ಪದ್ಯ ೪೭: ಕೌರವ ಸೈನ್ಯವು ಅಭಿಮನ್ಯುವನ್ನು ಹೇಗೆ ಹೊಗಳಿತು?

ಹಸುಳೆಯೆನಬಹುದೇ ಮಹಾದೇ
ವಸಮಬಲ ಬಾಲಕನೆನುತ ಚಾ
ಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು
ಮುಸುಡ ತಿರುಹುತ ಮಕುಟವರ್ಧನ
ರುಸುರಲಮ್ಮದೆ ಸಿಕ್ಕಿ ಭೂಪನ
ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ (ದ್ರೋಣ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇವನು ಬಾಲಕನೇ? ಶಿವ ಶಿವಾ ಇವನು ಅಸಮಾನ ಬಲಶಾಲಿ ಎಂದು ಕೌರವ ಪಡೆಯು ಅಭಿಮನ್ಯುವಿನ ಶೌರ್ಯವನ್ನು ಕಂಡು ಅಲ್ಲಲ್ಲೇ ನಡುಗಿ ತಲ್ಲಣಿಸಿತು. ನಾಯಕರು ಮುಖವನ್ನು ತಿರುವಿದರು. ರಾಜರು ಮಾತನಾಡಲಾಗದೆ ಕೌರವನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಹುಡುಕುತ್ತಿದ್ದರು.

ಅರ್ಥ:
ಹಸುಳೆ: ಚಿಕ್ಕವ; ಮಹಾದೇವ: ಶಂಕರ; ಅಸಮ: ಅಸದೃಶವಾದ; ಬಾಲಕ: ಹುಡುಗ; ಚಾಳಿಸು: ಹೀಯಾಳಿಸು; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ; ನಾಯಕ: ಒಡೆಯ; ಮುಸುಡ: ಮುಖ; ತಿರುಹು: ತಿರುಗಿಸು; ಮಕುಟ: ಕಿರೀಟ; ವರ್ಧನ: ಅಭಿವೃದ್ಧಿ; ಉಸುರು: ಹೇಳು; ಸಿಕ್ಕು: ಪಡೆದು; ಭೂಪ: ರಾಜ; ನುಸುಳು: ನುಣುಚಿಕೊಳ್ಳುವಿಕೆ; ನೋಡು: ವೀಕ್ಷಿಸು; ಕೂಡೆ: ಜೊತೆ;

ಪದವಿಂಗಡಣೆ:
ಹಸುಳೆ+ಎನಬಹುದೇ+ ಮಹಾದೇವ್
ಅಸಮಬಲ+ ಬಾಲಕನೆನುತ+ ಚಾ
ಳಿಸಿತು +ಪಡೆ+ಅಲ್ಲಲ್ಲಿ +ತಲ್ಲಣಿಸಿದರು +ನಾಯಕರು
ಮುಸುಡ +ತಿರುಹುತ +ಮಕುಟವರ್ಧನರ್
ಉಸುರಲ್+ಅಮ್ಮದೆ +ಸಿಕ್ಕಿ +ಭೂಪನ
ನುಸುಳುಗಂಡಿಯ +ನೋಡುತಿರ್ದರು +ಕೂಡೆ +ತಮತಮಗೆ

ಅಚ್ಚರಿ:
(೧) ಅಭಿಮನ್ಯುವನ್ನು ಹೊಗಳುವ ಪರಿ – ಹಸುಳೆಯೆನಬಹುದೇ ಮಹಾದೇವಸಮಬಲ ಬಾಲಕನೆನುತ ಚಾ
ಳಿಸಿತು ಪಡೆ

ಪದ್ಯ ೩೬: ಧರ್ಮಜನು ಅಭಿಮನ್ಯುವಿಗೆ ಏನು ಹೇಳಿದನು?

ಹಸುಳೆಯದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನ ಪೌ
ರುಷವು ನಿನಗುಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮಬಲರು ಕಣಾ ಮಹಾರಥ
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ (ದ್ರೋಣ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಮಗನ ಪೌರುಷದ ಮಾತುಗಳನ್ನು ಕೇಳಿ, ಧರ್ಮಜನು ಅವನನ್ನು ಬಿಗಿದಪ್ಪಿಕೊಂಡು ನಿನಗೆ ಮಹಾಪೌರುಷವಿದೆ, ಆದರೆ ನೀನಿನ್ನೂ ಬಾಲಕ. ನಿನ್ನೊಡನೆ ಯುದ್ಧಮಾಡುವವರು ಅಸಮಾನ ಮಹಾರಥರು. ಅವರ ಶಸ್ತ್ರಾಸ್ತ್ರ ಪ್ರಯೋಗಗಳನ್ನು ಎದುರಿಸಿ ನೀನು ಸಹಿಸುವುದಾದರೂ ಹೇಗೆ ಎಂದು ಕೇಳಿದನು.

ಅರ್ಥ:
ಹಸುಳೆ: ಚಿಕ್ಕಮಗು, ಶಿಶು; ಅದಟು: ಪರಾಕ್ರಮ, ಶೌರ್ಯ; ನುಡಿ: ಮಾತು; ಕೇಳು: ಆಲಿಸು; ನಸುನಗುತ: ಹರ್ಷ; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಕಂದ: ಮಗ; ತೆಗೆ: ಹೊರತರು; ಅಪ್ಪು: ಆಲಂಗಿಸು; ಶಿಶು: ಚಿಕ್ಕಮಗು; ಮಗ: ಪುತ್ರ, ಕುಮಾರ; ಕಾದು: ಹೋರಾಡು; ಅಸಮಬಲ: ಪರಾಕ್ರಮ; ಮಹಾರಥ: ಪರಾಕ್ರಮಿ; ಎಸುಗೆ: ಬಾಣದ ಹೊಡೆತ; ಸೈರಿಸು: ತಾಳು, ಸಹಿಸು; ಹೇಳು: ತಿಳಿಸು;

ಪದವಿಂಗಡಣೆ:
ಹಸುಳೆ+ಅದಟಿನ +ನುಡಿಯ +ಕೇಳಿದು
ನಸುನಗುತ +ಧರ್ಮಜನು +ಘನ +ಪೌ
ರುಷವು +ನಿನಗುಂಟೆಂದು +ಕಂದನ +ತೆಗೆದು +ಬಿಗಿಯಪ್ಪಿ
ಶಿಶುವು +ನೀನೆಲೆ +ಮಗನೆ +ಕಾದುವರ್
ಅಸಮಬಲರು +ಕಣಾ +ಮಹಾರಥರ್
ಎಸುಗೆಯನು +ನೀನೆಂತು +ಸೈರಿಸಲಾಪೆ +ಹೇಳೆಂದ

ಅಚ್ಚರಿ:
(೧) ಪೌರುಷ, ಮಹಾರಥ, ಅಸಮಬಲ – ಸಾಮ್ಯಾರ್ಥ ಪದಗಳು

ಪದ್ಯ ೭: ಉತ್ತರನು ಬೃಹನ್ನಳೆಗೆ ಏನು ಹೇಳಿದ?

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ (ವಿರಾಟ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಹಸಿದಿರುವ ಮಾರಿಗಳ ಗುಂಪಿನಲ್ಲಿ ಕುರಿಯು ಬಂದು ಹೊಕ್ಕಂತೆ ಆಗಿದೆ ನನ್ನ ಸ್ಥಿತಿ ಬೃಹನ್ನಳೆ, ಕುದುರೆಗಳ ಓಟವನ್ನು ನಿಲ್ಲಿಸು, ಬಾರುಕೋಲನ್ನು ಕೆಳಕ್ಕೆ ಬಿಸಾಡು, ಈ ಸೈನ್ಯದೆದುರಿಗೆ ಕದಲಲೂ ಬಾರದು, ಪ್ರಳಯಕಾಲದ ಯಮನು ಮುಖಕ್ಕೆ ಹಾಕಿಕೊಂಡಿರುವ ಮುಸುಕನ್ನು ಯಾರಾದರೂ ತೆಗೆಯುವರೇ? ಕೌರವನು ಮಹಾ ಬಲಶಾಲಿ, ರಥವನ್ನು ಹಿಮ್ದಕ್ಕೆ ತಿರುಗಿಸು, ಓಡಿ ಹೋಗೋಣವೆಂದು ಉತ್ತರನು ಬೃಹನ್ನಳೆಗೆ ಹೇಳಿದನು.

ಅರ್ಥ:
ಹಸಿ: ಆಹಾರವನ್ನು ಬಯಸು; ಮಾರಿ: ಕ್ಷುದ್ರದೇವತೆ; ಮಂದೆ: ಗುಂಪು, ಸಮೂಹ; ಕುರಿ: ಮೇಷ; ನುಸುಳು: ತೂರುವಿಕೆ, ನುಣುಚಿಕೊಳ್ಳುವಿಕೆ; ಎಸಗು: ಮಾಡು, ವ್ಯವಹರಿಸು; ತೇಜಿ: ಕುದುರೆ; ತಡೆ: ನಿಲ್ಲಿಸು; ಚಮ್ಮಟಗೆ: ಚಾವಟಿ; ಬಿಸುಡು: ತೊರೆ, ಹೊರಹಾಕು; ಮಿಸುಗು: ಕದಲು, ಅಲುಗು; ಪ್ರಳಯಕಾಲ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶದ ಸಮಯ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಅಸಮಬಲ: ಅಪ್ರತಿಮ ಬಲಶಾಲಿ; ರಥ: ಬಂಡಿ; ಮರಳು: ಹಿಂದಿರುಗಿಸು; ಜಾಳಿಸು: ಚಲಿಸು, ನಡೆ;

ಪದವಿಂಗಡಣೆ:
ಹಸಿದ +ಮಾರಿಯ +ಮಂದೆಯಲಿ +ಕುರಿ
ನುಸುಳಿದಂತಾದೆನು+ ಬೃಹನ್ನಳೆ
ಯೆಸಗದಿರು +ತೇಜಿಗಳ+ ತಡೆ+ ಚಮ್ಮಟಿಗೆಯನು +ಬಿಸುಡು
ಮಿಸುಗಬಾರದು+ ಪ್ರಳಯಕಾಲನ
ಮುಸುಕನ್+ಉಗಿವವರಾರು+ ಕೌರವನ್
ಅಸಮಬಲನೈ+ ರಥವ+ ಮರಳಿಸು+ ಜಾಳಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತಾದೆನು

ಪದ್ಯ ೨೩: ಭೀಮನು ತನ್ನ ಸಾರಥಿಗೆ ಏನು ಹೇಳಿದ?

ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ಇಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ (ಕರ್ಣ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಭೀಮನು ತನ್ನ ಸಾರಥಿ ವಿಶೋಕನಿಗೆ ” ನೋಡು, ಭಲೇ ವಿಧಿಯೇ, ಈ ನೊರಜುಗಳು ನನ್ನನ್ನು ಹೊಡೆದು ಹಾಕಲು ಬಂದರು. ಇವರು ಧರ್ಮಜನನ್ನು ತಡೆಯಲು ಬಂದವರು ಎನ್ನುತ್ತಾ ಒಂದೇ ಕುಡಿಗೆ ಆ ಸೈನ್ಯವನ್ನು ಓಡಿಸಿ ಅವರು ನಿಂತ ನೆಲವನ್ನು ತನ್ನದಾಗಿ ಮಾಡಿಕೊಂಡನು

ಅರ್ಥ:
ನುಸಿ: ನೊರಜು; ಅಳವಿ: ಯುದ್ಧ; ಥಟ್ಟು: ಗುಂಪು, ಸಮೂಹ; ತೋರಿಸು: ಗೋಚರ, ಕಾಣು; ಬಲುಹು: ಬಲ, ಶಕ್ತಿ; ರಾಯ: ರಾಜ; ಘಸಣೆ: ತೊಂದರೆ; ಅಕಟ: ಅಯ್ಯೋ; ನೋಡು: ವೀಕ್ಷಿಸು; ಪೂತು: ಭಲೆ; ವಿಧಿ: ಆಜ್ಞೆ, ಆದೇಶ, ನಿಯಮ; ಮಸಗು: ಹರಡು; ಮೊಗೆ: ಮುಖ; ಹೊಗು: ಪ್ರವೇಶಿಸು; ಸೇನ: ಸೈನ್ಯ; ಪ್ರಸರ: ಹರಡುವುದು; ಕುಡಿತೆ: ಬೊಗಸೆ, ಸೇರೆ; ಚೆಲ್ಲು: ಹರಡು; ಅಸಮಬಲ: ಪರಾಕ್ರಮಿ; ಹಾಯ್ಸು: ಹೊಡೆ; ಕೊಂಡನು: ತೆಗೆದುಕೊ; ನೆಲ: ಭೂಮಿ; ಅಡಹಾಯ್: ಅಡ್ಡಬರು;

ಪದವಿಂಗಡಣೆ:
ನುಸಿಗಳ್+ಅಳವಿಯ +ಥಟ್ಟಣೆಯ +ತೋ
ರಿಸಿದರೋ +ಬಲುಹಾಯ್ತು +ರಾಯನ
ಘಸಣಿಗ್+ಅಕಟ +ವಿಶೋಕ +ನೋಡೈ +ಪೂತು +ವಿಧಿಯೆನುತ
ಮಸಗಿ+ ಮೊಗೆದನು+ ಹೊಗುವ +ಸೇನಾ
ಪ್ರಸರವನು +ಕುಡಿತೆಯಲಿ +ಚೆಲ್ಲಿದನ್
ಅಸಮಬಲನ್+ಅಡಹಾಯ್ಸಿ +ಕೊಂಡನು +ನೆಲನನ್+ಅಳವಿಯಲಿ

ಅಚ್ಚರಿ:
(೧) ಅಳವಿ – ಪದ್ಯದ ಮೊದಲ ಮತ್ತು ಕೊನೆಯ ಪದ