ಪದ್ಯ ೧೧: ಅರ್ಜುನನ ದುಃಖವು ಯಾರನ್ನು ಹೆದರಿಸಿತು?

ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ (ದ್ರೋಣ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನ ದುಃಖವನ್ನು ಕಂಡು ಅಮರಾವತಿಯು ನಡುಗಿತು. ದೇವೇಂದ್ರನು ಶಿವನನ್ನು ನೆನೆದನು. ಯಮನ ಪಟ್ಟಣದಲ್ಲಿದ್ದವರು ಗುಳೆಕಿತ್ತು ಹೊರಹೊರಟರು. ಮೃತ್ಯುವು ಮಹೇಶ್ವರನ ಮರೆಹೊಕ್ಕಳು. ವೀರರು ಬೆದರಿದರು. ರಾಜರು ಅಪಾಯವಾಯಿತೆಂದರು. ಅರ್ಜುನನ ದುಃಖವು ತ್ರಿಲೋಕವನ್ನು ಹೆದರಿಸಿತು.

ಅರ್ಥ:
ಸುರನಗರಿ: ಅಮರಾವತಿ; ನಡುಗು: ಅಲ್ಲಾಡು; ಸುರಪತಿ: ಇಂದ್ರ; ಹರ: ಶಿವ; ನೆನೆ: ಜ್ಞಾಪಿಸು; ಯಮ: ಜವ; ಪಟ್ಟಣ: ಊರು; ಸರಕು: ಸಾಮಾನು, ಸಾಮಗ್ರಿ; ತೆಗೆ: ಹೊರತರು; ಮೃತ್ಯು: ಮರಣ; ಮರೆ: ನೆನಪಿನಿಂದ ದೂರ ಮಾಡು; ಹೊಕ್ಕು: ಸೇರು; ಮಹೇಶ್ವರ: ಶಿವ; ಬಿರುದು: ಗೌರವ ಸೂಚಕ ಪದ; ಅಂಜು: ಹೆದರು; ದೇಶ: ರಾಷ್ಟ್ರ; ಧರಣಿಪತಿ: ರಾಜ; ಅಪಾಯ: ತೊಂದರೆ; ನರ: ಅರ್ಜುನ; ಕಡು: ಬಹಳ; ದುಮ್ಮಾನ: ದುಃಖ; ನೆರೆ: ಸೇರು, ಪಕ್ಕ; ಹೆದರಿಕೆ: ಅಂಜಿಕೆ; ಮೂಜಗ: ತ್ರಿಲೋಕ;

ಪದವಿಂಗಡಣೆ:
ಸುರನಗರಿ+ ನಡುಗಿತ್ತು +ಸುರಪತಿ
ಹರನ +ನೆನೆದನು +ಯಮನ +ಪಟ್ಟಣ
ಸರಕು+ತೆಗೆಯಿತು +ಮೃತ್ಯು +ಮರೆಹೊಕ್ಕಳು +ಮಹೇಶ್ವರನ
ಬಿರುದರ್+ಅಂಜಿತು +ದೇಶದೇಶದ
ಧರಣಿಪತಿಗಳ್+ಅಪಾಯವಾಯ್ತೆನೆ
ನರನ +ಕಡು +ದುಮ್ಮಾನ +ನೆರೆ +ಹೆದರಿಸಿತು +ಮೂಜಗವ

ಅಚ್ಚರಿ:
(೧) ಸುರನಗರಿ, ಸುರಪತಿ – ಸುರ ಪದದ ಬಳಕೆ;
(೨) ಮೃತ್ಯುವು ಕೂಡ ಅರ್ಜುನನಿಗೆ ಹೆದರಿದಳು ಎಂದು ಹೇಳುವ ಪರಿ – ಮೃತ್ಯು ಮರೆಹೊಕ್ಕಳು ಮಹೇಶ್ವರನ

ಪದ್ಯ ೬೦: ಮಹಾಂಕುಶಕ್ಕೆ ಯಾರು ಅಡ್ಡ ಬಂದರು?

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು (ದ್ರೋಣ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರಾ, ಈ ಮಹ ಅಂಕುಶವು ಎಷ್ಟರದು! ಕೃಷ್ಣಭಕ್ತರು ಎಷ್ಟು ಅಪಾಯಗಳನ್ನು ತಪ್ಪಿಸಿಕೊಂಡು ಬದುಕುವುದಿಲ್ಲ ಉರಿಕೆಂಡವು ಒರಲೆಯ ಬಾಯಿಗೆ ದಕ್ಕೀತೇ? ಕಿಡಿಯ ತೆಕ್ಕೆಗಳು, ಹೊಗೆಯ ಹೊರಳಿಗಳಿಂದ ಸುತ್ತುವರಿದು ಬರುತ್ತಿದ್ದ ಆ ಮಹಾಂಕುಶಕ್ಕೆ ಅಡ್ಡಬಂದು ಶ್ರೀಕೃಷ್ಣನು ತನ್ನ ಎದೆಯನ್ನು ಚಾಚಿದನು.

ಅರ್ಥ:
ಪಾಡು: ಸ್ಥಿತಿ; ಏಸು: ಎಷ್ಟು; ಅಪಾಯ: ತೊಂದರೆ; ಒದೆ: ತುಳಿ, ಮೆಟ್ಟು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಸದರ: ಸಲಿಗೆ, ಸಸಾರ; ಉರಿ: ಬೆಂಕಿ; ಕೆಂಡ: ಇಂಗಳ; ಒರಲು: ಅರಚು, ಕೂಗಿಕೊಳ್ಳು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಹೊಗೆ: ಧೂಮ; ಹೇರಾಳ: ದೊಡ್ಡ, ವಿಶೇಷ; ಬಹ: ಬಹಳ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ಚಾಚು: ಹರಡು; ವಕ್ಷ: ಹೃದಯ; ಸ್ಥಳ: ಜಾಗ; ಅಸುರಾರಾತಿ: ಕೃಷ್ಣ; ಅಡಹಾಯ್ದು: ಅಡ್ಡಬಂದು; ಹಾಯ್ದು: ಹೋರಾಡು; ಹಾಯ್ದ: ಮೇಲೆಬಿದ್ದು;

ಪದವಿಂಗಡಣೆ:
ಇದರ+ ಪಾಡೇನ್+ಏ‍ಸ್+ಅಪಾಯವನ್
ಒದೆದು +ಕಳೆಯರು +ಕೃಷ್ಣ+ಭಕ್ತರು
ಸದರವೇ+ ಉರಿ+ಕೆಂಡವ್+ಒರಲೆಯ +ಬಾಯ್ಗೆ +ಭಾವಿಸಲು
ಹೊದರು+ಕಿಡಿಗಳ+ ಹೊಗೆಯ+ ಹೇರಾ
ಳದಲಿ+ ಬಹ+ ದಿವ್ಯಾಯುಧಕೆ+ ಚಾ
ಚಿದನು+ ವಕ್ಷಸ್ಥಳವನ್+ಅಸುರ+ಅರಾತಿ+ಅಡಹಾಯ್ದು

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು
(೨) ಕೃಷ್ಣನು ರಕ್ಷಿಸುವ ಪರಿ – ಹೇರಾಳದಲಿ ಬಹ ದಿವ್ಯಾಯುಧಕೆ ಚಾಚಿದನು ವಕ್ಷಸ್ಥಳವನಸುರಾರಾತಿ

ಪದ್ಯ ೩೯: ಧರ್ಮಜನು ಭೀಮನನ್ನು ಹೇಗೆ ವಿಚಾರಿಸಿದನು?

ಏನು ಕುಂತೀಸುತನಪಾಯವ
ದೇನು ಫಣಿ ಬಂಧದ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವಶಿವಯೆನುತ ನುಡಿಸಿದನನಿಲ ನಂದನನ (ಅರಣ್ಯ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ, ಏನು ಭೀಮ ಇದೇನು ಅಪಾಯಕ್ಕೆ ಸಿಲುಕಿದೆ, ಹಾವಿನ ಹಿಡಿತದಲ್ಲಿ ವಿನೋದದಿಂದ ಸಿಕ್ಕಿದೆಯೋ, ಮನುಷ್ಯರ ಬಲವನ್ನಡಗಿಸುವ ವಿಧಿಯ ಲೀಲೆಯೋ? ನಮಗಿಂತಹ ಹೀನದೆಸೆ ಬರಲು ಕಾರಣವೇನು? ಯಾವ ಪಾಪದಿಂದ ನಿನಗೀ ಗತಿಯು ಬಂದಿತು ಎಂದು ಭೀಮನನ್ನು ಕೇಳಿದನು.

ಅರ್ಥ:
ಸುತ: ಮಗ; ಅಪಾಯ: ತೊಂದರೆ; ಫಣಿ: ಹಾವು; ಬಂಧ: ಕಟ್ಟು, ಪಾಶ; ವಿಧಾನ: ರೀತಿ; ವಿನೋದ: ಸಂತಸ; ತ್ರಾಣಾಪಚಯ: ಶಕ್ತಿಕುಂದುವಿಕೆ; ವಿಧಿ: ನಿಯಮ; ಕರ್ತವ್ಯ: ಕಾಯಕ, ಕೆಲಸ; ಹೀನ: ಅಲ್ಪ, ಕ್ಷುದ್ರ; ದೆಸೆ: ಸ್ಥಿತಿ; ನಿಮಿತ್ತ: ನೆಪ, ಕಾರಣ; ದುಷ್ಕೃತ: ಕೆಟ್ಟ ಕೆಲಸ; ನುಡಿಸು: ಮಾತಾಡಿಸು; ಅನಿಲನಂದನ: ವಾಯುಪುತ್ರ (ಭೀಮ);

ಪದವಿಂಗಡಣೆ:
ಏನು +ಕುಂತೀಸುತನ್+ಅಪಾಯವದ್
ಏನು+ ಫಣಿ +ಬಂಧದ +ವಿಧಾನವ್
ಇದೇನು +ನಿನಗೆ +ವಿನೋದವೋ +ತ್ರಾಣಾಪಚಯ+ ವಿಧಿಯೊ
ಏನಿದಕೆ+ ಕರ್ತವ್ಯ +ನಮಗೀ
ಹೀನ +ದೆಸೆಗೆ +ನಿಮಿತ್ತ +ದುಷ್ಕೃತ
ವೇನು+ ಶಿವಶಿವಯೆನುತ +ನುಡಿಸಿದನ್+ಅನಿಲನಂದನನ

ಅಚ್ಚರಿ:
(೧) ಕುಂತೀಸುತ, ಅನಿಲನಂದನ – ಭೀಮನನ್ನು ಕರೆದ ಪರಿ
(೨) ಭೀಮನ ಬಲದ ಬಗ್ಗೆ ಹೇಳುವ ಪರಿ – ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ

ಪದ್ಯ ೬: ಯಾರು ಗುರು ಎಂದು ವಿದುರ ಹೇಳಿದನು?

ಒಂದು ವರ್ಣವನರುಹಿದವ ಗುರು
ವೊಂದಪಾಯದೊಳುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮ ಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲಯೋನಿಯೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಒಂದು ಅಕ್ಷರ ನಮಗೆ ಹೇಳಿಕೊಟ್ಟವರು ಗುರು, ಯಾವುದಾದೊಂದಪಾಯದಿಂದ ರಕ್ಷಿಸಿದವನು ಗುರು, ರಣರಂಗದಲ್ಲಿ ರಕ್ಷಿಸಿದವನು ಶ್ರೇಷ್ಠಗುರುವು, ಯಾವುದೋ ಒಂದೆರಡು ಮೂರು ಸಂದರ್ಭದಲ್ಲಿ ತಾನೆ ಅವನು ಸಹಾಯಮಾಡಿದ್ದು ಅವನೇನು ಮಹಾ ಎಂದು ಯಾರಾದರೂ ಗರ್ವ ಪಟ್ಟರೆ ಅಂತಹವರು ಚಾಂಡಾಲಯೋನಿಯಲ್ಲಿ ಹುಟ್ಟುತ್ತಾರೆ.

ಅರ್ಥ:
ಒಂದು: ಏಕ; ವರ್ಣ: ಅಕ್ಷರ; ಅರುಹು:ತಿಳಿಸು; ಗುರು: ಆಚಾರ್ಯ; ಅಪಾಯ: ವಿಪತ್ತು, ಕೇಡು; ಅಳುಹು: ಬಯಸು, ಅಪೇಕ್ಷಿಸು, ರಕ್ಷಿಸು; ವಿಗ್ರಹ: ಯುದ್ಧ; ರಕ್ಷಿಸು: ಕಾಪಾಡು; ಪರಮ: ಶ್ರೇಷ್ಠ; ಗರ್ವ: ಅಹಂಕಾರ, ದರ್ಪ; ಚಾಂಡಾಲ: ದುಷ್ಟ, ಕ್ರೂರ ಕೆಲಸ ಮಾಡುವವ; ಯೋನಿ:ಗರ್ಭಕೋಶ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಒಂದು+ ವರ್ಣವನ್+ಅರುಹಿದವ +ಗುರು
ವೊಂದ್+ಅಪಾಯದೊಳ್+ಉಳುಹಿದವ+ ಗುರು
ಬಂದ +ವಿಗ್ರಹದೊಳಗೆ+ ರಕ್ಷಿಸಿದಾತ +ಪರಮ+ ಗುರು
ಒಂದೆರಡು +ಮೂರೈಸಲೇ +ತಾ
ನೆಂದು +ಗರ್ವೀಕರಿಸಿದವರುಗ
ಳೊಂದುವರು +ಚಾಂಡಾಲಯೋನಿಯೊಳ್+ಅರಸ+ ಕೇಳೆಂದ

ಅಚ್ಚರಿ:
(೧) ಗುರು – ಮೊದಲ ಮೂರು ಸಾಲಿನ ಕೊನೆ ಪದ