ಪದ್ಯ ೨೦: ಯುದ್ಧವನ್ನು ಯಜ್ಞಕ್ಕೆ ಹೇಗೆ ಹೋಲಿಸಬಹುದು?

ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮೆರದಿರಕಟೆಂದ (ಗದಾ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ನರಗಳೇ ದರ್ಭೆಗಳು, ಮಿದುಳುಗಳೇ ಚರು, ಎಲುಬುಗಳೇ ಸಮಿತ್ತುಗಳು, ಧನುಷ್ಟಂಕಾರ ಚತುರಂಗ ಬಲದ ಸದ್ದುಗಳೇ ಸಾಮ ವೇದದ ಘೋಷ, ರಕ್ತವೇ ತುಪ್ಪ, ಶತ್ರುಗಳ ತಲೆ ಬುರುಡೆಗಳೇ ಸ್ರಕ್ ಸ್ರುವಗಳು, ವೈರಿಗಳೇ ಪಶುಗಳು, ಇಂತಹ ಯುದ್ಧಯಜ್ಞದ ದೀಕ್ಷೆಯನ್ನು ಅಯ್ಯೋ ಮರೆತಿರಲ್ಲಾ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಸೆರೆ: ಒಂದು ಕೈಯ ಬೊಗಸೆ; ನರ: ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಎಲುಬು: ಮೂಳೆ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಬಿಲುದಿರುರವ: ಧನುಷ್ಟಂಕಾರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ರಭಸ: ವೇಗ; ವೇದಿ: ಪಂಡಿತ, ವಿದ್ವಾಂಸ; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಸ್ರುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಶಿರ: ತಲೆ; ಕಪಾಲ: ಕೆನ್ನೆ, ತಲೆಬುರುಡೆ; ವೈರಿ: ಶತ್ರು; ಪಶು: ಪ್ರಾಣಿ; ಬಂಧುರ: ಬಾಗಿರುವುದು; ಸಂಗರ: ಯುದ್ಧ, ಕಾಳಗ; ದೀಕ್ಷೆ: ವ್ರತ, ನಿಯಮ; ಮರೆ: ನೆನಪಿನಿಂದ ದೂರ ಮಾಡು; ಅಕಟ: ಅಯ್ಯೋ;

ಪದವಿಂಗಡಣೆ:
ಸೆರೆ+ನರದ+ ದರ್ಭೆಗಳ +ಮಿದುಳಿನ
ಚರುವಿನ್+ಎಲುವಿನ +ಸಮಿಧೆಗಳ+ ಬಿಲು
ದಿರು+ರವದ +ಚತುರಂಗ+ರಭಸದ +ಸಾಮ+ವೇದಿಗಳ
ಅರುಣಜಲದ+ಆಜ್ಯದ+ ಸ್ರುವಾದಿಯ
ಶಿರ+ಕಪಾಲದ+ ವೈರಿ+ಪಶುಬಂ
ಧುರದ +ಸಂಗರ+ಯಜ್ಞ +ದೀಕ್ಷೆಯ +ಮೆರದಿರ್+ಅಕಟೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ

ಪದ್ಯ ೧೯: ಯುದ್ಧದ ಹವಿಸ್ಸಿಗೆ ಏನನ್ನು ಅರ್ಪಿಸಿದರು?

ವೀರ ಧಣುಧಣು ಪೂತರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬ ರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ (ಭೀಷ್ಮ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭಲೇ ವೀರ, ಬಿಲ್ಲುಗಾರ ಭಲರೇ, ಬಿಲ್ಲುವಿದ್ಯೆಯ ಪಂಡಿತರೇ ಭಲೇ, ಎಂದು ಒಬ್ಬರೊಬ್ಬರನ್ನು ಮೂದಲಿಸುತ್ತಾ, ಬಿಲ್ಲುಗಾರರು ತಮ್ಮ ಬಾಣಗಳಿಂದ ಶತ್ರುಗಳ ತಲೆಯ ತೋರಣವನ್ನು ಕಟ್ಟಿದರು. ಸೇನೆಯ ಮಾರಣಯಜ್ಞವು ರಕ್ತಧಾರೆಯ ತುಪ್ಪದ ಹವಿಸ್ಸಿನಿಂದ ಮುಂದುವರೆಯಿತು.

ಅರ್ಥ:
ವೀರ: ಪರಾಕ್ರಮ; ಧಣುಧಣು: ಕೊಂಡಾಟದ ನುಡಿ; ಪೂತು: ಪವಿತ್ರ, ಶುದ್ಧ; ಬಿಲ್ಲು: ಚಾಪ; ಮಝ: ಭಲೇ; ಚಾಪ: ಬಿಲ್ಲು; ತಂತ್ರ: ರಹಸ್ಯಮಯ ವಿದ್ಯೆ; ವಿಶಾರದ: ಪಂಡಿತ; ಬಿರುದು: ಗೌರವಸೂಚಕ ಹೆಸರು; ಮೂದಲಿಸು: ಹಂಗಿಸು; ಓರಣ: ಕ್ರಮ, ಸಾಲು; ಕಣೆ: ಬಾಣ; ತಲೆ: ಶಿರ; ತೋರಣ: ಹೆಬ್ಬಾಗಿಲು; ಕಟ್ಟು: ನಿರ್ಮಿಸು; ಸೇನ: ಸೈನ್ಯ; ಮಾರಣ:ಕೊಲೆ, ವಧೆ; ಅಧ್ವರ: ಯಜ್ಞ, ಯಾಗ; ಎಸೆ: ತೋರು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಧಾರೆ: ಪ್ರವಾಹ;

ಪದವಿಂಗಡಣೆ:
ವೀರ +ಧಣುಧಣು +ಪೂತರೇ +ಬಿಲು
ಗಾರ +ಮಝರೇ +ಚಾಪತಂತ್ರ+ವಿ
ಶಾರದಾ +ಎನುತ್+ಒಬ್ಬರೊಬ್ಬರ +ಬಿರುದ +ಮೂದಲಿಸಿ
ಓರಣದ +ಕಣೆಗಳಲಿ +ತಲೆಗಳ
ತೋರಣವ +ಕಟ್ಟಿದರು +ಸೇನಾ
ಮಾರಣ+ಅಧ್ವರವ್+ ಎಸೆದುದ್+ಅರುಣ+ಜಲ+ಆಜ್ಯ+ಧಾರೆಯಲಿ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ – ಸೇನಾ ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ
(೨) ಧಣುಧಣು, ಮಝರೇ , ಪೂತರೇ – ಕೊಂಡಾಟದ ಮಾತುಗಳು
(೩) ಬಿಲ್ಲುಯುದ್ಧದ ತೀವ್ರತೆ – ಓರಣದ ಕಣೆಗಳಲಿ ತಲೆಗಳ ತೋರಣವ ಕಟ್ಟಿದರು

ಪದ್ಯ ೨೪: ಸರ್ಪಾಸ್ತ್ರದ ಶಕ್ತಿ ಹೇಗಿತ್ತು?

ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ (ಕರ್ಣ ಪರ್ವ, ೨೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಬಳಿಕ ಭೀಮಾರ್ಜುನ ನಕುಲ, ಸಹದೇವ, ಸಾತ್ಯಕಿಯರು ಸರ್ಪಾಸ್ತ್ರದ ಮೇಲೆ ದಿವ್ಯಾಸ್ತ್ರಗಳನ್ನು ಬಿಟ್ಟರು. ಆದರೆ ಸರ್ಪಾಸ್ತ್ರವು ತುಪ್ಪದ ಧಾರೆಯಿಂದ ಹೆಚ್ಚುವ ಬೆಂಕಿಯಂತೆ ಎಲ್ಲವನ್ನು ನುಂಗಿತು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಬಳಿಕ: ನಂತರ; ದಿವ್ಯ: ಶ್ರೇಷ್ಠ; ಅಸ್ತ್ರ: ಶಸ್ತ್ರ; ನಿಕರ: ಗುಂಪು; ಎಚ್ಚು: ಬಾಣಬಿಡು; ಅಹಿ: ಹಾವು; ಶರ: ಬಾಣ; ಅನಿತು: ಅಷ್ಟು; ಶರ: ಬಾಣ; ನುಂಗು: ಕಬಳಿಸು, ಸ್ವಾಹಮಾಡು; ಮಗುಳು: ಪುನಃ, ಮತ್ತೆ; ಆಜ್ಯ; ತುಪ್ಪ; ಧಾರೆ: ಪ್ರವಾಹ, ಮೇಲಿನಿಂದ ಹರಿದುಬರುವ ನೀರು ಎಣ್ಣೆ; ನನೆ:ತೋಯು, ಒದ್ದೆಯಾಗು; ಹುತವಹ: ಅಗ್ನಿ; ಹೆಚ್ಚು: ಅಧಿಕ; ತೀವ್ರ: ತ್ವರೆ, ರಭಸ; ಫಣಿ: ಹಾವು; ಬಾಣ; ಶರ;

ಪದವಿಂಗಡಣೆ:
ಜನಪ +ಕೇಳೈ +ಬಳಿಕ +ಭೀಮಾ
ರ್ಜುನ +ನಕುಲ +ಸಹದೇವ +ಸಾತ್ಯಕಿ
ತನತನಗೆ +ದಿವ್ಯಾಸ್ತ್ರ+ನಿಕರದಲ್+ಎಚ್ಚರ್+ಅಹಿ+ಶರವ
ಅನಿತು +ಶರವನು +ನುಂಗಿ +ಮಗುಳ್
ಎಚ್ಚನ್+ಇತನೊಳುಕೊಳುತ್+ಆಜ್ಯ+ಧಾರೆಗೆ
ನನೆದ +ಹುತವಹನಂತೆ +ಹೆಚ್ಚಿತು +ತೀವ್ರ +ಫಣಿಬಾಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಜ್ಯಧಾರೆಗೆ ನನೆದ ಹುತವಹನಂತೆ
(೨) ಸಮನಾರ್ಥಕ ಪದ – ಶರ, ಬಾಣ
(೩) ಅಹಿ, ಆಜ್ಯ, ಅನಿತು – ಪದಗಳ ಬಲಕೆ

ಪದ್ಯ ೧೯: ಯುದ್ಧವನ್ನು ಯಜ್ಞಕ್ಕೆ ಕರ್ಣನು ಹೇಗೆ ಹೋಲಿಸಿದನು?

ಅರುಣ ಜಲದಾಜ್ಯದೊಳು ಬಂಬಲು
ಗರುಳ ಚರುವಿನೊಳೆಲುವಿನೊಟ್ಟಿಲ
ಬೆರಳ ಸಮಿಧೆಯೊಳಡಗಿನಖಿಳಾಹುತಿಯ ರಚನೆಯೊಳು
ನರಕಪಾಲದ ಪಾತ್ರೆಯೊಳು ನಿಡು
ದೆರಳೆಗಳ ಕೇಶದ ಸುದರ್ಭಾಂ
ಕುರದೊಳಾಹವ ಯಜ್ಞದೀಕ್ಷಿತನಹೆನು ತಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಯುದ್ಧ ಯಜ್ಞದಲ್ಲಿ ರಕ್ತವೇ ತುಪ್ಪ, ಕರುಳುಗಳೇ ಅರು, ಎಲುಬುಗಳೇ ಇಂಧನ, ಬೆರಳುಗಳೇ ಸಮಿತ್ತುಗಳು, ನರರ ತಲೆ ಬುರುಡೆಗಳೇ ಪಾತ್ರೆ, ಕೂದಲುಗಳೇ ದರ್ಭೆಗಳು ಮತ್ತು ಈ ಯಜ್ಞಕ್ಕೆ ನಾನೇ ದೀಕ್ಷಿತನು ಎಂದು ಕರ್ಣನು ಯುದ್ಧದ ಯಜ್ಞಕ್ರಿಯೆಯನ್ನು ವರ್ಣಿಸಿದನು.

ಅರ್ಥ:
ಅರುಣ: ಕೆಂಪು ಬಣ್ಣ; ಜಲ: ನೀರು; ಆಜ್ಯ: ತುಪ್ಪ, ಘೃತ; ಬಂಬಲು: ಗುಂಪು, ಸಮೂಹ; ಕರುಳ: ; ಚರು: ನೈವೇದ್ಯ; ಎಲುಬು: ಮೂಳೆ, ಅಸ್ಥಿ; ಒಟ್ಟಿಲು: ರಾಶಿ, ಗುಂಪು; ಬೆರಳು: ಅಂಗುಲಿ; ಸಮಿಧೆ:ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಅಡಗು: ಮಾಂಸ, ಅವಿತುಕೊಳ್ಳು; ಅಖಿಳ: ಎಲ್ಲಾ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ರಚನೆ: ನಿರ್ಮಾಣ, ಸೃಷ್ಟಿ; ನರ: ಮನುಷ್ಯ; ಕಪಾಲ: ತಲೆಬುರುಡೆ; ಪಾತ್ರೆ: ಅಡುಗೆ ಮಾಡಲು ಬಳಸುವ ಸಾಮಗ್ರಿ; ಕೇಶ: ಕೂದಲು; ದರ್ಭೆ:ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಅಂಕುರ: ಕೂದಲು, ಮೊಳಕೆ; ಆಹವ:ಯಾಗ, ಯಜ್ಞ; ದೀಕ್ಷೆ:ಪವಿತ್ರ ಕಾರ್ಯಕ್ಕಾಗಿ ಆರಂಭದಲ್ಲಿ ನಡೆಸುವ ಸಂಸ್ಕಾರ;

ಪದವಿಂಗಡಣೆ:
ಅರುಣ +ಜಲದ್+ಆಜ್ಯದೊಳು +ಬಂಬಲು
ಗರುಳ+ ಚರುವಿನೊಳ್+ಎಲುವಿನ್+ಒಟ್ಟಿಲ
ಬೆರಳ+ ಸಮಿಧೆಯೊಳ್+ಅಡಗಿನ್+ಅಖಿಳ+ಆಹುತಿಯ +ರಚನೆಯೊಳು
ನರ+ಕಪಾಲದ +ಪಾತ್ರೆಯೊಳು +ನಿಡು
ದೆರಳೆಗಳ +ಕೇಶದ +ಸುದರ್ಭಾಂ
ಕುರದೊಳ್+ಆಹವ +ಯಜ್ಞ+ದೀಕ್ಷಿತನಹೆನು+ ತಾನೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸಿ ಬರೆದಿರುವ ಪದ್ಯ