ಪದ್ಯ ೩೯: ಧರ್ಮಜನು ಪರಿಹಾರಕ್ಕೆ ಯಾರ ಕಡೆ ನೋಡಿದನು?

ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತನೋಡಿದ ನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮನಿರ್ಣಯವ (ಅರಣ್ಯ ಪರ್ವ, ೨೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನು, ನನ್ನ ಪ್ರತಿಜ್ಞಾಭಂಗವೂ ಆಗಬಾರದು, ಇವನೂ ಬದುಕಬೇಕು, ನೀವು ನಮಗೆ ರಾಜರು, ಇದಕ್ಕೇನು ಮಾದಬೇಕೋ ನೀವೇ ತಿಳಿಸಿ ಎಂದು ಭೀಮನು ಹೇಳಲ್, ಧರ್ಮಜನು ಧೌಮ್ಯನೇ ಮೊದಲಾದ ಋಷಿಗಳನ್ನು ನೋಡಿದನು, ಅವರು ಇದಕ್ಕೆ ಪರಿಹಾರವನ್ನು ಮನಸ್ಸಿನಲ್ಲೇ ನಿಶ್ಚಯಿಸಿದರು.

ಅರ್ಥ:
ಅಳಿ: ಸಾವು; ಪ್ರತಿಜ್ಞೆ: ಶಪಥ; ಅಖ್ಯಾತಿ: ಅಪ್ರಸಿದ್ಧ; ಮಸುಳು: ಮಂಕಾಗು; ತಿದ್ದು: ಸರಿಪಡಿಸು; ಭೂತಳ: ಭೂಮಿ; ಅಧಿಪ: ರಾಜ; ಬೆಸಸು: ಹೇಳು, ಆಜ್ಞಾಪಿಸು; ಮುನಿ: ಋಷಿ; ನೋಡು: ವೀಕ್ಷಿಸು; ನೀತಿ: ಒಳ್ಳೆಯ ನಡತೆ; ಸುಜನ: ಸಜ್ಜನ; ವ್ರಾತ: ಗುಂಪು; ನಿಶ್ಚೈಸು: ನಿರ್ಧರಿಸು; ಮನ: ಮನಸ್ಸು; ನಿರ್ಣಯ: ತೀರ್ಮಾನ; ಅನುವು: ರೀತಿ;

ಪದವಿಂಗಡಣೆ:
ಈತನ್+ಅಳಿಯದೆ +ಮತ್+ಪ್ರತಿಜ್ಞ
ಅಖ್ಯಾತಿ +ಮಸುಳದೆ +ತಿದ್ದುವ್+ಅನುವನು
ಭೂತಳ+ಅಧಿಪ +ನೀವು +ಬೆಸಸುವುದ್+ಎನಲು +ಮುನಿಜನವ
ಆತ+ನೋಡಿದನ್+ ಆವ್+ಉದಿದಕ್+ಅನು
ನೀತಿಯೆನೆ +ಧೌಮ್ಯಾದಿ +ಸುಜನ
ವ್ರಾತ +ನಿಶ್ಚೈಸಿದರು+ ಮನದಲಿ+ ಧರ್ಮ+ನಿರ್ಣಯವ

ಅಚ್ಚರಿ:
(೧) ಅಳಿಯದೆ, ಮಸುಳದೆ – ಪದಗಳ ಬಳಕೆ

ಪದ್ಯ ೩೮: ಶಕುನಿ ದ್ಯೂತವು ಕ್ಷತ್ರಿಯರಿಗೇಕೆ ಒಳಿತೆಂದು ಹೇಳಿದನು?

ದ್ಯೂತವಿದು ದುರ್ವ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ರಣಭೀತಿ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನನೃಪ
ಜಾತಿಗೋಸುಗರಾದ ವಿದರರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ದ್ಯೂತವು ದುರ್ವ್ಯಸನವೆಂದು ಹೇಳುವವನು ನೀತಿಯನ್ನು ತಿಳಿದವನೇ? ಬ್ರಾಹ್ಮಣರಿಗೆ, ಯತಿಗಳಿಗೆ, ಯುದ್ಧಕ್ಕೆ ಹೆದರುವ ರಾಜರಿಗೆ ಜೂಜಾಡುವುದರಿಂದ ಅಪಕೀರ್ತಿ ಬರುತ್ತದೆ. ದ್ಯೂತ, ಬೇಟೆ, ಸ್ತ್ರೀವ್ಯಸನಗಳು ಕ್ಷತ್ರಿಯಜಾತಿಗೆ ಹೇಳಿಮಾಡಿಸಿದ ಪ್ರವೃತ್ತಿಗಳು. ಇವುಗಳ ರಸವನ್ನು ಅರಿಯದವನು ನರನಾದರೂ ಮೃಗವೇ ಸರಿ ಎಂದು ಶಕುನಿ ಹೇಳಿದನು.

ಅರ್ಥ:
ದ್ಯೂತ: ಜೂಜು; ದುರ್ವ್ಯಸನ: ಕೆಟ್ಟ ಚಟ; ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ; ಶ್ರೋತ್ರಿ: ಬ್ರಾಹ್ಮಣ; ಅಖ್ಯಾತಿ: ಅಪ್ರಸಿದ್ಧಿ; ಯತಿ: ಋಷಿ; ಮೇಣ್: ಅಥವ; ಭೀತ: ಭಯ; ಭೂಪ: ರಾಜ; ಮೃಗ: ಬೇಟೆ; ಸ್ತ್ರೀವ್ಯಸನ: ಹೆಣ್ಣಿನ ಸಹವಾಸ; ನೃಪಜಾತಿ: ಕ್ಷತ್ರಿಯಜಾತಿ; ಅತಿಶಯ: ಹೆಚ್ಚು; ಅರಿ: ತಿಳಿ; ನರ: ಮನುಷ್ಯ; ಮೃಗ: ಪ್ರಾಣಿ;

ಪದವಿಂಗಡಣೆ:
ದ್ಯೂತವಿದು+ ದುರ್ವ್ಯಸನವ್+ಎಂಬವ
ನೀತಿವಿದನೇ+ ಶ್ರೋತ್ರಿಯರಿಗ್
ಅಖ್ಯಾತಿಯದು+ ಯತಿಗಳಿಗೆ+ ಮೇಣ್+ರಣಭೀತಿ +ಭೂಪರಿಗೆ
ದ್ಯೂತ+ ಮೃಗಯಾ +ಸ್ತ್ರೀ+ವ್ಯಸನ+ನೃಪ
ಜಾತಿಗೋಸುಗರಾದವ್ + ಇದರರ
ಸ+ಅತಿಶಯವ್+ಅರಿಯದವ +ನರ+ಮೃಗವ್+ಎಂದನಾ +ಶಕುನಿ

ಅಚ್ಚರಿ:
(೧) ಶಕುನಿಯ ಮಾತು – ದ್ಯೂತ ಮೃಗಯಾ ಸ್ತ್ರೀವ್ಯಸನನೃಪ ಜಾತಿಗೋಸುಗರಾದ ವಿದರರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ

ಪದ್ಯ ೬೭: ಧೃತರಾಷ್ಟ್ರನು ಇನ್ನಾವ ಪ್ರಶ್ನೆಗಳನ್ನು ಕೇಳಿದನು?

ಜ್ಞಾತವೇನಜ್ಞಾತವಾವುದು
ನೀತಿಯಾವುದನೀತಿ ಯಾವುದು
ದ್ವೈತವೇನದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯೇನಖ್ಯಾತಿ ಯಾವುದು
ಭೀತಿ ಯಾವುದಭೀತಿ ಯಾವುದು
ನೀತಿಯಿಂದ ಮುನೀಶ ಬಿತ್ತರಿಸೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಪ್ರಶ್ನೆಗಳನ್ನು ಮುಂದುವರೆಸಿದನು. ಮುನಿವರ್ಯರೇ, ತಿಳಿದುದು ಯಾವುದು, ತಿಳಿಯದಿರುವುದಾವುದು, ನೀತಿ ಯಾವುದು ಅನೀತಿ ಯಾವುದು, ದ್ವೈತವೇನು ಅದ್ವೈತವೇನು? ಕೀರ್ತಿಯಾವುದು ಅಪಕೀರ್ತಿ ಯಾವುದು, ಭೀತಿ ಮತ್ತು ನಿರ್ಭೀತಿ ಯಾವುದು, ಇವೆಲ್ಲವನ್ನು ತಿಳಿಯಹೇಳಲು ಧೃತರಾಷ್ಟ್ರನು ಸನತ್ಸುಜಾತರಿಗೆ ಕೇಳಿದನು.

ಅರ್ಥ:
ಜ್ಞಾತ: ತಿಳಿದವನು, ತಿಳಿದ; ಅಜ್ಞಾತ: ತಿಳಿಯದವ; ನೀತಿ: ಶಿಷ್ಟಾಚಾರ; ಅನೀತಿ: ಕೆಟ್ಟ ನಡತೆ; ದ್ವೈತ: ಉಭಯತ್ವ, ದ್ವಂದ್ವಸ್ಥಿತಿ; ಅದ್ವೈತ: ಒಂದೇ ಎಂದು ಪ್ರತಿಪಾದಿಸುವ ತತ್ವ; ವೈದಿಕ: ವೇದಗಳನ್ನು ಬಲ್ಲವನು; ಖ್ಯಾತಿ: ಪ್ರಸಿದ್ಧ; ಅಖ್ಯಾತಿ: ಅಪ್ರಸಿದ್ಧ; ಭೀತಿ: ಭಯ; ಅಭೀತಿ: ನಿರ್ಭಯ; ಮುನೀಶ: ಋಷಿ; ಬಿತ್ತರಿಸು: ತಿಳಿಸು; ಭೂಪ: ರಾಜ; ಅಂಗ: ಭಾಗ;

ಪದವಿಂಗಡಣೆ:
ಜ್ಞಾತವೇನ್+ಅಜ್ಞಾತವಾವುದು
ನೀತಿಯಾವುದ್+ಅನೀತಿ +ಯಾವುದು
ದ್ವೈತವೇನ್+ಅದ್ವೈತವಾವುದು +ವೈದಿಕಾಂಗದಲಿ
ಖ್ಯಾತಿಯೇನ್+ಅಖ್ಯಾತಿ +ಯಾವುದು
ಭೀತಿ+ ಯಾವುದ್+ಅಭೀತಿ +ಯಾವುದು
ನೀತಿಯಿಂದ +ಮುನೀಶ +ಬಿತ್ತರಿಸೆಂದನಾ+ ಭೂಪ

ಅಚ್ಚರಿ:
(೧) ವಿರುದ್ಧ ಪದಗಳ ಬಳಕೆ: ಜ್ಞಾತ, ಅಜ್ಞಾತ; ನೀತಿ, ಅನೀತಿ; ದ್ವೈತ, ಅದ್ವೈತ; ಖ್ಯಾತಿ, ಅಖ್ಯಾತಿ; ಭೀತಿ, ಅಭೀತಿ
(೨) ಖ್ಯಾತಿ, ಭೀತಿ, ನೀತಿ – ಪ್ರಾಸ ಪದಗಳ ಬಳಕೆ