ಪದ್ಯ ೨೬: ಕರ್ಣನು ದುರ್ಯೋಧನನಿಗೆ ಏನು ಹೇಳಿದನು?

ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಡೆಯುತ್ತಾ ಎಡವಿದ ಪಟ್ಟದಾನೆಯನ್ನು ನಡುಗುವಂತೆ ಹೊಯ್ಯುವರೇ? ಜೀಯಾ ಈಗ ರಾತ್ರಿ, ನಮಗೆ ಈಗ ಯುದ್ಧವು ಕಷ್ಟಸಾಧ್ಯ, ರಾಕ್ಷಸರಿಗೆ ರಾತ್ರಿಯೇ ನಡುಹಗಲು, ಆದುದರಿಂದ ನಮಗೆ ಈ ದುರ್ಗತಿ ಬಂದಿದೆ. ಸಮಯಬಂದರೆ ಶಿವನನ್ನು ಲೆಕ್ಕಿಸದ ವೀರರಿವರು. ಇಂತಹವನರ್ನ್ನು ತಿರಸ್ಕಾರದ ಮಾತುಗಳಿಂದ ಏಕೆ ನೋಯಿಸಬೇಕು?

ಅರ್ಥ:
ನಡೆ: ಚಲಿಸು; ಎಡಹು: ಮುಗ್ಗುರಿಸು, ಬೀಳು; ಪಟ್ಟದಾನೆ: ಶ್ರೇಷ್ಠವಾದ, ಪರಾಕ್ರಮಿ; ಮಿಡಿ: ತವಕಿಸು, ಹಿಂಭಾಗ; ಹೊಯ್ವ: ಹೊಡೆಯುವ; ಜೀಯ: ಒಡೆಯ; ರಣ: ಯುದ್ಧರಂಗ; ಗಡ: ಅಲ್ಲವೆ; ತ್ವರಿತವಾಗಿ; ರಾತ್ರಿ: ಇರುಳು; ದೈತ್ಯ: ದಾನವ; ನಡು: ಮಧ್ಯ; ಹಗಲು: ದಿನ; ಮೃಡ: ಈಶ್ವರ; ಅವಸರ: ಬೇಗ, ಲಗುಬಗೆ; ಬಗೆ: ಯೋಚಿಸು, ಎಣಿಸು; ಕಡುಹು: ಸಾಹಸ, ಹುರುಪು; ಕೆಡೆ: ಬೀಳು; ನುಡಿ: ಮಾತು; ನೋವು: ಪೆಟ್ಟು; ಅರಸ: ರಾಜ;

ಪದವಿಂಗಡಣೆ:
ನಡೆವುತ್+ಎಡಹಿದ +ಪಟ್ಟದಾನೆಯ
ಮಿಡಿಯ +ಹೊಯ್ವರೆ +ಜೀಯ +ರಣವವ
ಗಡವು +ನಮಗಿದು +ರಾತ್ರಿ +ದೈತ್ಯರಿಗ್+ಇದುವೆ +ನಡುಹಗಲು
ಮೃಡನನೊಂದ್+ಅವಸರಕೆ +ಬಗೆಯದ
ಕಡುಹುಕಾರರು +ನಿನ್ನವರು +ಕೆಡೆ
ನುಡಿದು +ನೋಯಿಸಲ್+ಏತಕೆಂದನು+ ಕರ್ಣನ್+ಅರಸಂಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆವುತೆಡಹಿದ ಪಟ್ಟದಾನೆಯಮಿಡಿಯ ಹೊಯ್ವರೆ
(೨) ರಾಕ್ಷಸರ ಬಗ್ಗೆ ಕರ್ಣನ ನುಡಿ – ಮೃಡನನೊಂದವಸರಕೆ ಬಗೆಯದ ಕಡುಹುಕಾರರು

ಪದ್ಯ ೪೪: ಕೃಷ್ಣನು ಯಾವುದರ ಕಡೆಗೆ ರಥವನ್ನು ತಿರುಗಿಸಿದನು?

ಮರುಳು ಫಲುಗುಣ ಸುಪ್ರತೀಕದ
ಖುರಪುಟವ ನೋಡಿತ್ತಲಗ್ಗದ
ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ
ತೆರಳುತಿದೆ ನಮ್ಮವರು ದಿಕ್ಕರಿ
ಹರಹಿ ಕೊಲುತಿದೆ ಮಾತಿಗಿಲ್ಲವ
ಸರವೆನುತ ಕರಿಯತ್ತ ತಿರುಹಿದನಸುರರಿಪು ರಥವ (ದ್ರೋಣ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಅಯ್ಯೋ ಹುಚ್ಚ ಅರ್ಜುನ, ಸುಪ್ರತೀಕದ ಖುರಪುಟವನ್ನು ನೋಡು. ಪರಶುರಾಮನ ಕೋಪಕ್ಕೆ ಸಮುದ್ರವು ಹಿಂದಕ್ಕೆ ಸರಿದಂತೆ, ನಮ್ಮವರು ಓಡಿ ಹೋಗುತ್ತಿದ್ದಾರೆ. ಸುಪ್ರತೀಕವು ಸೈನ್ಯವನ್ನೆಲ್ಲಾ ಹರಡಿ ಕೊಲ್ಲುತ್ತಿದೆ. ಮಾತಿಗೆ ಸಮಯವಿಲ್ಲ ಎಂದು ಆನೆಯತ್ತ ರಥವನ್ನು ತಿರುಗಿಸಿದನು.

ಅರ್ಥ:
ಮರುಳು: ಬುದ್ಧಿಭ್ರಮೆ, ಹುಚ್ಚು; ಖುರಪುಟ: ಗೊರಸು; ನೋಡು: ವೀಕ್ಷಿಸು; ಅಗ್ಗ: ಶ್ರೇಷ್ಠ; ಖಾತಿ: ಕೋಪ; ಅಂಬುಧಿ: ಸಾಗರ; ನೆಲ: ಭೂಮಿ; ಬಿಡು: ತೊರೆ; ತೆರಳು: ಹೋಗು, ನಡೆ; ದಿಕ್ಕರಿ: ದಿಗ್ಗಜ; ಹರಹು: ವಿಸ್ತಾರ, ವೈಶಾಲ್ಯ; ಕೊಲು: ಸಾಯಿಸು; ಮಾತು: ವಾಣಿ; ಅವಸರ: ತ್ವರೆ; ಕರಿ: ಆನೆ; ತಿರುಹು: ತಿರುಗಿಸು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ರಥ: ಬಂಡಿ;

ಪದವಿಂಗಡಣೆ:
ಮರುಳು +ಫಲುಗುಣ +ಸುಪ್ರತೀಕದ
ಖುರಪುಟವ+ ನೋಡ್+ಇತ್ತಲ್+ ಅಗ್ಗದ
ಪರಶುರಾಮನ +ಖಾತಿಗ್+ಅಂಬುಧಿ +ನೆಲನ +ಬಿಡುವಂತೆ
ತೆರಳುತಿದೆ +ನಮ್ಮವರು +ದಿಕ್ಕರಿ
ಹರಹಿ+ ಕೊಲುತಿದೆ +ಮಾತಿಗಿಲ್ಲ್
ಅವಸರವೆನುತ +ಕರಿಯತ್ತ +ತಿರುಹಿದನ್+ಅಸುರರಿಪು +ರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಗ್ಗದ ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ

ಪದ್ಯ ೨೮: ಅರ್ಜುನನು ತ್ರಿಗರ್ತರೊಡನೆ ಹೇಗೆ ಯುದ್ಧವನ್ನು ಮಾಡಿದನು?

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬಿತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ (ದ್ರೋಣ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಇತ್ತ ಅರ್ಜುನನು ತ್ರಿಗರ್ತರೊಡನೆ ಯುದ್ಧವನ್ನಾರಂಭಿಸಿದನು. ಯಮನ ದೂತರನ್ನು ಔತಣಕ್ಕೆ ಕರೆಸಿದನು. ಅವನ ಬಾಣಗಳು ಸೈನ್ಯವನ್ನು ದೊರೆಗಳನ್ನು ಮುತ್ತಿದವು. ನಿಮಿಷ ಗಳಿಗೆಯಲ್ಲಿ ಶತ್ರುಸೈನ್ಯ ಜಲಧಿ ಬತ್ತಿತು.

ಅರ್ಥ:
ಅವಸರ: ಸನ್ನಿವೇಶ, ಸಂದರ್ಭ; ಕೃತಾಂತ: ಯಮ; ತೆತ್ತಿಗ: ನಂಟ, ಬಂಧು; ಔತಣ: ವಿಶೇಷ ಊಟ; ಹೇಳು: ತಿಳಿಸು; ಶರ: ಬಾಣ; ಔಘ: ಗುಂಪು; ಕುತ್ತು: ತೊಂದರೆ, ಆಪತ್ತು; ಕೂರಂಬು: ಹರಿತವಾದ ಬಾಣ; ದೊರೆ: ರಾಜ; ಮುತ್ತು: ಆವರಿಸು; ಕೆದರು: ಹರಡು; ನಿಮಿಷ: ಕ್ಷಣ; ಬತ್ತು: ಒಣಗು, ಆರು; ಅಹಿತ: ವೈರಿ, ಶತ್ರು; ಸುಭಟ: ಪರಾಕ್ರಮಿ; ವೀರ: ಶೂರ; ಶರನಿಧಿ: ಸಮುದ್ರ;

ಪದವಿಂಗಡಣೆ:
ಇತ್ತಲ್+ಅರ್ಜುನನಾ+ ತ್ರಿಗರ್ತರಿಗ್
ಇತ್ತನ್+ಅವಸರವನು +ಕೃತಾಂತನ
ತೆತ್ತಿಗರಿಗ್+ಔತಣವ +ಹೇಳಿಸಿದನು +ಶರೌಘದಲಿ
ಕುತ್ತಿದವು +ಕೂರಂಬು +ದೊರೆಗಳ
ಮುತ್ತಿದವು +ಕೆದರಿದವು +ನಿಮಿಷಕೆ
ಬಿತ್ತಿಸಿದನಂದ್+ಅಹಿತ +ಸುಭಟರ +ವೀರ +ಶರನಿಧಿಯ

ಅಚ್ಚರಿ:
(೧) ಶರೌಘ, ಶರನಿಧಿ – ಪದಗಳ ಬಳಕೆ
(೨) ಸೈನ್ಯದವರು ಸತ್ತರು ಎಂದು ಹೇಳಲು – ಕೃತಾಂತನ ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ

ಪದ್ಯ ೨೧: ಅರ್ಜುನನು ಉತ್ತರನನ್ನು ಯುದ್ಧಕ್ಕೆ ಹೇಗೆ ಪ್ರೇರೇಪಿಸಿದನು?

ಹರುಕನೇ ನೀನೆಲವೊ ರಾಯರೊ
ಳುರುವ ದೊರೆ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ದುರುಭರವ
ಸರಿಗಳೆಯದಪಕೀರ್ತಿ ರವಿಶಶಿ
ಮುರಿದು ಬೀಳ್ವನ್ನೆಬರವೆಲೆ ನರ
ಗುರಿಯೆ ನಡೆ ಕಾಳಗಕೆನುತೆ ಹಿಡಿದೆಳೆದನುತ್ತರನ (ವಿರಾಟ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನಿಗೆ ಹುಮ್ಮಸ್ಸು ತುಂಬಲು, ಎಲೈ ಉತ್ತರ ಕುಮಾರ ನೀನು ಕೆಲಸಕ್ಕೆ ಬಾರದ ಕ್ಷುಲ್ಲಕನೇ? ನಿಮ್ಮ ತಂದೆ ವಿರಾಟನು ಘನತೆವೆತ್ತ ದೊರೆ, ನಿಅನ್ಗೀಗ ಯೌವನ, ಕ್ಷತ್ರಿಯನು ಯುದ್ಧ ಮಾಡಿ ಗೆದ್ದುಮೆರೆಯುವ ಕಾಲ. ಇದನ್ನು ಸೈಯಾಗಿ ಉಪಯೋಗಿಸದೆ ಹೋದರೆ ಸೂರ್ಯ ಚಂದ್ರರಿರುವವರೆಗೂ ಅಪಕೀರ್ತಿ ತಪ್ಪದು. ಎಲವೋ ನರಕುರಿಯೇ ಯುದ್ಧಕ್ಕೆ ಬಾ ಎಂದು ಉತ್ತರನನ್ನು ಹಿಡಿದೆಳೆದನು.

ಅರ್ಥ:
ಹರುಕ: ಬಡವ, ಗತಿಗೆಟ್ಟು; ರಾಯ: ರಾಜ; ಉರು: ಶ್ರೇಷ್ಠ; ದೊರೆ: ರಾಜ; ಅಯ್ಯ: ತಂದೆ; ಜವ್ವನ: ಯೌವನ; ಮೆರೆ: ಹೊಳೆ, ಪ್ರಕಾಶಿಸು; ಅವಸರ: ಸನ್ನಿವೇಶ, ಅಗತ್ಯವಾದ ಕಾಲ; ಉರುಭರ: ಹುಮ್ಮಸ್ಸು, ಆವೇಶ; ಕಳೆ: ನಿವಾರಿಸು; ಅಪಕೀರ್ತಿ: ಅಪಯಶಸ್ಸು; ರವಿ: ಸೂರ್ಯ; ಶಶಿ: ಚಂದ್ರ; ಮುರಿ: ಸೀಳು; ನರ: ಮನುಷ್ಯ; ಕುರಿ: ಮೇಷ; ನಡೆ: ಚಲಿಸು; ಕಾಳಗ: ಯುದ್ಧ; ಹಿಡಿದೆಳೆ: ಬಂಧಿಸಿ ತನ್ನ ಕಡೆಗೆ ಸೆಳೆದುಕೊ;

ಪದವಿಂಗಡಣೆ:
ಹರುಕನೇ +ನೀನ್+ಎಲವೊ +ರಾಯರೊಳ್
ಉರುವ +ದೊರೆ +ನಿಮ್ಮಯ್ಯ +ನೀನಿಂದ್
ಇರಿದು +ಮೆರೆವ್+ಅವಸರವಲ್+ಆ+ ಜವ್ವನದದ್ +ಉರುಭರವ
ಸರಿಗಳೆಯದ್+ಅಪಕೀರ್ತಿ +ರವಿ+ಶಶಿ
ಮುರಿದು +ಬೀಳ್ವನ್ನೆಬರವ್+ಎಲೆ+ ನರ
ಕುರಿಯೆ +ನಡೆ+ ಕಾಳಗಕೆನುತೆ +ಹಿಡಿದೆಳೆದನ್+ಉತ್ತರನ

ಅಚ್ಚರಿ:
(೧) ಉತ್ತರನನ್ನು ಹಂಗಿಸುವ ಪರಿ – ಎಲೆ ನರಗುರಿಯೆ ನಡೆ ಕಾಳಗಕೆನುತೆ ಹಿಡಿದೆಳೆದನುತ್ತರನ

ಪದ್ಯ ೨: ಸಭೆಯಲ್ಲಿದ್ದ ರಾಜರ ಮುಖಭಾವ ಹೇಗಿತ್ತು?

ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ (ಸಭಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಕಿವಿಯಲ್ಲಿ ಮುಖವಿಟ್ಟು ಮೆತ್ತಿಗೆ ಮಾತನಾಡುವ, ಎರದು ಕೈಗಳನ್ನು ಜೋಡಿಸಿ (ಮುಷ್ಟಿ) ಯನ್ನು ತೋರಿಸುವ, ಕಡೆಗಣ್ಣಿನ ಸನ್ನೆಗಳ, ಜೋಡುಗೈಗಳನ್ನು ಹಿಡಿದು ನಂಬಿಸುವ, ಮನಸ್ಸುಗಳು ಕೂಡುವ, ಅವಸರದಿಂದ ಸ್ನೇಹ ಮಾದಿಕೊಳ್ಳುವ, ಮಂತ್ರಿಗಳ ಮಾತನ್ನು ಕಡೆಗಣಿಸುವ ರಾಜರು ಯುದ್ಧಮಾದುವ ತವಕದಿಂದ ಕುದಿಯುತ್ತಿದ್ದರು.

ಅರ್ಥ:
ಕಿವಿ: ಕರ್ಣ; ಮೋರೆ: ಮುಖ; ಮುಷ್ಟಿ: ಕೈ, ಕರ; ಬವರಿ: ಕೆನ್ನೆಯ ಮೇಲಿನ ಕೂದಲು, ತಿರುಗುವುದು; ಬವರ: ಜಗಳ, ಪೈಪೋಟಿ; ಕಡೆಗಣ್ಣ: ಕಣ್ಣಿನ ಕೊನೆ/ಅಂಚು; ಸನ್ನೆ: ಗುರುತು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ನಂಬು: ವಿಶ್ವಾಸವಿಡು, ಭರವಸೆಯನ್ನು ಹೊಂದು, ನೆಚ್ಚು; ಮನ: ಮನಸ್ಸು; ಬೆಸುಗೆ: ; ಅವಸರ: ಬೇಗ; ಮೈತ್ರಿ: ಸ್ನೇಹ; ಮಂತ್ರಿ: ಸಚಿವ; ಪ್ರವರ: ಪ್ರಧಾನ ವ್ಯಕ್ತಿ, ಶ್ರೇಷ್ಠ; ವಚನ: ಮಾತು; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ರಣ: ಯುದ್ಧ; ತವಕ: ಬಯಕೆ, ಆತುರ; ಕಳವಳ:ಗೊಂದಲ; ಕೂಡೆ: ಜೊತೆ; ನೃಪ: ರಾಜ; ಕಟಕ: ಗುಂಪು;

ಪದವಿಂಗಡಣೆ:
ಕಿವಿವಳೆಯ+ ಮೋರೆಗಳ+ ಮುಷ್ಟಿಯ
ಬವರಿಗಳ +ಕಡೆಗಣ್ಣ +ಸನ್ನೆಯ
ಸವಡಿ+ಕೈಗಳ +ನಂಬುಗೆಯ +ಮನಮನದ +ಬೆಸುಗೆಗಳ
ಅವಸರದ +ಮೈತ್ರಿಗಳ +ಮಂತ್ರಿ
ಪ್ರವರ +ವಚನ+ಉಪೇಕ್ಷೆಗಳ +ರಣ
ತವಕದಲಿ +ಕಳವಳಿಸುತ್+ಇರ್ದುದು +ಕೂಡೆ +ನೃಪ+ಕಟಕ

ಅಚ್ಚರಿ:
(೧) ರಾಜರ ಭಾವನೆಗಳನ್ನು ಚಿತ್ರಿಸುವ ಪದ್ಯ