ಪದ್ಯ ೩೩: ನಾರಾಯಣಾಸ್ತ್ರದ ಪ್ರಭಾವ ಹೇಗಿತ್ತು?

ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ (ದ್ರೋಣ ಪರ್ವ, ೧೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮಹಾಶಬ್ದವಾಯಿತು. ಕೌರವಸೇನೆ ಹರ್ಷದಿಮ್ದ ಮೈಮರೆಯಿತು. ಕೃಷ್ಣಾದಿಗಳು ಕೈ ಮರೆತರು. ಶಸ್ತ್ರಗಳು ಕೆಳಬಿದ್ದವು. ಹೊಗೆಯ ತೆಕ್ಕೆಗಳು ಹಬ್ಬಿದವು. ಕಿಡಿಗಳು ಎತ್ತೆತ್ತಲೂ ಸಿಡಿಯುತ್ತಿದ್ದವು, ಉರಿಯು ಧಗಧಗಿಸುತ್ತಿತ್ತು. ನಾರಾಯಣಾಸ್ತ್ರವು ಪಾಂಡವ ಸೇನೆಯ ಮೇಲೆ ದಾಳಿಯಿಟ್ಟಿತು.

ಅರ್ಥ:
ಜಗ: ಪ್ರಪಂಚ; ಅಲುಗು: ಅಲ್ಲಾಡು; ಹುಯ್ಯಲು: ಅಳು; ಜಡಿ:ಬೆದರಿಕೆ, ಹೆದರಿಕೆ; ಅಭ್ರ: ಆಗಸ; ಹರುಷ: ಸಂತಸ; ಸೊಗಸು: ಚೆಂದ; ಮೈಮರೆ: ಎಚ್ಚರತಪ್ಪು; ಕೈ: ಹಸ್ತ; ಮರೆ: ನೆನಪಿನಿಂದ ದೂರವಾಗು; ಹೊಗೆ: ಧೂಮ; ಹೊರಳಿ: ಗುಂಪು, ಸಮೂಹ; ಕಿಡಿ: ಬೆಂಕಿ; ಥಟ್ಟು: ಗುಂಪು; ತಗೆ: ಹೊರತರು; ಉರಿ: ಬೆಂಕಿ; ತೆಕ್ಕೆ: ಗುಂಪು, ಸಮೂಹ; ಧಗ: ಬೆಂಕಿಯ ತೀವ್ರತೆಯನ್ನು ತೋರುವ ಶಬ್ದ; ಧಾಳಿ: ಆಕ್ರಮಣ; ಶರ: ಬಾಣ; ಅಹಿತ: ವೈರಿ; ಮೋಹರ: ಸೈನ್ಯ, ದಂಡು;

ಪದವಿಂಗಡಣೆ:
ಜಗದ +ಹುಯ್ಯಲು +ಜಡಿಯಲ್+ಅಭ್ರದ
ಲಗಿದು+ ಕೌರವಸೇನೆ +ಹರುಷದ
ಸೊಗಸಿನಲಿ +ಮೈಮರೆಯೆ +ಕೃಷ್ಣಾದಿಗಳು +ಕೈಮರೆಯೆ
ಹೊಗೆಯ +ಹೊರಳಿಯ +ಕಿಡಿಯ +ಥಟ್ಟಿನ
ತಗೆದುರಿಯ +ತೆಕ್ಕೆಯಲಿ +ಧಗಧಗ
ಧಗಿಸಿ +ಧಾಳಿಟ್ಟುದು +ಮಹಾಶರವ್+ಅಹಿತ+ಮೋಹರಕೆ

ಅಚ್ಚರಿ:
(೧) ಧಾಳಿಯಿಡುವ ಪರಿ – ಹೊಗೆಯ ಹೊರಳಿಯ ಕಿಡಿಯ ಥಟ್ಟಿನ ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ

ಪದ್ಯ ೪: ಸಾತ್ಯಕಿ ಭೂರಿಶ್ರವರ ಯುದ್ಧವನ್ನು ಯಾರು ಪ್ರಶಂಶಿಸಿದರು?

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ (ದ್ರೋಣ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಹಾಗಾದರೆ ಈ ಬಾಣಗಳ ರುಚಿಯನ್ನು ನೋಡು ಎನ್ನುತ್ತಾ ಸಾತ್ಯಕಿಯು ಆಕಾಶದ ತುಂಬ ಬಾಣಗಳನ್ನು ಬಿಟ್ಟನು. ಸೋಮದತ್ತನ ಮಗನಾದ ಭೂರಿಶ್ರವನು ಓಹೋ ಬಲಿತಿದ್ದಾನೆ, ಉಳಿದುಕೋ ಎನ್ನುತ್ತಾ ಬಾಣಗಲನ್ನು ಬಿಟ್ಟನು. ಬಾಣಗಳ ಓಡಾಟ ಹೆಚ್ಚಾಯಿತು. ಕೋಪದಿಂದ ಕಾದಾಡುತ್ತಿದ್ದ ಇಬ್ಬರ ಕಾಳಗವನ್ನು ದೇವ ದಾನವರಿಬ್ಬರ ಗುಂಪುಗಳು ಮೆಚ್ಚಿದವು.

ಅರ್ಥ:
ಕೊಳ್ಳು: ತೆಗೆದುಕೋ; ಅಭ್ರ: ಆಗಸ; ಕೋದು: ಸೇರಿಸು, ಪೋಣಿಸು; ಅಂಬು: ಬಾಣ; ಬಲು: ಬಹಳ; ಹಾಯ್ದು: ಮೇಲೆಬಿದ್ದು; ಮಝ: ಭಲೇ; ಕಡಿ: ಸೀಳು; ಸುತ: ಮಗ; ಕಾದು: ರಕ್ಷಣೆ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬೀದಿವರಿ: ಸುತ್ತಾಡು, ಅಲೆದಾಡು; ಬಲುಹು: ಬಹಳ; ಖತಿ: ಕೋಪ; ಕೈದು: ಆಯುಧ, ಶಸ್ತ್ರ; ಕೈದುಕಾರ: ಆಯುಧವನ್ನು ಧರಿಸಿದವ; ಮೆಚ್ಚಿಸು: ಪ್ರಶಂಶಿಸು; ಅಮರ: ದೇವತೆ: ಅಸುರ: ದಾನವ; ಆವಳಿ: ಗುಂಪು;

ಪದವಿಂಗಡಣೆ:
ಆದಡ್+ಇದ +ಕೊಳ್ಳೆನುತ +ಸಾತ್ಯಕಿ
ಕೋದನ್+ಅಭ್ರವನ್+ಅಂಬಿನಲಿ +ಬಲು
ಹಾದನೈ +ಮಝ +ಎನುತ +ಕಡಿದನು +ಸೋಮದತ್ತಸುತ
ಕಾದುಕೊಳ್ಳ್+ಎನುತ್+ಎಚ್ಚನ್+ಅಂಬಿನ
ಬೀದಿವರಿ +ಬಲುಹಾಯ್ತು +ಖತಿಯಲಿ
ಕೈದುಕಾರರು +ಮೆಚ್ಚಿಸಿದರ್+ಅಮರ+ಅಸುರ+ಆವಳಿಯ

ಅಚ್ಚರಿ:
(೧) ಭೂರಿಶ್ರವನ ಪರಿಚಯ – ಸೋಮದತ್ತಸುತ
(೨) ಅ ಕಾರದ ಪದಜೋಡಣೆ – ಮೆಚ್ಚಿಸಿದರಮರಾಸುರಾವಳಿಯ

ಪದ್ಯ ೪೩: ಅಭಿಮನ್ಯುವಿನ ಖಡ್ಗವು ಹೇಗೆ ಶೋಭಿಸಿತು?

ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತಸುತನ (ದ್ರೋಣ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶತ್ರುವೀರರಿಗೂ ಅಪ್ಸರೆಯರಿಗೂ ನಡೆಯುವ ವಿವಾಹ ಸಮಯದಲ್ಲಿ ಎರಚುವ ಬಿಳಿಯ ಅಕ್ಷತೆಗಳು ನಕ್ಷತ್ರದಂತೆ ತೋರಿ, ನಕ್ಷತ್ರದಿಂದ ತುಂಬಿದ ಆಗಸವೋ ಎಂಬಂತೆ ಶತ್ರುಸೈನ್ಯದ ಆನೆಗಳ ತಲೆಯ ಮುತ್ತುಗಳ ಸುತ್ತಲೂ ಸಿಡಿಯುತ್ತಿರಲು ಅಭಿಮನ್ಯುವಿನ ಖಡ್ಗವು ಶೋಭಿಸಿತು.

ಅರ್ಥ:
ವೈರಿ: ಶತ್ರು; ವೀರ: ಶೂರ; ಪ್ರತತಿ: ಗುಂಪು, ಸಮೂಹ; ಅಮರೀನಾರಿ: ದೇವಲೋಕದ ಅಪ್ಸರೆ; ವಿವಾಹ: ಮದುವೆ; ವಿಸ್ತಾರ: ವೈಶಾಲ್ಯ; ಸಮಯ: ಗಳಿಗೆ; ಸಿತ: ಬಿಳಿ; ಅಕ್ಷತೆ: ನಕ್ಷತ್ರ; ಆವಳಿ: ಸಾಲು; ತಾರಕಿ: ನಕ್ಷತ್ರ; ಎಸೆ: ತೋರು; ಅಭ್ರ: ಆಗಸ; ರಿಪು: ವೈರಿ; ವಾರಣ: ಆನೆ; ಮಸ್ತಕ: ತಲೆ; ಮುತ್ತು: ಬೆಲೆಬಾಳುವ ರತ್ನ; ಓರಣೆ: ಸಾಲು; ಒಪ್ಪು: ಅಂಗೀಕರಿಸು; ಖಡ್ಗ: ಕತ್ತಿ; ಸುರೇಂದ್ರ: ಇಂದ್ರ; ಸುತ: ಮಗ;

ಪದವಿಂಗಡಣೆ:
ವೈರಿ +ವೀರ+ಪ್ರತತಿಗ್+ಅಮರೀ
ನಾರಿಯರಿಗೆ +ವಿವಾಹವನು +ವಿ
ಸ್ತಾರಿಸುವ +ಸಮಯದೊಳಗಾಂತ+ ಸಿತ+ಅಕ್ಷತಾವಳಿಯ
ತಾರಕಿಗಳ್+ಎಸೆದ್+ಅಭ್ರವೆನೆ +ರಿಪು
ವಾರಣದ +ಮಸ್ತಕದ +ಮುತ್ತುಗಳ್
ಓರಣಿಸಲ್+ಒಪ್ಪಿದುದು +ಖಡ್ಗ+ ಸುರೇಂದ್ರ+ಸುತ+ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಸುರೇಂದ್ರಸುತಸುತ ಎಂದು ಕರೆದಿರುವುದು
(೨) ಶತ್ರುವನ್ನು ಸಾಯಿಸಿದ ಎಂದು ಹೇಳಲು ಮದುವೆಯ ಶುಭ ಸಂದರ್ಭವನ್ನು ಕಲ್ಪಿಸುವ ಪರಿ – ವೈರಿ ವೀರಪ್ರತತಿಗಮರೀನಾರಿಯರಿಗೆ ವಿವಾಹವನು

ಪದ್ಯ ೬: ಅಭಿಮನ್ಯುವಿನ ಯುದ್ಧವು ಯಾರನ್ನು ನಾಚಿಸಿತು?

ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿಪ ಕವಿ ಯಾರಿನ್ನು ಪಾರ್ಥ ಕುಮಾರನಾಹವವ (ದ್ರೋಣ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ರಥಗಳ ರಾಶಿಯನ್ನು ಕಂಡು ಮೇರುಪರ್ವತ ನಾಚಿತು, ಹಾರಿದ ತಲೆಗಳು ತುಂಬಿದುದರಿಂದ ಆಕಾಶ ನಾಚಿತು, ಹರಿದು ಕಡಲಾದ ರಕ್ತವು ಸಮುದ್ರದ ಬಿಂಕವನ್ನು ಬಿಡಿಸಿತು, ಅಬ್ಬಬ್ಬಾ ಶಿವ ಶಿವಾ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕರಿ ಯಾರು?

ಅರ್ಥ:
ಕೆಡೆ: ಬೀಳು, ಕುಸಿ; ರಥ: ಬಂಡಿ, ತೇರು; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಅಡಸು: ಬಿಗಿಯಾಗಿ ಒತ್ತು; ನಾಚಿಕೆ: ಲಜ್ಜೆ; ಅಭ್ರ: ಆಗಸ; ಇಡಿ: ಚಚ್ಚು, ಕುಟ್ಟು; ತಲೆ: ಶಿರ; ಬೀರು: ಒಗೆ, ಎಸೆ; ಭಂಗ: ಮುರಿಯುವಿಕೆ; ಅನುಪಮ: ಹೋಲಿಕೆಗೆ ಮೀರಿದ; ಅಂಬರ: ಆಗಸ; ಕಡಲು: ಸಾಗರ; ಅರುಣಾಂಬು: ಕೆಂಪಾದ ನೀರು (ರಕ್ತ); ಜಲಧಿ: ಸಾಗರ; ಬಿಡಿಸು: ತೊರೆ; ಬಿಂಕ: ಗರ್ವ, ಜಂಬ; ನುಡಿ: ಮಾತು; ಕವಿ: ಆವರಿಸು; ಕುಮಾರ: ಮಗ; ಆಹವ: ಯುದ್ಧ;

ಪದವಿಂಗಡಣೆ:
ಕೆಡೆದ +ರಥ +ಸಲೆ +ಕಾಂಚನ+ಅದ್ರಿಯನ್
ಅಡಸಿದವು +ನಾಚಿಕೆಯನ್+ಅಭ್ರದೊಳ್
ಇಡಿಯೆ +ತಲೆ +ಬೀರಿದವು +ಭಂಗವನ್+ಅನುಪಮ+ಅಂಬರಕೆ
ಕಡಲುವರಿವ್+ಅರುಣಾಂಬು +ಜಲಧಿಗೆ
ಬಿಡಿಸಿದವು+ ಬಿಂಕವನು +ಶಿವ +ಶಿವ
ನುಡಿಪ +ಕವಿ +ಯಾರಿನ್ನು +ಪಾರ್ಥ +ಕುಮಾರನ್+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ಕೆಡೆದ ರಥ ಸಲೆ ಕಾಂಚನಾದ್ರಿಯನಡಸಿದವು; ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ; ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು

ಪದ್ಯ ೯೨: ವಿಜಯಲಕ್ಷ್ಮಿ ಹೇಗೆ ತೋರುತ್ತಿದ್ದಳು?

ಧುರದ ಜಯಿಸಿರಿ ವೀರಭಟರಿಗೆ
ಸುರಿವ ಲಾಜಾವರುಷದಂತಿರೆ
ಸುರಿದ ಮುತ್ತುಗಳೆಸೆದವಭ್ರವಿಮಾನ ಭಾಗದಲಿ
ಕರಿಶಿರದ ಮುಕ್ತಾಳಿಯೊಪ್ಪಿದ
ವರ ವಿಜಯರೊಡಗೂಡಿ ಜಯವಧು
ವಿರದೆ ಪುಳಕಿತೆಯಾದಳೆನೆ ಚೆಲುವಾಯ್ತು ನಿಮಿಷದಲಿ (ಭೀಷ್ಮ ಪರ್ವ, ೪ ಸಂಧಿ, ೯೨ ಪದ್ಯ)

ತಾತ್ಪರ್ಯ:
ವಿಜಯಲಕ್ಷ್ಮಿಯು ವೀರರಾದ ಜೋದರ ಮೇಲೆ ಅರಳ ಮಳೆಗರೆದಳೋ ಎಂಬಮ್ತೆ ಆಕಾಶದಿಂದ ಮುತ್ತುಗಳುದುರಿದವು. ಅವು ಜೋದರ ಮೇಲೆ ಬೀಳಲು ವಿಜಯಲಕ್ಷ್ಮಿಯು ಯುದ್ಧ ವಿಜಯಿಗಳ ಸಂಗದಲ್ಲಿ ರೋಮಾಂಚನಗೊಂಡಳೋ ಎಂಬಂತೆ ಸುಂದರವಾಗಿ ಕಾಣುತ್ತಿತ್ತು.

ಅರ್ಥ:
ಧುರ: ಯುದ್ಧ, ಕಾಳಗ; ಜಯಿಸಿರಿ: ವಿಜಯಲಕ್ಷ್ಮಿ; ವೀರ: ಶೂರ; ಭಟ: ಸೈನಿಕ; ಸುರಿ: ಎರೆ; ಲಾಜ: ಬತ್ತದ ಅರಳು; ವರುಷ: ಮಳೆ; ಸುರಿ: ವರ್ಷಿಸು; ಮುತ್ತು: ಶ್ರೇಷ್ಠವಾದ ರತ್ನ; ಎಸೆ: ಶೋಭಿಸು; ಅಭ್ರ: ಆಗಸ; ವಿಮಾನ: ಪುಷ್ಪಕ, ದೇವತೆಗಳ ವಾಹನ; ಭಾಗ: ಅಂಶ, ಪಾಲು; ಕರಿ: ಆನೆ; ಶಿರ: ತಲೆ; ಮುಕ್ತಾಳಿ: ಮುತ್ತಿನ ಸಾಲು; ವರ: ಶ್ರೇಷ್ಠ; ಒಡಗೂಡು: ಜೊತೆಯಾಗು; ಜಯ: ವಿಜಯ, ಗೆಲುವು; ವಧು: ಹೆಣ್ಣು; ಜಯವಧು: ವಿಜಯಲಕ್ಷ್ಮಿ; ಪುಳಕು: ರೋಮಾಂಚನ; ಚೆಲುವು: ಅಂದ, ಸೊಬಗು; ನಿಮಿಷ: ಕ್ಷಣ;

ಪದವಿಂಗಡಣೆ:
ಧುರದ +ಜಯಿಸಿರಿ+ ವೀರ+ಭಟರಿಗೆ
ಸುರಿವ +ಲಾಜಾ+ವರುಷದಂತಿರೆ
ಸುರಿದ +ಮುತ್ತುಗಳ್+ಎಸೆದವ್+ಅಭ್ರ+ವಿಮಾನ +ಭಾಗದಲಿ
ಕರಿ+ಶಿರದ +ಮುಕ್ತಾಳಿ+ಒಪ್ಪಿದ
ವರ +ವಿಜಯರ್+ಒಡಗೂಡಿ +ಜಯವಧುವ್
ಇರದೆ +ಪುಳಕಿತೆಯಾದಳೆನೆ+ ಚೆಲುವಾಯ್ತು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಧುರದ ಜಯಿಸಿರಿ ವೀರಭಟರಿಗೆಸುರಿವ ಲಾಜಾವರುಷದಂತಿರೆ

ಪದ್ಯ ೯೧: ಶರನಿಧಿಗೆ ರತ್ನಾಕರನೆಂಬ ಬಿರುದು ಏಕೆ ಸಾರ್ಥಕವಾಯಿತು?

ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳೆಂದ (ಭೀಷ್ಮ ಪರ್ವ, ೪ ಸಂಧಿ, ೯೧ ಪದ್ಯ)

ತಾತ್ಪರ್ಯ:
ಜೋದರ ಬಾಣಗಳ ಹೊಡೆತದಿಂದ ಆನೆಗಳ ಮುಖಗಳಿಗೆ ಹೊಡೆತ ಬಿದ್ದು ಅಲ್ಲಿದ್ದ ಮುತ್ತುಗಳು ಆಕಾಶದಲ್ಲಿ ಕಂಡವು. ಬಾಣಗಳ ಮೊತ್ತದ ನಡುವೆ ಅವುಗಳು ಬೀಳಲು ಶರನಿಧಿಗೆ ರತ್ನಾಕರನೆಂಬ ಬಿರುದು ಸಾರ್ಥಕವಾಯಿತು.

ಅರ್ಥ:
ಅರರೆ: ಆಶ್ಚರ್ಯದ ಸಂಕೇತ; ಶರ: ಬಾಣ ಸಾಗರ: ಸಮುದ್ರ; ಜೋದ: ಯೋಧ; ಸರಳ: ಬಾಣ; ಹತಿ: ಪೆಟ್ಟು, ಹೊಡೆತ; ಅಚಲ: ಬೆಟ್ಟ; ಕರಿ: ಆನೆ; ಮಸ್ತಕ: ತಲೆ, ಶಿರ; ಒಡೆ: ಸೀಳು; ಕೆದರು: ಹರಡು; ಮೌಕ್ತಿಕ: ಮುತ್ತಿನ; ವ್ರಾತ: ಗುಂಪು; ಹರೆದು: ವ್ಯಾಪಿಸು; ತಾರಕಿ: ನಕ್ಷತ್ರ; ಅಭ್ರ: ಆಗಸ; ಉರುಳು: ಕೆಳಕ್ಕೆ ಬೀಳು; ರತ್ನಾಕರ: ಸಾಗರ; ಬಿರುದು: ಗೌರವ ಸೂಚಕ ಪದ; ಸಂದು: ಪಡೆದುದು; ಶರನಿಧಿ: ಸಮುದ್ರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರರೆ +ಶರ+ಸಾಗರದ+ ಜೋದರ
ಸರಳ+ಹತಿಯಲಿ +ಮಂದರಾಚಲ
ಕರಿಯ +ಮಸ್ತಕ+ಒಡೆದು +ಕೆದರಿತು +ಮೌಕ್ತಿಕ+ವ್ರಾತ
ಹರೆದು +ತಾರಗೆ+ಆದವ್+ಅಭ್ರದೊಳ್
ಉರುಳೆ +ರತ್ನಾಕರನ್+ಎನಿಪ್ಪ+ಆ
ಬಿರುದು +ಸಂದುದು +ಶರನಿಧಿಗೆ+ ಭೂಪಾಲ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಹರೆದು ತಾರಗೆಯಾದವಭ್ರದೊಳುರುಳೆ ರತ್ನಾಕರನೆನಿಪ್ಪಾಬಿರುದು ಸಂದುದು ಶರನಿಧಿಗೆ
(೨) ರತ್ನಾಕರ, ಶರನಿಧಿ, ಸಾಗರ – ಸಮನಾರ್ಥಕ ಪದ

ಪದ್ಯ ೮೮: ಸೂರ್ಯನೇಕೆ ಅಂಜಿದನು?

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ (ಭೀಷ್ಮ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ವಿಂಧ್ಯಾಚಲದೊಡನೆ ಯುದ್ಧಮಾಡಲು ಬಾಣಗಳು ಹೊಕ್ಕಿವೆಯೋ ಏನೋ ಎಂದು ಸೂರ್ಯನು ಭಯಗೊಂಡನು. ಬಾಣಗಳೋ, ಮೇಘವೃಕ್ಷದ ತುದಿಕೊಂಬೆಗಳೋ, ನೆಲಕ್ಕುರುಳುವ ತಲೆಗಳೋ ಆ ಮರದ ಹಣ್ಣುಗಳೋ ಎಂಬಂತೆ ತೋರಿತು.

ಅರ್ಥ:
ಎಲೆಲೆ: ಆಶ್ಚರ್ಯ ಸೂಚಿಸುವ ಪದ; ಅಚಲ: ಬೆಟ್ಟ; ಹರಿಬ: ಕಾಳಗ, ಯುದ್ಧ, ಕಾರ್ಯ; ಕಳ: ರಣರಂಗ; ಹೊಕ್ಕು: ಸೇರು; ಕಣೆ: ಬಾಣ; ನಳಿನಸಖ: ಕಮಲನ ಮಿತ್ರ (ಸೂರ್ಯ); ಅಂಜು: ಹೆದರು; ಕೋಪಾಟೋಪ: ಉಗ್ರವಾದ ಕೋಪ; ಅಭ್ರ: ಆಗಸ; ಅಲಗು: ಕತ್ತಿ, ಖಡ್ಗ; ಕಣೆ: ಬಾಣ; ಮೇಘ: ಮೋಡ; ತರು: ವೃಕ್ಷ; ತಳಿತ: ಚಿಗುರಿದ; ತುದಿ: ಅಗ್ರಭಾಗ; ಕೊಂಬು: ಟೊಂಗೆ, ಕೊಂಬೆ; ಬೀಳು: ಕುಸಿ; ತಲೆ: ಶಿರ; ಫಲ: ಹಣ್ಣು; ಸಮೂಹ: ಗುಂಪು; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಎಲೆಲೆ +ವಿಂಧ್ಯಾಚಲದ+ ಹರಿಬಕೆ
ಕಳನ +ಹೊಕ್ಕವೊ +ಕಣೆಗಳ್+ಎನುತಾ
ನಳಿನಸಖನ್+ಅಂಜಿದನು +ಕೋಪಾಟೋಪಕ್+ಅಭ್ರದಲಿ
ಅಲಗು+ಕಣೆಗಳೊ+ ಮೇಘ+ತರುವಿನ
ತಳಿತ+ ತುದಿ+ಕೊಂಬುಗಳೊ +ಬೀಳುವ
ತಲೆಗಳೋ +ತತ್ಫಲ+ಸಮೂಹವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ರೂಪದಕ ಪ್ರಯೋಗ – ವಿಂಧ್ಯಾಚಲದ ಹರಿಬಕೆ ಕಳನ ಹೊಕ್ಕವೊ ಕಣೆಗಳೆನುತಾನಳಿನಸಖನಂಜಿದನು

ಪದ್ಯ ೧೮: ಬಾಣಗಳನ್ನು ಹೇಗೆ ಬಿಡುತ್ತಿದ್ದರು?

ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನದ
ನಾಣೆಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ (ಭೀಷ್ಮ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೂಳು ಮುಸುಕಿದ್ದ ಸೂರ್ಯನನ್ನು ಮಸೆಯಲು ಬಂದ ಸಾಣೆಯೋ, ನಕ್ಷತ್ರ ರತ್ನಗಳಲ್ಲಿರುವ ಆಣಿಯನ್ನು ತೆಗೆಯಲು ಬ್ರಹ್ಮನು ಸೃಷ್ಟಿಸಿದ ಸಲಾಕೆಗಳೋ ಎಂಬಮ್ತೆ ಬಾಣಗಳು ತುಂಬಲು, ಆಕಾಶವೇ ಕಾಣಿಸಲಿಲ್ಲ. ದಿಕ್ಕುಗಳ ಅಂಚು ಮುಗಿಯುವಂತೆ ಬಾಣಗಳನ್ನು ಬಿಡುತ್ತಿದ್ದ ಬಿಲ್ಲುಗಾರರ ಜಾಣ್ಮೆಯನ್ನು ನೋಡಿ ಮಹಾ ಧನುರ್ಧರರು ನಾಚಿದರು.

ಅರ್ಥ:
ರೇಣು: ಧೂಳು, ಹುಡಿ; ಹತ್ತು: ಏರು; ರವಿ: ಸೂರ್ಯ; ಮಸೆ: ಹರಿತ, ಚೂಪು; ಸಾಣೆ: ಉಜ್ಜುವ ಕಲ್ಲು; ಭಗಣ: ಸಮೂಹ; ರತ್ನ: ಮಣಿ; ಆಣೆ: ಅಂಗಾಲಿನ ಗಂಟು; ಕಮಲಭವ: ಬ್ರಹ್ಮ; ಸೃಜಿಸು: ಹುಟ್ಟಿಸು, ನಿರ್ಮಿಸು; ಸಲಾಕೆ: ಈಟಿ, ಭರ್ಜಿ; ಕಾಣು: ತೋರು; ಅಭ್ರ:ಮೋಡ, ಆಕಾಶ; ಅಮಮ: ಅಬ್ಭಾ; ದಿಕ್ಕು: ದಿಶೆ; ಏಣು: ಅಂಚು, ಕೊನೆ; ಮುರಿ: ಸೀಳು; ಹೊಕ್ಕು: ಸೇರು; ಬಿಲುಜಾಣರು: ಬಿಲ್ಲುಗಾರ; ಉರವಣೆ: ಆತುರ, ಅವಸರ; ಲಜ್ಜಿಸು: ನಾಚಿಕೊಳ್ಳು; ಲೋಕ: ಜಗತ್ತು; ಧನುರ್ಧರ: ಬಿಲ್ಲುಗಾರ;

ಪದವಿಂಗಡಣೆ:
ರೇಣು +ಹತ್ತಿದ +ರವಿಯ +ಮಸೆಯಲು
ಸಾಣೆಗಿಕ್ಕಿತೊ +ಭಗಣ+ರತ್ನದನ್
ಆಣೆಗಳೆಯಲು +ಕಮಲಭವ +ಸೃಜಿಸಿದ +ಸಲಾಕೆಗಳೊ
ಕಾಣೆನ್+ಅಭ್ರವನ್+ಅಮಮ +ದಿಕ್ಕುಗಳ್
ಏಣು +ಮುರಿಯಲು +ಹೊಕ್ಕೆಸುವ+ ಬಿಲು
ಜಾಣರ್+ಉರವಣೆ +ಲಜ್ಜಿಸಿತು +ಲೋಕದ +ಧನುರ್ಧರರ

ಅಚ್ಚರಿ:
(೧) ಉಪಮಾನದ ಪ್ರಯೋಗ – ರೇಣು ಹತ್ತಿದ ರವಿಯ ಮಸೆಯಲು ಸಾಣೆಗಿಕ್ಕಿತೊ ಭಗಣರತ್ನದ
ನಾಣೆಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
(೨) ಸಾಣೆ, ಆಣೆ, ಕಾಣೆ – ಪ್ರಾಸ ಪದಗಳು

ಪದ್ಯ ೪೫: ದುರ್ಯೋಧನನ ಜೊತೆ ಯಾರು ಹೊರಟರು?

ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವು ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ (ಭೀಷ್ಮ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅವನೊಡನೆ ಧೃತರಾಷ್ಟ್ರನ ನೂರು ಮಕ್ಕಳು, ಕರ್ಣ, ಶಕುನಿ, ಜಯದ್ರಥ ಅವನ ಆಪ್ತರೂ ಆನೆ, ಕುದುರೆ ರಥಗಳನ್ನೇರಿ ಹೊರಟರು. ಛತ್ರ ಚಾಮರ ಧ್ವಜ ಝಲ್ಲರಿಗಳು ಮೇಲಕ್ಕೆತ್ತಿದವು. ಪ್ರಳಯಕಾಲದ ಸಮುದ್ರದಂತೆ ಅವನ ಸೈನ್ಯವು ಮುನ್ನಡೆಯಲು ದುರ್ಯೋಧನನು ಹಸ್ತಿನಪುರದಿಂದ ಹೊರಹೊಂಟನು.

ಅರ್ಥ:
ಒಡನೊಡನೆ: ಕೂಡಲೆ; ಕರಿ: ಆನೆ; ತುರಗ: ಅಶ್ವ; ಒಡನೆ: ಕೂಡಲೆ; ಹುಟ್ಟು: ಉದಯ; ಶತ: ನೂರು; ಕುಮಾರ: ಪುತ್ರ; ಗಡಣ: ಸಮೂಹ; ಆಪ್ತ: ಹತ್ತಿರದ; ಆದಿ: ಮುಂತಾದ; ಅಡಸು: ಮೇಲೆಬೀಳು; ಸೀಗುರಿ: ಚಾಮರ; ಅಭ್ರ: ಆಕಾಶ; ತುಡುಕು: ಹೋರಾಡು, ಸೆಣಸು; ಝಲ್ಲರಿ: ಕುಚ್ಚು; ಅಂತ್ಯ: ಕೊನೆ; ಕಡಲ: ಸಾಗರ; ಪಡೆ: ಸೈನ್ಯ; ನಡೆ: ಚಲಿಸು; ಹೊರವಂಟ: ತೆರಳು;

ಪದವಿಂಗಡಣೆ:
ಒಡನೊಡನೆ +ಕರಿ+ತುರಗವ್+ಏರಿದರ್
ಒಡನೆ +ಹುಟ್ಟಿದ +ಶತ+ಕುಮಾರರು
ಗಡಣದ್+ಆಪ್ತರು +ಕರ್ಣ +ಶಕುನಿ +ಜಯದ್ರಥಾದಿಗಳು
ಅಡಸಿದವು +ಸೀಗುರಿಗಳ್+ಅಭ್ರವ
ತುಡುಕಿದವು +ಝಲ್ಲರಿಗಳ್+ಅಂತ್ಯದ
ಕಡಲವೊಲು +ಪಡೆ +ನಡೆಯೆ +ಹಸ್ತಿನಪುರವ +ಹೊರವಂಟ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಡಸಿದವು ಸೀಗುರಿಗಳಭ್ರವ ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ

ಪದ್ಯ ೩೧: ಧರ್ಮಜನನ್ನು ಯಾರು ಮಾತನಾಡಿಸಿದರು?

ಹೋಗಲಿನ್ನೀ ನೀರುಗುಡಿದಿವ
ರಾಗುಹೋಗರಸುವೆನೆನುತ ಢಗೆ
ತಾಗಿದವನಿಪನಿಳಿದು ಹೊಕ್ಕನು ವಿಷಸರೋವರವ
ಬಾಗಿ ಮೊಗೆದನು ಜಲವನಭ್ರದೊ
ಳಾಗಲಾದುದು ರಭಸವೆಲೆ ಸಕ
ಲಾಗಮಜ್ಞಮಹೀಶ ಕೇಳೆಂದುದು ನಭೋನಿನದ (ಅರಣ್ಯ ಪರ್ವ, ೨೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹೋಗಲಿ, ಈ ನೀರನ್ನು ಕುಡಿದು ತಮ್ಮಂದಿರು ಆಗು ಹೋಗನ್ನು ಹುಡುಕೋಣವೆನ್ನುತ್ತಾ ಬಾಯಾರಿಕೆಯು ಏರಿದ ಧರ್ಮಜನು ವಿಷ ಸರೋವರವನ್ನು ಹೊಕ್ಕನು. ಕೆಳಕ್ಕೆ ಬಾಗಿ ನೀರನ್ನು ಮೊರೆಯಲು ಆಕಾಶವಾಣಿಯು ಸರ್ವಾಗಮಗಳನ್ನು ತಿಳಿದ ರಾಜನೇ ಕೇಳು ಎಂದಿತು.

ಅರ್ಥ:
ನೀರು: ಜಲ; ಕುಡಿ: ಪಾನಮಾಡು; ಆಗುಹೋಗು: ಸಾಧ್ಯಾಸಾಧ್ಯತೆ; ಅಸು: ಪ್ರಾಣ; ಢಗೆ: ಬಾಯಾರಿಕೆ; ತಾಗು: ಮುಟ್ಟು; ಅವನಿಪ: ರಾಜ; ಇಳಿ: ಕೆಳಕ್ಕೆ ಬಾಗು; ಹೊಕ್ಕು: ಸೇರು; ವಿಷ: ಗರಳ; ಸರೋವರ: ಸರಸಿ; ಬಾಗು: ಎರಗು; ಮೊಗೆ: ತುಂಬಿಕೊಳ್ಳು; ಜಲ: ನೀರು; ಅಭ್ರ: ಆಗಸ; ರಭಸ: ವೇಗ; ಸಕಲ: ಎಲ್ಲಾ; ಯಜ್ಞ: ಯಾಗ, ಯಜನ; ಮಹೀಶ: ರಾಜ; ನಭ: ಆಗಸ; ನಿನದ: ಶಬ್ದ;

ಪದವಿಂಗಡಣೆ:
ಹೋಗಲಿನ್+ಈ+ +ನೀರು+ಕುಡಿದ್
ಇವರ್+ಆಗುಹೋಗ್+ಅರಸುವೆನ್+ಎನುತ +ಢಗೆ
ತಾಗಿದ್+ಅವನಿಪನ್+ಇಳಿದು +ಹೊಕ್ಕನು +ವಿಷ+ಸರೋವರವ
ಬಾಗಿ +ಮೊಗೆದನು +ಜಲವನ್+ಅಭ್ರದೊಳ್
ಆಗಲಾದುದು +ರಭಸವ್+ಎಲೆ +ಸಕಲ
ಆಗಮಜ್ಞ+ಮಹೀಶ +ಕೇಳೆಂದುದು +ನಭೋ+ನಿನದ

ಅಚ್ಚರಿ:
(೧) ನೀರು, ಜಲ; ಅಭ್ರ, ನಭ – ಸಮನಾರ್ಥಕ ಪದ
(೨) ಧರ್ಮಜನನ್ನು ಸಕಲಾಗಮಜ್ಞ ಎಂದು ಕರೆದಿರುವುದು