ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು

ಪದ್ಯ ೧೭: ಧರ್ಮರಾಜನ ನಾಡಿನ ವೈಶಿಷ್ಟ್ಯವೇನು?

ಕಳುಹಿದನು ಪಾಂಚಾಲರನು ಯದು
ತಿಲಕ ಮೊದಲಾದಖಿಳ ಬಾಂಧವ
ಕುಲವನುತ್ಸಾಹದಲಿ ಹೊರೆದನು ನಾಡುಬೀಡುಗಳ
ಬೆಳುಗವತೆಯನ್ಯಾಯವಾರಡಿ
ಕಳವು ದಳವುಳ ಬಂದಿ ಡಾವರ
ಕೊಲೆ ಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳೆಂದ (ಆದಿ ಪರ್ವ, ೧೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ತನ್ನ ಜೊತೆ ಬಂದಿದ್ದ ಪಾಂಚಾಲ ರಾಜ ದ್ರುಪದ ಮತ್ತು ಧೃಷ್ಟದ್ಯುಮ್ನ, ಶ್ರೀಕೃಷ್ಣ ಮುಂತಾದ ಬಾಂಧವರನ್ನು ಕಳುಹಿಸಿ, ಅತ್ಯಂತ ಉತ್ಸಾಹದಿಂದ ತನ್ನ ನಾಡಿನ ಯೋಗಕ್ಷೇಮಕ್ಕೆ ದುಡಿಯಲು ಪ್ರಾರಂಭಿಸಿದನು. ಅವನಾಳುವ ನೆಲದಲ್ಲಿ ಕೊರೆ, ದರೋಡೆ, ಮೋಸ, ಕಳವು, ಬರ, ಸುಳ್ಳು ಅನ್ಯಾದದಿಂದಾದ ದೋಷಗಳು ಇರಲಿಲ್ಲ.

ಅರ್ಥ:
ಕಳುಹು: ಬೀಳ್ಕೊಡು; ತಿಲಕ: ಶ್ರೇಷ್ಠ, ಮುಕುಟಪ್ರಾಯ;ಅಖಿಳ: ಸರ್ವ; ಬಾಂಧವ: ಬಂಧುವರ್ಗ; ಕುಲ: ವಂಶ; ಉತ್ಸಾಹ: ಹುರುಪು, ಆಸಕ್ತಿ; ಹೊರೆ: ಹೊಣೆ, ಜವಾಬ್ದಾರಿ; ನಾಡು: ರಾಜ್ಯ; ಬೀಡು: ಮನೆ; ಬೆಳಗುವತೆ: ಹಗಲುದರೋಡೆ; ಅನ್ಯಾಯ:ಅಕ್ರಮ; ಆರಡಿ: ಮೋಸ; ಕಳವು: ಅಪಹಾರ, ವಂಚನೆ; ದಳ:ಸೈನ್ಯ,ಪಡೆ, ತುಂಡು; ಬಂದಿ:ಸೆರೆ, ಬಂಧನ; ಡಾವರ:ಹಿಂಸೆ, ಕೊಳ್ಳೆ, ಸೂರೆ; ಕೊಲೆ: ವಧೆ, ಸಾಯಿಸು; ಹುಸಿ: ಸುಳ್ಳು;ಅರಸ: ರಾಜ;

ಪದವಿಂಗಡಣೆ:
ಕಳುಹಿದನು +ಪಾಂಚಾಲರನು+ ಯದು
ತಿಲಕ+ ಮೊದಲಾದ್+ಅಖಿಳ+ ಬಾಂಧವ
ಕುಲವನ್+ಉತ್ಸಾಹದಲಿ +ಹೊರೆದನು +ನಾಡು+ಬೀಡುಗಳ
ಬೆಳುಗವತೆ +ಅನ್ಯಾಯವ್ + ಆರಡಿ
ಕಳವು +ದಳವುಳ+ ಬಂದಿ +ಡಾವರ
ಕೊಲೆ +ಹುಸಿಗಳ್+ಇಲ್ಲ್+ಇವರ +ರಾಜ್ಯದೊಳ್+ಅರಸ +ಕೇಳೆಂದ

ಅಚ್ಚರಿ:
(೧) ದೋಷಗಳ ಪಟ್ಟಿ ಕೊನೆಯ ೩ ಸಾಲುಗಳಲ್ಲಿ ವಿವರಿಸಿರುವುದು