ಪದ್ಯ ೨೭: ಕೃಷ್ಣನು ಮನಸ್ಸಿನಲ್ಲಿ ಏನೆಂದು ಯೋಚಿಸಿದನು?

ಅಳಿಯನೀ ಮೋಹರದೊಳಲ್ಲದೆ
ಫಲುಗುಣನ ಮಗನಿವನು ಬಲುಗೈ
ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
ಫಲುಗುಣನ ನಾವಿತ್ತಲೊಯ್ದರೆ
ಬಳಿಕ ನಿರ್ನಯವೆಂದು ಮನದಲಿ
ತಿಳಿದು ಪಾರ್ಥಂಗೆಂದನಸುರಾರಾತಿ ನಸುನಗುತ (ದ್ರೋಣ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಪದ್ಮವ್ಯೂಹದಲ್ಲಲ್ಲದೇ ಪರಾಕ್ರಮಿಯಾದ ಅಭಿಮನ್ಯುವು ಮಡಿಯುವುದಿಲ್ಲ, ಇವನನ್ನು ಉಳಿಸಬಾರದು, ಇವನುಳಿದರೆ ಕಲಿಯುಗವೇ ಬರುವುದಿಲ್ಲ. ನಾನು ಅರ್ಜುನನನ್ನು ಸಂಶಪ್ತಕರ ಕದನಕ್ಕೆ ಕರೆದೊಯ್ದರೆ ಅಭಿಮನ್ಯುವಿನ ಹಣೆಬರಹದ ನಿರ್ಣಯವಾಗುತ್ತದೆ ಎಂದು ಶ್ರೀಕೃಷ್ಣನು ಮನಸ್ಸಿನಲ್ಲೇ ತಿಳಿದು ಅರ್ಜುನನಿಗೆ ಹೀಗೆ ಹೇಳಿದನು.

ಅರ್ಥ:
ಅಳಿ: ನಾಶ; ಮೋಹರ: ಯುದ್ಧ; ಮಗ: ಪುತ್ರ; ಬಲುಗೈ: ಪರಾಕ್ರಮ; ಉಳುಹು: ಜೀವಿಸು; ಕಾಯು: ರಕ್ಷಿಸು; ಗತಿ: ಸ್ಥಿತಿ, ವೇಗ; ಒಯ್ಯು: ತೆರಳು; ಬಳಿಕ: ನಂತರ; ನಿರ್ಣಯ: ನಿರ್ಧಾರ; ಮನ: ಮನಸ್ಸು; ತಿಳಿ: ಯೋಚಿಸು; ಅಸುರಾರಾತಿ: ಅಸುರರಿಗೆ ಶತ್ರುವಾಗಿರುವ (ಕೃಷ್ಣ); ಅರಾತಿ: ಶತ್ರು; ನಸುನಗು: ಹಸನ್ಮುಖಿ; ಉಳುಹು: ಕಾಪಾಡು, ಸಂರಕ್ಷಿಸು;

ಪದವಿಂಗಡಣೆ:
ಅಳಿಯನ್+ಈ+ ಮೋಹರದೊಳ್+ಅಲ್ಲದೆ
ಫಲುಗುಣನ +ಮಗನಿವನು+ ಬಲುಗೈ
ಉಳುಹ ಬಾರದು +ಕಾಯಿದರೆ +ಕಲಿಯುಗಕೆ +ಗತಿಯಿಲ್ಲ
ಫಲುಗುಣನ +ನಾವಿತ್ತಲ್+ಒಯ್ದರೆ
ಬಳಿಕ +ನಿರ್ಣಯವೆಂದು +ಮನದಲಿ
ತಿಳಿದು +ಪಾರ್ಥಂಗ್+ಎಂದನ್+ಅಸುರ+ಅರಾತಿ+ ನಸುನಗುತ

ಅಚ್ಚರಿ:
(೧) ಅಭಿಮನ್ಯುವೇಕೆ ಸಾಯಬೇಕು – ಫಲುಗುಣನ ಮಗನಿವನು ಬಲುಗೈಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
(೨) ಫಲುಗುಣ, ಪಾರ್ಥ – ಅರ್ಜುನನನ್ನು ಕರೆದ ಪರಿ
(೩) ಕೃಷ್ಣನಿಗೆ ಅಸುರಾರಾತಿ ಎಂಬ ಪದ ಪ್ರಯೋಗ

ಪದ್ಯ ೬೦: ಮಹಾಂಕುಶಕ್ಕೆ ಯಾರು ಅಡ್ಡ ಬಂದರು?

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು (ದ್ರೋಣ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರಾ, ಈ ಮಹ ಅಂಕುಶವು ಎಷ್ಟರದು! ಕೃಷ್ಣಭಕ್ತರು ಎಷ್ಟು ಅಪಾಯಗಳನ್ನು ತಪ್ಪಿಸಿಕೊಂಡು ಬದುಕುವುದಿಲ್ಲ ಉರಿಕೆಂಡವು ಒರಲೆಯ ಬಾಯಿಗೆ ದಕ್ಕೀತೇ? ಕಿಡಿಯ ತೆಕ್ಕೆಗಳು, ಹೊಗೆಯ ಹೊರಳಿಗಳಿಂದ ಸುತ್ತುವರಿದು ಬರುತ್ತಿದ್ದ ಆ ಮಹಾಂಕುಶಕ್ಕೆ ಅಡ್ಡಬಂದು ಶ್ರೀಕೃಷ್ಣನು ತನ್ನ ಎದೆಯನ್ನು ಚಾಚಿದನು.

ಅರ್ಥ:
ಪಾಡು: ಸ್ಥಿತಿ; ಏಸು: ಎಷ್ಟು; ಅಪಾಯ: ತೊಂದರೆ; ಒದೆ: ತುಳಿ, ಮೆಟ್ಟು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಸದರ: ಸಲಿಗೆ, ಸಸಾರ; ಉರಿ: ಬೆಂಕಿ; ಕೆಂಡ: ಇಂಗಳ; ಒರಲು: ಅರಚು, ಕೂಗಿಕೊಳ್ಳು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಹೊಗೆ: ಧೂಮ; ಹೇರಾಳ: ದೊಡ್ಡ, ವಿಶೇಷ; ಬಹ: ಬಹಳ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ಚಾಚು: ಹರಡು; ವಕ್ಷ: ಹೃದಯ; ಸ್ಥಳ: ಜಾಗ; ಅಸುರಾರಾತಿ: ಕೃಷ್ಣ; ಅಡಹಾಯ್ದು: ಅಡ್ಡಬಂದು; ಹಾಯ್ದು: ಹೋರಾಡು; ಹಾಯ್ದ: ಮೇಲೆಬಿದ್ದು;

ಪದವಿಂಗಡಣೆ:
ಇದರ+ ಪಾಡೇನ್+ಏ‍ಸ್+ಅಪಾಯವನ್
ಒದೆದು +ಕಳೆಯರು +ಕೃಷ್ಣ+ಭಕ್ತರು
ಸದರವೇ+ ಉರಿ+ಕೆಂಡವ್+ಒರಲೆಯ +ಬಾಯ್ಗೆ +ಭಾವಿಸಲು
ಹೊದರು+ಕಿಡಿಗಳ+ ಹೊಗೆಯ+ ಹೇರಾ
ಳದಲಿ+ ಬಹ+ ದಿವ್ಯಾಯುಧಕೆ+ ಚಾ
ಚಿದನು+ ವಕ್ಷಸ್ಥಳವನ್+ಅಸುರ+ಅರಾತಿ+ಅಡಹಾಯ್ದು

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು
(೨) ಕೃಷ್ಣನು ರಕ್ಷಿಸುವ ಪರಿ – ಹೇರಾಳದಲಿ ಬಹ ದಿವ್ಯಾಯುಧಕೆ ಚಾಚಿದನು ವಕ್ಷಸ್ಥಳವನಸುರಾರಾತಿ

ಪದ್ಯ ೭೨: ಶ್ರೀಕೃಷ್ಣನು ಪಾಂಡವರಲ್ಲಿ ಏನು ಮಾತಾಡಿದನು?

ಬೀಳುಕೊಟ್ಟನು ಸಕಲ ಭೂಮೀ
ಪಾಲರನು ಕುಂತಿಯ ಕುಮಾರರ
ಮೇಳದಲಿ ಪರಿಮಿತದಲಸುರಾರಾತಿ ನಸುನಗುತ
ಸೋಲದಲಿ ಮೈದಣಿದು ಕುರುಭೂ
ಪಾಲನುಚಿತವ ಮಾಡಿ ರಾಜ್ಯವ
ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ (ವಿರಾಟ ಪರ್ವ, ೧೧ ಸಂಧಿ, ೭೨ ಪದ್ಯ)

ತಾತ್ಪರ್ಯ:
ಉಳಿದ ರಾಜರುಗಳನ್ನೆಲ್ಲಾ ಬೀಳ್ಕೊಟ್ಟು, ಶ್ರೀಕೃಷ್ಣನು ಪಾಂಡವರೊಡನೆ ಪರಿಮಿತವಾದ ಮೇಳದಲ್ಲಿ ಹೀಗೆಂದು ಕೇಳಿದನು. ನಿಮಗೆ ಕೌರವನು ಸೋತು ಹಿಂದಿರುಗಿದ, ಈಗ ಅವನು ನಿಮ್ಮ ರಾಜ್ಯವನ್ನು ನಿಮಗೆ ಕೊಟ್ಟಾನೆಯೇ? ನಿಮಗೆ ಸೋತವನು ನಿಮ್ಮನ್ನು ಉಚಿತವಾಗಿ ಸನ್ಮಾನಿಸುವುದು ಸಾಧ್ಯವೇ, ನಿಮ್ಮ ವಿಚಾರವೇನು ಎಂದು ಪಾಂಡವರನ್ನು ಕೇಳಿದ.

ಅರ್ಥ:
ಬೀಳುಕೊಡು: ತೆರಳು; ಸಕಲ: ಎಲ್ಲಾ; ಭೂಮೀಪಾಲ: ರಾಜ; ಕುಮಾರ: ಪುತ್ರ; ಮೇಳ: ಗುಂಪು; ಪರಿಮಿತ: ಸ್ವಲ್ಪ; ಅಸುರಾರಾತಿ: ಅಸುರರ ವೈರಿ; ನಸುನಗು: ಹಸನ್ಮುಖಿ; ಸೋಲು: ಪರಾಭವ; ಮೈದಣಿ: ಆಯಾಸಗೊಳ್ಳು; ಭೂಪಾಲ: ರಾಜ; ಉಚಿತ: ಸರಿಯಾದ; ಆಳು: ರಾಜ್ಯಭಾರ ಮಾಡು; ಹದ: ಸ್ಥಿತಿ; ಆಲಾಪ: ಮಾತು;

ಪದವಿಂಗಡಣೆ:
ಬೀಳುಕೊಟ್ಟನು+ ಸಕಲ+ ಭೂಮೀ
ಪಾಲರನು +ಕುಂತಿಯ +ಕುಮಾರರ
ಮೇಳದಲಿ +ಪರಿಮಿತದಲ್+ಅಸುರಾರಾತಿ +ನಸುನಗುತ
ಸೋಲದಲಿ+ ಮೈದಣಿದು+ ಕುರುಭೂ
ಪಾಲನ್+ಉಚಿತವ +ಮಾಡಿ +ರಾಜ್ಯವನ್
ಆಳಿಸುವ+ ಹದನುಂಟೆ +ನಿಮ್ಮ್+ಆಳಾಪವೇನೆಂದ

ಅಚ್ಚರಿ:
(೧) ಭೂಮೀಪಾಲ, ಭೂಪಾಲ – ಸಮನಾರ್ಥಕ ಪದ
(೨) ಕೃಷ್ಣನ ಪ್ರಶ್ನೆ – ಸೋಲದಲಿ ಮೈದಣಿದು ಕುರುಭೂಪಾಲನುಚಿತವ ಮಾಡಿ ರಾಜ್ಯವನಾಳಿಸುವ ಹದನುಂಟೆ

ಪದ್ಯ ೬೯: ವಿದ್ವಾಂಸರು ಏನು ಹೇಳುತ್ತಿದ್ದರು?

ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಶೃತಿತತಿಯ ಕೈ
ಮಿಕ್ಕು ಕಳೆದನು ಪಾಂಡುಸುತರಿಗೆ
ಸಿಕ್ಕಿದನು ಹರಿಯೆನುತಮಿರ್ದುದು ಸೂರಿಸಂದೋಹ (ವಿರಾಟ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಪಾಂಡವರು ಎರಡು ಬದಿಯಲ್ಲಿ ನಡೆದು ಬರುತ್ತಿರಲು, ಶ್ರೀಕೃಷ್ಣನು ವಿರಾಟನಗರದಲ್ಲಿ ನಡೆದು ಬಂದನು. ಜನರೆಲ್ಲರೂ ನಮಸ್ಕರಿಸಲು, ಆ ಧೂಳು ಗಗನ ಚುಂಬಿಯಾಯಿತು. ಅಲ್ಲಿದ್ದ ತಿಳಿದವರು, ವೇದಗಳು ಹೊಗಳುತ್ತಿರಲು ಅವಕ್ಕೆ ಸಿಕ್ಕದೆ ತಪ್ಪಿಸಿಕೊಂಡು ಹೋದ ಶ್ರೀಕೃಷ್ಣನು ಪಾಂಡವರಿಗೆ ಸಿಕ್ಕಿಬಿದ್ದುದು ಹೇಗೆ ಎಂದು ಮಾತನಾಡಿಕೊಂಡರು.

ಅರ್ಥ:
ಹೊಕ್ಕು: ಸೇರು; ಅಸುರ: ರಾಕ್ಷಸ; ಅರಾತಿ: ಶತ್ರು; ಇಕ್ಕೆಲ: ಎರಡೂ ಕಡೆ; ಬರೆ: ಆಗಮನ; ನಗರ: ಊರು; ಜನ: ಮನುಷ್ಯ; ಮೈಯಿಕ್ಕು: ನಮಸ್ಕರಿಸು; ಬೀದಿ: ಮಾರ್ಗ; ಧೂಳು: ಮಣ್ಣಿನ ಕಣ; ಕವಿ: ಆವರಿಸು; ಮುಂದೆ: ಎದುರು; ಸಂದಣಿಸು: ಗುಂಪು; ಹೊಗಳು: ಪ್ರಶಂಶಿಸು; ಶೃತಿ: ವೇದ; ತತಿ: ಗುಂಪು; ಕೈಮಿಕ್ಕು: ಕೈಗೆ ಸಿಗದೆ; ಕಳೆ: ತಪ್ಪಿಸು; ಸುತ: ಮಕ್ಕಳು; ಸಿಕ್ಕು: ದೊರಕು; ಹರಿ: ವಿಷ್ಣು; ಸೂರಿ:ಪಂಡಿತ, ವಿದ್ವಾಂಸ; ಸಂದೋಹ: ಗುಂಪು;

ಪದವಿಂಗಡಣೆ:
ಹೊಕ್ಕನ್+ಅಸುರ+ಅರಾತಿ+ ಪಾಂಡವರ್
ಇಕ್ಕೆಲದಿ +ಬರೆ +ನಗರ+ಜನ +ಮೈ
ಯಿಕ್ಕಿ +ಬೀದಿಯ +ಧೂಳು +ಕವಿದುದು +ಮುಂದೆ+ ಸಂದಣಿಸಿ
ಹೊಕ್ಕು +ಹೊಗಳುವ+ ಶೃತಿ+ತತಿಯ +ಕೈ
ಮಿಕ್ಕು +ಕಳೆದನು +ಪಾಂಡು+ಸುತರಿಗೆ
ಸಿಕ್ಕಿದನು +ಹರಿ+ಎನುತಮಿರ್ದುದು +ಸೂರಿ+ಸಂದೋಹ

ಅಚ್ಚರಿ:
(೧) ಸಂದಣಿ, ಸಂದೋಹ – ಸಮನಾರ್ಥಕ ಪದ
(೨) ಉಪಮಾನದ ಪ್ರಯೋಗ – ನಗರಜನ ಮೈಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
(೩) ಕೃಷ್ಣನ ಹಿರಿಮೆ – ಹೊಕ್ಕು ಹೊಗಳುವ ಶೃತಿತತಿಯ ಕೈಮಿಕ್ಕು ಕಳೆದನು ಪಾಂಡುಸುತರಿಗೆ
ಸಿಕ್ಕಿದನು ಹರಿ

ಪದ್ಯ ೫೧: ಶ್ರೀಕೃಷ್ಣನನ್ನು ಹೇಗೆ ಬರೆಮಾಡಿಕೊಳ್ಳಲಾಯಿತು?

ಹೊಳಹು ಮಿಗೆ ದೂರದೊಳು ಗರುಡನ
ಹಳವಿಗೆಯ ಕಂಡಂದಣಂಗಳ
ನಿಳಿದು ಮೈಯಿಕ್ಕಿದರು ದ್ರುಪದ ಪಾಂಡವರು
ಬಳಿಕ ಭೂಪರು ಕಾಲುನಡೆಯಲಿ
ನಲಿದು ಬರುತಿರಲಾನೆಯಿಂದಿಳೆ
ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ (ವಿರಾಟ ಪರ್ವ, ೧೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ದೂರದಲ್ಲಿ ಶ್ರೀಕೃಷ್ಣನ ಗರುಡಧ್ವಜವನ್ನು ನೋಡಿದ ಪಾಂಡವರು ದ್ರುಪದ ವಿರಾಟರೊಡನೆ ಪಲ್ಲಕ್ಕಿಗಳಿಂದಿಳಿದು ದೀರ್ಘದಂಡ ನಮಸ್ಕಾರ ಮಾಡಿ ಕಾಲು ನಡೆಯಿಂದ ಹೊರಟರು. ಶ್ರೀಕೃಷ್ಣನು ಅವರನ್ನು ನೋಡಿ ಆನೆಯಿಂದ ಇಳಿದು ಪಾಂಡವರ ಬಳಿ ನಡೆದು ಬಂದನು.

ಅರ್ಥ:
ಹೊಳಹು: ಕಾಂತಿ, ಪ್ರಕಾಶ; ಮಿಗೆ: ಅಧಿಕ; ದೂರ: ಅಂತರ; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ಹಳವಿಗೆ: ಬಾವುಟ; ಕಂಡು: ನೋಡು; ಅಂದ: ಸೊಬಗು; ಇಳಿ: ಕೆಳಕ್ಕೆ ಬಂದು; ಮೈಯಿಕ್ಕು: ನಮಸ್ಕರಿಸು; ಬಳಿಕ: ನಂತರ; ಭೂಪ: ರಾಜ; ಕಾಲುನಡೆ: ಚಲಿಸು; ನಲಿ: ಸಂತಸ; ಬರುತಿರಲು: ಆಗಮಿಸಲು; ಆನೆ: ಗಜ; ಇಳೆ: ಭೂಮಿ; ಬಿಜಯಂಗೈ: ದಯಮಾಡು; ಅಸುರ: ರಾಕ್ಷಸ; ಅರಾತಿ: ಶತ್ರು; ಕರುಣ: ದಯೆ;

ಪದವಿಂಗಡಣೆ:
ಹೊಳಹು +ಮಿಗೆ +ದೂರದೊಳು +ಗರುಡನ
ಹಳವಿಗೆಯ +ಕಂಡ್+ಅಂದಣಂಗಳನ್
ಇಳಿದು+ ಮೈಯಿಕ್ಕಿದರು +ದ್ರುಪದ +ಪಾಂಡವರು
ಬಳಿಕ+ ಭೂಪರು +ಕಾಲು+ನಡೆಯಲಿ
ನಲಿದು +ಬರುತಿರಲ್+ಆನೆಯಿಂದ್+ಇಳೆ
ಗಿಳಿದು +ಬಿಜಯಂಗೈದನ್+ಅಸುರ+ಅರಾತಿ +ಕರುಣದಲಿ

ಅಚ್ಚರಿ:
(೧) ಕೃಷ್ಣನು ಭಕ್ತರ ಸ್ಥಾನಕ್ಕೆ ಬರುತ್ತಾನೆಂದು ತೋರಿಸಲು – ಆನೆಯಿಂದಿಳೆಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ

ಪದ್ಯ ೫: ಸಾತ್ಯಕಿ ಕೃಷ್ಣನಿಗೆ ಏನು ಹೇಳಿದ?

ಎಂದು ಸುಭಟರಿಗರುಹಿ ಸಾತ್ಯಕಿ
ಬಂದು ಕೃಷ್ಣನ ಕಿವಿಯ ಹತ್ತಿರೆ
ನಿಂದು ವದನವ ಚಾಚಿ ಬಿನ್ನಹ ಮಾಡಿದನು ಹದನ
ಮಂದಮತಿಗಳು ತಪ್ಪಿದೊಡೆ ಮನ
ಗುಂದಲಾಗದು ದೇವ ಚಿತ್ತೈ
ಸೆಂದೊಡಸುರಾರಾತಿ ನಗುತಾ ಭೀಷ್ಮಗಿಂತೆಂದ (ಉದ್ಯೋಗ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕೃಷ್ಣನ ಬಳಿ ಬಂದು ಮುಖವನ್ನು ಕೃಷ್ಣನ ಕಿವಿಯ ಬಳಿ ತಂದು ಹೀಗೆ ಹೇಳಿದನು, “ಮಂದಮತಿಗಳಾದ ಕೌರವರು ಏನಾದರೂ ತಪ್ಪಿ ನಿಮ್ಮನ್ನು ಬಂಧಿಸಲು ಪ್ರಯತ್ನಿಸಿದರೆ ನೀವು ಹಿಂಜರಿಯಬೇಡಿ, ನಾವು ಅವರಿಕೆ ತಕ್ಕ ಪಾಠ ಕಲಿಸಲು ಏರ್ಪಾಟು ಮಾಡಿದ್ದೇವೆ” ಎನ್ನಲು ಶ್ರೀಕೃಷ್ಣನು ನಗುತ್ತಾ ಭೀಷ್ಮರಿಗೆ ಹೀಗೆ ಹೇಳಿದ.

ಅರ್ಥ:
ಸುಭಟ: ಒಳ್ಳೆಯ ಸೈನಿಕರು; ಅರುಹು:ತಿಳಿಸು; ಕಿವಿ: ಕರಣ; ಹತ್ತಿರ: ಸಮೀಪ; ನಿಂದು: ನಿಲ್ಲು; ವದನ: ಮುಖ; ಚಾಚಿ: ಮುಂದೆಬಂದು; ಬಿನ್ನಹ: ಕೋರಿಕೆ; ಹದನ:ಔಚಿತ್ಯ, ರೀತಿ; ಮಂದಮತಿ: ದಡ್ಡ; ತಪ್ಪು: ಸರಿಯಿಲ್ಲದ; ಮನ: ಮನಸ್ಸು; ಕುಂದ:ಕೊರತೆ; ದೇವ: ಭಗವಂತ; ಚಿತ್ತೈಸು: ಗಮನವಿಡು; ಅಸುರಾರಾತಿ: ಅಸುರ ಶತ್ರು (ಕೃಷ್ಣ); ಅರಾತಿ: ಶತ್ರು

ಪದವಿಂಗಡಣೆ:
ಎಂದು +ಸುಭಟರಿಗ್+ಅರುಹಿ +ಸಾತ್ಯಕಿ
ಬಂದು +ಕೃಷ್ಣನ +ಕಿವಿಯ +ಹತ್ತಿರೆ
ನಿಂದು +ವದನವ +ಚಾಚಿ +ಬಿನ್ನಹ +ಮಾಡಿದನು +ಹದನ
ಮಂದಮತಿಗಳು +ತಪ್ಪಿದೊಡೆ +ಮನ
ಗುಂದಲಾಗದು +ದೇವ +ಚಿತ್ತೈ
ಸೆಂದೊಡ್+ಅಸುರಾರಾತಿ +ನಗುತಾ+ ಭೀಷ್ಮಗ್+ಇಂತೆಂದ

ಅಚ್ಚರಿ:
(೧) ಗುಟ್ಟನ್ನು ಹೇಳುವ ಬಗೆಯ ಚಿತ್ರಣ – ಕೃಷ್ಣನ ಕಿವಿಯ ಹತ್ತಿರೆ ನಿಂದು ವದನವ ಚಾಚಿ ಬಿನ್ನಹ ಮಾಡಿದನು
(೨) ಬಂದು, ನಿಂದು, ಎಂದು – ಪ್ರಾಸ ಪದಗಳು

ಪದ್ಯ ೧: ಧರ್ಮಜನು ಕೃಷ್ಣನಿಗೆ ಏನು ಕೇಳಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನಹಿತ ಮಂತ್ರಿಯ
ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ
ಮೇಲಣನುವಿನ್ನೇನು ಲಕ್ಷ್ಮೀ
ಲೋಲ ಕರುಣಿಸು ಕೌರವ ಕ್ಷಿತಿ
ಪಾಲಕರಲೆನಗೇನು ಘಟಿಸುವುದೆಂದ ಯಮಸೂನು (ಉದ್ಯೋಗ ಪರ್ವ, ೬ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ತಮ್ಮ ಭಾರತದ ಕಥೆಯನ್ನು ಜನಮೇಜಯನಿಗೆ ಹೇಳುತ್ತಾ, “ಕೇಳು ರಾಜ ಕೌರವನ ಮಂತ್ರಿ ಸಂಜಯನನ್ನು ಬೀಳ್ಕೊಟ್ಟು ಯುಧಿಷ್ಠಿರನು ಶ್ರೀಕೃಷ್ಣನಲ್ಲಿಗೆ ಬಂದು ಮುಂದೇನು ಎನ್ನುವುದನ್ನು ಕರುಣೆಯಿಂದ ತಿಳಿಸು, ಕೌರವರಿಗೂ ನಮಗೂ ಏನು ಘಟಿಸುತ್ತದೆ ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ದರಿತ್ರಿ: ಭೂಮಿ; ಪಾಲ: ಪೋಷಿಸುವ; ಹಿತ: ಒಳ್ಳೆಯ; ಮಂತ್ರಿ: ಸಚಿವ; ಬೀಳುಕೊಟ್ಟು: ಕಳುಹಿಸಿ; ಬಂದನು: ಆಗಮಿಸು; ಅಸುರ: ರಾಕ್ಷಸ; ಅರಾತಿ: ವೈರಿ; ಮೇಲಣ: ಮುಂದಕ್ಕೆ; ಲೋಲ: ಪ್ರೀತಿ; ಕರುಣಿಸು: ದಯೆತೋರು; ಕ್ಷಿತಿ: ಭೂಮಿ; ಪಾಲಕ: ನೋಡಿಕೊಳ್ಳುವ, ಪೋಷಿಸುವ; ಘಟಿಸು: ಉಂಟುಮಾಡು; ಸೂನು: ಪುತ್ರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಧರ್ಮಜನ್+ಅಹಿತ+ ಮಂತ್ರಿಯ
ಬೀಳುಕೊಟ್ಟನು +ಬಂದನ್+ಅಸುರಾರಾತಿ+ಯಿದ್ದೆಡೆಗೆ
ಮೇಲಣನುವಿನ್ನೇನು +ಲಕ್ಷ್ಮೀ
ಲೋಲ +ಕರುಣಿಸು +ಕೌರವ+ ಕ್ಷಿತಿ
ಪಾಲಕರಲ್+ಎನಗೇನು +ಘಟಿಸುವುದೆಂದ +ಯಮಸೂನು

ಅಚ್ಚರಿ:
(೧) ಕೌರವ ಎಂದು ಹೇಳಲು ಧರ್ಮಜನಹಿತ ಎಂಬ ಪದದ ಬಳಕೆ
(೨) ಸಂಜಯ ಎಂದು ಹೇಳಲು ಧರ್ಮಜನಹಿತ ಮಂತ್ರಿ ಪದದ ಬಳಕೆ
(೩) ಕೃಷ್ಣನನ್ನು ಅಸುರಾರಾತಿ, ಲಕ್ಷ್ಮೀಲೋಲ ಎಂದು ಕರೆದಿರುವುದು
(೪) ಧರಿತ್ರೀಪಾಲ, ಕ್ಷಿತಿಪಾಲ – ಸಮನಾರ್ಥಕ ಪದ

ಪದ್ಯ ೧೨೦: ಸನತ್ಸುಜಾತರು ಕೌರವರಿಗೆ ಯಾವ ಸಲಹೆಯನ್ನು ನೀಡಿದರು?

ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿನಗೆ ಜಯವೆಲ್ಲಿಯದು ಭೂಪತಿಯೆ
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ (ಉದ್ಯೋಗ ಪರ್ವ, ೪ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಅವನೇ ಪಾಂಡವರ ಕೆಲಸವನ್ನು ತನ್ನದೆಂದು ಒಪ್ಪಿಕೊಂದು ಮಾಡುತ್ತಿದ್ದಾನೆ, ಅರ್ಜುನನ ಸಾರಥಿಯಾಗಿದ್ದಾನೆ, ಹೀಗಿರುವಾಗ ನಿನಗೆ ಯುದ್ಧದಲ್ಲಿ ಜಯವೆಲ್ಲಿಯದು? ಭೂಮಿಯನ್ನು ಪಾಂಡವರಿಗೊಪ್ಪಿಸಿ ಶ್ರೀಕೃಷ್ಣನನ್ನು ಈ ಕ್ಷಣ ಮೊರೆಹೊಕ್ಕು ಬದುಕಿರಿ. ಇಲ್ಲದಿದ್ದರೆ ನೀವೆಲ್ಲರು ಕೆಡುವಿರಿ ಎಂದು ಎಚ್ಚರದ ನುಡಿಗಳನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಆತನು: ಅವನು; ಹರಿಬ: ಕೆಲಸ, ಕಾರ್ಯ; ರಥ: ಬಂಡಿ; ಸೂತ: ಸಾರಥಿ, ಸೇವಕ; ಜಯ: ಗೆಲುವು; ಭೂಪತಿ: ರಾಜ; ಭೂತಳ: ಭೂಮಿ; ಒಪ್ಪಿಸು: ಕೊಡು; ಅಸುರ: ರಾಕ್ಷಸ; ಅರಾತಿ: ಶತ್ರು; ಮರೆಹೊಕ್ಕು: ಆಶ್ರಯಿಸು; ಬದುಕು: ಜೀವಿಸು; ಕೆಡುವಿರಿ: ಹಾಳಾಗುವಿರಿ; ಕ್ಷಣ: ಸಮಯ;
ಅಕಟ: ಅಯ್ಯೋ, ಆಶ್ಚರ್ಯ;

ಪದವಿಂಗಡಣೆ:
ಆತನ್+ಆ+ ಪಾಂಡವರ+ ಹರಿಬವನ್
ಆತು +ಪಾರ್ಥನ +ರಥಕೆ +ತಾನೇ
ಸೂತನಾದನು +ನಿನಗೆ +ಜಯವೆಲ್ಲಿಯದು +ಭೂಪತಿಯೆ
ಭೂತಳವನ್+ಒಪ್ಪಿಸುವುದ್+ಅಸುರ್
ಆರಾತಿಯನು +ಮರೆಹೊಕ್ಕು +ಬದುಕುವುದ್
ಈತತುಕ್ಷಣವಲ್ಲದಿರ್ದೊಡೆ +ಕೆಡುವಿರ್+ಅಕಟ+ಎಂದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು

ಪದ್ಯ ೨೭: ಪುರುಷಾಮೃಗನನ್ನು ಕೃಷ್ಣನು ಎಲ್ಲಿಗೆ ಕಟ್ಟಿದನು?

ವಂದಿಸಿದ ಪುರುಷಾಮೃಗಕೆ ಬಳಿ
ಕೆಂದನೆನ್ನಯ ಭಾಷೆ ಸಂದುದೆ
ತಂದೆಯೆನೆ ತಲೆದೂಗಲಸುರಾರಾತಿ ಬಳಿಕದನು
ತಂದು ಭೋಜನ ಶಾಲೆಯಲಿ ಬಳಿ
ಕೊಂದು ಸ್ತಂಭಕ್ಕದನು ಬಂಧಿಸಿ
ಸಂದುದೇ ನಿಮ್ಮಿಷ್ಟವೆಂದನು ಶೌರಿ ನಸುನಗುತ (ಸಭಾ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಮನು ಎಲ್ಲರಿಗೂ ವಂದಿಸಿದ ಮೇಲೆ ಪುರುಷಾಮೃಗಕ್ಕೆ ವಂದಿಸಿ, ‘ನನ್ನ ಭಾಷೆಯನ್ನು ನಡೆಸಿದೆನಲ್ಲವೇ’, ಎಂದು ಕೇಳಲು ಅದು ತಲೆದೂಗಿತು. ಶ್ರೀಕೃಷಣನು ಅದನ್ನು ಒಂದು ಕಂಬಕ್ಕೆ ಕಟ್ಟಿ ನಿಮ್ಮ ಇಷ್ಟಫಲಿಸಿತೇ? ಎಂದು ಪಾಂಡವರನ್ನು ಕೇಳಿದನು.

ಅರ್ಥ:
ವಂದಿಸು: ನಮಸ್ಕರಿಸು; ಬಳಿಕ: ನಂತರ; ಭಾಷೆ: ಮಾತು, ಆಣೆ; ಸಂದುದೆ: ಅವಕಾಶ, ಸಂದರ್ಭ; ತಲೆ: ಶಿರ; ದೂಗು: ಅಲ್ಲಾಡಿಸು; ಅರಾತ: ಶತ್ರು; ಅಸುರ: ರಾಕ್ಷಸ; ಬಳಿಕ: ನಂತರ; ಭೋಜನ: ಊಟ; ಶಾಲೆ: ಮನೆ; ಸ್ತಂಭ: ಕಂಬ; ಬಂಧಿಸು: ಕಟ್ಟು; ಇಷ್ಟ: ಆಸೆ; ಶೌರಿ: ಕೃಷ್ಣ; ನಸುನಗು: ಮುಗುಳ್ನಗೆ;

ಪದವಿಂಗಡಣೆ:
ವಂದಿಸಿದ +ಪುರುಷಾಮೃಗಕೆ+ ಬಳಿಕ್
ಎಂದನ್+ಎನ್ನಯ +ಭಾಷೆ +ಸಂದುದೆ
ತಂದೆ+ ಯೆನೆ+ ತಲೆದೂಗಲ್+ಅಸುರ +ಅರಾತಿ+ ಬಳಿಕದನು
ತಂದು+ ಭೋಜನ +ಶಾಲೆಯಲಿ +ಬಳಿಕ್
ಒಂದು +ಸ್ತಂಭಕ್ಕದನು+ ಬಂಧಿಸಿ
ಸಂದುದೇ+ ನಿಮ್ಮಿಷ್ಟವೆಂದನು+ ಶೌರಿ+ ನಸುನಗುತ

ಅಚ್ಚರಿ:
(೧) ಸಂದುದೆ – ೨, ೬ ಸಾಲಿನ ಕೊನೆ ಮತ್ತು ಮೊದಲ ಪದ
(೨) ತಂದು, ಒಂದು, ಸಂದು – ಪ್ರಾಸ ಪದಗಳು
(೩) ಕೃಷ್ಣನನ್ನು ಅಸುರಾರಾತಿ, ಶೌರಿ ಎಂದು ಕರೆದಿರುವುದು