ಪದ್ಯ ೩: ದುರ್ಯೋಧನನು ಬಿದ್ದ ಸಮಯದಲ್ಲಿ ಏನೇನಾಯಿತು?

ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದವು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ (ಗದಾ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಭೂಮಿಗೆ ಯಾವ ಪೆಟ್ಟೂ ಬೀಳದಿದ್ದರೂ ನಡುಗಿತು. ಬರಸಿಡಿಲು ಹೊಡೆಯಿತು. ನೆಣ ಮಜ್ಜೆಗಳೊಡನೆ ಮಾಂಸ ಖಂಡಗಳ ಮಳೆಯಾಯಿತು. ರಕ್ತದ ತೊರೆ ಹರಿಯಿತು. ಬಂಡೆಗಲ್ಲುಗಳು ಸಿಡಿದವು. ಕೆರೆಗಳು ಉಕ್ಕಿದವು. ಗಾಳಿ ಬೀಸದಿದ್ದರೂ ದೊಡ್ಡಮರಗಳು ಉರುಳಿ ಬಿದ್ದವು.

ಅರ್ಥ:
ನಡುಗು: ಕಂಪನ, ಅದುರು; ಇಳೆ: ಭೂಮಿ; ಘಾತ: ಹೊಡೆತ, ಪೆಟ್ಟು; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು; ಸುಳಿ: ತಿರುಗುಣಿ; ನೆಣ: ಕೊಬ್ಬು, ಮೇದಸ್ಸು; ಬಸೆ: ಕೊಬ್ಬು; ಸಹಿತ: ಜೊತೆ; ಅಡಗು: ಮಾಂಸ; ಸುರಿ: ವರ್ಷಿಸು; ಕದಡು: ಕಲಕು; ಹರಿ: ಹರಡು, ಹಬ್ಬು; ರಕುತ: ನೆತ್ತರು; ಸಿಡಿ: ಸ್ಫೋಟ; ಅರೆ: ಬಂಡೆ; ಕೆರೆ: ಜಲಾಶಯ; ಉಕ್ಕು: ಹೆಚ್ಚಾಗು; ಅಡಿಗಡಿ: ಹೆಜ್ಜೆ ಹೆಜ್ಜೆ; ಹೆಮ್ಮರ: ದೊಡ್ಡ ಮರ; ನಿವಾತ: ವಾಯುರಹಿತವಾದ ಸ್ಥಳ; ಉಡಿ: ಮುರಿ; ಬಿದ್ದು: ಬೀಳು; ಪತನ: ಕೆಳಗೆ ಬೀಳುವಿಕೆ; ಕಾಲ: ಸಮಯ;

ಪದವಿಂಗಡಣೆ:
ನಡುಗಿತ್+ಇಳೆ +ನಿರ್ಘಾತದಲಿ +ಬರ
ಸಿಡಿಲು +ಸುಳಿದುದು +ನೆಣನ +ಬಸೆ+ಸಹಿತ್
ಅಡಗು +ಸುರಿದವು +ಕದಡಿ +ಹರಿದುದು +ರಕುತದರೆವೊನಲು
ಸಿಡಿದವ್+ಅರೆಗಳು +ಕೆರೆಗಳ್+ಉಕ್ಕಿದವ್
ಅಡಿಗಡಿಗೆ +ಹೆಮ್ಮರ+ ನಿವಾತದಲ್
ಉಡಿದು +ಬಿದ್ದವು+ ಕೌರವೇಂದ್ರನ+ ಪತನ +ಕಾಲದಲಿ

ಅಚ್ಚರಿ:
(೧) ಅದ್ಭುತಗಳನ್ನು ವಿವರಿಸುವ ಪರಿ – ನಡುಗಿತಿಳೆ ನಿರ್ಘಾತದಲಿ, ಹೆಮ್ಮರ ನಿವಾತದಲುಡಿದು ಬಿದ್ದವು

ಪದ್ಯ ೧೬: ಸಮಸಪ್ತಕರು ಭೀಮಾರ್ಜುನರಿಗೆ ಏನು ಹೇಳಿದರು?

ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ (ಗದಾ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆಗ ಸಮಸಪ್ತಕರು ಸೇನೆಯೊಡನೆ ಸುಶರ್ಮನು ಅರ್ಜುನನನ್ನು ನಿಲ್ಲಿಸಿ ಛೇ ಇದು ಯಾವ ರೀತಿಯ ಮಾತು, ಕೌರವನು ಬಚ್ಚಿಟ್ಟುಕೊಳ್ಳುವವನೇ? ಸುಳ್ಳು, ನಿನ್ನನ್ನು ಸಾಯಿಸಿ ನಿನ್ನ ಮಾಂಸವನ್ನು ಬೇತಾಳರಿಗೆ ಉಣಿಸದೆ ಆತ ಬಿಡುವನೇ? ನೀನೇನು ಮಂಗಳಪಾಥಕನೇ? ಇನ್ನೊಬ್ಬರನ್ನು ಹೀಗಳೆದರೆ ಏನು ಫಲ ಎಂದು ಕೇಳಿದನು.

ಅರ್ಥ:
ಫಡ: ತಿರಸ್ಕಾರದ ಮಾತು; ಅಡಗು: ಬಚ್ಚಿಟ್ಟುಕೋ; ಅಡಗು: ಮಾಂಸ; ತರಿ: ಸೀಳು; ಉಣಬಡಿಸು: ಊಟಕ್ಕೆ ಇಡು; ವೇತಾಳ: ಬೇತಾಳ, ದೆವ್ವ; ಗಡಬಡಿ: ಆತುರ; ಪರರ: ಬೇರೆಯವರ; ಉನ್ನತಿ: ಏಳಿಗೆ; ಕೆಡೆ: ಬೀಳು, ಕುಸಿ; ನುಡಿ: ಮಾತಾಡು; ಫಲ: ಪ್ರಯೋಜನ; ತಡೆ: ನಿಲ್ಲಿಸು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧಕ್ಕೆ ಬಂದವರು; ದಳ: ಸೈನ್ಯ; ಸಹಿತ: ಜೊತೆ; ವೈತಾಳಿಕ: ಹೊಗಳುಭಟ್ಟ;

ಪದವಿಂಗಡಣೆ:
ಫಡ +ಫಡ+ಎಲವೋ +ಪಾರ್ಥ +ಕುರುಪತಿ
ಅಡಗುವನೆ +ನಿನ್ನ್+ಅಡಗ +ತರಿದ್+ಉಣ
ಬಡಿಸನೇ +ವೇತಾಳರಿಗೆ+ ವೈತಾಳಿಕನೆ+ ನೀನು
ಗಡಬಡಿಸಿ +ಪರರ್+ಉನ್ನತಿಯ +ಕೆಡೆ
ನುಡಿದು +ಫಲವೇನ್+ಎನುತ +ಪಾರ್ಥನ
ತಡೆದನ್+ಅಂದು +ಸುಶರ್ಮ +ಸಮಸಪ್ತಕರ+ ದಳ +ಸಹಿತ

ಅಚ್ಚರಿ:
(೧) ಅಡಗು, ಅಡಗ; ವೇತಾಳ ವೈತಾಳಿಕ – ಪದಗಳ ಬಳಕೆ
(೨) ದುರ್ಯೋಧನನನ್ನು ಹೊಗಳುವ ಪರಿ – ಕುರುಪತಿಯಡಗುವನೆ ನಿನ್ನಡಗ ತರಿದುಣಬಡಿಸನೇ ವೇತಾಳರಿಗೆ

ಪದ್ಯ ೨೦: ಅಮರಗಣವು ಏಕೆ ತಲ್ಲಣಗೊಂಡಿತು?

ಒಡೆಯರಿಲ್ಲಾ ಜಗಕೆ ಲೋಗರ
ಸುಡುವರೊಪ್ಪಿಸಿ ಕೊಡುವರೇ ನಾ
ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ
ನುಡಿಯರೀ ಹೊತ್ತಿನಲಿ ನಮಗಿ
ನ್ನೊಡೆಯರಾರಿನ್ನಾರ ಬಸುರೊಳ
ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ (ದ್ರೋಣ ಪರ್ವ, ೧೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ದೇವತಾಗಣವು, ಈ ಲೋಕಕ್ಕೆ ಒಡೆಯರೇ ಇಲ್ಲವೇ? ಲೋಕವನ್ನು ಸುಟ್ಟುಹಾಕುವವರ ಕೈಗೆ ಅದನ್ನೊಪ್ಪಿಸಬಹುದೇ? ಬ್ರಹ್ಮ ವಿಷ್ಣು ಮಹೇಶ್ವರರು ಲೋಕಕ್ಕೆ ನಾನು ಒಡೆಯ ತಾನು ಒಡೆಯ ಎಂದು ಹೇಳಿಕೊಳ್ಳುವರಲ್ಲಾ, ಈ ಹೊತ್ತಿನಲ್ಲಿ ಮಾತಾಡದೆ ಏಕೆ ಸುಮ್ಮನಿದ್ದಾರೆ? ಶಿವ ಶಿವ ನಾವೀಗ ಯಾರ ಹೊಟ್ಟೆಯಲ್ಲಿ ಅಡಗೋಣ ಎಂದು ತಲ್ಲಣಿಸಿತು.

ಅರ್ಥ:
ಒಡೆಯ: ನಾಯಕ; ಜಗ: ಪ್ರಪಂಚ; ಲೋಗ: ಮನುಷ್ಯ; ಸುಡು: ದಹಿಸು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜಗ: ಪ್ರಪಂಚ; ನುಡಿ: ಮಾತು; ಹೊತ್ತು: ಸಮಯ; ಬಸುರು: ಹೊಟ್ಟೆ; ಅಡಗು: ಅವಿತುಕೊಳ್ಳು; ತಲ್ಲಣ: ಅಂಜಿಕೆ, ಭಯ; ಅಮರ: ದೇವತೆ; ಗಣ: ಗುಂಪು;

ಪದವಿಂಗಡಣೆ:
ಒಡೆಯರಿಲ್ಲಾ +ಜಗಕೆ +ಲೋಗರ
ಸುಡುವರ್+ಒಪ್ಪಿಸಿ +ಕೊಡುವರೇ+ ನಾನ್
ಒಡೆಯ +ಫಡ +ತಾನ್+ಒಡೆಯರೆಂಬರು+ ಮೂವರೀ +ಜಗಕೆ
ನುಡಿಯರೀ +ಹೊತ್ತಿನಲಿ+ ನಮಗಿನ್
ಒಡೆಯರಾರ್+ಇನ್ನಾರ+ ಬಸುರೊಳಗ್
ಅಡಗುವೆವು +ಶಿವ +ಶಿವ +ಎನುತ +ತಲ್ಲಣಿಸಿತ್+ಅಮರಗಣ

ಅಚ್ಚರಿ:
(೧) ಒಡೆಯ – ೧, ೩, ೫ ಸಾಲಿನ ಮೊದಲ ಪದ

ಪದ್ಯ ೧೨: ಸಾತ್ಯಕಿಯು ಯುದ್ಧವನ್ನು ಹೇಗೆ ನಡೆಸಿದನು?

ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸೈಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ (ದ್ರೋಣ ಪರ್ವ, ೧೧ ಸಂಧಿ, ೧೨ ಪದ್ಯ
)

ತಾತ್ಪರ್ಯ:
ಅವರೆಲ್ಲರೂ ಹಿಡಿದ ಬಾಣಗಳನ್ನು ಸಾತ್ಯಕಿಯು ತುಂಡುಮಾಡಿದನು. ಅನೇಕ ರಾಜರ ಮೇಲೆ ಬಾಣಗಳನ್ನು ಬಿಟ್ಟು ಮಾಂಸಖಂಡವನ್ನು ಹೊರಗೆಡಹಿದನು. ಸಾತ್ಯಕಿಯೊಡನೆ ಯುದ್ಧಕ್ಕಿಳಿದ ಅನೇಕ ರಾಜರು ದೇವತೆಗಳ ವಿಮಾನವನ್ನೇರಿ ಸ್ವರ್ಗಕ್ಕೆ ಹೋದರು.

ಅರ್ಥ:
ಕಡಿ: ಸೀಳು; ಅನಿಬರ: ಅಷ್ಟುಜನ; ಕೈ: ಹಸ್ತ; ಕೋಲು: ಬಾಣ; ಅಡಗು: ಅವಿತುಕೊಳ್ಳು; ಅನೇಕ: ಬಹಳ; ಭೂಪ: ರಾಜ; ಗಡಣ: ಗುಂಪು; ಘಾಡಿಸು: ವ್ಯಾಪಿಸು; ಅಂಬು: ಬಾಣ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬವರ: ಯುದ್ಧ; ಹಿಡಿ: ಗ್ರಹಿಸು; ಭಟ: ಸೈನಿಕ; ಅಮರ: ದೇವ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಅಡರು: ಮೇಲಕ್ಕೆ ಹತ್ತು; ಕೊಂದು: ಕೊಲ್ಲು, ಸಾಯಿಸು; ಅಹಿತ: ವೈರಿ; ಮೋಹರ: ಯುದ್ಧ;

ಪದವಿಂಗಡಣೆ:
ಕಡಿದನ್+ಅನಿಬರ +ಕೈಯ +ಕೋಲ್ಗಳನ್
ಅಡಗುದರ್+ಇದನ್+ಅನೇಕ+ಭೂಪರ
ಗಡಣವನು +ಘಾಡಿಸಿದನ್+ಅಂಬಿನ +ಸರಿಯನ್+ಉರವಣಿಸಿ
ಕಡಗಿ +ಸಾತ್ಯಕಿಯೊಡನೆ +ಬವರವ
ಹಿಡಿದ +ಭಟರ್+ಅಮರರ +ವಿಮಾನವನ್
ಅಡರುತಿದ್ದರು +ಕೊಂದನ್+ಅತಿಬಳನ್+ಅಹಿತ+ಮೋಹರವ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಅಮರರ ವಿಮಾನವನಡರುತಿದ್ದರು

ಪದ್ಯ ೪೭: ಯಮನ ಸ್ವಾಗತಕ್ಕೆ ಯಾವ ತೋರಣ ಕಟ್ಟಲಾಯಿತು?

ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ (ಭೀಷ್ಮ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಡೊಂಕಣಿಗಳಲ್ಲಿ ಹೆಣಗಳಿಂದ ಹಾರಿದ ಮಾಂಸದ ತುಂಡುಗಳು, ಯಮನ ಊಟಕ್ಕೆ ಈ ಅಡಿಗೆ ಸರಿಯಾಗಿದೆಯೇ ಎಂದು ಪರೀಕ್ಷೆಗೆ ಒಳಗಾದಂತೆ ತೋರುತ್ತಿದ್ದವು, ಯಮನು ಈ ರಣರಂಗಕ್ಕೆ ಬಂದಿರುವುದರಿಂದ ಅವನ ಸ್ವಾಗತಕ್ಕಾಗಿ ಕಟ್ಟಿದ ತೋರಣಗಳೆಂಬಂತೆ ಕುಂತಗಳ ತುದಿಯಲ್ಲಿ ಕರುಳುಗಳ ಹಿಣೀಲು ಕಾಣುತ್ತಿದ್ದವು.

ಅರ್ಥ:
ಹೆಣ: ಜೀವವಿಲ್ಲದ ಶರೀರ; ಹೋಳು: ತುಂಡು; ಸಿಡಿ: ಹಾರು; ಅಡಗು: ಮಾಂಸ; ಡೊಂಕಣಿ: ಈಟಿ; ಎಸೆ: ತೋರು; ಕಾಲ: ಯಮ; ಆರೋಗಣೆ: ಊಟ, ಭೋಜನ; ಮಿಗೆ: ಅಧಿಕ; ಪಡಿಸಣ: ಯಜಮಾನರು ಊಟ ಮಾಡಿದ ಸ್ಥಳದಲ್ಲಿಯೇ ಕುಳಿತು ಅವನು ಬಿಟ್ಟ ಆಹಾರವನ್ನು ಊಟ ಮಾಡುವಿಕೆ; ನೋಡು: ವೀಕ್ಷಿಸು; ಮಾಣು: ಸುಮ್ಮನಿರು; ಕುಣಿ: ನರ್ತಿಸು; ಕುಂತ: ಈಟಿ, ಭರ್ಜಿ; ಅಗ್ರ: ಮುಂಭಾಗ; ಜೋಲು: ತೂಗಾಡು; ಹಿಣಿಲು: ಹೆರಳು, ಜಡೆ; ಕರುಳು: ಪಚನಾಂಗ; ಒಪ್ಪು: ಸಮ್ಮತಿ; ಜವ: ಯಮ; ರಣ: ಯುದ್ಧಭೂಮಿ; ಬರೆ: ಆಗಮನ; ಕಟ್ಟು: ನಿರ್ಮಿಸು; ಗುಡಿ: ಆಲಯ; ತೊರಣ: ಹೊರಬಾಗಿಲು ಅಲಂಕಾರ;

ಪದವಿಂಗಡಣೆ:
ಹೆಣನ +ಹೋಳಿನ +ಸಿಡಿದ್+ ಅಡಗು +ಡೊಂ
ಕಣಿಯೊಳ್+ಎಸೆದುವು+ ಕಾಲನ್+ಆರೋ
ಗಣೆಗೆ +ಮಿಗೆ +ಪಡಿಸಣವ +ನೋಡದೆ +ಮಾಣವೆಂಬಂತೆ
ಕುಣಿವ+ ಕುಂತ+ಅಗ್ರದಲಿ+ ಜೋಲುವ
ಹಿಣಿಲು+ ಕರುಳೊಪ್ಪಿದವು+ ಜವನ್+ಈ
ರಣಕೆ +ಬರೆ +ಕಟ್ಟಿದವು +ಗುಡಿ +ತೋರಣವನ್+ಎಂಬಂತೆ

ಅಚ್ಚರಿ:
(೧) ಕಾಲ, ಜವ – ಸಮನಾರ್ಥಕ ಪದ
(೨) ಕರುಳನ್ನು ತೋರಣಕ್ಕೆ ಹೋಲಿಸುವ ಕಲ್ಪನೆ – ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ

ಪದ್ಯ ೫೯: ಪರಬ್ರಹ್ಮನ ಸ್ವರೂಪವಾವುದು?

ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರಸುವ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ (ಭೀಷ್ಮ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಜಗತ್ತಿನಲ್ಲಿ ಚರಿಸುವವನು ನಾನೇ, ನಾನು ಮಾಯೆಯಿಂದ ಈ ಜಗತ್ತನ್ನು ತೋರಿಸಿದರೆ ಇದು ತೋರುತ್ತದ್. ನಿಲ್ಲಿಸಿದರೆ ಅಡಗುತ್ತದೆ, ಸುಳಿದರೆ ಸುಳಿಯುತ್ತದೆ. ಬಾಲ ಬುದ್ಧಿಯವರಿಗೆ ಈ ಜಗತ್ತು ಮೆರೆದಮ್ತೆ ತೋರುತ್ತದೆ. ಆತ್ಮನಿಷ್ಠರಾದ ಧೀರರಿಗೆ ಚಿನ್ಮಯವಾದ ಪರತತ್ತ್ವವಾದ ಆತ್ಮನಾಗಿರುತ್ತದೆ.

ಅರ್ಥ:
ಜಗ: ಜಗತ್ತು; ಚರಿಸು: ಸಂಚರಿಸು, ನಡೆ; ಮಾಯೆ: ಇಂದ್ರಜಾಲ; ಒಗೆ: ಹುಟ್ಟು; ತೋರು: ಗೋಚರಿಸು; ಸುಳಿ: ತಿರುಗು; ಹಿಡಿ: ಗ್ರಹಿಸು; ಅಡಗು: ಮುಚ್ಚು; ಮಗು: ಬಾಲಕ; ಕೂಡು: ಸೇರು; ಮೆರೆ: ಹೊಳೆ, ಪ್ರಕಾಶಿಸು; ಜಗ: ಪ್ರಪಂಚ; ನಿಜ: ದಿಟ; ಬೆರಸು: ಕೂಡಿಸು; ವಿಗಡ: ಶೌರ್ಯ, ಪರಾಕ್ರಮ, ಉದ್ಧಟ; ಪರತತ್ವ: ಪರಮಾತ್ಮನ ವಿಚಾರ; ಚಿನುಮಯ: ಶುದ್ಧಜ್ಞಾನದಿಂದ ಕೂಡಿದ; ರೂಪ: ಆಕಾರ;

ಪದವಿಂಗಡಣೆ:
ಜಗದೊಳ್+ಆನೇ +ಚರಿಸುವೆನು +ತ
ಜ್ಜಗವಿದೆಲ್ಲವು+ ನನ್ನ+ ಮಾಯೆಯೊಳ್
ಒಗೆದು+ ತೋರಿಸಿ+ ಸುಳಿಸೆ +ಸುಳಿವುದು ಹಿಡಿಯಲ್+ಅಡಗುವುದು
ಮಗುವುತನದೊಳು +ಕೂಡಿ +ಮೆರೆವುದು
ಜಗವದಲ್ಲದೆ +ನಿಜವ +ಬೆರಸುವ
ವಿಗಡರಿಗೆ+ ಪರತತ್ವ+ ಚಿನುಮಯ+ರೂಪ+ ತಾನೆಂದ

ಅಚ್ಚರಿ:
(೧) ಪರಮಾತ್ಮನ ಸ್ವರೂಪ – ಪರತತ್ವ ಚಿನುಮಯರೂಪ ತಾನೆಂದ

ಪದ್ಯ ೩೭: ದ್ರೌಪದಿಯು ಮಾಂಸದ ಮನೆಯಲ್ಲಿ ಏನು ನೋಡಿದಳು?

ತರಿದ ಕುರಿಗಳ ಹಂದಿಯಡಗಿನ
ಜುರಿತರಕ್ತದ ಮೊಲನ ಖಂಡದ
ಕಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಶಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ (ವಿರಾಟ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕತ್ತರಿಸಿದೆ ಕುರಿ, ಹಂದಿಗಳ ಮಾಂಸ, ರಕ್ತ ಹರಿದ ಮೊಲದ ಮಾಂಸ, ರೆಕ್ಕೆಕಿತ್ತ ಗುಬ್ಬಿಗಳ ಮಾಂಸ, ರೆಕ್ಕೆ ತೆಗೆದು ಸೀಳಿದ ನವಿಲು, ಪುರಲೆಗಳ ಮಾಂಸಗಳು, ಬೇಯಿಸಿದ ಮಾಂಸದ ಉಂಡೆಗಳು, ಮಾಂಸದ ರಾಶಿಯನ್ನು ನೋಡಿ ದ್ರೌಪದಿಯು ಆ ಮಾಂಸದ ಮನೆಯನ್ನು ಪ್ರಶಂಶಿಸಿದಳು.

ಅರ್ಥ:
ತರಿ: ಕತ್ತರಿಸು; ಕುರಿ: ಮೇಷ; ಹಂದಿ: ವರಾಹ; ಅಡಗು: ಮಾಂಸ; ಜುರಿತ: ರಕ್ತಸ್ರಾವ; ರಕ್ತ: ನೆತ್ತರು; ಮೊಲ: ಶಶಾಂಕ; ಖಂಡ: ತುಂಡು, ಚೂರು; ಕಿರಿ: ಚಿಕ್ಕ; ಗುಬ್ಬಿ: ಗುಬ್ಬಚ್ಚಿ; ಕೀಸಿ: ಕೊರೆ, ಕೆತ್ತು; ಸೀಳು: ಚೂರು; ನವಿಲು: ಮಯೂರ; ಲಾವುಗೆ: ಒಂದು ಬಗೆಯ ಹಕ್ಕಿ; ತುರುಗು: ಸಂದಣಿ, ದಟ್ಟಣೆ; ಎಲುಬು: ಮೂಳೆ; ಸಾಲು: ರಾಶಿ; ಸುಂಟಿಗೆ: ಹೃದಯ, ಗುಂಡಿಗೆ; ಮೆರೆ: ಹೊಳೆ, ಪ್ರಕಾಶಿಸು; ಮಾಂಸ: ಅಡಗು; ರಾಶಿ: ಗುಂಪು, ಸಮೂಹ; ಹರದ: ಅವ್ಯವಸ್ಥೆ; ಕಂಡು: ನೋಡು; ಅಬಲೆ: ಹೆಣ್ಣು; ಹೊಗಳು: ಪ್ರಶಂಶಿಸು; ಅಡಬಳ: ಮಾಂಸ; ಮನೆ: ಆಲಯ;

ಪದವಿಂಗಡಣೆ:
ತರಿದ +ಕುರಿಗಳ+ ಹಂದಿ+ಅಡಗಿನ
ಜುರಿತರಕ್ತದ+ ಮೊಲನ +ಖಂಡದ
ಕಿರಿದ +ಗುಬ್ಬಿಯ +ಕೀಸಿ+ ಸೀಳಿದ+ ನವಿಲ+ ಲಾವುಗೆಯ
ತುರುಗಿದ್+ಎಲುವಿನ +ಸಾಲ +ಸುಂಟಿಗೆ
ಮೆರೆವ+ ಮಾಂಸದ +ರಾಶಿಗಳ +ಹರ
ದೆರಕೆಗಳ+ ಕಂಡ್+ಅಬಲೆ +ಹೊಗಳಿದಳ್+ಅಡಬಳದ +ಮನೆಯ

ಅಚ್ಚರಿ:
(೧) ಅಡಬಳ, ಅಡಗು, ಮಾಂಸ – ಸಮನಾರ್ಥಕ ಪದಗಳು
(೨) ಯಾವುದನ್ನು ಹೊಗಳಿದಳು – ಮೆರೆವ ಮಾಂಸದ ರಾಶಿಗಳ ಹರದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ

ಪದ್ಯ ೧೧: ಕನಕನು ಕೃತ್ಯೆಗೆ ಯಾವ ಕೆಲಸವನ್ನು ನೇಮಿಸಿದನು?

ಹೋಗು ಪಾಂಡವರಾಯರಿಹ ಬನ
ಕಾಗಿ ನೀನವರೈವರನು ನೆರೆ
ನೀಗುತಾಯಾಹುತಿಯನಿಂದನುವಾಗಿ ಭಕ್ಷಿಪುದು
ಬೇಗದಲಿ ಕೊಲು ಹೋಗಿಯವರನು
ಸಾಗಿಸಿಯೆಯಡಗಗ್ನಿಕುಂಡದೊ
ಳೀಗಿದುವೆ ತಾ ನೇಮವೆಂದನು ಕನಕ ಕೈಮುಗಿದು (ಅರಣ್ಯ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕನಕನು ಕೃತ್ಯೆಗೆ ಕೈಮುಗಿದು, ಪಾಂದವರಿರುವ ವನಕ್ಕೆ ಹೋಗಿ ಅವರನ್ನು ತಿನ್ನು. ಅವರೇ ನಿನಗಾಹುತಿ, ಶೀಘ್ರವಾಗಿ ಅವರನ್ನು ತಿಂದು, ಅಗ್ನಿಕುಂಡದಲ್ಲಿ ಅಡಗು, ಇದೇ ನೀನು ಮಾಡಬೇಕಾಗಿರುವ ಕೆಲಸ ಎಂದು ಹೇಳಿದನು.

ಅರ್ಥ:
ಹೋಗು: ತೆರಳು; ರಾಯ: ರಾಜ; ಇಹ: ವಾಸಿಸುವ; ಬನ: ಕಾಡು; ನೆರೆ: ಸಮೀಪ, ಹತ್ತಿರ, ಕೂಡು; ನೀಗು: ತಿನ್ನು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಅನುವು: ರೀತಿ; ಭಕ್ಷಿಪುದು: ತಿನ್ನುವುದು; ಬೇಗ; ಶೀಘ್ರ; ಕೊಲು: ಸಾಯಿಸು; ಸಾಗಿಸು: ಕಳುಹಿಸು; ಅಡಗು: ಬಚ್ಚಿಟ್ಟುಕೊಳ್ಳು; ಅಗ್ನಿ: ಬೆಂಕಿ; ಕುಂಡ:ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ನೇಮ: ಕೆಲಸ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹೋಗು +ಪಾಂಡವರಾಯರ್+ಇಹ +ಬನ
ಕಾಗಿ +ನೀನವರ್+ಐವರನು +ನೆರೆ
ನೀಗುತಾ+ಆಹುತಿಯನಿಂದ್+ಅನುವಾಗಿ +ಭಕ್ಷಿಪುದು
ಬೇಗದಲಿ +ಕೊಲು +ಹೋಗಿ+ಅವರನು
ಸಾಗಿಸಿಯೆ+ಅಡಗ್+ಅಗ್ನಿಕುಂಡದೊಳ್
ಈಗಿದುವೆ +ತಾ +ನೇಮವೆಂದನು+ ಕನಕ+ ಕೈಮುಗಿದು

ಅಚ್ಚರಿ:
(೧)ಅನುವಾಗಿ , ಆಹುತಿ, ಅಡಗು, ಅಗ್ನಿ, ಅವರನು – ಅ ಕಾರದ ಪದಗಳ ಬಳಕೆ

ಪದ್ಯ ೧೫: ಕರ್ಣನು ಯಾರ ಜೊತೆಗಿರುವೆ ಎಂದು ಹೇಳಿದ?

ಒಡನೆ ಹುಟ್ಟಿದರೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ಪಾಂಡವ
ರಡಗು ಬಾಣಕೆ ಬಲಿಯೆನಿಪ್ಪೀ ಛಲವ ಮಾಣಿಸಿದೆ
ನುಡಿದ ಫಲವೇನಿನ್ನು ಕೌರವ
ರೊಡೆಯನಾದಂತಹೆನು ಬಾರೆನು
ಪೊಡವಿಯೊಳು ನೀಂ ಹರಹಿಕೊಳು ನಿನ್ನವರ ನಿಲಿಸೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರಿಸುತ್ತಾ, ಕೃಷ್ಣ ನೀನು ನನಗೆ ಸ್ವಲ್ಪವೂ ಸಮಯವನ್ನೂ ನೀಡದೆ ಪಾಂಡವರು ನನಗೆ ಒಡಹುಟ್ಟಿದವರೆಂದು ಕಥೆಯನ್ನು ವರ್ಣಿಸಿದೆ. ಪಾಂಡವರ ಮಾಂಸವು ನನ್ನ ಬಾಣಕ್ಕೆ ಬಲಿಯೆಂಬ ಛಲವನ್ನು ಕಳೆದೆ. ಈಗ ಏನು ಹೇಳಿದರೇನು ಪ್ರಯೋಜನ. ದುರ್ಯೋಧನನಿಗೆ ಏನಾಗುವುದೋ ಅದು ನನಗೂ ಆಗಲಿ. ನಿನ್ನ ಪಾಂಡವರನ್ನು ಭೂಮಿಯಲ್ಲಿ ಪಸರಿಸಿಕೋ, ಅವರೇ ಬಾಳಲಿ ಎಂದು ಕರ್ಣನು ಕೃಷ್ಣನಿಗೆ ಹೇಳಿದನು.

ಅರ್ಥ:
ಒಡನೆ: ಜೊತೆ, ತತ್ಕ್ಷಣ; ಹುಟ್ಟು: ಜನನ; ಕಥನ: ವಿಚಾರ; ಎಡೆಗುಡು: ಅವಕಾಶ ನೀಡು; ಬಣ್ಣಿಸು: ಹೇಳು, ವಿವರಿಸು; ಅಡಗು: ಮಾಂಸ; ಬಾಣ: ಅಂಬು; ಬಲಿ: ಬಲಿಷ್ಠವಾಗು, ದೃಢ, ಆಹುತಿ; ಛಲ: ದೃಢ ನಿಶ್ಚಯ; ಮಾಣು:ತಡಮಾಡು, ತಪ್ಪಿಹೋಗು; ನುಡಿ: ಮಾತು; ಫಲ: ಪ್ರಯೋಜನ; ಒಡೆಯ: ಜೀಯ, ರಾಜ; ಬಾರೆನು: ಬರುವುದಿಲ್ಲ; ಪೊಡವಿ: ಪೃಥ್ವಿ, ಭೂಮಿ; ಹರಹು: ಪಸರಿಸು; ನಿಲಿಸು: ಸ್ಥಾಪಿಸು;

ಪದವಿಂಗಡಣೆ:
ಒಡನೆ +ಹುಟ್ಟಿದರೆಂಬ +ಕಥನವನ್
ಎಡೆಗುಡದೆ +ಬಣ್ಣಿಸಿದೆ +ಪಾಂಡವರ್
ಅಡಗು +ಬಾಣಕೆ +ಬಲಿಯೆನಿಪ್ಪೀ +ಛಲವ +ಮಾಣಿಸಿದೆ
ನುಡಿದ +ಫಲವೇನ್+ಇನ್ನು +ಕೌರವರ್
ಒಡೆಯನ್+ಆದಂತಹೆನು +ಬಾರೆನು
ಪೊಡವಿಯೊಳು +ನೀಂ +ಹರಹಿಕೊಳು+ ನಿನ್ನವರ +ನಿಲಿಸೆಂದ

ಅಚ್ಚರಿ:
(೧) ಅಚಲವಾದ ನುಡಿ – ಕೌರವರೊಡೆಯನಾದಂತಹೆನು, ಬಾರೆನು