ಪದ್ಯ ೨೬: ಯುದ್ಧರಂಗವು ಹೇಗೆ ಕಂಡಿತು?

ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳುಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ (ದ್ರೋಣ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಬೀಸಿದ ಕತ್ತಿಗಳ ಖಣಿಖಟಿಲು ಸದ್ದು ಹೆಚ್ಚಲು ಯುದ್ಧರಂಗೇರಿತು. ಕತ್ತರಿಸಿ ಉರುಳಿ ಬಿದ್ದ ತಲೆಗಳು, ದೊಪ್ಪನೆ ಬೀಳುವ ಹೆಣಗಳು, ಧಾರೆಯಾಗಿ ಸುರಿಯುವ ರಕ್ತ, ಮೇಲೆದ್ದ ಮಾಂಸಖಂಡಗಳು, ಹರಿದ ಕರುಳುಗಳು, ಕಿತ್ತು ಬಂದ ಎಲುಬುಗಳು, ಕುಣಿಯುವ ಮುಂಡಗಳು ರಣಭೂಮಿಯಲ್ಲಿ ಬೆಳೆದು, ಯಮಪುರದಲ್ಲಿ ವೀರರ ಸಂಖ್ಯೆ ಹೆಚ್ಚಿತು.

ಅರ್ಥ:
ಹಳಚು: ತಾಗುವಿಕೆ, ಬಡಿ; ಅಸಿ: ಕತ್ತಿ; ಖಣಿ: ಕಲ್ಲು, ಶಿಲೆ; ಕಳ: ರಣರಂಗ; ಮಿಗೆ: ಮತ್ತು, ಅಧಿಕ; ಹೊಯ್ದಾಡು: ಹೋರಾಡು; ಉರುಳು: ಕೆಳಕ್ಕೆ ಬೀಳು; ತಲೆ: ಶಿರ; ಬೀಳು: ಕೆಳಕ್ಕೆ – ಕೆಡೆ, ಕುಸಿ; ಹೆಣ: ಜೀವವಿಲ್ಲದ ಶರೀರ; ಧಾರಿಡು: ಒಂದೇ ಸಮನಾಗಿ ತೊಟ್ಟಿಡು; ಅರುಣ: ಕೆಂಪುಬಣ್ಣ; ವಾರಿ: ನೀರು, ಜಲ; ತಳಿತ: ಚಿಗುರಿದ; ಖಂಡ: ತುಂಡು, ಚೂರು; ಹರಿ: ಕಡಿ, ಕತ್ತರಿಸು; ಕರುಳು: ಪಚನಾಂಗ; ಕಳಚು: ಬೇರ್ಪಡಿಸು; ಎಲುಬು: ಮೂಳೆ; ಕುಣಿ: ನರ್ತಿಸು; ಮುಂಡ: ತಲೆಯಿಲ್ಲದ ದೇಹ, ಅಟ್ಟೆ; ಕೊಳುಗುಳ: ಯುದ್ಧ, ಕಾಳಗ; ಹೆಬ್ಬೆಳಸು: ಸಮೃದ್ಧ ಫಸಲು; ಹೆಚ್ಚಿಸು: ಅಧಿಕವಾಗು; ಅಂತಕ: ಯಮ; ಪುರ: ಊರು;

ಪದವಿಂಗಡಣೆ:
ಹಳಚುವ್+ಅಸಿಗಳ +ಖಣಿಖಟಿಲು +ಕಳ
ಕಳಕೆ +ಮಿಗೆ +ಹೊಯ್ದಾಡಿತ್+ಉರುಳುವ
ತಲೆಯ +ಬೀಳುವ +ಹೆಣನ +ಧಾರಿಡುವ್+ಅರುಣ +ವಾರಿಗಳ
ತಳಿತ+ ಖಂಡದ+ ಹರಿದ +ಕರುಳಿನ
ಕಳಚಿದ್+ಎಲುವಿನ +ಕುಣಿವ +ಮುಂಡದ
ಕೊಳುಗುಳದ +ಹೆಬ್ಬೆಳಸು +ಹೆಚ್ಚಿಸಿತ್+ಅಂತಕನ +ಪುರವ

ಅಚ್ಚರಿ:
(೧) ಖಣಿಖಟಿಲು, ಕಳಕಳ, ಕೊಳುಗುಳ – ಪದಗಳ ಬಳಕೆ
(೨) ರಕ್ತ ಎಂದು ಹೇಳುವ ಪರಿ – ಬೀಳುವ ಹೆಣನ ಧಾರಿಡುವರುಣ ವಾರಿಗಳ

ಪದ್ಯ ೧೯: ಯುದ್ಧದ ಹವಿಸ್ಸಿಗೆ ಏನನ್ನು ಅರ್ಪಿಸಿದರು?

ವೀರ ಧಣುಧಣು ಪೂತರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬ ರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ (ಭೀಷ್ಮ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭಲೇ ವೀರ, ಬಿಲ್ಲುಗಾರ ಭಲರೇ, ಬಿಲ್ಲುವಿದ್ಯೆಯ ಪಂಡಿತರೇ ಭಲೇ, ಎಂದು ಒಬ್ಬರೊಬ್ಬರನ್ನು ಮೂದಲಿಸುತ್ತಾ, ಬಿಲ್ಲುಗಾರರು ತಮ್ಮ ಬಾಣಗಳಿಂದ ಶತ್ರುಗಳ ತಲೆಯ ತೋರಣವನ್ನು ಕಟ್ಟಿದರು. ಸೇನೆಯ ಮಾರಣಯಜ್ಞವು ರಕ್ತಧಾರೆಯ ತುಪ್ಪದ ಹವಿಸ್ಸಿನಿಂದ ಮುಂದುವರೆಯಿತು.

ಅರ್ಥ:
ವೀರ: ಪರಾಕ್ರಮ; ಧಣುಧಣು: ಕೊಂಡಾಟದ ನುಡಿ; ಪೂತು: ಪವಿತ್ರ, ಶುದ್ಧ; ಬಿಲ್ಲು: ಚಾಪ; ಮಝ: ಭಲೇ; ಚಾಪ: ಬಿಲ್ಲು; ತಂತ್ರ: ರಹಸ್ಯಮಯ ವಿದ್ಯೆ; ವಿಶಾರದ: ಪಂಡಿತ; ಬಿರುದು: ಗೌರವಸೂಚಕ ಹೆಸರು; ಮೂದಲಿಸು: ಹಂಗಿಸು; ಓರಣ: ಕ್ರಮ, ಸಾಲು; ಕಣೆ: ಬಾಣ; ತಲೆ: ಶಿರ; ತೋರಣ: ಹೆಬ್ಬಾಗಿಲು; ಕಟ್ಟು: ನಿರ್ಮಿಸು; ಸೇನ: ಸೈನ್ಯ; ಮಾರಣ:ಕೊಲೆ, ವಧೆ; ಅಧ್ವರ: ಯಜ್ಞ, ಯಾಗ; ಎಸೆ: ತೋರು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಧಾರೆ: ಪ್ರವಾಹ;

ಪದವಿಂಗಡಣೆ:
ವೀರ +ಧಣುಧಣು +ಪೂತರೇ +ಬಿಲು
ಗಾರ +ಮಝರೇ +ಚಾಪತಂತ್ರ+ವಿ
ಶಾರದಾ +ಎನುತ್+ಒಬ್ಬರೊಬ್ಬರ +ಬಿರುದ +ಮೂದಲಿಸಿ
ಓರಣದ +ಕಣೆಗಳಲಿ +ತಲೆಗಳ
ತೋರಣವ +ಕಟ್ಟಿದರು +ಸೇನಾ
ಮಾರಣ+ಅಧ್ವರವ್+ ಎಸೆದುದ್+ಅರುಣ+ಜಲ+ಆಜ್ಯ+ಧಾರೆಯಲಿ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ – ಸೇನಾ ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ
(೨) ಧಣುಧಣು, ಮಝರೇ , ಪೂತರೇ – ಕೊಂಡಾಟದ ಮಾತುಗಳು
(೩) ಬಿಲ್ಲುಯುದ್ಧದ ತೀವ್ರತೆ – ಓರಣದ ಕಣೆಗಳಲಿ ತಲೆಗಳ ತೋರಣವ ಕಟ್ಟಿದರು

ಪದ್ಯ ೫೮: ಭೀಷ್ಮಾರ್ಜುನರ ಯುದ್ಧ ಹೇಗೆ ನಡೆಯಿತು?

ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ (ವಿರಾಟ ಪರ್ವ, ೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅರ್ಜುನನ ದೇಹದಿಂದ ರಕ್ತವು ರಭಸದಿಂದ ಹರಿಯಿತು. ಅದನ್ನು ತಡೆದುಕೊಂಡು ಅರ್ಜುನನು ಮಹಾಬಾಣವೊಂದನ್ನು ಬಿಡಲು ಭೀಷ್ಮನು ಗರ್ಜಿಸಿ ಆ ಬಾಣವನ್ನು ಮಧ್ಯದಲ್ಲೇ ಕಡಿದು ಹಾಕಿದನು. ಅರ್ಜುನನು ಆಗ್ನೇಯಾಸ್ತ್ರವನ್ನು ಬಿಡಲು ಕೌರವ ಸೇನೆಯು ಗೊಂದಲಕ್ಕೀಡಾಯಿತು.

ಅರ್ಥ:
ಒರೆ: ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒಡಲು: ದೇಹ; ದುರುದುರಿಸಿ: ರಭಸ; ಸುರಿ: ಹರಿ; ಅರುಣ: ಕೆಂಪು; ಜಲ: ನೀರು; ನೆರವಣಿಗೆ: ಪರಿಪೂರ್ಣತೆ; ನಿಂದು: ನಿಲ್ಲು; ತೊಟ್ಟು: ತೊಡು; ನರ: ಅರ್ಜುನ; ಮಹಾಶರ: ಶ್ರೇಷ್ಠವಾದ ಬಾಣ; ತರಿ: ಕಡಿ, ಕತ್ತರಿಸು; ಉರೆ: ಹೆಚ್ಚು; ಬೊಬ್ಬಿರಿ: ಕೂಗು, ಗಟ್ಟಿಯಾಗಿ ಹೇಳು, ಉದ್ಘೋಷಿಸು; ಬಳಿಕ: ನಂತರ; ಆಗ್ನಿ: ಬೆಂಕಿ; ಬಾಣ: ಶರ; ಗರಿ: ಪುಕ್ಕ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಹೂಡು: ತೊಡು; ಕಳವಳ: ಗೊಂದಲ;

ಪದವಿಂಗಡಣೆ:
ಒರೆತುದ್+ಅರ್ಜುನನ್+ಒಡಲಿನಲಿ+ ದುರು
ದುರಿಸಿ +ಸುರಿದುದು +ಅರುಣಮಯ +ಜಲ
ನೆರವಣಿಗೆಯಲಿ +ನಿಂದು+ ತೊಟ್ಟನು+ ನರ +ಮಹಾ+ಶರವ
ತರಿದನ್+ಎಡೆಯಲಿ +ಭೀಷ್ಮನ್+ಉರೆ +ಬೊ
ಬ್ಬಿರಿದು +ಬಳಿಕ್+ಆಗ್ನೇಯ +ಬಾಣದ
ಗರಿಯ +ಮಂತ್ರಿಸಿ +ಹೂಡಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ರಕ್ತ ಹರಿಯಿತು ಎಂದು ಹೇಳುವ ಪರಿ – ಒರೆತುದರ್ಜುನನೊಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ

ಪದ್ಯ ೨೫: ಯಾವ ದೃಷ್ಟಾಂತಗಳನ್ನು ದುರ್ಯೋಧನನು ಶಲ್ಯನಿಗೆ ನೀಡಿದನು?

ಅರುಣ ಸಾರಥಿ ಭುವನ ಕಾರ್ಯದ
ಭರವ ಹೊರನೇ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ್ಯದನುವರಿದು
ಹರನ ಸಾರಥಿ ಕಮಲಸಂಭವ
ಸುರರ ಕಾರ್ಯಕ್ಕೊದಗನೇ ಸ
ತ್ಪುರುಷರೇ ಪರಕಾರ್ಯನಿಷ್ಠರು ಕೋಪವೇಕೆಂದ (ಕರ್ಣ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಲ್ಯನನ್ನು ಸಂತೈಸುತ್ತಾ ಹಲವು ಉದಾಹರಣೆಗಳನ್ನು ಕೋಡಲು ಮುಂದಾದನು. ಅರುಣನು ಸೂರ್ಯನಿಗೆ ಸಾರಥಿಯಾಗಿ ಲೋಕವನ್ನು ರಕ್ಷಿಸುವ ಭಾರವನ್ನು ಹೊರಲಿಲ್ಲವೇ? ಪರರ ಕೆಲಸಕ್ಕೆ ಒದಗಿ ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಲಿಲ್ಲವೇ? ದೇವತೆಗಳ ಕಾರ್ಯವನ್ನು ನಡೆಸಿಕೊಡಲು ಸೃಷ್ಟಿಕರ್ತನಾದ ಬ್ರಹ್ಮನು ಶಿವನಿಗೆ ಸಾರಥಿಯಾಗಲಿಲ್ಲವೇ? ಮಾವಾ ಕೇಳು ಪರಕಾರ್ಯನಿಷ್ಠರೇ ಸತ್ಪುರುಷರು, ಆದ್ದರಿಂದ ನಿನಗೆ ಕೋಪವೇಕೆಂದು ನುಡಿದನು.

ಅರ್ಥ:
ಅರುಣ:ಸೂರ್ಯನ ಸಾರಥಿ; ಕೆಂಪು; ಸಾರಥಿ: ರಥವನ್ನು ಓಡಿಸುವವ; ಭುವನ: ಭೂಮಿ; ಕಾರ್ಯ: ಕೆಲಸ; ಭರ: ಭಾರ; ಹೊರು: ಹೊತ್ತು; ನರ: ಅರ್ಜುನ; ಸಾರಥಿ: ರಥವನ್ನು ಓಡಿಸುವವ; ಪರ: ಬೇರೆ, ಇನ್ನೊಬ್ಬರ; ಕಾರ್ಯ: ಕೆಲಸ; ಅನುವು: ಹೊಂದಿಕೆ; ಅನುವರ: ಯುದ್ಧ; ಹರ: ಶಿವ; ಕಮಲಸಂಭವ: ಕಮಲದಿಂದ ಜನಿಸಿದ (ಬ್ರಹ್ಮ); ಸುರ: ದೇವತೆ; ಒದಗು: ಲಭ್ಯ, ದೊರೆತುದು; ಸತ್ಪುರುಷ: ಒಳ್ಳೆಯ ಮನುಷ್ಯ; ನಿಷ್ಠ: ಶ್ರದ್ಧೆಯುಳ್ಳವನು; ಕೋಪ: ಸಿಟ್ಟು, ಕ್ರೋಧ;

ಪದವಿಂಗಡಣೆ:
ಅರುಣ +ಸಾರಥಿ +ಭುವನ +ಕಾರ್ಯದ
ಭರವ +ಹೊರನೇ +ಕೃಷ್ಣನಲ್+ಆ
ನರನ+ ಸಾರಥಿಯಾಗನೇ +ಪರಕಾರ್ಯದ್+ಅನುವರಿದು
ಹರನ +ಸಾರಥಿ+ ಕಮಲಸಂಭವ
ಸುರರ+ ಕಾರ್ಯಕ್ಕೊದಗನೇ +ಸ
ತ್ಪುರುಷರೇ +ಪರಕಾರ್ಯನಿಷ್ಠರು +ಕೋಪವೇಕೆಂದ

ಅಚ್ಚರಿ:
(೧) ಸಾರಥಿ – ೩ ಬಾರಿ ಪ್ರಯೋಗ
(೨) ಅರುಣ, ಕೃಷ್ಣ, ಬ್ರಹ್ಮ – ಸಾರಥಿಯ ಮೂರು ಉದಾಹರಣೆಗಳು
(೩) ಕಾರ್ಯ, ಪರಕಾರ್ಯ – ಪದಗಳ ಬಳಕೆ

ಪದ್ಯ ೨: ಜಗತ್ತು ಏಕೆ ಕೆಂಪಾಗಿಕಾಣುತ್ತಿತ್ತು?

ಭರದಿನೈತಂದಖಿಳ ಭೂಮೀ
ಶ್ವರರ ಘನ ಚತುರಂಗ ಪದಹತ
ಧರಣಿ ನಿರ್ಗತ ರೇಣು ಪಟಲ ಪರಾಗ ಸಂಗದಲಿ
ಅರುಣಮಯವಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ (ಆದಿ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಅತ್ಯಂತ ಆಸಕ್ತಿಯಿಂದ ವೇಗವಾಗಿ ಬಂದ ಎಲ್ಲಾ ರಾಜರ ಚತುರಂಗ ಸೈನ್ಯಗಳ ತುಳಿತದಿಂದೆದ್ದ ಧೂಳಿನಿಂದ ಜಗತ್ತೆಲ್ಲವು ಕೆಂಪಾಗಿ ಕಾಣುವಂತಾಗಿತ್ತು. ದ್ರೌಪದಿಯನ್ನು ಸೌಂದರ್ಯವನ್ನು ನೆನೆದು ಭೂಮಿಯ ಮೇಲಿನ ಎಲ್ಲಾ ಚರಾಚರರುಗಳ ಮುಖದಲ್ಲಿ ಸಂತೋಷವು ಮೂಡಿತೊ ಎಂಬಂತೆ ಇದು ಕಾಣಿಸುತ್ತಿತ್ತು.

ಅರ್ಥ:
ಭರ: ವೇಗ, ಆಸಕ್ತಿ, ಹೆಚ್ಚಳ; ಅಖಿಳ: ಎಲ್ಲ, ಸಮಗ್ರ; ಭೂಮಿ: ಅವನಿ, ಧರಿತ್ರಿ; ಭೂಮೀಶ್ವರ: ರಾಜ, ನೃಪ; ಘನ: ಉತ್ತಮ, ಶ್ರೇಷ್ಠ; ಚತುರಂಗ: ಸೈನ್ಯ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧರಣಿ: ಭೂಮಿ; ನಿರ್ಗತ: ಹೋದ; ರೇಣು: ಧೂಳು, ಪರಾಗ; ಪಟಲ:ಗುಂಪು, ಸಮೂಹ; ಪರಾಗ: ಧೂಳು, ಪುಡಿ; ಸಂಗ: ಜೊತೆ; ಅರುಣ: ಕೆಂಪು; ಜಗ: ಲೋಕ, ಪ್ರಪಂಚ; ಸರಸಿ: ಸರೋವರ; ಸರಸಿಜ: ಕಮಲ; ಅಕ್ಷಿ: ಕಣ್ಣು, ನಯನ; ನೆನೆ: ಜ್ಞಾಪಿಸು; ಚರಾಚರ: ಸ್ಥಾವರ ಮತ್ತು ಜಂಗಮ ಜಗತ್ತು; ಮುಖ: ವದನ; ರಾಗ:ಸಂತೋಷ, ಪ್ರೀತಿ; ಉಬ್ಬರಿಸು: ಅತಿಶಯ, ಅಧಿಕವಾಗು;

ಪದವಿಂಗಡನೆ:
ಭರದಿನೈತಂದ್+ಅಖಿಳ+ ಭೂಮೀ
ಶ್ವರರ+ ಘನ +ಚತುರಂಗ+ ಪದಹತ
ಧರಣಿ+ ನಿರ್ಗತ +ರೇಣು +ಪಟಲ +ಪರಾಗ +ಸಂಗದಲಿ
ಅರುಣಮಯವಾಯ್ತ್+ ಅಖಿಳ+ ಜಗದಲಿ
ಸರಸಿಜಾಕ್ಷಿಯ +ನೆನೆದು +ಸಚರಾ
ಚರದ +ಮುಖದಲಿ+ ರಾಗರಸ+ವುಬ್ಬರಿಸಿದಂದದಲಿ

ಅಚ್ಚರಿ:
(೧) ಧೂಳಿನ ಕೆಂಪನ್ನು ಎಲ್ಲಾ ಜೀವ ಮತ್ತು ನಿರ್ಜೀವಿಗಳ ಸಂತೋಷ ಎಂಬಂತೆ ವರ್ಣಿಸಿರುವುದು
(೨) ರೇಣು, ಪರಾಗ – ಧೂಳು ಅರ್ಥದ ಸಮಾನಾರ್ಥಕ ಪದಗಳು
(೩) ಧರಣಿ, ಭೂಮಿ – ಸಮಾನಾರ್ಥಕ ಪದ
(೪) ಅಖಿಳ – ೧, ೪ ಸಾಲಿನಲ್ಲಿ ಬಳಸಿರುವು ಪದ