ಪದ್ಯ ೬೫: ಕೃಷ್ಣನು ಮಹಾಂಕುಶದ ಬಗ್ಗೆ ಏನು ಹೇಳಿದ?

ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ (ದ್ರೋಣ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನಾ, ನಾನು ಆಡಬಾರದು, ನಿನಗೆ ಬಿಡಿಸಿ ಹೇಳಿದರೆ ಮನಸ್ಸು ಕೆಡುತ್ತದೆ. ಹುಚ್ಚಾ, ಅದನ್ನು ನೋಡಿದರೆ ಎವೆಗಳು ಸೀದು ಹೋಗುತ್ತದೆ. ಅದನ್ನು ಗೆಲ್ಲಲು ನಿನಗೆ ಸತ್ವವಿಲ್ಲ. ಅದು ಜಗತ್ತನ್ನು ನಿಲ್ಲಿಸಬಲ್ಲದು, ಯಮನ ಬಾಯಿಗೆ ಜಗತ್ತನ್ನು ನೂಕಬಲ್ಲದು, ಇದು ಮುನಿದರೆ ಬ್ರಹ್ಮ ರುದ್ರ ಇಂದ್ರರು ಇದಿರಾಗಿ ನಿಲ್ಲಲಾರರು ಎಂದನು.

ಅರ್ಥ:
ಆಡು: ನುಡಿ; ತೊರು: ಪ್ರದರ್ಶಿಸು; ನುಡಿ: ಮಾತಾಡು; ಖೋಡಿ: ದುರುಳತನ, ನೀಚತನ; ಮರುಳ: ತಿಳಿಗೇಡಿ, ದಡ್ಡ; ಸೀವರಿಸು: ಬೇಜಾರಪಡು, ಚೀರು; ಸೀವು: ಸೀದು, ಕರಕಲಾಗು; ಅಳವಿ: ಶಕ್ತಿ; ಹೂಡು: ಅಣಿಗೊಳಿಸು; ಜಗ: ಪ್ರಪಂಚ; ಅಂತಕ: ಯಮ; ಗೂಡು: ನೆಲೆ; ಮುನಿ: ಕೋಪಗೊಳ್ಳು; ಕೈಮಾಡು: ಹೋರಾಡು; ನಿಲು: ನಿಲ್ಲು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ಇಂದ್ರ; ಅಮರ: ದೇವತೆ;

ಪದವಿಂಗಡಣೆ:
ಆಡಬಾರದು +ತೋರಿ +ನುಡಿದರೆ
ಖೋಡಿ +ನಿನಗಹುದ್+ಎಲೆ +ಮರುಳೆ +ನೀ
ನೋಡಲ್+ಎವೆ +ಸೀವವು +ಕಣಾ +ನಿನ್ನಳವಿನ್+ಆಯುಧವೆ
ಹೂಡಲಾಪುದು +ಜಗವನ್+ಅಂತಕ
ಗೂಡಲಾಪುದು +ಮುನಿದರಿದ +ಕೈ
ಮಾಡುವರೆ +ನಿಲಬಾರದ್+ಅಜ+ ರುದ್ರ+ಅಮರೇಂದ್ರರಿಗೆ

ಅಚ್ಚರಿ:
(೧) ಮಹಾಂಕುಶದ ಶಕ್ತಿ – ಮುನಿದರಿದ ಕೈಮಾಡುವರೆ ನಿಲಬಾರದಜರುದ್ರಾಮರೇಂದ್ರರಿಗೆ
(೨) ಗೂಡಲಾಪುದು, ಹೂಡಲಾಪುದು – ಪ್ರಾಸ ಪದಗಳು

ಪದ್ಯ ೧೬: ಕೃತ್ಯೆಯ ಲಕ್ಷಣಗಳೇನು?

ಅಸುವನುಳಿದವರುಗಳ ಮುಟ್ಟದು
ವಿಷದ ಕೊಳದೊಳಗಿರಲು ಕೊಲ್ಲದು
ಅಸಮತತ್ವದ ಧರ್ಮಸಾರವ ನುಡಿಯುತಿರೆ ಕಂಡು
ಮಿಸುಕದುದು ತಾಮರಳಿ ಕನಕನ
ಮಿಸುಕಲೀಯದೆ ಮುರ್ದು ಪೋಪುದು
ವಿಷಮ ಭೂತಕ್ಕಜ ಭವಾದಿಗಳರಿದು ಕೇಳೆಂದ (ಅರಣ್ಯ ಪರ್ವ, ೨೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯಮನಿಗೆ ಹೇಳುತ್ತ, ಕೃತ್ಯೆಯು ಸತ್ತು ಹೋದವರನ್ನು ಮುಟ್ಟುವುದಿಲ್ಲ. ವಿಷದ ಕೊಳದೊಳಗಿದ್ದವರನ್ನು ಮುಟ್ಟುವುದಿಲ್ಲ. ಅಸಮಾನವಾದ ಧರ್ಮ ವಿಚಾರವನ್ನು ಮಾಡುತ್ತಿದ್ದರೆ, ಅದು ಅವರನ್ನು ಕಂಡು ಮಿಸುಕುವುದೂ ಇಲ್ಲ. ಅದು ಹಿಂದಿರುಗಿ ಹೋಗಿ ಕನಕನನ್ನು ಮುರಿದು ಅಗ್ನಿಯೊಳಕ್ಕೆ ಹೋಗುತ್ತದೆ, ಅದನ್ನು ಬ್ರಹ್ಮ ರುದ್ರಾದಿಗಳೂ ಎದುರಿಸಲಾರದು.

ಅರ್ಥ:
ಅಸು: ಪ್ರಾಣ; ಉಳಿ: ಬಿಡು, ತೊರೆ; ಮುಟ್ಟು: ತಾಗು; ವಿಷದ: ಅಸೂಯೆ, ಗರಳ; ಕೊಳ: ಗುಂಡಿ; ಕೊಲ್ಲು: ಸಾವು; ಅಸಮ: ಸಮವಲ್ಲದ; ಧರ್ಮ: ಧಾರಣೆ ಮಾಡಿದುದು; ಸಾರ: ತಿರುಳು, ಗುಣ; ನುಡಿ: ಮಾತು; ಕಂಡು: ನೋಡು; ಮಿಸುಕು: ಅಲುಗಾಟ; ಮರಳು: ಹಿಂತಿರುಗು; ಮಿಸುಕು: ನಡುಕ, ಕಂಪನ; ಮುರಿ: ಬಾಗು, ತಿರುವು; ಪೋಪು: ಹೋಗು; ವಿಷಮ: ಕೆಟ್ಟ, ದುಷ್ಟ; ಅಜ: ಬ್ರಹ್ಮ; ಭವ: ಇರುವಿಕೆ, ಅಸ್ತಿತ್ವ, ಪುನರ್ಜನ್ಮ; ಕೇಳು: ಆಲಿಸು;

ಪದವಿಂಗಡಣೆ:
ಅಸುವನ್+ಉಳಿದವರುಗಳ +ಮುಟ್ಟದು
ವಿಷದ +ಕೊಳದೊಳಗಿರಲು+ ಕೊಲ್ಲದು
ಅಸಮ+ತತ್ವದ +ಧರ್ಮಸಾರವ+ ನುಡಿಯುತಿರೆ+ ಕಂಡು
ಮಿಸುಕದುದು +ತಾ+ಮರಳಿ +ಕನಕನ
ಮಿಸುಕಲೀಯದೆ+ ಮುರಿದು+ ಪೋಪುದು
ವಿಷಮ +ಭೂತಕ್ಕ್+ಅಜ +ಭವಾದಿಗಳರಿದು +ಕೇಳೆಂದ

ಅಚ್ಚರಿ:
(೧) ಕೃತ್ಯೆಯ ಮಿತಿಗಳನ್ನು ವಿವರಿಸುವ ಪದ್ಯ – ಅಸುವನುಳಿದವರುಗಳ ಮುಟ್ಟದು; ವಿಷದ ಕೊಳದೊಳಗಿರಲು ಕೊಲ್ಲದು; ಅಸಮತತ್ವದ ಧರ್ಮಸಾರವ ನುಡಿಯುತಿರೆ ಕಂಡು
ಮಿಸುಕದುದು

ಪದ್ಯ ೩೦: ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರು ಹೇಗೆ ಬಂತು?

ಹಲವು ಯುಗ ಪರಿಯಂತವಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರಸೂಕ್ತದ್ಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನ ಸಂಭವನೆಂಬ ಹೆಸರಾಯ್ತಮ್ದು ಮೊದಲಾಗಿ (ಅರಣ್ಯ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಬ್ರಹ್ಮನು ವಿಷ್ಣುವಿನ ಹೊಟ್ಟೆಯೊಳ ಹೊಕ್ಕು ಬಹಳ ವರ್ಷಗಳಾಯಿತು, ಅವನು ದಾರಿಕಾಣದೆ, ಕೃಪಾಳುವಾದ ಶ್ರೀ ಹರಿಯನ್ನು ವೇದ ಸಹಸ್ರ ಸೂಕ್ತದಿಂದ ಹೊಗಳಿದನು, ಆಗ ವಿಷ್ಣುವು ಕರುಣೆಯಿಂದ ತನ್ನ ಹೊಕ್ಕಳಿನ ಕಮಲದಿಂದ ಬ್ರಹ್ಮನನ್ನು ಹೊರತೆಗೆದನು. ಅಂದಿನಿಂದ ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರಾಯಿತು.

ಅರ್ಥ:
ಹಲವು: ಬಹಳ; ಯುಗ: ಸಮಯ; ಪರಿಯಂತ: ಕಳೆದು, ಮುಗಿಸು; ತೊಳಲು: ಬವಣೆ, ಸಂಕಟ; ಕಡೆ: ಕೊನೆ; ಕಾಣು: ತೋರು; ಕೃಪಾಳು: ದಯೆತೋರುವ; ಒಲಿ: ಒಪ್ಪು, ಸಮ್ಮತಿಸು; ಹೊಗಳು: ಪ್ರಶಂಶಿಸು; ಅಜ: ಬ್ರಹ್ಮನು; ವೇದ: ಶೃತಿ; ಸಹಸ್ರ: ಸಾವಿರ; ಸೂಕ್ತ: ಹಿತವಚನ; ಬಳಿಕ: ನಂತರ; ಕಾರುಣ್ಯ: ದಯೆ; ನಾಭಿ: ಹೊಕ್ಕಳು; ನಳಿನ: ಕಮಲ; ತೆಗೆ: ಹೊರತರು; ವಿರಿಂಚಿ: ಬ್ರಹ್ಮ; ಸಂಭವ: ಹುಟ್ಟು; ಹೆಸರು: ನಾಮ; ಮೊದಲು: ಮುಂಚೆ;

ಪದವಿಂಗಡಣೆ:
ಹಲವು +ಯುಗ +ಪರಿಯಂತವ್+ಅಲ್ಲಿಯೆ
ತೊಳಲಿ +ಕಡೆ+ಕಾಣದೆ+ ಕೃಪಾಳುವನ್
ಒಲಿದು +ಹೊಗಳಿದನ್+ಅಜನು +ವೇದ +ಸಹಸ್ರ+ಸೂಕ್ತದಲಿ
ಬಳಿಕ +ಕಾರುಣ್ಯದಲಿ +ನಾಭೀ
ನಳಿನದಲಿ +ತೆಗೆದನು +ವಿರಿಂಚಿಗೆ
ನಳಿನ ಸಂಭವನೆಂಬ +ಹೆಸರಾಯ್ತಂದು+ ಮೊದಲಾಗಿ

ಅಚ್ಚರಿ:
(೧) ವಿರಿಂಚಿ, ಅಜ, ನಳಿನಸಂಭವ – ಸಮನಾರ್ಥಕ ಪದಗಳು

ಪದ್ಯ ೨೭: ಬ್ರಹ್ಮನು ವಿಷ್ಣುವಿಗೆ ಏನೆಂದನು?

ಆರು ನೀನೆಂದಾತನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆಮ್ದೊಡಜ ನಗುತ
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆಂದುಲಿದು ಗರ್ವವಿ
ಕಾರದಲಿ ಪರಮೇಷ್ಠಿ ನಿಜತೇಜನ ವಿಭಾಡಿಸಿದ (ಅರಣ್ಯ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀನಾರು, ಎಂದು ಬ್ರಹ್ಮನು ಇವನನ್ನು ವಿಚಾರಿಸಲು, ಇವನು ಜಗತ್ತಿಗೆ ಆಧಾರನಾದ ವಿಷ್ಣು ಎಂದನು, ಬ್ರಹ್ಮನು ನಕ್ಕು ಗರ್ವದಿಂದ ಈ ಭೂರಿ ಜಗತ್ತು ನನ್ನ ಹೊಟ್ಟೆಯಲ್ಲಿದೆ, ಈ ಜಗತ್ತಿಗೆ ಆಧಾರವಾಗಲು ನೀನು ಯಾರು ಎಂದು ಆತ್ಮಜ್ಯೋತಿಯಾದ ವಿಷ್ಣುವನ್ನು ಅಲ್ಲಗಳೆದನು.

ಅರ್ಥ:
ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಬೆಸ: ವಿಚಾರಿಸುವುದು; ಆಧಾರ: ಅವಲಂಬನ;ಜಗ: ಪ್ರಪಂಚ; ಉದರ: ಹೊಟ್ಟೆ; ಅಜ: ಬ್ರಹ್ಮ; ನಗು: ಸಂತಸ; ಭೂರಿ: ಹೆಚ್ಚು, ಅಧಿಕ; ಉಲಿ: ಕೂಗು, ಧ್ವನಿ; ಗರ್ವ: ಅಹಂಕಾರ; ವಿಕಾರ: ಬದಲಾವಣೆ, ಮಾರ್ಪಾಟು; ಪರಮೇಷ್ಠಿ: ಬ್ರಹ್ಮ; ನಿಜ: ದಿಟ, ತನ್ನ; ತೇಜ: ಕಾಂತಿ; ವಿಭಾಡಿಸು: ನಾಶಮಾಡು;

ಪದವಿಂಗಡಣೆ:
ಆರು +ನೀನ್+ಎಂದ್+ಆತನ್+ಈತನ
ಸಾರಿದನು+ ಬೆಸಗೊಳಲು+ ಜಗದ್
ಆಧಾರಕನು+ ಜಗದ್+ಉದರ +ಹರಿ +ತಾನೆಂದೊಡ್+ಅಜ+ ನಗುತ
ಭೂರಿ+ ಜಗವೆನ್+ಉದರದಲಿ+ ನೀ
ನಾರು+ ಜಗಕೆಂದ್+ಉಲಿದು +ಗರ್ವ+ವಿ
ಕಾರದಲಿ +ಪರಮೇಷ್ಠಿ+ ನಿಜ+ತೇಜನ +ವಿಭಾಡಿಸಿದ

ಅಚ್ಚರಿ:
(೧) ಜಗದಾಧಾರ, ಜಗವೆನ್ನುದರ, ಜಗಕೆಂದುಲಿದು – ಜಗ ಪದಗಳ ಬಳಕೆ
(೨) ಅಜ, ಪರಮೇಷ್ಠಿ – ಬ್ರಹ್ಮನನ್ನು ಕರೆದ ಪರಿ

ಇಂದ್ರನು ಅರ್ಜುನನ ಒಳಿತಿಗೆ ಯಾರನ್ನು ಭಜಿಸಿದನು?

ಭುಜವ ಹೊಯ್ದರು ಸೂರ್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವಸೈನ್ಯ ಶರಧಿಯಲಿ (ಕರ್ಣ ಪರ್ವ, ೨೫ ಸಂಧಿ, ೮ ಪದ್ಯ)

ತಾತ್ಪರ್ಯ:
ಬ್ರಹ್ಮನ ಸಭೆಯಲ್ಲಿ ಸೂರ್ಯನೂ ತಕ್ಷಕನು ಒಬ್ಬರನೊಬ್ಬರು ತೋಳು ತಟ್ಟಿದರು. ದೇವೇಂದ್ರನು ಅರ್ಜುನನಿಗೆ ವಿಷ ಸೋಂಕದಿರಲಿ ಎಂದು ಪ್ರಾರ್ಥಿಸುತ್ತಾ ಗರುಡನನ್ನು ಭಜಿಸಿದನು. ಕೌರವ ಸೈನ್ಯದಲ್ಲಿ ರಣಭೇರಿ ಕಹಳೆಗಳು ಉತ್ತುಂಗ ಘೋಷವನ್ನು ಮಾಡಿದವು.

ಅರ್ಥ:
ಭುಜ: ತೋಳು; ಹೊಯ್ದು: ಹೊಡೆ; ಸೂರ್ಯ: ರವಿ; ತಕ್ಷಕ: ಅಷ್ಟಫಣಿಗಳಲ್ಲಿ ಒಂದು; ಅಜ: ಬ್ರಹ್ಮ; ಸಭೆ: ಓಲಗ; ಭಯ: ಅಂಜಿಕೆ, ಹೆದರಿಕೆ; ಸುರಪತಿ: ಇಂದ್ರ; ಭಜಿಸು: ಆರಾಧಿಸು; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ವಿಷ: ಗರಳ, ನಂಜು; ನರ: ಅರ್ಜುನ; ಗಜರು: ಬೆದರಿಸು, ಗದರು; ನಿಸ್ಸಾಳ: ಒಂದು ಬಗೆಯ ರಣವಾದ್ಯ; ವ್ರಜ: ಗುಂಪು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಭಟ: ಸೈನಿಕರು; ಬೊಬ್ಬೆ: ಆರ್ಬಟ; ಗಜಬಜ: ಗದ್ದಲ; ಘಾಡಿಸು: ವ್ಯಾಪಿಸು; ಶರಧಿ: ಸಮುದ್ರ; ಸೈನ್ಯ: ಪಡೆ;

ಪದವಿಂಗಡಣೆ:
ಭುಜವ +ಹೊಯ್ದರು +ಸೂರ್ಯ+ತಕ್ಷಕರ್
ಅಜನ +ಸಭೆಯಲಿ +ಭಯದಿ +ಸುರಪತಿ
ಭಜಿಸಿದನು +ಗರುಡನನು +ನಿರ್ವಿಷಮಸ್ತು +ನರ+ ಗೆನುತ
ಗಜರಿದವು +ನಿಸ್ಸಾಳವಾದ್ಯ
ವ್ರಜದ +ಕಹಳೆಯ +ಭಟರ +ಬೊಬ್ಬೆಯ
ಗಜಬಜಿಕೆ+ ಘಾಡಿಸಿತು +ಕೌರವಸೈನ್ಯ+ ಶರಧಿಯಲಿ

ಅಚ್ಚರಿ:
(೧) ಭುಜ, ಅಜ, ಗಜ, ವ್ರಜ – ಪ್ರಾಸ ಪದಗಳು
(೨) ಸೇನಾ ಸಮುದ್ರ ಎಂದು ಹೇಳಲು – ಕೌರವಸೈನ್ಯ ಶರಧಿಯಲಿ