಿಡಿದನ್+ಅರ್ಜುನನ

ಅಚ್ಚರಿ:
(೧) ಅಲ್ಲಸಲ್ಲದ ಮಾತು ಎಂದು ಹೇಳಲು – ಕಾಕ ಪದದ ಬಳಕೆ
(೨) ರಕ್ತ ಎಲ್ಲಿ ಬಿತ್ತು ಎಂದು ಹೇಳಲು – ಈ ಕಮಲಲೋಚನೆಯ ಸೆರಗಿಗೆ ಸೇಕವಾಯಿತು ರಕುತವ

ಪದ್ಯ ೧೦೩: ಯಮನ ಆಲಯದಲ್ಲಿ ಏನನ್ನು ಯಾರು ಒಪ್ಪಿಸುತ್ತಾರೆ?

ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಲೋಕದ ಜನರ ಪುಣ್ಯ ಪಾಪಗಳ ವಿವರವನ್ನು ಯಮನ ನಗರಿಗೆ ಶೂರರು ಹದಿನಾಲ್ಕು ದಿಕ್ಕುಗಳಿಂದ ತರುತ್ತಾರೆ, ನಾಲ್ಕು ಕಡೆಯಿಂದಲೂ ಪುಣ್ಯ ಪಾಪಗಳನ್ನು ಒತ್ತಿ ತರುತ್ತಾರೆ ಎಂಬ ಗರ್ವದಿಂದ ಮೈಮರೆತು ಕೆಡಬೇಡ ಎಂದು ಸನತ್ಸುಜಾತರು ಎಚ್ಚರದ ನುಡಿಯನ್ನು ತಿಳಿಸಿದರು.

ಅರ್ಥ:
ಲೋಕ: ಜಗತ್ತು; ಅಗಣ: ಗಣನೆಗಿಲ್ಲದ; ಪುಣ್ಯ: ಸದಾಚಾರ; ಪಾಪ: ಕೆಟ್ಟ ಕೆಲಸ, ದುರಾಚಾರ; ಅನೀಕ: ಗುಂಪು; ಯಮ: ಮೃತ್ಯುದೇವತೆ; ಆಲಯ: ಮನೆ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು, ಹೇಳು; ಹದಿನಾಲ್ಕು: ಚತುರ್ದಶ; ಮುಖ: ಕಡೆ, ಆನನ; ನಾಲ್ಕು: ಚತುರ್; ಕಡೆ: ದಿಶೆ; ಕವಿ: ಮುಚ್ಚಳ; ಬರಿಸು: ತುಂಬು; ರೌಕುಳ: ಅಧಿಕ್ಯ, ಹೆಚ್ಚಳ; ದಿನ: ವಾರ; ಗರ್ವ: ಅಹಂಕಾರ; ಉದ್ರೇಕ: ಉದ್ವೇಗ, ಆವೇಗ, ತಳಮಳ; ಮೈಮರೆ: ತಿಳುವಳಿಕೆ ಇಲ್ಲದೆ, ಗೊತಾಗದೆ; ಕೆಡು: ಹಾಳಾಗು, ಅಳಿ; ಮುನಿ: ಋಷಿ;

ಪದವಿಂಗಡಣೆ:
ಲೋಕದೊಳ್+ಅಗಣ +ಪುಣ್ಯ +ಪಾಪ
ಅನೀಕವನು +ಯಮರಾಜನ್+ಆಲಯದ್
ಆಕೆವಾಳಂಗ್ + ಅರುಹುವರು +ಹದಿನಾಲ್ಕು +ಮುಖವಾಗಿ
ನಾಲ್ಕು +ಕಡೆಯಲಿ +ಕವಿದು +ಬರಿಸುವ
ರೌಕಿ +ದಿನದಿನದಲ್ಲಿ +ಗರ್ವ
ಉದ್ರೇಕದಲಿ +ಮೈಮರೆದು +ಕೆಡಬೇಡೆಂದನಾ +ಮುನಿಪ

ಅಚ್ಚರಿ:
(೧) ಪುಣ್ಯ, ಪಾಪ – ವಿರುದ್ಧ ಪದಗಳು
(೨) ನುಡಿಮುತ್ತು – ಗರ್ವೋದ್ರೇಕದಲಿ ಮೈಮರೆದು ಕೆಡಬೇಡ