ಪದ್ಯ ೧೧: ಯಾವ ಭಾಷೆಯನ್ನು ಭೀಮನು ತೀರಿಸಿಕೊಂಡನು?

ಸಂದುದೇ ನೀ ಮೆಚ್ಚಿ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಕೇಳೆಂದ (ಗದಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಹಿಂದೆ ನಿನ್ನೆದುರಿನಲ್ಲೇ ಸಭೆಯಲ್ಲಿ ಮಾಡಿದ ಪ್ರತಿಜ್ಞೆಯನ್ನು ಪೂರೈಸಿದೆನಲ್ಲವೇ? ನೂರ್ವರು ಕೌರವರನ್ನು ಯುದ್ಧದಲ್ಲಿ ಕೊಂದು ದುಶ್ಶಾಸನನ ಮಾಂಸವನ್ನು ತಿಂದು ರಕ್ತವನ್ನು ಕುಡಿದು, ಗದೆಯಿಮ್ದ ನಿನ್ನ ತೊಡೆಗಳನ್ನು ಮುರಿದೆನಲ್ಲವೆ ದುರ್ಯೋಧನ ಹೇಳು ಎಂದು ಭೀಮನು ನುಡಿದನು.

ಅರ್ಥ:
ಸಂದು: ಪಡೆದ; ಮೆಚ್ಚು: ಹೊಗಳು, ಪ್ರಶಂಶಿಸು; ಸಭೆ: ದರ್ಬಾರು; ಹಿಂದೆ: ನಡೆದ ಘಟನೆ, ಭೂತಕಾಲ; ಭಾಷೆ: ನುಡಿ; ಕುರುಡ: ಅಂಧ; ನಂದನ: ಮಗ; ಇಮ್ಮಡಿ: ಎರಡು ಪಟ್ಟು; ರಣ: ಯುದ್ಧಭೂಮಿ; ಅಗ್ರ: ಮುಂಭಾಗ; ಕೊಂದು: ಸಾಯಿಸು; ಖಂಡ: ಮೂಳೆಯಿಲ್ಲದ ಮಾಂಸ; ರಕುತ: ನೆತ್ತರು; ಕುಡಿ: ಪಾನಮಾಡು; ಬಲುಗದೆ: ದೊಡ್ಡ ಮುದ್ಗರ; ತೊಡೆ: ಊರು; ಉಡಿ: ಮುರಿ; ಭೂಪ: ರಾಜ;

ಪದವಿಂಗಡಣೆ:
ಸಂದುದೇ +ನೀ +ಮೆಚ್ಚಿ+ ಸಭೆಯಲಿ
ಹಿಂದೆ +ಮಾಡಿದ +ಭಾಷೆ +ಕುರುಡನ
ನಂದನರನ್+ಇಮ್ಮಡಿಸಿದ್+ಐವತ್ತನು +ರಣಾಗ್ರದಲಿ
ಕೊಂದು +ದುಶ್ಶಾಸನನ +ಖಂಡವ
ತಿಂದು +ರಕುತವ +ಕುಡಿದು +ಬಲುಗದೆ
ಯಿಂದ +ನಿನ್ನಯ +ತೊಡೆಯನ್+ಉಡಿದೆನೆ +ಭೂಪ +ಕೇಳೆಂದ

ಅಚ್ಚರಿ:
(೧) ನೂರು ಜನರು ಎಂದು ಹೇಳಲು – ಇಮ್ಮಡಿಸಿದೈವತ್ತನು ಪದದ ಪ್ರಯೋಗ
(೨) ಕೊಂದು, ತಿಂದು, ಸಂದು – ಪ್ರಾಸ ಪದಗಳು

ಪದ್ಯ ೪೮: ಭೀಮನು ತನ್ನ ದೇಹವನ್ನು ಹೇಗೆ ಸಂತೈಸಿಕೊಂಡನು?

ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ (ಗದಾ ಪರ್ವ, ೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನ ಸತ್ವವು ಇಮ್ಮಡಿಯಾಯಿತು ತಿಗುರಿದ್ದ ಕೊರಳು ಸರಿಯಾಯಿತು. ಕೋಪಾಗ್ನಿಗೆ ಸಾಣೆಹಿಡಿದಂತಾಯಿತು. ಕಣ್ಣುಗಳು ಕೆಂಪಾದ ಉರಿಯನ್ನು ಸೂಸಿದವು. ಭೀಮನ ಗದೆ ಕೈಯಿಮ್ದ ಹಾರಿಹೋಗಿತ್ತು. ಯುದ್ಧಚಾತುರ್ಯ ಮಾಸಿತ್ತು. ಮಾನಭಂಗವಾಗಿತ್ತು. ಭೀಮನು ಅವೆಲ್ಲವನ್ನು ಕಳೆದುಕೊಂಡು ದೇಹವನ್ನು ಸಂತೈಸಿಕೊಂಡನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಇಮ್ಮಡಿ: ಎರಡು ಪಟ್ಟು; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಗೋಣು: ಕಂಠ, ಕುತ್ತಿಗೆ; ಮರಳು: ಹಿಂದಿರುಗು; ರೋಷ: ಕೋಪ; ವಹ್ನಿ: ಬೆಂಕಿ; ಸಾಣೆ: ಉಜ್ಜುವ ಕಲ್ಲು; ಕಣ್ಣು: ನಯನ; ಉಗುಳು: ಹೊರಹೊಮ್ಮು; ಕೇಸುರಿ: ಕೆಂಪಾದ ಬಣ್ಣ; ಠಾಣ: ಜಾಗ, ಸ್ಥಳ; ಎಡಹು: ಜಾರಿಹೋಗು; ಗದೆ: ಮುದ್ಗರ; ರಣ: ಯುದ್ಧಭೂಮಿ; ಬಿನ್ನಾಣ: ಗಾಢವಾದ ತಿಳುವಳಿಕೆ; ಮಸುಳು: ಕಾಂತಿಹೀನವಾಗು, ಮಂಕಾಗು; ಮಾನ: ಮರ್ಯಾದೆ, ಗೌರವ; ಮರ್ದನ: ಪುಡಿ ಮಾಡುವುದು; ಊಣೆ: ನ್ಯೂನ್ಯತೆ; ವ್ಯಥೆ: ದುಃಖ; ಭಟ: ಪರಾಕ್ರಮಿ; ಸಂತೈಸು: ಸಮಾಧಾನ ಪಡಿಸು; ತನು: ದೇಹ;

ಪದವಿಂಗಡಣೆ:
ತ್ರಾಣವ್+ಇಮ್ಮಡಿಯಾಯ್ತು +ತಿರುಗಿದ
ಗೋಣು +ಮರಳಿತು +ರೋಷ+ವಹ್ನಿಗೆ
ಸಾಣೆವಿಡಿದವೊಲಾಯ್ತು +ಕಣ್ಣ್+ಉಗುಳಿದುವು +ಕೇಸುರಿಯ
ಠಾಣವೆಡಹಿದ+ ಗದೆಯ +ರಣ+ಬಿ
ನ್ನಾಣ +ಮಸುಳಿದ +ಮಾನ+ಮರ್ದನದ್
ಊಣೆಯದ +ಸವ್ಯಥೆಯ +ಭಟ +ಸಂತೈಸಿದನು + ತನುವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರೋಷವಹ್ನಿಗೆ ಸಾಣೆವಿಡಿದವೊಲಾಯ್ತು

ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೮೫: ಧರ್ಮಜನು ಕೃಷ್ಣನಲ್ಲಿ ಏನು ಬೇಡಿದನು?

ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣರಾಯನ
ಪಾದದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದ ಹದನನು ಕರುಣಿಸೆಂದನು ಭೂಪ ನರಯಣಗೆ (ವಿರಾಟ ಪರ್ವ, ೧೧ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ವಿವಾಹಾನಂತರ ಕೃಷ್ಣನಲ್ಲಿ ಧರ್ಮಜನು, ಅಭಿಮನ್ಯುವಿನ ವಿವಾಹವು ಸಾಂಗವಾಗಿ ನೆರವೇರಿತು, ಶ್ರೀಕೃಷ್ಣನ ದರ್ಶನಮಾತ್ರದಿಂದ ನಮ್ಮ ಏಳಿಗೆಯ ವೇಗವು ಇಮ್ಮಡಿಯಾಯಿತು, ಭೂಮಿಯನ್ನು ಕೌರವನಿಗೆ ಅಡವಿಟ್ಟಿದ್ದರೂ, ನಾವು ಸತ್ಯವನ್ನು ರಕ್ಷಣೆ ಮಾಡಿಕೊಂಡೆವು ಎಂದು ಆಲೋಚಿಸಿ, ಮುಂದಿನ ಕಾರ್ಯಭಾರವನ್ನು ಕರುಣೆಯಿಂದ ಅಪ್ಪಣೆ ಕೊಡಿಸು ಎಂದು ಬೇಡಿದನು.

ಅರ್ಥ:
ಮದುವೆ: ವಿವಾಹ; ಮಹಾ: ಶ್ರೇಷ್ಠ; ದಯಾಂಬುಧಿ: ಕರುಣಾಸಾಗರ; ಅಂಬುಧಿ: ಸಾಗರ; ರಾಯ: ರಾಜ; ಪಾದ: ಚರಣ; ದರುಶನ: ನೋಟ; ಇಮ್ಮಡಿ: ಎರಡುಪಟ್ಟು; ಉದಯ: ಏಳಿಗೆ; ಮೇದಿನಿ: ಭೂಮಿ; ಒತ್ತೆ:ಅಡವು; ಕಾದು: ಕಾಪಾಡು; ಸತ್ಯ: ದಿಟ; ಮೇಲಾದ: ಮೊದಲು ನಡೆದ; ಹದ: ಸ್ಥಿತಿ; ಕರುಣಿಸು: ದಯೆತೋರು; ಭೂಪ: ರಾಜ;

ಪದವಿಂಗಡಣೆ:
ಆದುದ್+ಅಭಿಮನ್ಯುವಿನ +ಮದುವೆ +ಮ
ಹಾ +ದಯಾಂಬುಧಿ +ಕೃಷ್ಣ+ರಾಯನ
ಪಾದ+ದರುಶನವಾಗಲ್+ಇಮ್ಮಡಿಸಿತ್ತು +ನಮ್ಮುದಯ
ಮೇದಿನಿಯ +ನಾವೊತ್ತೆಯಿಟ್ಟೆವು
ಕಾದುಕೊಂಡೆವು+ ಸತ್ಯವನು+ ಮೇ
ಲಾದ +ಹದನನು +ಕರುಣಿಸೆಂದನು +ಭೂಪ +ನರಯಣಗೆ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಮಹಾ ದಯಾಂಬುಧಿ ಕೃಷ್ಣರಾಯ

ಪದ್ಯ ೮: ಯುಧಿಷ್ಠಿರನು ಎಷ್ಟು ಪಣವನ್ನು ಇಟ್ಟನು?

ಬರಹಕಿಮ್ಮಡಿ ನೂರುಮಡಿ ಸಾ
ವಿರದಮಡಿ ಪರಿಯಂತವಿಕ್ಕಿತು
ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು
ವಾಸಿ ಪಾಡಿನ
ದುರುಳತನವುಬ್ಬೆದ್ದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ (ಸಭಾ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಹೇಳಿದ್ದಕ್ಕೆರಡರಷ್ಟು, ನೂರರಷ್ಟು, ಸಾವಿರದಷ್ಟು ಹಣವನ್ನೊಡ್ಡಿದನು. ಸಂತಸದ ಮೊಗ್ಗು ಕೊನೆಯಾಯಿತು, ಕಲಿಯ ದೋಷವು ಹೆಚ್ಚಿತು. ಮನಸ್ಸಿನ ಸಮತೆಯನ್ನು ಕಳೆದುಕೊಂಡು ಛಲದ ದುಷ್ಟತನವು ಮನಸ್ಸಿನಲ್ಲಿ ಹೆಚ್ಚಿತು. ಒಡ್ಡದ ಮೇಲೆ ಒಡ್ಡವನ್ನು ಇಟ್ಟನು.

ಅರ್ಥ:
ಬರಹ:ಬರವಣಿಗೆ, ಚಿತ್ರಣ; ಇಮ್ಮಡಿ: ಎರಡರಷ್ಟು, ದುಪ್ಪಟ; ಸಾವಿರ ಸಹಸ್ರ; ಮಡಿ: ಪಟ್ಟು; ಪರಿಯಂತ: ವರೆಗೆ, ತನಕ; ಹರುಷ: ಸಂತಸ; ನನೆ: ಮೊಗ್ಗು, ಮುಗುಳು; ಕೊನೆ: ಅಂತ್ಯ; ಹೆಚ್ಚು: ಅಧಿಕ; ಕಲಿ: ವೀರ; ಕಲಿಮಲಾವೇಶ: ಕಲಿಗಾಲದ ಮಲದಿಂದ ಆವೇಶಗೊಂಡವ; ಆವೇಶ: ರೋಷ; ಸ್ಥಿರ: ನಿತ್ಯವಾದುದು, ಶಾಶ್ವತವಾದುದು; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ, ಕಡಮೆಯಾಗು; ವಾಸಿ: ಛಲ, ಹಠ; ಪಾಡಿನ: ರೀತಿ, ಬಗೆ; ದುರುಳ: ದುಷ್ಟ; ಉಬ್ಬೆದ್ದು: ಹೆಚ್ಚಾಗು; ಅಡಿಗಡಿಗೆ: ಪುನಃ ಪುನಃ; ಅರಸ: ರಾಜ; ಒಡ್ಡು: ನೀಡು, ಜೂಜಿನ ಪಣ; ಮೇಲೆ ಮೇಲೆ: ಮತ್ತೆ ಮತ್ತೆ; ವಿರಚಿಸು: ನಿರ್ಮಿಸು, ರಚಿಸು;

ಪದವಿಂಗಡಣೆ:
ಬರಹಕ್+ಇಮ್ಮಡಿ +ನೂರು+ಮಡಿ ಸಾ
ವಿರದ+ಮಡಿ ಪರಿಯಂತ+ಇಕ್ಕಿತು
ಹರುಷ +ನನೆಕೊನೆಯಾಯ್ತು +ಹೆಚ್ಚಿತು +ಕಲಿಮಲ+ಆವೇಶ
ಸ್ಥಿರವೆ+ ಹಿಂಗಿತು+ವಾಸಿ +ಪಾಡಿನ
ದುರುಳತನವ್+ಉಬ್ಬೆದ್ದುದ್+ಅಡಿಗಡಿಗ್
ಅರಸನ್+ಒಡ್ಡಿದ +ಮೇಲೆ +ಮೇಲ್+ಒಡ್ಡವನು +ವಿರಚಿಸಿದ

ಅಚ್ಚರಿ:
(೧) ಮಡಿ ಪದದ ಬಳಕೆ – ಇಮ್ಮಡಿ, ನೂರ್ಮಡಿ, ಸಾವಿರಮಡಿ
(೨) ದುರ್ಯೋಧನನ ಸ್ಥಿತಿಯನ್ನು ಹೇಳುವ ಪರಿ – ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ; ಸ್ಥಿರವೆ ಹಿಂಗ್ತು ವಾಸಿ ಪಾಡಿನ ದುರುಳತನವುಬ್ಬೆದ್ದುದಡಿಗಡಿಗೆ