ಪದ್ಯ ೧೩: ಕೌರವಸೇನೆ ಏಕೆ ನಗುತ್ತಿತ್ತು?

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ (ವಿರಾಟ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಉತ್ತರನು ರಥದಿಂದ ಧುಮುಕಿ ಕೆದರುಗೂದಲನ್ನು ಬಿಟ್ಟುಕೊಂಡು, ಸತ್ತೆನೋ ಕೆಟ್ಟೆನೋ ಎಂದು ಓಡುತ್ತಿರುವುದನ್ನು ಅರ್ಜುನನು ನೋಡಿದನು. ಎಲಾ ಈ ಪಾಪಿಯು ಓಡುತ್ತಿದ್ದಾನೆ, ಹಿಡಿಯಬೇಕು ಎಂದುಕೊಂಡು ರಥದ ಗತಿಯನ್ನು ತಡೆದು ಹಿಂದಕ್ಕೆ ರಥವನ್ನು ಬಿಡಲು ಭೂಮಿ ಕುಗ್ಗಿ ಆದಿಶೇಷನು ಬೆದರಿದನು. ಉತ್ತಾರನ ಓಟವನ್ನು ನೋಡಿ ಕೌರವರ ಸೇನೆಯು ನಗೆಗಡಲಿನಲ್ಲಿ ಮುಳುಗಿತು.

ಅರ್ಥ:
ನೋಡು: ವೀಕ್ಷಿಸು; ಕಲಿ: ಶೂರ; ಪಾರ್ಥ: ಅರ್ಜುನ; ಕೇಡಾಡಿ: ಕೇಡು ಮಾಡುವ ಸ್ವಭಾವದವ; ಕೆದರು: ಹರಡಿದ; ಕೇಶ: ಕೂದಲು; ಕೆಟ್ಟೋಡು: ಧಾವಿಸು, ಕೆಟ್ಟೆನೋ ಎಂದು ತಿಳಿದು ಓಡು; ಪಾಪಿ: ದುಷ್ಟ; ಹಾಯಿ: ಮೇಲೆಬೀಳು; ಹಿಡಿ: ಬಂಧಿಸು; ಕೂಡೆ: ಒಮ್ಮೆಲೆ; ಸೂಟಿ: ವೇಗ; ಅಟ್ಟು: ಬೆನ್ನುಹತ್ತಿ ಹೋಗು; ಇಳೆ: ಭೂಮಿ; ಅಲ್ಲಾಡು: ನಡುಗು; ಅಹಿಪತಿ: ಆದಿಶೇಶ; ಹೆದರು: ಬೆದರಿಕೆ; ನೋಡು: ವೀಕ್ಷಿಸು; ಸೇನೆ: ಸೈನ್ಯ; ಕೆಡೆ: ಬೀಳು, ಕುಸಿ; ನಗೆ: ಹರ್ಷ; ಕಡಲು: ಸಾಗರ;

ಪದವಿಂಗಡಣೆ:
ನೋಡಿದನು +ಕಲಿ+ಪಾರ್ಥನ್+ಈ+ ಕೇ
ಡಾಡಿ +ಕೆದರಿದ +ಕೇಶದಲಿ +ಕೆಟ್ಟ್
ಓಡುತಿರಲ್+ಎಲೆ+ ಪಾಪಿ +ಹಾಯ್ದನು +ಹಿಡಿಯಬೇಕೆನುತ
ಕೂಡೆ +ಸೂಟಿಯೊಳ್+ಅಟ್ಟಲ್+ಇಳೆ
ಅಲ್ಲಾಡಲ್+ಅಹಿಪತಿ +ಹೆದರಲ್+ಇತ್ತಲು
ನೋಡಿ +ಕೌರವಸೇನೆ +ಕೆಡೆದುದು +ನಗೆಯ +ಕಡಲೊಳಗೆ

ಅಚ್ಚರಿ:
(೧) ಜೋರಾಗಿ ನಕ್ಕರು ಎಂದು ಹೇಳಲು – ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ
(೨) ವೇಗವನ್ನು ವಿವರಿಸುವ ಪರಿ – ಸೂಟಿಯೊಳಟ್ಟಲಿಳೆಯಲ್ಲಾಡಲಹಿಪತಿ ಹೆದರಲು
(೩) ಉತ್ತರನ ಸ್ಥಿತಿ (ಕೆ ಕಾರದ ಸಾಲು ಪದ) – ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲೆ

ಪದ್ಯ ೫೧: ಮಲ್ಲರ ಯುದ್ಧಕ್ಕೆ ಭೂಮಿ ಏಕೆ ನಡುಗಿತು?

ಅದುರಿತಂಘ್ರಿಗೆ ಭೂಮಿ ದಿಕ್ಕರಿ
ಯೊದರಿತಹಿಪತಿಯಳುಕೆ ಕೂರ್ಮನು
ಬೆದರಿ ಬಿದ್ದನು ಭೀಮ ಜೀಮೂತಕರ ಪದಹತಿಗೆ
ಹೆದರಿ ಚಲಿಸಿತು ರಾಜಸಭೆ ನೆರೆ
ಹದುಳಿಪುದೆ ಪುರ ಜನವು ಹೇಳೆನೆ
ಪದಹತಿಯೊಳದುಭುತವ ತೋರಿದರಾ ಮಹಾಸಭೆಗೆ (ವಿರಾಟ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಈ ಇಬ್ಬರ ಮಲ್ಲರ ಕಾಲಿನ ಬಿರುಸಿನ ಓಟ ಮತ್ತು ಒತ್ತಡದಿಂದ ಭೂಮಿ ನಡುಗಿತು, ದಿಕ್ಕುಗಳು ಕಿರುಚಿದವು, ಶೇಷನಾಗನು ಅಳುಕಿದುದನ್ನು ಕಂಡು ಆಮೆಯು ಬೆದರಿತು, ರಾಜಸಭೆಯಲ್ಲಿದ್ದ ಜನರಲ್ಲೂ ಭಯವು ಆವರಿಸಿತು. ಆ ಮಲ್ಲಯುದ್ಧದಲ್ಲಿ ಒಂದು ಆಶ್ಚರ್ಯ ಸಂಗತಿಯು ನಡೆಯಿತು.

ಅರ್ಥ:
ಅದುರು: ನಡುಗು; ಅಂಘ್ರಿ: ಪಾದ; ಭೂಮಿ: ಇಳೆ; ದಿಕ್ಕು: ದಿಶೆ; ಒದರು: ಕಿರುಚು; ಅಹಿ: ಹಾವು; ಅಹಿಪತಿ: ಹಾವುಗಳ ಒಡೆಯ (ಶೇಷನಾಗ); ಕೂರ್ಮ: ಆಮೆ; ಅಳುಕು: ಹೆದರು; ಬೆದರು: ಭಯ, ಅಂಜಿಕೆ; ಬಿದ್ದು: ಬೀಳು; ಪದ: ಪಾದ; ಹತಿ: ಪೆಟ್ಟು, ಹೊಡೆತ; ಹೆದರು: ಅಂಜು; ಚಲಿಸು: ನಡೆ; ಹದುಳು: ಕ್ಷೇಮ; ಪುರ: ಊರು; ನೆರೆ: ಪಕ್ಕ, ಪಾರ್ಶ್ವ; ಜನ: ಮನುಷ್ಯರ ಗುಂಪು; ಸಭೆ: ಓಲಗ; ಹೇಳು: ತಿಳಿಸು,ನುಡಿ; ಪದಹತಿ: ಕಾಲಿನಿಂದ ತುಳಿ; ಅದುಭುತ: ಆಶ್ಚರ್ಯ; ತೋರು: ಗೋಚರಿಸು;

ಪದವಿಂಗಡಣೆ:
ಅದುರಿತ್+ಅಂಘ್ರಿಗೆ +ಭೂಮಿ +ದಿಕ್ಕರಿ
ಒದರಿತ್+ಅಹಿಪತಿ+ಅಳುಕೆ +ಕೂರ್ಮನು
ಬೆದರಿ+ ಬಿದ್ದನು +ಭೀಮ +ಜೀಮೂತಕರ +ಪದಹತಿಗೆ
ಹೆದರಿ+ ಚಲಿಸಿತು +ರಾಜಸಭೆ +ನೆರೆ
ಹದುಳಿಪುದೆ +ಪುರ +ಜನವು +ಹೇಳ್+ಎನೆ
ಪದಹತಿಯೊಳ್+ಅದುಭುತವ +ತೋರಿದರಾ +ಮಹಾಸಭೆಗೆ

ಅಚ್ಚರಿ:
(೧) ಭೂಮಿಯ ಮೇಲೆ ಆದ ಪರಿಣಾಮ – ಅದುರಿತಂಘ್ರಿಗೆ ಭೂಮಿ ದಿಕ್ಕರಿಯೊದರಿತಹಿಪತಿಯಳುಕೆ ಕೂರ್ಮನು
ಬೆದರಿ ಬಿದ್ದನು ಭೀಮ ಜೀಮೂತಕರ ಪದಹತಿಗೆ

ಪದ್ಯ ೪೦: ಭೀಮನು ಅಣ್ಣನಿಗೆ ಹೇಗೆ ಉತ್ತರಿಸಿದನು?

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯ ನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ಣು ತೆರೆದು ಭೀಮನು ಅಣ್ಣನನ್ನು ನೋಡಿದನು, ಹಾವು ಅವನ ಕಂಠವನ್ನು ಭದ್ರವಾಗಿ ಬಂಧಿಸಿದ್ದುದರಿಂದ ಅವನು ಮಾತನಾಡಲಾರದೆ ಕೇವಲ ಬೆರಳ ಸನ್ನೆಯನ್ನು ಮಾಡಿದನು. ಅಜಾತಶತ್ರುವಾದ ಧರ್ಮಜನು ಹೆದರಿ ಹಾವನ್ನುದೇಶಿಸಿ, ನೀನು ಸಾಮಾನ್ಯ ಹಾವಲ್ಲ, ನೀನಾರು ಎಂದು ಕೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಂದೆರೆದು: ಕಣ್ಣು ಬಿಟ್ಟು; ಕಂಠ: ಕೊರಳು
ಹೂಡು: ಅಣಿಗೊಳಿಸು, ಕಟ್ಟು; ಉರಗ: ಹಾವು; ಘೋರ: ಉಗ್ರ, ಭಯಂಕರ; ಬಂಧ: ಕಟ್ಟು, ಬಂಧನ; ಗಾಢ: ಹೆಚ್ಚಳ, ಅತಿಶಯ; ನುಡಿ: ಮಾತಾಡು; ನೆಗ್ಗು: ಕುಗ್ಗು, ಕುಸಿ; ಬೆರಳು: ಅಂಗುಲಿ; ಸನ್ನೆ: ಗುರುತು; ಖೇಡ: ಹೆದರಿದವನು; ಅಜಾತಶತ್ರು: ಧರ್ಮರಾಯ, ಶತ್ರುವೇ ಇಲ್ಲದವ; ಮಾತಾಡಿಸು: ನುಡಿ; ಅಹಿಪತಿ: ಸರ್ಪರಾಜ; ನೆಲೆ: ಸ್ಥಾನ; ನಾಡಾಡಿ: ಸಾಮಾನ್ಯವಾದುದು; ನಾಟಕ: ಲೀಲೆ, ತೋರಿಕೆ; ಫಣಿ: ಹಾವು; ಹೇಳು: ತಿಳಿಸು; ರಿಪು: ಶತ್ರು, ವೈರಿ;

ಪದವಿಂಗಡಣೆ:
ನೋಡಿದನು +ಕಂದೆರೆದು +ಕಂಠಕೆ
ಹೂಡಿದ್+ಉರಗನ +ಘೋರ +ಬಂಧದ
ಗಾಢದಲಿ +ನುಡಿ +ನೆಗ್ಗಿ+ ನುಡಿದನು +ಬೆರಳ +ಸನ್ನೆಯಲಿ
ಖೇಡನಾದನ್+ಅಜಾತರಿಪು+ ಮಾ
ತಾಡಿಸಿದನ್+ಅಹಿಪತಿಯ +ನೆಲೆ +ನಾ
ಡಾಡಿಗಳ +ನಾಟಕದ +ಫಣಿಯಲ್ಲ್+ಆರು +ಹೇಳೆಂದ

ಅಚ್ಚರಿ:
(೧) ಭೀಮನ ಸ್ಥಿತಿ – ಉರಗನ ಘೋರ ಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
(೨) ನೆಗ್ಗಿ ನುಡಿದನು; ನೆಲೆ ನಾಡಾಡಿಗಳ ನಾಟಕದ – ನ ಕಾರದ ಪದಗಳು

ಪದ್ಯ ೩೨: ಭೀಮನ ಎದೆಯನ್ನು ಯಾರು ಸುತ್ತಿದರು?

ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ (ಅರಣ್ಯ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೆಬ್ಬಾವು ತನ್ನ ಮೈಸಡಲಿಸಲು, ಸುತ್ತಲೂ ಇದ್ದ ತರಗೆಲೆಗಳು ಪಕ್ಕಕ್ಕೆ ಸರಿದವು. ಆ ಹಾವನ್ನು ನೋಡದೆ ಭೀಮನು ಅದರ ಮೇಲೆ ಕಾಲಿಟ್ಟನು. ಹಾವು ಅವನೆರಡು ತೋಳುಗಳನ್ನು ಸುತ್ತಿ ಬಿಗಿಯಲು, ಭೀಮನ ತಲೆ ತಿರುಗಿತು, ಆ ಹೆಬ್ಬಾವು ಭೀಮನ ಎದೆಯನ್ನು ಸುತ್ತಿತು.

ಅರ್ಥ:
ತೆಕ್ಕೆ:ಸುರುಳಿಯಾಗಿರುವಿಕೆ; ಸಡಲ:ಕಳಚು, ಬಿಚ್ಚು; ತರಗೆಲೆ: ಒಣಗಿದ ಎಲೆ; ಹೊದರು: ಪೊಟರೆ, ಪೊದೆ; ಮೈ: ತನು, ದೇಹ; ಮೈಮುರಿ: ಸಡಲಿಸು; ಅನಿಲಜ: ವಾಯು ಪುತ್ರ (ಭೀಮ); ಅತುಳ: ಹೋಲಿಕೆಯಿಲ್ಲದ; ಹಾಯು: ನೆಗೆ, ಹೊರಸೂಸು; ಕಾಣು: ತೋರು; ಅಹಿಪತಿ: ನಾಗರಾಜ; ಸಿಕ್ಕು: ಬಂಧಿಸು; ಹೆದ್ದೊಡೆ: ದೊಡ್ಡದಾದ ತೊಡೆ; ಉರಗ: ಹಾವು; ಡೆಂಢಣಿಸು: ಕಂಪಿಸು, ಕೊರಗು; ಫಣಿಪತಿ: ನಾಗರಾಜ; ಡೊಕ್ಕರ: ಗುದ್ದು; ಹಬ್ಬು: ಹರಡು; ಬಿಗಿ: ಬಂಧಿಸು; ಭಟ: ಶೂರ; ಹೇರುರ: ದೊಡ್ಡದಾದ ಎದೆ;

ಪದವಿಂಗಡಣೆ:
ತೆಕ್ಕೆ+ ಸಡಲಿತು +ತರಗೆಲೆಯ +ಹೊದ
ರಿಕ್ಕಲಿಸೆ +ಮೈಮುರಿಯಲ್+ಅನಿಲಜನ್
ಇಕ್ಕತುಳದಲಿ +ಮೇಲೆ +ಹಾಯ್ದನು +ಕಾಣದ್+ಅಹಿಪತಿಯ
ಸಿಕ್ಕಿದವು +ಹೆದ್ದೊಡೆಗಳ್+ಉರಗನ
ತೆಕ್ಕೆಯಲಿ +ಡೆಂಢಣಿಸಿ+ ಫಣಿಪತಿ
ಡೊಕ್ಕರಕೆ+ ಹಬ್ಬಿದನು +ಬಿಗಿದನು +ಭಟನ +ಹೇರುರವ

ಅಚ್ಚರಿ:
(೧) ಅಹಿಪತಿ, ಫಣಿಪತಿ, ಉರಗ – ಸಮಾನಾರ್ಥಕ ಪದ
(೨) ಹಾವು ಸುತ್ತಿದ ಪರಿ – ಸಿಕ್ಕಿದವು ಹೆದ್ದೊಡೆಗಳುರಗನ ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ
(೩) ಭೀಮನ ಅಂಗವನ್ನು ವಿವರಿಸುವ ಪರಿ – ಹೇರುರವ, ಹೆದ್ದೊಡೆ

ಪದ್ಯ ೧೧: ಶಿವನು ಯುದ್ಧಕ್ಕೆ ಹೇಗೆ ತಯಾರಾದನು?

ಕಳಚಿ ತಲೆಮಾಲೆಯನು ಕೊಟ್ಟನು
ಕೆಲದವರ ಕೈಯಲಿ ವಿಭೂತಿಯ
ಗುಳಿಗೆಯನು ನೆಗ್ಗೊತ್ತಿ ಸರ್ವಾಂಗದಲಿ ಧೂಳಿಸಿದ
ಹೊಳೆಹೊಳೆವ ಕೆಂಜೆಡೆಯನಹಿಪತಿ
ಯಳುಕೆ ಬಿಗಿದನು ದಂತಿಚರ್ಮವ
ನೆಲಕೆ ಮುಂಜೆರಗೆಳೆಯಲುಟ್ಟನು ದೇಸಿ ಪರಿ ಮೆರೆಯೆ (ಕರ್ಣ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಿವನು ತನ್ನ ರುಂಡಮಾಲೆಯನ್ನು ತೆಗೆದು ಪಕ್ಕದಲ್ಲಿದ್ದವರ ಕೈಗೆ ಕೊಟ್ಟನು, ವಿಭೂತಿಗಟ್ಟಿಯನ್ನು ಪುಡಿಮಾಡಿ ತನ್ನ ಮೈಯೆಲ್ಲಾ ಧರಿಸಿದನು, ಹೊಳೆಯುವ ಕೆಂಪಾದ ಜಟೆಯನ್ನು ತನ್ನನ್ನು ಅಲಂಕರಿಸಿದ ನಾಗರಾಜನು ಅಲುಗಾಡದಂತೆ ಕಟ್ಟಿದನು. ಆನೆಯ ಚರ್ಮವನ್ನು ಯುದ್ಧಕ್ಕೆ ಅನುಕೂಲವಾಗುವಂತೆ ಸೆರಗನ್ನೆಳೆದು ಉಟ್ಟನು.

ಅರ್ಥ:
ಕಳಚು: ಕೀಳು, ಬೇರೆಮಾಡು; ತಲೆ: ಶಿರ; ತಲೆಮಾಲೆ: ರುಂಡಮಾಲೆ; ಕೊಡು: ನೀಡು; ಕೆಲ:ಪಕ್ಕ, ಮಗ್ಗುಲು; ಕೈ: ಕರ; ವಿಭೂತಿ: ಬೂದಿ, ಭಸ್ಮ; ಗುಳಿಗೆ: ಮಾತ್ರೆ; ನೆಗ್ಗು: ಪುಡಿಗುಟ್ಟು, ಚೂರುಮಾಡು; ಸರ್ವಾಂಗ: ಮೈಯೆಲ್ಲಾ; ಧೂಳಿಸು: ಹಚ್ಚು; ಹೊಳೆ: ಪ್ರಕಾಶ, ಕಾಂತಿ; ಕೆಂಜೆಡೆ: ಕೆಂಪಾದ ಜಟೆ; ಅಹಿಪತಿ:ಸರ್ಪಾಧಿಪತಿ; ಅಳುಕು: ಅಲ್ಲಾಡು; ಬಿಗಿ: ಗಟ್ಟಿಯಾಗಿ ಕಟ್ಟು; ದಂತಿ: ಆನೆ; ಚರ್ಮ: ತೊಗಲು, ತ್ವಕ್ಕು; ನೆಲಕೆ: ಭೂಮಿಗೆ; ಮುಂಜೆರಗು: ಹೊದ್ದ ವಸ್ತ್ರದ ಅಂಚು, ಸೆರಗಿನ ತುದಿ; ಉಟ್ಟನು: ಧರಿಸು; ದೇಸಿ: ಅಲಂಕಾರ, ಶೃಂಗಾರ; ಪರಿ: ರೀತಿ; ಮೆರೆ: ವಿಜೃಂಭಿಸು;

ಪದವಿಂಗಡಣೆ:
ಕಳಚಿ+ ತಲೆಮಾಲೆಯನು +ಕೊಟ್ಟನು
ಕೆಲದವರ +ಕೈಯಲಿ +ವಿಭೂತಿಯ
ಗುಳಿಗೆಯನು +ನೆಗ್ಗೊತ್ತಿ+ ಸರ್ವಾಂಗದಲಿ +ಧೂಳಿಸಿದ
ಹೊಳೆಹೊಳೆವ +ಕೆಂಜೆಡೆಯನ್+ಅಹಿಪತಿ
ಯಳುಕೆ+ ಬಿಗಿದನು +ದಂತಿ+ಚರ್ಮವ
ನೆಲಕೆ +ಮುಂಜೆರಗೆಳೆಯಲ್+ಉಟ್ಟನು +ದೇಸಿ+ ಪರಿ +ಮೆರೆಯೆ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೊಟ್ಟನು ಕೆಲದವರ ಕೈಯಲಿ
(೨) ನಾಗರಾಜನನ್ನು ಅಹಿಪತಿ ಎಂದು ಕರೆದಿರುವುದು