ಪದ್ಯ ೧: ಗಾಂಧಾರಿಯು ಕೃಷ್ಣನಿಗೆ ಯಾರನ್ನು ತೋರಿಸಲು ಕೇಳಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು (ಗದಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಗಾಂಧಾರಿಯು ಕೃಷ್ಣನನ್ನು ಕರೆದು ತನ್ನ ಮನಸ್ಸಿನ ದುಃಖವನ್ನು ಅವನೆದುರು ತೋಡಿಕೊಂಡಳು, ತಂದೆ ಕೃಷ್ಣಾ ಯುದ್ಧ ಸರ್ಪದ ವಿಷದ ಬೆಂಕಿಯಿಂದ ದಹಿಸಿದ ಮೃತರಾಜರನ್ನು ನನಗೆ ತೋರಿಸು ಎಂದು ಕೇಳಿದಳು.

ಅರ್ಥ:
ಧರಿತ್ರೀಪಾಲ: ರಾಜ; ಕರೆದು: ಬರೆಮಾಡು; ನಯ: ಪ್ರೀತಿ; ಲೋಲಲೋಚನೆ: ಅತ್ತಿತ್ತ ಅಲುಗಾಡುವ, ಪ್ರೀತಿ ಕಣ್ಣುಳ್ಳ; ನುಡಿ: ಮಾತಾಡು; ಅಂತಸ್ತಾಪ: ಮನಸ್ಸಿನ ದುಃಖ; ಶಿಖಿ: ಬೆಂಕಿ; ಜಡಿ: ಕೂಗು, ಧ್ವನಿಮಾಡು; ಏಳು: ಮೇಲೇಳು; ತಂದೆ: ಪಿತ; ಕದನ: ಯುದ್ಧ; ವ್ಯಾಳ: ಸರ್ಪ; ವಿಷ: ಗರಲ; ದಗ್ಧ: ದಹಿಸಿದುದು, ಸುಟ್ಟುದು; ಧರಣೀಪಾಲ: ರಾಜ; ವರ್ಗ: ಗುಂಪು; ತೋರಿಸು: ಕಾಣಿಸು; ತರಳೆ: ಹೆಣ್ಣು; ಕೈಮುಗಿದು: ನಮಸ್ಕೈರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೃಷ್ಣನ +ಕರೆದು +ನಯದಲಿ
ಲೋಲಲೋಚನೆ +ನುಡಿದಳ್+ಅಂತಸ್ತಾಪ+ಶಿಖಿ +ಜಡಿಯೆ
ಏಳು +ತಂದೆ +ಮುಕುಂದ +ಕದನ
ವ್ಯಾಳ+ವಿಷ+ನಿರ್ದಗ್ಧ+ಧರಣೀ
ಪಾಲ+ವರ್ಗವ +ತೋರಿಸೆಂದಳು +ತರಳೆ +ಕೈಮುಗಿದು

ಅಚ್ಚರಿ:
(೧) ಲೋಲಲೋಚನೆ, ತರಳೆ; ಧರಿತ್ರೀಪಾಲ, ಧರಣೀಪಾಲ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಕದನ ವ್ಯಾಳವಿಷನಿರ್ದಗ್ಧಧರಣೀಪಾಲವರ್ಗವ ತೋರಿಸೆಂದಳು ತರಳೆ

ಪದ್ಯ ೨೫: ಅಶ್ವತ್ಥಾಮನನ್ನು ಯಾರು ಹಿಡಿದರು?

ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು (ಗದಾ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಶ್ವತ್ಥಾನ ಕುಶಿಕಾಸ್ತ್ರವು ವಿಫಲವಾಯಿತು. ಶ್ರೀಕೃಷ್ಣನೂ ಮತ್ತು ಅಶ್ವತ್ಥಾಮ ಇಬ್ಬರೂ ಒಬ್ಬೊರನ್ನೊಬ್ಬರು ರೋಷಾತಿರೇಕದಿಂದ ಶಪಿಸಿದರು. ದ್ರೌಪದಿಯ ಅಂತರಂಗವನ್ನು ಸುಡುವ ಬೆಂಕಿಯನ್ನು ಇವನ ತಲೆಯೆಮ್ಬ ನೀರಿನಿಂದ ಆರಿಸಬೇಕೆಂದು ಭೀಮಾರ್ಜುನರು ಅಶ್ವತ್ಥಾಮನನ್ನು ಹಿಡಿದರು.

ಅರ್ಥ:
ತೀರು: ಅಂತ್ಯ, ಮುಕ್ತಾಯ; ಕುಶಿಕ: ಕುಡ, ಗುಳ, ವಿಶ್ವಾಮಿತ್ರನ ತಂದೆ; ಘಾತಿ: ಪೆಟ್ಟ; ಮುರಾರಿ: ಕೃಷ್ಣ; ಸುತ: ಪುತ್ರ; ವೀರ: ಶೂರ; ಪಣ: ಪ್ರತಿಜ್ಞೆ, ಶಪಥ, ಪಂದ್ಯ; ಶಪಿಸು: ನಿಂದಿಸು; ನಾರಿ: ಹೆಣ್ಣು; ಅಂತಸ್ತಾಪ: ಒಳಮನಸ್ಸಿನ ನೋವು; ವಹ್ನಿ: ಬೆಂಕಿ; ನಿವಾರಣ: ಹೋಗಲಾಡಿಸು; ಜಲ: ನಿರು; ಆಚಾರಿ: ಗುರು; ನಂದನ: ಮಗ; ಹಿಡಿ: ಬಂಧಿಸು;

ಪದವಿಂಗಡಣೆ:
ತೀರಿತೈ +ಕುಶಿಕಾಸ್ತ್ರ+ಘಾತಿ +ಮು
ರಾರಿ +ಗುರುಸುತರ್+ಒಬ್ಬರೊಬ್ಬರ
ವೀರಪಣವಾಸಿಯಲಿ +ಶಪಿಸಿದರ್+ಅಧಿಕ+ರೋಷದಲಿ
ನಾರಿ+ಅಂತಸ್ತಾಪ+ವಹ್ನಿ+ ನಿ
ವಾರಣಕೆ +ಜಲವ್+ಈತನೆಂದ್+
ಆಚಾರಿಯನ +ನಂದನನ +ಹಿಡಿದರು +ಭೀಮ+ಫಲುಗುಣರು

ಅಚ್ಚರಿ:
(೧) ದ್ರೌಪದಿಯ ನೋವನ್ನು ಹೋಗಲಾಡಿಸುವ ಪರಿ – ನಾರಿಯಂತಸ್ತಾಪವಹ್ನಿ ನಿವಾರಣಕೆ ಜಲವೀತನೆಂದಾಚಾರಿಯನ ನಂದನನ ಹಿಡಿದರು
(೨) ಅಶ್ವತ್ಥಾಮನನ್ನು ಕರೆದ ಪರಿ – ಗುರುಸುತ, ಆಚಾರಿಯನ ನಂದನ

ಪದ್ಯ ೫: ಪರಿವಾರದವರ ಸ್ಥಿತಿ ಹೇಗಿತ್ತು?

ಒರೆ ಸಹಿತ ಕಯ್ದುಗಳು ಕರದಿಂ
ಮುರಿದು ಬಿದ್ದವು ಗಜಹಯದ ಕ
ಣ್ಣೊರತೆಯೆದ್ದವು ಕಡಿದು ಬಿದ್ದವು ಧ್ವಜಪತಾಕೆಗಳು
ತುರುಗಿದಂತಸ್ತಾಪದಲಿ ಮನ
ಮರುಗಿತಾ ಪರಿವಾರ ಸುಭಟರಿ
ಗರುಹಿತಾಕಸ್ಮಿಕದ ಭಯವವನೀಶ ಕೇಳೆಂದ (ಗದಾ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಒರೆಗಳೊದನೆ ಆಯುಧಗಲು ಮುರಿದುಬಿದ್ದವು. ಆನೆ ಕುದುರೆಗಳ ಕಣ್ಣಲ್ಲಿ ನೀರು ಸುರಿಯಿತು. ಧ್ವಜಗಳು ಮುರಿದು ಬಿದ್ದವು. ಪರಿವಾರದವರು ಮನಸ್ಸಿನ ತಾಪದಿಂದ ಮರುಗಿದರು. ವೀರರಿಗೆ ಆಕಸ್ಮಿಕ ಭಯವುಂಟಾಯಿತು

ಅರ್ಥ:
ಒರೆ: ಉಜ್ಜು, ತಿಕ್ಕು, ಹೆರೆ; ಸಹಿತ: ಜೊತೆ; ಕಯ್ದು: ಆಯುಧ; ಕರ: ಹಸ್ತ; ಮುರಿ: ಸೀಳು; ಬೀಳು: ಜಾರು; ಗಜ: ಆನೆ; ಹಯ: ಕುದುರೆ; ಕಣ್ಣೊರತೆ: ಕಣ್ಣಿರು; ಕಡಿ: ಸೀಳು; ಧ್ವಜ: ಬಾವುಟ; ಪತಾಕೆ: ಧ್ವಜ, ಬಾವುಟ; ತುರುಗು: ಸಂದಣಿ, ದಟ್ಟಣೆ; ಅಂತಸ್ತಾಪ: ಅಂತಃಕರಣ; ಮರುಗು: ತಳಮಳ, ಸಂಕಟ; ಪರಿವಾರ: ಸುತ್ತಲಿನವರು, ಪರಿಜನ; ಸುಭಟ: ಪರಾಕ್ರಮಿ; ಅರುಹು:ತಿಳಿಸು, ಹೇಳು; ಆಕಸ್ಮಿಕ: ಅನಿರೀಕ್ಷಿತ; ಭಯ: ಹೆದರಿಕೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಒರೆ +ಸಹಿತ +ಕಯ್ದುಗಳು +ಕರದಿಂ
ಮುರಿದು +ಬಿದ್ದವು+ ಗಜ+ಹಯದ +ಕಣ್ಣ್
ಒರತೆಯೆದ್ದವು +ಕಡಿದು +ಬಿದ್ದವು +ಧ್ವಜ+ಪತಾಕೆಗಳು
ತುರುಗಿದ್+ಅಂತಸ್ತಾಪದಲಿ +ಮನ
ಮರುಗಿತಾ +ಪರಿವಾರ +ಸುಭಟರಿಗ್
ಅರುಹಿತ್+ಆಕಸ್ಮಿಕದ +ಭಯವ್+ಅವನೀಶ +ಕೇಳೆಂದ

ಅಚ್ಚರಿ:
(೧) ಜೋಡಿ ಪದಾಕ್ಷರಗಳು – ಕಯ್ದುಗಳು ಕರದಿಂ; ಮನ ಮರುಗಿತಾ

ಪದ್ಯ ೨೭: ಅರ್ಜುನನು ಭೀಷ್ಮರಿಗೆ ಹೇಗೆ ನೀರನ್ನು ನೀಡಿದನು?

ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳೆಂದ (ಭೀಷ್ಮ ಪರ್ವ, ೧೦ ಸಂಧಿ, ೨೭ ಪದ್ಯ
)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ವರುಣಾಸ್ತ್ರವನ್ನು ಪ್ರಯೋಗಮಾಡಿ ಉತ್ತಮವಾದ ನಿರ್ಮಲವಾದ ಶುದ್ಧ ನೀರನ್ನು ಆಮಂತ್ರಿಸಿದನು. ಕಾದ ಬಂಗಾರದ ನೀರಿನಂತೆ ಹೊಳೆಯುವ ಆ ನೀರನ್ನು ಬಾಣದ ಬಲದಿಂದ ಭೀಷ್ಮನ ಬಾಯಲ್ಲಿ ಬೀಳುವಂತೆ ಮಾಡಿದನು ಆರ್ತನಾಗಿದ್ದ ಭೀಷ್ಮನು ಆ ನೀರನ್ನು ಕುಡಿದು ಅಂತಸ್ತಾಪವನ್ನು ಕಳೆದುಕೊಂಡನು.

ಅರ್ಥ:
ಸಲಿಲ: ನೀರು; ಬಾಣ: ಸರಳ; ಅಮಲ: ನಿರ್ಮಲ; ಜಲ: ನೀರು; ತೆಗೆ: ಹೊರತರು; ತಪ್ತ: ಕಾಯಿಸಿದ; ಲೋಹ: ಖನಿಜ ಧಾತು; ತನಿ: ಹೆಚ್ಚಾಗು, ಅತಿಶಯವಾಗು; ಹೊಳೆ: ಪ್ರಕಾಶ; ಬಹಳ: ತುಂಬ; ಧಾರೆ: ಪ್ರವಾಹ; ಇಳು: ಬಾಗು; ಸರಳು: ಬಾಣ; ವದನ: ಮುಖ; ಬಳಿ: ಹತ್ತಿರ; ಬಿಡು: ತೊಡಗಿಸು; ಬಹಳ: ತುಂಬ; ಆರ್ತ: ಕಷ್ಟ, ಸಂಕಟ; ಗೆಲಿದು: ಜಯಿಸು; ಅಂತಸ್ತಾಪ: ದೇಹದ ಒಳತಾಪ; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಲಿಲ +ಬಾಣದಲ್+ಅಮಲ +ಗಂಗಾ
ಜಲವ +ತೆಗೆದನು +ತಪ್ತ +ಲೋಹದ
ಜಲದವೊಲು +ತನಿಹೊಳೆವ +ಸಲಿಲದ +ಬಹಳ +ಧಾರೆಗಳ
ಇಳುಹಿದನು +ಸರಳಿಂದ +ವದನದ
ಬಳಿಗೆ +ಬಿಡೆ +ಬಹಳಾರ್ತ +ಭೀಷ್ಮನು
ಗೆಲಿದನ್+ಅಂತಸ್ತಾಪವನು +ನರನಾಥ +ಕೇಳೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
(೨) ನೀರಿನ ವರ್ಣನೆ – ತಪ್ತ ಲೋಹದ ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
(೩) ಜಲ, ಸಲಿಲ – ಸಮಾನಾರ್ಥಕ ಪದ

ಪದ್ಯ ೧೯: ಧೃತರಾಷ್ಟ್ರನೇಕೆ ವಿದುರನನ್ನು ಅಪ್ಪಿಕೊಂಡನು

ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದನಾತನನು ಪುರಕೆ
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ (ಅರಣ್ಯ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ವಿದುರನು ಕಾಡಿಗೆ ಪಾಂಡವರೊಡನೆ ಇರುಲು ಹೋಗಿರಲು, ಧೃತರಾಷ್ಟ್ರನಿಗೆ ವಿದುರನ ವಿಯೋಗವು ಅತೀವ ದುಃಖವನ್ನುಂಟುಮಾಡಿತು. ಮನಸ್ಸಿನ ವ್ಯಥೆಯನ್ನು ತಡೆಯಲಾರದೆ ದೂತರನ್ನು ಕಳಿಸಿ ವಿದುರನನ್ನು ಮತ್ತೆ ಹಸ್ತಿನಾಪುರಕ್ಕೆ ಕರೆಸಿದನು. ಹೆತ್ತ ಮಕ್ಕಳನ್ನು ತ್ಯಜಿಸಿ ಪಾಂಡವರನ್ನು ಮನ್ನಿಸು ಎಂದು ಹೇಳಿದ್ದರಿಂದ ಕೋಪಗೊಂಡೆ, ನೀನು ಕೋಪದಿಂದ ಮತ್ತೆ ನನ್ನನ್ನು ಬಿಟ್ಟ್ ಹೋಗಬೇಡ ಎಂದು ಹೇಳಿ ವಿದುರನನ್ನು ಅಪ್ಪಿಕೊಂಡನು.

ಅರ್ಥ:
ವಿಯೋಗ: ಬೇರ್ಪಡಿಸುವಿಕೆ, ಅಗಲುವಿಕೆ; ಚಿತ್ತ: ಮನಸ್ಸು; ಅಂತಸ್ತಾಪ: ಮನಸ್ಸಿನ ನೋವು, ಕುದಿತ; ನೃಪ: ರಾಜ; ಮತ್ತೆ: ಪುನಃ; ದೂತ: ಸೇವಕ; ಕಳುಹು: ಕಳಿಸು; ಕರೆಸು: ಬರೆಮಾಡು; ಪುರ: ಊರು; ಹೆತ್ತ: ಜನಿಸಿದ; ಮಕ್ಕಳು: ಸುತರು; ಬಿಡು: ತ್ಯಜಿಸು; ಪೃಥಾಸುತ: ಪಾಂಡವರು; ತಿರುಗು: ಮರಳು; ಖಾತಿ: ಕೋಪ; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪ್ಪು: ಆಲಿಂಗನ; ನೃಪ: ರಾಜ;

ಪದವಿಂಗಡಣೆ:
ಇತ್ತಲ್+ಈ+ ವಿದುರನ +ವಿಯೋಗದ
ಚಿತ್ತದ್+ಅಂತಸ್ತಾಪದಲಿ +ನೃಪ
ಮತ್ತೆ +ದೂತರ +ಕಳುಹಿ +ಕರೆಸಿದನ್+ಆತನನು +ಪುರಕೆ
ಹೆತ್ತಮಕ್ಕಳ+ ಬಿಡು +ಪೃಥಾ+ಸುತ
ರತ್ತ +ತಿರುಗೆನೆ+ ಖಾತಿಗೊಂಡೆನು
ಮತ್ತೆ+ ಮುನಿಯದಿರ್+ಎಂದು+ ವಿದುರನನ್+ಅಪ್ಪಿದನು +ನೃಪತಿ

ಅಚ್ಚರಿ:
(೧) ಇತ್ತ, ಚಿತ್ತ, ಅತ್ತ, ಹೆತ್ತ – ಪ್ರಾಸ ಪದಗಳು
(೨) ಹೆತ್ತಮಕ್ಕಳ ಬಗ್ಗೆ ಒಲವು – ಹೆತ್ತಮಕ್ಕಳ ಬಿಡು ಪೃಥಾಸುತರತ್ತ ತಿರುಗೆನೆ ಖಾತಿಗೊಂಡೆನು

ಪದ್ಯ ೬: ದುರ್ಯೋಧನನೇಕೆ ಪುಳುಕಗೊಂಡನು?

ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿತಂತಸ್ತಾಪಜಲನಿಧಿ
ಚಿತ್ತದುರು ಸಂದೇಹ ತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ (ಕರ್ಣ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ಸ್ಥಿತಿಗತಿಯನ್ನು ವಿವರಿಸುತ್ತಾ, ದುರ್ಯೋಧನನ ದುಃಖವನ್ನು ಬಿಟ್ಟು, ಕರ್ಣನ ಕೈಯನ್ನು ಹಿಡಿದು ಮೇಲಕ್ಕೆತ್ತಿ ಶಲ್ಯನಿಗೆ ನೀಡಿದನು. ಗೆಲುವು
ಇನ್ನ ಸನ್ನಿಹಿತವಾಯಿತೆಂದು ಪುಳಕಗೊಂಡು ತನ್ನ ದೇಹದ ರೋಮ ರೋಮವು ರೋಮಾಂಚನಗೊಂಡಿತು. ದುರ್ಯೋಧನನ ಮನಸ್ಸಿನಲ್ಲಿದ್ದ ತಾಪಸಮುದ್ರವು ಬತ್ತಿತು, ಮನಸ್ಸಿನಲ್ಲಿ ಮೊಳೆಯುತ್ತಿದ್ದ ಅನುಮಾನದ ಬೀಜವು ಸುಟ್ಟುಹೋಗಿ ನಿಮಿಷಾರ್ಧದಲಿ ಕರಕಲಾಯಿತು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ದುಗುಡ: ದುಃಖ; ಹಾಯ್ಕು: ಹಾಕು, ಹೊಡೆ; ಕೈ: ಕರ; ಎತ್ತಿ: ಮೇಲೆ ತರು; ಕೊಟ್ಟು: ನೀದು; ಮೈ: ತನು, ದೇಹ; ಗುಡಿ: ಗುಂಪು, ಸಮೂಹ; ರೋಮ: ಕೂದಲು; ಪುಳಕ: ರೋಮಾಂಚನ; ಪೂರ್ಣ: ಪೂರ್ತಿ; ಹರುಷ: ಸಂತೋಷ; ಬತ್ತು: ಒಣಗಿದುದು; ಅಂತಸ್ತಾಪ: ಮನಸ್ಸಿನ ನೋವು, ಕುದಿತ; ಜಲನಿಧಿ: ಸಮುದ್ರ; ಚಿತ್ತ: ಮನಸ್ಸು; ಉರು: ಹೆಚ್ಚಾದ; ಸಂದೇಹ: ಅನುಮಾನ; ತರು: ಮರು; ಬಿತ್ತು: ಬೀಜ ಹಾಕು; ಕರಿ: ಸುಟ್ಟು ಕರಿಕಾಗು; ಮೊಳೆ: ಕುಡಿ, ಮೊಳಕೆ; ಮಗ: ಸುತ; ನಿಮಿಷ: ಕ್ಷಣ;

ಪದವಿಂಗಡಣೆ:
ಹೊತ್ತ +ದುಗುಡವ +ಹಾಯ್ಕಿ +ಕೈವಿಡಿ
ದೆತ್ತಿ +ಕರ್ಣನ +ಕೊಟ್ಟು +ಮೈಗಳ
ಲೆತ್ತು+ ಗುಡಿಗಳ+ ರೋಮ +ಪುಳಕದ+ ಪೂರ್ಣ +ಹರುಷದಲಿ
ಬತ್ತಿತ್+ಅಂತಸ್ತಾಪ+ಜಲನಿಧಿ
ಚಿತ್ತದ್+ಉರು +ಸಂದೇಹ+ ತರುವಿನ
ಬಿತ್ತು+ ಕರಿಮೊಳೆವೋಯ್ತು +ನಿನ್ನ +ಮಗಂಗೆ+ ನಿಮಿಷದಲಿ

ಅಚ್ಚರಿ:
(೧) ದುರ್ಯೋಧನನು ಪುಳಕಿತನಾದನು ಎಂದು ಹೇಳುವ ಪರಿ – ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
(೨) ಚಿಂತೆ ಕಳೆಯಿತು ಎಂದು ಹೇಳುವ ಪರಿ – ಬತ್ತಿತಂತಸ್ತಾಪಜಲನಿಧಿ; ಚಿತ್ತದುರು ಸಂದೇಹ ತರುವಿನ ಬಿತ್ತು ಕರಿಮೊಳೆವೋಯ್ತು