ಪದ್ಯ ೨೩: ದುರ್ಯೋಧನನು ಕರ್ಣನಿಗೆ ಏನು ಹೇಳಿದನು?

ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಲರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ (ದ್ರೋಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ, ಈ ಮಾತು ಸಾಕು, ದೈತ್ಯನನ್ನು ಸಂಹರಿಸು, ನಮ್ಮ ಪರಾಕ್ರಮಿಗಳು ಬಾಯಿಬಾಯಿ ಬಿಡುತ್ತಿದ್ದಾರೆ, ತಡೆಯದೆ ತಡಮಾಡದೆ ಈ ರಾಕ್ಷಸನನ್ನು ಸಂಹರಿಸು. ವೀರರೂ ಸಮರ್ಥರೂ ತಲ್ಲಣಗೊಂಡಿದ್ದಾರೆ. ಕಾಲವನ್ನು ಸುಮ್ಮನೇ ವ್ಯರ್ಥಮಾಡಬೇಡ ಎಂದು ದುರ್ಯೋಧನನು ಕರ್ಣನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ದೈತ್ಯ: ರಾಕ್ಷಸ; ಕೆಡಹು: ಬೀಳಿಸು, ನಾಶಮಾಡು; ಸೇನೆ: ಸೈನ್ಯ; ಸುಭಟ: ವೀರ; ನೂಕು: ತಳ್ಳು; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ತಡೆ: ನಿಲ್ಲಿಸು; ತಡ: ನಿಧಾನ; ಆಕೆವಾಳ: ವೀರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ವೀರ: ಶೂರ; ತಲ್ಲಣ: ಅಂಜಿಕೆ, ಭಯ; ತಗಹು: ಅಡ್ಡಿ, ತಡೆ; ಕಾಲಕ್ಷೇಪ: ಕಾಲ ಕಳೆಯುವುದು; ರಾಯ: ರಾಜ; ಆನೀಕ: ಸಮೂಹ;

ಪದವಿಂಗಡಣೆ:
ಸಾಕು +ದೈತ್ಯನ +ಕೆಡಹು +ಸೇನೆಯ
ಸಾಕು +ಸುಭಟರು +ಬಾಯಬಿಡುತಿದೆ
ನೂಕು +ನೂಕ್+ಅಮರಾರಿಯನು +ತಡೆ +ತಡವು+ಮಾಡದಿರು
ಆಕೆವಾಳರು +ವಿಗಡ +ವೀರಾ
ನೀಕವಿದೆ +ತಲ್ಲಣದ +ತಗಹಿನ
ಲೇಕೆ +ಕಾಲಕ್ಷೇಪವೆಂದನು +ಕೌರವರ+ರಾಯ

ಅಚ್ಚರಿ:
(೧) ಸಾಕು, ನೂಕು – ಪ್ರಾಸ ಪದಗಳು
(೨) ಆಕೆವಾಳ, ಸುಭಟ, ವಿಗಡ, ವೀರಾನೀಕ – ಸಾಮ್ಯಾರ್ಥ ಪದಗಳು
(೩) ತಡೆ, ತಡ – ಪದಗಳ ಬಳಕೆ

ಪದ್ಯ ೭: ಘಟೋತ್ಕಚನು ಯುದ್ಧದಲ್ಲಿ ಯಾವ ತಂತ್ರವನ್ನು ಉಪಯೋಗಿಸಿದನು?

ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ (ದ್ರೋಣ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಘಟೋತ್ಕಚನು, ಭಲೇ ಕುರು ಸೈನ್ಯವು ಬಹಳ ವಿಶಾಲವಾಗಿದೆ. ಎಂದಿಗೆ ನಾನು ಇವರನ್ನು ಕೊಲ್ಲಲಾದೀತು, ನನ್ನ ಕೈಸೋತವು ಆದರೂ ಇವರನ್ನು ಕೊಲ್ಲಲು ಒಂದು ಮದ್ದನ್ನು ಬಲ್ಲೆ, ಎಂದು ಮಾಯಾಯುದ್ಧದಿಂದ ಬೆದರಿಕೆ ಹಾಕಿದನು, ಅದನ್ನು ನಾನು ಹೇಗೆ ತಾನೆ ವರ್ಣಿಸಲಿ.

ಅರ್ಥ:
ಪೂತು: ಭಲೇ; ಸೈನಿಕ: ಭಟ; ಅಸಂಖ್ಯಾತ: ಅಗಣಿತ; ಸವೆ: ನಾಶ; ಸೋತು: ಪರಾಭವ; ಹರ: ಶಿವ; ಕೊಲು: ಸಾಯಿಸು; ಅಮರಾರಿ: ದಾನವ, ರಾಕ್ಷಸ; ಅಮರ: ದೇವತೆ; ಅರಿ: ವೈರಿ; ಚಿಂತಿಸು: ಯೋಚಿಸು; ಅಳಿ: ನಾಶ; ಮದ್ದು: ಔಷಧಿ; ಮಾಯ: ಇಂದ್ರಜಾಲ; ಅತಿಶಯ: ಹೆಚ್ಚು; ಯುದ್ಧ: ರಣರಂಗ; ಸಂಘಾತ: ಗುಂಪು, ಸಮೂಹ; ಬೆದರಿಸು: ಹೆದರಿಸು; ವಣ್ಣಿಸು: ವಿವರಿಸು;

ಪದವಿಂಗಡಣೆ:
ಪೂತುರೇ +ಕುರುಸೈನಿಕವ್+ಅಸಂ
ಖ್ಯಾತವ್+ಎಂದಿಗೆ +ಸವೆವುದೋ +ಕೈ
ಸೋತವೇ +ಹರ +ಕೊಲುವೆನ್+ಎನುತ್+ಅಮರಾರಿ +ಚಿಂತಿಸಿದ
ಈತಗ್+ಅಳಿಗಿದು +ಮದ್ದೆನುತ +ಮಾ
ಯಾತಿಶಯ +ಯುದ್ಧದಲಿ +ಬಲ+ಸಂ
ಘಾತವನು +ಬೆದರಿಸಿದನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೨೭: ಕೃಷ್ಣನು ಧರ್ಮಜನಿಗೆ ಏನು ಹೇಳಿದ?

ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿರ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ (ಅರಣ್ಯ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಮ್ಮ ದ್ವಾರಕಾಪುರಿಗೆ ರಾಕ್ಷಸರದ್ದೇ ದೊಡ್ಡ ವಿಪತ್ತು, ನಮಗೆ ರಾಕ್ಷಸರೇ ಶತ್ರುಗಳು, ನಮ್ಮ ಊರನ್ನು ಕಾಪಾಡಲು ಜನರಿಲ್ಲ, ಬಲರಾಮನೇ ಮೊದಲಾದವರು ವಿಷಯ ವಸ್ತುಗಳಲ್ಲಿ ಆಸಕ್ತರು. ಊರನ್ನು ಬಿಟ್ಟಿರಲಾರೆ, ನಿಮ್ಮೊಡನೆ ವನವಾಸದಲ್ಲಿರಲು ನನಗೆ ಪುರುಸೊತ್ತು ಇಲ್ಲ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಹಗೆ: ವೈರಿ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ನಗರ: ಊರು; ಶೂನ್ಯ: ಬರಿದಾದುದು; ವಿಗಡ: ಶೌರ್ಯ, ಪರಾಕ್ರಮ; ಆದಿ: ಮೊದಲಾದ; ವಿಷಯ: ಭೋಗಾಭಿಲಾಷೆ; ವಿನೋದ: ಸಂತೋಷ, ಹಿಗ್ಗು; ಅಗಲು: ಬಿಟ್ಟಿರು, ಬೇರೆ; ವನ: ಕಾಡು; ಓಲಗ: ದರ್ಬಾರು; ಬಿಡೆ: ಬಿಡುವು; ಕಾಣು: ತೋರು; ನಗು: ಸಂತ್ಸ; ಕರುಣಾಸಿಂಧು: ಕರುಣಾ ಸಾಗರ; ನಂದನ: ಮಗ; ಮೊಗ: ಮುಖ; ನೋಡಿ: ವೀಕ್ಷಿಸು; ಆಸನ: ಪೀಠ;

ಪದವಿಂಗಡಣೆ:
ಹಗೆಗಳ್+ಅಮರಾರಿಗಳು+ ನಮ್ಮಯ
ನಗರಿ+ ಶೂನ್ಯಾಸನದಲ್+ಇರ್ದುದು
ವಿಗಡ +ರಾಮಾದಿಗಳು+ ವಿಷಯಂಗಳ+ ವಿನೋದಿಗಳು
ಅಗಲಲಾರೆನು +ನಿಮ್ಮ+ವನದ್
ಓಲಗಕೆ +ಬಿಡೆಯವ+ ಕಾಣೆನೆಂದನು
ನಗುತ +ಕರುಣಾಸಿಂಧು +ಯಮನಂದನನ +ಮೊಗ +ನೋಡಿ

ಅಚ್ಚರಿ:
(೧) ಹಗೆ, ಅರಿ – ಸಾಮ್ಯಾರ್ಥ ಪದ

ಪದ್ಯ ೩೩: ಅರ್ಜುನನು ಕೋಟೆಯ ಮೇಲೆ ಹೇಗೆ ದಾಳಿ ಮಾಡಿದನು?

ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರಬಾಣದೊಳು
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನದುರ್ಗದ ತುದಿಯ ತೆನೆಗಳಲಿ (ಅರಣ್ಯ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ದೇವತೆಗಳು ಸೋತು ಹಿಮ್ಮೆಟ್ಟಿದರು. ಆಗ ನಾನು ಗರ್ಜಿಸಿ ರಾಕ್ಷಸರ ಮೇಲೆ ಬಿದ್ದು ಕೋಟೆ ಸಂಖ್ಯೆಯಲ್ಲಿ ರಾಕ್ಷಸ ವೀರರನ್ನು ಕೊಂದೆನು. ರಾಕ್ಷಸರು ಓಡಿದರು ದೇವ ಸೈನ್ಯವು ರಾಕ್ಷಸರ ಊರ ಕೋಟೆಯವರೆಗೆ ನುಗ್ಗಿ ಕೊತ್ತಳಗಳನ್ನು ಹತ್ತಿತು.

ಅರ್ಥ:
ಮುರಿ: ಸೀಳು; ಅಮರ: ದೇವತೆ; ಬೊಬ್ಬಿರಿ: ಗರ್ಜಿಸು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ತರಿ: ಕಡಿ, ಕತ್ತರಿಸು; ಕೋಟಿ: ಅಸಂಖ್ಯಾತ; ಬಾಣ: ಶರ; ಹರಿ: ಸೀಳು; ಅಮರಾರಿ: ದಾನವ; ಹೊರಗೆ: ಆಚೆ; ಸುರ: ದೇವತೆ; ಔಕು: ನೂಕು; ಖಳ: ದುಷ್ಟ; ದುರ್ಗ: ಕೋಟೆ; ತುದಿ: ಕೊನೆ, ಅಗ್ರಭಾಗ; ತೆನೆ: ಕೋಟೆಯ ಮೇಲ್ಭಾಗ, ಕೊತ್ತಳ; ಹೆಸರು: ನಾಮ;

ಪದವಿಂಗಡಣೆ:
ಮುರಿದುದ್+ಅಮರರು +ಮತ್ತೆ +ಬೊಬ್ಬಿರಿದ್
ಉರುಬಿದೆನು +ಹೆಸರ್+ಎನಿಸಿದ್+ಅಸುರರ
ತರಿದೆನ್+ಅದರೊಳು +ಕೋಟಿ +ಸಂಖ್ಯೆಯನ್+ಐಂದ್ರ+ಬಾಣದೊಳು
ಹರಿದುದ್+ಅಮರಾರಿಗಳು+ ಕೋಟೆಯ
ಹೊರಗೆ+ ಸುರಬಲವ್+ಔಕಿ +ಬಿಟ್ಟುದು
ತುರುಗಿತ್+ಅಮರರು +ಖಳನ+ದುರ್ಗದ +ತುದಿಯ +ತೆನೆಗಳಲಿ

ಚ್ಚರಿ:
(೧) ಅಸುರ, ಅಮರಾರಿ – ಸಮನಾರ್ಥಕ ಪದ
(೨) ತರಿ, ಹರಿ, ಮುರಿ – ಪ್ರಾಸ ಪದಗಳು

ಪದ್ಯ ೩೨: ಧರ್ಮಜನು ಯಾರನ್ನು ನೆನೆದನು?

ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ನೆನೆದನು ಕಲಿ ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ತಾನರಿಯೆನಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ (ಅರಣ್ಯ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ರಾಜನು ಮೆಚ್ಚಿ, ಮುಂದಿನ ಚಾರಣದ ಉಪಾಯವೇನು ಎಂದು ಯೋಚಿಸುತ್ತಾ, ಘಟೋತ್ಕಚನನ್ನು ನೆನೆದನು. ಜನಮೇಜಯ ರಾಜ ಕೇಳು, ವಿಷ್ಣು ಮಾಯೆಯೋ ಏನೋ ತಿಳಿಯದು ನೆನೆದೊಡನೆ ಘಟೋತ್ಕಚನು ವಾಯುವೇಗದಿಂದ ಬಂದು ಆಕಾಶದಿಂದಿಳಿದನು.

ಅರ್ಥ:
ಆಯತಾಕ್ಷಿ: ಅಗಲವಾದ ಕಣ್ಣುಳ್ಳವಳು (ಸುಂದರಿ); ನುಡಿ: ಮಾತು; ರಾಯ: ರಾಜ; ಮೆಚ್ಚು: ಪ್ರಶಂಶಿಸು; ಗಮನ: ನಡೆಯುವುದು, ನಡಗೆ; ಉಪಾಯ: ಯುಕ್ತಿ; ನೆನೆ: ಜ್ಞಾಪಿಸಿಕೊಳ್ಳು; ಕಲಿ: ಶೂರ; ರಾಯ: ರಾಜ; ಕೇಳು: ಆಲಿಸು; ಕಮಲನಾಭ: ವಿಷ್ಣು; ಮಾಯೆ: ಇಂದ್ರಜಾಲ; ಅರಿ: ತಿಳಿ; ಆಕ್ಷಣ: ಕೂಡಲೆ; ವಾಯು: ಗಾಳಿ; ವೇಗ: ರಭಸ; ಅಭ್ರ: ಆಗಸ; ಇಳಿ: ಕೆಳೆಗೆ ಬಾ; ಅಮರಾರಿ: ದೇವತೆಗಳ ವೈರಿ;

ಪದವಿಂಗಡಣೆ:
ಆಯತಾಕ್ಷಿಯ+ ನುಡಿಗೆ+ ಪಾಂಡವ
ರಾಯ +ಮೆಚ್ಚಿದನ್+ಇನ್ನು +ಗಮನೋ
ಪಾಯವೆಂತೆಂದ್+ಎನುತ+ ನೆನೆದನು +ಕಲಿ +ಘಟೋತ್ಕಚನ
ರಾಯ +ಕೇಳೈ +ಕಮಲನಾಭನ
ಮಾಯೆಯೋ +ತಾನರಿಯೆನ್+ಆ ಕ್ಷಣ
ವಾಯುವೇಗದಲ್+ಅಭ್ರದಿಂದ್+ಇಳಿತಂದನ್+ಅಮರಾರಿ

ಅಚ್ಚರಿ:
(೧) ದ್ರೌಪದಿಯನ್ನು ಆಯತಾಕ್ಷಿ; ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೩೦: ಕಿಮ್ಮೀರನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನು ಕಿಮ್ಮೀರನೆದುರು ಗರ್ಜಿಸಲು, ಕಿಮ್ಮೀರನು ಭೀಮನಿಗೆ ಹೆದರುವಾನೇ, ದೊಡ್ಡಮರದ ದೊಡ್ಡ ಕೊಂಬೆಯನ್ನು ಕಿತ್ತು ಅದನ್ನು ನಾಶಗೊಳಿಸಿ ನನ್ನ ಹಿಡಿಂಬನ ಶತ್ರುಗಳು ಇದೀಗ ಸಿಕ್ಕಿದ್ದಾರೆ, ನಾನು ಪೂಜಿಸುತ್ತಿರುವುದು ನಿಜವಾಗಿಯೂ ದೊಡ್ಡ ದೇವರು ಎನ್ನುತ್ತಾ ಯುದ್ಧಕ್ಕೆ ಸಿದ್ಧನಾದನು.

ಅರ್ಥ:
ಪವನಜ: ಭೀಮ; ಕೈಕೊಂಬ: ಸಿಲುಕು; ದೈತ್ಯ: ರಾಕ್ಷಸ; ಹೆಮ್ಮರ: ದೊಡ್ಡ ಮರ; ಕೊಂಬೆ: ಟೊಂಗೆ; ಮುರಿ: ಸೀಳು; ಸವರು: ಸಾರಿಸು, ನಾಶಮಾಡು; ಶಾಖ: ಮರದ ಕೊಂಬೆ; ತಿಂಬೆ: ತಿನ್ನು; ತಂದು: ಬರೆಮಾಡು; ಹಗೆ: ವೈರ; ಸಿಲುಕು: ಸಿಕ್ಕು, ಬಂಧನಕ್ಕೊಳಗಾಗು; ನಂಬು: ವಿಶ್ವಾಸ, ಭರವಸೆ; ನೆರೆ: ಸೇರು, ಜೊತೆಗೂಡು; ದೈವ: ಭಗವಂತ; ಇದಿರು: ಎದುರು; ಅಮರಾರಿ: ದೇವತೆಗಳ ವೈರಿ (ರಾಕ್ಷಸ);

ಪದವಿಂಗಡಣೆ:
ಎಂಬೆನೇನ್+ಅನು +ಪವನಜನ+ ಕೈ
ಕೊಂಬ +ದೈತ್ಯನೆ +ಹೆಮ್ಮರನ+ ಹೆ
ಗ್ಗೊಂಬ +ಮುರಿದನು+ ಸವರಿದನು+ ಶಾಖೋಪ+ಶಾಖೆಗಳ
ತಿಂಬೆನ್+ಇವನನು +ತಂದು +ತನ್ನ +ಹಿ
ಡಿಂಬಕನ+ ಹಗೆ+ ಸಿಲುಕಿತೇ+ ತಾ
ನಂಬಿದುದು +ನೆರೆ+ ದೈವವೆನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಕಿಮ್ಮೀರನ ಎದುರಿಸಲು ಸಿದ್ಧನಾದ ಪರಿ – ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾನಂಬಿದುದು ನೆರೆ ದೈವವೆನುತಿದಿರಾದನಮರಾರಿ
(೨) ಭೀಮನ ಗುಣಗಾನ – ಹೆಮ್ಮರನ ಹೆಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ

ಪದ್ಯ ೨೩: ಭೀಮನಿಗೆ ಯಾರು ಎದುರಾದರು?

ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಿಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುತ್ತಾ, ರಾಜ ಕೇಳು, ಹಿಂದೆ ಏಕಚಕ್ರಪುರದಲ್ಲಿ ಭೀಮನು ಬಕಾಸುರನನ್ನು ಕೊಲ್ಲಲಿಲ್ಲವೇ? ಬಕನ ಅಣ್ಣನೇ ಕಿಮ್ಮೀರ, ಹಿಡಿಂಬಕನಿಗೆ ಸಂಬಂಧಿಕ. ಪರಿವಾರದೊಡನೆ ಧರ್ಮಜನು ಬರುವುದನ್ನು ಕಂಡು, ತನ್ನ ತಮ್ಮನ ವಧೆಯ ನೋವನ್ನು ತೀರಿಸಿಕೊಳ್ಳಲು ಕಿಮ್ಮೀರನು ಎದುರಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒರಸು: ನಾಶಮಾದು; ಹಿರಿಯ: ದೊಡ್ಡವ; ಬಾಂಧವ: ಸಂಬಂಧಿಕ; ಧರಣಿಪಾಲ: ರಾಜ; ಧರಣಿ: ಭೂಮಿ; ಸಪರಿವಾರ: ಪರಿಜನ; ಬರವ: ಆಗಮನ; ಕಂಡು: ನೋಡು; ತಮ್ಮ: ಅನುಜ; ಹರಿಬ: ಕಷ್ಟ, ತೊಂದರೆ; ಮರಳು: ಹಿಂದಿರುಗು; ಇದಿರು: ಎದುರು; ಅಮರ: ದೇವತೆ; ಅಮರಾರಿ: ದೇವತೆಗಳ ವೈರಿ, ರಾಕ್ಷಸ;

ಪದವಿಂಗಡಣೆ:
ಅರಸ +ಕೇಳ್+ಅಂದ್+ಏಕ ಚಕ್ರದೊಳ್
ಒರಸಿದನಲ್+ಆ+ ಭೀಮನ್+ಆತಗೆ
ಹಿರಿಯನ್+ಈ+ ಕಿಮ್ಮೀರ+ ಬಾಂಧವನಾ+ ಹಿಡಿಂಬಕಗೆ
ಧರಣಿಪಾಲನ +ಸಪರಿವಾರದ
ಬರವ +ಕಂಡನು +ತನ್ನ +ತಮ್ಮನ
ಹರಿಬವನು +ಮರಳಿಚುವೆನ್+ಎನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳಲು – ಒರಸಿದ ಪದದ ಬಳಕೆ
(೨) ಅರಸ, ಧರಣಿಪಾಲ – ಸಮನಾರ್ಥಕ ಪದ

ಪದ್ಯ ೧೧: ತಾರಕನ ಮಕ್ಕಳ ಪ್ರಭಾವ ಹೇಗಿತ್ತು?

ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರು ಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ (ಕರ್ಣ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ತಾರಕನ ಮಕ್ಕಳು ದೇವೇಂದ್ರನ ಭಂಡಾರವನ್ನು ಕೊಳ್ಳೆಹೊಡೆದು ಅವನ ಹೆಂಡತಿಯನ್ನು ವಶಕ್ಕೆ ಪಡೆದರು. ದೇವತಾ ಸ್ತ್ರೀಯರನೆಲ್ಲಾ ರಾಕ್ಷಸರ ಮನೆಗಳ ದಾಸಿಗಳಾದರು. ಮೂರು ಲೋಕಗಳಲ್ಲಿ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಗಳ ಮಾತನ್ನು ಮೀರಿ ಬದುಕುವವರೇ ಇಲ್ಲದಂತಾಯಿತು. ಸಮಸ್ತ ಜಗತ್ತೂ ಅವರ ಕೈವಶವಾಯಿತು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ಸುರಪತಿ: ದೇವತೆಗಳ ಒಡೆಯ (ಇಂದ್ರ); ಭಂಡಾರ: ಖಜಾನೆ; ಹೆಂಡಿರು: ಹೆಂಗಸರು; ಸಹಿತ: ಜೊತೆ, ಎಲ್ಲರೂ; ನಿರ್ಜರ: ದೇವತೆ; ನಾರಿ: ಸ್ತ್ರೀ; ತೊತ್ತು: ದಾಸಿ, ಸೇವಕಿ; ಅಮರ: ದೇವತೆ; ಅರಿ: ವೈರಿ; ಅಮರಾರಿ: ದನುಜರು; ಮನೆ: ಆಲಯ; ಮೂರು: ತ್ರಿ; ಭುವನ: ಜಗತ್ತು, ಪ್ರಪಂಚ; ಆಣೆ: ಪ್ರಮಾಣ, ಮಾತು; ಮೀರಿ: ದಾಟಿ; ಬದುಕು: ಜೀವಿಸು; ಕಡೆ: ಕೊನೆ; ಮಕ್ಕಳು: ಸುತರು; ಕೈವರ್ತಿಸು: ಕೈವಶ; ಜಗ: ಜಗತ್ತು;

ಪದವಿಂಗಡಣೆ:
ಸೂರೆವೋಯಿತು +ಸುರಪತಿಯ+ ಭಂ
ಡಾರ +ಹೆಂಡಿರು +ಸಹಿತ+ ನಿರ್ಜರ
ನಾರಿಯರು+ ತೊತ್ತಾದರ್+ಅಮರಾರಿಗಳ+ ಮನೆಗಳಿಗೆ
ಮೂರು +ಭುವನದೊಳ್+ಇವದಿರ್+ಆಣೆಯ
ಮೀರಿ +ಬದುಕುವರಿಲ್ಲ+ ಕಡೆಯಲಿ
ತಾರಕನ+ ಮಕ್ಕಳಿಗೆ +ಕೈವರ್ತಿಸಿತು +ಜಗವೆಂದ

ಅಚ್ಚರಿ:
(೧) ಅಪ್ಸರೆ ಎಂದು ಹೇಳಲು ಬಳಸಿದ ಪದ – ನಿರ್ಜರನಾರಿ
(೨) ದನುಜರೆಂದು ಹೇಳಲು ಬಳಸಿದ ಪದ – ಅಮರಾರಿ

ಪದ್ಯ ೩೧: ಭೀಮನ ಕೂಗನ್ನು ಕೇಳಿದ ದೈತ್ಯ ಏನೆಂದು ಯೋಚಿಸಿದ?

ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡ ಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರ ಪಾರ್ವರ
ಹಿಂಡುವೆನು ಇವಸಹಿತೆನುತ ಹಲುಮೊರೆದನಮರಾರಿ (ಆದಿ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನ ಜೋರಿನ ಕೂಗು “ಎಲವೋ ಕುನ್ನಿ, ಕೂಳಿದೆ ತಿನ್ನುಬಾ” ಎಂದು ಕೇಳಿದ ಕೂಡಲೆ ಆ ರಾಕ್ಷಸ ಬೆರಗಾದ, ಯಾರು ಈತ? ಇವನ ಉದ್ದಟತನವು ಅಚ್ಚರಿಮೂಡಿಸುವಂತದಾಗಿದೆ, ಹರಿ ಹರ ಮೊದಲಾದವರು ಹೆದರುತ್ತಾರೆ, ಅಂತದರಲ್ಲಿ ಈ ಮಾನವ? ಈ ಬಂಡಿ ತುಂಬಿದ ಕೂಳನ್ನು ಇವನು ತಿಂದು ಬದುಕಲಿ,ಇವನನ್ನು ಮತ್ತು ಈ ಊರಿನ ಹಾರುವರು ಸಹಿತ ಎಲ್ಲರನ್ನೂ ಸಂಹರಿಸುತ್ತೇನೆ, ಎಂದನು.

ಅರ್ಥ:
ಕಂಡು: ನೋಡಿ; ಖಳ: ದುಷ್ಟ; ಬೆರಗಾಗು: ಆಶ್ಚರ್ಯ; ಉದ್ದಂಡ: ಗರ್ವ, ದರ್ಪ; ಅಚ್ಚರಿ: ಬೆರಗು; ಹರಿ: ವಿಷ್ಣು; ಖಂಡ: ಗುಂಪು, ಸಮೂಹ; ಪರಶು: ಕೊಡಲಿ, ಕೊಠಾರಿ;ಅಳುಕು: ಭಯ; ತೊಡಕು: ಸಿಲುಕಿಕೊಳ್ಳು, ಸಿಕ್ಕಾಗು; ಬಂಡಿ: ಗಾಡಿ; ಕೂಳು: ಅನ್ನ,ಆಹಾರ; ಉಂಡು: ತಿಂದು; ಬದುಕು: ಜೀವಿಸು; ಪಾರ್ವ: ಬ್ರಹ್ಮಜ್ಞಾನಿ, ಬ್ರಾಹ್ಮಣ; ಹಿಂಡು: ಹಿಸುಕು, ನುಲಿಚು; ಸಹಿತ: ಜೊತೆ; ಹಲುಮೊರೆ: ಹಲ್ಲನ್ನು ಕಡಿ; ಅಮರ: ದೇವತೆ; ಅರಿ: ವೈರಿ; ಅಮರಾರಿ: ದಾನವ;

ಪದವಿಂಗಡನೆ:
ಕಂಡು +ಖಳ +ಬೆರಗಾದನ್+ಇವನ್+
ಉದ್ದಂಡತನವ್+ಅಚ್ಚರಿಯಲಾ+ ಹರಿ
ಖಂಡ +ಪರಶುಗಳ್+ಅಳುಕುವರು+ ತನ್ನೊಡನೆ+ ತೊಡಕುವರೆ
ಬಂಡಿ +ತುಂಬಿದ +ಕೂಳನ್+ಇವನ್+
ಇಂದ್+ಉಂಡು+ ಬದುಕಲಿ+ ಊರ +ಪಾರ್ವರ
ಹಿಂಡುವೆನು+ ಇವ+ಸಹಿತ್+ಎನುತ +ಹಲುಮೊರೆದನ್+ಅಮರ+ಅರಿ

ಅಚ್ಚರಿ:
(೧) ದಾನವ ಎಂದು ವರ್ಣಿಸಲು ಅಮರಾರಿ ಪದದ ಪ್ರಯೋಗ
(೨) ಖಳ, ಅಮರಾರಿ – ಸಮಾನಾರ್ಥಕ ಪದ, ೧, ೬ ಸಾಲು
(೩) ಕಂಡು, ಉಂಡು, ಹಿಂಡು – ಪ್ರಾಸ ಪದಗಳು, ೧, ೫, ೬ ಸಾಲಿನ ಮೊದಲ ಪದ
(೪) ಬೆರಗು, ಅಚ್ಚರಿ – ಸಮಾನಾರ್ಥಕ ಪದ, ೧, ೨ ಸಾಲು
(೫) ಕೋಪಗೊಂಡ ಎಂದು ವರ್ಣಿಸಲು ಹಲುಮೊರೆದ ಪದದ ಪ್ರಯೋಗ