ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು

ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೪: ಕರ್ಣನ ಸುದ್ದಿಯನ್ನು ಕೇಳಿ ಆಸ್ಥಾನವು ಯಾವುದರಲ್ಲಿ ಮುಳುಗಿತು?

ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸಜಲಧಿ (ಕರ್ಣ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಜೀವವು ಮೊದಲು ಹೃದಯದಲ್ಲಿತ್ತು, ನಂತರ ಹೃದಯವನ್ನು ಬಿಟ್ಟು ಮೇಲೇಳಿ ಕಂಠಕ್ಕೆ ಬಂತು, ಅವನು ಮೈಮರೆದು ಮಂಚದ ಮೇಲೆ ಮಲಗಿದನು. ಆಸ್ಥಾನದಲ್ಲಿದ್ದವರು ಅತ್ತಿತ್ತ ಹೋದರು. ಈ ವಿಷಯವು ತಿಳಿದು ಅಂತಃಪುರದಲ್ಲಿದ್ದ ರಾಣಿಯರು ಜೋರಾಗಿ ಅತ್ತರು.
ಅರಮನೆಯಲ್ಲಿ ಶೋಕ ಸಮುದ್ರವೇ ಉಕ್ಕಿತು.

ಅರ್ಥ:
ಮೊದಲು: ಆದಿ; ಜೀವ: ಉಸಿರಾಡುವ ಶಕ್ತಿ; ಕಳೆ: ತೇಜ, ಸ್ವರೂಪ; ಹೃದಯ: ವಕ್ಷಸ್ಥಳ; ಒಡೆದು: ಸೀಳಿ; ಮಿಗೆ: ಮತ್ತು; ಕಂಠ: ಕೊರಳು; ಕವಿದು: ಮುಚ್ಚಳ, ಮುಸುಕು; ಮಂಚ: ಪರ್ಯಂಕ; ಮೈ: ತನು; ಮರೆದು: ಅರಿವಿಲ್ಲದೆ; ಮಲಗು: ಶಯನ, ನಿದ್ರೆ; ಕೆದರು: ಕದಡು; ರಾಯ: ರಾಜ; ಹದ: ಸರಿಯಾದ ಸ್ಥಿತಿ; ಅರಿ:ತಿಳಿ; ಒಳಗೆ: ಆಂತರ್ಯ; ರಾಣಿ: ಅರಸಿ; ರೋದ: ಅಳು; ಅಂತಃಪುರ: ರಾಣಿಯರ ವಾಸಸ್ಥಾನ; ಉಕ್ಕು: ಹೆಚ್ಚಳ; ಶೋಕ: ದುಃಖ; ಜಲಧಿ: ಸಾಗರ; ರಸ: ಸಾರ;

ಪದವಿಂಗಡಣೆ:
ಮೊದಲಲ್+ಇದ್ದುದು +ಜೀವಕಳೆ+ ಹೃದ
ಯದಲಿ +ಹೃದಯವನ್+ಒಡೆದು +ಮಿಗೆ +ಕಂ
ಠದಲಿ +ಕವಿದುದು +ಮಂಚದಲಿ +ಮೈಮರೆದು +ಮಲಗಿದನು
ಕೆದರಿತ್+ಅಲ್ಲಿಯದಲ್ಲಿ+ ರಾಯನ
ಹದನನ್+ಅರಿದ್+ಒಳಗೊಳಗೆ +ರಾಣಿಯ
ರೊದರಲ್+ಅಂತಃಪುರದಲ್+ಉಕ್ಕಿತು +ಶೋಕರಸ+ಜಲಧಿ

ಅಚ್ಚರಿ:
(೧) ದುಃಖವು ಆವರಿಸುವ ಬಗೆಯ ವಿವರಣೆ – ಹೃದಯದಿಂದ ಕಂಠಕ್ಕೆ
(೨) ಮ ಕಾರದ ತ್ರಿವಳಿ ಪದ – ಮಂಚದಲಿ ಮೈಮರೆದು ಮಲಗಿದನು
(೩) ಉಪಮಾನದ ಪ್ರಯೋಗ – ಅಂತಃಪುರದಲುಕ್ಕಿತು ಶೋಕರಸಜಲಧಿ

ಪದ್ಯ ೫೨: ಜಗತ್ತಿನ ಮೂಢರ ಲಕ್ಷಣವೇನು?

ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೊಳಗೆ ಮೂಢಾತ್ಮನೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೆಲಸವಿದೆ ಮತ್ತೆ ಬರುತ್ತೇನೆಂದು ಹೇಳಿ ಅಂತಃಪುರಕೆ ಹೆಂಗಸರ ಬಳಿ ಹೋಗುವುದು, ತನ್ನ ಹತ್ತಿರದವರನ್ನು ಕಡೆಗಣಿಸಿ, ಶತ್ರುಗಳ ನಡುವೆ ವಿಜೃಂಭಿಸುವವನು, ಧರ್ಮವನ್ನು ಬಿಟ್ಟು ಅಧರ್ಮವನ್ನು ಆಚರಿಸುವವನು, ಇನ್ನೊಬ್ಬರ ಏಕಾಂತದಲ್ಲಿರುವೆಡೆಗೆ ಹೋಗುವವನು, ಹಸಿವಿಲ್ಲದೆ ಊಟ ಮಾಡುವವನು, ಇವರೆಲ್ಲಾ ಈ ಜಗತ್ತಿನಲ್ಲಿ ಮೂಢರು.

ಅರ್ಥ:
ಸಲುವು: ನೆರವೇರು; ಅಂತಃಪುರ: ರಾಣಿವಾಸ, ಜಾನಾನಾ; ಸಂಚಲಿಸು: ಹೋಗು; ಆಪ್ತ: ಬೇಕಾದವ, ಹತ್ತಿರದವ; ಬಿಸುಟು: ಹೊರಹಾಕಿ; ಅಗ್ಗ: ಶ್ರೇಷ್ಠತೆ; ಅಹಿತರು: ಶತ್ರುಗಳು; ಧರ್ಮ: ಧಾರಣೆ ಮಾಡುವುದು, ನಿಯಮ; ಉಳಿದ: ಮಿಕ್ಕ; ಅಧರ್ಮ: ಕೆಟ್ಟ ನಡತೆ; ಬಳಸು: ಆವರಿಸುವಿಕೆ; ಏಕಾಂತ: ಒಂಟಿಯಾದ; ಸುಳಿ: ನುಸುಳು; ಹಸಿವು: ಆಹಾರದ ಬಯಕೆ; ಉಂಬು: ತಿನ್ನು; ಇಳೆ: ಭೂಮಿ; ಮೂಢ: ಮೂರ್ಖ, ತಿಳಿಗೇಡಿ;

ಪದವಿಂಗಡಣೆ:
ಸಲುವೆನೆಂದ್+ಅಂತಃಪುರಕೆ+ ಸಂ
ಚಲಿಸುವವನ್+ಆಪ್ತರನು +ಬಿಸುಟ್
ಅಗ್ಗಳಿಸುವವನ್+ಅಹಿತರಲಿ +ಧರ್ಮವನುಳಿದ್+ಅಧರ್ಮವನು
ಬಳಸುವವನ್+ಏಕಾಂತದಲ್ಲಿಗೆ
ಸುಳಿವವನು +ಹಸಿವಿಲ್ಲದ್+ಉಂಬುವನ್
ಇಳೆಯೊಳಗೆ+ ಮೂಢಾತ್ಮನೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಆಪ್ತರನು, ಅಹಿತರಲಿ, ಅಧರ್ಮ, ಅಗ್ಗಳಿಸು, ಅಂತಃಪುರ – ‘ಅ’ ಕಾರದ ಪದಗಳ ಬಳಕೆ
(೨) ಮೂಢರ ೫ ಲಕ್ಷಣವನ್ನು ವಿವರಿಸುವ ಪದ್ಯ

ಪದ್ಯ ೯: ನಕುಲನು ಹಸ್ತಿನಾಪುರಕ್ಕೆ ಬಂದಾಗ ಯಾರನ್ನು ಭೇಟಿ ಮಾಡಿದನು?

ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ (ಸಭಾ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ನಕುಲನ ಸೈನ್ಯವು ತನ್ನ ವಿಜಯಪತಾಕೆಯನ್ನು ಹಾರಿಸಿ ಮರಳಿ ಹಸ್ತಿನಾಪುರಕ್ಕೆ ಹಿಂದಿರುಗಿತು. ಹಸ್ತಿನಾಪುರಕ್ಕೆ ಬಂದ ನಂತರ ಯುಧಿಷ್ಠಿರನನ್ನು ನೋಡಿ ಅವನ ಪಾದಗಳಿಗೆರಗಿ ಆಶೀರ್ವಾದವನ್ನು ಪಡೆದು ತಾನು ತಂದ ಸಮಸ್ತ ವಸ್ತುಗಳನ್ನು ಅವನ ಪಾದದಲ್ಲಿ ಸಮರ್ಪಿಸಿದನು. ಈ ಸಂತಸದ ಕ್ಷಣವನ್ನು, ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವರ ಅಂತಃಪುರದ ಹರ್ಷಲಕ್ಷ್ಮಿಯನ್ನು ಏನೆಂದು ವರ್ಣಿಸಲಿ.

ಅರ್ಥ:
ಮರಳು: ಹಿಂದಿರುಗು; ಸೇನೆ: ಸೈನ್ಯ; ಪುರ: ಊರು; ಕಂಡನು: ನೋಡಿದನು; ಪುತ್ರ: ಸುತ; ಚರಣ: ಪಾದ; ಎರಗು: ನಮಸ್ಕರಿಸು; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ತೋರಿಸು: ತೋರ್ಪಡಿಸು; ಅರಸು: ರಾಜ; ಉತ್ಸವ: ಹರ್ಷ; ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ಭೀಮ; ನರ: ಅರ್ಜುನ; ಅಂತಃಪುರ: ರಾಣಿಯರ ವಾಸಸ್ಥಾನ; ಹರುಷ: ಸಂತೋಷ; ಸಿರಿ: ಐಶ್ವರ್ಯ; ವಣ್ಣಿಸುವೆ: ವಿವರಿಸು, ಬಣ್ಣಿಸು;

ಪದವಿಂಗಡಣೆ:
ಮರಳಿತ್+ಈತನ +ಸೇನೆ +ಬಂದನು
ಪುರಕೆ+ ಕಂಡನು +ಧರ್ಮ+ಪುತ್ರನ
ಚರಣಕ್+ಎರಗಿದನ್+ಅಖಿಳ+ವಸ್ತುವ +ಬೇರೆ +ತೋರಿಸಿದ
ಅರಸನ್+ಉತ್ಸವವನು +ವೃಕೋದರ
ನರ+ ನಕುಲ+ ಸಹದೇವನ್+ಅಂತಃ
ಪುರದ +ಹರುಷದ +ಸಿರಿಯನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಪಾಂಡವರ ಹೆಸರುಗಳನ್ನು ಹೇಳಿರುವ ಪರಿ – ಧರ್ಮಪುತ್ರ, ವೃಕೋದರ, ನರ
(೨) ಪುರ – ೨, ೬ ಸಾಲಿನ ಮೊದಲ ಪದ