ಪದ್ಯ ೧೦: ಭೀಷ್ಮನು ಹೇಗೆ ತೋರಿದನು?

ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ (ಭೀಷ್ಮ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೈರಿಗಳನ್ನು ಎಲ್ಲಾದಿಕ್ಕುಗಳಿಗೆ ಚದುರಿಸುವ ಚತುರನಾದ ಭೀಷ್ಮನು ಅಲಂಕೃತನಾಗಿ ರಥದ ಮಧ್ಯದಲ್ಲಿ ಕುಳಿತಿದ್ದನು. ಸೂರ್ಯನ ತತ್ತಿಗಳೆಂಬಂತೆ ಅವನ ಕವಚಕ್ಕೆ ಮಾಡಿದ್ದ ಹೊಂಗೆಲಸದ ನಡುವೆ ಮಾಣಿಕ್ಯಗಳು ಹೊಳೆಯುತ್ತಿದ್ದವು. ಅವನ ಕೊರಳಿನಲ್ಲಿ ಮುತ್ತಿನಹಾರ ತೂಗಾಡುತ್ತಿತ್ತು.

ಅರ್ಥ:
ತರುಣ: ಚಿಕ್ಕವ; ರವಿ: ಸೂರ್ಯ; ತತಿ: ಸಕಾಲ, ಗುಂಪು; ಸಂವರಿಸು: ಗುಂಪುಗೂಡು; ಮಾಣಿಕ: ಮಾಣಿಕ್ಯ; ತರತರದ: ಬೇರೆ, ಹಲವಾರು; ಕೊರಳು: ಗಂಟಲು; ಹೀರ: ನವರತ್ನಗಳಲ್ಲಿ ಒಂದು, ವಜ್ರ; ಆವಳಿ: ಸಾಲು, ಗುಂಪು; ರಶ್ಮಿ: ಕಿರಣ, ಕಾಂತಿ; ಹೊರಳಿ: ಗುಂಪು, ಸಮೂಹ; ಹೊದಕೆ: ಮುಸುಕು; ಕವಚ: ಹೊದಿಕೆ, ಉಕ್ಕಿನ ಅಂಗಿ; ಅರಿ: ವೈರಿ; ದಿಶ: ದಿಕ್ಕು; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವವ; ಎಸೆ: ಶೋಭಿಸು, ಬಾಣ ಬಿಡು; ರಥ: ಬಂಡಿ; ಮಧ್ಯ: ನಡುವೆ;

ಪದವಿಂಗಡಣೆ:
ತರುಣ +ರವಿಗಳ +ತತ್ತಿಗಳ +ಸಂ
ವರಿಸದಿರರ್+ಎನೆ +ಮಾಣಿಕಂಗಳ
ತರತರದ +ಕೀಲಣೆಯ +ಹೊಂಗೆಲಸದ +ಸುರೇಖೆಗಳ
ಕೊರಳ +ಹೀರಾವಳಿಯ +ರಶ್ಮಿಯ
ಹೊರಳಿಗಳ+ ಹೊದಕೆಗಳ+ ಕವಚದಲ್
ಅರಿದಿಶಾಪಟ+ ಭೀಷ್ಮನ್+ಎಸೆದನು +ರಥದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಣ ರವಿಗಳ ತತ್ತಿಗಳ ಸಂವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ

ಪದ್ಯ ೪೩: ದೂತರು ಪಾಂಡವರಿಗೆ ಏನು ಹೇಳಿದರು?

ಚರರಿಗುಡುಗೊರೆ ಗಂಧ ನಿಖಿಲಾ
ಭರಣ ಕತ್ತುರಿ ಕರ್ಪುರವನಿ
ತ್ತರಿದಿಶಾಪಟ ಬೀಳುಕೊಟ್ಟನು ರಾಯಸವ ಬರೆಸಿ
ಮರಳಿದೂತರು ಬಂದು ಮತ್ಸ್ಯನ
ಪುರವ ಹೊಕ್ಕರು ಕೃಷ್ಣರಾಯನ
ಕರುಣದಳತೆಯ ಬಿನ್ನವಿಸಿದರು ಪಾಂಡುತನಯರಿಗೆ (ವಿರಾಟ ಪರ್ವ, ೧೧ ಪದ್ಯ, ೪೩ ಪದ್ಯ)

ತಾತ್ಪರ್ಯ:
ಪಾಂಡವರ ದೂತರಿಗೆ ಶ್ರೀಕೃಷ್ನನು ಗಂಧಾದಿ ಉಪಚಾರಗಳನ್ನು ಮಾಡಿಸಿ, ಪತ್ರ ಬರೆಸಿಕೊಟ್ಟು ಕಳಿಸಿದನು. ದೂತರು ಮತ್ಸ್ಯನಗರಕ್ಕೆ ಬಂದು ಶ್ರೀಕೃಷ್ಣನ ಕರುಣೆಯನ್ನು ಪಾಂಡವರಿಗೆ ಬಿನ್ನಹ ಮಾಡಿದನು.

ಅರ್ಥ:
ಚರ: ದೂತ; ಉಡುಗೊರೆ: ಕೊಡುಗೆ; ಗಂಧ: ಚಂದನ; ನಿಖಿಳ: ಎಲ್ಲಾ; ಆಭರಣ: ಒಡವೆ; ಕತ್ತುರಿ: ಕಸ್ತೂರಿ; ಕರ್ಪುರ: ಸುಗಂಧ ದ್ರವ್ಯ; ಬೀಳುಕೊಡು: ತೆರಳು; ರಾಯ: ರಾಜ; ಮರಳು: ಹಿಂದಿರುಗು; ದೂತ: ಸೇವಕ; ಪುರ: ಊರು; ಹೊಕ್ಕು: ಸೇರು; ಕರುಣ: ದಯೆ; ಬಿನ್ನವಿಸು: ಹೇಳು, ವಿಜ್ಞಾಪನೆ; ತನಯ: ಮಗ;
ಅರಿದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕೆಗೆ ಓಡಿಸುವವನು;

ಪದವಿಂಗಡಣೆ:
ಚರರಿಗ್+ಉಡುಗೊರೆ +ಗಂಧ +ನಿಖಿಲಾ
ಭರಣ+ ಕತ್ತುರಿ +ಕರ್ಪುರವನಿತ್
ಅರಿದಿಶಾಪಟ +ಬೀಳುಕೊಟ್ಟನು +ರಾಯಸವ +ಬರೆಸಿ
ಮರಳಿದೂತರು +ಬಂದು +ಮತ್ಸ್ಯನ
ಪುರವ+ ಹೊಕ್ಕರು +ಕೃಷ್ಣರಾಯನ
ಕರುಣದಳತೆಯ +ಬಿನ್ನವಿಸಿದರು+ ಪಾಂಡುತನಯರಿಗೆ

ಅಚ್ಚರಿ:
(೧) ಕೃಷ್ಣನನ್ನು ಅರಿದಿಶಾಪಟ ಎಂದು ಕರೆದಿರುವುದು
(೨) ಚರ, ದೂತ – ಸಮನಾರ್ಥಕ ಪದ

ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ