ಪದ್ಯ ೬೯: ದುರ್ಯೋಧನನ ಮಕ್ಕಳು ಹೇಗೆ ಪ್ರತಿಕ್ರಿಯಿಸಿದರು?

ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋದನಾತ್ಮಜರು (ದ್ರೋಣ ಪರ್ವ, ೫ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸಾವನ್ನು ಕೇಳಿದ ನೋಡಿದ ದುರ್ಯೋಧನನ ಮಕ್ಕಳು ಬಹಳ ನೊಂದರು. ಅಯ್ಯೋ ನಮ್ಮ ಒಬ್ಬ ಸ್ನೇಹಿತನು ಮಡಿದ, ಎಂದು ಅತ್ತು, ಕೋಪಗೊಂಡು ಕಾಲರುದ್ರನ ಕಣ್ಣನ್ನು ಹೋಲುವ ಕೆಂಗಣ್ಣುಗಳನ್ನು ತಾಳಿ, ಕುಣಿವ ಮೀಸೆ, ಬಿಗಿದ ಹುಬ್ಬು, ಕೋಪದಿಂದಾದಾ ರೋಮಾಂಚನಗಳೊಂದಿಗೆ ಯುದ್ಧಸನ್ನದ್ಧರಾದರು.

ಅರ್ಥ:
ಮಡಿ: ಸಾವು, ಮರಣ; ಅಕಟ: ಅಯ್ಯೋ; ಸಖ: ಸ್ನೇಹಿತ; ಅಡಸು: ಬಿಗಿಯಾಗಿ ಒತ್ತು; ಅಳಲು: ಅತ್ತು, ಕಣ್ಣೀರಿಡು; ಎದ್ದು: ಮೇಲೇಳು; ಕೋಪ: ಕ್ರೋಧ; ಕದು: ತುಂಬ; ಝಳ: ಪ್ರಕಾಶ, ಕಾಂತಿ; ಕಾಲಾಗ್ನಿ:ಪ್ರಳಯಕಾಲದ ಬೆಂಕಿ; ರುದ್ರ: ಶಿವನ ಸ್ವರೂಪ; ಹೋಲು: ಸದೃಶವಾಗು; ಸಿಡಿ: ಚಿಮ್ಮು; ಬಿಗಿ: ಭದ್ರವಾಗಿರುವುದು; ಹುಬ್ಬು: ಕಣ್ಣ ಮೇಲಿನ ಕೂದಲು; ಜಡಿ: ಗದರಿಸು; ರೋಮಾಂಚನ: ಆಶ್ಚರ್ಯ; ಖಾತಿ: ಕೋಪ, ಕ್ರೋಧ; ಕಡುಹು: ಸಾಹಸ; ಮಸಗು: ಹರಡು; ಆತ್ಮಜ: ಮಕ್ಕಳು;

ಪದವಿಂಗಡಣೆ:
ಮಡಿದನ್+ಅಕಟಾ +ತಮ್ಮ +ಸಖನೆಂದ್
ಅಡಸಿದ್+ಅಳಲಿನೊಳ್+ಎದ್ದು +ಕೋಪದ
ಕಡು+ಝಳದ +ಕಾಲಾಗ್ನಿ +ರುದ್ರನ +ಕಣ್ಣ +ಹೋಲುವೆಯ
ಸಿಡಿದ +ಮೀಸೆಯ +ಬಿಗಿದ +ಹುಬ್ಬಿನ
ಜಡಿವ +ರೋಮಾಂಚನದ +ಖಾತಿಯ
ಕಡುಹುಕಾರರು+ ಮಸಗಿದರು +ದುರ್ಯೋದನ್+ಆತ್ಮಜರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಪದ ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ

ಪದ್ಯ ೧೫: ಭೀಷ್ಮನು ಕೃಷ್ಣನನ್ನು ಹೇಗೆ ಬರೆಮಾಡಿಕೊಂಡನು?

ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ (ಭೀಷ್ಮ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಕಾವಲುಗಾರರಿಂದ ಈ ಸುದ್ದಿಯನ್ನು ಕೇಳಿ ತನ್ನ ಮನಸ್ಸಿನಲ್ಲಿ, ಧರ್ಮಜನು ಬಂದನೇ? ಶ್ರೀಕೃಷ್ಣನು ಪಾಂಡವರನ್ನು ಕರೆ ತಂದನೇ? ಕೌರವರನ್ನು ಕೊಂದನೇ! ಶಿವ ಶಿವಾ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ಉಳಿದವರೆಲ್ಲರನ್ನು ಹೊರಗಿಟ್ಟು ಶ್ರೀಕೃಷ್ಣ ಮತ್ತು ಪಾಂಡವರನ್ನು ಮಾತ್ರ ಒಳಕ್ಕೆ ಕಳಿಸಿರಿ ಎನಲು, ಅವರು ಒಳಕ್ಕೆ ಹೋಗಲು ವಿನಯದಿಂದ ಶ್ರೀಕೃಷ್ಣನನ್ನು ಎದುರುಗೊಂಡನು.

ಅರ್ಥ:
ಬಂದು: ಆಗಮಿಸು; ಮುರರಿಪು: ಕೃಷ್ಣ; ಅಕಟಾ: ಅಯ್ಯೋ; ಕೊಂದು: ಕೊಲ್ಲು, ಸಾಯಿಸು; ಮೌನ: ಮಾತನಾಡದಿರುವಿಕೆ; ಮುಳುಗು: ಮರೆಯಾಗು, ಒಳಸೇರು; ಮಂದಿ: ಜನರು; ಹೊರಗೆ: ಆಚೆ; ಬರಹೇಳು: ಒಳಗೆ ಕರೆದು; ನಂದನ: ಮಕ್ಕಳು; ಬರಲು: ಆಗಮಿಸಲು; ಇದಿರು: ಎದುರು; ವಿನಯ: ಆದರ, ವಿಶ್ವಾಸ;

ಪದವಿಂಗಡಣೆ:
ಬಂದನೇ +ಧರ್ಮಜನು +ಮುರರಿಪು
ತಂದನೇ +ಕೌರವರನ್+ಅಕಟಾ
ಕೊಂದನೇ +ಶಿವಶಿವಯೆನುತ +ಮೌನದಲಿ +ಮುಳುಗಿರ್ದು
ಮಂದಿಯನು +ಹೊರಗಿರಿಸಿ+ ಬರಹೇ
ಳೆಂದರ್+ಆಗಲೆ+ ಕೃಷ್ಣ +ಕೊಂತೀ
ನಂದನರು+ ಬರಲ್+ಇದಿರುವಂದನು +ಭೀಷ್ಮ +ವಿನಯದಲಿ

ಅಚ್ಚರಿ:
(೧) ಬಂದನೇ, ತಂದನೇ, ಕೊಂದನೇ – ಪ್ರಾಸ ಪದಗಳು
(೨) ಮ ಕಾರದ ತ್ರಿವಳಿ ಪದ – ಮೌನದಲಿ ಮುಳುಗಿರ್ದು ಮಂದಿಯನು

ಪದ್ಯ ೧೭: ಸೈನ್ಯದವರು ಏನು ಹೇಳುತ್ತಾ ಮುಂದೆ ಹೋದರು?

ಇನ್ನರಿಯಬಹುದೆನುತ ರಾಯನ
ಮನ್ನಣೆಯ ಮದಸೊಕ್ಕಿದಾನೆಗ
ಳೆನ್ನ ಬಿಡು ಬಿಡು ತನ್ನ ಬಿಡು ಬಿಡು ಎನುತ ಖಾತಿಯಲಿ
ತಿನ್ನಡಗನೊಡೆಹೊಯ್ದು ಭೀಮನ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರೆನುತೊದಗಿದರು ದುಶ್ಯಾಸನಾದಿಗಳು (ಕರ್ಣ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇನ್ನು ತಿಳಿಯಬಹುದು ಎನ್ನುತ್ತಾ ಕೌರವನ ಮನ್ನಣೆಯ ವೀರರು ಮದದಿಂದ ಸೊಕ್ಕಿದ ಆನೆಯ ರೀತಿ ನನ್ನನ್ನು ಬಿಡು ತನ್ನನ್ನು ಬಿಡು ಎಂದು ಪೈಪೋಟಿಯಲಿ ಉತ್ಸಾಹದಿಂದ ಭೀಮನ ಮಾಂಸವನ್ನು ತಿನ್ನು, ಕರುಳುಗಳನ್ನು ಬೆನ್ನಲ್ಲಿ ಕೀಳು, ಕುನ್ನಿಗಳಾ ಎಂದು ಅರಚುತ್ತಾ ದುಶ್ಯಾಸನಾದಿಗಳು ಮುನ್ನುಗ್ಗಿದರು.

ಅರ್ಥ:
ಅರಿ: ತಿಳಿ; ರಾಯ: ರಾಜ; ಮನ್ನಣೆ: ಗೌರವ, ಮರ್ಯಾದೆ; ಮದ: ಅಹಂಕಾರ; ಸೊಕ್ಕು: ಅಮಲು, ಮದ; ಆನೆ: ಕರಿ, ಗಜ; ಬಿಡು: ತೊರೆ; ಖಾತಿ: ಕೋಪ, ಕ್ರೋಧ; ತಿನ್ನು: ಭಕ್ಷಿಸು; ಅಡಗು: ಮಾಂಸ;ಒಡೆ: ಸೀಳು; ಹೊಯ್ದು: ಹೊಡೆದು; ಬೆನ್ನು: ಹಿಂಭಾಗ; ಅಲುಗು:ಅಳ್ಳಾಡು, ಅದುರು; ತನಿ: ಹೆಚ್ಚಾದ, ಅತಿಶಯವಾದ; ಕರುಳ: ಪಚನಾಂಗ; ಅಕಟ: ಅಯ್ಯೋ; ಕುನ್ನಿ: ನಾಯಿ; ಒದಗು: ಉಂಟಾಗು, ದೊರಕು; ಆದಿ: ಮುಂತಾದ;

ಪದವಿಂಗಡಣೆ:
ಇನ್ನರಿಯಬಹುದ್+ಎನುತ +ರಾಯನ
ಮನ್ನಣೆಯ +ಮದ+ಸೊಕ್ಕಿದ್+ಆನೆಗಳ್
ಎನ್ನ +ಬಿಡು +ಬಿಡು +ತನ್ನ +ಬಿಡು +ಬಿಡು +ಎನುತ +ಖಾತಿಯಲಿ
ತಿನ್ನ್+ಅಡಗನ್+ಒಡೆಹೊಯ್ದು+ ಭೀಮನ
ಬೆನ್ನಲುಗಿ+ ತನಿ+ಕರುಳನ್+ಅಕಟಾ
ಕುನ್ನಿಗಳಿರ್+ಎನುತ್+ಒದಗಿದರು+ ದುಶ್ಯಾಸನಾದಿಗಳು

ಅಚ್ಚರಿ:
(೧) ಕೌರವ ಸೈನಿಕರನ್ನು ಸೊಕ್ಕಿದ ಮದದಾನೆಗೆ ಹೋಲಿಸಿರುವುದು

ಪದ್ಯ ೨೦: ಪಾಂಡವರ ಸೈನ್ಯವು ಕರ್ಣನನ್ನು ಹೇಗೆ ಎದುರಿಸಿತು?

ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾಯಾರ ಸೋನೆಯಲಿ (ಕರ್ಣ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಓಹೋ ದೊರೆಗಳ ಮೇಲೇ ಯುದ್ಧವು ಬಿದ್ದಿದೆ, ಅಯ್ಯೋ ಸೈನಿಕರೇ ಯಾರು ಹಿಮ್ಮೆಟ್ಟಬೇಡಿ, ಎದುರಾಗಿರುವವನು ನಮ್ಮ ಭೀಷ್ಮನೂ ಅಲ್ಲ ದ್ರೋಣನು ಅಲ್ಲ. ಹೆದರದಿರಿ ಎಲ್ಲರೂ ಒಟ್ಟಾಗಿ ಇವನನ್ನು ಆವರಿಸಿ ಮುತ್ತಿಗೆ ಹಾಕಿರಿ ಎನ್ನುತ್ತಾ ಕರ್ಣನನ್ನು ಮುತ್ತಿ ಬಾಣಗಳ ಮಳೆಗೆರೆಯಲು ಕರ್ಣನ ದಾರಿಯನ್ನು ತಪ್ಪಿಸಿದರು.

ಅರ್ಥ:
ಎಲೆಲೆ: ಓಹೋ; ರಾಯ: ರಾಜ; ಬಿದ್ದು: ಆಕ್ರಮಣ; ಕಲಹ: ಯುದ್ಧ; ಅಕಟಾ: ಅಯ್ಯೋ; ಹೋಗು: ತೆರಳು; ಇಟ್ಟಳಿಸು: ದಟ್ಟವಾಗು, ಒತ್ತಾಗು; ಹಗೆ: ವೈರಿ; ಅಳುಕು: ಹೆದರು; ಕವಿ: ಆವರಿಸು, ಮುಚ್ಚು; ಹೆಬ್ಬಲ: ದೊಡ್ಡ ಸೈನ್ಯ; ಸಘಾಡ: ರಭಸ, ವೇಗ; ಔಕು: ಒತ್ತು; ಹೊಲಬು: ದಾರಿ, ಮಾರ್ಗ; ಕೆಡಿಸು: ತಪ್ಪಿಸು; ಅಂಬು: ಬಾಣ; ಸಾರಾಯ: ಸಾರವತ್ತಾದ, ರಸವತ್ತಾದ; ಸೋನೆ: ಮಳೆ;

ಪದವಿಂಗಡಣೆ:
ಎಲೆಲೆ +ರಾಯನ +ಮೇಲೆ +ಬಿದ್ದುದು
ಕಲಹವ್+ಅಕಟಾ +ಹೋಗಬೇಡ್
ಇಟ್ಟಳಿಸಿದವ+ ಹಗೆ +ನಮ್ಮ +ಭೀಷ್ಮ +ದ್ರೋಣನಿವನಲ್ಲ
ಅಳುಕದಿರಿ+ ಕವಿಕವಿಯೆನುತ +ಹೆ
ಬ್ಬಲ +ಸಘಾಡದಲ್+ಔಕಿ +ಕರ್ಣನ
ಹೊಲಬುಗೆಡಿಸಿದುದ್+ಅಂಬುಗಳ+ ಸಾಯಾರ +ಸೋನೆಯಲಿ

ಅಚ್ಚರಿ:
(೧) ಎಲೆಲೆ, ಅಕಟಾ, ಕವಿಕವಿ – ಪದಗಳ ಬಳಕೆ
(೨) ಬಾಣಗಳ ಆವರಿಸಿದವು ಎಂದು ಹೇಳಲು – ಅಂಬುಗಳ ಸಾಯಾರ ಸೋನೆಯಲಿ