ಪದ್ಯ ೯೪: ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಯಾರಿಂದ ನಿರೀಕ್ಷಿಸಿದಳು?

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ (ಸಭಾ ಪರ್ವ, ೧೫ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ, ಅಯ್ಯೋ ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೇ ನಿಮ್ಮ ಪತ್ನಿಯನ್ನು ಮರಣದ ಗಂಟಲಿಗೆ ಒಪ್ಪಿಸಿ ಕೊಟ್ಟಿರಾ? ಭ್ರಮೆಯಿಂದ ವಿವೇಚನೆಯನ್ನೇ ಕಳೆದುಕೊಂಡಿರಾ? ಹಾಗೆ ಆಗಲಿ, ಆದರೆ ಭೀಷ್ಮ, ದ್ರೋಣ, ಬಾಹ್ಲಿಕ, ಕೃಪನೇ ಮೊದಲಾದವರೇ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಿ ಎಂದು ದ್ರೌಪದಿ ಕೇಳಿದಳು.

ಅರ್ಥ:
ಅಕಟ: ಅಯ್ಯೋ; ಆದಿ: ಮೊದಲಾಗಿ; ಬಾಲಕಿ: ಹೆಣ್ಣು; ಒಪ್ಪು: ಸಮ್ಮತಿ; ಕೊಡು: ನೀಡು; ಮೃತ್ಯು: ಸಾವು; ತಾಳಿಗೆ: ಗಂಟಲು; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಕುಟಿಲ: ಮೋಸ; ಉತ್ತರ: ಪರಿಹಾರ; ಕೊಡಿ: ನೀಡಿ; ಅಬುಜಾಕ್ಷಿ: ಕಮಲದ ಕಣ್ಣಿನವಳು, ಹೆಣ್ಣು (ದ್ರೌಪದಿ)

ಪದವಿಂಗಡಣೆ:
ಅಕಟ +ಧರ್ಮಜ +ಭೀಮ +ಫಲುಗುಣ
ನಕುಲ +ಸಹದೇವ+ಆದ್ಯರಿರ+ ಬಾ
ಲಿಕಿಯನ್+ಒಪ್ಪಿಸಿ +ಕೊಟ್ಟಿರೇ +ಮೃತ್ಯುವಿನ +ತಾಳಿಗೆಗೆ
ವಿಕಳರಾದಿರೆ+ ನಿಲ್ಲಿ+ ನೀವೀಗ್
ಅಕುಟಿಲರಲಾ +ಭೀಷ್ಮ +ಗುರು+ ಬಾ
ಹ್ಲಿಕ+ ಕೃಪಾದಿಗಳ್+ಉತ್ತರವ+ ಕೊಡಿ+ಎಂದಳ್+ಅಬುಜಾಕ್ಷಿ

ಅಚ್ಚರಿ:
(೧) ದ್ರೌಪದಿಯ ಸಂಕಟ – ಬಾಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ,
ವಿಕಳರಾದಿರೆ
(೨) ದ್ರೌಪದಿಯನ್ನು ಕರೆದ ಪರಿ – ಬಾಲಕಿ, ಅಬುಜಾಕ್ಷಿ

ಪದ್ಯ ೪೩: ಶಲ್ಯನು ಕರ್ಣನಿಗೆ ಯಾರನ್ನು ಕೊಲ್ಲಲು ಹೇಳಿದನು?

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನು ನಕುಲ, ಸಹದೇವ, ಸಾತ್ಯಕಿ, ಯುಧಿಷ್ಠಿರರ ಮೇಲೆ ದಾಳಿ ಮಾಡುತ್ತಿದುದನ್ನು ನೋಡಿದ ಶಲ್ಯನು ಅಯ್ಯೋ, ಕರ್ಣ ಇವರೆಲ್ಲರೂ ನೀತಿವಂತರು, ಕುಟಿಲತೆಯನ್ನರಿಯದವರು, ಧರ್ಮಮಾರ್ಗದಲ್ಲಿ ನಡೆಯುವವರು, ಇವರನ್ನು ಕೊಲ್ಲಬೇಡ, ಭೀಮಾರ್ಜುನರಿಬ್ಬರೇ ನಮಗೆ ಬಾಧಕರು, ಅವರನ್ನು ಸಂಹರಿಸು ಎಂದು ಕರ್ಣನಿಗೆ ಶಲ್ಯನು ಹೇಳಿದನು

ಅರ್ಥ:
ಅಕಟಕಟ: ಅಯ್ಯೋ; ನರೇಶ: ರಾಜ; ಅಕುಟಿಲ: ಸಾತ್ವಿಕರು, ಕುಟಿಲತೆಯನ್ನರಿಯದವರು; ನಯ: ಶಾಸ್ತ್ರ, ಮೃದುತ್ವ; ಕೋವಿದ; ಪಂಡಿತ; ಧಾರ್ಮಿಕ: ಧರ್ಮ ಮಾರ್ಗಿಗಳು; ಕೊಲು: ಸಾಯಿಸು; ಅತಿ: ಬಹಳ; ಬಾಧಕ: ತೊಂದರೆ; ಸಂಹರಿಸು: ಸಾಯಿಸು;

ಪದವಿಂಗಡಣೆ:
ಅಕಟಕಟ +ರಾಧೇಯ +ಕೇಳ್+ ಈ
ನಕುಳನ್+ಈ+ ಸಹದೇವನ್+ಈ+ ಸಾ
ತ್ಯಕಿ +ನರೇಶ್ವರರ್+ಎನಿಸುವ್+ಈ+ ಕುಂತೀ+ಕುಮಾರಕರು
ಅಕುಟಿಲರು+ ನಯಕೋವಿದರು +ಧಾ
ರ್ಮಿಕರ+ ಕೊಲಬೇಡಿವರನ್+ಅತಿ+ ಬಾ
ಧಕರು +ಭೀಮಾರ್ಜುನರ +ಸಂಹರಿಸೆಂದನಾ +ಶಲ್ಯ

ಅಚ್ಚರಿ:
(೧) ಅಕುಟಿಲ, ನಯಕೋವಿದ, ಧಾರ್ಮಿಕ – ಗುಣಗಾನ ಪದಗಳು

ಪದ್ಯ ೪೯: ಧರ್ಮಜನ ಮೇಲೆ ಕರ್ಣನು ಯಾವ ಬಾಣವನ್ನು ಬಿಟ್ಟನು?

ಅಕಟ ಚಂದ್ರಿಕೆ ಗೆದ್ದುದೋ
ಪಾವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿನೋಡಾದಡೆನುತೆಚ್ಚನು ಮಹೀಪತಿಯ (ಕರ್ಣ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಯ್ಯೋ! ಬೆಳದಿಂಗಳು ಬೆಂಕಿಯ ಝಳವನ್ನು ಗೆದ್ದಿತು, ಧರ್ಮಜನ ಬಾಣದಿಂದ ಕರ್ಣನು ನೊಂದನು, ಆಹಾ ಮಹಾದೇವ.. ಧರ್ಮರಾಯ ನೀವು ಮೋಸಮಾಡದವರು, ನಮ್ಮಂತೆ ಪರರಿಗೆ ತೊಂದರೆಯನ್ನು ಕೊಡದವರು, ಹಾಗಾದರೆ ನೀವು ಪರಶುರಾಮರ ಈ ಬಾಣದ ಸವಿಯನ್ನು ಆಹ್ಲಾದಿಸಿ ಎಂದು ಕರ್ಣನು ಧರ್ಮಜನ ಮೇಳೆ ಬಾಣವನ್ನು ಬಿಟ್ಟನು.

ಅರ್ಥ:
ಅಕಟ: ಅಯ್ಯೋ; ಚಂದ್ರಿಕೆ:ಬೆಳದಿಂಗಳು; ಗೆದ್ದು: ಜಯ; ಪಾವಕ: ಬೆಂಕಿ, ಅಗ್ನಿ; ಝಳ: ಶಾಖ, ಉಷ್ಣತೆ; ವಿಕಳ: ಭ್ರಮೆ, ಭ್ರಾಂತಿ; ಶರ: ಬಾಣ; ನೊಂದನು: ನೋವನ್ನುಂಡನು, ತೊಂದರೆ; ಅಕುಟಿಲ: ಮೋಸ ಮಾಡದವ; ಎಮ್ಮವೊಲು: ನಮ್ಮ ಹಾಗೆ; ಬಾಧಕ: ತೊಂದರೆ ಕೊಡುವವ; ಪರರು: ಇತರರು; ಧರ: ಹಿಡಿದವ; ಪರಶುಧರ: ಪರಶುರಾಮ; ಸಾಯಕ: ಬಾಣ; ಸವಿ: ತಿನ್ನು, ಆನಂದಿಸು; ಎಚ್ಚು: ಬಾಣಬಿಡು; ಮಹೀಪತಿ: ಭೂಮಿಯ ಒಡೆಯ (ರಾಜ);

ಪದವಿಂಗಡಣೆ:
ಅಕಟ +ಚಂದ್ರಿಕೆ+ ಗೆದ್ದುದೋ
ಪಾವಕನ +ಝಳವ್+ಈ+ ಧರ್ಮಪುತ್ರನ
ವಿಕಳ+ ಶರದಲಿ+ ಕರ್ಣ+ನೊಂದನಲಾ +ಮಹಾದೇವ
ಅಕುಟಿಲರು +ನೀವ್+ಎಮ್ಮವೊಲು+ ಬಾ
ಧಕರೆ +ಪರರಿಗೆ +ಪರಶುಧರ+ ಸಾ
ಯಕದ +ಸವಿನೋಡ್+ಆದಡ್+ಎನುತ್+ಎಚ್ಚನು +ಮಹೀಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಕಟ ಚಂದ್ರಿಕೆ ಗೆದ್ದುದೋ ಪಾವಕನ ಝಳವೀ
(೨) ಕರ್ಣನು ಧರ್ಮರಾಯನನ್ನು ಅಣುಕಿಸುತ್ತಿರುವುದು – ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
(೩) ಶರ, ಸಾಯಕ – ಸಮನಾರ್ಥಕ ಪದ

ಪದ್ಯ ೪೪: ಕೃಷ್ಣನು ತಂತ್ರವನ್ನರಿತ ಬಲರಾಮನು ಹೇಗೆ ಸ್ಪಂದಿಸಿದನು?

ಅಕಟ ದುರ್ಯೋಧನಗೆ ತಪ್ಪಿಸಿ
ಸಕಲಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ ನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ (ಆದಿ ಪರ್ವ, ೧೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ನನ್ನ ಬಯಕೆಯಂತೆ ಸುಭದ್ರೆಯನು ದುರ್ಯೋಧನನಿಗೆ ಕೊಡುವುದನ್ನು ತಪ್ಪಿಸಲು ಯಾದವರೆಲ್ಲರೂ ಇಲ್ಲಿರುವರಲ್ಲ, ಕೃಷ್ಣನ ಕಪಟಮಂತ್ರವಿದು, ಅದನ್ನು ತಿಳಿದುಕೊಳ್ಳಲಾರದ ದಡ್ಡ ನಾನು. ಮರ್ಯಾದೆಯಿರುವವರಿಗೆ ಕುಟಿಲವನ್ನರಿಯದ ಅಂತಃಕರಣವು ತೊಂದರೆಕೊಡುತ್ತದೆ, ಎಂದು ಹುಬ್ಬುಗಂಟಿಟ್ಟುಕೊಂದು ಮುಖವು ಭಯಾನಕರೂಪವನ್ನು ತಾಳಿರಲು ಬಲರಾಮನು ದ್ವಾರಕೆಗೆ ಹೋದನು.

ಅರ್ಥ:
ಅಕಟ: ಅಯ್ಯೋ; ತಪ್ಪಿಸು: ಅಡ್ಡಿಪಡಿಸು; ಸಕಲ: ಎಲ್ಲಾ; ಐದು: ಹೋಗಿಸೇರು;ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಮತಿ: ಬುದ್ಧಿ; ಐಸಲೆ: ಅಲ್ಲವೆ; ಕುಮಂತ್ರ: ಕೆಟ್ಟ, ಕಪಟಮಂತ್ರ; ಕುಟಿಲ:ವಂಚನೆಯಲ್ಲಿ ನಿಪುಣ; ಅಂತಃಕರಣ: ಚಿತ್ತವೃತ್ತಿ, ದಯೆ; ಬಾಧಕ: ತಡೆ; ಗರುವ:ಶ್ರೇಷ್ಠ, ಉತ್ತಮ; ನುತ: ಸ್ತುತಿಸಲ್ಪಡುವ; ಸಭ್ರುಕುಟಿ: ಹುಬ್ಬುಗಂಟಿಟ್ಟುಕೊಂಡು; ರೌದ್ರ: ಭಯಾನಕ; ಆನನ: ಮುಖ; ಮುರಿ: ತೆರಳು; ಪುರ: ಊರು;

ಪದವಿಂಗಡಣೆ:
ಅಕಟ +ದುರ್ಯೋಧನಗೆ +ತಪ್ಪಿಸಿ
ಸಕಲ+ಯಾದವರ್+ಇಲ್ಲಿಗ್+ಐದರೆ
ವಿಕಳಮತಿ +ನಾನ್+ಐಸಲೇ +ಕೃಷ್ಣನ +ಕುಮಂತ್ರವಿದು
ಅ+ಕುಟಿಲ+ಅಂತಃಕರಣತನ+ ಬಾ
ಧಕವಲೇ +ಗರುವರಿಗ್+ ಎನುತ+ ಸ
ಭ್ರುಕುಟಿ +ರೌದ್ರ+ಆನನನು+ ಮುರಿದನು +ಪುರಕೆ +ಬಲರಾಮ

ಅಚ್ಚರಿ:
(೧) ಅಕಟ, ಅಕುಟಿಲ, ಭ್ರುಕುಟಿ – “ಟ” ಕಾರದ ಕೆಲ ಪದಗಳ ಬಳಕೆ
(೨) ಒಳ್ಳೆಯ ಬುದ್ದಿ (ಕುಟಿಲವಿಲ್ಲದ) ಬಾಧೆಯಾಗುತ್ತದೆ ಎಂದು ಹೇಳಿರುವ ಬಗೆ – ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ