ಪದ್ಯ ೪೨: ಧೃತರಾಷ್ಟ್ರನು ಪಾಂಡವರನ್ನು ಹೇಗೆ ಉಪಚರಿಸಿದನು?

ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ (ಗದಾ ಪರ್ವ, ೧೧ ಪದ್ಯ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಭೀಮ ಬಾ, ಅರ್ಜುನನೇ ಬಾ, ಮಾದ್ರಿಯಮಕ್ಕಳೇ ಬನ್ನಿ ಎಂದು ಅವರನ್ನೆಲ್ಲಾ ಆಲಂಗಿಸಿಕೊಂಡು, ಕೌರವ ಕುಲಾಗ್ರಣಿಗಳೇ ಕುಳಿತುಕೊಳ್ಳಿ ಎಂದು ಅವರನ್ನು ಉಪಚರಿಸಿದನು.

ಅರ್ಥ:
ಪವನಸುತ: ವಾಯುಪುತ್ರ; ಬಾ: ಆಗಮಿಸು; ತಕ್ಕವಿಸು: ಆಲಂಗಿಸು; ಬಳಿಕ: ನಂತರ; ಎರಗು: ನಮಸ್ಕರಿಸು; ವಾಸವ: ಇಂದ್ರ; ಸುತ: ಮಗ; ಕಂದ: ಮಗು; ಅಪ್ಪು: ಆಲಂಗಿಸು; ತವಕ: ಬಯಕೆ, ಆತುರ; ಜವಳಿ: ಜೋಡಿ; ಮಕ್ಕಳು: ಪುತ್ರ; ಅಗ್ರಣಿ: ಶ್ರೇಷ್ಠ; ಕುಲ: ವಂಶ; ಕುಳ್ಳಿರಿ: ಆಸೀನ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಪವನಸುತನೇ +ಬಾ +ಎನುತ +ತ
ಕ್ಕವಿಸಿದನು +ಬಳಿಕ್+ಎರಗಿದಡೆ +ವಾ
ಸವನ +ಸುತ +ಬಾ +ಕಂದ +ಎಂದಪ್ಪಿದನು +ಫಲುಗುಣನ
ತವಕದಿಂದ್+ಎರಗಿದಡೆ +ಮಾದ್ರಿಯ
ಜವಳಿಮಕ್ಕಳನ್+ಅಪ್ಪಿದನು +ಕೌ
ರವ+ಕುಲಾಗ್ರಣಿಗಳಿರ +ಕುಳ್ಳಿರಿ+ಎಂದನ್+ಅಂಧನೃಪ

ಅಚ್ಚರಿ:
(೧) ಪವನಸುತ, ವಾಸವನ ಸುತ – ಭೀಮ, ಅರ್ಜುನನನ್ನು ಕರೆದ ಪರಿ
(೨) ಸುತ, ಮಕ್ಕಳು, ಕಂದ – ಸಾಮ್ಯಾರ್ಥ ಪದ

ಪದ್ಯ ೨೩: ಧೃತರಾಷ್ಟ್ರನು ಅಶ್ವತ್ಥಾಮಾದಿಗಳಿಗೆ ಏನೆಂದು ಹೇಳಿದನು.

ಬಂದು ಧೃತರಾಷ್ಟ್ರವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಮ್ಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ (ಗದಾ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮೂವರೂ ಬಂದು ಧೃತರಾಷ್ಟ್ರನ ಮುಂದೆ ನಿಂತು, ರಾತ್ರಿಯಲ್ಲಿ ಪಾಂಡವ ಸೇನೆಯನ್ನು ಕೊಂದ ರೀತಿಯನ್ನು ಧೃತರಾಷ್ಟ್ರನಿಗೆ ಹೇಳಿದರು. ಅವನು ಸೇಡನ್ನು ತೀರಿಸಿಕೊಂಡಿರಾ? ನಿಮ್ಮ ಕರ್ತವ್ಯವನ್ನು ಕೇಳಿ ನನ್ನ ಮಗನು ಏನೆಂದ? ನೀವು ನನಗೆ ಹರುಷವನ್ನು ತಂದಿರಿ ಒಳ್ಳೆಯದಾಯಿತು, ಎಂದು ಸಂತೋಷಪಟ್ಟನು.

ಅರ್ಥ:
ಬಂದು: ಆಗಮಿಸು; ಅವನೀಶ: ರಾಜ; ಮುಂದೆ: ಎದುರು; ನಿಂದು: ನಿಲ್ಲು; ರಾಯ: ರಾಜ; ಕಟಕ: ಸೈನ್ಯ; ಕೊಂದು: ಸಾಯಿಸು; ರಜನಿ: ರಾತ್ರಿ; ರಹ: ಗುಟ್ಟು, ರಹಸ್ಯ; ವರ್ಣಿಸು: ವಿವರಿಸು; ಅರಸ: ರಾಜ; ಸಂದು: ಪಡೆದ; ಛಲ: ದೃಢ ನಿಶ್ಚಯ; ಮಗ: ಸುತ; ಹರಿಬ: ಕೆಲಸ, ಕಾರ್ಯ, ಯುದ್ಧ; ಹರುಷ: ಸಂತಸ; ಲೇಸು: ಒಳಿತು; ಅಂಧ: ಕುರುಡ; ನೃಪ: ರಾಜ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಬಂದು +ಧೃತರಾಷ್ಟ್ರ್+ಅವನೀಶನ
ಮುಂದೆ +ನಿಂದರು +ರಾಯ+ಕಟಕವ
ಕೊಂದ+ ರಜನಿಯ +ರಹವನ್+ಅಭಿವರ್ಣಿಸಿದರ್+ಅರಸಂಗೆ
ಸಂದುದೇ+ ಛಲವೆನ್ನ+ ಮಗನೇನ್
ಎಂದನೈ +ಹರಿಬದಲಿ +ಹರುಷವ
ತಂದಿರೈ +ತಮಗಿನ್ನು +ಲೇಸಾಯ್ತೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರ, ಅಂಧನೃಪ – ಹೆಸರಿಸುವ ಪರಿ
(೨) ಅವನೀಶ, ಅರಸ – ಸಮಾನಾರ್ಥಕ ಪದ

ಪದ್ಯ ೧೧: ದುರ್ಯೊಧನನು ಯಾರನ್ನು ಸಮಾಧಾನ ಪಡಿಸಲು ಹೇಳಿದನು?

ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ (ಗದಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಮಾತಿಗೆ ಉತ್ತರಿಸುತ್ತಾ ದುರ್ಯೋಧನನು, ಅದು ಹಾಗಿರಲಿ, ವೈರ್ಗಳೊಡನೆ ಮಾಡಿದ ಯುದ್ಧದಲ್ಲಿ ನಾವು ಅವಿವೇಕದಿಂದ ವರ್ತಿಸಿದ್ದೇವೆ. ನಮ್ಮನ್ನು ಸೇರಿಸಿ, ಎಲ್ಲರ ಅಂತ್ಯಕ್ರಿಯೆಗಳನ್ನು ಮಾಡಿಸಲು ವೀರರಿಗೆ ತಿಳಿಸಿರಿ. ನಮ್ಮ ತಂದೆ ತಾಯಿಗಳಾದ ಗಾಂಧಾರಿ, ಧೃತರಾಷ್ಟ್ರರನ್ನು ಸಮಾಧಾನ ಪಡಿಸಿ. ಅವರ ಶೋಕವನ್ನು ನಿವಾರಿಸಿರಿ ಎಂದು ಹೇಳಿದನು.

ಅರ್ಥ:
ಸಾಕು: ಕೊನೆ, ಅಂತ್ಯ; ವೈರಿ: ಶತ್ರು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಶೂನ್ಯ: ಬರಿದಾದುದು, ಇಲ್ಲವಾದುದು; ಮೊದಲು: ಮುಂಚೆ; ಉರ್ಧ್ವದೇಹಿಕ: ಸತ್ತ ಮೇಲೆ ಮಾಡುವ ಕರ್ಮ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು; ಅಸ್ತೋಕ: ಅಧಿಕವಾದ; ಪುಣ್ಯ: ಸದ್ಗುಣ ಯುಕ್ತವಾದ; ವಿಗಳಿತ: ಜಾರಿದ, ಸರಿದ; ಶೋಕ: ದುಃಖ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು+ ವೈರಿ
ವ್ಯಾಕರಣ+ಪಾಂಡಿತ್ಯದಲ್ಲಿ +ವಿ
ವೇಕ+ಶೂನ್ಯರು+ ನಾವು +ಮೊದಲಾದ್+ಊರ್ಧ್ವದೈಹಿಕವ
ಆಕೆವಾಳರಿಗ್+ಅರುಹಿ +ನೀವ್
ಅಸ್ತೋಕಪುಣ್ಯರ+ ತಿಳುಹಿ +ವಿಗಳಿತ
ಶೋಕರೆನಿಸುವುದ್+ಅಂಧನೃಪ +ಗಾಂಧಾರಿ+ದೇವಿಯರ

ಅಚ್ಚರಿ:
(೧) ದುರ್ಯೋಧನನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪರಿ – ವೈರಿ ವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು ನಾವು

ಪದ್ಯ ೨: ಧೃತರಾಷ್ಟ್ರನು ಯಾರ ಬಗ್ಗೆ ವಿಚಾರಿಸಿದನು?

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ (ಶಲ್ಯ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಅಯ್ಯೋ ಸಂಜಯ ನೀನು ಹುಚ್ಚ, ಬಿರುಗಾಳಿ ಬೀಸಿದಾಗ ಕುಲಪರ್ವತಗಳ ಬ್ಸುಗೆ ಕಿತ್ತು ಅವು ಹಾರಿಹೋದವು, ಇನ್ನು ಕ್ಷುಲ್ಲಕವಾದ ದಿಬ್ಬಗಳ ಪಾಡೇನು? ಕರ್ಣನ ಸನ್ನಾಹವೇ ನಾಶವಾಗಿ ಹೋಯಿತು, ಇನ್ನು ಕೌರವನ ಪಾಡೇನು? ಶಲ್ಯನ ಗತಿಯೇನು? ಅದು ಹಾಗಿರಲಿ ಕೌರವಕುಲವನ್ನು ನಾಶಮಾಡಿದರೇ ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಮರುಳ: ಮೂಢ; ಗಾಳಿ: ಅನಿಲ, ವಾಯು; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಮಂಡಿಯೂರಿ ಕುಳಿತುಕೊಳ್ಳುವುದು; ಬಿಚ್ಚು: ಹೊರತರು; ಹುಲು: ಕ್ಷುಲ್ಲ; ಮೊರಡಿ: ದಿಣ್ಣೆ, ಗುಡ್ಡ; ಬಿಗು: ಗಟ್ಟಿ; ಬೀತುದು: ಮುಗಿಯಿತು; ಒಡ್ಡವಣೆ: ಗುಂಪು, ಸನ್ನಾಹ; ಪಾಡು: ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಸಾಕು: ನಿಲ್ಲಿಸು; ಸವರು: ನಾಶ; ಅನ್ವಯ: ವಂಶ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಮರುಳೆ +ಸಂಜಯ +ಗಾಳಿಯಲಿ +ಕುಲ
ಗಿರಿಯ +ಬೈಸಿಕೆ +ಬಿಚ್ಚಿದಡೆ +ಹುಲು
ಮೊರಡಿಗಳ +ಬಿಗುಹೇನು +ಬೀತುದು +ಕರ್ಣನ್+ಒಡ್ಡವಣೆ
ಕುರುಪತಿಯ +ಪಾಡೇನು +ಮಾದ್ರೇ
ಶ್ವರನ +ಮತ್ಸರವೇನು +ಸಾಕಂ
ತಿರಲಿ+ ಸವರಿತೆ+ ಕೌರವ+ಅನ್ವಯವ್+ಎಂದನ್+ಅಂಧನೃಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯಲಿ ಕುಲಗಿರಿಯ ಬೈಸಿಕೆ ಬಿಚ್ಚಿದಡೆ ಹುಲುಮೊರಡಿಗಳ ಬಿಗುಹೇನು

ಪದ್ಯ ೮: ಧೃತರಾಷ್ಟ್ರನು ಹೇಗೆ ದುಃಖಿಸಿದನು?

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ (ದ್ರೋಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಂಜಯ, ನಾನು ಬಹಳವಾಗಿ ನೊಂದಿದ್ದೇನೆ, ದುರ್ಯೋಧನನು ಉದ್ಧಾರವಾಗಬಹುದೆಂಬ ಆಶೆ ಬಿಟ್ಟುಹೋಗಿದೆ, ಸುಟ್ಟಗಾಯದ ಮೇಲೆ ಸಾಸಿವೆಯ ಪುಡಿಯನ್ನು ಬಳಿಯಬೇಡ, ನಿನಗೆ ದಯೆಯಿಲ್ಲ, ನಿಮಗೆ ಎಷ್ಟು ಬಲವಿದ್ದರೂ ಶ್ರೀಕೃಷ್ಣನ ವಿರೋಧಿಗಳಾಗಿದ್ದೀರಿ ಎಂದು ಎಷ್ಟು ಬಾರಿ ಎಷ್ಟು ಬಗೆಯಿಂದ ಹೇಳಿದರು ಕೇಳದೇ ಹೋದ ನನ್ನ ಮಗ, ನಾನೇನು ಮಾಡಲಿ ಎಂದು ನೊಂದುಕೊಂಡನು.

ಅರ್ಥ:
ಘಾಸಿ: ದಣಿವು, ಆಯಾಸ; ಮಗ: ಸುತ; ಆಸೆ: ಇಚ್ಛೆ; ಬೀತು: ಕಡಿಮೆಯಾಗು, ಬತ್ತು; ಬೆಂದು: ಪಕ್ವ; ಹುಣ್ಣು: ಗಾಯ; ಬಳಿ: ಹರಡು; ದಯೆ: ಕರುಣೆ; ಬಲುಹು: ಶಕ್ತಿ; ಹಗೆ: ವೈರ; ಹರಿಬ: ಕಾಳಗ; ಏಸು: ಎಷ್ಟು; ಒರಲು: ಹೇಳು ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಘಾಸಿಯಾದೆನು +ಮಗನ +ಮೇಲಿನ್
ಆಸೆ +ಬೀತುದು +ಬೆಂದ +ಹುಣ್ಣಲಿ
ಸಾಸಿವೆಯ +ಬಳಿಯದಿರು +ಸಂಜಯ +ನಿನಗೆ +ದಯವಿಲ್ಲ
ಏಸು+ ಬಲುಹುಂಟಾದರೆಯು+ ಹಗೆ
ವಾಸುದೇವನ +ಹರಿಬವ್+ಎಂದಾನ್
ಏಸನ್+ಒರಲಿದೆನ್+ಏನ +ಮಾಡುವೆನ್+ಎಂದನ್+ಅಂಧನೃಪ

ಅಚ್ಚರಿ:
(೧) ಲೋಕ ನುಡಿ – ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು

ಪದ್ಯ ೨೨: ಮಲ್ಲರು ಹೇಗೆ ಪರಿಚಯಿಸಿಕೊಂಡರು?

ಇಂದುವಂಶದಲಧಿಕರಾಯರ
ವೃಂದದೊಳಗಾ ನಹುಷಪುತ್ರರು
ಸಂದರಾಮಾಲೆಯಲಿ ಬಳಿಕಾ ಶಾಂತ ಭೂಪತಿಗೆ
ನಂದನನು ಜನಿಸಲ್ಕೆಯವನಿಗೆ
ಯಂಧನೃಪ ಜನಿಸಿದನು ಆತನ
ನಂದನನು ಕುರುರಾಯನಾತನ ಮಲ್ಲರಾವೆಂದ (ವಿರಾಟ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಚಂದ್ರವಂಶದಲ್ಲಿ ಹುಟ್ಟಿದ ಅನೇಕ ರಾಜರ ಪರಂಪರೆಯಲ್ಲಿ ನಹುಷನು ಹುಟ್ಟಿದನು. ಅವನ ಪರಂಪರೆಯಲ್ಲಿ ಶಂತನು ಜನಿಸಿದನು. ಅವನ ಮಗನು ವಿಚಿತ್ರವೀರ್ಯ, ಅವನಿಗೆ ಧೃತರಾಷ್ಟ್ರ ಜನಿಸಿದನು. ಅವನ ಮಗನಾದ ದುರ್ಯೋಧನನು ಕುರುಕುಲಾಧಿಪನು, ಅವನ ಮನೆಯ ಮಲ್ಲರು ನಾವು ಎಂದು ಅವರ ಪರಿಚಯವನ್ನು ಮಾಡಿದರು.

ಅರ್ಥ:
ಇಂದು: ಚಂದ್ರ; ವಂಶ: ಕುಲ; ಅಧಿಕ: ಹೆಚ್ಚು; ರಾಯ: ರಾಜ; ವೃಂದ: ಗುಂಪು; ಸಂದು:ಸಂಬಂಧ; ಮಾಲೆ: ಸಾಲು, ಪಂಕ್ತಿ; ಬಳಿಕ: ನಂತರ; ಭೂಪತಿ: ರಾಜ; ನಂದ: ಮಗ; ಜನಿಸು: ಹುಟ್ಟು; ಅಂಧ: ಕುರುಡ; ನೃಪ: ರಾಜ; ಮಲ್ಲ: ಜಟ್ಟಿ;

ಪದವಿಂಗಡಣೆ:
ಇಂದು+ವಂಶದಲ್+ಅಧಿಕ+ರಾಯರ
ವೃಂದದೊಳಗ್+ಆ+ ನಹುಷ+ಪುತ್ರರು
ಸಂದರ್+ಆ+ಮಾಲೆಯಲಿ +ಬಳಿಕಾ+ ಶಾಂತ +ಭೂಪತಿಗೆ
ನಂದನನು +ಜನಿಸಲ್ಕೆ+ಅವನಿಗೆ
ಅಂಧನೃಪ +ಜನಿಸಿದನು +ಆತನ
ನಂದನನು +ಕುರುರಾಯನ್+ಆತನ +ಮಲ್ಲರಾವೆಂದ

ಅಚ್ಚರಿ:
(೧) ನೃಪ, ರಾಯ, ಭೂಪತಿ; ಪುತ್ರ, ನಂದನ – ಸಮನಾರ್ಥಕ ಪದ

ಪದ್ಯ ೩೫: ಧೃತರಾಷ್ಟ್ರನು ಏನು ಹೇಳಿದನು?

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ (ಅರಣ್ಯ ಪರ್ವ, ೨೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನೊಂದಿಗೆ ಮಾತನಾಡುತ್ತಾ, ನೀನು ಹೇಳಿದವರು ಹಾಗೆಯೇ ಇರಲಿ, ಪ್ರಾಯೋಪವೇಶದ ದುರಾಗ್ರಹವನ್ನು ಬಿಟ್ಟು ಬಿಡು. ನೀನು ಹೋದರೆ ಕುರುವಂಶವೇ ಹೋದಂತೆ, ಪಟ್ಟ ಯಾರಿಗೆ? ಬೀದಿ ಜಗಳದಲ್ಲಿ ಒಮ್ಮೆ ಸೋಲಾದರೆ ಅದೇನೂ ಕುಂದಲ್ಲ. ಗೆದ್ದರೂ ಹೆಚ್ಚಲ್ಲ. ಇಷ್ಟಕ್ಕೂ ನಿನ್ನನ್ನು ಉಳಿಸಿದವರು ನಿನ್ನ ಸೋದರರಲ್ಲವೇ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ದುರಾಗ್ರಹ: ಹಟಮಾರಿತನ; ಬೇಡ: ಸಲ್ಲದು, ಕೂಡದು; ಅಳಿವು: ಸಾವು; ಪಟ್ಟ: ಸ್ಥಾನ; ಬೀದಿಗಲಹ: ಬೀದಿ ಜಗಳ; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪರಿಹರ: ನಿವಾರಣೆ; ಸೋದರ: ಅಣ್ಣ ತಮ್ಮ; ಹೆಚ್ಚು: ಅಧಿಕ; ಕುಂದು: ತೊಂದರೆ; ಅಂಧ: ಕಣ್ಣಿಲ್ಲದವ; ನೃಪ: ರಾಜ;

ಪದವಿಂಗಡಣೆ:
ಆದರ್+ಅವರಂತಿರಲಿ+ ನಿನಗಿ
ನ್ನೀ +ದುರಾಗ್ರಹ +ಬೇಡ +ನಿನಗ್+ಅಳಿ
ವಾದೋಡ್+ಈ+ ಕುರುವಂಶವ್+ಅಳಿವುದು +ಪಟ್ಟವ್+ಆವನಲಿ
ಬೀದಿಗಲಹದೊಳ್+ಒಮ್ಮೆ +ಪೈಸರ
ವಾದಡ್+ಅದು +ಪರಿಹರಿಸಿದವರೇ
ಸೋದರರಲಾ+ ಹೆಚ್ಚು+ಕುಂದೇನ್+ಎಂದನ್+ಅಂಧನೃಪ

ಅಚ್ಚರಿ:
(೧) ದುರ್ಯೋಧನನ ಮೇಲಿನ ಪ್ರೀತಿ – ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ

ಪದ್ಯ ೨೨: ಧೃತರಾಷ್ಟ್ರನ ಅಭಿಪ್ರಾಯವೇನು?

ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸುನೆರೆಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹೊರೆಯೇರುವುದು ಮತವಲ್ಲೆಂದನಂಧನೃಪ (ಅರಣ್ಯ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪಾಂಡವರಿಗೆ ಹೊಟ್ಟೆಕಿಚ್ಚು ತರಿಸಿ ನಿಮ್ಮ ಐಶ್ವರ್ಯವು ಸಫಲವಾಗುವುದು ಹೇಗೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಧೃತರಾಷ್ಟ್ರನು ಹೇಳಿದನು. ಕಾಡಿನೊಳಗಿರುವ ಪಾಂಡವರ ಬಳಿಗೆ ಹೋಗುವುದು ಸರಿಯೆ? ಮನಸ್ಸಿನ ಕೋಪದ ಕಿಚ್ಚು ಕೆರಳಿದರೆ ಕೆಡಕಾಗುವುದಿಲ್ಲವೇ? ಭೀಮನ ದುರುಳತನವೂ ದುರ್ಯೋಧನನ ಮತ್ಸರವೂ ಹೆಚ್ಚುತ್ತದೆ. ಇದು ನನಗೆ ಇಷ್ಟವಿಲ್ಲ ಎಂದು ಧೃತರಾಷ್ಟ್ರನು ಅಸಮ್ಮತಿಯನ್ನು ಹೊರಹಾಕಿದನು.

ಅರ್ಥ:
ಸಿರಿ: ಐಶ್ವರ್ಯ; ಸಫಲತೆ: ಸಾರ್ಥಕ, ಯಶಸ್ಸು; ಅರಿ: ತಿಳಿ; ವಿಪಿನ: ಕಾಡು; ಅಂತರಕೆ: ಒಳಗೆ; ಗಮಿಸು: ಹೋಗು; ಉಚಿತ: ಸರಿಯಾದ; ಮನ: ಮನಸ್ಸು; ಮುನಿಸು: ಸಿಟ್ಟು; ನೆರೆ: ಸಮೀಪ, ಹತ್ತಿರ; ಬಲಿದು: ಹೆಚ್ಚಾಗು; ಕೆರಳು: ಉದ್ರಿಕ್ತವಾಗು; ಕಾಳಹ: ಯುದ್ಧ; ದುರುಳ: ದುಷ್ಟವಾದ; ಹುರುಡು: ಪೈಪೋಟಿ, ಸ್ಪರ್ಧೆ; ಹೊರೆ: ಭಾರ; ಏರು: ಹೆಚ್ಚಾಗು; ಮತ: ಅಭಿಪ್ರಾಯ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸಿರಿಗೆ+ ಸಫಲತೆ+ಅಹುದು +ನಾನ್+ಇದನ್
ಅರಿಯೆ +ನೀವ್+ಅವರಿದ್ದ+ ವಿಪಿನಾಂ
ತರಕೆ+ ಗಮಿಸುವುದ್+ಉಚಿತವೇ +ಮನ+ಮುನಿಸು+ನೆರೆ+ಬಲಿದು
ಕೆರಳಿದರೆ+ ಕಾಳಹುದು +ಭೀಮನ
ದುರುಳತನವ್+ಈ+ ಕೌರವೇಂದ್ರನ
ಹುರುಡು +ಹೊರೆ+ಏರುವುದು +ಮತವಲ್ಲೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನ ಚಿಂತೆ – ಭೀಮನ ದುರುಳತನವೀ ಕೌರವೇಂದ್ರನ ಹುರುಡು ಹೊರೆಯೇರುವುದು

ಪದ್ಯ ೪೨: ಧೃತರಾಷ್ಟ್ರನು ಧರ್ಮರಾಯನಿಗೆ ಏನು ಹೇಳಿದ?

ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವದು ಸದ್ಯೂ
ತಾಳಿಯಲಿ ರಮಿಸುವದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಿಂದೆ ನೀವು ಜೂಜಿನಲ್ಲಿ ಸೋತು ಮನನೊಂದು ಹೋದದ್ದು ನಮ್ಮ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಈಗ ನೀವೆರಡು ಪಕ್ಷದವರೂ ಜೊತೆಗೂಡಿ ಸ್ನಾನ, ಭೋಜನಾದಿಗಳನ್ನು ಮಾಡಿರಿ, ಒಳ್ಳೆಯ ವಿನೋದದ ದ್ಯೂತವನ್ನಾಡಿ ಸಂತೋಷದಿಂದಿರಿ, ನಿಮ್ಮ ನಿಮ್ಮಲಿ ಮನಃಕ್ಲೇಷವಿಲ್ಲದೆ ಬದುಕಿರಿ ಎಂದು ಧೃತರಾಷ್ಟ್ರನು ನುಡಿದನು.

ಅರ್ಥ:
ಸೋಲು: ಪರಾಭವ; ಮನ: ಮನಸ್ಸು; ನೊಂದು: ಬೇಜಾರು ಪಟ್ಟು; ಹೋದು: ಕಳೆದ; ಹೋಲದು: ಸರಿತೂಗದು; ಅಭಿಮತ: ಅಭಿಪ್ರಾಯ; ಮೇಳ: ಗುಂಪು, ಸೇರುವಿಕೆ; ಮಜ್ಜನ: ಸ್ನಾನ, ಜಳಕ; ಭೋಜನ: ಊಟ; ಆದಿ: ಮುಂತಾದ; ಲೀಲೆ: ಆಟ, ಕ್ರೀಡೆ, ಸಂತೋಷ; ದ್ಯೂತ: ಜೂಜು; ರಮಿಸು: ಆನಂದಿಸು; ವಿಟಾಳ: ಮಾಲಿನ್ಯ; ಬದುಕು: ಜೀವಿಸು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸೋಲದಲಿ +ಮನನೊಂದು +ಹೋದುದು
ಹೋಲದ್+ಎಮ್ಮ್+ಅಭಿಮತಕೆ+ ನಿಮ್ಮೊಳು
ಮೇಳದಿಂದ್+ಒಂದಾಗಿ +ಮಜ್ಜನ +ಭೋಜನಾದಿಗಳ
ಲೀಲೆಯಲಿ +ಮಾಡುವದು +ಸದ್ಯೂ
ತಾಳಿಯಲಿ +ರಮಿಸುವದು +ಮನದ +ವಿ
ಟಾಳವಿಲ್ಲದೆ +ಬದುಕಿ +ನಿಮ್ಮೊಳಗ್+ಎಂದ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನು ತನ್ನ ತೋರಿಕೆಯ ಇಚ್ಛೆಯನ್ನು ಹೇಳುವ ಪರಿ – ಮನದ ವಿಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ

ಪದ್ಯ ೨೩: ಧೃತರಾಷ್ಟ್ರನು ಯಾರನ್ನು ಬರೆಮಾಡಿಕೊಂಡನು?

ಪ್ರಾತಿಕಾಮಿಕ ಬಾ ಯುಧಿಷ್ಠಿರ
ಭೂತಲೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿ ಪೂರ್ವಕವಲ್ಲದಿಲ್ಲಿ ವಿ
ಘಾತಿಯಿಲ್ಲೆಂದುಚಿತವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಪ್ರಾತಿಕಾಮಿಕನನ್ನು ಕರೆದು, ನೀನು ಇಂದ್ರಪ್ರಸ್ಥನಗರಕ್ಕೆ ಹೋಗು, ಅಲ್ಲಿರುವ ಯುಧಿಷ್ಥಿರನನ್ನು ಭೇಟಿ ಮಾಡಿ ಅವನನ್ನು ಕರೆದುಕೊಂಡು ಬಾ, ನಿಮ್ಮ ದೊಡ್ಡಪ್ಪನಾದ ನಾನು ನಿನ್ನನ್ನು ಕಳಿಸಿದ್ದೇನೆ, ಇದು ಪ್ರೀತಿಪೂರ್ವಕವಾದ ಆಹ್ವಾನ, ಇದರಲ್ಲೇನು ತೊಡಕಿಲ್ಲ ಎಂದು ಅವನಿಗೆ ತಿಳಿಸಿ ಅವನನ್ನು ನಿನ್ನೊಂದಿಗೆ ಕರೆದುಕೊಂಡು ಬಾ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಬಾ: ಆಗಮಿಸು; ಭೂತಲೇಶ: ರಾಜ; ಭೂತಲ: ಭೂಮಿ; ಕರೆ: ಬರೆಮಾಡು; ತಾತ: ತಂದೆ; ಕಳುಹು: ಕಳಿಸು; ಪ್ರೀತಿ: ಒಲವು; ಪೂರ್ವ: ಹಿಂದಣ; ವಿಘಾತ: ನಾಶ, ಧ್ವಂಸ; ಉಚಿತ: ಸರಿಯಾದ; ವಚನ: ಮಾತು; ಒಡಗೊಂಡು: ಸೇರಿ; ಹೋಗು: ತೆರಳು; ಅಂಧ: ಕುರುಡು; ನೃಪ: ರಾಜ;

ಪದವಿಂಗಡಣೆ:
ಪ್ರಾತಿಕಾಮಿಕ +ಬಾ +ಯುಧಿಷ್ಠಿರ
ಭೂತಲೇಶನ +ಕರೆದು +ತಾರೈ
ತಾತ +ಕಳುಹಿದನ್+ಎಂಬುದ್+ಇಂದ್ರಪ್ರಸ್ಥದಲ್ಲಿರಲಿ
ಪ್ರೀತಿ +ಪೂರ್ವಕವ್+ಅಲ್ಲದಿಲ್ಲಿ +ವಿ
ಘಾತಿ+ಇಲ್ಲೆಂದ್+ಉಚಿತ+ವಚನದೊಳ್
ಆತಗಳನ್+ಒಡಗೊಂಡು +ಬಾ +ಹೋಗೆಂದನ್+ಅಂಧನೃಪ

ಅಚ್ಚರಿ:
(೧) ಅಂಧನೃಪ, ತಾತ – ಧೃತರಾಷ್ಟ್ರನನ್ನು ಕರೆದ ಬಗೆ
(೨) ನೃಪ, ಭೂತಲೇಶ – ಸಮನಾರ್ಥಕ ಪದ