ಪದ್ಯ ೩೭: ದುರ್ಯೋಧನನು ಯಾವ ವಿಷಯಕ್ಕೆ ಬೆದರಿದನು?

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ (ಗದಾ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ, ಕೌರವನು ಸಂಜಯನೊಡನೆ ಸರೋವರ ಬಳಿಗೆ ಬಂದನು. ಆಗ ಸುಗಂಧಪೂರಿತವಾದ ಹಿತಕರವಾದ ತಂಗಾಳಿ ಬೀಸಿ ದೇಹಕ್ಕೆ ಸಂತಸವಾದರೂ, ಭೀಮನ ತಂದೆಯು ತಾನಿರುವ ಗುಪ್ತಸ್ಥಾನವನ್ನರಿತನಂದು ಮನಸ್ಸು ಬೆದರಿತು.

ಅರ್ಥ:
ಸಹಿತ: ಜೊತೆ; ಜನಪ: ದೊರೆ; ಬಂದು: ಆಗಮಿಸು; ಸರೋವರ: ಸರಸಿ; ಅನಿಲ: ವಾಯು; ಇದಿರು: ಎದುರು; ಸುಗಂಧ: ಪರಿಮಳ; ಶೈತ್ಯ: ತಂಪು; ಪೂರ:ಬಹಳವಾಗಿ; ತನು: ದೇಹ; ಆಪ್ಯಾಯ: ಸಂತೋಷ, ಹಿತ; ಅಂತರ್ಮನ: ಅಂತಃಕರಣ; ಪಲ್ಲಟ: ಮಾರ್ಪಾಟು; ಜನಕ: ತಂದೆ; ಅರಿ: ತಿಳಿ; ಗುಪ್ತ: ರಹಸ್ಯ; ಸ್ಥಾನ: ಜಾಗ; ಸಂಗತಿ: ವಿಚಾರ;

ಪದವಿಂಗಡಣೆ:
ಎನುತ+ ಸಂಜಯ+ಸಹಿತ +ಕೌರವ
ಜನಪ+ ಬಂದನು +ತತ್ಸರೋವರಕ್
ಅನಿಲನ್+ಇದಿರಾದನು +ಸುಗಂಧದ +ಶೈತ್ಯ+ಪೂರದಲಿ
ತನುವಿಗ್+ಆಪ್ಯಾಯನದಿನ್+ಅಂತ
ರ್ಮನಕೆ +ಪಲ್ಲಟವಾಯ್ತು +ಭೀಮನ
ಜನಕನ್+ಅರಿದನು +ತನ್ನ +ಗುಪ್ತಸ್ಥಾನ +ಸಂಗತಿಯ

ಅಚ್ಚರಿ:
(೧) ಎರಡು ರೀತಿಯ ಅನುಭವ – ತನುವಿಗಾಪ್ಯಾಯನದಿನಂತರ್ಮನಕೆ ಪಲ್ಲಟವಾಯ್ತು
(೨) ಕೌರವ ಜನಪ, ಭೀಮನ ಜನಕ – ಪದಗಳ ಬಳಕೆ

ಪದ್ಯ ೨೯: ಕುದುರೆಗಳು ಹೇಗೆ ಮುನ್ನುಗ್ಗಲು ಸಿದ್ಧವಾದವು?

ಶರಹತಿಯಲುರೆ ನೊಂದು ಧೂಪಿಸಿ
ತರಹರಿಸುವಶ್ವಾಳಿ ಕೃಷ್ಣನ
ಕರುಣವಚನಾಮೃತ ರಸದಿನಾಪ್ಯಾಯನಂಬಡೆದು
ಖುರದಲವನಿಯ ಪೊಯ್ದು ಲಳಿ ಮಿಗ
ಲುರವಣಿಸಿದವು ಹನುಮನಂತಃ
ಕರಣ ಹದುಳಿಸಿ ಹಿಗ್ಗಿದನು ನರನಾಥ ಕೇಳೆಂದ (ಕರ್ಣ ಪರ್ವ, ೨೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳಿಂದ ನ್ನೋವುಗೊಂಡು ಸಂಕಟಪಡುತ್ತಿದ್ದ ಕುದುರೆಗಳನ್ನು ಕೃಷ್ಣನು ಕರುಣಾಪೂರಿತ ಮಾತಿನ ಅಮೃತದಿಂದ ಸಂತಸಗೊಂಡವು, ಗೊರಸುಗಳಿಂದ ನೆಲವನ್ನು ಹೊಡೆದು ಅತಿವೇಗದಿಂದ ಮುನ್ನುಗ್ಗಿದವು. ಹನುಮಂತನ ಮನಸ್ಸು ಹಿಗ್ಗಿತು ಆಯಾಸ ಇಲ್ಲವಾಯಿತು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.

ಅರ್ಥ:
ಶರ: ಬಾಣ; ಹತಿ: ಹೊಡೆತ; ಉರೆ: ಅತಿಶಯವಾಗಿ, ಅಧಿಕವಾಗಿ; ನೊಂದು: ದುಃಖಪಟ್ತು; ಧೂಪಿಸು: ಸಂಕಟಪಡು; ತರಹರ: ಸೈರಣೆ, ಸಹನೆ; ಅಶ್ವಾಳಿ: ಕುದುರೆಯ ಗುಂಪು; ಕರುಣ: ದಯೆ; ವಚನ: ಮಾತು; ಅಮೃತ: ಸುಧೆ; ರಸ: ಸಾರ; ಆಪ್ಯಾಯ: ಸಂತೋಷ, ಹಿತ; ಬಡಿ: ತಾಡಿಸು, ತಟ್ಟು; ಖುರ: ಕುದುರೆಗಳ ಕಾಲಿನ ಗೊರಸು, ಕೊಳಗು; ಅವನಿ: ಭೂಮಿ; ಪೊಯ್ದು: ಹೊಡೆ, ಬಡಿ; ಲಳಿ:ರಭಸ, ಆವೇಶ; ಮಿಗಲ್: ಮತ್ತು; ಉರವಣಿಸು: ಉತ್ಸಾಹದಿಂದಿರು; ಅಂತಃಕರಣ: ಒಳಮನಸ್ಸು; ಹದುಳ: ಸೌಖ್ಯ, ಕ್ಷೇಮ; ಹಿಗ್ಗು: ಸಂತಸ ಪಡು; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಶರಹತಿಯಲ್+ಉರೆ +ನೊಂದು +ಧೂಪಿಸಿ
ತರಹರಿಸುವ್+ಅಶ್ವಾಳಿ +ಕೃಷ್ಣನ
ಕರುಣ+ವಚನಾಮೃತ +ರಸದಿನ್+ಆಪ್ಯಾಯನಂಬಡೆದು
ಖುರದಲ್+ಅವನಿಯ +ಪೊಯ್ದು +ಲಳಿ +ಮಿಗಲ್
ಉರವಣಿಸಿದವು+ ಹನುಮನಂತ್+
ಅಂತಃಕರಣ+ ಹದುಳಿಸಿ+ ಹಿಗ್ಗಿದನು+ ನರನಾಥ +ಕೇಳೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹನುಮನಂತಃಕರಣ ಹದುಳಿಸಿ ಹಿಗ್ಗಿದನು
(೨) ಕೃಷ್ಣನ ಮಾತಿನ ಮಹಿಮೆ – ಕೃಷ್ಣನ ಕರುಣವಚನಾಮೃತ ರಸದಿನಾಪ್ಯಾಯನಂಬಡೆದು
ಖುರದಲವನಿಯ ಪೊಯ್ದು ಲಳಿ ಮಿಗ ಲುರವಣಿಸಿದವು

ಪದ್ಯ ೧೦: ಧರ್ಮರಾಯನು ಕೃಷ್ಣನನ್ನು ಹೇಗೆ ಕಂಡನು?

ಹರಿ ಕರಾಬ್ಜ ಸ್ಪರ್ಶ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃ
ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ
ಮುರಿಯದೇರಿನ ಮೈವಳಿಗೆ ಲಘು
ತರದ ಲುಳಿಯಲಿ ಮೈಯ ಬಲಿದಾ
ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ (ಕರ್ಣ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಕೈಗಳ ಸ್ಪರ್ಶಮಾತ್ರದಿಂದಲೇ ಧರ್ಮಜನ ಮನಸ್ಸು ಸಂತೋಷಗೊಂಡಿತು. ಕಣ್ಣೀರಿನಿಂದ ಅವನ ಮೈನೆನೆಯಿತು. ಗಾಯವಾಗದಿದ್ದ ಕಡೆಗೆ ಮೈಯನ್ನು ಮೆಲ್ಲಗೆ ಹೊರಳಿಸಿ, ದ್ರೌಪದಿಯ ತೊಡೆಯ ಮೇಲೆ ಮಲಗಿದನು.

ಅರ್ಥ:
ಹರಿ: ಕೃಷ್ಣ; ಕರ: ಕೈ, ಹಸ್ತ; ಅಬ್ಜ: ಕಮಲ; ಸ್ಫುರಣ: ಕಂಪನ; ಆಪ್ಯಾಯ: ಸಂತೋಷ, ಹಿತ; ಅಂತಃಕರಣ: ಚಿತ್ತವೃತ್ತಿ , ಮನಸ್ಸು; ನನೆ: ಒದ್ದೆಯಾಗು; ಉದ್ಗತ: ಹೊರಹೊಮ್ಮಿದ ; ಬಾಷ್ಪವಾರಿ: ಕಣ್ಣೀರು; ಮುರಿ: ಸೀಳು; ಮೈ: ತನು, ದೇಹ; ಲಘುತರ: ನಿಧಾನ, ಹಗುರವಾದ; ಲುಳಿ: ರಭಸ, ವೇಗ; ಬಲಿ: ನೆಲೆಗೊಳಿಸು; ಆದರ: ಗೌರವ, ಪ್ರೀತಿ; ಕುಳ್ಳಿರ್ದ: ಆಸೀನನಾದ; ಮಹೀಪತಿ: ರಾಜ; ಮಾನಿನಿ: ಹೆಣ್ಣು; ಮಲಗು:ದಿಂಬು;

ಪದವಿಂಗಡಣೆ:
ಹರಿ +ಕರಾಬ್ಜ +ಸ್ಪರ್ಶ +ಮಾತ್ರ
ಸ್ಫುರಣದಿಂದ್+ಅಪ್ಯಾಯಿತ್+ಅಂತಃ
ಕರಣನಾದನು+ ನನೆದನ್+ಉದ್ಗತ +ಬಾಷ್ಪವಾರಿಯಲಿ
ಮುರಿಯದ್+ಏರಿನ+ ಮೈವಳಿಗೆ +ಲಘು
ತರದ+ ಲುಳಿಯಲಿ +ಮೈಯ +ಬಲಿದಾ
ದರಿಸಿ+ ಕುಳ್ಳಿರ್ದನು +ಮಹೀಪತಿ+ ಮಾನಿನಿಯ +ಮಲಗಿ

ಅಚ್ಚರಿ:
(೧) ಸ್ಪುರಣ, ಅಂತಃಕರಣ – ಪ್ರಾಸ ಪದಗಳು
(೨) ಮ ಕಾರದ ತ್ರಿವಳಿ ಪದ – ಮಹೀಪತಿ ಮಾನಿನಿಯ ಮಲಗಿ