ಪದ್ಯ ೫೦: ರಥದ ಸುತ್ತಲ್ಲಿದ್ದವರೇಕೆ ಆಶ್ಚರ್ಯ ಪಟ್ಟರು?

ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಮ್ಗರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ (ಗದಾ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹನುಮಮ್ತನು ಧ್ವಜದ ಹಲಗೆಯನ್ನು ಬಿಟ್ಟು ಹಾರಿ ತನ್ನ ನೆಲೆಗೆ ಹೋದನು. ರಥಾಶ್ವ, ಗಾಲಿಗಳು ಹೊಗೆಯಿಂದ ಮುಚ್ಚಿದವು. ಅರ್ಜುನ ಭೀಮ ಮೊದಲಾದವರು ಅತಿ ಆಶ್ಚರ್ಯದಿಂದ ಇದೇನು ಬೆಂಕಿಯ ಆಕಸ್ಮಿಕ ಎಂದು ಹೆದರಿದರು.

ಅರ್ಥ:
ಧ್ವಜ: ಬಾವುಟ; ಹಲಗೆ: ಪಲಗೆ, ಮರ; ಒದೆ: ನೂಕು; ಹಾಯ್ದು: ಹಾರು; ನಿವಾಸ: ಆಲಯ; ಧೂಮ: ಹೊಗೆ; ರಥ: ಬಂಡಿ; ಅಶ್ವ: ಕುದುರೆ; ಅಂಗ: ಭಾಗ; ರಾಜಿ: ಗುಂಪು, ಸಮೂಹ; ವಿಜಯ: ಅರ್ಜುನ, ಗೆಲುವು; ಆದಿ: ಮುಂತಾದ; ಕಂಡು: ನೋಡು; ಅಕ್ಕಜ: ಆಶ್ಚರ್ಯ; ಆಕಸ್ಮಿಕ: ಅನಿರೀಕ್ಷಿತವಾದ; ಕಿಚ್ಚು: ಬೆಂಕಿ; ಗಜಬಜ: ಗೊಂದಲ; ನೆರೆ: ಗುಂಪು; ಬೆಚ್ಚು: ಹೆದರು; ಭೀತಿ: ಭಯ;

ಪದವಿಂಗಡಣೆ:
ಧ್ವಜದ+ ಹಲಗೆಯನ್+ಒದೆದು +ಹಾಯ್ದನು
ನಿಜ+ನಿವಾಸಕೆ +ಹನುಮ +ಧೂಮ
ಧ್ವಜನಮಯವಾದುದು +ರಥ+ಅಶ್ವ+ರಥಾಂಗ+ರಾಜಿಯಲಿ
ವಿಜಯ +ಭೀಮಾದಿಗಳು +ಕಂಡ್
ಅಕ್ಕಜದೊಳ್+ಆಕಸ್ಮಿಕದ +ಕಿಚ್ಚಿನ
ಗಜಬಜವಿದೇನ್+ಎನುತ +ನೆರೆ +ಬೆಚ್ಚಿದರು +ಭೀತಿಯಲಿ

ಅಚ್ಚರಿ:
(೧) ಅರ್ಜುನನನ್ನು ವಿಜಯ ಎಂದು ಕರೆದಿರುವುದು
(೨) ಧ್ವಜ, ಗಜಬಜ, ನಿಜ – ಪ್ರಾಸ ಪದಗಳು

ಪದ್ಯ ೭೮: ಆನೆಗಳು ಹೇಗೆ ಹೋರಾಡಿದವು?

ಹೊಕ್ಕವಾನೆಗಳೆರಡು ಸೇನೆಯೊ
ಳೊಕ್ಕಲಿಕ್ಕಿದವೆಸುವ ಜೋದರ
ತೆಕ್ಕೆಗೋಲಿನ ಮಾಲೆ ಮುಕ್ಕುಳಿಸಿದವು ದಿಗುತಟವ
ಉಕ್ಕಿನುರುಳಿಯೊಳಿಡುವ ಖಂಡೆಯ
ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು (ಭೀಷ್ಮ ಪರ್ವ, ೪ ಸಂಧಿ, ೭೮ ಪದ್ಯ)

ತಾತ್ಪರ್ಯ:
ಎರಡೂ ಬಲಗಳ ಆನೆಗಳು ಹೊಕ್ಕು ಸೈನ್ಯಗಳನ್ನು ಬಡಿದವು. ಮಾವುತರ ಬಾಣಗಳು ದಿಕ್ತಟಗಳನ್ನು ಚುಂಬಿಸಿದವು. ಮೈಗಳಲ್ಲಿ ಬಾಣಗಳು ನಟ್ಟು ಮಾಂಸಖಂಡಗಳು ಹೊರಬಂದವು. ಎಲ್ಲೆಲ್ಲೂ ಕೋಲಾಹಲವಾಗುತ್ತಿರಲು ಆನೆಗಳು ಹೋರಾಡಿದವು.

ಅರ್ಥ:
ಹೊಕ್ಕು: ಸೇರು; ಆನೆ: ಇಭ, ಕರಿ; ಸೇನೆ: ಸೈನ್ಯ; ಉಕ್ಕು: ಪರಾಕ್ರಮ, ಹೆಚ್ಚಾಗು; ಎಸೆ: ತೋರು; ಜೋಧ: ಯೋಧ, ಆನೆ ಮೇಲೆ ಕೂತು ಹೋರಾಡುವವ; ತೆಕ್ಕೆ: ಅಪ್ಪುಗೆ, ಆಲಿಂಗನ; ಕೋಲು: ಬಾಣ; ಮುಕ್ಕುಳಿಸು: ಎಗರು; ದಿಗುತಟ: ದಿಕ್ಕುಗಳ ಕೊನೆ; ಉಕ್ಕು: ಹಿಗ್ಗುವಿಕೆ, ಉತ್ಸಾಹ; ಉರುಳು: ಉರುಳುವಿಕೆ; ಖಂಡೆಯ: ಕತ್ತಿ; ಘಾಯ: ಪೆಟ್ಟು; ಪಟ್ಟೆ: ಲೋಹದ ಪಟ್ಟಿ; ಅಕ್ಕಜ: ಆಶ್ಚರ್ಯ, ಅಸೂಯೆ; ಹೊಯಿಲು: ಏಟು, ಹೊಡೆತ, ಕದನ; ಕಾದು: ಹೋರಾದು; ಆನೆ: ಕರಿ; ಮಾಲೆ: ಹಾರ;

ಪದವಿಂಗಡಣೆ:
ಹೊಕ್ಕವ್+ಆನೆಗಳ್+ಎರಡು +ಸೇನೆಯೊಳ್
ಉಕ್ಕಲಿಕ್ಕಿದವ್+ಎಸುವ +ಜೋದರ
ತೆಕ್ಕೆಗೋಲಿನ+ ಮಾಲೆ +ಮುಕ್ಕುಳಿಸಿದವು+ ದಿಗುತಟವ
ಉಕ್ಕಿನ್+ಉರುಳಿಯೊಳ್+ಇಡುವ +ಖಂಡೆಯ
ದಿಕ್ಕಡಿಯ +ಘಾಯಗಳ+ ಪಟ್ಟೆಯದ್
ಅಕ್ಕಜದ+ ಹೊಯಿಲೆಸೆಯೆ+ ಕಾದಿದವ್+ಆನೆ+ಆನೆಯೊಳು

ಅಚ್ಚರಿ:
(೧) ಆನೆಗಳು ಹೋರಾಡಿದ ಪರಿ – ಉಕ್ಕಿನುರುಳಿಯೊಳಿಡುವ ಖಂಡೆಯ ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು

ಪದ್ಯ ೧೪: ಕೃಷ್ಣನಿಗೇಕೆ ದೃಷ್ಟಿಯನ್ನು ನಿವಾಳಿಸಬೇಕೆಂದು ಶಿಶುಪಾಲನು ಹೇಳಿದ?

ಹಕ್ಕಿ ಹರಿಣಿಯ ತರಿದಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಕ್ಕಿ ಜಿಂಕೆಗಳನ್ನು ಸಾಯಿಸಬಲ್ಲದೆ? ದೊಡ್ಡ ಕುದುರೆಯನ್ನು ಈ ಕೃಷ್ಣನು ಬೀಳಿಸಿದನಲ್ಲವೇ, ಇನ್ನು ಹೆಚ್ಚು ಹೇಳು ಭೀಷ್ಮ ಈ ಕೃಷ್ಣನ ಪರಾಕ್ರಮವನ್ನು! ಇವನೇನಾದರೂ ಹೆಬ್ಬಾವಿನ ಹೊಟ್ಟೆಹೊಳಕ್ಕೆ ಹೋಗಿ ಅದನ್ನು ಸೀಳಿ ಕೊಂಡನೇ? ಈ ಗೊಲ್ಲನ ಪೌರುಷವು ಆಶ್ಚರ್ಯಕರವಲ್ಲವೇ? ಅವನಿಗೆ ದೃಷ್ಟಿಯಾದೀತು ನಿವಾಳಿಸು ಎಂದು ವ್ಯಂಗವಾಗಿ ಶಿಶುಪಾಲನು ನುಡಿದನು.

ಅರ್ಥ:
ಹಕ್ಕಿ: ಪಕ್ಷಿ; ಹರಿಣಿ: ಜಿಂಕೆ; ತರಿ: ಕಡಿ, ಕತ್ತರಿಸು; ಗಡ: ಅಲ್ಲವೇ; ಕೈ: ಹಸ್ತ; ಕಡು: ವಿಶೇಷ, ಅಧಿಕ; ಕುದುರೆ: ಅಶ್ವ; ನೆಲಕಿಕ್ಕು: ಬೀಳಿಸು; ನೆರೆ: ಹೆಚ್ಚು; ಆಳ್ತನ: ಪರಾಕ್ರಮ; ಹೊಕ್ಕು: ಸೇರು; ಹೆಬ್ಬಾವು: ದೊಡ್ಡ ಹಾವು; ಬಸುರ: ಹೊಟ್ಟೆ; ಸೀಳು: ತುಂಡು ಮಾಡು; ಯಾದವ: ಕೃಷ್ಣ; ಪೌರುಷ: ಪರಾಕ್ರಮ; ಅಕ್ಕಜ: ಆಶ್ಚರ್ಯ, ಅತಿಶಯ; ತೂಪಿರಿ: ದೃಷ್ಟಿ ದೋಷ ಪರಿ ಹಾರಕ್ಕಾಗಿ ಹಾಗೂ ರಕ್ಷೆಗಾಗಿ ನೆತ್ತಿಯ ಮೇಲೆ ಊದು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಹಕ್ಕಿ +ಹರಿಣಿಯ +ತರಿದ+ಗಡ +ಕೈ
ಯಿಕ್ಕಿದರೆ +ಕಡು+ಕುದುರೆಯನು +ನೆಲಕ್
ಇಕ್ಕಿದನೆ+ ನೆರೆ+ ಹೇಳು +ಹೇಳಾ +ಕೃಷ್ಣನ್+ಆಳ್ತನವ
ಹೊಕ್ಕು +ಹೆಬ್ಬಾವಿನ +ಬಸುರ+ ಸೀ
ಳಿಕ್ಕಿದನೆ+ ಯಾದವನ+ ಪೌರುಷವ್
ಅಕ್ಕಜವಲಾ +ಭೀಷ್ಮ +ತೂಪಿರಿಯೆಂದನಾ +ಚೈದ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಕ್ಕಿ ಹರಿಣಿಯ ತರಿದಗಡ
(೨) ಭೀಷ್ಮರನ್ನು ಹಂಗಿಸುವ ಪರಿ – ನೆರೆ ಹೇಳು ಹೇಳಾ ಕೃಷ್ಣನಾಳ್ತನವ
(೩) ಹಕ್ಕಿ, ಕೈಯಿಕ್ಕಿ, ಸೀಳಿಕ್ಕಿ – ಪ್ರಾಸ ಪದಗಳು

ಪದ್ಯ ೫೧: ಭೀಮನು ದುಶ್ಯಾಸನನನ್ನು ಹೇಗೆ ಮೂದಲಿಸಿದನು?

ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲಾ ಸ್ವಾಮಿದ್ರೋಹಿಯೇ ನನಗೆ ಸಿಕ್ಕಿದೆಯಲಾ ಈಗ, ಬಹಳ ಮದದಿಂದ ಬೀಗುತ್ತಿದ್ದೆ! ಹಿಂದೆ ಜೂಜಾಟದಲ್ಲಿ ಹೊಟ್ಟೆಕಿಚ್ಚು ಪಟ್ಟು ದ್ರೌಪದಿಯ ಮುಡಿಗೆ ಕೈಹಾಕಿ ನಿನ್ನ ಕೋಪವನ್ನು ತೋರಿಸಿದೆಯಲ್ಲವೇ? ನಿನ್ನವರು ಕ್ಷುಲ್ಲಕರು, ನಿನ್ನೊಬ್ಬನನ್ನು ಕೈಬಿಟ್ಟು ನೋಡುತ್ತಿದ್ದಾರೆ, ಯುದ್ಧಕ್ಕೆ ಬಾ ಎಂದು ಹೇಳು, ಹೀಗೆ ಹೇಳುತ್ತಾ ಭೀಮನು ದುಶ್ಯಾಸನನನ್ನು ಮೂದಲಿಸಿದನು.

ಅರ್ಥ:
ಸಿಕ್ಕು: ಬಂಧಿಸು; ಸ್ವಾಮಿದ್ರೋಹಿ: ವಿಶ್ವಾಸಘಾತುಕ; ಸ್ವಾಮಿ: ಒಡೆಯ; ದ್ರೋಹಿ: ವಂಚಕ; ಸೊಕ್ಕು: ಅಮಲು, ಮದ; ಹಿಂದೆ: ಮೊದಲು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಅಕ್ಕಜ: ಹೊಟ್ಟೆಕಿಚ್ಚು; ಮಾನಿನಿ: ಹೆಣ್ಣು; ಮುಡಿ: ತಲೆ; ವಿಡಿದು: ಹಿಡಿ, ಬಂಧಿಸು; ಚುಕ್ಕಿಗಳು: ಅಲ್ಪರು; ಅಕಟ: ಅಯ್ಯೋ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಸಿಕ್ಕಿದೆಯಲಾ+ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ +ಹಿಂದೆ +ಜೂಜಿನಲ್
ಅಕ್ಕಜವ+ ಮಾಡಿದೆಯಲಾ+ ಮಾನಿನಿಯ+ ಮುಡಿವಿಡಿದು
ಚುಕ್ಕಿಗಳಲಾ+ ನಿನ್ನವರು +ಕೈ
ಯಿಕ್ಕ +ಹೇಳಾ +ನಿನ್ನನೊಬ್ಬನನ್
ಇಕ್ಕಿ+ ನೋಡಿದರ್+ಅಕಟೆನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಸಿಕ್ಕಿ, ಸೊಕ್ಕಿ, ಚುಕ್ಕಿ, ಇಕ್ಕಿ – ಪ್ರಾಸ ಪದಗಳು
(೨) ನಿನ್ನವರು ಹೇಡಿಗಳು ಎಂದು ಹೇಳಲು – ಚುಕ್ಕಿಗಳಲಾ ನಿನ್ನವರು

ಪದ್ಯ ೪: ದೂತನ ಮಾತನ್ನು ಕೇಳಿದ ಕೂಡಲೆ ಧರ್ಮಜನು ಎಲ್ಲಿಗೆ ಪ್ರಯಾಣ ಬೆಳಸಿದನು?

ಉಕ್ಕಿ ವಿಸಟಂಬರಿವ ಹರುಷದ
ತೆಕ್ಕೆಯಲಿ ಕೈಗೊಡುವ ನೃಪತಿಗ
ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ
ಮಿಕ್ಕು ಬರೆ ಬರೆ ಕೃಷ್ಣನನು ಕಂ
ಡೊಕ್ಕನೊಡಲನು ಚರಣದಲಿ ಸಾ
ಕಕ್ಕಜವಿದೇನೆನುತ ನೆಗಹಿದನಂದು ಧರ್ಮಜನ (ಉದ್ಯೋಗ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ದೂತನ ಮಾತನ್ನು ಕೇಳಿ ಅತೀವ ಸಂತಸಗೊಂಡ ಧರ್ಮಜನ ಮನಸ್ಸಿನಲ್ಲಿ ಸಂತಸವು ಉಕ್ಕಿ ಹರಿಯಿತು. ಆತನ ಎರಡು ಬದಿಯಲ್ಲೂ ರಾಜರು ಅವನ ಕೈಯನ್ನು ಹಿಡಿದು ನಡೆಸುತ್ತಿರಲು, ಧರ್ಮಜನು ಅವನ ಸಮಸ್ತ ಸೈನ್ಯರೊಡನೆ ಕೃಷ್ಣನನ್ನು ನೋಡಲು ಹೊರಟನು. ಕೃಷ್ಣನನ್ನು ನೋಡಿದ ಕೂಡಲೆ ಅವನ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದನು. ಆಗ ಕೃಷ್ಣನು ‘ಇದೇನು ವಿಚಿತ್ರ’ ಎಂದು ಅವನನ್ನು ಮೇಲಕೆತ್ತಿದನು.

ಅರ್ಥ:
ಉಕ್ಕು:ಹಿಗ್ಗುವಿಕೆ, ಉತ್ಸಾಹ; ವಿಸಟ: ಯಥೇಚ್ಛವಾಗಿ, ಮನ ಬಂದಂತೆ; ಅಂಬರ: ಆಕಾಶ, ಹತ್ತಿರ; ವಿಸಟಂಬರಿ: ಸ್ವೇಚ್ಛೆಯಾಗಿ ಓಡಾಡು; ಹರುಷ: ಸಂತೋಷ; ತೆಕ್ಕೆ:ಅಪ್ಪುಗೆ, ಆಲಿಂಗನ; ಕೈ: ಕರ; ಕೊಡು: ಹಿಡಿ; ನೃಪ: ರಾಜ; ಇಕ್ಕೆಲ: ಎರಡು ಕಡೆ; ಹೊರವಂಟ: ಹೊರಟ; ಸಕಲ: ಎಲ್ಲಾ, ಸಮಸ್ತ; ದಳ: ಸೈನ್ಯ; ಸಹಿತ: ಜೊತೆ; ಮಿಕ್ಕು: ಉಳಿದ; ಬರೆ: ಸೀಮಾ ರೇಖೆ;ಕಂಡು: ನೋಡಿ; ಒಕ್ಕನ್: ಕೂಡಲೆ; ಒಡಲು: ದೇಹ; ಚರಣ: ಪಾದ; ಸಾಕು: ಆಗಬಹುದು, ಕೊನೆ; ಅಕ್ಕಜ: ಆಶ್ಚರ್ಯ, ಪ್ರೀತಿ; ನೆಗಹು: ಮೇಲೆತ್ತು;

ಪದವಿಂಗಡಣೆ:
ಉಕ್ಕಿ+ ವಿಸಟಂಬರಿವ +ಹರುಷದ
ತೆಕ್ಕೆಯಲಿ +ಕೈಗೊಡುವ +ನೃಪತಿಗಳ್
ಇಕ್ಕಲಿಸೆ+ ಹೊರವಂಟನ್+ ಅರಸನು +ಸಕಲದಳ +ಸಹಿತ
ಮಿಕ್ಕು +ಬರೆ +ಬರೆ +ಕೃಷ್ಣನನು +ಕಂಡ್
ಒಕ್ಕನ್+ಒಡಲನು +ಚರಣದಲಿ+ ಸಾಕ್
ಅಕ್ಕಜ +ವಿದೇನ್+ಎನುತ +ನೆಗಹಿದನ್+ಅಂದು +ಧರ್ಮಜನ

ಅಚ್ಚರಿ:
(೧) ನೃಪ, ಅರಸ – ಸಮನಾರ್ಥಕ ಪದ
(೨) ಕೂಡಲೆ ನಮಸ್ಕರಿಸಿದನು ಎಂದು ಹೇಳಲು – ಒಕ್ಕನೊಡಲನು ಚರಣದಲಿ