ಪದ್ಯ ೨೯: ಕೃಷ್ಣನು ಬಲರಾಮನಿಗೇನು ಹೇಳಿದನು?

ಚಿತ್ರವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ (ಗದಾ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮುಂದೆ ಬಂದು, ಅಣ್ಣಾ ನನ್ನ ಮಾತನ್ನು ಕೇಳು. ಕೋಪಕ್ಕೆ ಮನಸ್ಸನ್ನು ಕೊಟ್ಟರೆ ಏನು ಪ್ರಯೋಜನ. ಉತ್ತಮರು ಮಾಡಿದಮ್ತೆ ಶಾಸ್ತ್ರನಿರ್ಣಯವನ್ನು ಮಾಡಿ ಅದರಂತೆ ನಡೆಯಬೇಕು. ಕೌರವನ ಕುಹಕ ಹೀನ ವರ್ತನೆ ನಿಮಗೆ ಗೊತ್ತಿಲ್ಲವೇ? ನಿಮಗೆ ಏರಿರುವ ಕೋಪ ಇಳಿದ ಮೇಲೆ ತಿಳಿ ಹೇಳುತ್ತೇನೆ ಎಂದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಬರಿ: ಕೇವಲ; ರೋಷ: ಕೋಪ; ಅಂತರಂಗ: ಮನಸ್ಸು, ಹೃದಯ; ಉತ್ತಮ: ಶ್ರೇಷ್ಠ; ಪದ್ಧತಿ: ದಾರಿ, ಮಾರ್ಗ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಿಶ್ಚಯ: ನಿರ್ಧಾರ; ಬಿತ್ತರಿಸು: ವಿಸ್ತರಿಸು, ತಿಳಿಸು; ಕಿತ್ತಡವ: ಕುಹುಕ; ಅರಿ: ತಿಳಿ; ಎತ್ತಿದ: ಹೆಚ್ಚಾದ; ಆಗ್ರಹ: ಆಸಕ್ತಿ; ನಿಲಲಿ: ತಡೆ; ತಿಳುಹು: ತಿಳಿಸು; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಚಿತ್ರವಿಸಿರೇ +ಬರಿಯ +ರೋಷಕೆ
ತೆತ್ತಡ್+ಏನಹುದ್+ಅಂತರಂಗವನ್
ಉತ್ತಮರ +ಪದ್ಧತಿಗಳಲಿ +ಶಾಸ್ತ್ರಾರ್ಥ+ನಿಶ್ಚಯವ
ಬಿತ್ತರಿಸುವುದು +ಕೌರವೇಂದ್ರನ
ಕಿತ್ತಡವ +ನೀವ್+ಅರಿಯಿರೇ +ನಿಮಗ್
ಎತ್ತಿದ+ಆಗ್ರಹ+ ನಿಲಲಿ +ತಿಳುಹುವೆನೆಂದನ್+ಅಸುರಾರಿ

ಅಚ್ಚರಿ:
(೧) ಉತ್ತಮರ ಲಕ್ಷಣ – ಅಂತರಂಗವನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ ಬಿತ್ತರಿಸುವುದು

ಪದ್ಯ ೩೨: ಗಾಂಧಾರಿಯು ಏನೆಂದು ಗೋಳಾಡಿದಳು?

ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗರ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚತುರ ಚಿತ್ತಕೆ
ಚಿಮ್ತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನವ್ರತವ (ಅರಣ್ಯ ಪರ್ವ, ೨೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಗನನ್ನು ಸಂತೈಸಿರಿ, ಇವನು ಆಮರಣಾಂತ ಉಪವಾಸದ ಸಂಕಲ್ಪಮಾಡಿದ್ದಾನಂತೆ. ಅವನ ಅಂತರಂಗ ಮಿತ್ರರನ್ನು ಕರೆಸಿರಿ. ಮನಸ್ಸಿಗೆ ಭ್ರಾಂತಿ ಹಿಡಿದಿದೆ. ಚಿಂತೆ ಆವರಿಸಿದೆ. ಮಗನ ಆಪ್ತಮಿತ್ರರೂ ಬಂದು ನಿರಶನವ್ರತವನ್ನು ಹಿಡಿಯಲಿ ಎಂದು ಗೋಳಾಡಿದಳು.

ಅರ್ಥ:
ಸಂತವಿಡಿ: ಸಂತೈಸು; ಮಗ: ಸುತ; ನಿಜ: ದಿಟ, ತನ್ನ; ದೇಹಾಂತ: ಸಾವು; ಕೃತ: ಮಾಡಿದ; ಸಂಕಲ್ಪ: ನಿರ್ಧಾರ, ನಿರ್ಣಯ; ಗಡ: ಅಲ್ಲವೆ; ನೃಪ: ರಾಜ; ಅಂತರಂಗ: ಒಳಗೆ; ಕರೆಸು: ಬರೆಮಾಡು; ಅಳಲು: ದುಃಖ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಿಗಿದು: ಕಟ್ಟು; ಚತುರ: ನಿಪುಣ; ಚಿತ್ತ: ಮನಸ್ಸು; ಚಿಂತೆ: ಯೋಚನೆ; ಬೇರೆ: ಅನ್ಯ; ರಾಯ: ರಾಜ; ಹಂತಿಕಾರ: ಸರದಿಯವನು; ಬರಲಿ: ಆಗಮಿಸಲಿ; ಹಿಡಿ: ಬಂಧಿಸು; ನಿರಶನ: ಊಟವಿಲ್ಲದ ಸ್ಥಿತಿ; ವ್ರತ: ನಿಯಮ;

ಪದವಿಂಗಡಣೆ:
ಸಂತವಿಡಿರೇ+ ಮಗನ +ನಿಜ +ದೇ
ಹಾಂತ +ಕೃತ +ಸಂಕಲ್ಪ +ಗಡ +ನೃಪನ್
ಅಂತರಂಗರ+ ಕರೆಸಿ+ಎಂದ್+ಅಳಲಿದಳು +ಗಾಂಧಾರಿ
ಭ್ರಾಂತಿ +ಬಿಗಿದಿದೆ +ಚತುರ +ಚಿತ್ತಕೆ
ಚಿಂತೆ+ ಬೇರೊಂದಾಯ್ತು +ರಾಯನ
ಹಂತಿಕಾರರು +ಬರಲಿ +ಹಿಡಿಯಲಿ +ನಿರಶನ+ವ್ರತವ

ಅಚ್ಚರಿ:
(೧) ನೃಪನಂತರಂಗರು, ರಾಯನ ಹಂತಿಕಾರರು – ಸಾಮ್ಯಾರ್ಥ ಪದಗಳು
(೨) ಚ ಕಾರದ ತ್ರಿವಳಿ ಪದ – ಚತುರ ಚಿತ್ತಕೆ ಚಿಂತೆ

ಪದ್ಯ ೨೩: ಊರ್ವಶಿಯು ಅರ್ಜುನನನ್ನು ಏನೆಂದು ಪ್ರಶ್ನಿಸಿದಳು?

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟಕ್ಕರಿ
ಗಳೆವುದೇ ವಿಟಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದು ಮುಖಿ (ಅರಣ್ಯ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನೊಂದಿಗೆ ಮಾತನಾಡುತ್ತಾ, ಎಲವೋ ಅರ್ಜುನ, ಇಂದ್ರನು ಹೇಳಿದುದರಿಂದ, ಚಿತ್ರಸೇನನು ನನ್ನ ಬೆನ್ನುಹತ್ತಿ ಬಿಡದೆ ಕಾಡಿದುದರಿಂದ ನಾನಿಲ್ಲಿಗೆ ಬಂದೆ, ಪ್ರೀತಿಸಿ ಬಂದ ತರುಣಿಯನ್ನು ತಿರಸ್ಕರಿಸುವದು ವಿಟರ ಧರ್ಮವೇ? ಅಯ್ಯೋ ನಾನು ಯಾರೆಂಬುದು ನಿನಗೆ ತಿಳಿಯದೇ? ಎಂದು ಅರ್ಜುನನನ್ನು ಪ್ರಶ್ನಿಸಿದಳು.

ಅರ್ಥ:
ರಾಯ: ರಾಜ; ಹೇಳಿಕೆ: ತಿಳಿಸು; ಅಂಡಲೆ: ಪೀಡೆ, ಕಾಡು; ಅಲುಗು: ಅಲ್ಲಾಡಿಸು, ಅದುರು; ನೆಟ್ಟು: ಒಳಹೊಕ್ಕು; ಕಾಮ: ಮನ್ಮಥ; ಶರ: ಬಾಣ; ಅಂತರಂಗ: ಆಂತರ್ಯ; ಒಲಿ: ಪ್ರೀತಿಸು; ಬಂದ: ಆಗಮಿಸು; ಅಬಲೆ: ಹೆಣ್ಣು; ಟಕ್ಕ: ವಂಚಕ; ವಿಟ: ಕಾಮುಕ, ವಿಷಯಾಸಕ್ತ; ಅಕಟಾ: ಅಯ್ಯೋ; ತಿಳಿ: ಅರಿವು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಚೆಲುವೆ;

ಪದವಿಂಗಡಣೆ:
ಎಲವೊ+ ರಾಯನ +ಹೇಳಿಕೆಯಲ್+
ಅಂಡಲೆದನ್+ಎನ್ನನು +ಚಿತ್ರಸೇನಕನ್
ಅಲುಗಿ+ ನೆಟ್ಟವು+ ಕಾಮಶರವ್+ಎನ್+ಅಂತರಂಗದಲಿ
ಒಲಿದು+ ಬಂದ್+ಅಬಲೆಯರ +ಟಕ್ಕರಿ
ಕಳೆವುದೇ +ವಿಟ+ಧರ್ಮವ್+ಅಕಟಾ
ತಿಳಿಯಲಾ +ತಾನ್+ಆವಳ್+ಎಂಬುದನ್+ಎಂದಳ್+ಇಂದು ಮುಖಿ

ಅಚ್ಚರಿ:
(೧) ಊರ್ವಶಿಯು ಬಂದ ಕಾರಣ – ಅಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
(೨) ವಿಟ ಧರ್ಮವಾವುದು – ಒಲಿದು ಬಂದಬಲೆಯರ ಟಕ್ಕರಿಗಳೆವುದೇ ವಿಟಧರ್ಮವ್?

ಪದ್ಯ ೪೬: ಧರ್ಮಜನ ಹಿಂದೆ ಯಾರು ಹೊರಟರು?

ರಾಯನಪರೋಕ್ಷದಲಿ ರಾಜ್ಯ
ಶ್ರೀಯ ಬೇಟವೆ ಶಿವ ಶಿವಾದಡೆ
ತಾಯ ನುಡಿ ತೊದಳಾಯ್ತೆ ತಮತಮ್ಮಂತರಂಗದಲಿ
ಆಯಿತಿದು ಲೇಸೇನುತ ತಮತ
ಮ್ಮಾಯುಧಂಗಳ ಕೊಂಡು ವರಮಾ
ದ್ರೇಯರರಸನ ಕೂಡೆ ಹೊರವಂಟರು ನೃಪಾಲಯವ (ಕರ್ಣ ಪರ್ವ, ೧೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅಯ್ಯೋ ದೇವರೇ ಅರಸನೇ ಅರಮನೆಯಲ್ಲಿರದಿರುವಾಗ ನಮಗೆ ರಾಜ್ಯಲಕ್ಷ್ಮಿಯ ಜೊತೆ ಸರಸವೇ? ನಮ್ಮ ತಾಯಿಯ ನುಡಿ ತಪ್ಪಿ ಹೋಯಿತೇ? ನಮ್ಮ ಅಂತರಂಗಗಳು ಮುರಿದು ಹೋದವೇ? ಮುಗಿಯಿತು, ಈಗೇನು ಮಾದುವುದು ಎಂದು ತಮ್ಮ ತಮ್ಮ ಆಯುಧಗಳನ್ನು ತೆಗೆದುಕೊಂಡು ನಕುಲ ಸಹದೇವರು ಧರ್ಮಜನೊಡನೆ ಅರಮನೆಯಿಂದ ಹೊರಟರು.

ಅರ್ಥ:
ರಾಯ: ರಾಜ; ಅಪರೋಕ್ಷ: ಇಲ್ಲದಿರುವಾಗ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ರಾಜ್ಯಶ್ರೀ; ರಾಜ್ಯಲಕ್ಷ್ಮಿ; ಬೇಟ:ಪ್ರಣಯ; ಆಸೆ; ಶಿವ ಶಿವಾ: ಭಗವಂತ; ತಾಯ: ಮಾತೆ; ನುಡಿ: ಮಾತು; ತೊದಳು: ಸುಳ್ಳು, ಹುಸಿ, ತಡವರಿಸು; ಅಂತರಂಗ: ಚಿತ್ತ, ಮನಸ್ಸು; ಆಯಿತು: ಮುಗಿಯಿತು; ಲೇಸು: ಒಳಿತು; ಆಯುಧ: ಶಸ್ತ್ರ; ಕೊಂಡು: ತೆಗೆದು; ವರ: ಶ್ರೇಷ್ಠ; ಮಾದ್ರೇಯರು: ನಕುಲ ಸಹದೇವರು; ಅರಸ: ರಾಜ; ಕೂಡ: ಜೊತೆ; ಹೊರವಂಟರು: ನಡೆದರು; ನೃಪಾಲಯ: ಅರಮನೆ;

ಪದವಿಂಗಡಣೆ:
ರಾಯನ್+ಅಪರೋಕ್ಷದಲಿ +ರಾಜ್ಯ
ಶ್ರೀಯ +ಬೇಟವೆ +ಶಿವ +ಶಿವ+ಆದಡೆ
ತಾಯ +ನುಡಿ +ತೊದಳಾಯ್ತೆ+ ತಮತಮ್+ಅಂತರಂಗದಲಿ
ಆಯಿತಿದು +ಲೇಸೇನುತ+ ತಮತಮ್
ಆಯುಧಂಗಳ+ ಕೊಂಡು +ವರಮಾ
ದ್ರೇಯರ್+ಅರಸನ+ ಕೂಡೆ +ಹೊರವಂಟರು +ನೃಪಾಲಯವ

ಅಚ್ಚರಿ:
(೧) ತಮತಮ್ – ೨ ಬಾರಿ ಪ್ರಯೋಗ
(೨) ರಾಜ್ಯಭಾರ ಎಂದು ಹೇಳಲು ರಾಜ್ಯಶ್ರೀಯ ಬೇಟ ಪದದ ಬಳಕೆ
(೩) ಮಾತು ಮುರಿಯಿತೇ ಎಂದು ಹೇಳಲು ನುಡಿ ತೊದಳಾಯ್ತೆ ಪದದ ಬಳಕೆ

ಪದ್ಯ ೫೦: ಧೃಷ್ಟದ್ಯುಮ್ನನು ದ್ರೌಪದಿಗೆ ರಾಜರನ್ನು ಪರಿಚಯಿಸುವ ಮೊದಲು ಏನೆಂದು ಹೇಳಿದನು?

ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿನೀನರಿಯೆನುತ ನುಡಿದನು ನಿಜಾನುಜೆಗೆ (ಆದಿ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ತನ್ನ ತಂಗಿ ಬಳಿ ಹೋಗೆ, “ತಂಗಿ, ತಾಯೆ ನೋಡು, ನಿನ್ನ ಕಂಗಳಿಗೆ ಈ ರಾಜರು ಒಲಿವರೆ?,ನಿನ್ನ ಮನಸ್ಸಿನ ರಂಗದಲ್ಲಿ ಇವರು ಸರಿಯಾಗಿ ನಿಲ್ಲುವರೆ? ನಾನು ನಿನಗೆ ಈ ಅವನಿಪಾಲರ ಪರಿಚಯ ಮಾಡಿಕೊಡುತ್ತೇನೆ, ನಿನ್ನ ಇಂಗಿತ ಅವರ ಅಂತರಂವನ್ನು ಹೊರನೋಟದಿಂದ ಅವರ್ ಅಂಗ ಸೌಷ್ಠವನ್ನು ನಿರ್ಧರಿಸು, ಎಂದು ತನ್ನ ತಂಗಿಗೆ ಹೇಳಿದನು.

ಅರ್ಥ:
ತಂಗಿ: ಅನುಜೆ, ಸೋದರಿ; ನೋಡು: ವೀಕ್ಷಿಸು; ತಾಯೆ: ಮಾತೆ;ಕಂಗಳು: ಕಣ್ಣು, ನಯನ; ಒಲಿವರೆ: ಮೆಚ್ಚುವರೆ, ಇಷ್ಟ; ಚಿತ್ತ: ಮನಸ್ಸು; ರಂಗ: ಸ್ಥಳ; ತೂಗುವರೆ: ಸರಿಯಾಗುವರೆ; ತೋರುವೆ: ತೋರಿಸು, ಪರಿಚಯಿಸು; ಅವನಿಪಾಲ: ರಾಜ; ಇಂಗಿತ: ಇಚ್ಛೆ; ಅಂತರಂಗ: ಒಳಮನಸ್ಸು; ಅಂಗ: ಭಾಗ; ಅಂಗವಟ್ಟ: ಮೈಕಟ್ಟು, ಅಂಗಸೌಷ್ಠವ; ಬಳಕೆ: ಉಪಯೋಗ; ಬಹಿರಂಗ: ಹೊರಗೆ; ಅರಿ: ತಿಳಿ; ನುಡಿ: ಮಾತಾಡು;

ಪದವಿಂಗಡಣೆ:
ತಂಗಿ +ನೋಡೌ +ತಾಯೆ +ನಿನ್ನಯ
ಕಂಗಳ್+ಒಲಿವರೆ+ ಚಿತ್ತ+ವಾರ್ಧಿತ
ರಂಗದಲಿ+ ತೂಗುವರೆ+ ತೋರುವೆನ್+ಅವನಿಪಾಲಕರ
ಇಂಗಿತದಲ್+ಅವರ್+ಅಂತರಂಗವನ್
ಅಂಗವಟ್ಟದ+ ಬಳಕೆಯನು +ಬಹಿ
ರಂಗದಲಿ+ನೀನ್+ಅರಿ+ಎನುತ+ ನುಡಿದನು+ ನಿಜಾನುಜೆಗೆ

ಅಚ್ದ್ಚರಿ:
(೧) ತಂಗಿ, ಅನುಜೆ – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆ ಪದ
(೨) ನೋಡೌ, ನುಡಿ – ನೋಡಿ, ಮಾತಾಡು – ಮೊದಲ ಹಾಗು ಕೊನೆಯ ೨ ಪದ
(೩) ತ, ನ ಪದಗಳ ಮಿಲನ – ತಂಗಿ ನೋಡೌ ತಾಯೆ ನಿನ್ನಯ
(೪) ಜೋಡಿ ಪದಗಳು – “ತ” – ತೂಗುವರೆ ತೋರುವೆನ; “ಬ”- ಬಳಕೆಯನು ಬಹಿರಂಗ; “ನ” – ನುಡಿದನು ನಿಜಾನುಜೆಗೆ
(೫) ರಂಗ, ಅಂತರಂಗ, ಬಹಿರಂಗ, ಅಂಗ – ಂಗ ದಿಂದ ಕೊನೆಗೊಳ್ಳುವ ಪದಗಳು
(೬) ವಿರುದ್ಧ ಪದ – ಅಂತರಂಗ, ಬಹಿರಂಗ